ಮಂಗಳವಾರ, ಏಪ್ರಿಲ್ 3, 2012

ಚಿತ್ರಬಿಡಿಸಲಾ ಇಲ್ಲ ಕ್ಲಿಕ್ ಮಾಡಲಾ?

ಟಿ. ಜಿ. ಶ್ರೀನಿಧಿ


ಮನಸ್ಸಿಗೆ ಸಂತೋಷಕೊಡುವ ತಾಣಗಳಿಗೆ ಹೋದಾಗ ಅಲ್ಲಿನ ಪರಿಸರ ನಮಗೆ ತುಂಬಾ ಇಷ್ಟವಾಗುವುದು ಸಾಮಾನ್ಯ. ಊರಿಗೆ ಮರಳುವಾಗ ನಮ್ಮೊಡನೆ ಆ ಪರಿಸರವನ್ನೂ ತೆಗೆದುಕೊಂಡು ಬರುವಂತಿದ್ದರೆ ಎಷ್ಟು ಚೆನ್ನ ಎನಿಸುವುದೂ ಸಹಜವೇ. ಈ ಅನಿಸಿಕೆಯ ದೆಸೆಯಿಂದ ನಾವು ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತೇವೆ ನಿಜ. ಆದರೆ ಅವು ನಮ್ಮನ್ನು ಆವರಿಸಿಕೊಂಡಿರುವ ಪರಿಸರದ ಒಂದು ಭಾಗದ ಚಿತ್ರಣವನ್ನು ಮಾತ್ರ ಸೆರೆಹಿಡಿಯಬಲ್ಲವು.

ಈಗೊಂದು ಉದಾಹರಣೆ ನೋಡೋಣ. ಈ ಬರೆಹವನ್ನು ಟೈಪಿಸುತ್ತ ನಾನು ನನ್ನ ಕೋಣೆಯಲ್ಲಿ ಕುಳಿತಿದ್ದೇನೆ. ಎಡಬದಿಯಲ್ಲಿರುವ ಗೋಡೆ, ಕೋಣೆಯ ಬಾಗಿಲು, ಎದುರಿನ ಮೇಜು, ಅದರ ಮೇಲಿನ ಕಂಪ್ಯೂಟರ್, ಮೇಜಿನ ಪಕ್ಕದಲ್ಲಿ ನೇತುಹಾಕಿರುವ ಪೇಂಟಿಂಗ್, ಅದರ ಪಕ್ಕದಲ್ಲಿರುವ ಪುಸ್ತಕದ ಬೀರು, ಅದರ ಪಕ್ಕದ ಕಿಟಕಿ - ಇದಿಷ್ಟೂ ನನ್ನ ಕಣ್ಣಿನ ದೃಷ್ಟಿಯ ವ್ಯಾಪ್ತಿಯಲ್ಲಿ ಬರುತ್ತಿವೆ.

ಈ ದೃಶ್ಯದ ಫೋಟೋ ತೆಗೆಯೋಣ ಎಂದುಕೊಂಡಾಗ ಸಮಸ್ಯೆ ಶುರು. ಛಾಯಾಚಿತ್ರದ ವ್ಯಾಪ್ತಿಗೆ ಬಾಗಿಲು, ಕಂಪ್ಯೂಟರ್ ಎರಡೂ ಬಂದರೆ ಪೇಂಟಿಂಗು, ಬೀರು, ಕಿಟಕಿಗಳ ಸುಳಿವೇ ಇರುವುದಿಲ್ಲ. ಪೇಂಟಿಂಗು, ಬೀರು ಎರಡೂ ಬಂದರೆ ಬಾಗಿಲು-ಕಂಪ್ಯೂಟರು ನಾಪತ್ತೆ!

ಮಾನವ ದೃಷ್ಟಿಯ ವ್ಯಾಪ್ತಿಗೆ ಹೋಲಿಸಿದಾಗ ಕ್ಯಾಮೆರಾದ ವ್ಯಾಪ್ತಿ ಸಾಮಾನ್ಯವಾಗಿ ತೀರಾ ಕಡಿಮೆಯಿರುವುದೇ ಈ ಸಮಸ್ಯೆಗೆ ಕಾರಣ. ಈ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ರೂಪುಗೊಂಡಿರುವುದೇ ಪನೋರಮಾ ಛಾಯಾಚಿತ್ರಗಳ ಪರಿಕಲ್ಪನೆ.
ಯಾವುದೇ ದೃಶ್ಯದ ಸಮಗ್ರ ಚಿತ್ರಣವನ್ನು ಕೊಡುವುದು ಇಂತಹ ಚಿತ್ರಗಳ ವೈಶಿಷ್ಟ್ಯ.

ಪನೋರಮಾ ಚಿತ್ರಗಳ ವ್ಯಾಪ್ತಿ ಮಾನವ ದೃಷ್ಟಿಯ ವ್ಯಾಪ್ತಿಯ ಆಸುಪಾಸಿನಲ್ಲೇ ಇರುವುದು ವಿಶೇಷ. ಇಂತಹ ಚಿತ್ರಗಳು ಎಷ್ಟು ಉದ್ದವಿರುತ್ತವೋ ಅದರ ಎರಡರಷ್ಟಾದರೂ ಅಗಲವಾಗಿರುತ್ತವೆ.

ಪನೋರಮಾ ಚಿತ್ರಗಳನ್ನು ಸೆರೆಹಿಡಿಯಲು ಬಳಕೆಯಾಗುವ ವಿಧಾನಗಳು ಹಲವು. ಇಂತಹ ಚಿತ್ರಗಳನ್ನು ತೆಗೆಯಲು ಪ್ರತ್ಯೇಕ ಲೆನ್ಸುಗಳಷ್ಟೇ ಅಲ್ಲ, ವಿಶೇಷ ಕ್ಯಾಮೆರಾಗಳೂ ಬಳಕೆಯಾಗುತ್ತವೆ.

ಹಾಗೆಂದಮಾತ್ರಕ್ಕೆ ಮಾಮೂಲಿ ಕ್ಯಾಮೆರಾ ಬಳಸಿ ಪನೋರಮಾ ಚಿತ್ರಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದೇನೂ ಇಲ್ಲ. ಪನೋರಮಾ ಚಿತ್ರಗಳನ್ನು ತೆಗೆಯುವ ಸೌಲಭ್ಯ ಹಲವು ಸಾಮಾನ್ಯ ಕ್ಯಾಮೆರಾಗಳಲ್ಲಿ, ಮೊಬೈಲುಗಳಲ್ಲೂ ಇದೆ. ಒಂದು ದೃಶ್ಯದ ನಾಲ್ಕಾರು ಚಿತ್ರಗಳನ್ನು ತೆಗೆದು ಅವನ್ನೆಲ್ಲ ಜೋಡಿಸುವ ಮೂಲಕ ಇಲ್ಲಿ ಪನೋರಮಾ ಚಿತ್ರ ರೂಪಿಸಲಾಗುತ್ತದೆ. ನನ್ನ ಕೋಣೆಯ ಉದಾಹರಣೆಯನ್ನೇ ತೆಗೆದುಕೊಂಡರೆ ಎಡಬದಿಯ ಬಾಗಿಲಿನಿಂದ ಬಲತುದಿಯ ಕಿಟಕಿಯವರೆಗಿನ ಪ್ರದೇಶವನ್ನು ನಾಲ್ಕಾರು ಚಿತ್ರಗಳಲ್ಲಿ ಸೆರೆಹಿಡಿದು ಜೋಡಿಸಿ ನನ್ನ ಮೊಬೈಲ್ ಕ್ಯಾಮೆರಾದಲ್ಲೇ ಪನೋರಮಾ ಚಿತ್ರ ಸಿದ್ಧವಾಗುತ್ತದೆ!

ಕ್ಯಾಮೆರಾದಲ್ಲಿ ಪನೋರಮಾ ಸೌಲಭ್ಯವಿಲ್ಲದಿದ್ದರೇನಂತೆ, ಒಂದೇ ಸರಣಿಯಲ್ಲಿ ನಾಲ್ಕಾರು ಚಿತ್ರಗಳನ್ನು ತೆಗೆದು ತಂತ್ರಾಂಶದ ಸಹಾಯದಿಂದ ಅವನ್ನೆಲ್ಲ ಜೋಡಿಸಿ ಪನೋರಮಾ ಚಿತ್ರಗಳನ್ನು ರೂಪಿಸಿಕೊಳ್ಳಬಹುದು. ಫೋಟೋ ಸ್ಟಿಚಿಂಗ್ ಎಂದು ಕರೆಸಿಕೊಳ್ಳುವ ಇದೇ ವಿಧಾನ ಮೇಲೆ ಹೇಳಿದ ಮೊಬೈಲ್ ಕ್ಯಾಮೆರಾ ಉದಾಹರಣೆಯಲ್ಲೂ ಬಳಕೆಯಾಗುತ್ತದೆ; ಅಲ್ಲಿ ಬೇಕಾದುದೆಲ್ಲ ಕ್ಯಾಮೆರಾದಲ್ಲೇ ಇರುವುದರಿಂದ ಪ್ರತ್ಯೇಕ ತಂತ್ರಾಂಶದ ಅಗತ್ಯಬೀಳುವುದಿಲ್ಲ ಅಷ್ಟೆ.

ಸ್ಟಿಚಿಂಗ್ ವಿಧಾನ ಬಳಸಿ ಪನೋರಮಾ ಚಿತ್ರಗಳನ್ನು ರೂಪಿಸಲು ಇತರ ಉಪಕರಣಗಳ ಸಹಾಯಪಡೆಯುವುದೂ ಅಪರೂಪವೇನಲ್ಲ. ಕ್ಯಾಮೆರಾ ಹಿಡಿದವರ ಕೈ ಸ್ವಲ್ಪವೇ ಅಲುಗಿದರೂ ಅದರಿಂದಾಗುವ ವ್ಯತ್ಯಾಸ ಚಿತ್ರಗಳ ಜೋಡಣೆಯಲ್ಲಿ ಎದ್ದುಕಾಣುತ್ತದೆ; ಇದನ್ನು ತಪ್ಪಿಸಲು ಸಾಮಾನ್ಯವಾಗಿ ಟ್ರೈಪಾಡ್ ಬಳಸಲಾಗುತ್ತದೆ.

ಇದಕ್ಕಿಂತ ಹೈಟೆಕ್ ಆದ ಆಯ್ಕೆಗಳೂ ಇವೆ. ಎಪಿಕ್ ಎಂಬ ಹೆಸರಿನ ರೋಬಾಟಿಕ್ ಆಧಾರದ (ಮೌಂಟ್) ಮೇಲೆ ಕ್ಯಾಮೆರಾ ಕೂರಿಸಿ ಬೃಹತ್ ಗಾತ್ರದ ಪನೋರಮಾ ಚಿತ್ರಗಳನ್ನು ರೂಪಿಸುವ ಸೌಲಭ್ಯವನ್ನು ಗಿಗಾಪ್ಯಾನ್ ಎಂಬ ಸಂಸ್ಥೆ ಒದಗಿಸುತ್ತದೆ. ನಾಸಾ ಹಾಗೂ ಕಾರ್ನೆಜಿ ಮೆಲೋನ್ ವಿವಿಯ ಸಹಭಾಗಿತ್ವದಲ್ಲಿ ನಡೆದ ಸಂಶೋಧನೆಯ ಪರಿಣಾಮವಾಗಿ ರೂಪುಗೊಂಡ ತಂತ್ರಜ್ಞಾನ ಇದು.

ನೂರಾರು-ಸಾವಿರಾರು ಚಿತ್ರಗಳನ್ನು ಜೋಡಿಸಿ ತಯಾರಾಗುವ ಇಂತಹ ಪ್ರತಿಯೊಂದು ಚಿತ್ರದಲ್ಲೂ ನೂರಾರು ಕೋಟಿ ಪಿಕ್ಸೆಲ್‌ಗಳಿರುವುದರಿಂದ ಅವನ್ನು ಗಿಗಾಪಿಕ್ಸೆಲ್ ಚಿತ್ರಗಳೆಂದು ಕರೆಯಬಹುದು. ನಾವು ಬಳಸುವ ಕ್ಯಾಮೆರಾಗಳೆಲ್ಲ ಇನ್ನೂ ಮೆಗಾಪಿಕ್ಸೆಲ್ ಲೆಕ್ಕದಲ್ಲೇ ಇವೆಯೆಂದರೆ ಗಿಗಾಪ್ಯಾನ್ ಚಿತ್ರಗಳ ಗುಣಮಟ್ಟವನ್ನು ಅಂದಾಜಿಸುವುದು ಸುಲಭವಾಗಬಹುದೇನೋ!

ಪನೋರಮಾ ಚಿತ್ರಗಳನ್ನು ರೂಪಿಸಲು ಬಳಸಬಹುದಾದ ಇನ್ನೊಂದು ವಿಶಿಷ್ಟ ತಂತ್ರಜ್ಞಾನ ಜರ್ಮನಿಯಲ್ಲಿ ಸಿದ್ಧವಾಗಿದೆ. ತಲಾ ಎರಡು ಮೆಗಾಪಿಕ್ಸೆಲ್ ಸಾಮರ್ಥ್ಯದ ಮೂವತ್ತಾರು ಕ್ಯಾಮೆರಾಗಳನ್ನು ಬಳಸುವ ಈ ವ್ಯವಸ್ಥೆ ಒಟ್ಟಾಗಿ ಒಂದು ಸಣ್ಣ ಚೆಂಡಿನೊಳಗೆ ಅಡಕವಾಗಿದೆ! ಈ ಚೆಂಡನ್ನು ಸುಮ್ಮನೆ ಮೇಲೆಸೆದರೆ ಸಾಕು, ಅತ್ಯುನ್ನತ ಮಟ್ಟ ತಲುಪುತ್ತಿದ್ದಂತೆ ಬೇರೆ ಬೇರೆ ದಿಕ್ಕುಗಳತ್ತ ಮುಖಮಾಡಿರುವ ಎಲ್ಲ ಕ್ಯಾಮೆರಾಗಳೂ ಸ್ವಯಂಚಾಲಿತವಾಗಿ ಚಿತ್ರಗಳನ್ನು ಕ್ಲಿಕ್ಕಿಸುತ್ತವೆ. ಚೆಂಡಿನಲ್ಲಿರುವ ಮೈಕ್ರೋಕಂಟ್ರೋಲರ್ ಈ ಚಿತ್ರಗಳೆಲ್ಲವನ್ನೂ ಒಟ್ಟುಗೂಡಿಸಿ ಪನೋರಮಾ ಚಿತ್ರವನ್ನು ರೂಪಿಸುತ್ತದೆ.


ಚೆಂಡು ಕೈಗೆ ಮರಳಿದ ಮೇಲೆ ಅದನ್ನು ಯುಎಸ್‌ಬಿ ಮೂಲಕ ಕಂಪ್ಯೂಟರಿಗೆ ಜೋಡಿಸಿ ಪನೋರಮಾ ಚಿತ್ರವನ್ನು ಪಡೆದುಕೊಳ್ಳಬಹುದು. ಅಂದಹಾಗೆ ಚೆಂಡಿಗೆ ಸದೃಢ ಒಳಪದರ ಹಾಗೂ ಮೃದುವಾದ ಹೊರಪದರವಿರುವುದರಿಂದ ಅದು ಕೈಜಾರಿ ಕೆಳಗೆ ಬಿದ್ದರೂ ಕ್ಯಾಮೆರಾಗಳು ಸುರಕ್ಷಿತವಾಗಿಯೇ ಇರುತ್ತವೆ.

ಏಪ್ರಿಲ್ ೩, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

3 ಕಾಮೆಂಟ್‌ಗಳು:

sb raju ಹೇಳಿದರು...

good articale thank you sir

Sachi ಹೇಳಿದರು...

The article very lucidly explains about how a panoramic view is made possible in modern cameras, for that matter even in mobiles. It is very interesting!
Sachidananda
P.S. Please let me know what I should do to give my comments / opinion in kannada

Srinidhi ಹೇಳಿದರು...

ಧನ್ಯವಾದಗಳು.

ಕನ್ನಡದಲ್ಲಿ ಟೈಪ್ ಮಾಡುವ ಬಗ್ಗೆ ಸ್ವಲ್ಪ ಮಾಹಿತಿ ಈ ಲೇಖನದ ಕೊನೆಯಲ್ಲಿದೆ ನೋಡಿ: http://www.ejnana.com/2012/02/blog-post_07.html

badge