ಮಂಗಳವಾರ, ಡಿಸೆಂಬರ್ 27, 2011

ಮುಗಿಯುತ್ತಿರುವ ವರ್ಷಕ್ಕೆ ಬೈಬೈ ಹೇಳುವ ಮುನ್ನ...

ಟಿ. ಜಿ. ಶ್ರೀನಿಧಿ

ಇನ್ನೇನು ನಾಲ್ಕೇ ದಿನ, ೨೦೧೧ ಮುಗಿಸಿ ನಾವೆಲ್ಲ ೨೦೧೨ರ ಹೊಸವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಮುಗಿಯುತ್ತಿರುವ ಈ ವರ್ಷದಲ್ಲಿ ಏನೇನೆಲ್ಲ ಆಗಿದೆ ಎಂದು ನೋಡಲು ಹೊರಟರೆ ಸಾಕಷ್ಟು ದೊಡ್ಡ ಪಟ್ಟಿಯೇ ನಮ್ಮೆದುರು ನಿಲ್ಲುತ್ತದೆ; ವೈಯಕ್ತಿಕ ಸಾಧನೆಗಳು, ರಾಜಕೀಯ ಬದಲಾವಣೆಗಳು, ಆಂದೋಲನಗಳು, ಹೆಸರುಮಾಡಿದ/ಮಾಡದ ಸಿನಿಮಾಗಳು, ಹವಾಮಾನ ಬದಲಾವಣೆ - ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದ ನೂರೆಂಟು ಸಂಗತಿಗಳ ನೆನಪನ್ನು ಈ ವರ್ಷ ಕಟ್ಟಿಕೊಟ್ಟಿದೆ.

೨೦೧೧ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲೂ ಬೇಕಾದಷ್ಟು ಸಾಧನೆಗಳಾದವು, ತಂತ್ರಜ್ಞಾನದ ಸಹಾಯದಿಂದ ಬೇರೆ ಕ್ಷೇತ್ರಗಳಲ್ಲಿ ಆದ ಸಾಧನೆಗಳೂ ಕಡಿಮೆಯೇನಿಲ್ಲ. ೨೦೧೧ಕ್ಕೆ ಬೈಬೈ ಹೇಳುವ ಮುನ್ನ ಈ ವರ್ಷ ತಂತ್ರಜ್ಞಾನ ಜಗತ್ತಿನಲ್ಲಿ ಆದ ಕೆಲವು ಮಹತ್ವದ ಸಂಗತಿಗಳತ್ತ ಇಗೋ ಇಲ್ಲಿದೆ ಒಂದು ಹಿನ್ನೋಟ.

* * *

ತಂತ್ರಜ್ಞಾನ ಕ್ಷೇತ್ರದಲ್ಲಿ ಈ ವರ್ಷ ಅತಿ ಹೆಚ್ಚಿನ ಸುದ್ದಿಮಾಡಿದ್ದು ಸಮಾಜ ಜಾಲಗಳು. ಜನವರಿಯಲ್ಲಿ ಪ್ರಾರಂಭವಾದ ಈಜಿಪ್ಟಿನ ಪ್ರತಿಭಟನೆಗಳಿಂದ ಪ್ರಾರಂಭಿಸಿ ನಮ್ಮ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟದವರೆಗೆ ಅನೇಕ ಆಂದೋಲನಗಳನ್ನು ಸಂಘಟಿಸುವಲ್ಲಿ ಟ್ವೀಟರ್, ಫೇಸ್‌ಬುಕ್ ಮುಂತಾದ ಸಮಾಜ ಜಾಲಗಳು ನೆರವಾದವು. 'ಪ್ರತಿಭಟನಾಕಾರ'ನನ್ನು ವರ್ಷದ ವ್ಯಕ್ತಿಯಾಗಿ ಗುರುತಿಸಿ ಟೈಮ್ ಪತ್ರಿಕೆ ನೀಡಿದ ಗೌರವದಲ್ಲಿ ಒಂದಷ್ಟು ಪಾಲು ಸಮಾಜ ಜಾಲಗಳಿಗೂ ಸಲ್ಲಬೇಕು ಎಂದರೆ ತಪ್ಪಾಗಲಿಕ್ಕಿಲ್ಲವೇನೋ.

ಹಾಗೆಂದಮಾತ್ರಕ್ಕೆ ತಂತ್ರಜ್ಞಾನದ ಸಹಾಯದಿಂದ ಆದದ್ದೆಲ್ಲ ಒಳ್ಳೆಯ ಕೆಲಸವೇನಲ್ಲ. ಆಗಸ್ಟ್ ತಿಂಗಳಿನಲ್ಲಿ ನಡೆದ ಲಂಡನ್ ಗಲಭೆಗಳ ಸಂದರ್ಭದಲ್ಲಿ ದೊಂಬಿಗಳನ್ನು ಆಯೋಜಿಸಲು ಬ್ಲ್ಯಾಕ್‌ಬೆರಿ ಮೆಸೆಂಜರ್ ಸೇವೆಯನ್ನು ಬಳಸಲಾಗಿತ್ತು. ಇನ್ನೂರು ಮಿಲಿಯನ್ ಪೌಂಡುಗಳಷ್ಟು ನಷ್ಟ ಉಂಟುಮಾಡಿದ ಈ ಗಲಭೆಗಳು ಹರಡುವಂತೆ ಮಾಡಲು ಟ್ವೀಟರ್ - ಫೇಸ್‌ಬುಕ್ ಇತ್ಯಾದಿಗಳನ್ನೂ ಬಳಸಲಾಗಿತ್ತು ಎಂಬ ಅಭಿಪ್ರಾಯ ಕೂಡ ಇದೆ.

ಗೂಗಲ್ ಪ್ಲಸ್ ಪ್ರವೇಶ ಹಾಗೂ ಗೂಗಲ್ ಬಜ್ ನಿರ್ಗಮನ - ಇವು ಸಮಾಜ ಜಾಲಗಳ ಜಗತ್ತಿನಲ್ಲಿ ಕೇಳಿಬಂದ ಇನ್ನೆರಡು ಸುದ್ದಿಗಳು. ಆರಂಭದಲ್ಲಿ ಕಂಡುಬಂದ ಕುತೂಹಲ - ಆಸಕ್ತಿಗಳನ್ನು ಉಳಿಸಿಕೊಳ್ಳುವಲ್ಲಿ ಗೂಗಲ್ ಪ್ಲಸ್ ಸಫಲವಾಗಿದೆಯೋ ಇಲ್ಲವೋ ಎನ್ನುವ ಬಗೆಗಿನ ಚರ್ಚೆ ವರ್ಷದ ಕಡೆಯವರೆಗೂ ನಡೆಯುತ್ತಲೇ ಇತ್ತು.

* * *

ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನಗಳು ತೀವ್ರಗೊಂಡಿದ್ದೂ ಇದೇ ವರ್ಷದಲ್ಲಿ. ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯ ಜನಪ್ರಿಯತೆ ಹೆಚ್ಚಿದ್ದರ ಅಡ್ಡಪರಿಣಾಮವಾದದ್ದು ನೋಕಿಯಾ ಸಂಸ್ಥೆಯ ಮೇಲೆ. ಮೊಬೈಲ್ ಫೋನು ಎಂದಾಕ್ಷಣ ನೋಕಿಯಾ ಹೆಸರು ನೆನಪಿಗೆ ಬರುತ್ತಿದ್ದ ಕಾಲ ಹೋಗಿ ಆ ಸಂಸ್ಥೆ ಮಾರುಕಟ್ಟೆಯಲ್ಲಿನ ತನ್ನ ಪಾಲನ್ನು ಉಳಿಸಿಕೊಳ್ಳಲು ಪರದಾಡುವಂತಹ ಸ್ಥಿತಿ ಬಂದಿದೆ ಎಂದು ಅದೇ ಸಂಸ್ಥೆಯ ಆಡಳಿತವರ್ಗ ಹೇಳಿದ್ದ ಸಂದೇಶವೊಂದು ಸೋರಿಕೆಯಾಗಿ ಮಾಧ್ಯಮಗಳಲ್ಲೆಲ್ಲ ಪ್ರಕಟವಾದ ಘಟನೆ ಫೆಬ್ರುವರಿಯಲ್ಲಿ ನಡೆದಿತ್ತು. ನೋಕಿಯಾ ಸ್ಮಾರ್ಟ್‌ಫೋನುಗಳಲ್ಲಿ ಬಳಕೆಯಾಗುತ್ತಿದ್ದ ಸಿಂಬಿಯನ್ ಕಾರ್ಯಾಚರಣೆ ವ್ಯವಸ್ಥೆಯ ಬದಲಿಗೆ ವಿಂಡೋಸ್ ಫೋನ್ ಕಾರ್ಯಾಚರಣೆ ವ್ಯವಸ್ಥೆಯನ್ನು ಬಳಸಲು ಪ್ರಾರಂಭಿಸಿದ್ದು, ಲೂಮಿಯಾ ಸರಣಿಯ ಹೊಸ ಫೋನುಗಳು ಮಾರುಕಟ್ಟೆಗೆ ಬಂದದ್ದೂ ಇದೇ ವರ್ಷದಲ್ಲಿ.

ದೂರವಾಣಿ ಬಳಸಿ ಮಾತನಾಡುವುದು ಹೊಸ ವಿಷಯವೇನಲ್ಲ, ನಿಜ. ಆದರೆ ದೂರವಾಣಿಯ ಜೊತೆಗೆ ಮಾತನಾಡುವುದನ್ನು ಸಾಧ್ಯವಾಗಿಸುವ 'ಸಿರಿ' ತಂತ್ರಾಂಶ ಈ ವರ್ಷ ಪರಿಚಯವಾದ ಐಫೋನ್ ೪ಎಸ್‌ನಲ್ಲಿದ್ದದ್ದು ಇನ್ನೊಂದು ವಿಶೇಷ. ಎಸ್ಸೆಮ್ಮೆಸ್ ಕಳುಹಿಸಬೇಕೆಂದೋ ರಿಮೈಂಡರ್ ಇಟ್ಟುಕೊಳ್ಳಬೇಕೆಂದೋ ಅಂದುಕೊಂಡಾಗ "ಇಂಥವರಿಗೆ ಇಂಥ ಎಸ್ಸೆಮ್ಮೆಸ್ ಕಳಿಸು" ಎಂದೋ "ಇಷ್ಟು ಹೊತ್ತಿಗೆ ಈ ವಿಷಯವನ್ನು ನೆನಪಿಸು" ಎಂದು ನಿಮ್ಮ ದೂರವಾಣಿಗೇ ಹೇಳುವುದನ್ನು ಸಾಧ್ಯವಾಗಿಸಿದ ಈ ತಂತ್ರಾಂಶ ತಂತ್ರಜ್ಞಾನ ಜಗತ್ತಿನಲ್ಲಿ ಸಾಕಷ್ಟು ಸುದ್ದಿಮಾಡಿತು. ಈ ತಂತ್ರಾಂಶಕ್ಕೆ ಚಿತ್ರವಿಚಿತ್ರ ಆದೇಶಗಳನ್ನು ಕೊಟ್ಟಾಗ ಅದರ ಪ್ರತಿಕ್ರಿಯೆಗಳು ಹೇಗೆ ಅಷ್ಟೇ ತಮಾಷೆಯಾಗಿದ್ದವೆಂದು ತೋರಿಸುವ ವೀಡಿಯೋ ಮಾಡಿ ಯೂಟ್ಯೂಬ್ - ಫೇಸ್‌ಬುಕ್‌ಗಳಲ್ಲಿ ಹಂಚಿದವರೂ ಇದ್ದರು.

* * *

ಟ್ಯಾಬ್ಲೆಟ್ ಲೋಕದಲ್ಲಿ ಆಪಲ್ ಸಂಸ್ಥೆಯ ಆಧಿಪತ್ಯ ಈ ವರ್ಷವೂ ಮುಂದುವರೆಯಿತು. ಇತರ ಸಂಸ್ಥೆಗಳ ಪ್ರಬಲ ಸ್ಪರ್ಧೆಯ ನಡುವೆಯೂ ಆಪಲ್ ಐಪ್ಯಾಡ್ ಒಟ್ಟಾರೆ ಟ್ಯಾಬ್ಲೆಟ್ ಮಾರುಕಟ್ಟೆಯ ಅರ್ಧಕ್ಕಿಂತ ಹೆಚ್ಚಿನ ಭಾಗದ ಮೇಲೆ ತನ್ನ ನಿಯಂತ್ರಣವನ್ನು ಅಬಾಧಿತವಾಗಿ ಮುಂದುವರೆಸಿಕೊಂಡು ಬಂತು.

ಕಳೆದೆರಡು ವರ್ಷಗಳಿಂದ ಸಂಸ್ಥೆಗಳ ನಡುವೆ ನಡೆಯುತ್ತಿದ್ದ ಪೇಟೆಂಟ್ ಜಗಳಗಳು ಈ ವರ್ಷವೂ ಮುಂದುವರೆದವು. ಅವರು ನಮ್ಮ ತಂತ್ರಜ್ಞಾನ ಕದ್ದಿದ್ದಾರೆ ಎಂದು ಇವರು, ಇವರು ಬಳಸುತ್ತಿರುವ ತಂತ್ರಜ್ಞಾನ ರೂಪಿಸಿರುವುದು ನಾವು ಎಂದು ಮತ್ತೊಬ್ಬರು ವರ್ಷಪೂರ್ತಿ ದೂರುಗಳ ಸುರಿಮಳೆಯನ್ನೇ ಸುರಿಸಿದರು. ಐಪ್ಯಾಡ್‌ಗೆ ಅತ್ಯಂತ ಪ್ರಬಲ ಪ್ರತಿಸ್ಪರ್ಧಿಯಾಗುವ ನಿರೀಕ್ಷೆ ಹುಟ್ಟಿಸಿದ್ದ ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್‌ಗೆ ವರ್ಷಪೂರ್ತಿ ಕೋರ್ಟ್ ಆದೇಶಗಳ ಕಾಟ ತಪ್ಪಲಿಲ್ಲ.

ವಿಶ್ವದ ಅತಿ ಕಡಿಮೆ ಬೆಲೆಯ ಟ್ಯಾಬ್ಲೆಟ್ ಎಂದು ಹೆಸರುಮಾಡಿದ ನಮ್ಮದೇ ದೇಶದ ಟ್ಯಾಬ್ಲೆಟ್ 'ಸಾಕ್ಷಾತ್'ನ ಹೊಸ ರೂಪವಾಗಿ 'ಆಕಾಶ್' ಪರಿಚಯವಾದದ್ದು ಈ ವರ್ಷದ ಇನ್ನೊಂದು ವಿಶೇಷ. ಮೂರು ಸಾವಿರ ರೂಪಾಯಿಗಳ ಬೆಲೆಯ 'ಆಕಾಶ್ ೨' ಇನ್ನೇನು ಸಾಮಾನ್ಯ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆಯಿದೆ.

* * *

ಕ್ಲೌಡ್ ಕಂಪ್ಯೂಟಿಂಗ್ ಜನಪ್ರಿಯತೆ ಈ ವರ್ಷವೂ ಏರುಗತಿಯಲ್ಲೇ ಸಾಗಿತು. ವೈಯಕ್ತಿಕ ಗಣಕಗಳಿಂದ ದೂರವಾಗಿ ಎಲ್ಲ ಮಾಹಿತಿಯೂ ದೊಡ್ಡ ಸಂಸ್ಥೆಗಳ ಸರ್ವರ್‌ಗಳಲ್ಲೇ ಉಳಿಯುವಂತೆ ಮಾಡುವ ಈ ವ್ಯವಸ್ಥೆಯ ಸುರಕ್ಷತೆ ಕುರಿತು ಸಂಶಯ ಹುಟ್ಟಿಸಿದ ಕೆಲ ಘಟನೆಗಳೂ ನಡೆದವು. ಸೋನಿ ಸಂಸ್ಥೆಯ ಪ್ಲೇಸ್ಟೇಷನ್ ಜಾಲ ಹ್ಯಾಕಿಂಗ್ ದಾಳಿಗೆ ತುತ್ತಾದದ್ದು, ಲಕ್ಷಾಂತರ ಬಳಕೆದಾರರ ಖಾಸಗಿ ಮಾಹಿತಿ ಕಳ್ಳತನವಾದದ್ದು, ಆ ಸಂಸ್ಥೆ ಬಳಕೆದಾರರಲ್ಲಿ ಕ್ಷಮೆಯಾಚಿಸಬೇಕಾದದ್ದು ಮುಂತಾದ ಅನೇಕ ಘಟನೆಗಳಿಗೆ ೨೦೧೧ ಸಾಕ್ಷಿಯಾಯಿತು.

ಮೊಬೈಲ್ ದೂರವಾಣಿಗಳ ಮೇಲೆ ನಮ್ಮ ಅವಲಂಬನೆ ಯಾವ ಮಟ್ಟಕ್ಕೆ ಹೆಚ್ಚಿದೆ ಎಂದು ತೋರಿಸುವ ಒಂದು ಘಟನೆಯೂ ಈ ವರ್ಷ ನಡೆಯಿತು. ಬ್ಲ್ಯಾಕ್‌ಬೆರಿ ಸೇವೆ ಇದ್ದಕ್ಕಿದ್ದಂತೆ ಕೆಲದಿನಗಳ ಮಟ್ಟಿಗೆ ಸ್ತಬ್ಧವಾದ ಸಂದರ್ಭದಲ್ಲಿ ವಿಶ್ವದೆಲ್ಲೆಡೆಯ ಬಳಕೆದಾರರು ಪರದಾಡಿದ ರೀತಿ ನಮ್ಮ ಬದುಕು ತಂತ್ರಜ್ಞಾನದ ಮೇಲೆ ಅದೆಷ್ಟರಮಟ್ಟಿಗೆ ಅವಲಂಬಿತವಾಗಿದೆ ಎಂದು ತೋರಿಸಿಕೊಟ್ಟಿತು.

* * *

ವಿಶ್ವದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲದಿದ್ದರೂ ತಂತ್ರಜ್ಞಾನ ಸಂಸ್ಥೆಗಳ ಕುರಿತು ಮಾರುಕಟ್ಟೆಯಲ್ಲಿ ಕೊಂಚ ಹೆಚ್ಚೇ ಎನಿಸುವಷ್ಟು ಆಸಕ್ತಿ ಕಂಡುಬಂದದ್ದು ಈ ವರ್ಷದ ಇನ್ನೊಂದು ವಿಶೇಷ. ಈ ಸಂಸ್ಥೆಗಳಿಗೆ ಕೊಂಚ ಹೆಚ್ಚೆನಿಸುವಷ್ಟೇ ಬೆಲೆಕಟ್ಟುತ್ತಿರುವವರ ಅತ್ಯಾಸಕ್ತಿ ಮುಂದೆ ಮತ್ತೊಂದು ಡಾಟ್ ಕಾಮ್ ಕುಸಿತಕ್ಕೆಲ್ಲಿ ಕಾರಣವಾಗುತ್ತದೋ ಎಂಬ ಗಾಬರಿಯೂ ಅಲ್ಲಲ್ಲಿ ಕಂಡುಬಂತು.

ಆಪಲ್ ಸಂಸ್ಥೆಯ ದೈತ್ಯಶಕ್ತಿ ಸ್ಟೀವ್ ಜಾಬ್ಸ್, ಸಿ ಪ್ರೋಗ್ರಾಮಿಂಗ್ ಭಾಷೆಯ ಸೃಷ್ಟಿಕರ್ತ ಡೆನಿಸ್ ರಿಚಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದ ಸಾಧಕ ಜಾನ್ ಮೆಕ್‌ಕಾರ್ಥಿ ತಂತ್ರಜ್ಞಾನ ಜಗತ್ತಿನಲ್ಲಿ ಈ ವರ್ಷ ನಮ್ಮನ್ನು ಅಗಲಿದರು.

* * *

ಇನ್ನು ತಂತ್ರಜ್ಞಾನ ಮತ್ತು ಕನ್ನಡದ ಮಟ್ಟಿಗೆ ಹೇಳುವುದಾದರೆ ಈ ವರ್ಷ ತೀರಾ ನಿರಾಶಾದಾಯಕವಾಗೇನೂ ಇರಲಿಲ್ಲ. ಅಂತರಜಾಲ ಕನ್ನಡ ಜ್ಞಾನಕೋಶ 'ಕಣಜ' ಹೊಸರೂಪ ತಳೆದು ಬೆಳೆದದ್ದು, ಕನ್ನಡ ಟೆಕ್ಸ್ಟ್-ಟು-ಸ್ಪೀಚ್ (ಪಠ್ಯವನ್ನು ಧ್ವನಿಗೆ ಪರಿವರ್ತಿಸುವ) ತಂತ್ರಾಂಶ ಪರಿಚಯವಾದದ್ದು, ಗೂಗಲ್ ಸಂಸ್ಥೆ ಕನ್ನಡದ ಅನುವಾದ ತಂತ್ರಾಂಶವನ್ನು ಪರಿಚಯಿಸಿದ್ದು ಇದೇ ವರ್ಷದಲ್ಲಿ. ಯುನಿಕೋಡ್‌ಗೆ ಕೆಲ ಹೊಸ ಅಕ್ಷರಶೈಲಿಗಳು ಬಂದದ್ದು ಈ ವರ್ಷದ ಇನ್ನೊಂದು ಸುದ್ದಿ. ವರ್ಷದ ಕೊನೆಯ ವೇಳೆಗೆ ಹೊಸ ಕನ್ನಡ ತಂತ್ರಾಂಶಗಳ ತಯಾರಿಗಾಗಿ ಕರ್ನಾಟಕ ಸರಕಾರದ ವತಿಯಿಂದ ಟೆಂಡರ್ ಪ್ರಕಟಣೆ ಹೊರಬಿದ್ದದ್ದೂ ಒಂದು ಮಹತ್ವದ ಸಂಗತಿಯೇ.

ಜಾಲತಾಣಗಳ ವಿಳಾಸ, ಅರ್ಥಾತ್ ಯುಆರ್‌ಎಲ್ ಅನ್ನು ಇಂಗ್ಲಿಷಿನ ಬದಲು ನಮ್ಮದೇ ಭಾಷೆಯಲ್ಲಿ ಇಟ್ಟುಕೊಳ್ಳಲು ಅನುವುಮಾಡಿಕೊಡುವ ಇಂಟರ್‌ನ್ಯಾಷನಲೈಸ್ಡ್ ಡೊಮೈನ್ ನೇಮ್ ಅಥವಾ ಐಡಿಎನ್ ಸೌಲಭ್ಯ ಕನ್ನಡಕ್ಕೆ ಇನ್ನೂ ದೊರಕದಿರುವುದು ನಿರಾಸೆಹುಟ್ಟಿಸಿದ ಸಂಗತಿ. ಹಿಂದಿ, ಗುಜರಾತಿ, ಉರ್ದು, ಪಂಜಾಬಿ, ಬೆಂಗಾಲಿ, ತಮಿಳು ಹಾಗೂ ತೆಲುಗು ಭಾಷೆಗಳಿಗೆ ಈಗಾಗಲೇ ಸಿಕ್ಕಿರುವ ಈ ಸೌಲಭ್ಯ ಕನ್ನಡಕ್ಕೆ ಯಾವಾಗ ಬರುತ್ತದೋ ಕಾದುನೋಡಬೇಕಿದೆ.

ಡಿಸೆಂಬರ್ ೨೭, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge