ಮಂಗಳವಾರ, ಡಿಸೆಂಬರ್ 13, 2011

ತಂತ್ರಜ್ಞಾನ, ಕನ್ನಡ ಮತ್ತು ನಾವು

ಇನ್ನೊಂದು ಸಾಹಿತ್ಯ ಸಮ್ಮೇಳನ ಈಗಷ್ಟೆ ಮುಗಿದಿದೆ. ಆಧುನಿಕ ಜಗತ್ತಿನಲ್ಲಿ ಕನ್ನಡದ ಸ್ಥಿತಿಗತಿಗಳ ಕುರಿತು ಅಲ್ಲಿ ಮಂಡಿಸಲಾದ ಪ್ರಬಂಧದ ಸಂಗ್ರಹರೂಪ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಮತ್ತು ಕನ್ನಡ ಎಂಬ ಎರಡು ಪದಗಳನ್ನು ಒಟ್ಟಿಗೆ ಕೇಳಿದಾಕ್ಷಣ ಅದು ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದರ ಬಗೆಗಷ್ಟೆ ಇರಬೇಕಿಲ್ಲ. ಕನ್ನಡ ಮತ್ತು ತಂತ್ರಜ್ಞಾನದ ಸಂಬಂಧ ಈಗ ಬರಿಯ ಡಿಟಿಪಿ ಮಾಡುವುದಕ್ಕಷ್ಟೆ ಸೀಮಿತವಾಗಿ ಉಳಿದಿಲ್ಲ.

ಅಷ್ಟೇ ಅಲ್ಲ, ಕನ್ನಡ ಮತ್ತು ತಂತ್ರಜ್ಞಾನದ ವಿಷಯ ಬಂದಾಗಲೆಲ್ಲ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಕುಳಿತುಕೊಳ್ಳುವುದೂ ತಪ್ಪು. ಈ ಕ್ಷೇತ್ರದಲ್ಲಿ ನಾವು ಮಾಡಬಹುದಾದದ್ದೂ ಬೇಕಾದಷ್ಟಿದೆ.

ಯಾಂತ್ರೀಕೃತ ಅನುವಾದ
ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಮ್ಮ ಸುತ್ತ ಮಾಹಿತಿಯ ಮಹಾಪೂರವೇ ಇರುತ್ತದೆ. ಈ ಮಾಹಿತಿ ಇಂಗ್ಲಿಷಿನಲ್ಲೇ ಇರಬೇಕು ಎಂದೇನೂ ಇಲ್ಲ. ಫ್ರೆಂಚ್‌ನಲ್ಲೋ ಜರ್ಮನ್‌ನಲ್ಲೋ ಇರುವ ತಾಣದಲ್ಲೂ ನಮಗೆ ಬೇಕಾದ ಮಾಹಿತಿ ಇರಬಹುದು. ಇಂತಹ ಯಾವುದೇ ಮಾಹಿತಿಯನ್ನು ಆ ಕ್ಷಣದಲ್ಲೇ ನಮಗೆ ಅರ್ಥವಾಗುವ ಭಾಷೆಗೆ ಅನುವಾದಿಸಿಕೊಂಡು ಓದುವ ಸೌಲಭ್ಯ ಬಹಳ ಉಪಯುಕ್ತ.

ಕನ್ನಡಕ್ಕೂ ಈ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷ್‌ಗೆ ಪಠ್ಯವನ್ನು ಅನುವಾದಿಸುವ ತಂತ್ರಾಂಶ ಸೇವೆಯನ್ನು ಗೂಗಲ್ ಸಂಸ್ಥೆ ಪರಿಚಯಿಸಿದ್ದು ನಿಮಗೆ ನೆನಪಿರಬಹುದು. ಅನುವಾದದಲ್ಲಿನ ತಪ್ಪುಗಳಿಂದಾಗಿ ಈ ತಂತ್ರಾಂಶ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗೊಳಗಾದದ್ದೂ ಗೊತ್ತಿರಬಹುದು.

ಇಂತಹ ಯಾಂತ್ರೀಕೃತ ಅನುವಾದಗಳಲ್ಲಿ ತಪ್ಪುಗಳು ಕಾಣಸಿಗುವುದು ಅಪರೂಪವೇನಲ್ಲ. ಹೀಗೆ ತಪ್ಪಾದಾಗ ನಾವು ಆ ತಪ್ಪನ್ನು ಸರಿಪಡಿಸುವುದು ಸಾಧ್ಯ. ಒಮ್ಮೆ ನಾವು ಸರಿಯಾದ ಅನುವಾದ ಹೇಳಿಕೊಟ್ಟೆವೆಂದರೆ ತಂತ್ರಾಂಶ ಅದನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡು ಮಂದೆ ಅದೇ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತದೆ. ನಾವೆಲ್ಲ ಇಂತಹ ಸೇವೆಗಳನ್ನು ಆಗಿಂದಾಗ್ಗೆ ಬಳಸುತ್ತ ಅದರಲ್ಲಿರುವ ತಪ್ಪುಗಳನ್ನು ತಿದ್ದಿದರೆ ಅದರ ಅನುವಾದದ ಗುಣಮಟ್ಟ ತಾನಾಗಿಯೇ ಮೇಲೇರುತ್ತದೆ.

ಇಂತಹ ಪ್ರಯತ್ನಗಳಿಗೆ ಒಳ್ಳೆಯ ಕಾರ್ಪಸ್ ಅಥವಾ ಪಠ್ಯಕಣಜದ ನೆರವೂ ದೊರೆತರೆ ಅದು ಇನ್ನೂ ಸಂತೋಷದ ವಿಷಯ. 'I want to run' ಎಂದಾಗ 'ನಾನು ಚಲಾಯಿಸಲು ಬಯಸುವ' ಎಂಬಂತಹ ಅಸಂಬದ್ಧ ಅನುವಾದದ ಬದಲು 'ನಾನು ಓಡಲು ಬಯಸುತ್ತೇನೆ' ಎಂಬ ಸರಿಯಾದ ಅನುವಾದ ಬರಬೇಕಿದ್ದರೆ ಅನುವಾದ ಮಾಡುತ್ತಿರುವ ತಂತ್ರಾಂಶಕ್ಕೆ ಒಳ್ಳೆಯ ಪಠ್ಯಕಣಜದ ಬೆಂಬಲ ಇರಬೇಕು.

ಮತ್ತೆ ಗೂಗಲ್ ಟ್ರಾನ್ಸ್‌ಲೇಟ್ ವಿಷಯಕ್ಕೆ ಬಂದರೆ ಅದು ವೈಯಕ್ತಿಕ ಬಳಕೆದಾರರಿಗೆ ಮಾತ್ರ ಉಚಿತ. ನಾವೊಂದು ತಂತ್ರಾಂಶ ಬರೆದು ಅದರಲ್ಲಿ ಗೂಗಲ್ ಟ್ರಾನ್ಸ್‌ಲೇಟ್ ಸೌಲಭ್ಯ ಬಳಸಿಕೊಳ್ಳುತ್ತೇವೆ ಎಂದರೆ ಅವರು ಅದಕ್ಕಾಗಿ ನಮ್ಮಿಂದ ಶುಲ್ಕ ಕೇಳುತ್ತಾರೆ. ಮುಂದೆ ಬರಲಿರುವ ಯಾಂತ್ರೀಕೃತ ಅನುವಾದ ತಂತ್ರಾಂಶಗಳು ಹೀಗೆ ಮಾಡದೆ ಎಲ್ಲರಿಗೂ ಎಲ್ಲ ಉದ್ದೇಶಗಳಿಗೂ ಉಚಿತವಾಗಿಯೇ ದೊರಕುವಂತಾದರೆ ಒಳಿತು.

ಸಮಾಜ ಜಾಲಗಳಲ್ಲಿ ಕನ್ನಡ
ಈಗ ಅತ್ಯಂತ ಜನಪ್ರಿಯವಾಗಿರುವ ಸಮಾಜ ಜಾಲಗಳಲ್ಲೂ ಕನ್ನಡ ಹೆಚ್ಚುಹೆಚ್ಚಾಗಿ ಬಳಕೆಗೆ ಬರಬೇಕಿದೆ. ಉದಾಹರಣೆಗೆ ಫೇಸ್‌ಬುಕ್. ಈ ತಾಣದ ಸದಸ್ಯರಾಗಿರುವ ಅಸಂಖ್ಯ ಕನ್ನಡಿಗರಿಗೆ 'ಸಮ್‌ಒನ್ ಹ್ಯಾಸ್ ಲೈಕ್ಡ್ ಯುವರ್ ಫೋಟೋ' ಅಂತಲೋ 'ಸಮ್‌ಒನ್ ಹ್ಯಾಸ್ ಪೋಕ್ಡ್ ಯು' ಅಂತಲೋ ಹೇಳುವ ಸಂದೇಶಕ್ಕಿಂತ 'ಇಂಥವರು ನಿಮ್ಮ ಚಿತ್ರವನ್ನು ಇಷ್ಟಪಟ್ಟಿದ್ದಾರೆ' ಅಂತಲೋ 'ಇಂಥವರು ನಿಮ್ಮನ್ನು ತಿವಿದಿದ್ದಾರೆ' ಅಂತಲೋ ಹೇಳಿದಾಗ ಅದು ಹೆಚ್ಚು ಆಪ್ತವೆನಿಸಬಲ್ಲದು.

ಆದರೆ ಇಲ್ಲೂ ಅನುವಾದದ್ದೇ ಸಮಸ್ಯೆ. ಫೇಸ್‌ಬುಕ್‌ನಲ್ಲಿ ಬಳಸಲಾಗಿರುವ ಪದಗಳ ಪಟ್ಟಿಯನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವನ್ನು ಆ ಸಂಸ್ಥೆಯವರು ಕ್ರೌಡ್‌ಸೋರ್ಸ್ ಮಾಡಿದ್ದಾರೆ; ಅಂದರೆ ಅನುವಾದದ ಕೆಲಸವನ್ನು ಕನ್ನಡದ ಸಮುದಾಯಕ್ಕೆ ವಹಿಸಿಕೊಟ್ಟಿದ್ದಾರೆ. ಸಮುದಾಯದ ಪ್ರಯತ್ನದಿಂದಾಗಿಯೇ ಅನುವಾದ ಹೆಚ್ಚೂಕಡಿಮೆ ಅರ್ಧಭಾಗ ಮುಗಿದಿದೆ. ಹೆಚ್ಚು ಹೆಚ್ಚು ಜನರು ಅನುವಾದದಲ್ಲಿ ಭಾಗಿಗಳಾಗಿ ಕನ್ನಡ ಆವೃತ್ತಿಯನ್ನೂ ಬಳಸಲು ಪ್ರಾರಂಭಿಸಿದರೆ ಸಂಪೂರ್ಣವಾಗಿ ಕನ್ನಡದಲ್ಲೇ ಇರುವ ಫೇಸ್‌ಬುಕ್ ಬಹಳ ಬೇಗ ನಮಗೆ ಸಿಗಲಿದೆ. ಪ್ರತಿದಿನವೂ ಒಮ್ಮೆಯಾದರೂ ಈ ತಾಣಕ್ಕೆ ಭೇಟಿಕೊಡುವ ಸಾವಿರಾರು ಕನ್ನಡಿಗರಿರುವ ಪರಿಸ್ಥಿತಿಯಲ್ಲಿ ಅಲ್ಲಿನ ನಮ್ಮ ವ್ಯವಹಾರವೆಲ್ಲ ಕನ್ನಡ ಭಾಷೆಯ ವಾತಾವರಣದಲ್ಲೇ ಆದರೆ ಎಷ್ಟು ಚೆನ್ನ ಅಲ್ಲವೆ?

ಕ್ರೌಡ್‌ಸೋರ್ಸಿಂಗ್ ಅಥವಾ ಗುಂಪುಗುತ್ತಿಗೆಯ ಆಧಾರದ ಮೇಲೆ ಸಿದ್ಧವಾಗಿರುವ, ಸಿದ್ಧವಾಗುತ್ತಿರುವ ಇನ್ನೂ ಅನೇಕ ಯೋಜನೆಗಳಿವೆ. ವಿಕಿಪೀಡಿಯಾ ವಿಶ್ವಕೋಶ, ವಿಕ್ಷನರಿ ನಿಘಂಟು ಮುಂತಾದ ಎಲ್ಲ ಕಡೆಗಳಲ್ಲೂ ನಮ್ಮ ಕೈಲಾದಷ್ಟು ಕೆಲಸಮಾಡುವ ಮೂಲಕ ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸ್ಥಿತಿಗತಿಗಳನ್ನು ಇನ್ನಷ್ಟು ಸುಧಾರಿಸಬಹುದು. ಯಾರು ಬೇಕಿದ್ದರೂ ಮಾಹಿತಿ ಸೇರಿಸಬಹುದಾದದ್ದು ವಿಕಿಪೀಡಿಯಾದ ವಿಶೇಷತೆಯಾದರೆ ಯಾರು ಬೇಕಾದರೂ ಪದಗಳು ಮತ್ತು ಅರ್ಥಗಳನ್ನು ಸೇರಿಸಬಹುದಾದದ್ದು ವಿಕ್ಷನರಿ ನಿಘಂಟಿನ ವೈಶಿಷ್ಟ್ಯ. ಕನ್ನಡ ವಿಕ್ಷನರಿಯಲ್ಲಿ ಈಗಾಗಲೇ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಪದಗಳಿವೆ. ಯಾರು ಬೇಕಿದ್ದರೂ ಸಂಪಾದಿಸಬಹುದಾದ ಇಂಥದ್ದೇ ಇನ್ನೊಂದು ನಿಘಂಟು 'ಬರಹ ಡಾಟ್ ಕಾಮ್'ನಲ್ಲೂ ಇದೆ. ಇಂತಹ ತಾಣಗಳಲ್ಲಿ ಕನ್ನಡದಲ್ಲಿರುವ ಮಾಹಿತಿಯ ಪ್ರಮಾಣ ಹೆಚ್ಚಿದಂತೆಲ್ಲ ಅದನ್ನು ಬೇರೆಬೇರೆ ಕಡೆ ಬೇರೆಬೇರೆ ರೀತಿಗಳಲ್ಲಿ ಉಪಯೋಗಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ತಂತ್ರಾಂಶ ತಯಾರಿ
ಹೊಸ ಹೊಸ ತಂತ್ರಾಂಶಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುವುದು ನಾವು ಮಾಡಬಹುದಾದ ಇನ್ನೊಂದು ಕೆಲಸ. ಈಗಾಗಲೇ ಲಭ್ಯವಿರುವ ಮುಕ್ತ ತಂತ್ರಾಂಶಗಳನ್ನು ಕನ್ನಡಕ್ಕೆ ತರುವುದೂ ಒಳ್ಳೆಯದೇ. ತಂತ್ರಾಂಶಗಳ ಇಂಟರ್‌ಫೇಸ್ ಅನ್ನು ಕನ್ನಡಕ್ಕೆ ಅನುವಾದಿಸುವುದರಿಂದ ಪ್ರಾರಂಭಿಸಿ ಕನ್ನಡದ ಸನ್ನಿವೇಶಕ್ಕೆ ಬೇಕಾಗುವ ತಾಂತ್ರಿಕ ಬದಲಾವಣೆಗಳನ್ನು ಮಾಡುವವರೆಗೆ ಇಲ್ಲಿ ಮಾಡಬೇಕಾದ ಕೆಲಸ ಬಹಳಷ್ಟಿದೆ.

ಈ ನಿಟ್ಟಿನಲ್ಲಿ ವೈಯಕ್ತಿಕ ಪ್ರಯತ್ನಗಳೂ ಸಾಕಷ್ಟು ನಡೆದಿವೆ. ಡಾ| ಪವನಜರು ಲೋಗೋ ಪ್ರೋಗ್ರಾಮಿಂಗ್ ಭಾಷೆಯನ್ನು ಕನ್ನಡಕ್ಕೆ ತಂದದ್ದು, ಶೇಷಾದ್ರಿವಾಸುರವರು ಬರಹ ತಂತ್ರಾಂಶ ರೂಪಿಸಿದ್ದು - ಎಲ್ಲವೂ ಇಂತಹ ಆಸಕ್ತಿಯಿಂದಲೇ. ಅಂತೆಯೇ ನಿಘಂಟುತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರ ನಿಘಂಟುಗಳನ್ನು ವಿಶ್ವವ್ಯಾಪಿ ಜಾಲದ ಮೂಲಕ ಮುಕ್ತ ಬಳಕೆಗೆ ಒದಗಿಸಿದ ಪ್ರಿಸಂ ಸಂಸ್ಥೆ, ಕನ್ನಡದ ಅಪರೂಪದ ಕೆಲ ಕೃತಿಗಳನ್ನು ಗಣಕೀಕರಿಸಿ ಉಚಿತವಾಗಿ ಒದಗಿಸುತ್ತಿರುವ ಸಿರಿನುಡಿ ಜಾಲತಾಣದ ಕೆಲಸಗಳು ಕೂಡ ಶ್ಲಾಘನೀಯ.

ಗಣಕ ಪರದೆಯಲ್ಲಿ ಮೂಡಿಬರುವ ಪಠ್ಯವನ್ನು ಓದಿಹೇಳುವ ಟೆಕ್ಸ್ಟ್-ಟು-ಸ್ಪೀಚ್ ತಂತ್ರಾಂಶ ಕನ್ನಡಕ್ಕೆ ಲಭ್ಯವಾಗಿರುವುದೂ ವೈಯಕ್ತಿಕ ಆಸಕ್ತಿಯಿಂದಲೇ. ದೃಷ್ಟಿ ಸವಾಲು ಎದುರಿಸುತ್ತಿರುವ ವ್ಯಕ್ತಿಗಳು ಗಣಕ ಲೋಕದಲ್ಲಿರುವ ಕನ್ನಡದ ಮಾಹಿತಿಯನ್ನು ಆಲಿಸಲು ನೆರವಾಗುವ ಈ-ಸ್ಪೀಕ್ ಎಂಬ ಮುಕ್ತ ತಂತ್ರಾಂಶ ಕನ್ನಡಕ್ಕೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ಕೃಷಿಕ, ಸ್ವತಃ ದೃಷ್ಟಿ ಸವಾಲು ಎದುರಿಸುತ್ತಿರುವ ಶ್ರೀಧರ್ ಅವರು ಈ ಅನನ್ಯ ಸಾಧನೆ ಮಾಡಿದ್ದಾರೆ. ಈ ತಂತ್ರಾಂಶ ಕಣಜ ಜ್ಞಾನಕೋಶದ ಜಾಲತಾಣದಲ್ಲಿ ಎಲ್ಲರಿಗೂ ಲಭ್ಯವಿದೆ. ಇದೇ ರೀತಿಯಲ್ಲಿ ಕನ್ನಡದ ಪಠ್ಯವನ್ನು ಗುರುತಿಸಿ ಗಣಕೀಕರಣಗೊಳಿಸುವ ಅಕ್ಷರಜಾಣ ಅಥವಾ ಓಸಿಆರ್ ತಂತ್ರಾಂಶ ಕೂಡ ಎಲ್ಲರ ಬಳಕೆಗೂ ಸಿಗಬೇಕಿದೆ.

ಎಲ್ಲರೂ ಕೈಜೋಡಿಸಿ!
ಈವರೆಗೂ ಹೇಳಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು - ಬೇರೆಬೇರೆ ಕಾರಣಗಳಿಂದಾಗಿ - ಎಲ್ಲರಿಗೂ ಸಾಧ್ಯವಾಗದೆ ಇರಬಹುದು. ಅಂತಹವರು ಕನಿಷ್ಠಪಕ್ಷ ಕನ್ನಡದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಉಪಯೋಗಿಸುವ ಮೂಲಕವಾದರೂ ತಮ್ಮ ಬೆಂಬಲ ನೀಡಬಹುದು. ಉದಾಹರಣೆಗೆ ಹೇಳುವುದಾದರೆ ಬ್ರೌಸರ್ ತಂತ್ರಾಂಶ. ಅಂತರಜಾಲ ಸಂಪರ್ಕ ಬಳಸುವಾಗ ಎಲ್ಲರೂ ಈ ತಂತ್ರಾಂಶವನ್ನು ಉಪಯೋಗಿಸುತ್ತೇವೆ. ನಮ್ಮ ಗಣಕದಲ್ಲಿ ಬಳಸಲು ಬ್ರೌಸರ್ ಅನ್ನು ಆಯ್ದುಕೊಳ್ಳುವಾಗ ಕನ್ನಡದಲ್ಲೇ ಇರುವ ಬ್ರೌಸರ್‌ಗೆ (ಉದಾ: ಫೈರ್‌ಫಾಕ್ಸ್) ಪ್ರಾಶಸ್ತ್ಯ ಕೊಡಬಹುದು. ಹಾಗೆಯೇ ಗೂಗಲ್, ಜಿಮೇಲ್ ಇತ್ಯಾದಿಗಳನ್ನು ಬಳಸುವಾಗ ಅದರ ಇಂಟರ್‌ಫೇಸ್ ಕನ್ನಡದಲ್ಲಿರುವಂತೆ ಬದಲಿಸಿಕೊಳ್ಳಬಹುದು. ಎಟಿಎಂಗಳಿಗೆ ಹೋದಾಗ ಕನ್ನಡ ಭಾಷೆಯನ್ನೇ ಆಯ್ದುಕೊಳ್ಳಬಹುದು. ಯೂಟ್ಯೂಬ್ ಮೂವೀಸ್ ಚಾನೆಲ್‌ನಲ್ಲಿರುವ ಕನ್ನಡ ಸಿನಿಮಾಗಳನ್ನು ಉಚಿತವಾಗಿಯೇ ನೋಡಬಹುದು!

ಇಂತಹ ಸಣ್ಣಸಣ್ಣ ಹೆಜ್ಜೆಗಳೂ ತಂತ್ರಜ್ಞಾನ ಲೋಕದಲ್ಲಿ ಕನ್ನಡವನ್ನು ಮುನ್ನಡೆಸುವಲ್ಲಿ ಸಹಕಾರಿಯಾಗುತ್ತವೆ.

ಡಿಸೆಂಬರ್ ೧೩, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge