ಮಂಗಳವಾರ, ಮಾರ್ಚ್ 20, 2012

ಆಟವಾಡುವ ವ್ಯವಹಾರ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್‌ನಲ್ಲಿ ಆಟವಾಡುವುದೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಐದು ವರ್ಷದ ಪುಟಾಣಿ ಆದಿತ್ಯನಿಂದ ಹಿಡಿದು ಅವರ ತಾತನವರೆಗೆ ಎಲ್ಲರೂ ವಯಸ್ಸಿನ ಭೇದವಿಲ್ಲದೆ ಕಂಪ್ಯೂಟರ್ ಗೇಮ್‌ಗಳನ್ನು ಮೆಚ್ಚುತ್ತಾರೆ.

ಇದೇ ಕಾರಣಕ್ಕಾಗಿ ವ್ಯಾಪಾರಿ ಸಂಸ್ಥೆಗಳಿಗೂ ಕಂಪ್ಯೂಟರ್ ಗೇಮ್‌ಗಳ ಬಗ್ಗೆ ಪ್ರೀತಿ. ಹೀಗಾಗಿಯೇ ಈಗ ಕಂಪ್ಯೂಟರ್ ಗೇಮ್‌ಗಳು ಜಾಹೀರಾತಿನ ಹೊಸ ಮಾಧ್ಯಮವಾಗಿ ರೂಪಗೊಳ್ಳುತ್ತಿವೆ.


ಕಂಪ್ಯೂಟರ್ ಗೇಮ್‌ಗಳನ್ನು ಜಾಹೀರಾತು ಮಾಧ್ಯಮವನ್ನಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ವರ್ಷ ಅಮೆರಿಕಾ ಒಂದರಲ್ಲೇ ಸುಮಾರು ನೂರು ಕೋಟಿ ಡಾಲರುಗಳನ್ನು ವೆಚ್ಚಮಾಡಲಾಗಿದೆಯೆಂದು ಅಂದಾಜಿಸಲಾಗಿದೆ. ಈ ಮೊತ್ತ ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಕನಿಷ್ಠ ಮೂರು ಪಟ್ಟು ಬೆಳೆಯುವ ನಿರೀಕ್ಷೆಯಿದೆಯಂತೆ.


ಗೇಮ್‌ನಲ್ಲಿ ಜಾಹೀರಾತು ಅಂದಾಕ್ಷಣ ಅದೆಲ್ಲ ಹೈಟೆಕ್ ಆಟಗಳಿಗೆ ಮಾತ್ರ ಸೀಮಿತ ಎಂದೇನೂ ಇಲ್ಲ. ಹಾಗೆ ನೋಡಿದರೆ ಅಷ್ಟೇನೂ ಪರಿಣತರಲ್ಲದ ಬಳಕೆದಾರರು ಇಷ್ಟಪಡುವ ಸಾಮಾನ್ಯ ಆಟಗಳತ್ತಲೇ ಜಾಹೀರಾತುದಾರರ ಆಸಕ್ತಿ ಇದೆಯಂತೆ. ಎಲ್ಲ ವಯೋಮಾನದ ಬಳಕೆದಾರರೂ ಇಂತಹ ಆಟಗಳನ್ನು ಇಷ್ಟಪಡುವುದರಿಂದ ಅವು ಜಾಹೀರಾತಿನ ಉತ್ತಮ ಮಾಧ್ಯಮ ಎನ್ನುವುದು ತಜ್ಞರ ಅಭಿಪ್ರಾಯ. ಎಕ್ಸ್‌ಬಾಕ್ಸ್‌ನಲ್ಲೋ ಸೋನಿ ಪ್ಲೇಸ್ಟೇಷನ್‌ನಲ್ಲೋ ಆಟವಾಡುವ ಗೇಮಿಂಗ್ ಹವ್ಯಾಸಿಗಳಿಗಿಂತ ಕಂಪ್ಯೂಟರಿನ ಮುಂದೆ ಕುಳಿತು ಆಟವಾಡಿ ಮನಸ್ಸನ್ನು ಹಗುರಾಗಿಸಿಕೊಳ್ಳುವ ಇಂತಹ ಬಳಕೆದಾರರ ಸಂಖ್ಯೆಯೇ ಹೆಚ್ಚಂತೆ. ಇಂತಹ ಬಹುತೇಕ ಆಟಗಳು ವಿಶ್ವವ್ಯಾಪಿ ಜಾಲದ ಮೂಲಕವೇ ದೊರಕುತ್ತಿರುವುದು ಈ ಬಗೆಯ ಇನ್ನಷ್ಟು ಬಳಕೆದಾರರನ್ನು ಸೃಷ್ಟಿಸಿದೆ; ಮೊಬೈಲು ಟ್ಯಾಬ್ಲೆಟ್ಟು ಇತ್ಯಾದಿಗಳಲ್ಲೂ ಸರಳ ಆಟಗಳೇ ಹೆಚ್ಚು ಜನಪ್ರಿಯವಾಗುತ್ತಿರುವುದು ಜಾಹೀರಾತುದಾರರಿಗೂ ಖುಷಿಕೊಟ್ಟಿದೆ.

ಬಗೆಬಗೆ ಜಾಹೀರಾತು
ಗೇಮ್‌ಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳಲ್ಲಿ ಬೇಕಾದಷ್ಟು ವಿಧಗಳಿವೆ. ಜಾಲತಾಣಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ 'ಬ್ಯಾನರ್' ರೂಪದ ಜಾಹೀರಾತುಗಳು ಕೆಲ ಗೇಮ್‌ಗಳಲ್ಲೂ ಕಾಣಸಿಗುತ್ತವೆ. ಗೇಮ್ ಪರದೆಯ ಒಂದು ಬದಿಯಲ್ಲಿ ಇಂತಹ ಜಾಹೀರಾತುಗಳು ಕಾಣಿಸಿಕೊಳ್ಳುವುದುಂಟು.

ಗೇಮ್‌ನ ಒಳಗೇ ಜಾಹೀರಾತನ್ನು ಸೇರಿಸಿಬಿಡುವುದು ಇದಕ್ಕಿಂತ ವಿನೂತನವಾದ ಪ್ರಯತ್ನ. ಉದಾಹರಣೆಗೆ ಯಾವುದೋ ಗೇಮ್‌ನಲ್ಲಿ ಪತ್ರಿಕೆಗಳನ್ನು ಮಾರುವ ಅಂಗಡಿ ಕಾಣಿಸಿಕೊಳ್ಳುತ್ತದೆ ಎನ್ನುವುದಾದರೆ ಆ ಅಂಗಡಿಯಲ್ಲಿ ಉದಯವಾಣಿಯ ಜಾಹೀರಾತು ಕಾಣಿಸುವಂತೆ ಮಾಡಬಹುದು. ಹಾಗೆ ಮಾಡಿದಾಗ ಆಟವಾಡುತ್ತಿರುವವರಿಗೆ ಕಿರಿಕಿರಿ ಮಾಡದೆಯೇ ಜಾಹೀರಾತಿನ ಸಂದೇಶವನ್ನೂ ಪರಿಣಾಮಕಾರಿಯಾಗಿ ತಲುಪಿಸಿಬಿಡಬಹುದು.

ಕೆಲ ಜಾಹೀರಾತುದಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಫ್ರೀಮಿಯಂ ಕಲ್ಪನೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಫ್ರೀಮಿಯಂ ಅಂದರೇನು?
ಹಲವಾರು ಕಂಪ್ಯೂಟರ್ ಗೇಮ್‌ಗಳು ಉಚಿತವಾಗಿಯೇ ದೊರಕುತ್ತವೆ. ಅವುಗಳಲ್ಲಿ ಹೆಚ್ಚಿನ ಸೌಲಭ್ಯ ಬೇಕೆಂದರೆ ಅದನ್ನು ದುಡ್ಡುಕೊಟ್ಟು ಕೊಳ್ಳುವ ಆಯ್ಕೆಯನ್ನು ಕೆಲ ಸಂಸ್ಥೆಗಳು ನೀಡುತ್ತವೆ. ಉದಾಹರಣೆಗೆ ಕಾರ್ ರೇಸಿನದೊಂದು ಗೇಮ್ ಇದೆ ಎನ್ನುವುದಾದರೆ ಹೆಚ್ಚು ವೇಗದ ಕಾರು, ಹೊಸ ಟ್ರ್ಯಾಕು ಮುಂತಾದ ಕೆಲವು ಹೆಚ್ಚುವರಿ ಅಂಶಗಳನ್ನು ನಿರ್ದಿಷ್ಟ ಶುಲ್ಕ ಪಾವತಿಸಿ ಕೊಂಡುಕೊಳ್ಳಬಹುದು. ಉಚಿತ ('ಫ್ರೀ') ಹಾಗೂ ಹಣ ಕೊಟ್ಟು ಕೊಳ್ಳುವ ('ಪ್ರೀಮಿಯಂ') ಆಯ್ಕೆಗಳೆರಡನ್ನೂ ನೀಡುವ ಈ ಪರಿಕಲ್ಪನೆಯನ್ನು 'ಫ್ರೀಮಿಯಂ' ಎಂದು ಗುರುತಿಸುತ್ತಾರೆ. ಫೇಸ್‌ಬುಕ್‌ನಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿದ್ದ 'ಫಾರ್ಮ್‌ವಿಲೆ' ಇಂತಹ ಗೇಮ್‌ಗಳಿಗೊಂದು ಉದಾಹರಣೆ. ಅದನ್ನು ಆಡಲು ಹಣಕೊಡುವ ಅಗತ್ಯವಿಲ್ಲವಾದರೂ ಅಲ್ಲಿರುವ ತೋಟಕ್ಕೆ ಬೇಕಾಗುವ ಕೆಲ ಸೌಲಭ್ಯಗಳನ್ನು ಹಣ ಪಾವತಿಸಿ ಕೊಂಡುಕೊಳ್ಳಬಹುದು. ಫಾರ್ಮ್‌ವಿಲೆ ಆಟವನ್ನು ರೂಪಿಸಿದ ಜೈಂಗಾ ಗೇಮ್ಸ್ ಸಂಸ್ಥೆಯ ಆದಾಯದ ಶೇ.೯೫ರಷ್ಟು ಭಾಗ ಇಂತಹ ಖರೀದಿಗಳಿಂದಲೇ ಬರುತ್ತದಂತೆ!

ಜಾಹೀರಾತುದಾರರೂ ಇದೀಗ ಫ್ರೀಮಿಯಂ ಪರಿಕಲ್ಪನೆಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಗೇಮ್‌ನಲ್ಲಿ ಬರುವ ನಮ್ಮ ಜಾಹೀರಾತು ನೋಡಿದರೆ ನಿಮಗೊಂದು ಪ್ರೀಮಿಯಂ ಸೌಲಭ್ಯವನ್ನು ಉಚಿತವಾಗಿ ಕೊಡುತ್ತೇವೆ ಎನ್ನಲು ಪ್ರಾರಂಭಿಸಿದ್ದಾರೆ. ಇಪ್ಪತ್ತೈದು ರೂಪಾಯಿ ಕೊಟ್ಟು ಕೊಳ್ಳಬೇಕಾದ ಯಾವುದೋ ಸೌಲಭ್ಯ ಹತ್ತು ಸೆಕೆಂಡಿನ ಜಾಹೀರಾತು ವೀಕ್ಷಿಸಿದರೆ ಉಚಿತವಾಗಿ ಸಿಗುತ್ತದೆ ಎನ್ನುವಾಗ ಬಹುತೇಕ ಬಳಕೆದಾರರು ಜಾಹೀರಾತು ನೋಡಲು ಹಿಂದೆಮುಂದೆ ನೋಡುವುದಿಲ್ಲವಂತೆ. ಒಟ್ಟಿನಲ್ಲಿ ಆಟವಾಡುವವರಿಗೆ ಹೆಚ್ಚಿನದೇನೋ ಸಿಕ್ಕಿದ ಸಂತೋಷ, ಜಾಹೀರಾತುದಾರನಿಗೆ ತನ್ನ ಉದ್ದೇಶ ಈಡೇರಿದ ಖುಷಿ.

ಈಚೆಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ 'ಕಟ್ ದ ರೋಪ್' ಹೆಸರಿನ ಕಂಪ್ಯೂಟರ್ ಗೇಮ್ ವಿಶ್ವವ್ಯಾಪಿ ಜಾಲದ ಮೂಲಕ ಉಚಿತವಾಗಿ ಸಿಕ್ಕಿರುವುದು ಇಂತಹುದೇ ಒಂದು ಪ್ರಯತ್ನದಿಂದ. ಈ ಆಟದ ಮೊದಲ ಎರಡು ಹಂತಗಳನ್ನು ಯಾರು ಬೇಕಿದ್ದರೂ ಉಚಿತವಾಗಿ ಆಡಬಹುದು. ಆದರೆ ಮೂರನೆಯ ಹಂತ ಆಡಬೇಕಾದರೆ ನಿಮ್ಮಲ್ಲಿ 'ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೯' ಬ್ರೌಸರ್ ಇರಲೇಬೇಕು. ಮೊದಲೆರಡು ಹಂತದ ಆಟದಿಂದ ರುಚಿಹತ್ತಿಸಿಕೊಂಡ ಬಳಕೆದಾರ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ ಹೊಸ ಆವೃತ್ತಿ ಡೌನ್‌ಲೋಡ್ ಮಾಡಿಕೊಂಡರೆ ಮೈಕ್ರೋಸಾಫ್ಟ್ ಸಂಸ್ಥೆಗೆ ಹೊಸ ಬಳಕೆದಾರ ಸಿಕ್ಕಿದಂತೆ. ಸಿಂಪಲ್!

ಜಾಹೀರಾತಿನ ವ್ಯವಹಾರ
ಆನ್‌ಲೈನ್ ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಲವಾರು ಸಂಸ್ಥೆಗಳು ಇದೀಗ 'ಇನ್-ಗೇಮ್ ಅಡ್ವರ್‌ಟೈಸಿಂಗ್' ಕ್ಷೇತ್ರಕ್ಕೂ ಕಾಲಿಟ್ಟಿವೆ. ಬೇಕಾದಷ್ಟು ಹೊಸ ಸಂಸ್ಥೆಗಳೂ ಹುಟ್ಟಿಕೊಂಡಿವೆ. ಆಪಲ್ ಹಾಗೂ ಗೂಗಲ್‌ನಂತಹ ಸಂಸ್ಥೆಗಳೂ ಈ ಹೊಸ ಅವಕಾಶವನ್ನು ಬಳಸಿಕೊಳ್ಳುವ ಸ್ಪರ್ಧೆಯಲ್ಲಿವೆ; ಗೂಗಲ್‌ನ ಪ್ರಸಿದ್ಧ 'ಆಡ್‌ಸೆನ್ಸ್' ಸೇವೆಯ ಮೂಲಕ ಇದೀಗ ಗೇಮ್‌ಗಳಲ್ಲೂ ಜಾಹೀರಾತುಗಳನ್ನು ಸುಲಭವಾಗಿ ಪ್ರದರ್ಶಿಸುವುದು ಸಾಧ್ಯ. ಇದೇ ರೀತಿ ಆಪಲ್ ಸಂಸ್ಥೆ ತನ್ನ ಐಫೋನ್-ಐಪ್ಯಾಡ್‌ಗಳಿಗಾಗಿ ತಯಾರಾಗಿರುವ ಗೇಮ್‌ಗಳಲ್ಲಿ ಜಾಹೀರಾತು ಪ್ರದರ್ಶಿಸುವ ಸೌಲಭ್ಯ ಒದಗಿಸಿದೆ. ಇಂತಹ ಜಾಹೀರಾತುಗಳಿಂದ ಬರುವ ಆದಾಯದ ಶೇ.೬೦ ಭಾಗ ಗೇಮ್ ನಿರ್ಮಾತೃಗಳಿಗೆ ಸೇರುತ್ತದೆ.

ಈ ಬಗೆಯ ಜಾಹೀರಾತುಗಳು ಈಚೆಗಷ್ಟೆ ಕಾಣಿಸಿಕೊಂಡಿರುವುದರಿಂದ ಅವು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವ ಅಂಶ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಬಹುತೇಕ ಸಂಸ್ಥೆಗಳು ಇಂತಹ ಜಾಹೀರಾತುಗಳ ಮೇಲೆ ಅತಿಯಾದ ನಿರೀಕ್ಷೆಯನ್ನೇನೂ ಇಟ್ಟುಕೊಂಡಂತೆ ತೋರುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಗೇಮ್‌ಗಳ ಜನಪ್ರಿಯತೆಯ ಜೊತೆಗೆ ಈ ಮಾಧ್ಯಮದ ವ್ಯಾಪ್ತಿಯೂ ಹೆಚ್ಚಿದಾಗ 'ಇನ್-ಗೇಮ್ ಅಡ್ವರ್‌ಟೈಸಿಂಗ್' ಪರಿಕಲ್ಪನೆ ಜಾಹೀರಾತುದಾರರ ಪಾಲಿಗೆ ಮತ್ತಷ್ಟು ಆಕರ್ಷಕವಾಗುವ ನಿರೀಕ್ಷೆಯಿದೆ.

ಅಂದಹಾಗೆ ಗೇಮ್‌ಗಳ ಸಂಬಂಧ ಬರಿಯ ಜಾಹೀರಾತುಗಳ ಜೊತೆಗಷ್ಟೇ ಏನಲ್ಲ. ಇತ್ತೀಚೆಗೆ ಕೇಳಿಬಂದ ಸುದ್ದಿಯ ಪ್ರಕಾರ ಆಂಗ್ರಿ ಬರ್ಡ್ಸ್ ನಿರ್ಮಾತೃಗಳು ತಮ್ಮ ಮುಂದಿನ ಆವೃತ್ತಿಗಾಗಿ ನಾಸಾ ಜೊತೆಗೆ ಕೈಜೋಡಿಸಿದ್ದಾರೆ. ಮಾರ್ಚ್ ೨೨ರಂದು ಬಿಡುಗಡೆಯಾಗುತ್ತಿರುವ 'ಆಂಗ್ರಿ ಬರ್ಡ್ಸ್ ಸ್ಪೇಸ್' ಎಂಬ ಹೆಸರಿನ ಈ ಆವೃತ್ತಿ ಮನರಂಜನೆಯ ಜೊತೆಗೆ ಅಂತರಿಕ್ಷ ವಿಜ್ಞಾನದ ಬಗೆಗೆ ಅರಿವು ಮೂಡಿಸುವಲ್ಲೂ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮಾರ್ಚ್ ೨೦, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ.

ಕಾಮೆಂಟ್‌ಗಳಿಲ್ಲ:

badge