ಭಾನುವಾರ, ಏಪ್ರಿಲ್ 15, 2012

ಟೈಟಾನಿಕ್ ನೆನಪಿನ ಲೇಖನ: ಐಸ್‌ಬರ್ಗ್ ಎಂಬ ಸಾಗರದೈತ್ಯ

ಟಿ. ಜಿ. ಶ್ರೀನಿಧಿ


"ಮುಳುಗಲಾಗದ" ಹಡಗು ಟೈಟಾನಿಕ್ ಮರೆಯಲಾಗದ ದುರಂತಕ್ಕೆ ಗುರಿಯಾಗಿ ಇದೀಗ ನೂರು ವರ್ಷ. ತಂತ್ರಜ್ಞಾನದ ಸಾಮರ್ಥ್ಯದ ಬಗೆಗೆ ಒಂದು ತಲೆಮಾರು ಇಟ್ಟಿದ್ದ ನಂಬಿಕೆಯನ್ನೇ ಅಲುಗಾಡಿಸಿದ ಈ ದುರಂತಕ್ಕೆ ಕಾರಣವಾದದ್ದು ನೀರ್ಗಲ್ಲು, ಅಥವಾ ಐಸ್‌ಬರ್ಗ್.

ಟೈಟಾನಿಕ್ ದುರಂತದ ನಂತರ ಕಳೆದಿರುವ ಒಂದು ಶತಮಾನದಲ್ಲಿ ಅದೆಷ್ಟೋ ನೀರ್ಗಲ್ಲುಗಳು ಸಾಗರಗಳಲ್ಲಿ ತೇಲಿವೆ. ತಂತ್ರಜ್ಞಾನವೂ ಕಡಿಮೆಯೇನಲ್ಲ, ಅದೂ ನಾಗಾಲೋಟದಿಂದಲೇ ಮುನ್ನಡೆದಿದೆ.

ಆದರೆ ಇವರಿಬ್ಬರ ನಡುವೆ ಗೆದ್ದವರಾರು ಎಂಬುದು ಮಾತ್ರ ಇನ್ನೂ ತೀರ್ಮಾನವಾಗಿಲ್ಲ. ಒಂದು ಕ್ಷಣ ತಂತ್ರಜ್ಞಾನವೇ ಗೆದ್ದಿತು ಎನಿಸುವಷ್ಟರಲ್ಲಿ ಅದ್ಯಾವುದೋ ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿಗೆ ನೀರ್ಗಲ್ಲು ಬಡಿದ ಸುದ್ದಿ ಕೇಳಿಬರುತ್ತದೆ.

ನಿಸರ್ಗ ಹಾಗೂ ಮಾನವನ ನಡುವಿನ ಈ ಟೆಸ್ಟ್ ಮ್ಯಾಚ್‌ನ ಇತ್ತೀಚಿನ ಸ್ಕೋರ್ ಎಷ್ಟು? ಒಂದು ಒಳನೋಟ ಇಲ್ಲಿದೆ.


ಐಸ್‌ಬರ್ಗ್ ಎಂದರೇನು?
ಸಮುದ್ರದಲ್ಲಿ ತೇಲಿಬರುವ ಬಂಡೆಗಾತ್ರದ ಮಂಜುಗಡ್ಡೆಗಳನ್ನು ನೀರ್ಗಲ್ಲುಗಳೆಂದು ಕರೆಯುತ್ತಾರೆ. ಹಿಮನದಿಗಳಿಂದಲೋ ಧ್ರುವಪ್ರದೇಶಗಳಿಂದಲೋ ಮುರಿದುಕೊಂಡು ತೇಲಿಬರುವ ಸಿಹಿನೀರಿನ ಮಂಜುಗಡ್ಡೆಗಳಿವು.

ನೀರಿಗೋ ಜ್ಯೂಸಿಗೋ ಮತ್ತೊಂದಕ್ಕೋ ಹಾಕಿದ ಐಸ್‌ಕ್ಯೂಬ್ ತೇಲುವುದು ನಮಗೆಲ್ಲ ಗೊತ್ತೇ ಇದೆ; ಮಂಜುಗಡ್ಡೆ ಹಾಗೂ ನೀರಿನ ಸಾಂದ್ರತೆಗಳಲ್ಲಿ ವ್ಯತ್ಯಾಸವಿರುವುದು ಇದಕ್ಕೆ ಕಾರಣ. ನೀರ್ಗಲ್ಲುಗಳು ಸಮುದ್ರದಲ್ಲಿ ತೇಲುವುದೂ ಇದೇ ಕಾರಣದಿಂದ. ಆದರೆ ಹಾಗೆ ತೇಲುವಾಗ ಅವುಗಳ ಹತ್ತನೇ ಒಂದು ಭಾಗ ಮಾತ್ರ ನೀರಿನಿಂದ ಮೇಲಿರುತ್ತದೆ. ಫ್ರಿಜ್ಜಿನಲ್ಲಿ ನೀರಿಟ್ಟು ಐಸ್‌ಕ್ಯೂಬ್ ತಯಾರಿಸಿದಂತೆ ಐಸ್‌ಬರ್ಗ್ ಅನ್ನು ಯಾರೂ ತಯಾರಿಸಿರುವುದಿಲ್ಲವಲ್ಲ! ಹಾಗಾಗಿ ನೀರ್ಗಲ್ಲಿನ ನೀರಿನಡಿಯ ಭಾಗ ಯಾವ ಆಕಾರದಲ್ಲಿದೆಯೆಂದಾಗಲೀ ಎಷ್ಟು ದೊಡ್ಡದಿದೆಯೆಂದಾಗಲೀ ಪತ್ತೆಮಾಡುವುದು ಕಷ್ಟ. ಹೀಗಾಗಿಯೇ ಸಣ್ಣದಾಗಿ ಶುರುವಾಗುವ ದೊಡ್ಡ ಸಮಸ್ಯೆಗಳನ್ನು 'ನೀರ್ಗಲ್ಲಿನ ತುದಿ' ಅಥವಾ 'ಟಿಪ್ ಆಫ್ ದಿ ಐಸ್‌ಬರ್ಗ್' ಎಂದು ಗುರುತಿಸುತ್ತಾರೆ.

ಅಟ್ಲಾಂಟಿಕ್ ಸಾಗರದಲ್ಲಿ ಕಾಣಿಸಿಕೊಳ್ಳುವ ಬಹುತೇಕ ನೀರ್ಗಲ್ಲುಗಳ ಮೂಲ ಗ್ರೀನ್‌ಲ್ಯಾಂಡಿನ ಹಿಮನದಿಗಳು. ಇವುಗಳಲ್ಲಿನ ಹಿಮ ಗ್ರೀನ್‌ಲ್ಯಾಂಡ್ ಕರಾವಳಿ ತಲುಪಿದಾಗ ಚೂರುಗಳಾಗಿ ಒಡೆದು ನೀರ್ಗಲ್ಲುಗಳನ್ನು ರೂಪಿಸುತ್ತದೆ.

ನೂರು ವರ್ಷಗಳ ಹಿಂದೆ ಟೈಟಾನಿಕ್‌ಗೆ ಅಡ್ಡಬಂದದ್ದು ಇಂತಹುದೇ ಒಂದು ನೀರ್ಗಲ್ಲು.

ಆ ದಿನಗಳು
೧೯೧೨ ಏಪ್ರಿಲ್ ೧೪ರ ಮಧ್ಯರಾತ್ರಿ ಟೈಟಾನಿಕ್ ಅಪಘಾತಕ್ಕೀಡಾದಾಗ ಅದರಲ್ಲಿ ನೀರ್ಗಲ್ಲಿನ ಮುನ್ಸೂಚನೆ ನೀಡಬಲ್ಲ ಯಾವುದೇ ಪರಿಣಾಮಕಾರಿ ವ್ಯವಸ್ಥೆಯೂ ಇರಲಿಲ್ಲ. ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕೂತಿದ್ದ ಹಡಗಿನ ಸಿಬ್ಬಂದಿಗೆ ಕಂಡಿದ್ದರ ಬಗ್ಗೆ ಮಾತ್ರ ಮಾಹಿತಿ ಸಿಗುವುದು ಸಾಧ್ಯವಿತ್ತು. ಇದ್ದ ಒಂದು ವೈರ್‌ಲೆಸ್ ವ್ಯವಸ್ಥೆ ಪ್ರಯಾಣಿಕರ ಖಾಸಗಿ ಸಂದೇಶಗಳನ್ನು ರವಾನಿಸುವಲ್ಲಿ ಅದೆಷ್ಟು ಬಿಜಿಯಾಗಿತ್ತೆಂದರೆ ಅದಕ್ಕೆ ನೀರ್ಗಲ್ಲುಗಳ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ವ್ಯವಧಾನವೇ ಇರಲಿಲ್ಲ!

ಆದರೆ ಆ ದುರಂತದ ನಂತರ ನೀರ್ಗಲ್ಲುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾದದ್ದು ಎಷ್ಟು ಮಹತ್ವಪೂರ್ಣ ಎನ್ನುವತ್ತ ಇಡೀ ಪ್ರಪಂಚವೇ ಗಮನಹರಿಸಲು ಪ್ರಾರಂಭಿಸಿತು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸಮುದ್ರದಲ್ಲಿ ಸುರಕ್ಷತೆಯ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನ ೧೯೧೩ರಲ್ಲಿ ನಡೆಯಿತು. ಇದರ ಫಲಸ್ವರೂಪವಾಗಿ ರೂಪುಗೊಂಡದ್ದೇ ಇಂಟರ್‌ನ್ಯಾಷನಲ್ ಐಸ್ ಪಟ್ರೋಲ್.

ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ನೀರ್ಗಲ್ಲುಗಳ ಹಾವಳಿಯಿರುವ ಪ್ರದೇಶಗಳ ಮೇಲೆ ಸದಾಕಾಲ ನಿಗಾವಹಿಸಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಹಡಗುಗಳಿಗೆಲ್ಲ ಒದಗಿಸುವ ಜವಾಬ್ದಾರಿ ಈ ಸಂಸ್ಥೆಯದು. ವೈಮಾನಿಕ ಸಮೀಕ್ಷೆಗಳ ಹಾಗೂ ರೇಡಾರ್‌ಗಳ ಸಹಾಯದಿಂದ ನೀರ್ಗಲ್ಲುಗಳ ಸಂಚಾರದ ಮೇಲೆ ಕಣ್ಣಿಡುವ ಈ ಸಂಸ್ಥೆ ಪ್ರತಿನಿತ್ಯವೂ ಆ ಮಾಹಿತಿಯನ್ನು ಪ್ರಕಟಿಸುತ್ತದೆ.

ಇನ್ನು ಧ್ರುವಪ್ರದೇಶಗಳಲ್ಲಿ ನೀರ್ಗಲ್ಲಿನ ಅಪಾಯ ಎದುರಿಸುವವರು ಯುರೋಪಿಯನ್ ಸ್ಪೇಸ್ ಏಜೆನ್ಸಿಯ 'ಪೋಲಾರ್ ವ್ಯೂ'ನಂತಹ ವ್ಯವಸ್ಥೆಗಳನ್ನು ಬಳಸುತ್ತಾರೆ. ಈ ವ್ಯವಸ್ಥೆಯ ಮೂಲಕ ದೊರಕುವ ಉಪಗ್ರಹ ಚಿತ್ರಗಳನ್ನು ಬಳಸಿ ನೀರ್ಗಲ್ಲುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಸಾಧ್ಯ. ನೀರ್ಗಲ್ಲುಗಳನ್ನು ತಪ್ಪಿಸಿಕೊಂಡು ಸಾಗುವಲ್ಲಿ ಸೋನಾರ್ ಸಾಧನಗಳೂ ನೆರವುನೀಡಬಲ್ಲವು.

ಇಷ್ಟೆಲ್ಲ ಸೌಲಭ್ಯಗಳಿದ್ದರೂ ಹಡಗುಗಳಿಗೆ ಐಸ್‌ಬರ್ಗ್ ಕಾಟ ಮಾತ್ರ ಇನ್ನೂ ಸಂಪೂರ್ಣವಾಗಿ ತಪ್ಪಿಲ್ಲ!

ಶತಮಾನದ ನಂತರ
ಟೈಟಾನಿಕ್ ಮುಳುಗಿಹೋದ ಸಮಯಕ್ಕೂ ಇವತ್ತಿಗೂ ನಡುವೆ ಬಹಳಷ್ಟು ಬದಲಾವಣೆಗಳಾಗಿವೆ. ವಿದೇಶಪ್ರಯಾಣಕ್ಕೆ ಹಡಗಿನ ಮೊರೆಹೋಗುವ ಪ್ರಯಾಣಿಕರ ಸಂಖ್ಯೆಯಂತೂ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ತಂತ್ರಜ್ಞಾನವೂ ಗಣನೀಯವಾಗಿ ಬೆಳೆದಿದೆ.

ಆದರೆ, ಅದೆಲ್ಲವುದರ ಜೊತೆಯಲ್ಲೇ ಸಮುದ್ರದಲ್ಲಿ ಮಾನವನ ಚಟುವಟಿಕೆಯೂ ತೀವ್ರವಾಗಿ ಹೆಚ್ಚಿದೆ. ವಿದೇಶಪ್ರಯಾಣಕ್ಕೆ ವಿಮಾನವಿದ್ದರೇನಂತೆ, ರಜಾದಿನಗಳಲ್ಲಿ ಪುರುಸೊತ್ತಾಗಿ ಕಾಲಕಳೆಯಲು ಹಡಗಿನಲ್ಲಿ ಕ್ರೂಸ್ ಹೊರಡುವ ಹವ್ಯಾಸ ವ್ಯಾಪಕವಾಗಿ ಬೆಳೆದಿದೆ. ಅಷ್ಟೇ ಅಲ್ಲದೆ ಸಮುದ್ರದಾಳದ ತೈಲನಿಕ್ಷೇಪಗಳ ಹುಡುಕಾಟ, ಯಾವಾಗಲೋ ಮುಳುಗಿಹೋದ ನಿಧಿಯ ಶೋಧ, ಅಂತರಜಾಲ ಸಂಪರ್ಕಕ್ಕೆ ಅಗತ್ಯವಾಗಿ ಬೇಕಾದ ಕೇಬಲ್ ಜೋಡಣೆ - ಹೀಗೆ ಒಂದಲ್ಲ ಒಂದು ಕಾರಣದಿಂದ ಅಸಂಖ್ಯಾತ ಹಡಗುಗಳು ವಿಶ್ವದ ಸಾಗರಗಳನ್ನೆಲ್ಲ ಸುತ್ತುತ್ತಿರುತ್ತವೆ. ಸರಕುಸಾಗಣೆಯ ಹಡಗುಗಳಂತೂ ಸಮುದ್ರಗಳ ಮಟ್ಟಿಗೆ ಸರ್ವಾಂತರ್ಯಾಮಿಗಳಾಗಿಹೋಗಿವೆ!

ಡೀಸಲ್ ಉಳಿಸುವ ಉದ್ದೇಶದಿಂದ ಲಾರಿ ಚಾಲಕರು ಹೈವೇ ಬಿಟ್ಟು ಸಣ್ಣಪುಟ್ಟ ರಸ್ತೆಗಳಿಗೆಲ್ಲ ನುಗ್ಗುವುದನ್ನು ನೀವು ನೋಡಿರಬಹುದು. ಇದೇ ರೀತಿಯ ಶಾರ್ಟ್‌ಕಟ್‌ಗಳನ್ನು ಸರಕುಸಾಗಣೆ ಹಡಗುಗಳೂ ಹುಡುಕಿಕೊಂಡಿವೆ ಎಂದು ತಜ್ಞರು ಹೇಳುತ್ತಾರೆ. ಗಮ್ಯಸ್ಥಾನವನ್ನು ಬೇಗ ತಲುಪುವ ಆಸೆಯಿಂದ ಅವು ನೀರ್ಗಲ್ಲುಗಳಿರುವ ಪ್ರದೇಶಗಳ ಮೂಲಕವೇ ಸಾಗಲು ಪ್ರಯತ್ನಿಸುತ್ತವೆ ಎನ್ನುವುದು ಅವರ ಅಭಿಪ್ರಾಯ.

ಒಟ್ಟಾರೆ ಈ ಎಲ್ಲ ಕಾರಣಗಳೂ ಸೇರಿ ಟೈಟಾನಿಕ್ ದುರಂತದ ಒಂದು ಶತಮಾನ ನಂತರವೂ ಹಡಗುಗಳಿಗೆ ನೀರ್ಗಲ್ಲುಗಳ ಭೀತಿ ಇನ್ನೂ ಉಳಿದುಕೊಂಡಿದೆ. ಹವಾಗುಣ ಬದಲಾವಣೆಯಿಂದಾಗಿ ಧ್ರುವಪ್ರದೇಶದ ಬರ್ಫಚಾಚುಗಳು (ಐಸ್‌ಶೆಲ್ಫ್‌) ಒಡೆಯುತ್ತಿರುವುದರ ನೇರ ಪರಿಣಾಮವಾಗಿ ನೀರ್ಗಲ್ಲುಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಈ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಆಧುನಿಕ ಟೈಟಾನಿಕ್
೧೯೮೦ರಿಂದ ೨೦೦೫ರವರೆಗಿನ ಕಾಲು ಶತಮಾನದ ಅವಧಿಯಲ್ಲಿ ಹಡಗುಗಳಿಗೆ ನೀರ್ಗಲ್ಲು ಬಡಿದ ಐವತ್ತೇಳು ಘಟನೆಗಳು ಉತ್ತರಾರ್ಧಗೋಲವೊಂದರಲ್ಲೇ ದಾಖಲಾಗಿದ್ದವಂತೆ.

ಇಂತಹವೇ ಘಟನೆಗಳು ದಕ್ಷಿಣಾರ್ಧಗೋಲದಲ್ಲೂ ಸಂಭವಿಸಿವೆ. ಅಂಟಾರ್ಕ್‌ಟಿಕಾದತ್ತ ಪ್ರವಾಸಿಗರ ಹರಿವು ಹೆಚ್ಚಿದಂತೆ ಅಲ್ಲಿ ಸಂಭವಿಸುತ್ತಿರುವ ಅಪಘಾತಗಳ ಪಟ್ಟಿಯೂ ದೊಡ್ಡದಾಗುತ್ತಿದೆ. ತೀರಾ ಇತ್ತೀಚೆಗೆ, ೨೦೦೭ರ ನವೆಂಬರ್‌ನಲ್ಲಿ ಎಕ್ಸ್‌ಪ್ಲೋರರ್ ಎಂಬ ಹಡಗು ನೀರ್ಗಲ್ಲಿಗೆ ಡಿಕ್ಕಿಹೊಡೆದ ಘಟನೆಯಂತೂ ಆಧುನಿಕ ಟೈಟಾನಿಕ್ ದುರಂತವೆಂದೇ ಕರೆಸಿಕೊಂಡಿತ್ತು. ಆ ಅಪಘಾತದಲ್ಲಿ ಸಂಪೂರ್ಣವಾಗಿ ಮುಳುಗಿಹೋದ ಎಕ್ಸ್‌ಪ್ಲೋರರ್ ಹಡಗಿನಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಚಾವುಮಾಡಲು ಸಾಧ್ಯವಾದದ್ದೊಂದೇ ಸಮಾಧಾನದ ಸಂಗತಿ. ಇದೇ ಪ್ರದೇಶದಲ್ಲಿ ಸಂಚರಿಸುತ್ತಿದ್ದ ರಷ್ಯಾದ ಮೀನುಗಾರಿಕಾ ನೌಕೆಯೊಂದು ನೀರ್ಗಲ್ಲಿಗೆ ಬಡಿದು ಅದರ ಮೂವತ್ತೆರಡು ಜನ ಸಿಬ್ಬಂದಿ ಸರಿಸುಮಾರು ಎರಡು ವಾರಗಳ ಕಾಲ ಅನಿಶ್ಚಿತ ಪರಿಸ್ಥಿತಿಯಲ್ಲಿ ಪರದಾಡಿದ ಘಟನೆ ಕಳೆದ ವರ್ಷ ನಡೆದಿತ್ತೆಂದು ಬಿಬಿಸಿ ವರದಿ ಹೇಳುತ್ತದೆ. ಅವರನ್ನು ರಕ್ಷಿಸಲು ಸಾಧ್ಯವಾಗುವ ಹೊತ್ತಿಗೆ ಅವರು ತಮ್ಮ ಹಡಗು ಮುಳುಗುವುದನ್ನು ತಪ್ಪಿಸಲು ಅದರಲ್ಲಿದ್ದ ಬಹುತೇಕ ಸಾಮಗ್ರಿಯನ್ನು ನೀರಿಗೆಸೆದಿದ್ದರಂತೆ!

ದೊರಕದ ಪರಿಹಾರ
ನೀರ್ಗಲ್ಲುಗಳ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಸಿಡಿಮದ್ದುಗಳನ್ನು ಬಳಸಿ ನೀರ್ಗಲ್ಲುಗಳನ್ನು ನಾಶಮಾಡುವ ಪ್ರಯತ್ನ ೧೯೫೦-೬೦ರ ದಶಕಗಳಲ್ಲೇ ನಡೆದಿತ್ತು. ಬಿಸಿನೀರು ಹರಿಸಿ ನೀರ್ಗಲ್ಲುಗಳನ್ನು ಕರಗಿಸುವ ಇನ್ನೊಂದು ಪ್ರಯತ್ನ ೨೦೦೧ರಲ್ಲಿ ನಡೆದಿತ್ತು. ಹಡಗುಗಳ ಹಾದಿಗೆ ಅಡ್ಡಬರುವ ನೀರ್ಗಲ್ಲುಗಳನ್ನು ಕಟ್ಟಿ ಎಳೆದೊಯ್ಯುವ, ಜಲಫಿರಂಗಿಗಳ ಮೂಲಕ ನೀರು ಹಾಯಿಸಿ ಬದಿಗೆ ಸರಿಸುವ ಪ್ರಯತ್ನಗಳೂ ನಡೆದಿವೆ. ಸಿಹಿನೀರಿನ ಆಗರಗಳಾದ ನೀರ್ಗಲ್ಲುಗಳನ್ನು ಹಿಡಿದುತಂದು ಕುಡಿಯುವ ನೀರಿನ ಸಮಸ್ಯೆ ನೀಗಿಸಿಕೊಳ್ಳುವ ನಿಟ್ಟಿನಲ್ಲೂ ಯೋಚನೆ ಮಾಡಿದ್ದಾಗಿದೆ. ಆದರೆ ಈ ಪ್ರಯತ್ನಗಳಲ್ಲಿ ಯಾವುದಕ್ಕೂ ಗಣನೀಯವೆನ್ನಬಹುದಾದ ಯಶಸ್ಸೂ ಸಿಕ್ಕಿಲ್ಲ.

ಇಷ್ಟರಮೇಲೆ ಐಸ್‌ಬರ್ಗ್ ಅಪಾಯದ ಮುನ್ಸೂಚನೆಯನ್ನು ಹಡಗುಗಳು ಕಡ್ಡಾಯವಾಗಿ ಗಮನಿಸಿ ಅದರಿಂದ ತಪ್ಪಿಸಿಕೊಳ್ಳಬೇಕೆಂಬ ಯಾವ ನಿಯಮವೂ ಇಲ್ಲ. ಹೀಗಾಗಿ ಚಾಲಕವರ್ಗದ ತಪ್ಪು ನಿರ್ಧಾರ ಅಥವಾ ಬೇಜವಾಬ್ದಾರಿಯಿಂದಲೂ ಇನ್ನೊಂದು ಟೈಟಾನಿಕ್ ದುರಂತ ಸಂಭವಿಸಬಹುದು.

ಅಂತಹುದೊಂದು ಸಾಧ್ಯತೆ ಬಹಳ ಕಡಿಮೆ, ನಿಜ. ಆದರೆ ಅದು ಅಸಾಧ್ಯವಲ್ಲ ಎನ್ನುವ ಒಂದೇ ಅಂಶ ನಿಸರ್ಗದ ಮುಂದೆ ಮನುಷ್ಯ ಅದೆಷ್ಟು ಸಣ್ಣವನು ಎನ್ನುವುದನ್ನು ಎತ್ತಿತೋರಿಸುತ್ತಿದೆ.

(ಮಾಹಿತಿ: ಅಂತರಜಾಲದ ವಿವಿಧ ಮೂಲಗಳಿಂದ)

ದುರಂತಗಳ ನೆನಪಿನಂಗಳ

ಟೈಟಾನಿಕ್, ೧೯೧೨: ಇಂಗ್ಲೆಂಡಿನಿಂದ ಅಮೆರಿಕಾಗೆ ಹೊರಟು, ತನ್ನ ಮೊದಲ ಯಾನದಲ್ಲೇ ಮುಳುಗಿಹೋದ ಈ ಬೃಹತ್ ಹಡಗಿನ ಅಪಘಾತ ಮನುಕುಲದ ಇತಿಹಾಸದ ಅತ್ಯಂತ ಭೀಕರ ದುರಂತಗಳಲ್ಲೊಂದು. ಈ ಹಡಗಿನಲ್ಲಿದ್ದ ಎರಡು ಸಾವಿರಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಬಹುತೇಕ ಜನ, ಅನೇಕ ಪ್ರಸಿದ್ಧರೂ ಸೇರಿದಂತೆ, ಈ ದುರಂತದಲ್ಲಿ ಸಾವನ್ನಪ್ಪಿದರು.

ಹಾನ್ಸ್ ಹೆಡ್‌ಟಾಫ್ಟ್ (Hans Hedtoft), ೧೯೫೯: ನೀರ್ಗಲ್ಲಿಗೆ ಡಿಕ್ಕಿಹೊಡೆದು ತನ್ನಲ್ಲಿದ್ದ ಎಲ್ಲ ೯೫ ಜನರೊಡನೆ ಮುಳುಗಿಹೋದ ಡೆನ್ಮಾರ್ಕಿನ ಈ ಹಡಗು 'ಲಿಟ್ಲ್ ಟೈಟಾನಿಕ್' ಎಂದೂ ಕರೆಸಿಕೊಳ್ಳುತ್ತದೆ. ಟೈಟಾನಿಕ್ ದುರಂತದಂತೆಯೇ ಈ ಸಂದರ್ಭದಲ್ಲಿ ಕೂಡ ಸಕಾಲಿಕ ನೆರವು ದೊರಕಲಿಲ್ಲ. ಟೈಟಾನಿಕ್‌ನಂತೆಯೇ ಈ ಹಡಗನ್ನು ಕೂಡ ಅತ್ಯಂತ ಸುರಕ್ಷಿತವೆಂದು ಹೇಳಲಾಗಿತ್ತು.

ಎಕ್ಸ್‌ಪ್ಲೋರರ್, ೨೦೦೭: ಅಂಟಾರ್ಕ್‌ಟಿಕಾ ಕರಾವಳಿಯ ಸಮೀಪ ನೀರ್ಗಲ್ಲೊಂದಕ್ಕೆ ಡಿಕ್ಕಿಹೊಡೆದ ಈ ಹಡಗು ಸಂಪೂರ್ಣವಾಗಿ ಮುಳುಗಿಹೋಯಿತು. ಅರ್ಜೆಂಟೈನಾ ಹಾಗೂ ಚಿಲಿ ದೇಶದ ರಕ್ಷಣಾಪಡೆಗಳ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಈ ಹಡಗಿನಲ್ಲಿದ್ದ ಎಲ್ಲರನ್ನೂ ರಕ್ಷಿಸುವುದು ಸಾಧ್ಯವಾಯಿತು. ಈ ಹಡಗನ್ನು 'ಆಧುನಿಕ ಟೈಟಾನಿಕ್' ಎಂದು ಗುರುತಿಸುವ ಅಭ್ಯಾಸವೂ ಇದೆ.

ಈ ಲೇಖನದ ಸಂಗ್ರಹರೂಪ ಏಪ್ರಿಲ್ ೧೫, ೨೦೧೨ರ ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟವಾಗಿದೆ.
badge