ಮಂಗಳವಾರ, ಏಪ್ರಿಲ್ 10, 2012

ಇಬುಕ್ ರೀಡರ್ ಈಗ ಕಲರ್ ಕಲರ್!

ಟಿ. ಜಿ. ಶ್ರೀನಿಧಿ

ಕಾಲ್ಪನಿಕ ಚಿತ್ರ
ಈಚೆಗಂತೂ ಇಬುಕ್, ಅರ್ಥಾತ್ ವಿದ್ಯುನ್ಮಾನ ಪುಸ್ತಕಗಳ ಪರಿಕಲ್ಪನೆ ಹೊಸತು ಎಂದೇ ಅನ್ನಿಸುತ್ತಿಲ್ಲ. ಮೊಬೈಲಿನಲ್ಲಿ, ಕಂಪ್ಯೂಟರಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ, ಇಬುಕ್ ರೀಡರುಗಳಲ್ಲಿ - ಎಲ್ಲೆಲ್ಲೂ ಪುಸ್ತಕ ಓದುವ ಸೌಲಭ್ಯ ಸಿಕ್ಕಮೇಲೆ ಆ ಪುಸ್ತಕಕ್ಕೂ ಈ ಪುಸ್ತಕಕ್ಕೂ ಹೆಚ್ಚು ವ್ಯತ್ಯಾಸವೇ ಉಳಿದಿಲ್ಲವೇನೋ.

ಪುಸ್ತಕವನ್ನು ಮುದ್ರಿಸಿ, ಬೈಂಡುಮಾಡಿ ನೀಟಾಗಿ ಕಪಾಟಿನಲ್ಲಿ ಜೋಡಿಸಿಡುವ ಬದಲು ವಿದ್ಯುನ್ಮಾನ ರೂಪದಲ್ಲಿ ಮೆಮೊರಿ ಕಾರ್ಡಿನಲ್ಲೋ ಪೆನ್ ಡ್ರೈವ್‌ನಲ್ಲೋ ಇಟ್ಟುಕೊಂಡು ಬೇಕಾದಾಗ ನಮ್ಮ ಇಚ್ಛೆಯ ಉಪಕರಣದಲ್ಲಿ ಓದಲು ಅನುವುಮಾಡಿಕೊಟ್ಟಿದ್ದು ಇಬುಕ್ ಪರಿಕಲ್ಪನೆಯ ಸಾಧನೆ. ಮುದ್ರಿತ ರೂಪದಲ್ಲಿ ಮನೆಯಲ್ಲೆಲ್ಲ ತುಂಬಿಕೊಂಡುಬಿಡುವಷ್ಟು ಪುಸ್ತಕಗಳನ್ನು ಬೆರಳ ತುದಿಯಗಲದ ಮೆಮೊರಿ ಕಾರ್ಡ್‌ನೊಳಗೂ ತುಂಬಿಡಲು ಸಾಧ್ಯವಾಗಿಸಿದ್ದು ಇದೇ ಪರಿಕಲ್ಪನೆಯೇ.

ಇ ಪುಸ್ತಕಗಳು ಅದೆಷ್ಟು ಜನಪ್ರಿಯವಾಗಿವೆಯೆಂದರೆ ಅಮೆಜಾನ್ ಡಾಟ್ ಕಾಮ್‌ನಲ್ಲಿ ಮುದ್ರಿತ ಪುಸ್ತಕಗಳಿಗಿಂತ ಹೆಚ್ಚು ಸಂಖ್ಯೆಯ ಇ ಪುಸ್ತಕಗಳು ಮಾರಾಟವಾಗುತ್ತವೆ. ಐಪ್ಯಾಡ್-ಐಫೋನುಗಳಿಗೆ, ಅಂಡ್ರಾಯ್ಡ್ ಬಳಸುವ ಸಾಧನಗಳಿಗೂ ಅಪಾರ ಸಂಖ್ಯೆಯ ಇಬುಕ್‌ಗಳು ದೊರಕುತ್ತಿವೆ. ವಿಶ್ವವ್ಯಾಪಿ ಜಾಲದಲ್ಲಂತೂ ಭಾರೀ ಸಂಖ್ಯೆಯ ಇ ಪುಸ್ತಕಗಳು ಉಚಿತವಾಗಿಯೇ ಸಿಗುತ್ತಿವೆ. ಪ್ರಾಜೆಕ್ಟ್ ಗುಟೆನ್‌ಬರ್ಗ್‌ನಂತಹ ಯೋಜನೆಗಳ ಮೂಲಕ ನಿಜಕ್ಕೂ ಉಚಿತವಾಗಿ ಸಿಗುತ್ತಿರುವ ಪುಸ್ತಕಗಳಲ್ಲದೆ ಪೈರಸಿ ಪೀಡೆಗೆ ಬಲಿಯಾಗಿರುವ ಅದೆಷ್ಟೋ ಪುಸ್ತಕಗಳೂ ವಿಶ್ವವ್ಯಾಪಿ ಜಾಲದಲ್ಲಿವೆ.

ಕತೆ ಕಾದಂಬರಿಗಳಷ್ಟೇ ಅಲ್ಲ, ಕಾಲೇಜಿನ ಪಠ್ಯಪುಸ್ತಕಗಳನ್ನೂ ವಿದ್ಯುನ್ಮಾನ ರೂಪದಲ್ಲೇ ಓದುವ ವಿದ್ಯಾರ್ಥಿಗಳಿದ್ದಾರೆ. ಕಂಪ್ಯೂಟರ್ ಲ್ಯಾಬ್‌ಗೆ ಬೇಕಾದ ಪ್ರೋಗ್ರಾಮುಗಳನ್ನು ಇಬುಕ್ ರೀಡರಿನಲ್ಲಿ ಉಳಿಸಿಟ್ಟುಕೊಂಡು ಬಸ್ಸಿನಲ್ಲಿ ಕಾಲೇಜಿಗೆ ಹೋಗುವಾಗ ಪುನರಾವರ್ತನೆ ಮಾಡುವವರೂ ಅಪರೂಪವೇನಲ್ಲ!

ಈಗಾಗಲೇ ಹೇಳಿದಂತೆ ಇಬುಕ್ ಓದುಗರ ಮುಂದಿರುವ ಆಯ್ಕೆಗಳು ಎರಡು - ಮೊದಲನೆಯದು, ಇ ಪುಸ್ತಕಗಳನ್ನು ಓದಲು ಕಂಪ್ಯೂಟರ್, ಮೊಬೈಲ್ ಅಥವಾ ಟ್ಯಾಬ್ಲೆಟ್ಟುಗಳನ್ನು ಬಳಸುವುದು; ಎರಡನೆಯದು ಇಬುಕ್ ರೀಡರುಗಳನ್ನು ಬಳಸಿ ಓದುವುದು.

ಇದರಲ್ಲಿ ಮೊದಲ ಆಯ್ಕೆ ನಮಗೆಲ್ಲ ಪರಿಚಿತವಾದದ್ದೇ. ಯಾವುದೇ ತಂತ್ರಾಂಶದಲ್ಲಿ ತೆರೆದುಕೊಳ್ಳುವ ಸರಳ ಪಠ್ಯರೂಪದ ಕಡತಗಳಿಂದ ಪ್ರಾರಂಭಿಸಿ ನಿರ್ದಿಷ್ಟ ತಂತ್ರಾಂಶಗಳಲ್ಲಿ ಮಾತ್ರವೇ ತೆರೆದುಕೊಳ್ಳುವ ಕಡತಗಳವರೆಗೆ ಅನೇಕ ಬಗೆಯ ಇ ಪುಸ್ತಕಗಳನ್ನು ನಾವು ನಮ್ಮ ಕಂಪ್ಯೂಟರಿನಲ್ಲೇ ಓದಬಹುದು. ಆಂಡ್ರಾಯ್ಡ್ ಫೋನು ಮತ್ತು ಟ್ಯಾಬ್ಲೆಟ್ಟುಗಳಲ್ಲಿ, ಐಪ್ಯಾಡ್-ಐಫೋನುಗಳಲ್ಲೂ ಅನೇಕ ಇ ಪುಸ್ತಕಗಳು ಲಭ್ಯ.

ಇನ್ನು ಎರಡನೆಯ ಆಯ್ಕೆಯ ಬಗ್ಗೆ ಹೇಳುವುದಾದರೆ ಇ ಪುಸ್ತಕಗಳನ್ನು ಓದಲಿಕ್ಕೆಂದೇ ತಯಾರಾದ ವಿಶೇಷ ಉಪಕರಣಗಳು, ಅರ್ಥಾತ್ ಇಬುಕ್ ರೀಡರುಗಳು ಮಾರುಕಟ್ಟೆಯಲ್ಲಿವೆ. ಸುಲಭ ಓದಿಗೆ ಪೂರಕವಾದ ಗಾತ್ರ, ಕಡಿಮೆ ತೂಕ, ಒಮ್ಮೆ ಚಾರ್ಜ್ ಮಾಡಿದರೆ ತುಂಬ ಹೊತ್ತು ಬಳಸಬಹುದಾದ ಬ್ಯಾಟರಿ - ಇವು ಈ ಉಪಕರಣದ ವೈಶಿಷ್ಟ್ಯಗಳು. ಇಬುಕ್ ರೀಡರ್ ಬಳಸಿ ಪುಸ್ತಕಗಳನ್ನು ಓದುವಾಗ ಅಕ್ಷರಗಳ ಗಾತ್ರವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುವುದು ಸಾಧ್ಯ; ಸಾವಿರಾರು ಪುಸ್ತಕಗಳನ್ನು ಶೇಖರಿಸಿಟ್ಟುಕೊಳ್ಳುವ ಅನುಕೂಲ ಕೂಡ ಇರುತ್ತದೆ. ಬಹುತೇಕ ಇಬುಕ್ ರೀಡರ್‌ಗಳಲ್ಲಿ ಹಾಡು ಕೇಳುವ, ಆಟವಾಡುವ ಹಾಗೂ ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುವ ಸೌಲಭ್ಯಗಳೂ ಇರುತ್ತವೆ.

ಅಮೆಜಾನ್ ಕಿಂಡ್ಲ್, ಬಾರ್ನ್ಸ್ ಆಂಡ್ ನೋಬಲ್‌ನ 'ನೂಕ್' - ಇವೆಲ್ಲ ಮಾರುಕಟ್ಟೆಯಲ್ಲಿ ಹೆಸರುಮಾಡಿರುವ ಕೆಲ ಇಬುಕ್ ರೀಡರ್‌ಗಳು. ಹಲವು ಭಾರತೀಯ ಸಂಸ್ಥೆಗಳೂ ಇಬುಕ್ ರೀಡರ್‌ಗಳನ್ನು ನಿರ್ಮಿಸಿವೆ. ಇನ್ಫಿಬೀಮ್ ಡಾಟ್ ಕಾಮ್‌ನ 'ಪೈ' ಇದಕ್ಕೊಂದು ಉದಾಹರಣೆ. ಇದರಲ್ಲಿ ಭಾರತೀಯ ಭಾಷೆಗಳ ಪಠ್ಯವನ್ನೂ ಓದುವುದು ಸಾಧ್ಯ.

ಈ ಎರಡು ಆಯ್ಕೆಗಳ ನಡುವೆ ಮೂಲಭೂತವಾದ ವ್ಯತ್ಯಾಸವೊಂದಿದೆ - ಕಂಪ್ಯೂಟರ್, ಟ್ಯಾಬ್ಲೆಟ್, ಮೊಬೈಲ್ ಮುಂತಾದವುಗಳ ಪರದೆ ಬೆಳಕನ್ನು ಹೊರಸೂಸುವುದರಿಂದ (ಬ್ಯಾಕ್ ಲೈಟ್) ಅವುಗಳನ್ನು ಹೆಚ್ಚುಹೊತ್ತು ದಿಟ್ಟಿಸುವುದು ಕಣ್ಣಿಗೆ ಶ್ರಮ. ಟ್ಯಾಬ್ಲೆಟ್ ಅಥವಾ ಮೊಬೈಲ್ ಆದರೆ ಬ್ಯಾಟರಿಯೂ ಬೇಗ ಖರ್ಚಾಗುತ್ತದೆ. ಜೊತೆಗೆ ಅವು ಬಿಸಿಲಿನಲ್ಲಿ ಸ್ಪಷ್ಟವಾಗಿ ಕಾಣುವುದೂ ಇಲ್ಲ.

ಆದರೆ ಬಹುತೇಕ ಇಬುಕ್ ರೀಡರ್‌ಗಳು ಇಲೆಕ್ಟ್ರಾನಿಕ್ ಇಂಕ್ ತಂತ್ರಜ್ಞಾನವನ್ನು ಬಳಸುತ್ತವೆ. ಈ ತಂತ್ರಜ್ಞಾನ ಬಳಸುವ ಪರದೆಗಳು ಬೆಳಕನ್ನು ಹೊರಸೂಸುವುದಿಲ್ಲವಾದ್ದರಿಂದ ಓದುವಿಕೆ ಕಣ್ಣಿಗೆ ಶ್ರಮವೆನಿಸುವುದಿಲ್ಲ. ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುವುದರಿಂದ ಪದೇಪದೇ ಚಾರ್ಜ್ ಮಾಡುವ ತಾಪತ್ರಯವೂ ಇರುವುದಿಲ್ಲ. ಪರದೆಯ ಮೇಲೆ ಮೂಡಿರುವ ಪಠ್ಯವನ್ನು ಬಿಸಿಲಿನಲ್ಲೂ ಶ್ರಮವಿಲ್ಲದೆ ಓದುವುದು ಸಾಧ್ಯ.

ಆದರೆ ಇಬುಕ್ ರೀಡರುಗಳಲ್ಲಿ ಬಹುವರ್ಣದ ಮಾಹಿತಿಯನ್ನು ಪಡೆದುಕೊಳ್ಳುವುದು ಈವರೆಗೆ ಸಾಧ್ಯವಾಗಿರಲಿಲ್ಲ. ಬಣ್ಣಬಣ್ಣದ ಚಿತ್ರಗಳಿರುವ ಇಬುಕ್ ಓದಬೇಕೆಂದರೆ ಕಂಪ್ಯೂಟರನ್ನೋ ಮೊಬೈಲು-ಟ್ಯಾಬ್ಲೆಟ್ಟುಗಳನ್ನೋ ಅವಲಂಬಿಸಲೇಬೇಕಾದ ಅನಿವಾರ್ಯತೆ ಓದುಗರಿಗಿತ್ತು. ಈ ಅನಿವಾರ್ಯತೆಯನ್ನು ನಿವಾರಿಸುವ ಹೊಸ ತಂತ್ರಜ್ಞಾನವೊಂದು ಇದೀಗ ಮಾರುಕಟ್ಟೆಗೆ ಬಂದಿದೆ. 'ಇ ಇಂಕ್' ಎಂಬ ಸಂಸ್ಥೆ ರೂಪಿಸಿರುವ ಟ್ರೈಟಾನ್ ಇ-ಪೇಪರ್ ತಂತ್ರಜ್ಞಾನ ಬಳಸುವ ಇಬುಕ್ ರೀಡರುಗಳಲ್ಲಿ ವರ್ಣಮಯ ಪುಸ್ತಕಗಳನ್ನೂ ಓದಬಹುದು.

ಲಕ್ಷಾಂತರ ಬಣ್ಣಗಳನ್ನು ಪ್ರದರ್ಶಿಸುವ ಸಾಮರ್ಥ್ಯವಿರುವ ಕಂಪ್ಯೂಟರ್, ಮೊಬೈಲ್ ಹಾಗೂ ಟ್ಯಾಬ್ಲೆಟ್ ಪರದೆಗಳ ಪ್ರದರ್ಶನ ಗುಣಮಟ್ಟಕ್ಕೆ ಇದು ಸಾಟಿಯಾಗಲಾರದು ನಿಜ. ಆದರೆ ಕಣ್ಣಿಗೆ ಹಿತವಾದ ಈ ಪರದೆಯಲ್ಲಿ ಮೂಡಿಬರುವ ೪೦೯೬ ಬಣ್ಣಗಳು ಇ ಪುಸ್ತಕಗಳ ಓದುವಿಕೆಗೆ ಹೊಸತೊಂದು ಆಯಾಮ ನೀಡುವ ನಿರೀಕ್ಷೆಯಂತೂ ಇದೆ. ಈ ತಂತ್ರಜ್ಞಾನ ಬಳಸುವ 'ಎಕ್ಟಾಕೋ ಜೆಟ್‌ಬುಕ್' ಎಂಬ ಇಬುಕ್ ರೀಡರ್ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿಗಳ ಬೆಲೆಪಟ್ಟಿಯೊಡನೆ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ.

ಇಬುಕ್ ರೀಡರುಗಳಲ್ಲಿ ಕಪ್ಪು ಬಿಳುಪಿನ ಪುಟಗಳು ತೆರೆದುಕೊಳ್ಳುವ ವೇಗಕ್ಕೆ ಹೋಲಿಸಿದರೆ ಬಣ್ಣದ ಪುಟಗಳು ತೆರೆದುಕೊಳ್ಳಲು ಕೊಂಚ ಹೆಚ್ಚಿನ ಸಮಯ ಬೇಕಾಗುತ್ತದಂತೆ. ಆದರೆ ಈ ವ್ಯತ್ಯಾಸ ಮಿಲಿಸೆಕೆಂಡುಗಳಲ್ಲಿರುತ್ತದಾದ್ದರಿಂದ ಓದುಗರಿಗೆ ಅಷ್ಟೇನೂ ದೊಡ್ಡ ತೊಂದರೆಯಾಗಿ ಕಾಡಲಿಕ್ಕಿಲ್ಲ. ಪುಟಗಳು ತೆರೆದುಕೊಳ್ಳಲು ಬೇಕಾದ ಸಮಯ ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗುತ್ತಿದ್ದಂತೆ ಇಬುಕ್ ರೀಡರುಗಳಲ್ಲಿ ವೀಡಿಯೋ ವೀಕ್ಷಣೆ ಕೂಡ ಸಾಧ್ಯವಾಗುವ ನಿರೀಕ್ಷೆಯಿದೆ.

ಏಪ್ರಿಲ್ ೧೦, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

If ectaco jetbook is the first , then what is this in the below link. plz clarify !

http://www.amazon.com/Barnes-Noble-COLOR-eBook-Reader/dp/B004D1OBFW

Srinidhi ಹೇಳಿದರು...

Nook color does not use e-ink technology. It uses a "16 million colors ultra-bright" regular color display and is essentially a tablet.

You can find more details here:
http://www.barnesandnoble.com/p/nook-color-barnes-noble/1100437663

badge