ಮಂಗಳವಾರ, ಮಾರ್ಚ್ 27, 2012

ಸಾಫ್ಟ್‌ವೇರ್ ಸಮಾಚಾರ

ಟಿ. ಜಿ. ಶ್ರೀನಿಧಿ

ಸಾಫ್ಟ್‌ವೇರ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ!? ಈ ಹೆಸರು ಅದೆಷ್ಟು ಜನಪ್ರಿಯವೆಂದರೆ ಬಹುತೇಕ ಜನ ಐಟಿ ಕ್ಷೇತ್ರದ ಉದ್ಯೋಗಿಗಳನ್ನು "ಓ, ನೀವು ಸಾಫ್ಟ್‌ವೇರ್‌ನವರಾ" ಎಂದೇ ಗುರುತಿಸುತ್ತಾರೆ.

ಈ ಸಾಫ್ಟ್‌ವೇರ್ ಎಂದರೇನು ಎನ್ನುವ ಪ್ರಶ್ನೆಗೆ ಉತ್ತರ ಹೇಳುವುದು ಬಹಳ ಸುಲಭ.

ಕಂಪ್ಯೂಟರ್‌ಗೆ ತನ್ನದೇ ಆದ ಸ್ವಂತ ಬುದ್ಧಿ ಇರುವುದಿಲ್ಲ. ಅದು ಯಾವುದೇ ಕೆಲಸ ಮಾಡಬೇಕಾದರೂ ಆ ಕೆಲಸದ ಸಮಸ್ತ ವಿವರಗಳನ್ನು ಅದಕ್ಕೆ ಮುಂಚಿತವಾಗಿಯೇ ಕೊಟ್ಟಿರಬೇಕಾಗುತ್ತದೆ.

ಹೀಗೆ ಮಾಡಬೇಕಾದ ಕೆಲಸದ ವಿವರಗಳನ್ನು ಕೊಡುವುದು ಸಾಫ್ಟ್‌ವೇರ್ ಅಥವಾ ತಂತ್ರಾಂಶದ ಕೆಲಸ. ನಾವು ಕೊಟ್ಟ ಇನ್‌ಪುಟ್ ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ರೀತಿಯ ಔಟ್‌ಪುಟ್ ಕೊಡಬೇಕು ಎನ್ನುವುದನ್ನೆಲ್ಲ ಅವು ಕಂಪ್ಯೂಟರ್‌ಗೆ ವಿವರಿಸುತ್ತವೆ.

ವಿವಿಧ ಉದ್ದೇಶ ಹಾಗೂ ಉಪಯೋಗಗಳಿಗಾಗಿ ಅನೇಕ ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ. ಕಂಪ್ಯೂಟರ್ ಬೂಟ್ ಆಗಲು ಸಹಾಯಮಾಡುವ ಬಯಾಸ್‌ನಿಂದ ಪ್ರಾರಂಭಿಸಿ ಕಂಪ್ಯೂಟರಿನ ಕೆಲಸಕಾರ್ಯಗಳನ್ನೆಲ್ಲ ನಿಯಂತ್ರಿಸುವ ಆಪರೇಟಿಂಗ್ ಸಿಸ್ಟಂವರೆಗೆ, ಟೈಂಪಾಸ್ ಮಾಡಲು ನೆರವುನೀಡುವ ಗೇಮ್‌ಗಳವರೆಗೆ ಎಲ್ಲವೂ ತಂತ್ರಾಂಶಗಳೇ.

ತಂತ್ರಾಂಶ ನಿರ್ಮಿಸುವ ಜನಕ್ಕೆ ಹಾಗೂ ಸಂಸ್ಥೆಗಳಿಗೆ ತಮ್ಮ ಕೆಲಸಕ್ಕೆ ಪ್ರತಿಫಲ ಬೇಕಲ್ಲ, ಹಾಗಾಗಿ ಕೆಲವು ತಂತ್ರಾಂಶಗಳನ್ನು ನಾವು ದುಡ್ಡು ಕೊಟ್ಟೇ ಕೊಳ್ಳಬೇಕು.
ಇಲ್ಲವೇ ನಮ್ಮಲ್ಲಿ ಬಹಳಷ್ಟು ಜನ ಮಾಡುವಂತೆ ಸ್ವಾಮ್ಯಚೌರ್ಯ (ಪೈರಸಿ) ಮಾಡಿ ಆ ತಂತ್ರಾಂಶದ ಅಕ್ರಮ ಪ್ರತಿ ಬಳಸಬೇಕು!

ಅಡೋಬ್ ಫೋಟೋಶಾಪ್, ಎಂಎಸ್ ಆಫೀಸ್ ಇವೆಲ್ಲ ದುಡ್ಡುಕೊಟ್ಟು ಕೊಳ್ಳಬೇಕಾದ ತಂತ್ರಾಂಶಗಳಿಗೆ ಕೆಲ ಜನಪ್ರಿಯ ಉದಾಹರಣೆಗಳು. ಅತ್ಯಂತ ವ್ಯಾಪಕವಾಗಿ ಪೈರಸಿ ಹಾವಳಿಗೆ ತುತ್ತಾಗಿರುವ ತಂತ್ರಾಂಶಗಳಲ್ಲೂ ಇವುಗಳದೇ ಅಗ್ರಸ್ಥಾನ ಎನ್ನುವುದು ಬೇರೆಯ ವಿಷಯ ಬಿಡಿ.

ಪೈರಸಿ ಸಮಸ್ಯೆಯನ್ನು ಬದಿಗಿಟ್ಟು ನೋಡಿದರೆ, ಎಲ್ಲ ತಂತ್ರಾಂಶಗಳನ್ನೂ ಅದರ ತಯಾರಕರು ಕೇಳಿದಷ್ಟು ದುಡ್ಡುಕೊಟ್ಟು ಕೊಳ್ಳಲು ಬಳಕೆದಾರರು ಸಿದ್ಧರಿರುವುದಿಲ್ಲ. ಆದರೆ ಅದು ಹೇಗೆ ಕೆಲಸಮಾಡುತ್ತದೆ ಎಂದು ಉಪಯೋಗಿಸಿ ನೋಡುವ ಅವಕಾಶ ಕೊಟ್ಟರೆ ಹತ್ತರಲ್ಲೊಬ್ಬರಾದರೂ ಆ ತಂತ್ರಾಂಶವನ್ನು ಕೊಂಡುಕೊಳ್ಳಬಹುದು. ಈ ಪರಿಕಲ್ಪನೆಯನ್ನು ಬಳಸಿಕೊಳ್ಳುವ ತಂತ್ರಾಂಶಗಳನ್ನು ಶೇರ್‌ವೇರ್ ಅಥವಾ ಟ್ರಯಲ್ ಸಾಫ್ಟ್‌ವೇರ್‌ಗಳೆಂದು ಕರೆಯುತ್ತಾರೆ. ತಮ್ಮ ಉತ್ಪನ್ನದ ಪ್ರಚಾರಕ್ಕಾಗಿ ಬಹುತೇಕ ಎಲ್ಲ ಸಾಫ್ಟ್‌ವೇರ್ ತಯಾರಕರೂ ಇವುಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಾರೆ.

ಇಂತಹ ತಂತ್ರಾಂಶಗಳನ್ನು ಪಡೆದುಕೊಳ್ಳಲು ಮುಂಚಿತವಾಗಿಯೇ ಹಣಕೊಡುವ ಅವಶ್ಯಕತೆಯಿರುವುದಿಲ್ಲ. ಸಿಡಿ ಮೂಲಕವೋ ವಿಶ್ವವ್ಯಾಪಿ ಜಾಲದಲ್ಲೋ ಆ ತಂತ್ರಾಂಶವನ್ನು ಉಚಿತವಾಗಿಯೇ ಪಡೆದುಕೊಳ್ಳಬಹುದು, ಕೆಲದಿನಗಳ ಮಟ್ಟಿಗೆ ಉಚಿತವಾಗಿ ಬಳಸಬಹುದು, ಮಿತ್ರರಿಗೆಲ್ಲ ಹಂಚಲೂಬಹುದು. ಆದರೆ ಆ ತಂತ್ರಾಂಶ ನಿಮಗೆ ಇಷ್ಟವಾಗಿ ಬಳಸುವುದನ್ನು ಮುಂದುವರೆಸುತ್ತೇನೆ ಎಂದರೆ ಮಾತ್ರ ಹಣಕೊಟ್ಟು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡಿದವರಿಗೆ ಮಾತ್ರ ತಾಂತ್ರಿಕ ನೆರವು ಹಾಗೂ ಹೊಸ ಆವೃತ್ತಿಗಳನ್ನು ಬಳಸುವ ಸೌಲಭ್ಯ ಸಿಗುತ್ತದೆ.

ಕೆಲ ಟ್ರಯಲ್ ಸಾಫ್ಟ್‌ವೇರ್‌ಗಳಿಗೆ ಸಮಯದ ಮಿತಿ ಕೂಡ ಇರುತ್ತದೆ. ಹದಿನೈದು ದಿನವೋ ಒಂದು ತಿಂಗಳೋ ಮಾತ್ರವೇ ಕೆಲಸಮಾಡುವ ಅಂತಹ ತಂತ್ರಾಂಶಗಳು ಆ ಅವಧಿಯ ಕೊನೆಯಲ್ಲಿ ನೀವು ಹಣಕೊಟ್ಟು ನೋಂದಾಯಿಸಿಕೊಳ್ಳದಿದ್ದರೆ ಕೆಲಸಮಾಡುವುದನ್ನು ನಿಲ್ಲಿಸಿಬಿಡುತ್ತವೆ. ಇನ್ನು ಕೆಲ ತಂತ್ರಾಂಶಗಳ ಟ್ರಯಲ್ ಆವೃತ್ತಿಯಲ್ಲಿ ಸೀಮಿತ ಆಯ್ಕೆಗಳಷ್ಟೆ ಇರುವುದೂ ಉಂಟು.

ಹಾಗೆಂದಮಾತ್ರಕ್ಕೆ ಹಣಕೊಡದೆ ಅಥವಾ ಪೈರಸಿ ಮೊರೆಹೋಗದೆ ಯಾವ ತಂತ್ರಾಂಶವನ್ನೂ ಬಳಸುವಂತೆಯೇ ಇಲ್ಲವೆ? ಹಾಗೇನೂ ಇಲ್ಲ, ಕೆಲ ತಂತ್ರಾಂಶಗಳು ಸಂಪೂರ್ಣ ಉಚಿತವಾಗಿಯೇ ದೊರಕುತ್ತವೆ.

ಅಂತಹ ತಂತ್ರಾಂಶಗಳನ್ನು ಫ್ರೀವೇರ್‌ಗಳೆಂದು ಕರೆಯುತ್ತಾರೆ. ಇಂತಹ ತಂತ್ರಾಂಶಗಳನ್ನು ಬಳಸಲಾಗಲಿ ಬೇರೊಬ್ಬರೊಡನೆ ಹಂಚಿಕೊಳ್ಳಲಾಗಲಿ ಯಾವ ನಿರ್ಬಂಧವೂ ಇರುವುದಿಲ್ಲ.

ತಾವು ರೂಪಿಸಿದ ತಂತ್ರಾಂಶಗಳನ್ನೆಲ್ಲ ಉಚಿತವಾಗಿಯೇ ಹಂಚುತ್ತ ಹೋದರೆ ತಯಾರಕರ ಶ್ರಮಕ್ಕೆ ಪ್ರತಿಫಲವೇ ಇಲ್ಲದಂತಾಗುತ್ತದಲ್ಲ, ಹಾಗಾಗಿ ಕೆಲವರು ಫ್ರೀವೇರ್ ಪರಿಕಲ್ಪನೆಯಲ್ಲಿ ಒಂದೆರಡು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

ಫ್ರೀವೇರ್ ತಂತ್ರಾಂಶಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವುದು ಅಂತಹ ಬದಲಾವಣೆಗಳಲ್ಲಿ ಮೊದಲನೆಯದು. ಅದರಿಂದ ಬರುವ ಲಾಭವನ್ನು ತಂತ್ರಾಂಶ ತಯಾರಕ ಪಡೆದುಕೊಳ್ಳುತ್ತಾನೆ. ಈ ಪರಿಕಲ್ಪನೆ ಬಳಸಿಕೊಳ್ಳುವ ತಂತ್ರಾಂಶಗಳನ್ನು ಆಡ್‌ವೇರ್ ಎನ್ನುವ ಹೆಸರಿನಿಂದ ಗುರುತಿಸಲಾಗುತ್ತದೆ. ಆಡ್‌ವೇರ್ ಹೆಸರಿನಲ್ಲಿ ಕುತಂತ್ರಾಂಶಗಳನ್ನು ಹಂಚುವ ಕೇಡಿಗರೂ ಇದ್ದಾರೆ!

ತಂತ್ರಾಂಶವನ್ನು ಉಚಿತವಾಗಿಯೇ ಉಳಿಸಿಕೊಂಡು ಅದರಲ್ಲಿ ಹೆಚ್ಚಿನ ಸೌಲಭ್ಯ ಬೇಕೆನ್ನುವವರಿಂದ ಮಾತ್ರ ಹಣಕೇಳುವುದು ಇನ್ನೊಂದು ಮಾದರಿ. ಇಲ್ಲಿ ಫ್ರೀ ಮತ್ತು ಪ್ರೀಮಿಯಂ ಎರಡೂ ಅಂಶಗಳಿರುವುದರಿಂದ ಇಂತಹ ತಂತ್ರಾಂಶಗಳು 'ಫ್ರೀಮಿಯಂ' ಎಂದು ಕರೆಸಿಕೊಳ್ಳುತ್ತವೆ.

ಫ್ರೀವೇರ್, ಆಡ್‌ವೇರ್, ಫ್ರೀಮಿಯಂ - ಇವೆಲ್ಲ ಉಚಿತವೇ ಆದರೂ ಅದು ಆ ತಂತ್ರಾಂಶದ ಬಳಕೆಗೆ ಮಾತ್ರ ಸೀಮಿತ. ತಂತ್ರಾಂಶದ ಕ್ರಮವಿಧಿಗಳೆಲ್ಲ ಅದರ ತಯಾರಕರ ಬಳಿಯೇ ಭದ್ರವಾಗಿರುವುದರಿಂದ ಅದರಲ್ಲಿ ಬಳಕೆದಾರರು ಯಾವುದೇ ರೀತಿಯ ಬದಲಾವಣೆ ಮಾಡುವಂತಿಲ್ಲ.

ಓಪನ್‌ಸೋರ್ಸ್ ಅಥವಾ ಮುಕ್ತ ತಂತ್ರಾಂಶಗಳು ಈ ನಿರ್ಬಂಧವನ್ನೂ ಹೋಗಲಾಡಿಸುತ್ತವೆ. ಇಲ್ಲಿ ಬಳಕೆ ಮಾತ್ರವೇ ಉಚಿತವಲ್ಲ, ತಂತ್ರಾಂಶದ ಕ್ರಮವಿಧಿಗಳು ಕೂಡ ಬಳಕೆದಾರರಿಗೆ ಮುಕ್ತವಾಗಿ ದೊರಕುತ್ತವೆ. ಅದನ್ನು ಬಳಸುವುದು, ಹಂಚುವುದು ಮತ್ತು ಬದಲಾಯಿಸುವುದು - ಎಲ್ಲವುದಕ್ಕೂ ಸ್ವಾತಂತ್ರ್ಯವಿರುತ್ತದೆ. ಬೇರೆ ಯಾರೋ ರೂಪಿಸಿದ ಓಪನ್‌ಸೋರ್ಸ್ ತಂತ್ರಾಂಶವನ್ನು ತೆಗೆದುಕೊಂಡು ಅದನ್ನು ನಾವೇ ಉತ್ತಮಪಡಿಸುವುದು ಕೂಡ ಸಾಧ್ಯ.

ಬಹುತೇಕ ಎಲ್ಲ ಜನಪ್ರಿಯ ತಂತ್ರಾಂಶಗಳ ಬದಲಿಗೆ ಬಳಸಬಹುದಾದ ಮುಕ್ತ ತಂತ್ರಾಂಶಗಳು ಇಂದು ಲಭ್ಯವಿವೆ. ವಿಂಡೋಸ್ ಬದಲಿಗೆ ಗ್ನು/ಲಿನಕ್ಸ್, ಫೋಟೋಶಾಪ್ ಬದಲಿಗೆ ಗಿಂಪ್, ಎಂಎಸ್ ಆಫೀಸ್ ಬದಲಿಗೆ ಓಪನ್‌ಆಫೀಸ್ - ಹೀಗೆ ಬೇಕಾದಷ್ಟು ಆಯ್ಕೆಗಳು ನಮ್ಮ ಮುಂದಿವೆ. ಸಾವಿರಾರು ಜಾಲತಾಣಗಳು ಬಳಸುವ ವರ್ಡ್‌ಪ್ರೆಸ್ ಕಂಟೆಂಟ್ ಮ್ಯಾನೇಜ್‌ಮೆಂಟ್ ಟೂಲ್ (ಸಿಎಂಎಸ್) ಕೂಡ ಮುಕ್ತ ತಂತ್ರಾಂಶವೇ. ಮುಕ್ತ ತಂತ್ರಾಂಶ ಬಳಕೆದಾರರ ಸಮುದಾಯಗಳು ಬಹಳ ಸಕ್ರಿಯವಾಗಿ ಕೆಲಸಮಾಡುತ್ತಿವೆ; ಹಾಗಾಗಿ ಅವುಗಳಿಗೆ ಸಂಬಂಧಪಟ್ಟ ತಾಂತ್ರಿಕ ನೆರವು ಕೂಡ ಬಹುತೇಕ ಮುಕ್ತವಾಗಿಯೇ ಸಿಗುತ್ತದೆ!

ಮಾರ್ಚ್ ೨೭, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Prabodh ಹೇಳಿದರು...

ಸ್ವತಂತ್ರ ಹಾಗು ಮುಕ್ತ ತಂತ್ರಾಂಶಗಳು, ಮಾಲೀಕತ್ವದ ಜನಪ್ರಿಯ ತಂತ್ರಾಂಶಗಳಿಗೆ ಬದಲಿ ಎಂಬುದು ಸರಿಯಲ್ಲ ಏಕೆಂದರೆ ಫೈರ್ ಫಾಕ್ಸ್, ವಿಎಲ್ಸಿ ಪ್ಲೇಯರ್, ಗಿಂಪ್ ಇತ್ಯಾದಿ ಕೇವಲ ಬದಲಿಯಾಗದೆ ಸ್ವತಃ ಜನಪ್ರಿಯ ತಂತ್ರಾಂಶಗಳಾಗಿವೆ.
ಮಾಲೀಕತ್ವದ ತಂತ್ರಾಂಶಗಳನ್ನು ಪಡೆಯಲು ದುಡ್ಡು ತೆತ್ತು ಕೊಳ್ಳುವುದು ತಪ್ಪಲ್ಲ ಆದರೆ ಹಾಗೆ ದುಡ್ಡು ತೆತ್ತು ಪಡೆದ ಮೇಲು ಅದರ್ ಬಳಕೆಯ ಮೇಲೆ ಪೂರ್ಣ ಸ್ವಾತಂತ್ರ್ಯವಿಲ್ಲದಿರುವುದು ಅಸಹನೀಯ ನಾವು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು.

badge