ಮಂಗಳವಾರ, ಮೇ 15, 2012

ಕಂಪ್ಯೂಟರ್ ಕುಟುಂಬ

ಟಿ. ಜಿ. ಶ್ರೀನಿಧಿ

ಹದಿನಾಲ್ಕು ಹದಿನೈದು ವರ್ಷಗಳ ಹಿಂದಿನವರೆಗೂ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಕಂಪ್ಯೂಟರ್ ಒಂದು ಅಪರೂಪದ ವಸ್ತುವಾಗಿಯೇ ಇತ್ತು. ಅದಕ್ಕಿಂತ ಐದು-ಹತ್ತು ವರ್ಷಗಳ ಮೊದಲು ನಗರಪ್ರದೇಶಗಳಲ್ಲೂ ಇದೇ ಸ್ಥಿತಿ ಇದ್ದಿರಬೇಕು. ಒಂದಷ್ಟು ಜನಕ್ಕೆ ಕಂಪ್ಯೂಟರ್ ಪರಿಚಯವಿತ್ತು ಎಂದೇ ಇಟ್ಟುಕೊಂಡರೂ ಇಂಟರ್‌ನೆಟ್-ಇಮೇಲುಗಳೆಲ್ಲ ಇಂದಿನಷ್ಟು ವ್ಯಾಪಕವಾಗಿ ನಮ್ಮನ್ನು ಆವರಿಸಿಕೊಂಡಿರಲಿಲ್ಲ.

ಆದರೆ ಈಗ, ಕೆಲವೇ ವರ್ಷಗಳ ಅವಧಿಯಲ್ಲಿ ಪರಿಸ್ಥಿತಿ ಎಷ್ಟೊಂದು ಬದಲಾಗಿಬಿಟ್ಟಿದೆ! ನಾಗರಹೊಳೆ ಕಾಡಿನ ಪಕ್ಕದೂರಿನಲ್ಲಿರುವ ಶಾಲೆಗೂ ಈಗ ಕಂಪ್ಯೂಟರ್ ಬಂದಿದೆ. ಬ್ರಹ್ಮಗಿರಿ ಬೆಟ್ಟದ ಮೇಲೆ ನಿಂತಿದ್ದಾಗಲೂ ನಮ್ಮ ಕೈಲಿರುವ ಮೊಬೈಲಿಗೆ ಬೇಕಾದ ಡಾಟ್ ಕಾಮ್ ಅನ್ನು ಬರಮಾಡಿಕೊಳ್ಳುವುದು ಸಾಧ್ಯವಾಗಿದೆ. ಕೈತೋರಿದಲ್ಲಿ ನಿಲ್ಲುವ ಬಸ್ಸಿನ ನಿರ್ವಾಹಕರ ಕೈಯಿಂದ ಹಿಡಿದು ಸರಕಾರಿ ಕಚೇರಿಯ ಮೇಜಿನವರೆಗೆ ವಿವಿಧ ಗಾತ್ರ-ರೂಪದ ಕಂಪ್ಯೂಟರುಗಳು ಎಲ್ಲೆಲ್ಲೂ ಕಾಣಸಿಗುತ್ತವೆ.

ಹೌದಲ್ಲ, ಈ ಕಂಪ್ಯೂಟರುಗಳಲ್ಲಿ ಅದೆಷ್ಟು ವಿಧ!

ಪರ್ಸನಲ್ ಕಂಪ್ಯೂಟರ್ ಬಹುತೇಕ ಮನೆಗಳಲ್ಲಿ ಕನಿಷ್ಠ ಒಂದಾದರೂ ಕಂಪ್ಯೂಟರ್ ಕಾಣಸಿಗುವುದು ಸಾಮಾನ್ಯ. ಅದು ಡೆಸ್ಕ್‌ಟಾಪ್ ಆಗಿರಬಹುದು, ಲ್ಯಾಪ್‌ಟಾಪ್ ಆಗಿರಬಹುದು ಅಥವಾ ಟ್ಯಾಬ್ಲೆಟ್ ಆಗಿದ್ದರೂ ಇರಬಹುದು. ಇವನ್ನೆಲ್ಲ ವೈಯಕ್ತಿಕ ('ಪರ್ಸನಲ್') ಕಂಪ್ಯೂಟರ್ ಅಥವಾ 'ಪಿಸಿ'ಗಳೆಂದು ಗುರುತಿಸಲಾಗುತ್ತದೆ. ಪ್ಲೇಸ್ಟೇಷನ್ - ಎಕ್ಸ್‌ಬಾಕ್ಸ್ ಮುಂತಾದ ಗೇಮ್ ಕನ್ಸೋಲ್‌ಗಳು, ಆಧುನಿಕ ಕಾರುಗಳಲ್ಲಿರುವ ಆನ್‌ಬೋರ್ಡ್ ಕಂಪ್ಯೂಟರುಗಳೂ ಇದೇ ಗುಂಪಿಗೆ ಸೇರುತ್ತವೆ. ಹಾಗೆ ನೋಡಿದರೆ ಸ್ಮಾರ್ಟ್‌ಫೋನುಗಳೂ ಪರ್ಸನಲ್ ಕಂಪ್ಯೂಟರುಗಳೇ. ಹತ್ತು ವರ್ಷ ಹಿಂದಿನ ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲಿರುತ್ತಿದ್ದುದಕ್ಕಿಂತ ಹೆಚ್ಚಿನ ಸಂಸ್ಕರಣಾ ಸಾಮರ್ಥ್ಯ ಇಂದಿನ ಸ್ಮಾರ್ಟ್‌ಫೋನುಗಳಲ್ಲೇ ಇರುತ್ತದಲ್ಲ!

ಪರ್ಸನಲ್ ಕಂಪ್ಯೂಟರುಗಳನ್ನು ಮೈಕ್ರೋಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸವೂ ಇತ್ತು. ಕಂಪ್ಯೂಟರ್‌ನ ಪ್ರಮುಖ ಅಂಗಗಳನ್ನೆಲ್ಲ ಒಂದೇ ಐಸಿಯಲ್ಲಿ ಕೂರಿಸಿದ ಮೈಕ್ರೋಪ್ರಾಸೆಸರ್‌ಗಳು ಪರಿಚಯವಾದ ಕಾಲದ ಈ ಹೆಸರನ್ನು ಈಗ ಯಾರೂ ಅಷ್ಟಾಗಿ ಬಳಸುವುದಿಲ್ಲ.

ಮಿಡ್‌ರೇಂಜ್ ಕಂಪ್ಯೂಟರುಗಳು ಕಂಪ್ಯೂಟರ್ ಕುಟುಂಬದಲ್ಲಿ ಪರ್ಸನಲ್ ಕಂಪ್ಯೂಟರುಗಳ ನಂತರದ ಸ್ಥಾನ ಮಧ್ಯಮ ಗಾತ್ರದ ('ಮಿಡ್‌ರೇಂಜ್') ಕಂಪ್ಯೂಟರುಗಳದು. ಕಂಪ್ಯೂಟರ್ ಜಾಲಗಳಲ್ಲಿ (ನೆಟ್‌ವರ್ಕ್) ಮಾಹಿತಿ ಹಂಚಿಕೆಯ ಕೆಲಸಮಾಡುವ ಸರ್ವರ್‌ಗಳು ಮಿಡ್‌ರೇಂಜ್ ಕಂಪ್ಯೂಟರುಗಳ ಗುಂಪಿಗೆ ಸೇರುತ್ತವೆ. ಈ ಬಗೆಯ ಕಂಪ್ಯೂಟರ್ ಉತ್ಪಾದಕರಲ್ಲಿ ಅರೇಕಲ್, ಐಬಿಎಂ, ಎಚ್‌ಪಿ ಮುಂತಾದ ಸಂಸ್ಥೆಗಳು ಪ್ರಮುಖವಾದವು.

ಮಿಡ್‌ರೇಂಜ್ ಕಂಪ್ಯೂಟರುಗಳು ಐತಿಹಾಸಿಕವಾಗಿ 'ಮಿನಿಕಂಪ್ಯೂಟರ್' ಅಂತಲೂ ಕರೆಸಿಕೊಳ್ಳುತ್ತಿದ್ದವು. ಸೀಮಿತ ಕೆಲಸಗಳನ್ನಷ್ಟೆ ಮಾಡಬಲ್ಲ, ಸಾಮಾನ್ಯವಾಗಿ ಯಾವುದೇ ಸಂಸ್ಕರಣಾ ಸಾಮರ್ಥ್ಯ ಹೊಂದಿರದ ಅಜ್ಞಾನಿ ಘಟಕಗಳ ('ಡಂಬ್ ಟರ್ಮಿನಲ್') ಮೂಲಕ ಹತ್ತಾರು ಬಳಕೆದಾರರು ಇವನ್ನು ಬಳಸುತ್ತಿದ್ದರು. ಎಲ್ಲ ಬಳಕೆದಾರರ ಎಲ್ಲ ಕೆಲಸಗಳ ಸಂಸ್ಕರಣೆಯನ್ನೂ ಮಿನಿಕಂಪ್ಯೂಟರುಗಳೇ ಮಾಡುತ್ತಿದ್ದವು. ಈಗಿನ ಮಿಡ್‌ರೇಂಜ್ ಕಂಪ್ಯೂಟರುಗಳ ಕಾರ್ಯನಿರ್ವಹಣೆ ಮಿನಿಕಂಪ್ಯೂಟರುಗಳಿಗಿಂತ ಕೊಂಚವೇ ಭಿನ್ನವಾಗಿರುತ್ತದೆ. ಡಂಬ್‌ಟರ್ಮಿನಲ್‌ಗಳ ಬದಲಿಗೆ ಸ್ವತಂತ್ರವಾಗಿಯೂ ಕೆಲಸಮಾಡಲು ಶಕ್ತವಾದ ಕಂಪ್ಯೂಟರುಗಳನ್ನು ಅವು ನಿಭಾಯಿಸುತ್ತವೆ. ಬಳಕೆದಾರರ ಎಲ್ಲ ಕೆಲಸಗಳನ್ನೂ ನಿರ್ವಹಿಸಬೇಕಾದ ತಲೆನೋವಿನ ಬದಲಿಗೆ ಅವು ಕೇಳಿದ್ದನ್ನಷ್ಟು ಮಾತ್ರವೇ ಮಾಡುವ ಜವಾಬ್ದಾರಿ ಈ ಕಂಪ್ಯೂಟರುಗಳದ್ದಾಗಿರುತ್ತದೆ.

ಮೈನ್‌ಫ್ರೇಮ್ ಅಪಾರ ಪ್ರಮಾಣದ ದತ್ತಾಂಶವನ್ನು ನಿಭಾಯಿಸಬೇಕಿದ್ದರೆ ಕಂಪ್ಯೂಟರಿನಲ್ಲಿ ಸಾಕಷ್ಟು ಸಂಸ್ಕರಣಾ ಸಾಮರ್ಥ್ಯ ಇರಬೇಕು; ಜೊತೆಗೆ ಅದರ ವಿಶ್ವಾಸಾರ್ಹತೆಯೂ ಉನ್ನತಮಟ್ಟದಲ್ಲಿರಬೇಕು. ಮೈನ್‌ಫ್ರೇಮ್ ಕಂಪ್ಯೂಟರುಗಳಲ್ಲಿ ಇವೆರಡೂ ವೈಶಿಷ್ಟ್ಯಗಳಿರುತ್ತವೆ.

ನೂರಾರು ಸಣ್ಣ ಕಂಪ್ಯೂಟರುಗಳು ಮಾಡುವ ಕೆಲಸಗಳನ್ನೆಲ್ಲ ಒಂದೇ ಮೈನ್‌ಫ್ರೇಮ್ ಮಾಡಬಲ್ಲದು. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು - ಹೀಗೆ ಎಲ್ಲೆಲ್ಲಿ ಅಪಾರ ಪ್ರಮಾಣದ ದತ್ತಾಂಶ ಸಂಗ್ರಹವಾಗುತ್ತದೋ ಅಲ್ಲೆಲ್ಲ ಮೈನ್‌ಫ್ರೇಮ್ ಕಂಪ್ಯೂಟರುಗಳ ಬಳಕೆ ಕಂಡುಬರುತ್ತದೆ. ಹಲವು ಬೃಹತ್ ಸಂಸ್ಥೆಗಳ ವ್ಯವಹಾರವೆಲ್ಲ ಮೈನ್‌ಫ್ರೇಮ್‌ಗಳ ಮೇಲೆಯೇ ಅವಲಂಬಿತವಾಗಿದೆ ಎಂದರೂ ತಪ್ಪಾಗಲಾರದೇನೋ.

ಈ ಕಂಪ್ಯೂಟರುಗಳು ಏಕಕಾಲದಲ್ಲೇ ಸಾವಿರಾರು ಬಳಕೆದಾರರ ಅಗತ್ಯಗಳನ್ನು, ಅದೂ ಅಪಾರ ವೇಗದಲ್ಲಿ, ಪೂರೈಸಬಲ್ಲವು. ಇವು ಪ್ರತಿ ಸೆಕೆಂಡಿಗೆ ಎಷ್ಟು ಮಿಲಿಯನ್ ಆದೇಶಗಳನ್ನು ಕಾರ್ಯನಿರತಗೊಳಿಸುತ್ತವೆ ಎನ್ನುವುದನ್ನು MIPSಗಳಲ್ಲಿ ('ಮಿಲಿಯನ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್') ಅಳೆಯುತ್ತಾರೆ.

೧೯೭೦-೮೦ರ ದಶಕಗಳಲ್ಲಿ ಹಲವು ದೊಡ್ಡ ಕಂಪ್ಯೂಟರ್ ವ್ಯವಸ್ಥೆಗಳನ್ನು ಸೂಚಿಸಲು ಮೈನ್‌ಫ್ರೇಮ್ ಎಂಬ ಹೆಸರು ಬಳಕೆಯಾಗುತ್ತಿತ್ತು. ಆದರೆ ಈಗ ಮೈನ್‌ಫ್ರೇಮ್ ಕಂಪ್ಯೂಟರ್ ಎನ್ನುವ ಉಲ್ಲೇಖ ಬಹುಮಟ್ಟಿಗೆ ಐಬಿಎಂ ಸಂಸ್ಥೆ ತಯಾರಿಸುವ ಮೈನ್‌ಫ್ರೇಮುಗಳನ್ನೇ ಸೂಚಿಸುತ್ತದೆ. ಇತರ ಕಂಪ್ಯೂಟರುಗಳ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಮೈನ್‌ಫ್ರೇಮುಗಳ ಅಂತ್ಯಕಾಲ ಸನ್ನಿಹಿತವಾಗುತ್ತಿದೆ ಎಂಬ ಹೇಳಿಕೆ ಬಹಳ ಸಮಯದಿಂದಲೂ ಕೇಳಿಬರುತ್ತಿದೆಯಾದರೂ ಅವುಗಳ ಬಳಕೆ ಅಷ್ಟೇನೂ ಕಡಿಮೆಯಾದಂತೆ ತೋರುತ್ತಿಲ್ಲ.

ಸೂಪರ್‌ಕಂಪ್ಯೂಟರ್ ಕಂಪ್ಯೂಟರ್ ಕುಟುಂಬದ ಸದಸ್ಯರ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ, ಹಾಗೂ ಅತ್ಯಂತ ದುಬಾರಿಯಾಗಿರುವ ಹೆಚ್ಚುಗಾರಿಕೆ ಸೂಪರ್‌ಕಂಪ್ಯೂಟರುಗಳದು. ಅತ್ಯಂತ ಕ್ಲಿಷ್ಟ ಲೆಕ್ಕಾಚಾರಗಳನ್ನು ಬಳಸುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇವನ್ನು ಬಳಸಲಾಗುತ್ತದೆ. ಇನ್ನಿತರ ಉಪಯೋಗಗಳಿಗೆ ಇವನ್ನು ಬಳಸಬಾರದು ಎಂದೇನೂ ಇಲ್ಲ; ಆದರೆ ಸಾಮಾನ್ಯ ಕೆಲಸಗಳಿಗೆ ಸೂಪರ್‌ಕಂಪ್ಯೂಟರುಗಳ ಬಳಕೆ ಲಭ್ಯತೆ, ವೆಚ್ಚ ಮುಂತಾದ ಯಾವ ದೃಷ್ಟಿಯಿಂದಲೂ ಪ್ರಾಕ್ಟಿಕಲ್ ಅಲ್ಲ ಅಷ್ಟೆ!

ಸೂಪರ್‌ಕಂಪ್ಯೂಟರುಗಳಲ್ಲಿ ಸಾವಿರಾರು ಪ್ರಾಸೆಸರುಗಳಿರುವುದು ಸಾಮಾನ್ಯ. ಕೆಲವು ಸೂಪರ್‌ಕಂಪ್ಯೂಟರುಗಳಲ್ಲಿ ಈ ಪ್ರಾಸೆಸರುಗಳೆಲ್ಲ ಒಂದೇ ಕಡೆ ಇರುತ್ತವೆ; ಇನ್ನು ಕೆಲ ಸನ್ನಿವೇಶಗಳಲ್ಲಿ ವಿಶ್ವದ ಬೇರೆಬೇರೆ ಕಡೆಗಳಲ್ಲಿರುವ ಸಾವಿರಾರು ಸಾಮಾನ್ಯ ಕಂಪ್ಯೂಟರುಗಳನ್ನು ಅಂತರಜಾಲದ ಮೂಲಕ ಒಗ್ಗೂಡಿಸಿ ಅವೆಲ್ಲವುಗಳ ಸಂಸ್ಕರಣಾ ಸಾಮರ್ಥ್ಯವನ್ನು ಒಟ್ಟಾಗಿ ಒಂದು ಸೂಪರ್‌ಕಂಪ್ಯೂಟರಿನಂತೆಯೇ ಬಳಸಲಾಗುತ್ತದೆ (ಇದನ್ನು ಗ್ರಿಡ್ ಕಂಪ್ಯೂಟಿಂಗ್ ಎಂದೂ ಕರೆಯಲಾಗುತ್ತದೆ).

ಸೂಪರ್‌ಕಂಪ್ಯೂಟರುಗಳ ಸಂಸ್ಕರಣಾ ಸಾಮರ್ಥ್ಯವನ್ನು FLOPSಗಳಲ್ಲಿ ('ಫ್ಲೋಟಿಂಗ್ ಪಾಯಿಂಟ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್') ಅಳೆಯಲಾಗುತ್ತದೆ. ಸದ್ಯದ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯ ಪೆಟಾಫ್ಲಾಪ್ಸ್ ಮುಟ್ಟುತ್ತದೆ (ಪೆಟಾ = ಒಂದರ ಮುಂದೆ ಹದಿನೈದು ಸೊನ್ನೆ). ಸಂಸ್ಕರಣಾ ಸಾಮರ್ಥ್ಯದ ಪ್ರಕಾರ ಮೊದಲ ಐದುನೂರು ಸ್ಥಾನಗಳಲ್ಲಿರುವ ಸೂಪರ್‌ಕಂಪ್ಯೂಟರುಗಳ ಪಟ್ಟಿ www.top500.org ತಾಣದಲ್ಲಿ ಸಿಗುತ್ತದೆ. ನವೆಂಬರ್ ೨೦೧೧ರ ಅಂಕಿಅಂಶಗಳ ಪ್ರಕಾರ ಈ ಪಟ್ಟಿಯಲ್ಲಿ ಭಾರತದ ಎರಡು ಸೂಪರ್‌ಕಂಪ್ಯೂಟರುಗಳಿವೆ.

ಮೇ ೧೫, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge