ಭಾನುವಾರ, ಜೂನ್ 5, 2011

ಇಜ್ಞಾನ ವಿಶೇಷ: ಪರಿಸರ ದಿನ ಮತ್ತೆ ಬಂದಿದೆ...

ನಾಗೇಶ ಹೆಗಡೆ
ಇಜ್ಞಾನ ಪರಿಸರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಪರಿಸರ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಬಾರಿಯ ವಿಶ್ವ ಪರಿಸರ ದಿನಾಚರಣೆಗೆ ವಿಶೇಷ ಮಹತ್ವ ಇದೆ. ಇದೇ ಮೊದಲ ಬಾರಿಗೆ ಭಾರತವನ್ನು 'ಆತಿಥೇಯ ರಾಷ್ಟ್ರ' ಎಂದು ವಿಶ್ವಸಂಸ್ಥೆ ಘೋಷಿಸಿದೆ. ದಿಲ್ಲಿ ಮತ್ತು ಮುಂಬೈಗಳಲ್ಲಿ ವಿಶ್ವಸಂಸ್ಥೆಯೇ ಭಾರತದೊಂದಿಗೆ ಜಂಟಿಯಾಗಿ ಜೂನ್ ೫ರಂದು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಮತ್ತು ಅದು ಜಗತ್ತಿಗೆಲ್ಲ ಟಾಮ್ ಟಾಮ್ ಆಗುವಂತೆ ನೋಡಿಕೊಳ್ಳುತ್ತದೆ.

೨೦೧೧ರ ಇಡೀ ವರ್ಷವನ್ನು 'ಅರಣ್ಯಗಳ ಅಂತರರಾಷ್ಟ್ರೀಯ ವರ್ಷ' ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವುದರಿಂದ ಸಹಜವಾಗಿಯೇ ಜಾಗತಿಕ ಮಟ್ಟದ ಎಲ್ಲ ಕಾರ್ಯಕ್ರಮಗಳಲ್ಲೂ ಅರಣ್ಯವೇ ಒತ್ತುಗುರಿ ಆಗಿರುತ್ತದೆ. ಅದಕ್ಕೇ ಈ ಬಾರಿಯ ವಿಶ್ವ ಪರಿಸರ ದಿನಕ್ಕೂ ಅರಣ್ಯವನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಳ್ಳಲು ಎಲ್ಲ ರಾಷ್ಟ್ರಗಳಿಗೆ ಸೂಚಿಸಲಾಗಿದೆ. ಅದರಲ್ಲೂ ಈ ವರ್ಷ 'ಅರಣ್ಯ: ನಿಮ್ಮ ಸೇವೆಯಲ್ಲಿ ನಿಸರ್ಗ' ಎಂಬ ಧ್ಯೇಯವಾಕ್ಯವನ್ನೇ ಮುಂದಿಟ್ಟುಕೊಂಡು ಜೂನ್ ೫ರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

'ನಿಮ್ಮ ಸೇವೆಯಲ್ಲಿ ನಿಸರ್ಗ' ಎಂಬ ಮಾತಿನ ಅರ್ಥವನ್ನು ಇಲ್ಲಿ ವಿವರಿಸಬೇಕಾದ ಅಗತ್ಯವಿಲ್ಲ. ಅರಣ್ಯ ಇಲ್ಲದಿದ್ದರೆ ನಮಗೆ ನೀರು ಸಿಗುವುದಿಲ್ಲ; ಶುದ್ಧಗಾಳಿ ಸಿಗುವುದಿಲ್ಲ. ಅರಣ್ಯಗಳು ತಾಪಮಾನವನ್ನು ತಹಬಂದಿಯಲ್ಲಿಡುವ 'ಥರ್ಮೊಸ್ಟಾಟ್' ಥರಾ ಕೆಲಸ ಮಾಡುತ್ತವೆ. ನಮ್ಮ ಆಹಾರ ಭದ್ರತೆಗೆ ಬೇಕಾದ ತಳಿಭಂಡಾರವನ್ನು (ಜೀನ್ ಪೂಲ್) ಅವು ರಕ್ಷಿಸಿಟ್ಟುಕೊಂಡಿವೆ. ನಮ್ಮವರ ಬೇಟೆದಾಹವನ್ನೂ ಎದುರಿಸಿ ಹುಲಿ, ಕಪ್ಪುಚಿರತೆ, ಸಿಂಗಳೀಕ, ಸುವರ್ಣ ಲಂಗೂರಗಳು ಇಂದೂ ಉಳಿದಿವೆ ಎಂದರೆ, ಅರಣ್ಯಗಳು ಅವಕ್ಕೆ ಆಶ್ರಯ ಕೊಟ್ಟು ವನ್ಯ ತಳಿಭಂಡಾರವನ್ನು ಕಾಪಾಡುತ್ತಿರುವುದೇ ಕಾರಣ. ನಮ್ಮ ಸೇವೆಯೊಂದನ್ನೇ ಅಲ್ಲ, ಅರಣ್ಯಗಳು ಇಡೀ ಜೀವಸ್ತೋಮದ ಸೇವೆಯನ್ನು ಮಾಡುತ್ತಿವೆ. ಇದನ್ನು ಮತ್ತೆ ಮತ್ತೆ ಹೇಳಬೇಕಾದ ಪ್ರಸಂಗ ಏಕಿದೆ ಎಂದರೆ, ನಾವು ದಿನದಿನಕ್ಕೆ ನಿಸರ್ಗದಿಂದ ದೂರವಾಗುತ್ತಿದ್ದೇವೆ. ಕಾಡು ಎಂದರೆ ಏನೆಂಬುದೇ ಗೊತ್ತಿಲ್ಲದ ಪೀಳಿಗೆಯನ್ನು ಸೃಷ್ಟಿಸುತ್ತಿದ್ದೇವೆ.

ಆಧುನಿಕ ವಿಜ್ಞಾನ-ತಂತ್ರಜ್ಞಾನವೂ ಹೊಸ ಹೊಸ ಆವಿಷ್ಕಾರಗಳಿಗಾಗಿ ನಿಸರ್ಗದ ಅಧ್ಯಯನದಲ್ಲಿ ತೊಡಗಿದೆ. ಈಗೆರಡು ತಿಂಗಳು ಹಿಂದಷ್ಟೇ ನೀರಿನಿಂದ ಜಲಜನಕ ಮತ್ತು ಆಮ್ಲಜನಕಗಳನ್ನು (ಸೂರ್ಯನ ಬೆಳಕಿನಲ್ಲಿ) ಬೇರ್ಪಡಿಸುವ ತಂತ್ರಜ್ಞಾನ ಕೈಗೆಟುಕಿದೆ. ಚಿಟ್ಟೆಗಳ ರೆಕ್ಕೆಗಳಲ್ಲಿ ಕಾಣಬರುವ 'ಬಣ್ಣವಲ್ಲದ ಬಣ್ಣ'ವನ್ನು ಸಾಕ್ಷಾತ್ಕರಿಸುವುದು ಇದೀಗ ಸಾಧ್ಯವಾಗಿದೆ. ಚಿಟ್ಟೆ ಮತ್ತು ನವಿಲುಗರಿಯಲ್ಲಿನ ಬಣ್ಣಗಳಿಗೆ ಯಾವುದೇ ರಾಸಾಯನಿಕ ವಸ್ತು ಕಾರಣವಲ್ಲ. ಗೀರುಗೀರು ಭೌತಿಕ ರಚನೆಗಳ ಮೂಲಕ ಬೆಳಕಿನ ವಿವರ್ತನೆ (ಡಿಫ್ರಾಕ್ಷನ್) ಆಗುವಾಗ ನಾನಾ ಬಣ್ಣಗಳು ಮಿಂಚುತ್ತವೆ. ಮುಂದೊಂದು ದಿನ ಮಕ್ಕಳ ಆಟಿಗೆಗಳಿಗೆ, ಅಥವಾ ನಮ್ಮ ವಾಹನಗಳಿಗೆ ಅಷ್ಟೇಕೆ ನಮ್ಮ ಮನೆಯ ಗೋಡೆಗೂ ಅಂಥದ್ದೇ ಮೇಲ್ಮೈ ಇರುವ ಹೊದಿಕೆಗಳು ಬರಬಹುದು. ವಿಷರಹಿತ ಬಣ್ಣಗಳು ನಮಗೆ ಮುದ ನೀಡಬಹುದು.

ನಿಸರ್ಗವನ್ನು ನೋಡುವ ಕಣ್ಣುಗಳು ಚುರುಕಾಗಿದ್ದರೆ ಮನುಕುಲದ ಇದುವರೆಗಿನ ತಪ್ಪುಗಳನ್ನ ಸರಿಪಡಿಸಬಲ್ಲ ಅಸಂಖ್ಯ ಪಾಠಗಳು ನಮಗೆ ಅಲ್ಲಿ ಸಿಗುತ್ತವೆ. ಅದಕ್ಕೇ ಈ ವರ್ಷದ ವಿಶ್ವ ಪರಿಸರ ದಿನದಂದು ಅರಣ್ಯಗಳತ್ತ ನಗರವಾಸಿಗಳ ಗಮನ ಸೆಳೆಯುವ ಯತ್ನ ನಡೆದಿದೆ. ಕೇವಲ ಪರಿಸರ ಪ್ರೇಮಿಗಳಷ್ಟೇ ಅಲ್ಲ, ಪ್ರಯೋಗಾಲಯಗಳಲ್ಲಿ ಬಂದಿಗಳಾದ ವಿಜ್ಞಾನಿಗಳು ಹಾಗೂ ನಿರ್ಮಾಣ ಪ್ರಪಂಚದಲ್ಲಿ ಮುಳುಗಿರುವ ಎಂಜಿನಿಯರ್ ಗಳೂ ನಿಸರ್ಗದ ಕಡೆ ನೋಡಬೇಕು ಎಂಬ ಆಶಯ ಇದೆ.

ಪ್ರಕೃತಿಯಲ್ಲಿ 'ಕಲಿಯಬೇಕಾದುದು ಇನ್ನೂ ಬಹಳಷ್ಟಿದೆ' ಎಂದು ಕಲಿತವರಿಗೆ ಹೇಳಬೇಕಾದ ಪ್ರಸಂಗ ಬಂದಿದೆ.

3 ಕಾಮೆಂಟ್‌ಗಳು:

ಮೌನಿ ಹೇಳಿದರು...

dhanyavadagalu sir. parisara dinada vishesakke....

ಮೌನಿ ಹೇಳಿದರು...

parisarada dinada shubhashayagalu.....sir..

ಮೌನಿ ಹೇಳಿದರು...

parisarada dinada shubhashayagalu.....sir..

badge