ಮಂಗಳವಾರ, ಡಿಸೆಂಬರ್ 27, 2011

ಮುಗಿಯುತ್ತಿರುವ ವರ್ಷಕ್ಕೆ ಬೈಬೈ ಹೇಳುವ ಮುನ್ನ...

ಟಿ. ಜಿ. ಶ್ರೀನಿಧಿ

ಇನ್ನೇನು ನಾಲ್ಕೇ ದಿನ, ೨೦೧೧ ಮುಗಿಸಿ ನಾವೆಲ್ಲ ೨೦೧೨ರ ಹೊಸವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಮುಗಿಯುತ್ತಿರುವ ಈ ವರ್ಷದಲ್ಲಿ ಏನೇನೆಲ್ಲ ಆಗಿದೆ ಎಂದು ನೋಡಲು ಹೊರಟರೆ ಸಾಕಷ್ಟು ದೊಡ್ಡ ಪಟ್ಟಿಯೇ ನಮ್ಮೆದುರು ನಿಲ್ಲುತ್ತದೆ; ವೈಯಕ್ತಿಕ ಸಾಧನೆಗಳು, ರಾಜಕೀಯ ಬದಲಾವಣೆಗಳು, ಆಂದೋಲನಗಳು, ಹೆಸರುಮಾಡಿದ/ಮಾಡದ ಸಿನಿಮಾಗಳು, ಹವಾಮಾನ ಬದಲಾವಣೆ - ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದ ನೂರೆಂಟು ಸಂಗತಿಗಳ ನೆನಪನ್ನು ಈ ವರ್ಷ ಕಟ್ಟಿಕೊಟ್ಟಿದೆ.

೨೦೧೧ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲೂ ಬೇಕಾದಷ್ಟು ಸಾಧನೆಗಳಾದವು, ತಂತ್ರಜ್ಞಾನದ ಸಹಾಯದಿಂದ ಬೇರೆ ಕ್ಷೇತ್ರಗಳಲ್ಲಿ ಆದ ಸಾಧನೆಗಳೂ ಕಡಿಮೆಯೇನಿಲ್ಲ. ೨೦೧೧ಕ್ಕೆ ಬೈಬೈ ಹೇಳುವ ಮುನ್ನ ಈ ವರ್ಷ ತಂತ್ರಜ್ಞಾನ ಜಗತ್ತಿನಲ್ಲಿ ಆದ ಕೆಲವು ಮಹತ್ವದ ಸಂಗತಿಗಳತ್ತ ಇಗೋ ಇಲ್ಲಿದೆ ಒಂದು ಹಿನ್ನೋಟ.

ಸೋಮವಾರ, ಡಿಸೆಂಬರ್ 26, 2011

ಕನ್ನಡದಲ್ಲಿ ವಿಜ್ಞಾನ ಸಂವಹನೆ

ವಿಜ್ಞಾನ-ತಂತ್ರಜ್ಞಾನಗಳ ಅರಿವು ಎಷ್ಟು ಮುಖ್ಯವೋ ನಮಗೆ ಅರ್ಥವಾಗುವ ಭಾಷೆಯಲ್ಲಿ ಅದರ ಸಂವಹನ ಆಗಬೇಕಾದ್ದೂ ಅಷ್ಟೇ ಮುಖ್ಯ. ಈ ಕುರಿತ ಅಪರೂಪದ ಪುಸ್ತಕವೊಂದು ಕಳೆದ ವಾರಾಂತ್ಯ ಬಿಡುಗಡೆಯಾಗಿದೆ. ಉದಯಭಾನು ಉನ್ನತ ಅಧ್ಯಯನ ಕೇಂದ್ರ ಪ್ರಕಟಿಸಿರುವ 'ಕನ್ನಡದಲ್ಲಿ ವಿಜ್ಞಾನ ಸಂವಹನೆ' ಎಂಬ ಈ ಕೃತಿಯ ಸಂಪಾದಕರು ಪ್ರೊ. ಎಚ್ ಆರ್ ರಾಮಕೃಷ್ಣರಾವ್ ಹಾಗೂ ಶ್ರೀ ಟಿ ಆರ್ ಅನಂತರಾಮುರವರು.

ಅವರ ಮಾತುಗಳಲ್ಲೇ ಹೇಳುವುದಾದರೆ "ಪ್ರಸ್ತುತ ಬದುಕಿನ ಎಲ್ಲ ರಂಗವನ್ನೂ ಪ್ರಭಾವಿಸುತ್ತಿರುವ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸರಿಯಾದ ತಿಳಿವು ಸಮಾಜದ ಎಲ್ಲ ವರ್ಗದವರಿಗೂ ಅನಿವಾರ್ಯವಾಗಿದೆ. ಇದರ ಸಂವಹನೆಗೆ ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ಅನುಭವ ಪಡೆದಿರುವ ಸಮರ್ಥರು ಬೇಕಾಗುತ್ತದೆ. ಅಂತಹ ಸಂವಹನಕಾರರಿಂದ ರಚಿತವಾಗಿರುವ ಈ ಪ್ರಬಂಧ ಸಂಗ್ರಹ ಮುಂದೆ ವಿಜ್ಞಾನ ಸಾಹಿತ್ಯ ಸಂವಹನಕಾರರಿಗೆ ಈ ಜ್ಞಾನ ಶಾಖೆಯನ್ನು ಯಾವ ದಿಶೆಯಲ್ಲಿ ವಿಸ್ತರಿಸಬೇಕೆಂಬ ರೂಪುರೇಖೆಯನ್ನು ಪ್ರತಿಬಿಂಬಿಸುತ್ತದೆ".

ಮಂಗಳವಾರ, ಡಿಸೆಂಬರ್ 20, 2011

ಐಟಿ ಕ್ರಾಂತಿಯ ಬಟ್ಟೆ ನೇಯ್ದ ಫ್ರಾನ್ಸಿನ ಮಗ್ಗ

ಟಿ ಜಿ ಶ್ರೀನಿಧಿ

ಒಂದಾನೊಂದು ಕಾಲದಲ್ಲಿ, ಇವತ್ತಿಗೆ ಸುಮಾರು ಇನ್ನೂರು ವರ್ಷಗಳಿಗೂ ಹಿಂದೆ, ಫ್ರಾನ್ಸಿನಲ್ಲಿ ಜೋಸೆಫ್ ಜಾಕಾರ್ಡ್ ಎಂಬ ವ್ಯಕ್ತಿಯೊಬ್ಬನಿದ್ದ. ಆತ ಒಂದು ವಿಶಿಷ್ಟ ರೀತಿಯ ಮಗ್ಗವನ್ನು ತಯಾರಿಸಿದ್ದ. ಆ ಮಗ್ಗ ಉದ್ದನೆಯ ದಾರದಲ್ಲಿ ಪೋಣಿಸಿದ್ದ ಮರದ ಪಟ್ಟಿಗಳನ್ನು 'ಓದಿಕೊಂಡು' ಬಟ್ಟೆಯ ವಿನ್ಯಾಸವನ್ನು ರೂಪಿಸಿಕೊಳ್ಳುತ್ತಿತ್ತು. ಅಂದರೆ, ಆ ಪಟ್ಟಿಗಳಲ್ಲಿದ್ದ ರಂಧ್ರಗಳ ಆಧಾರದ ಮೇಲೆ ಯಾವ ಬಣ್ಣದ ದಾರ ಎಲ್ಲಿ ಬರಬೇಕು ಎಲ್ಲಿ ಬರಬಾರದು ಎನ್ನುವುದನ್ನು ಅದು ಅರಿತುಕೊಳ್ಳುತ್ತಿತ್ತು.

ಈ ತಂತ್ರಜ್ಞಾನದ ಸಹಾಯದಿಂದ ಬಟ್ಟೆಯ ನೇಯ್ಗೆ ಬಹಳ ಸುಲಭವಾಯಿತು. ಅಷ್ಟೇ ಅಲ್ಲ, ಬಟ್ಟೆಯನ್ನು ನೇಯುವಾಗ ಕ್ಲಿಷ್ಟ ವಿನ್ಯಾಸಗಳನ್ನು ಅಳವಡಿಸಿಕೊಳ್ಳುವುದೂ ಸಾಧ್ಯವಾಯಿತು - ಈ ತಂತ್ರಜ್ಞಾನ ಬಳಸಿ ಜೋಸೆಫ್ ಜಾಕಾರ್ಡ್ ತನ್ನ ಕೊಠಡಿಯಲ್ಲಿ ಕುಳಿತಿರುವಂತೆ ಚಿತ್ರಿಸಲಾದ ವಿನ್ಯಾಸವನ್ನೇ ರೇಷ್ಮೆ ಬಟ್ಟೆಯಲ್ಲಿ ಮೂಡಿಸಲಾಗಿತ್ತು! ಮಿಲ್ ಮಾಲೀಕರೆಲ್ಲ ಇದರಿಂದ ಬಹಳ ಖುಷಿಯಾದರೇನೋ ಸರಿ, ಆದರೆ ಈ ಆವಿಷ್ಕಾರದಿಂದ ಆವರೆಗೂ ಮನುಷ್ಯರು ಮಾಡುತ್ತಿದ್ದ ಕೆಲಸ ಕಡಿಮೆಯಾಗಿ ಅನೇಕ ಕಾರ್ಮಿಕರು ನಿರುದ್ಯೋಗಿಗಳಾದರು. ಹಲವೆಡೆ ಈ ಮಗ್ಗಗಳನ್ನು ಒಡೆದುಹಾಕಿದ ಘಟನೆಗಳು ನಡೆದವು; ಸ್ವತಃ ಜಾಕಾರ್ಡ್ ಮೇಲೂ ಹಲ್ಲೆಗೆ ಯತ್ನ ನಡೆಯಿತು.

ಸೋಮವಾರ, ಡಿಸೆಂಬರ್ 19, 2011

ಡಿಸೆಂಬರ್ ೨೪,೨೫ರಂದು 'ಕನ್ನಡದಲ್ಲಿ ವಿಜ್ಞಾನದ ಬೆಳವಣಿಗೆ' ವಿಚಾರಗೋಷ್ಠಿ

ಇಜ್ಞಾನ ವಾರ್ತೆ

ಬೆಂಗಳೂರಿನ ಉದಯಭಾನು ಕಲಾಸಂಘ ಈ ವಾರಾಂತ್ಯದಲ್ಲಿ (೨೦೧೧ರ ಡಿಸೆಂಬರ್ ೨೪, ೨೫) 'ಕನ್ನಡದಲ್ಲಿ ವಿಜ್ಞಾನದ ಬೆಳವಣಿಗೆ' ಕುರಿತ ವಿಚಾರಗೋಷ್ಠಿಯನ್ನು ಆಯೋಜಿಸಿದೆ. ಬಸವನಗುಡಿ ನ್ಯಾಷನಲ್ ಕಾಲೇಜಿನ ಡಾ. ಎಚ್. ಎನ್. ಮಲ್ಟೀಮೀಡಿಯಾ ಹಾಲ್‌ನಲ್ಲಿ ಈ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ.

ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಪ್ರೊ. ಎಂ. ಆರ್. ನಾಗರಾಜು, ಡಾ| ಪಿ. ಎಸ್. ಶಂಕರ್, ಡಾ| ಕೆ. ಎನ್. ಗಣೇಶಯ್ಯ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ, ಡಾ| ನಾ. ಸೋಮೇಶ್ವರ ಸೇರಿದಂತೆ ಅನೇಕ ತಜ್ಞರ ಮಾತುಗಳನ್ನು ಕೇಳುವ ಅವಕಾಶ ಈ ಸಂದರ್ಭದಲ್ಲಿ ಒದಗಿಬರಲಿದೆ. ಚರ್ಚೆಯ ಪ್ರವರ್ತನೆಯನ್ನು ಶ್ರೀ ಟಿ. ಆರ್. ಅನಂತರಾಮು ಹಾಗೂ ಶ್ರೀ ನಾಗೇಶ ಹೆಗಡೆಯವರು ಮಾಡಲಿದ್ದಾರೆ. ವಿಚಾರಗೋಷ್ಠಿಯ ಪ್ರಬಂಧಗಳ ಸಂಗ್ರಹವನ್ನು ಪುಸ್ತಕರೂಪದಲ್ಲೂ ಬಿಡುಗಡೆ ಮಾಡಲಾಗುವುದು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಲ್ಲಿದೆ.

ಮಂಗಳವಾರ, ಡಿಸೆಂಬರ್ 13, 2011

ತಂತ್ರಜ್ಞಾನ, ಕನ್ನಡ ಮತ್ತು ನಾವು

ಇನ್ನೊಂದು ಸಾಹಿತ್ಯ ಸಮ್ಮೇಳನ ಈಗಷ್ಟೆ ಮುಗಿದಿದೆ. ಆಧುನಿಕ ಜಗತ್ತಿನಲ್ಲಿ ಕನ್ನಡದ ಸ್ಥಿತಿಗತಿಗಳ ಕುರಿತು ಅಲ್ಲಿ ಮಂಡಿಸಲಾದ ಪ್ರಬಂಧದ ಸಂಗ್ರಹರೂಪ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಮತ್ತು ಕನ್ನಡ ಎಂಬ ಎರಡು ಪದಗಳನ್ನು ಒಟ್ಟಿಗೆ ಕೇಳಿದಾಕ್ಷಣ ಅದು ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದರ ಬಗೆಗಷ್ಟೆ ಇರಬೇಕಿಲ್ಲ. ಕನ್ನಡ ಮತ್ತು ತಂತ್ರಜ್ಞಾನದ ಸಂಬಂಧ ಈಗ ಬರಿಯ ಡಿಟಿಪಿ ಮಾಡುವುದಕ್ಕಷ್ಟೆ ಸೀಮಿತವಾಗಿ ಉಳಿದಿಲ್ಲ.

ಅಷ್ಟೇ ಅಲ್ಲ, ಕನ್ನಡ ಮತ್ತು ತಂತ್ರಜ್ಞಾನದ ವಿಷಯ ಬಂದಾಗಲೆಲ್ಲ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಕುಳಿತುಕೊಳ್ಳುವುದೂ ತಪ್ಪು. ಈ ಕ್ಷೇತ್ರದಲ್ಲಿ ನಾವು ಮಾಡಬಹುದಾದದ್ದೂ ಬೇಕಾದಷ್ಟಿದೆ.

ಯಾಂತ್ರೀಕೃತ ಅನುವಾದ
ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಮ್ಮ ಸುತ್ತ ಮಾಹಿತಿಯ ಮಹಾಪೂರವೇ ಇರುತ್ತದೆ. ಈ ಮಾಹಿತಿ ಇಂಗ್ಲಿಷಿನಲ್ಲೇ ಇರಬೇಕು ಎಂದೇನೂ ಇಲ್ಲ. ಫ್ರೆಂಚ್‌ನಲ್ಲೋ ಜರ್ಮನ್‌ನಲ್ಲೋ ಇರುವ ತಾಣದಲ್ಲೂ ನಮಗೆ ಬೇಕಾದ ಮಾಹಿತಿ ಇರಬಹುದು. ಇಂತಹ ಯಾವುದೇ ಮಾಹಿತಿಯನ್ನು ಆ ಕ್ಷಣದಲ್ಲೇ ನಮಗೆ ಅರ್ಥವಾಗುವ ಭಾಷೆಗೆ ಅನುವಾದಿಸಿಕೊಂಡು ಓದುವ ಸೌಲಭ್ಯ ಬಹಳ ಉಪಯುಕ್ತ.

ಕನ್ನಡಕ್ಕೂ ಈ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷ್‌ಗೆ ಪಠ್ಯವನ್ನು ಅನುವಾದಿಸುವ ತಂತ್ರಾಂಶ ಸೇವೆಯನ್ನು ಗೂಗಲ್ ಸಂಸ್ಥೆ ಪರಿಚಯಿಸಿದ್ದು ನಿಮಗೆ ನೆನಪಿರಬಹುದು. ಅನುವಾದದಲ್ಲಿನ ತಪ್ಪುಗಳಿಂದಾಗಿ ಈ ತಂತ್ರಾಂಶ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗೊಳಗಾದದ್ದೂ ಗೊತ್ತಿರಬಹುದು.

ಇಂತಹ ಯಾಂತ್ರೀಕೃತ ಅನುವಾದಗಳಲ್ಲಿ ತಪ್ಪುಗಳು ಕಾಣಸಿಗುವುದು ಅಪರೂಪವೇನಲ್ಲ. ಹೀಗೆ ತಪ್ಪಾದಾಗ ನಾವು ಆ ತಪ್ಪನ್ನು ಸರಿಪಡಿಸುವುದು ಸಾಧ್ಯ. ಒಮ್ಮೆ ನಾವು ಸರಿಯಾದ ಅನುವಾದ ಹೇಳಿಕೊಟ್ಟೆವೆಂದರೆ ತಂತ್ರಾಂಶ ಅದನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡು ಮಂದೆ ಅದೇ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತದೆ. ನಾವೆಲ್ಲ ಇಂತಹ ಸೇವೆಗಳನ್ನು ಆಗಿಂದಾಗ್ಗೆ ಬಳಸುತ್ತ ಅದರಲ್ಲಿರುವ ತಪ್ಪುಗಳನ್ನು ತಿದ್ದಿದರೆ ಅದರ ಅನುವಾದದ ಗುಣಮಟ್ಟ ತಾನಾಗಿಯೇ ಮೇಲೇರುತ್ತದೆ.

ಮಂಗಳವಾರ, ಡಿಸೆಂಬರ್ 6, 2011

ಕೆಮಿಸ್ಟ್ರಿ ಸಂಚಿಕೆ ಬಂದಿದೆ!

೨೦೧೧, ಅಂತಾರಾಷ್ಟ್ರೀಯ ರಸಾಯನ ವಿಜ್ಞಾನ ವರ್ಷ. ಇನ್ನೇನು ಮುಗಿಯುತ್ತಿರುವ ಈ ವರ್ಷದ ನೆನಪಿನಲ್ಲಿ ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ರಸಾಯನ ವಿಜ್ಞಾನ ಸಂಚಿಕೆ ಇದೀಗ ನಿಮ್ಮ ಮುಂದಿದೆ. ಈ ಹೊಸ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ.

ಈ ಸಂಚಿಕೆಯೊಡನೆ ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ನಾಲ್ಕು ಪ್ರಾಯೋಗಿಕ ಸಂಚಿಕೆಗಳು ಸಂಪೂರ್ಣವಾದವು. ನಮ್ಮ ಪತ್ರಿಕೆ ಮುಂದಿನ ವರ್ಷದಿಂದ ಹೊಸ ರೂಪದಲ್ಲಿ ಮೂಡಿಬರಲಿದೆ.

ಪತ್ರಿಕೆಯ ಹೊಸ ಸಂಚಿಕೆ ೨೦೧೨ರ ಏಪ್ರಿಲ್ ೧ರಂದು ನಿಮ್ಮ ಮುಂದೆ ಬರಲಿದೆ. ಸೀರಿಯಸ್‌ಲಿ!

ಸೋಮವಾರ, ಡಿಸೆಂಬರ್ 5, 2011

ಪುಟಾಣಿಮನುಷ್ಯರ ನ್ಯಾನೋಪ್ರಪಂಚ

ಟಿ. ಜಿ. ಶ್ರೀನಿಧಿ
೨೦೧೧, ಅಂತಾರಾಷ್ಟ್ರೀಯ ರಸಾಯನವಿಜ್ಞಾನ ವರ್ಷ. ವರ್ಷ ಇನ್ನೇನು ಮುಗಿಯುತ್ತ ಬಂದರೂ ಕೆಮಿಸ್ಟ್ರಿ ಬಗ್ಗೆ ಏನೂ ಬರೆದಿಲ್ಲವಲ್ಲ ಅಂತ ಮೊನ್ನೆತಾನೇ ನೆನಪಾಯಿತು. ಹಾಗೆ ಬರೆಯುವುದೇ ಆದರೆ ಕೆಮಿಸ್ಟ್ರಿ ಮತ್ತು ಮಾಹಿತಿ ತಂತ್ರಜ್ಞಾನ ಎರಡಕ್ಕೂ ಸಂಬಂಧಪಟ್ಟ ಯಾವುದಾದರೂ ವಿಷಯವನ್ನೇ ಆಯ್ದುಕೊಳ್ಳೋಣ ಎಂಬ ಯೋಚನೆಯೂ ಬಂತು. ಆಗ ನೆನಪಾದದ್ದೇ ಈ ಕತೆ.
ಶಾಲೆ-ಕಾಲೇಜುಗಳಲ್ಲಿ ವಿಜ್ಞಾನದ ಪಾಠ ಅದೆಷ್ಟೋ ಜನಕ್ಕೆ ಕಬ್ಬಿಣದ ಕಡಲೆ. ರಸಾಯನ ವಿಜ್ಞಾನದ ಅಧ್ಯಯನ ಕೆಲ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ವಿಷಯವಾದರೂ ಬಹುತೇಕರಿಗೆ ಅದು ತಲೆನೋವು ತರುವ ಸಂಗತಿಯೆಂದೇ ಹೇಳಬೇಕು.

ಆದರೆ ಅಣುಗಳೇ ನಿಮ್ಮ ಮುಂದೆ ಬಂದು ಕೆಮಿಸ್ಟ್ರಿ ಪಾಠ ಹೇಳುವಂತಿದ್ದರೆ? ಎಂಥಾ ಮಜ ಅಲ್ಲವೆ?

ಈ ರೋಚಕ ಕನಸನ್ನು ನನಸಾಗಿಸಿದವರು ಅಮೆರಿಕಾದ ರೈಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು. ಅದೂ ಈಗಲ್ಲ, ಸುಮಾರು ಏಳೆಂಟು ವರ್ಷಗಳಷ್ಟು ಹಿಂದೆಯೇ. 'ನ್ಯಾನೋಕಿಡ್'ಗಳೆಂಬ ಪುಟಾಣಿ ವಿಸ್ಮಯಗಳನ್ನು ಸೃಷ್ಟಿಸಿದ ಅವರು ಅವನ್ನು ವಿಜ್ಞಾನ ಸಂವಹನದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಈ ಪ್ರಯತ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದಿಗೂ ವಿಜ್ಞಾನ ಸಂವಹನದ ಒಂದು ಉತ್ತಮ ಉದಾಹರಣೆಯಾಗಿ ನಿಂತಿದೆ.

ನಿಮಗೆ ಗೊತ್ತಿರಬಹುದು, 'ನ್ಯಾನೋ' ಅನ್ನುವುದು ಅತಿಸೂಕ್ಷ್ಮ ವಸ್ತುಗಳ ವಿವರಣೆಯಲ್ಲಿ ಬಳಸಲಾಗುವ ಪದ. ಸ್ಪಷ್ಟವಾಗಿ ಹೇಳಬೇಕಾದರೆ 'ನ್ಯಾನೋ' ಪದ ೧೦−೯ ಎಂಬ ಸಂಖ್ಯೆಯನ್ನು ಗುರುತಿಸಲು ಬಳಕೆಯಾಗುತ್ತದೆ. ಗ್ರೀಕ್ ಭಾಷೆಯಲ್ಲಿ ನ್ಯಾನೋಸ್ ಎಂದರೆ ಕುಬ್ಜ ಎಂದರ್ಥ.

ಈ ನ್ಯಾನೋಕಿಡ್‌ಗಳೂ ಕುಬ್ಜರೇ - ಅಷ್ಟಿಷ್ಟಲ್ಲ, ಬರಿಗಣ್ಣಿಗೆ ಕಾಣಿಸದಷ್ಟು!
badge