ಸೋಮವಾರ, ಡಿಸೆಂಬರ್ 5, 2011

ಪುಟಾಣಿಮನುಷ್ಯರ ನ್ಯಾನೋಪ್ರಪಂಚ

ಟಿ. ಜಿ. ಶ್ರೀನಿಧಿ
೨೦೧೧, ಅಂತಾರಾಷ್ಟ್ರೀಯ ರಸಾಯನವಿಜ್ಞಾನ ವರ್ಷ. ವರ್ಷ ಇನ್ನೇನು ಮುಗಿಯುತ್ತ ಬಂದರೂ ಕೆಮಿಸ್ಟ್ರಿ ಬಗ್ಗೆ ಏನೂ ಬರೆದಿಲ್ಲವಲ್ಲ ಅಂತ ಮೊನ್ನೆತಾನೇ ನೆನಪಾಯಿತು. ಹಾಗೆ ಬರೆಯುವುದೇ ಆದರೆ ಕೆಮಿಸ್ಟ್ರಿ ಮತ್ತು ಮಾಹಿತಿ ತಂತ್ರಜ್ಞಾನ ಎರಡಕ್ಕೂ ಸಂಬಂಧಪಟ್ಟ ಯಾವುದಾದರೂ ವಿಷಯವನ್ನೇ ಆಯ್ದುಕೊಳ್ಳೋಣ ಎಂಬ ಯೋಚನೆಯೂ ಬಂತು. ಆಗ ನೆನಪಾದದ್ದೇ ಈ ಕತೆ.
ಶಾಲೆ-ಕಾಲೇಜುಗಳಲ್ಲಿ ವಿಜ್ಞಾನದ ಪಾಠ ಅದೆಷ್ಟೋ ಜನಕ್ಕೆ ಕಬ್ಬಿಣದ ಕಡಲೆ. ರಸಾಯನ ವಿಜ್ಞಾನದ ಅಧ್ಯಯನ ಕೆಲ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ವಿಷಯವಾದರೂ ಬಹುತೇಕರಿಗೆ ಅದು ತಲೆನೋವು ತರುವ ಸಂಗತಿಯೆಂದೇ ಹೇಳಬೇಕು.

ಆದರೆ ಅಣುಗಳೇ ನಿಮ್ಮ ಮುಂದೆ ಬಂದು ಕೆಮಿಸ್ಟ್ರಿ ಪಾಠ ಹೇಳುವಂತಿದ್ದರೆ? ಎಂಥಾ ಮಜ ಅಲ್ಲವೆ?

ಈ ರೋಚಕ ಕನಸನ್ನು ನನಸಾಗಿಸಿದವರು ಅಮೆರಿಕಾದ ರೈಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು. ಅದೂ ಈಗಲ್ಲ, ಸುಮಾರು ಏಳೆಂಟು ವರ್ಷಗಳಷ್ಟು ಹಿಂದೆಯೇ. 'ನ್ಯಾನೋಕಿಡ್'ಗಳೆಂಬ ಪುಟಾಣಿ ವಿಸ್ಮಯಗಳನ್ನು ಸೃಷ್ಟಿಸಿದ ಅವರು ಅವನ್ನು ವಿಜ್ಞಾನ ಸಂವಹನದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಈ ಪ್ರಯತ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದಿಗೂ ವಿಜ್ಞಾನ ಸಂವಹನದ ಒಂದು ಉತ್ತಮ ಉದಾಹರಣೆಯಾಗಿ ನಿಂತಿದೆ.

ನಿಮಗೆ ಗೊತ್ತಿರಬಹುದು, 'ನ್ಯಾನೋ' ಅನ್ನುವುದು ಅತಿಸೂಕ್ಷ್ಮ ವಸ್ತುಗಳ ವಿವರಣೆಯಲ್ಲಿ ಬಳಸಲಾಗುವ ಪದ. ಸ್ಪಷ್ಟವಾಗಿ ಹೇಳಬೇಕಾದರೆ 'ನ್ಯಾನೋ' ಪದ ೧೦−೯ ಎಂಬ ಸಂಖ್ಯೆಯನ್ನು ಗುರುತಿಸಲು ಬಳಕೆಯಾಗುತ್ತದೆ. ಗ್ರೀಕ್ ಭಾಷೆಯಲ್ಲಿ ನ್ಯಾನೋಸ್ ಎಂದರೆ ಕುಬ್ಜ ಎಂದರ್ಥ.

ಈ ನ್ಯಾನೋಕಿಡ್‌ಗಳೂ ಕುಬ್ಜರೇ - ಅಷ್ಟಿಷ್ಟಲ್ಲ, ಬರಿಗಣ್ಣಿಗೆ ಕಾಣಿಸದಷ್ಟು!
ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಮಾತ್ರ ಗೋಚರಿಸಬಲ್ಲ ಈ ನ್ಯಾನೋಕಿಡ್‌ಗಳು ನೋಡಲು ಮಾನವರಂತೆಯೇ ಇದ್ದರೂ ಎತ್ತರದಲ್ಲಿ ಮಾತ್ರ ಮಾನವನಿಗಿಂತ ನೂರು ಕೋಟಿ ಪಟ್ಟು ಸಣ್ಣದಾಗಿರುತ್ತವೆ. ಇವುಗಳ ಗಾತ್ರ ಅದೆಷ್ಟು ಪುಟ್ಟದಾಗಿರುತ್ತದೆಂದರೆ ಒಂದು ಸಾಮಾನ್ಯ ಅಂಚೆಚೀಟಿಯಷ್ಟು ವಿಸ್ತೀರ್ಣದ ಪ್ರದೇಶದಲ್ಲಿ ಸುಮಾರು ಹತ್ತು ಟ್ರಿಲಿಯನ್ ನ್ಯಾನೋಕಿಡ್‌ಗಳನ್ನು ನಿಲ್ಲಿಸಬಹುದಂತೆ! ಇವು ಇಷ್ಟೊಂದು ಪುಟ್ಟದಾಗಿರುವುದರಿಂದಲೇ ಇವನ್ನು ನ್ಯಾನೋ ಲಿಲಿಪುಟ್ ಅಥವಾ ನ್ಯಾನೋಪುಟ್‌ಗಳೆಂದೂ ಕರೆಯುತ್ತಾರೆ.

ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಜೋಡಣೆಯಿಂದ ಸಿದ್ಧವಾದ ಈ ಅಣುಗಳು ನೋಡಲು ಪುಟಾಣಿ ಮನುಷ್ಯರಂತೆಯೇ ಕಾಣುತ್ತವೆ. ಇವುಗಳಲ್ಲಿ ಅನೇಕ ಬಗೆ - ಶುಭ್ರ ಬಿಳಿಬಟ್ಟೆ ತೊಟ್ಟ ಅಡುಗೆಯವನಂತೆ ಕಾಣುವ ಅಣು 'ನ್ಯಾನೋ ಷೆಫ್' ಆದರೆ ಕಿರೀಟತೊಟ್ಟ ಮಹಾರಾಜನಂತೆ ಕಾಣುವ ಅಣುವಿನ ಹೆಸರು 'ನ್ಯಾನೋ ಮೊನಾರ್ಕ್'. ಇವರಿಬ್ಬರೇ ಅಲ್ಲದೆ ಬುದ್ಧಿವಂತ 'ನ್ಯಾನೋಸ್ಕಾಲರ್', ಪುಟಾಣಿ ಮಗು 'ನ್ಯಾನೋ ಟಾಡ್ಲರ್', ಕೀಟಲೆಮಾಡುವ 'ನ್ಯಾನೋ ಜೆಸ್ಟರ್', ಸದಾ ಚಟುವಟಿಕೆಯ 'ನ್ಯಾನೋ ಅಥ್ಲೀಟ್'ನಂಥ ಇನ್ನೂ ಅನೇಕ ಪಾತ್ರಗಳನ್ನು ಸೃಷ್ಟಿಸಲಾಗಿದೆ. ಪುಟಾಣಿ ನಾಯಿ 'ನ್ಯಾನೋ ಡಾಗ್' ಕೂಡ ಇದೆ!

ಇಂತಹ ನ್ಯಾನೋಕಿಡ್ ಪಾತ್ರಗಳನ್ನು ಬಳಸಿ ಸೃಷ್ಟಿಸಲಾದ ವಿಡಿಯೋ ಚಿತ್ರಗಳನ್ನು ಹಲವಾರು ಶಾಲೆಗಳಲ್ಲಿ ವಿಜ್ಞಾನ ಬೋಧನೆಗೆ ಬಳಸಿಕೊಳ್ಳಲಾಗಿತ್ತು; ಅಷ್ಟೇ ಅಲ್ಲ, ವಿಶ್ವವ್ಯಾಪಿ ಜಾಲದ ಮೂಲಕ (nanokids.rice.edu ತಾಣದಲ್ಲಿ, ಹಾಗೂ ಯೂಟ್ಯೂಬ್ ಮೂಲಕ) ಈ ಮಾಹಿತಿ ಈಗಲೂ ಉಚಿತವಾಗಿ ಲಭ್ಯವಿದೆ. ತಂತ್ರಜ್ಞಾನದ ಭರಾಟೆಯಲ್ಲಿ ಮೂಲಭೂತ ವಿಜ್ಞಾನದತ್ತ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ತಲೆಕೆಡಿಸಿಕೊಂಡು ಕುಳಿತುಕೊಳ್ಳುವ ಬದಲು ನ್ಯಾನೋಕಿಡ್ಸ್ ನಿರ್ಮಾತೃಗಳು ಈ ವಿನೂತನ ವಿಧಾನವನ್ನು ಬಳಸಿಕೊಂಡಿದ್ದರು.

ಅಮೆರಿಕಾದ ನ್ಯಾಷನಲ್ ಸೈನ್ಸ್ ಫೌಂಡೇಶನ್ ನೆರವಿನೊಡನೆ ಒಂದಷ್ಟು ವರ್ಷ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ ಪ್ರಸ್ತುತ ಹಣಕಾಸಿನ ನೆರವು ಮುಂದುವರೆದಿಲ್ಲ. ಹೀಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ನ್ಯಾನೋಕಿಡ್ಸ್ ಪ್ರಾಜೆಕ್ಟಿನಲ್ಲಿ ಹೊಸ ಕೆಲಸವೇನೂ ನಡೆದಿಲ್ಲ ಎಂದು ರೈಸ್ ವಿವಿಯ ಡಾ| ಕ್ಯಾರೋಲಿನ್ ನಿಕೋಲ್ ಹೇಳುತ್ತಾರೆ.

ಹೊಸ ಕೆಲಸ ಆಗಿಲ್ಲದಿದ್ದರೆ ಏನಂತೆ, ಈವರೆಗೆ ನ್ಯಾನೋಕಿಡ್ಸ್ ತೋರಿಸಿಕೊಟ್ಟಿರುವುದೇ ಬಹಳಷ್ಟಿದೆ. ವಿಜ್ಞಾನದಲ್ಲಿ ಮಕ್ಕಳಿಗೆ ಆಸಕ್ತಿಮೂಡುವಂತೆ ಮಾಡಿದ್ದಲ್ಲದೆ ವಿಜ್ಞಾನದ ಬೋಧನೆ ಹೀಗೂ ಆಗಬಹುದು ಎಂದು ತೋರಿಸಿಕೊಟ್ಟದ್ದು ನ್ಯಾನೋಕಿಡ್‌ಗಳ ಸಾಧನೆ.

ಅಂತಾರಾಷ್ಟ್ರೀಯ ರಸಾಯನವಿಜ್ಞಾನ ವರ್ಷ ಮುಗಿಯುತ್ತಿರುವ ಸಂದರ್ಭದಲ್ಲಿ ಆ ಪುಟಾಣಿ ವಿಸ್ಮಯಗಳಿಗೊಂದು ದೊಡ್ಡ ಥ್ಯಾಂಕ್ಸು!

ಡಿಸೆಂಬರ್ ೬, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge