Wednesday, November 11, 2009

ಸೈಬರ್ ಸಮರ

ಟಿ ಜಿ ಶ್ರೀನಿಧಿ
 
ರಷ್ಯಾ ಸಮೀಪವಿರುವ  ಪುಟ್ಟ ರಾಷ್ಟ್ರ ಎಸ್ಟೋನಿಯಾ. ಮಾಹಿತಿ ತಂತ್ರಜ್ಞಾನದಲ್ಲಿ ಅಪಾರ ಪ್ರಗತಿ ಸಾಧಿಸಿರುವ ಈ ದೇಶ ಇ-ಆಡಳಿತವನ್ನು ವ್ಯಾಪಕವಾಗಿ ಅಳವಡಿಸಿಕೊಂಡಿದೆ. ಅಲ್ಲಿನ ಆಡಳಿತದಲ್ಲಿ ಫೈಲು ಕೆಂಪುಪಟ್ಟಿಗಳಿಗೆಲ್ಲ ಜಾಗವೇ ಇಲ್ಲ; iತದಾನದಿಂದ ಪ್ರಾರಂಭಿಸಿ ದೈನಂದಿನ ವಹಿವಾಟುಗಳವರೆಗೆ ಬಹುತೇಕ ಎಲ್ಲ ಕೆಲಸವೂ ಅಂತರಜಾಲದ ಮೂಲಕವೇ ನಡೆಯುತ್ತದೆ.

ರಷ್ಯಾಕ್ಕೂ ಎಸ್ಟೋನಿಯಾಗೂ  ಬಹಳ ಹಿಂದಿನಿಂದಲೂ ಎಣ್ಣೆ ಸೀಗೇಕಾಯಿಯ  ಸಂಬಂಧ. ಇವೆರಡೂ ದೇಶಗಳ ನಡುವೆ ಏನಾದರೊಂದು ಕಿತಾಪತಿ ನಡೆದೇ ಇರುತ್ತದೆ. ಹೀಗಿರುವಾಗ ೨೦೦೭ರಲ್ಲಿ ಎಸ್ಟೋನಿಯಾ ಸರಕಾರ ಸೋವಿಯತ್ ಯುಗದ ಸ್ಮಾರಕವೊಂದನ್ನು ಸ್ಥಳಾಂತರಿಸುವ ತೀರ್ಮಾನ ಕೈಗೊಂಡಿತು. ಇದಕ್ಕೆ ರಷ್ಯನ್ನರ ತೀವ್ರ ವಿರೋಧ ವ್ಯಕ್ತವಾಯಿತು, ಬಂದ್-ರಸ್ತೆತಡೆ ಇತ್ಯಾದಿಗಳೂ ನಡೆದವು.

ಇನ್ನು ಕೆಲವರು ಎಸ್ಟೋನಿಯಾದ  ಗಣಕ ವ್ಯವಸ್ಥೆಯನ್ನು ಹಾಳುಗೆಡವುವ  ಪ್ರಯತ್ನ ಶುರುಮಾಡಿದರು. ಜಾಲತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಯಿತು. ಮಾಹಿತಿಯ ಒಳಹರಿವು ಸರ್ವರುಗಳ ಸಾಮರ್ಥ್ಯವನ್ನೂ ಮೀರಿದಾಗ ಜಾಲತಾಣಗಳ ಕಾರ್ಯಾಚರಣೆ ನಿಧಾನವಾಯಿತು. ಇಡೀ ದೇಶದ ಆಡಳಿತ ವ್ಯವಸ್ಥೆಯೇ ಅಲುಗಾಡಿಹೋಗುವ ಪರಿಸ್ಥಿತಿ ಎದುರಾಯಿತು.

ದೇಶದೇಶಗಳ ನಡುವಿನ ಸಮರದ ಹೊಸ ಮುಖ ಜಗತ್ತಿಗೆ ಪರಿಚಯವಾದದ್ದೇ ಆಗ.

* * *

ಎಸ್ಟೋನಿಯಾ ಹೇಳಿಕೇಳಿ  ನ್ಯಾಟೋದ (NATO) ಸದಸ್ಯ ರಾಷ್ಟ್ರ. ಎಸ್ಟೋನಿಯಾ ವಿರುದ್ಧ ಯಾವುದೇ ಬಗೆಯ ಸೇನಾ ದಾಳಿ ನಡೆದರೆ ನ್ಯಾಟೋದ ಮಿಕ್ಕೆಲ್ಲ ರಾಷ್ಟ್ರಗಳೂ ಅದರ ಸಹಾಯಕ್ಕೆ ಧಾವಿಸುತ್ತವೆ. ಆದರೆ ಅಂತರಜಾಲದ ಮೂಲಕ ಯುದ್ಧಸಾರಿದರೆ?

ಈ ಯೋಚನೆಯಿಂದ ಹುಟ್ಟಿಕೊಂಡದ್ದೇ  ಸೈಬರ್ ಸಮರದ ಪರಿಕಲ್ಪನೆ - ಶತ್ರುರಾಷ್ಟ್ರದ ಗಣಕವ್ಯವಸ್ಥೆಯನ್ನು ಹಾಳುಮಾಡಿ ಅಲ್ಲಿನ ಜನರಿಗೆ ತೊಂದರೆಕೊಡುವ ಹೊಸಬಗೆಯ ಭಯೋತ್ಪಾದನೆ.

ತೀರಾ ಈಚೆಗೆ, ೨೦೦೯ರ  ಜುಲೈ ತಿಂಗಳಲ್ಲೂ ಇಂತಹ ದಾಳಿಗಳು ನಡೆದ ಬಗ್ಗೆ ವರದಿಯಾಗಿದೆ. ಆ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಅನೇಕ ಸರಕಾರಿ ಹಾಗೂ ವಾಣಿಜ್ಯ ಜಾಲತಾಣಗಳು ತೊಂದರೆಗೀಡಾಗಿದ್ದವು. ಇದ್ದಕ್ಕಿದ್ದಂತೆ ಮಿತಿಮೀರಿ ಹೆಚ್ಚಿದ ಮಾಹಿತಿಯ ಒಳಹರಿವು ಈ ತಾಣಗಳನ್ನು ಹೆಚ್ಚೂಕಡಿಮೆ ನಿಷ್ಕ್ರಿಯಗೊಳಿಸಿಬಿಟ್ಟಿದ್ದವು. ಇರಾನ್ ಹಾಗೂ ಜಾರ್ಜಿಯಾದ ಗಣಕವ್ಯವಸ್ಥೆಗಳ ಮೇಲೂ ಈ ಬಗೆಯ ದಾಳಿಗಳು ನಡೆದಿವೆ.

* * *

ಕಳೆದ ದಶಕದಲ್ಲಿ  ಅಂತರಜಾಲದ ಬಳಕೆ ತೀವ್ರವಾಗಿ ಹೆಚ್ಚಿದಂತೆ  ಅಂತರಜಾಲ ಬಳಸಿ ಇತರರಿಗೆ ತೊಂದರೆಯುಂಟುಮಾಡುವ ಉದಾಹರಣೆಗಳೂ ಹೆಚ್ಚುತ್ತಿವೆ. ಬಳಕೆದಾರರನ್ನು  ವಂಚಿಸಿ ಹಣ ಸಂಪಾದಿಸುವ ಟೋಪೀವಾಲರಿಂದ ಹಿಡಿದು ಶತ್ರುರಾಷ್ಟ್ರಗಳ ರಹಸ್ಯಮಾಹಿತಿ ಕದಿಯಲು ಪ್ರಯತ್ನಿಸುವ ಗೂಢಚಾರರವರೆಗೆ ಎಲ್ಲರೂ ಅಂತರಜಾಲವನ್ನು ತಮ್ಮ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಸೈಬರ್ ಸಮರದ ಗುಮ್ಮ ನಿಜಕ್ಕೂ ಗಂಡಾಂತರಕಾರಿಯಾಗಿ ಬೆಳೆಯುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಈವರೆಗೆ ದಾಖಲಾಗಿರುವ  ಸೈಬರ್ ಸಮರಗಳಲ್ಲಿ ಹೆಚ್ಚಾಗಿ ಬಳಕೆಯಾಗಿರುವುದು ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿಗಳು.

ಪ್ರಸಿದ್ಧ ಜಾಲತಾಣಗಳಿಗೆ ಅಸಂಖ್ಯಾತ ಕೃತಕ ಗ್ರಾಹಕರನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಡಿಡಿಒಎಸ್ ದಾಳಿ ಎಂದು ಕರೆಯುತ್ತಾರೆ. ಇಂತಹ ದಾಳಿಗೆ ಈಡಾಗುವ ತಾಣದ ಸರ್ವರ್‌ಗೆ ಇದ್ದಕ್ಕಿದ್ದಂತೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಆ ಜಾಲತಾಣದ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ಜಾಲತಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಈ ದಾಳಿಗಳಲ್ಲಿ ಸ್ಪೈವೇರ್‌ಗಳು  ಹಾಗೂ ಬಾಟ್‌ನೆಟ್‌ಗಳ ಬಳಕೆ ಸಾಮಾನ್ಯ.

ಸ್ಪೈವೇರ್ ಅಥವಾ ಗೂಢಚಾರಿ ತಂತ್ರಾಂಶಗಳು ಸಾಮಾನ್ಯವಾಗಿ ಉಪಯುಕ್ತ ತಂತ್ರಾಂಶಗಳ  ಸೋಗಿನಲ್ಲಿ ನಿಮ್ಮ ಗಣಕವನ್ನು ಪ್ರವೇಶಿಸುತ್ತವೆ. ನಿಮ್ಮ ಗಣಕವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಈ ತಂತ್ರಾಂಶಗಳು ಹ್ಯಾಕರ್‌ಗಳಿಗೆ ನೆರವಾಗುತ್ತವೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುವ ಈ ತಂತ್ರಾಂಶ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುತ್ತದೆ. ಹೀಗೆ ನಿಮ್ಮ ಗಣಕ ಒಂದು ಜಾಂಬಿ ಗಣಕ ಅಥವಾ ಬಾಟ್ ಆಗಿ ಬದಲಾಗುತ್ತದೆ (ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ). ಪ್ರಪಂಚದಾದ್ಯಂತ ಇರುವ ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿದ ಬಾಟ್‌ನೆಟ್ಗಳೆಂಬ ಜಾಲಗಳೂ ಸಿದ್ಧವಾಗುತ್ತವೆ.

ಡಿಡಿಒಎಸ್ ದಾಳಿಗೆ ತುತ್ತಾಗುವ ತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರುವುದು ಇವೇ ಬಾಟ್‌ಗಳಿಂದ. ಈ ಗಣಕಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ.

ಈ ಮೊದಲು ಹೇಳಿದ  ಉದಾಹರಣೆಗಳಲ್ಲಿ ಆಗಿರುವುದೂ ಅದೇ. ತನ್ನ ಗಣಕ ವ್ಯವಸ್ಥೆಗಳನ್ನು ಹಾಳುಗೆಡವಲು ಪ್ರಯತ್ನಿಸಿದ್ದು ರಷ್ಯಾ ಎಂದು ಎಸ್ಟೋನಿಯಾ ಹೇಳಿದರೆ ನನಗೇನೂ ಗೊತ್ತಿಲ್ಲ ಎಂದು ರಷ್ಯಾ ಹೇಳುತ್ತಿದೆ. ಅಮೆರಿಕಾದ ತಾಣಗಳಿಗೆ ತೊಂದರೆ ಕೊಟ್ಟಿದ್ದು ಯಾರು ಎಂಬ ಪ್ರಶ್ನೆ ಇನ್ನೂ ಬಗೆಹರಿದಿಲ್ಲ. ಕೆಲ ರಾಷ್ಟ್ರಗಳ ಸೇನೆಯಲ್ಲಿ ಇಂತಹ ದಾಳಿಗಳಿಗಾಗಿಯೇ ವಿಶೇಷ ತರಬೇತಿ ಪಡೆದ ತಂತ್ರಜ್ಞರಿದ್ದಾರಂತೆ ಎಂಬುದು ಇನ್ನೂ ಗಾಳಿಸುದ್ದಿಯಾಗಿಯೇ ಇದೆ.

* * *

ಸೈಬರ್ ಸಮರತಂತ್ರ ಇನ್ನಷ್ಟು ದೊಡ್ಡ ಸಮಸ್ಯೆಯಾಗಿ ಬೆಳೆಯುವ  ಮೊದಲೇ ಅದನ್ನು ತಡೆಯುವ ನಿಟ್ಟಿನಲ್ಲಿ  ಸಾಕಷ್ಟು ಪ್ರಯತ್ನಗಳು ಸಾಗಿವೆ. ಕೋಆಪರೇಟಿವ್ ಸೈಬರ್ ಡಿಫೆನ್ಸ್ ಸೆಂಟರ್ ಆಫ್ ಎಕ್ಸೆಲೆನ್ಸ್ ಎಂಬ ಕೇಂದ್ರವನ್ನು ಸ್ಥಾಪಿಸಿರುವ ಎಸ್ಟೋನಿಯಾ ಈ ಪ್ರಯತ್ನಗಳ ಮುಂಚೂಣಿಯಲ್ಲಿದೆ. ಸೈಬರ್ ಸಮರ ತಡೆಗೆ ತಂತ್ರಜ್ಞಾನ ರೂಪಿಸುವುದರಿಂದ ಪ್ರಾರಂಭಿಸಿ ಅಂತರರಾಷ್ಟ್ರೀಯ ಸಹಕಾರ ಒಟ್ಟುಗೂಡಿಸುವವರೆಗೆ ಈ ಕೇಂದ್ರ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಅಮೆರಿಕಾ ಹಾಗೂ ದಕ್ಷಿಣ ಕೊರಿಯಾಗಳೂ ಈ ನಿಟ್ಟಿನಲ್ಲಿ ಕೆಲಸಮಾಡಲು ಪ್ರಾರಂಭಿಸಿವೆ. ಸೈಬರ್ ಭಯೋತ್ಪಾದಕರ ವಿರುದ್ಧದ ಈ ಹೋರಾಟದಲ್ಲಿ ಅವರೆಲ್ಲರಿಗೂ ಜಯವಾಗಲಿ ಎಂದು ಇಡೀ ಪ್ರಪಂಚ ಹಾರೈಸುತ್ತಿದೆ.

ನವೆಂಬರ್ ೧೧, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಮುಂದೆ ಓದಿ...

Monday, October 26, 2009

ಹೆಚ್ಚುತ್ತಿದೆ ಬಾಹ್ಯಾಕಾಶದ ಟ್ರಾಫಿಕ್ಕು!

ಟಿ ಜಿ ಶ್ರೀನಿಧಿ

ವಾಹನಗಳು ಒಂದಕ್ಕೊಂದು ಡಿಕ್ಕಿಹೊಡೆದು ಅಪಘಾತಕ್ಕೀಡಾಗುವುದು ಬಹಳ  ಸಾಮಾನ್ಯವಾಗಿ ನಡೆಯುವ ಘಟನೆ. ಎತ್ತಿನಗಾಡಿಗೆ ಸೈಕಲ್ ಡಿಕ್ಕಿ ಎನ್ನುವುದರಿಂದ ಹಿಡಿದು ಎರಡು ರೈಲುಗಳ ಡಿಕ್ಕಿ ಎನ್ನುವುದರವರೆಗೆ ಅದೆಷ್ಟೋ ಅಪಘಾತಗಳ ಸುದ್ದಿ ಕೇಳಿಬರುತ್ತಲೇ ಇರುತ್ತದೆ.

ಇವೆಲ್ಲವುದಕ್ಕಿಂತ ವಿಭಿನ್ನವಾದ  ಸುದ್ದಿ ಕೇಳಿಬಂದದ್ದು ಕೆಲದಿನಗಳ ಹಿಂದೆ. ಬಾಹ್ಯಾಕಾಶದಲ್ಲಿ ರೌಂಡು ಹೊಡೆಯುತ್ತಿದ್ದ ಎರಡು ಮಾನವನಿರ್ಮಿತ ಉಪಗ್ರಹಗಳು ಮುಖಾಮುಖಿ ಡಿಕ್ಕಿಹೊಡೆದಿವೆ ಎಂಬುದೇ ಆ ಸುದ್ದಿ.

ಅಂತರಿಕ್ಷದ ಇಂತಹ  ಮೊದಲ ಅಪಘಾತ ಎಂದು ಗುರುತಿಸಲಾದ ಈ ಘಟನೆಯಲ್ಲಿ  ಅಮೆರಿಕಾ ಹಾಗೂ ರಷ್ಯಾದ ಉಪಗ್ರಹಗಳು ಭೂಮಿಯಿಂದ ಸುಮಾರು ೭೮೦ ಕಿಲೋಮೀಟರುಗಳ ಎತ್ತರದಲ್ಲಿ, ಸೈಬೀರಿಯಾ ದೇಶದ ಮೇಲೆ ಒಂದಕ್ಕೊಂದು ಡಿಕ್ಕಿಹೊಡೆದಿದ್ದವು.

ಈಗಾಗಲೇ ನಿಷ್ಕ್ರಿಯವಾಗಿತ್ತು  ಎನ್ನಲಾಗಿರುವ ಹೆಚ್ಚೂಕಡಿಮೆ ಸಾವಿರ  ಕೆಜಿ ತೂಕದ ರಷ್ಯಾದ ಉಪಗ್ರಹ ೧೯೯೩ರಲ್ಲಿ ಉಡಾವಣೆಯಾಗಿತ್ತಂತೆ. ಅಪಘಾತದಲ್ಲಿ ಭಾಗಿಯಾಗಿರುವ ೫೬೦ಕಿಲೋ ತೂಕದ ಇನ್ನೊಂದು ಉಪಗ್ರಹ ಅಮೆರಿಕಾದ ಇರಿಡಿಯಂ ಸಂಸ್ಥೆಗೆ ಸೇರಿದ್ದು ೧೯೯೭ರಲ್ಲಿ ಉಡಾವಣೆಯಾಗಿತ್ತು. ಇದು ಇರಿಡಿಯಂ ಸಂಸ್ಥೆ ಒದಗಿಸುವ ಉಪಗ್ರಹ ದೂರವಾಣಿ ಸೇವೆಗಾಗಿ ಬಳಕೆಯಾಗುತ್ತಿದ್ದ ಅನೇಕ ಉಪಗ್ರಹಗಳಲ್ಲಿ ಒಂದು.

ಈ ಘಟನೆಗೆ ಇಷ್ಟೊಂದು  ಮಹತ್ವ ಕೊಡುತ್ತಿರುವುದು ಯಾಕೆ ಎಂದು  ನೀವು ಕೇಳಬಹುದು. ನೂರಾರು ಉಪಗ್ರಹಗಳು ಅಂತರಿಕ್ಷ ಸೇರುತ್ತಿರುತ್ತವೆ. ಹೊಸ ಉಪಗ್ರಹಗಳು ಸೇವೆಗೆ ಸಿದ್ಧವಾಗುತ್ತಿದ್ದಂತೆ ಹಳೆಯ ಉಪಗ್ರಹಗಳ ರಿಟೈರ್‌ಮೆಂಟೂ ಆಗುತ್ತಿರುತ್ತದೆ. ಕೆಲವೊಂದು ಉಪಗ್ರಹಗಳು ಆಕಸ್ಮಿಕವಾಗಿ ಭೂಮಿಯತ್ತ ಬಂದು ಸುಟ್ಟುಹೋಗುವುದೂ ಉಂಟು. ಇನ್ನುಕೆಲವು ಉಪಗ್ರಹಗಳನ್ನು ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಗುತ್ತದೆ.

ಶತ್ರುರಾಷ್ಟ್ರಗಳ ಉಪಗ್ರಹವನ್ನು ಹೊಡೆದುರುಳಿಸುವ ದಿನ ಕೂಡ ದೂರವೇನೂ ಇಲ್ಲ. ಅಂತರಿಕ್ಷದಲ್ಲಿ ಸಂಚರಿಸುವ ಉಪಗ್ರಹಗಳ ಮೇಲೆ ಭೂಮಿಯಿಂದಲೇ ದಾಳಿಮಾಡುವ ಶಕ್ತಿ ಸಂಪಾದಿಸಿಕೊಳ್ಳಲು ಪೈಪೋಟಿ ಈಗಾಗಲೇ ಶುರುವಾಗಿದೆ. ಇದಕ್ಕೆ ಪೂರ್ವಸೂಚನೆ ಎನ್ನುವಂತೆ ೨೦೦೭ರಲ್ಲಿ ಚೀನಾ ತನ್ನದೇ ಉಪಗ್ರಹವೊಂದನ್ನು ಕ್ಷಿಪಣಿ ಹಾರಿಸಿ ನಾಶಪಡಿಸಿತ್ತು. ತಾನೇನು ಕಡಿಮೆ ಎನ್ನುವಂತೆ ಅಮೆರಿಕಾದ ನೌಕಾಸೇನೆ ಕೂಡ ೨೦೦೮ರಲ್ಲಿ ಕ್ಷಿಪಣಿ ಹಾರಿಸಿ ತನ್ನದೊಂದು ಉಪಗ್ರಹವನ್ನು ಸಿಡಿಸಿಹಾಕಿತು.

ಆದರೆ, ಈ ಬಾರಿಯ ಉಪಗ್ರಹಗಳ ಡಿಕ್ಕಿ ಒಂದು ಆಕ್ಸಿಡೆಂಟು, ಆಕಸ್ಮಿಕವಾಗಿ ಘಟಿಸಿದ್ದು.

ಈ ಉಪಗ್ರಹಗಳು ಅಪಾರ  ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿರುವುದರಿಂದ  ಅವೆರಡೂ ನುಚ್ಚುನೂರಾಗಿ ಧೂಳು ಹಾಗೂ ಚೂರುಗಳ ದೊಡ್ಡದೊಂದು ಮೋಡವೇ ಸೃಷ್ಟಿಯಾಯಿತು. ಈ ಚೂರುಗಳು ಭೂಮಿಯ ವಾತಾವರಣ ಪ್ರವೇಶಿಸಿ ಉರಿದು ಬೂದಿಯಾದರೆ ಪರವಾಗಿಲ್ಲ, ಹಾಗಾಗದೆ ಅವೇನಾದರೂ ಅಂತರಿಕ್ಷದಲ್ಲೇ ಉಳಿದುಕೊಂಡರೆ ಇತರ ಉಪಗ್ರಹಗಳು ಹಾಗೂ ಅಂತರಿಕ್ಷಯಾನಗಳಿಗೆ ತೊಂದರೆಯಾಗುವ ಸಾಧ್ಯತೆಯಾಗುತ್ತದಲ್ಲ ಎಂಬ ಆತಂಕವೂ ಶುರುವಾಯಿತು.

ಇದೇನಪ್ಪ ಹೀಗಾಯಿತಲ್ಲ  ಎಂದು ತಲೆಕೆಡಿಸಿಕೊಳ್ಳುವಷ್ಟರಲ್ಲೇ ವಿಜ್ಞಾನಿಗಳು ಈ ಅಪಘಾತದ ಕಾರಣವನ್ನೂ ಹೇಳಿಬಿಟ್ಟರು - ಅಂತರಿಕ್ಷದಲ್ಲಿ ಟ್ರಾಫಿಕ್ ಜಾಮ್ ಶುರುವಾಗಿದೆ!

* * *

೧೯ನೇ ಶತಮಾನದ  ಅಂತ್ಯದಲ್ಲಿ  'ದಿ ಅಟ್ಲಾಂಟಿಕ್ ಮಂಥ್ಲಿ' ಎಂಬ  ಹೆಸರಿನ ಪತ್ರಿಕೆ ಅಮೆರಿಕಾದಲ್ಲಿ ಪ್ರಕಟವಾಗುತ್ತಿತ್ತು. 'ದ ಬ್ರಿಕ್ ಮೂನ್' ಎನ್ನುವುದು ೧೮೬೯ನೇ ಇಸವಿಯಲ್ಲಿ ಅದರಲ್ಲಿ ಪ್ರಕಟವಾದ ಧಾರಾವಾಹಿ. ಇಟ್ಟಿಗೆಯಿಂದ ನಿರ್ಮಿಸಿದ ೨೦೦ ಅಡಿ ಸುತ್ತಳತೆಯ ಗೋಲವೊಂದನ್ನು ಅಂತರಿಕ್ಷಕ್ಕೆ ಹಾರಿಬಿಡುವ ಕತೆ ಅದು.

ಹೀಗೆ ಹುಟ್ಟಿಕೊಂಡದ್ದು ಕೃತಕ ಉಪಗ್ರಹದ ಕಲ್ಪನೆ.    

೨೦ನೇ ಶತಮಾನದ  ಪ್ರಾರಂಭದ ಹೊತ್ತಿಗೆ ಉಪಗ್ರಹದ ಕಲ್ಪನೆಯನ್ನು ನನಸುಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು ಆಲೋಚಿಸಲು ಪ್ರಾರಂಭಿಸಿದ್ದರು. ವಿಜ್ಞಾನಿಗಳ ಜೊತೆಗೆ ಆರ್ಥರ್ ಕ್ಲಾರ್ಕ್‌ನಂತಹ ವೈಜ್ಞಾನಿಕ ಕತೆಗಾರರು ಕೂಡ ಉಪಗ್ರಹಗಳ ಬಗ್ಗೆ ಹೊಸ ಕನಸುಗಳನ್ನು ಹುಟ್ಟುಹಾಕಿದರು.

೧೯೫೭ರಲ್ಲಿ ಉಡಾವಣೆಯಾದ ರಷ್ಯಾ ನಿರ್ಮಿತ ಸ್ಪುಟ್ನಿಕ್-೧, ಮೊತ್ತಮೊದಲ ಮಾನವನಿರ್ಮಿತ ಉಪಗ್ರಹ. ಅದೇ ವರ್ಷ ಉಡಾವಣೆಯಾದ ಸ್ಪುಟ್ನಿಕ್-೨ ಉಪಗ್ರಹದಲ್ಲಿ ಲೈಕಾ ಎಂಬ ನಾಯಿ ಪ್ರಯಾಣಿಸಿತ್ತು. ಭೂಮಿಯಿಂದ ಅಂತರಿಕ್ಷಕ್ಕೆ ಹಾರಿದ ಮೊತ್ತಮೊದಲ ಜೀವಿ ಇದೇ ಲೈಕಾ.

ಮುಂದಿನ ವರ್ಷ, ಅಂದರೆ ೧೯೫೮ರಲ್ಲಿ ಅಮೆರಿಕಾ ತನ್ನ ಮೊದಲ ಉಪಗ್ರಹ ಎಕ್ಸ್‌ಪ್ಲೋರರ್-೧ ಅನ್ನು ಉಡಾಯಿಸಿತು. ಅದೇ ವರ್ಷ ಉಡಾವಣೆಯಾದ ವ್ಯಾನ್‌ಗಾರ್ಡ್-೧ ಎಂಬ ಉಪಗ್ರಹ ಈಗಲೂ ಭೂಮಿಯ ಸುತ್ತ ಸುತ್ತುತ್ತಿದೆ!

ಮುಂದಿನ ವರ್ಷಗಳಲ್ಲಿ ಜಗತ್ತಿನ ಇತರ ರಾಷ್ಟ್ರಗಳೂ ತಮ್ಮ ಉಪಗ್ರಹಗಳನ್ನು ಉಡಾಯಿಸಿದವು. ೧೯೬೨ರಲ್ಲಿ ಕೆನಡಾ, ೬೪ರಲ್ಲಿ ಇಟಲಿ, ೬೫ರಲ್ಲಿ ಫ್ರಾನ್ಸ್, ೬೭ರಲ್ಲಿ ಆಸ್ಟ್ರೇಲಿಯಾ, ೭೦ರಲ್ಲಿ ಜಪಾನ್ ಹಾಗೂ ಚೀನಾ, ೭೧ರಲ್ಲಿ ಬ್ರಿಟನ್, ೭೪ರಲ್ಲಿ ಪಶ್ಚಿಮ ಜರ್ಮನಿ ತಮ್ಮ ಮೊತ್ತಮೊದಲ ಉಪಗ್ರಹಗಳನ್ನು ಉಡಾಯಿಸಿದವು. ೧೯೭೫ರಲ್ಲಿ ರಷ್ಯಾದಿಂದ ಉಡಾವಣೆಯಾದ ಆರ್ಯಭಟ ಭಾರತದ ಮೊದಲ ಉಪಗ್ರಹ. ಇದಾದ ಐದೇ ವರ್ಷಗಳಲ್ಲಿ (೧೯೮೦) ರೋಹಿಣಿ-೧ ಉಪಗ್ರಹ ಭಾರತದಿಂದಲೇ ಉಡಾವಣೆಯಾಯಿತು.

ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಅಂತರಿಕ್ಷದಲ್ಲಿ ಮಾನವನ ಚಟುವಟಿಕೆಯೂ  ಹೆಚ್ಚುತ್ತಲೇ ಹೋಯಿತು. ಭೂಮಿಯ ಸುತ್ತ ಸುತ್ತುವ ಉಪಗ್ರಹಗಳಷ್ಟೆ ಅಲ್ಲದೆ ಚಂದ್ರ, ಸೂರ್ಯ ಹಾಗೂ ಸೌರಮಂಡಲದ ಇನ್ನಿತರ ಗ್ರಹಗಳತ್ತಲೂ ಮಾನವನಿರ್ಮಿತ ಗಗನನೌಕೆಗಳು ಹೊರಟವು. ಅಂತರಿಕ್ಷದಲ್ಲಿ ನಮ್ಮ ಕಣ್ಣಿನಂತೆ ಇರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಕೂಡ ನಿರ್ಮಾಣವಾಯಿತು.

೧೯೫೭ರ ಮೊದಲ ಉಪಗ್ರಹದಿಂದ ಇಲ್ಲಿಯವರೆಗೆ ಉಡಾವಣೆಯಾಗಿರುವ ಉಪಗ್ರಹಗಳ ಸಂಖ್ಯೆ ಸುಮಾರು ಆರು ಸಾವಿರ ತಲುಪಿರುವುದು ಬಾಹ್ಯಾಕಾಶದ ಟ್ರಾಫಿಕ್ಕನ್ನು ಮಿತಿಮೀರಿ ಹೆಚ್ಚಿಸಿದೆ; ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಹೆಚ್ಚಾಗಲಿವೆಯೇ ಎಂಬ ಸಂಶಯವನ್ನೂ ಹುಟ್ಟುಹಾಕಿದೆ. ತಮಾಷೆಯ ವಿಷಯವೆಂದರೆ ಇಷ್ಟು ದೊಡ್ಡ ಸಂಖ್ಯೆಯ ಹತ್ತನೆಯ ಒಂದರಷ್ಟು ಉಪಗ್ರಹಗಳು ಮಾತ್ರ ಕೆಲಸಮಾಡುವ ಸ್ಥಿತಿಯಲ್ಲಿವೆ!

* * *

ಈ ಸಂಶಯ ವಿನಾಕಾರಣವೇನೂ ಹುಟ್ಟಿಕೊಂಡಿಲ್ಲ. ಬಾಹ್ಯಾಕಾಶದಲ್ಲಿ ಹೆಚ್ಚುತ್ತಿರುವ ಮಾನವನ ಚಟುವಟಿಕೆ ಭೂಮಿಯ ಹೊರವಲಯದಲ್ಲಿ ಅಪಾರ ಪ್ರಮಾಣದ ಕಸದ ರಾಶಿಯನ್ನೇ ಸೃಷ್ಟಿಸಿದೆ.

ಕಸ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಊರುಗಳ  ಆಚೆ ರಾಶಿಬೀಳುವ ಪ್ಲಾಸ್ಟಿಕ್ ಮಿಶ್ರಿತ  ತ್ಯಾಜ್ಯ, ನದಿಗಳಿಗೆ ಸೇರಿ ಹರಿಯುವ ಕೆಟ್ಟವಾಸನೆಯ ಗಲೀಜು. ಆದರೆ ಅಂತರಿಕ್ಷದಲ್ಲಿ ಕಸ ಎಂಬ ಪದದ ಅರ್ಥವೇ ಬೇರೆ.

ಕಳೆದ ಐದು ದಶಕಗಳಲ್ಲಿ  ಉಡಾಯಿಸಲಾಗಿರುವ ಆರು ಸಾವಿರಕ್ಕೂ ಹೆಚ್ಚು  ಉಪಗ್ರಹಗಳಲ್ಲಿ ಶೇಕಡಾ ಎಂಬತ್ತೈದರಷ್ಟು  ಉಪಗ್ರಹಗಳು ಈಗ ನಿಷ್ಕ್ರಿಯವಾಗಿದ್ದು ಕಸದ  ರೂಪ ತಾಳಿವೆ. ಇದರ ಜೊತೆಗೆ ಉಪಗ್ರಹ ಉಡಾವಣೆಯ ಸಂದರ್ಭದಲ್ಲಿ ಬಳಕೆಯಾಗಿ ನಂತರ ಸಿಡಿದುಹೋಗುವ ರಾಕೆಟ್ ಚೂರುಗಳು, ಉದ್ದೇಶಪೂರ್ವಕವಾಗಿಯೋ ಆಕಸ್ಮಿಕವಾಗಿಯೋ ಸ್ಫೋಟಿಸಲಾದ ಉಪಗ್ರಹಗಳು, ಇನ್ನಿತರ ಚಿಕ್ಕಪುಟ್ಟ ಉಪಕರಣಗಳು - ಎಲ್ಲ ಸೇರಿ ಲಕ್ಷಾಂತರ ಸಂಖ್ಯೆಯ ಕಸದ ತುಣುಕುಗಳು ಇದೀಗ ಭೂಮಿಯ ಸುತ್ತ ಸುತ್ತುತ್ತಿವೆ.

ಈ ಕಸದ ಚೂರುಗಳು ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ಅಪಾರ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿರುತ್ತದೆ. ಇಷ್ಟು ಭಾರೀ ವೇಗದಲ್ಲಿ ಭೂಮಿಯ ಸುತ್ತ ಸುತ್ತುವ ಕಸದ ತುಣುಕುಗಳು ತಮ್ಮತಮ್ಮಲ್ಲೇ ಡಿಕ್ಕಿ ಹೊಡೆದುಕೊಂಡು ಭೂಮಿಯ ಸುತ್ತ ಕಸದ ಪದರವನ್ನೇ ನಿರ್ಮಿಸಿಬಿಡಬಲ್ಲವು. ಇಂತಹ ಸಣ್ಣದೊಂದು ಚೂರು ಯಾವುದಾದರೂ ಉಪಗ್ರಹಕ್ಕೋ ಗಗನನೌಕೆಗೋ ಬಡಿದರೆ ಆಗಬಹುದಾದ ಅಪಾಯ ಬಹಳ ದೊಡ್ಡ ಪ್ರಮಾಣದ್ದು. ಸಣ್ಣಪುಟ್ಟ ಲೋಹದ ಚೂರುಗಳು ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗದಲ್ಲಿ ಸಾಗುವಾಗ ಗಗನಯಾತ್ರಿಯ ಉಡುಗೆಯನ್ನೇ ತೂರಿಕೊಂಡು ಹೋಗಬಹುದು; ಹಳೆಯ ರಾಕೆಟ್‌ನ ತುಣುಕು ಉಪಗ್ರಹಕ್ಕೆ ಬಡಿದು ಅವುಗಳನ್ನು ಹಾಳುಗೆಡವಬಹುದು.

ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಮೇಲೂ ಅಪಾಯದ ನೆರಳು ಸುಳಿದಾಡುತ್ತಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ಇತ್ತೀಚೆಗಷ್ಟೆ ನಾಲ್ಕಾರು ಬಾರಿ ಕಸದ ತುಣುಕುಗಳ ಮಾರಣಾಂತಿಕ ಆಘಾತವನ್ನು ಕೂದಲೆಳೆಯಷ್ಟರಲ್ಲಿ ತಪ್ಪಿಸಿಕೊಂಡಿದ್ದಾರೆ.

ಬಾಹ್ಯಾಕಾಶದ ಕಸ ಇದೇ ಪ್ರಮಾಣದಲ್ಲಿ ಹೆಚ್ಚಿದರೆ ಭೂಮಿಯಿಂದಾಚೆ  ಹೋಗಿ ನೆಲೆಸುವ ನಮ್ಮ ಕನಸು ಕನಸಾಗಿಯೇ ಉಳಿದುಬಿಡಬಹುದು ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ವಿಜ್ಞಾನಿಗಳು ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳನ್ನು ಕೈಗೊಂಡಿದ್ದಾರೆ, ಅತ್ಯಾಧುನಿಕ ದೂರದರ್ಶಕಗಳ ಮೂಲಕ ಕಸದ ಪ್ರಮಾಣದ ಮೇಲೆ ತೀವ್ರ ನಿಗಾವಹಿಸಿದ್ದಾರೆ. ಅಲ್ಲಿರುವ ಅಪಾರ ಪ್ರಮಾಣದ ಕಸವನ್ನು ಹಿಡಿದು ಭೂಮಿಗೆ ಮರಳಿ ತರುವತ್ತಲೂ ಅವರ ಪ್ರಯತ್ನಗಳು ಸಾಗಿವೆ.

ದೊಡ್ಡ ಉಪಗ್ರಹಗಳ  ಬದಲು ಸಣ್ಣಸಣ್ಣ ಉಪಗ್ರಹಗಳನ್ನು  ಉಡಾಯಿಸುವುದು ಇನ್ನೊಂದು ಪ್ಲಾನು. ಅವುಗಳ  ಸೇವಾವಧಿ ಮುಗಿದ ಕೂಡಲೇ ಅವು  ಮರಳಿ ಭೂಮಿಯ ವಾತಾವರಣ ಪ್ರವೇಶಿಸಿ  ಸುಟ್ಟುಹೋಗುವಂತೆ ಮಾಡಬಹುದು ಎಂದು  ವಿಜ್ಞಾನಿಗಳು ಯೋಚಿಸುತ್ತಿದ್ದಾರೆ.

ಅವರ ಈ ಎಲ್ಲ ಪ್ರಯತ್ನಗಳು ಬಾಹ್ಯಾಕಾಶದ ಕಸದ ಪ್ರಮಾಣವನ್ನು ಆದಷ್ಟು ಬೇಗ ಕಡಿಮೆಮಾಡಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಯಾದರೂ ವಾರಾಂತ್ಯದ ರಜೆಯಲ್ಲಿ ಅಂತರಿಕ್ಷದಲ್ಲಿ ವಿಹರಿಸುವ ಕನಸು ಕಾಣುವುದು ಸಾಧ್ಯವಾಗಬಹುದೇನೋ.

'ವಿಜ್ಞಾನ ಲೋಕ' ನವೆಂಬರ್ ೨೦೦೯ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ

ಮುಂದೆ ಓದಿ...

Wednesday, September 2, 2009

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಎರಡನೇ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಇದೇ ತಿಂಗಳಿನ ೨೩ ಹಾಗೂ ೨೪ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ ೨೩ರ ಬೆಳಿಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿಗಳು ಸಮ್ಮೇಳನ ಉದ್ಘಾಟಿಸಲಿದ್ದಾರೆ.

'ಮನುಕುಲದ ಒಳಿತಿಗಾಗಿ ವಿಜ್ಞಾನ-ತಂತ್ರಜ್ಞಾನ' ಈ ಸಮ್ಮೇಳನದ ಪ್ರಮುಖ ವಿಷಯ. ಎರಡು ದಿನಗಳ ಅವಧಿಯಲ್ಲಿ ಈ ವಿಷಯದ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಅನೇಕ ವಿಚಾರಸಂಕಿರಣಗಳು ನಡೆಯಲಿವೆ. ಪ್ರೊ ಯು ಆರ್ ರಾವ್, ಪ್ರೊ ಪಿ ಬಲರಾಂ, ಪ್ರೊ ಎಂ ಐ ಸವದತ್ತಿ, ಪ್ರೊ ರೊದ್ದಂ ನರಸಿಂಹ, ಡಾ ವಿ ಪ್ರಕಾಶ್, ಡಾ ಪಿ ಎಸ್ ಶಂಕರ್, ಶ್ರೀ ನಾಗೇಶ ಹೆಗಡೆ - ಇವರು ಭಾಷಣಕಾರರಲ್ಲಿ ಪ್ರಮುಖರು.

ಸಮ್ಮೇಳನದ ಸಂದರ್ಭದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ 'ವಿಜ್ಞಾನ ಲೋಕ' ಪತ್ರಿಕೆಯ ವಿಶೇಷ ಸಂಚಿಕೆಯನ್ನೂ ಹೊರತರಲಾಗುವುದು.

ಸಮ್ಮೇಳನದಲ್ಲಿ ಭಾಗವಹಿಸಲು ಯಾವುದೇ ನೋಂದಣಿ ಶುಲ್ಕ ಇಲ್ಲ. ಹೆಚ್ಚಿನ ವಿವರಗಳಿಗೆ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯವರನ್ನು gugksta09@rediffmail.com ವಿಳಾಸದಲ್ಲಿ ಸಂಪರ್ಕಿಸಬಹುದು.

ಮುಂದೆ ಓದಿ...

Wednesday, August 19, 2009

'ಭುವನ'ರೂಪದರ್ಶನ!

ಟಿ ಜಿ ಶ್ರೀನಿಧಿ

೧೯೫೦ರ ದಶಕದಲ್ಲಿ ಉಡಾವಣೆಯಾದ ಮೊತ್ತಮೊದಲ ಉಪಗ್ರಹ ’ಸ್ಪುಟ್ನಿಕ್’ನಿಂದ ಪ್ರಾರಂಭಿಸಿ ಇಲ್ಲಿಯವರೆಗೆ ಸಾವಿರಗಟ್ಟಲೆ ಉಪಗ್ರಹಗಳು ಬಾಹ್ಯಾಕಾಶಕ್ಕೆ ನೆಗೆದಿವೆ; ಟೀವಿ ಚಾನೆಲ್ ಪ್ರಸಾರದಿಂದ ಹಿಡಿದು ಗೂಢಚಾರಿಕೆಯವರೆಗೆ ವೈವಿಧ್ಯಮಯ ಉದ್ದೇಶಗಳಿಗಾಗಿ ದುಡಿದಿವೆ, ದುಡಿಯುತ್ತಿವೆ.

ಈ ಉಪಗ್ರಹಗಳಲ್ಲಿ ಅನೇಕವು ಭೂಮಿಯ ಮೇಲೆ ಏನು ನಡೆಯುತ್ತಿದೆ ಎನ್ನುವತ್ತ ಸದಾ ಒಂದು ಕಣ್ಣಿಟ್ಟಿರುತ್ತವೆ. ಸದಾ ಒಂದಿಲ್ಲೊಂದು ಚಟುವಟಿಕೆಯ ಕೇಂದ್ರವಾಗಿರುವ ನಮ್ಮ ಗ್ರಹದ ಚಿತ್ರಗಳನ್ನು ತೆಗೆದು ನಮಗೆ ಕಳುಹಿಸುತ್ತಿರುತ್ತವೆ.

ಇಂತಹ ಚಿತ್ರಗಳು ನೋಡಲು ಬಹು ರೋಚಕವಾಗಿರುತ್ತವೆ. ಆಸಕ್ತರ ಕುತೂಹಲ ತಣಿಸುವ, ಭೂಗೋಳಶಾಸ್ತ್ರದ ಪಾಠಹೇಳುವ ಈ ಚಿತ್ರಗಳು ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಬಹಳ ಮಹತ್ವ ಹೊಂದಿವೆ. ಜಿಪಿಎಸ್ ಬಳಸಿ ಸಂಚಾರ ನಿರ್ದೇಶನಗಳನ್ನು ಕೊಡುವ ಅನೇಕ ತಂತ್ರಾಂಶಗಳು ಕೂಡ ಭೂಮಿಯ ಸ್ಯಾಟೆಲೈಟ್ ಚಿತ್ರಗಳನ್ನು ಬಳಸುತ್ತವೆ.

ಒಂದೆರಡು ದಶಕಗಳ ಹಿಂದೆ ಇಂತಹ ಚಿತ್ರಗಳು ಜನಸಾಮಾನ್ಯರಿಗೆ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಭೂಮಿಯ ಉಪಗ್ರಹ ಚಿತ್ರಣ ನೀಡುವ ಒಂದೆರಡು ತಂತ್ರಾಂಶಗಳು ತೊಂಬತ್ತರ ದಶಕದಲ್ಲಿ ಹೊರಬಂದವಾದರೂ ಅವು ಅಷ್ಟೇನೂ ಜನಪ್ರಿಯವಾಗಲಿಲ್ಲ.

ಅಂತರಜಾಲ, ವಿಶ್ವವ್ಯಾಪಿ ಜಾಲಗಳು ವ್ಯಾಪಕ ಬಳಕೆಗೆ ಬಂದ ಮೇಲೆ ಈ ಪರಿಸ್ಥಿತಿ ಬಹುಬೇಗ ಬದಲಾಯಿತು. ೨೦೦೪ರಲ್ಲಿ ನಾಸಾ ಹೊರತಂದ ವರ್ಲ್ಡ್ ವಿಂಡ್ ಹಾಗೂ ೨೦೦೫ರಲ್ಲಿ ಗೂಗಲ್ ಪರಿಚಯಿಸಿದ ಗೂಗಲ್ ಅರ್ಥ್ ತಂತ್ರಾಂಶಗಳಿಂದಾಗಿ ನಮ್ಮ ಕಣ್ಣಮುಂದೆಯೇ ವಿಶ್ವರೂಪದರ್ಶನವಾಯಿತು! ಗೂಗಲ್ ಸಹಕಾರದಿಂದ ಸಿದ್ಧವಾದ ವಿಕಿಮ್ಯಾಪಿಯಾ ಯಾವುದೇ ತಂತ್ರಾಂಶ ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆಯೇ ಭೂಮಿಯ ಚಿತ್ರಗಳನ್ನು ನೋಡುವುದನ್ನು ಸಾಧ್ಯವಾಗಿಸಿತು.

ಈ ತಂತ್ರಾಂಶಗಳ ಸಾಲಿಗೆ ಇದೀಗ ’ಭುವನ್’ ಸೇರಿದೆ. ಇದು ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ನಮಗೆ ನೀಡಿರುವ ಕೊಡುಗೆ. ಹೆಸರಾಂತ ವಿಜ್ಞಾನಿ ವಿಕ್ರಂ ಸಾರಾಭಾಯಿಯವರ ತೊಂಬತ್ತನೇ ಜನ್ಮದಿನದಂದು ಭುವನ್ ಲೋಕಾರ್ಪಣೆಯಾದದ್ದು ವಿಶೇಷ.

ಗೂಗಲ್ ಅರ್ಥ್‌ಗೆ ಸಾಟಿಯಾಗಿ ನಿಲ್ಲಬಲ್ಲ ಭುವನ್ ತಂತ್ರಾಂಶವನ್ನು ನಿರ್ಮಿಸಿದವರು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿಯ ತಂತ್ರಜ್ಞರು. ಭಾರತೀಯ ಬಳಕೆದಾರರಿಗೆ ಹೆಚ್ಚು ಆಪ್ತವಾಗುವಂತಹ ವಿನ್ಯಾಸ ಹೊಂದಿರುವ ಭುವನ್ ಮೂಲಕ ಲಭ್ಯವಿರುವ ಚಿತ್ರಗಳೆಲ್ಲವನ್ನೂ ರಿಸೋರ್ಸ್‌ಸ್ಯಾಟ್, ಕಾರ್ಟೋಸ್ಯಾಟ್ ಮುಂತಾದ ನಮ್ಮದೇ ಉಪಗ್ರಹಗಳು ತೆಗೆದಿವೆ.

ರಕ್ಷಣಾ ದೃಷ್ಟಿಯಿಂದ ಸಂರಕ್ಷಿತ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳ ಚಿತ್ರಗಳು ಭುವನ್ ಮೂಲಕ ಲಭ್ಯವಿವೆ. ಗೂಗಲ್ ಅರ್ಥ್‌ನಲ್ಲಿ ಲಭ್ಯವಿರುವ ಚಿತ್ರಗಳಿಗಿಂತ ಹೆಚ್ಚು ಸ್ಪಷ್ಟವಾದ ಚಿತ್ರಗಳು ಭುವನ್‌ನಲ್ಲಿ ಸಿಗಲಿವೆಯಂತೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳ ಮಾಹಿತಿಯ ಬಗ್ಗೆ ಗಮನ ಕೇಂದ್ರೀಕರಿಸಲಿರುವ ಭುವನ್ ನಮ್ಮ ದೇಶದ ಹವಾಮಾನ, ಭೂಮಿಯ ಮೇಲ್ಮೈ ಸ್ವರೂಪ, ನೈಸರ್ಗಿಕ ಪ್ರಕೋಪಗಳು ಮುಂತಾದ ವಿಷಯಗಳ ಕುರಿತು ಅಪಾರ ಮಾಹಿತಿ ಒದಗಿಸುವ ನಿರೀಕ್ಷೆಯಿದೆ.

www.bhuvan.nrsc.gov.in ತಾಣದಲ್ಲಿ ಲಭ್ಯವಿರುವ ’ಭುವನ್’ ಸದ್ಯಕ್ಕೆ ಪರೀಕ್ಷಾರ್ಥ ಆವೃತ್ತಿಯಲ್ಲಿದೆ. ಈ ಜಾಲತಾಣದಲ್ಲಿ ಹೆಸರು, ವಿಳಾಸ ಹಾಗೂ ಬಳಕೆಯ ಉದ್ದೇಶ ದಾಖಲಿಸಿ ನೋಂದಾಯಿಸಿಕೊಂಡ ಯಾರು ಬೇಕಿದ್ದರೂ ಇದನ್ನು ಉಚಿತವಾಗಿ ಬಳಸಬಹುದು.

ಆಗಸ್ಟ್ ೧೯, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಮುಂದೆ ಓದಿ...

Thursday, August 13, 2009

ದೂರದರ್ಶಕ ಕಂಡ ವಿಶ್ವರೂಪ

ಕನ್ನಡದ ಅಗ್ರಗಣ್ಯ ವಿಜ್ಞಾನ ಲೇಖಕರಲ್ಲೊಬ್ಬರಾದ ಶ್ರೀ ಟಿ.ಆರ್.ಅನಂತರಾಮು ಅವರ ೫೦ನೇ ಕೃತಿ 'ದೂರದರ್ಶಕ ಕಂಡ ವಿಶ್ವರೂಪ' ಇದೀಗ ಮಾರುಕಟ್ಟೆಯಲ್ಲಿದೆ. ಕನ್ನಡಕ್ಕೆ ಐವತ್ತು ಅಮೂಲ್ಯ ವಿಜ್ಞಾನ ಸಾಹಿತ್ಯಕೃತಿಗಳನ್ನು ಕೊಟ್ಟಿರುವ ಅಪೂರ್ವ ಸಾಧನೆಗಾಗಿ ಶ್ರೀ ಅನಂತರಾಮುರವರನ್ನು 'ಇ-ಜ್ಞಾನ' ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

ದೂರದರ್ಶಕಗಳ ವಿಕಾಸ ವಿವರಣೆಯನ್ನೊಳಗೊಂಡ ಈ ಕೃತಿಯ ಬಿಡುಗಡೆ ಅನಂತರಾಮುರವರ ಅರವತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆದದ್ದು ವಿಶೇಷ. ಹ್ಯಾಪಿ ಬರ್ತ್‌ಡೇ ಸರ್!

ಮುಂದೆ ಓದಿ...

Wednesday, August 12, 2009

ವಸುಂಧರೆಯ ಒಡಲು – ಕೋಟಿ ಜೀವಿಗಳ ಮಡಿಲು

ಬೇಳೂರು ಸುದರ್ಶನ

ಕಾಡು ಕಡಿದ ಮೇಲೆ ಅಲ್ಲಿ ಪ್ರಾಣಿಗಳು ಬದುಕಿವೆಯೆ ಎಂದು ನೀವು ಅಚ್ಚರಿಪಡುತ್ತಿರುವ ಈ ಹೊತ್ತಿನಲ್ಲೇ ಮಡಗಾಸ್ಕರ್‌ನಿಂದ ಒಂದು ತಾಜಾ ಸುದ್ದಿ ಬಂದಿದೆ. ಮರಗಳ ಮೇಲೇ ಬದುಕುತ್ತಿದ್ದ ಒಂದು ವಿಶಿಷ್ಟ ಬಾವಲಿಯು ಈಗ ಒಂದು ಗಿಡದ ದೊಡ್ಡ ಎಲೆಗಳ ಮೇಲೆ ಅಂಟಿಕೊಳ್ಳುವುದಕ್ಕೆ ಬೇಕಾದ ರೂಪಾಂತರ ಮಾಡಿಕೊಂಡಿದೆ. ಮಡಗಾಸ್ಕರ್‌ನಲ್ಲಿ ಕೇವಲ ಶೇ. ೬ರಷ್ಟು ಪ್ರದೇಶ ಮಾತ್ರ ಕಾಡು. ಉಳಿದದ್ದೆಲ್ಲ ಮನುಕುಲದ, ನಾಗರಿಕತೆಯ ಜಾಡು. ಇಂಥ ಅರಣ್ಯನಾಶದಿಂದ ತಪ್ಪಿಸಿಕೊಳ್ಳಲೆಂದೇ ಈ ಬಾವಲಿಯು ತನ್ನ ಕಾಲಿನಲ್ಲಿ ಅಂಟುರಸ ಸ್ರವಿಸಿಕೊಂಡು ಎಲೆಗೆ ಅಂಟಿಕೊಳ್ಳುವುದಕ್ಕೆ ಸಜ್ಜಾಗಿದೆ.
ಪೂರ್ತಿ ನಾಶವಾದ ಕಾಡಿನಿಂದಲೇ ಬದುಕಿ ಮೇಲೆದ್ದಿರುವ ಈ ಬಾವಲಿಯನ್ನು ವಿನಾಶದ ಅಂಚಿನಲ್ಲಿರುವ ಪ್ರಾಣಿಸಂಕುಲಕ್ಕೆ ಸೇರಿಸಲಾಗದು ಎಂದು ಈ ಬಾವಲಿಯನ್ನು ಹುಡುಕಿದ ಸ್ಟೀವ್ ಗುಡ್‌ಮನ್ ಹೇಳುತ್ತಾನೆ. ಮೈಝೋಪೋಡಾ ಶ್ಲೀಮಾನ್ನಿ ಎಂಬ ಹೆಸರಿನ ಈ ಬಾವಲಿಯನ್ನು ಹುಡುಕಿದ ಚಿಕಾಗೋದ ಫೀಲ್ಡ್ ಮ್ಯೂಸಿಯಂ ತಂಡದಲ್ಲಿದ್ದ ಗುಡ್‌ಮನ್ ಹೇಳುವಂತೆ ಈ ಬಾವಲಿಯು ನಾಗರಿಕತಯ ಅಟಾಟೋಪಗಳಿಂದ ಪಾರಾಗಲೆಂದೇ ಅಂಟು ತಯಾರಿಸಿಕೊಂಡಿದೆ. ತೀರ ಇತ್ತೀಚೆಗಿನ ಬೆಳವಣಿಗೆ ಇದು.
ಪಶ್ಚಿಮ ಘಟ್ಟದಲ್ಲಿ ಈ ಬಾವಲಿ ಇದ್ದರೆ ಪೂರ್ವದಲ್ಲಿ ಮೈಝೋಪೋಡಾ ಆರಿಟಾ ಎಂಬ ಬಾವಲಿ ಇದೆ. ಅಂತೂ ಶ್ಲೀಮಾನ್ನಿ ಈಗ ಈ ಗುಂಪಿನ ಎರಡನೇ ಸದಸ್ಯ!

ಮಡಗಾಸ್ಕರ್‌ನ ಕಾಡುಪಾಪಗಳು

ಸ್ಟೀವ್ ಗುಡ್‌ಮನ್ ಹೀಗೆ ಹೊಸ ಜೀವಿಗಳನ್ನು ಪತ್ತೆ ಮಾಡುತ್ತಲೇ ಎರಡು ದಶಕ ಕಳೆದಿದ್ದಾನೆ. ಮಡಗಾಸ್ಕರ್‌ನಲ್ಲೇ ಒಂದೂವರೆ ವರ್ಷದ ಹಿಂದೆ ಕಂಡ ಎರಡು ಹೊಸ ಕಾಡುಪಾಪಗಳಿಗೆ ಅವನ ಹೆಸರನ್ನೇ ಇಡಲಾಗಿದೆ. ಇಷ್ಟು ದಿನ ಕೇವಲ ೪೭ ಬಗೆಯ ಕಾಡುಪಾಪಗಳಿದ್ದವು; ಈಗ ಈ ಸಂಖ್ಯೆ ೪೮ಕ್ಕೆ ಹೆಚ್ಚಿತು. ಮನುಷ್ಯನ ವಿಕಾಸವನ್ನು ತಿಳಿಯಲು ಈ ಕಾಡುಪಾಪಗಳು ತುಂಬಾ ಮುಖ್ಯವಂತೆ. ೧೬ ಕೋಟಿ ವರ್ಷಗಳ ಹಿಂದೆ ಮಡಗಾಸ್ಕರ್ ಆಫ್ರಿಕಾಕ್ಕೇ ಅಂಟಿಕೊಂಡಿತ್ತಂತೆ. ಆದು ಆರು ಕೋಟಿ ವರ್ಷಗಳ ಹಿಂದೆ ಬೇರ್ಪಟ್ಟಿತು. ಆಮೇಲೆ ಆಫ್ರಿಕಾದಲ್ಲಿ ಹೆಚ್ಚಿದ ಮಂಗಗಳು ಕಾಡುಪಾಪಗಳನ್ನು ಉಳಿಸಲೇ ಇಲ್ಲ. ಮಡಗಾಸ್ಕರ್ ಒಂದು ರೀತಿಯಲ್ಲಿ ಕಾಡುಪಾಪಗಳ ದ್ವೀಪವಾಗಿಬಿಟ್ಟಿತು! ಈಗ ನೋಡಿ, ಮಡಗಾಸ್ಕರ್ ಬಿಟ್ಟಂತೆ ಹೊರಜಗತ್ತಿನಲ್ಲಿ ಇರುವ ಕಾಡುಪಾಪಗಳ ಸಂಖ್ಯೆ ತೀರಾ ಕಮ್ಮಿ. ಮಿರ್ಝಾ ಜಾಜಾ ಮತ್ತು ಮೈಕ್ರೋಸಿಬಿಸ್ ಲೆಹಿಲಾಹಿತ್ಸಾರಾ ಹೆಸರಿನ ಈ ಕಾಡುಪಾಪಗಳು ಮಾನವನ ಕಥೆಗೂ ಸಾಕ್ಷಿ ಎಂದರೆ ಈ ಜೀವಿಗಳ ಮಹತ್ವವನ್ನು ಊಹಿಸಿ.

ಇತ್ತ ಆಫ್ರಿಕಾದಲ್ಲೇ, ತಾಂಜಾನಿಯಾದಲ್ಲಿ ಜಾಕ್ಸನ್ ಮುಂಗುಸಿ ಎಂಬ ಅತ್ಯಪರೂಪದ ಮುಂಗುಸಿ ಪತ್ತೆಯಾಗಿದೆ. ಇಷ್ಟು ದಿನ ಇದು ಕೇವಲ ಮ್ಯೂಸಿಯಂಗಳಲ್ಲಿ ಮಾದರಿಯಾಗಿ ಮಾತ್ರ ಕಂಡುಬಂದಿತ್ತು. ಬಿಳಿ ಬಾಲದ, ಹಳದಿ ಕುತ್ತಿಗೆಯ ಈ ಮುಂಗುಸಿ ನಿಶಾಚರಿ ಮೊದಲು ಕೇವಲ ಕೀನ್ಯಾದಲ್ಲಿ ಮಾತ್ರ ಇದೆ ಎಂದು ನಂಬಲಾಗಿತ್ತು.
ಈ ಮುಂಗುಸಿಯನ್ನು ಪತ್ತೆಮಾಡಿದ ತಂಡವೇ ಮೂರು ವರ್ಷಗಳ ಹಿಂದೆ ಕಿಪುಂಜಿ ಎಂಬ ಅತ್ಯಪರೂಪದ ಮಂಗವನ್ನೂ ಪತ್ತೆ ಮಾಡಿತ್ತು. ಐದು ವರ್ಷಗಳ ಹಿಂದೆ ವನ್ಯಜೀವಿ ಸಂರಕ್ಷಣಾ ಸೊಸೈಟಿಯು ವಿಶಿಷ್ಟ ಪುನುಗಿನ ಬೆಕ್ಕನ್ನು ಕಂಡಿತ್ತು.

ಅಮೆಝಾನ್‌ನ ರಕ್ತಪಿಪಾಸು ಮೀನುಗಳು ಅತ್ತ ಅಮೆಝಾನ್ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ವ್ಯಾಂಪೈರ್ ಮೀನು ಕಾಣಿಸಿಕೊಂಡಿದೆ. ಅರಾಗಿಯಾ ನದಿಯಲ್ಲಿ ಕಂಡುಬಂದ ಈ ರಕ್ತಪಿಪಾಸು ಮೀನು ಈ ಪ್ರದೇಶದಲ್ಲೇ ಕಾಣಸಿಗುವ ಕ್ಯಾಂಡಿರು ಎಂಬ ಇನ್ನೊಂದು ರಕ್ತಪಿಪಾಸು ಮೀನಿನ ಸಂಬಂಧಿಯಂತೆ. ಇವೆರಡೂ ಮಾರ್ಜಾಲಮೀನಿನ (ಕ್ಯಾಟ್‌ಫಿಶ್) ಜಾತಿಗೆ ಸೇರಿವೆ. ಬೇರೆ ಮೀನುಗಳ ರೆಕ್ಕೆಬಡಿತದಿಂದ ಉಂಟಾಗುವ ನೀರಿನ ಹರಿವಿನ ಬದಲಾವಣೆಯೇ ಈ ಮೀನಿಗೆ ಸಾಕು, ಹೊಂಚು ಹಾಕಿ ಇಂಥ ಮೀನುಗಳ ಬೆನ್ನುಮೂಳೆಗೆ ಅಂಟಿಕೊಂಡು ರಕ್ತ ಹೀರುತ್ತವೆ. ಕೇವಲ ೨೫ ಮಿಲಿಮೀಟರ್ ಉದ್ದ ಇರುವ ಈ ಮೀನು ಸಂಪೂರ್ಣ ಪಾರದರ್ಶಕ! ದೊಡ್ಡ ಮೀನುಗಳ ಪುಪ್ಪಸದ ಸಂದಿಗೊಂದಿಗಳಲ್ಲಿ ಅಡಗಿ ಅವುಗಳ ರಕ್ತ ಹೀರುವುದೆಂದರೆ ಈ ಮೀನುಗಳಿಗೆ ತುಂಬಾ ಇಷ್ಟ! ಮನುಷ್ಯರ ಮೂತ್ರದ ವಾಸನೆ ಹಿಡಿದೇ ಇವು ದಾಳಿ ಮಾಡುತ್ತವಂತೆ. ಮನುಷ್ಯರ ರಕ್ತವನ್ನೂ ಇವು ಹೀರುತ್ತವೆಯೆ? ಇನ್ನೂ ಗೊತ್ತಾಗಿಲ್ಲ.
ಬಿಬಿಸಿ (ಬ್ರಿಟಿಶ್ ಬ್ರಾಡ್‌ಕಾಸ್ಟಿಂಗ್ ಕಂಪನಿ) ಯ `ಅಮೆಝಾನ್ ಅಬಿಸ್’ ಕಾರ್ಯಕ್ರಮ ನಿರ್ಮಾಣದ ಸಂದರ್ಭದಲ್ಲಿ ಈ ವ್ಯಾಂಪೈರ್ ಮೀನಿನ ಜೊತೆಗೇ ಇನ್ನೂ ಎರಡು ಹೊಸ ಮೀನುಗಳು ದೊರೆತಿವೆ. ಈ ಮೀನು ದೊರೆತದ್ದೆಲ್ಲ ಅಮೆಝಾನ್ ನದಿಯ ಆಳದಲ್ಲಿ. ಬ್ರಿಟಿಶ್ ಚಾನೆಲ್‌ಗಿಂತ ಆಳವಾದ, ಅಗಲವಾದ ಅಮೆಝಾನ್ ನದಿಯ ಹೊಟ್ಟೆಯಲ್ಲಿ ನೂರಾರು ಆಳದ ರಂಧ್ರಗಳಿವೆ. ಅಲ್ಲಿ ಈ ತರಾವರಿ ಜೀವಿಗಳು ಭದ್ರವಾಗಿ ಬದುಕಿವೆ. ಕಾಲದ ಹರಿವನ್ನು ಎದುರಿಸಿಯೂ ಉಳಿದುಕೊಂಡಿವೆ; ಪ್ರಾಣಿಪ್ರಿಯ ಬಿಬಿಸಿ ನಿರ್ದೇಶಕರಿಗೆ ಕಂಡಿವೆ.
ಈ ಮೀನಿಗೆ ಸೂಕ್ತವಾದ ವೈಜ್ಞಾನಿಕ ಹೆಸರೇನು? ಪ್ಯಾರಾಕಾಂತೋಪೋರ್ನಾ ಡ್ರಾಕುಲಾ? ಪ್ಯಾರಾಕಾಂತೋಪೋರ್ನಾ ಇರಿಟಾನ್ಸ್? ಪ್ಯಾರಾಕಾಂತೋಪೋರ್ನಾ ಮಿನ್ಯುಟಾ? ಪ್ಯಾರಾಕಾಂತೋಪೋರ್ನಾ ವ್ಯಾಂಪೈರಾ? ಬಿ ಬಿ ಸಿ ಈಗ ಬಿಸಿಬಿಸಿ ಚರ್ಚೆ ನಡೆಸಿದೆ. ಹುಟ್ಟಿದ ಮಗುವಿಗೆ ಹೆಸರು ಇಡುವಂತೆ ಈ ರಕ್ತಪಿಪಾಸು ಮೀನಿಗೂ ಇನ್ನೇನು ಎಲ್ಲರೂ ಗುರುತಿಸುವ ಹೆಸರು ಬಂದುಬಿಡುತ್ತದೆ. ಮುದ್ದುಮಾಡೀರಿ ಜೋಕೆ…!
ಸಾವೋ ಪಾಲೋ ವಿಶ್ವವಿದ್ಯಾಲಯದ ತಂಡದೊಂದಿಗೆ ಬಿ ಬಿ ಸಿ ನಡೆಸಿದ ಈ ಸಂಶೋಧನೆಯಲ್ಲಿ ಭೂಮಿಯ ಮೇಲೆ ಬದುಕುವ ಒಂದು ಮೀನು ಪತ್ತೆಯಾಗಿದೆ. ಹೀಗೆ ಮರವನ್ನೇ ತಿಂದು ಬದುಕುವ ಈ ಮೀನು ವಿಶ್ವವಿಶಿಷ್ಟ.

ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ ನಾಲ್ಕು ವರ್ಷಗಳ ಹಿಂದೆ (೨೦೦೨) ಬ್ರೆಝಿಲ್‌ನಲ್ಲಿ ಹರಿಯುವ ಅಮೆಝಾನ್ ನದಿಯ ದಡದಲ್ಲಿ ಎರಡು ವಿಶಿಷ್ಟ ಮಂಗಗಳನ್ನು ಕನ್ಸರ್ವೇಶನ್ ಇಂಟರ್‌ನ್ಯಾಶನಲ್ ಸಂಸ್ಥೆಯು ಪತ್ತೆ ಮಾಡಿತ್ತು. ಬ್ರೆಝಿಲ್‌ನ ಮನಾವುನಲ್ಲಿರುವ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಅಮೆಝಾನ್ ರಿಸರ್ಚ್ ಸಂಸಯಲ್ಲಿ ಕೆಲಸ ಮಾಡುತ್ತಿರುವ ಡಚ್ ವಿಜ್ಞಾನಿ ಮಾರ್ಕ್ ವಾನ್ ರೂಸ್‌ಮಲೆನ್ ಎಂಬಾತ ಈ ಮಂಗಗಳನ್ನು ರಿಯೋ ಡಿ ಜನೈರೋದಿಂದ ವಾಯುವ್ಯ ದಿಕ್ಕಿನಲ್ಲಿ ೧೮೦೦ ಮೈಲುಗಳಾಚೆ ಇರುವ ಕಾಡಿನಲ್ಲಿ ಹುಡುಕಿದ. ಮದೀರಾ ಮತ್ತು ತಾಪಾಜೋಸ್ ನದಿಗಳು ಅಮೆಝಾನನ್ನು ಸೇರುವ ಈ ತಾಣವು ಇನ್ನೂ ತೀವ್ರ ಸಂಶೋಧನೆಗೆ ಗುರಿಯಾಗಿಲ್ಲವಂತೆ.
ಕ್ಯಾಲಿಸೆಬಸ್ ಬರ್ನಾಂಡಿ ಮತ್ತು ಕ್ಯಾಲಿಸೆಬೆಸ್ ಸ್ಟೀಫೆನ್ನಾಶಿ ಹೆಸರಿನ ಈ ಮಂಗಗಳು ೧೯೯೦ರಿಂದೀಚೆಗೆ ಸಿಕ್ಕಿದ ೩೮ ಮತ್ತು ೩೯ನೇ ಹೊಸ ಮಂಗಗಳು ಎಂದರೆ ನೀವೇ ಹೇಳಿ: ಜೀವವೈವಿಧ್ಯದ ಬಗ್ಗೆ ಮನುಷ್ಯನಿಗೆ ಎಷ್ಟೆಲ್ಲ ಗೊತ್ತಿದೆ? ವಿಚಿತ್ರವೆಂದರೆ ವಾನ್ ರೂಸ್‌ಮಲೆನ್ ವಾಸ್ತವವಾಗಿ ಕುಬ್ಜ ಮಾರ್ಮೋಸೆಟ್ ಎಂಬ ಇನ್ನೊಂದು ಹೊಸ ಮಂಗವನ್ನು ಹುಡುಕುತ್ತಿದ್ದಾಗ ಈ ಬರ್ನಾರ್ಡಿ ಸಿಕ್ಕಿದ್ದು. ವಾನ್‌ಗೆ ಮಂಗಗಳು ಎಂದರೆ ತುಂಬಾ ಪ್ರೀತಿ ಎಂದರಿತ ಒಬ್ಬ ಬೆಸ್ತ ಈ ಮಂಗವನ್ನು ತಂದುಕೊಟ್ಟಿದ್ದ. ಬರ್ನಾರ್ಡಿಯ ದೇಹ ೧೫ ಅಂಗುಲ; ಬಾಲ ೨೨ ಅಂಗುಲ. ತೂಕ ಕೇವಲ ೩೩ ಔನ್ಸ್‌ಗಳು. ಸ್ಟೀಫೆನ್ನಾಶಿ ಮಂಗದ ಉದ್ದ ೧೧ ಅಂಗುಲ; ಬಾಲ ೧೭ ಅಂಗುಲ. ತೂಕ ಸುಮಾರು ೨೪ ಔನ್ಸ್. ಕಪ್ಪು ತಲೆ; ಕೆಂಪು ಕೆನ್ನೆಗಳು.
`ಇನ್ನೂ ಹೆಸರಿಡದ ೨೦ಕ್ಕೂ ಹೆಚ್ಚು ಜೀವಪ್ರಬೇಧಗಳನ್ನು ಗುರುತಿಸಿದ್ದೇನೆ’ ಎಂದು ವಾನ್ ಹೇಳುತ್ತಾನೆ. ಜಗತ್ತಿನಲ್ಲಿ ಇರೋದೇ ೩೧೦ ಮಂಗ ಪ್ರಬೇಧಗಳು. ಅವುಗಳಲ್ಲಿ ೯೫ ಮಂಗ ಪ್ರಬೇಧಗಳು ಬ್ರೆಝಿಲ್‌ನಲ್ಲೇ ಇವೆ.
ಈ ಪ್ರದೇಶದಲ್ಲಿ ಅಮೆಝಾನ್ ನದಿಯೊಳಗೇ ಹತ್ತಾರು ದ್ವೀಪಗಳು ಹುಟ್ಟಿಕೊಂಡಿವೆ. ಅಲ್ಲಿ ಜೀವಪ್ರಬೇಧಗಳು ಹಾಯಾಗಿ ಅರಳಿವೆ. ೧೮೦೦ರಿಂದ ಈ ಪ್ರದೇಶದಲ್ಲಿ ಯಾರೂ ಸಂಶೋಧನೆ ನಡೆಸಿರಲಿಲ್ಲ. ನಾನು ಐದೇ ವರ್ಷ ನಡೆಸಿದ ಸಂಶೋಧನೆಯಿಂದ ಇಷ್ಟೆಲ್ಲ ಜೀವಿಗಳು ಕಂಡುಬಂದಿವೆ ಎಂದು ವಾನ್ ವಿನಮ್ರವಾಗಿ ನುಡಿಯುತ್ತಾನೆ.
ಜೀವಶಾಸ್ತ್ರಜ್ಞರು ಮತ್ತು ಸಸ್ಯಶಾಸ್ತ್ರಜ್ಞರಿಗೆ ಇದು ಎಲ್ ಡೊರ್‍ಯಾಡೋ (ಹಿಂದೆ ಚಿನ್ನ ದೊರೆಯುತ್ತಿದ್ಛ್ದ ಇತಿಹಾಸಪ್ರಸಿದ್ಧ ದಕ್ಷಿಣ ಅಮೆರಿಕಾ ಪ್ರದೇಶ) ಇದ್ದ ಹಾಗೆ. ಹುಡುಕಿದಷ್ಟೂ ಜೀವಿಗಳು ಸಿಗುತ್ತವೆ ಎಂಬುದು ವಾನ್ ಅಭಿಮತ.
ಈ ಮಂಗಗಳೇನೂ ವಿನಾಶದ ಅಂಚಿನಲ್ಲಿಲ್ಲ. ಆದರೆ ಅವುಗಳ ರಕ್ಷಣೆಯೂ ಮುಖ್ಯವೇ. ಇಂಥ ರಕ್ಷಣೆಗೆ ನೆರವು ನೀಡಿದವರ ಹೆಸರನ್ನೇ ಹೊಸ ಪ್ರಬೇಧಗಳಿಗೆ ಇಡುವುದು ವಾನ್‌ನ ಒಂದು ಉಪಾಯ. ಬರ್ನಾರ್ಡಿ ಎಂದರೆ ಬೇರಾರೂ ಅಲ್ಲ ; ಡಚ್ ರಾಜಕುಮಾರ!
ಬ್ರೆಝಿಲ್‌ನಲ್ಲಿ ಇರುವ ಕಾಯ್ದೆಯೂ ವಾನ್‌ಗೆ ನೆರವಾಗಿದೆ. ಈ ದೇಶದ ನಾಗರಿಕರು ತಮ್ಮ ಒಡೆತನದ ಪ್ರದೇಶದಲ್ಲಿ ಖಾಸಗಿ ನಿಸರ್ಗ ಮೀಸಲು ಪ್ರದೇಶವನ್ನು ರೂಪಿಸಿ ಆಸ್ತಿ ತ ಎರಿಗೆಯಿಂದ ಬಚಾವಾಗಬಹುದು. ಅದಕ್ಕೇ ವಾನ್ ರೂಸ್‌ಮಲೆನ್ ಡಚ್ ಸರ್ಕಾರದ ನೆರವಿನಿಂದ ಒಂದೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಎರಡು ಮೀಸಲು ಅರಣ್ಯವನ್ನು ನಿರ್ಮಿಸಿದ್ದಾನೆ.
ಮನುಕುಲದ ನಿರಂತರ ದಾಳಿಯಿಂದ, ನಾಗರಿಕತೆ ಎಂಬ ನಿಸರ್ಗನಾಶದ ಪ್ರಕ್ರಿಯೆಯಿಂದ ಈ ಅಪರೂಪದ ಜೀವಿಗಳು ಉಳಿಯುವಲ್ಲಿ ವಾನ್ ರೂಸ್‌ಮಲೆನ್ ಮಾಡಿದ ಯತ್ನಗಳಿಗೆ ಏನೆನ್ನೋಣ?

ಏಶ್ಯಾದಲ್ಲಿ ಹೊಸ ಜೀವಿಗಳು ಈ ಕಡೆ ಮಲೇಶ್ಯಾಗೆ ಬನ್ನಿ….. ಎರಡು ವರ್ಷಗಳ ಹಿಂದೆ ಮಲೇಶ್ಯಾದ ಜೊಹೊರ್ ರಾಜ್ಯದ ದಟ್ಟ ಅರಣ್ಯದಲ್ಲಿ ದೊಡ್ಡ ಕಾಲಿನ ಆದಿಮಾನವನ ಹೆಜ್ಜೆಗಳೇ ಕಂಡುಬಂದಿದ್ದವು. ಈ ಪರಿಸರದಲ್ಲಿ ಹಿಂದೆಂದೂ ಕಾಣದ ವಿಶಿಷ್ಟ ಜೀವಿಗಳು ಇವೆ ಎಂದು ಈ ದೇಶದ ವಿಜ್ಞಾನಿಗಳು ಹೇಳುತ್ತಿದ್ದಾರೆ.
ಕಳೆದ ಒಂದು ದಶಕದಲ್ಲೇ ಇಂಡೋನೇಶ್ಯಾದ ಬೋರ್ನಿಯೋದಲ್ಲಿ ೩೬೧ ಹೊಸ ಪ್ರಬೇಧಗಳನ್ನು ಹುಡುಕಲಾಗಿದೆ. ದಿನ ಬೆಳಗಾದರೆ ಹಿಂಸೆ ತಾಂಡವವಾಡುವ ಶ್ರೀ ಲಂಕಾದ ಕಾಡುಗಳಲ್ಲಿ ೪೩ ಹೊಸ ಕಶೇರುಕ ಪ್ರಬೇಧಗಳು ಪತ್ತೆಯಾಗಿವೆ. ಇಂಡೋನೇಶ್ಯಾದ ಕಲಿಮಂಟನ್ ಮಳೆಕಾಡಿನಲ್ಲಿ ಅಲ್ಲಿನ ಬೇಟೆಗಾರರ ಕಣ್ಣಿಗೂ ಸಿಗದ ಸಸ್ತನಿಗಳು ಕಂಡಿವೆ. ಮಧ್ಯ ಲಾವೋಸ್‌ನಲ್ಲಿ ವಿಚಿತ್ರವಾದ , ನರಿಯಂತೆ ಕಾಣುವ ಖಾ – ನ್ಯೂ ಎಂಬ ಉದ್ದ ಮೀಸೆಯ ಇಲಿ ಜಾತಿಯ ಪ್ರಾಣಿ ಕಂಡಿದೆ. ಗಿನೀ ಪಿಗ್‌ನ್ನು ಹೋಲುವ ಈ ಪ್ರಾಣಿಯು ಈವರೆಗೂ ಗೊತ್ತೇ ಇರದ ಸಸ್ತನಿ ಕುಟುಂಬಕ್ಕೆ ಸೇರಿದ್ದು.
ಮಲೇಶ್ಯಾದಲ್ಲಿ ಕಾಡು ಸರಸರ ಮಾಯವಾಗುತ್ತಿದೆ. ಅಲ್ಲೀಗ ಕಾಡು ನಾಶದ ವೇಗ ವಾರ್ಷಿಕ ಶೇ. ೮೬. ಒಟ್ಟಾರೆ ಭೂಪ್ರದೇಶದಲ್ಲಿ ಇರುವುದೇ ಶೇ. ೧೦ರಷ್ಟು ಕಾಡು.
ಹಂಟು ಜರಾಂಗ್ ಗಿಗಿ ಎಂಬುದು ಮಲೇಶ್ಯಾದ ಗುಡ್ಡಗಾಡು ಜನರು ಹೇಳುವ ದೊಡ್ಡಕಾಲಿನ ಕೋತಿ ಅರ್ಥಾತ್ ಯೇತಿ. ಭೂತಾನದಲ್ಲಿ ೬೫೦ ಚದರ ಕಿಲೋಮೀಟರ್ ಪ್ರದೇಶವನ್ನೇ ಯೇತಿಗಾಗಿ ಸಂರಕ್ಷಿಸಲಾಗಿದೆ. ಯೇತಿ ಇದೆಯೋ,ಇಲ್ಲವೋ ಎಂದು ಇನ್ನೂ ಖಚಿತವಾಗಿಲ್ಲ ಬಿಡಿ.

ವಿನಾಶದ ಅಂಚಿನಲ್ಲಿ ರುಚಿಕರ ಸೆಪೋರಿಸ್ ಮತ್ತೆ ಬ್ರೆಝಿಲ್‌ಗೆ ಬರೋದಾದರೆ, ಅಮೆಝಾನ್ ನದೀತೀರದಲ್ಲೇ ಅತ್ಯಂತ ರುಚಿಯಾದ ಮಂಗ ಕಂಡುಬಂದಿದೆ ಎಂದು ಜರ್ಮನಿಯ ಸಂಶೋಧಕ ಡಾ|| ಜೆರೋಮ್ ಕೆಲ್ಲರ್ ಹೇಳಿದ್ದಾರೆ. ಆಟೆಲೆಸ್ ಸೆಪೋರಿಸ್ ಎಂದು ಕರೆಯುವ ಈ ಮಂಗವು ೩೫ರಿಂದ ೪೦ ಪೌಂಡ್ ತೂಗುತ್ತೆ; ಹಸಿಯಾಗಲೀ, ಬೇಯಿಸಿಯಾಗಲೀ ತಿನ್ನುವುದಕ್ಕೆ ಇದಕ್ಕಿಂತ ಬೇರೆ ಮಂಗ ಸಿಕ್ಕಿಲ್ಲ ಎಂದು ಕೆಲ್ಲರ್ ಬಾಯಿ ಚಪ್ಪರಿಸುತ್ತಾರೆ. ಆದರೆ ಈ ಮಂಗವು ವಿನಾಶದ ಅಂಚಿನಲ್ಲಿದೆ. ಎಷ್ಟೋ ಪೀಳಿಗೆಗಳ ಕಾಲ ಇದನ್ನು ಸಾಕಿ ಸಂತತಿ ಬೆಳೆಸಬೇಕಂತೆ. ಆಮೇಲೆಯೇ ತಿನ್ನುವ ಯೋಚನೆ ಮಾಡಬಹುದಂತೆ. ಮನುಷ್ಯರ ಥರವೇ ವರ್ತಿಸುವ ಈ ಮಂಗಗಳು ಸಂಸಾರಪ್ರಿಯರಂತೆ.
ನ್ಯೂ ಗಿನಿಯ ಫೋಜಾ ಗುಡ್ಡದಲ್ಲಿ ೨೦೦೫ರ ಡಿಸೆಂಬರಿನಲ್ಲಿ ಓಡಾಡಿದ ವಿಜ್ಞಾನಿಗಳ ತಂಡಕ್ಕೆ ಬಂಪರ್ ಬಹುಮಾನವೇ ಸಿಕ್ಕಿದೆ. ೨೦ ಕಪ್ಪೆಗಳು, ನಾಲ್ಕು ಚಿಟ್ಟೆಗಳು, ಗಿಡಗಳು, ಕಿತ್ತಳೆ ಬಣ್ಣದ ಜೇನುಹಕ್ಕಿ, – ಎಲ್ಲವೂ ಸಿಕ್ಕಿವೆ. ೧೯೩೯ರ ನಂತರ ಈ ಪ್ರದೇಶದಲ್ಲಿ ಕಂಡುಬಂದ ಜೇನುಹಕ್ಕಿಯ ಕಣ್ಣುಗಳ ಕೆಳಗೆ ಪದಕದಂಥ ರಚನೆಗಳಿವೆ. ಉದ್ದ ಕೊಕ್ಕಿನ ಎಕಿಡ್ನಾ ಎಂಬ ಮೊಟ್ಟೆ ಇಡುವ ಸಸ್ತನಿಯೂ ಇಲ್ಲಿ ಕಂಡಿದೆ. ಇಂಡೋನೇಶ್ಯಾದಲ್ಲಿ ಇದೇ ತಂಡಕ್ಕೆ ಚಿನ್ನದ ಬಣ್ಣದ ನೆತ್ತಿಯ ಮರ ಕಾಂಗರೂ – ಡೆಂಡ್ರೋಲೇಗಸ್ ಪಲ್ಚೆರಿಮಸ್ – ಸಿಕ್ಕಿದೆ.
ಪ್ರಾಣಿ ಸಂಕುಲದ ಈ ಹಳೇ ಹೊಸ ಸದಸ್ಯರನ್ನು ಸ್ವಾಗತಿಸೋಣ.

ಸಂಕುಲಪಟ್ಟಿ ಸಾಧ್ಯವೆ? ವಿಶ್ವದಲ್ಲಿ ಒಟ್ಟು ೧೭.೫ ಲಕ್ಷ ಜೀವಿಗಳಿವೆ ಎಂಬುದು ಒಂದು ಸಾಮಾನ್ಯ ಅಂದಾಜು. ಅಮೆರಿಕಾ ಮತ್ತು ಇಂಗ್ಲೆಂಡಿನ ವಿಜ್ಞಾನಿಗಳು ಈ ಪ್ರಾಣಿಸಂಕುಲದ ದೊಡ್ಡ ಪಟ್ಟಿಯನ್ನೇ ಮಾಡುತ್ತಿದ್ದಾರೆ. ೨೦೧೧ರಲ್ಲಿ ಈ ಪಟ್ಟಿಯ ಕರಡು ಸಿದ್ಧವಾಗಬಹುದು. ಈಗ ವಾರ್ಷಿಕ ಕನಿಷ್ಠ ೧೫ರಿಂದ ೨೦ ಸಾವಿರ ಹೊಸ ಜೀವಿಗಳು ಈ ಪಟ್ಟಿಗೆ ಹೊಸದಾಗಿ ಸೇರುತ್ತಿವೆ. ವಿಶ್ವಸಂಸ್ಥೆಯ ಜಾಗತಿಕ ವೈವಿಧ್ಯ ಅಂದಾಜಿನ ಪ್ರಕಾರ ಭೂಮಿಯಲ್ಲಿ ೧.೩೬ ಕೋಟಿ ಜೀವಪ್ರಬೇಧಗಳಿವೆ. ಉದಾಹರಣೆಗೆ ಜೀರುಂಡೆಗಳ ಕರುಳುಗಳಲ್ಲೇ ಇತ್ತೀಚೆಗೆ ೨೦೦ ಬಗೆಯ ಯೀಸ್ಟ್‌ಗಳನ್ನು ಗುರುತಿಸಲಾಗಿದೆ.
ಉಷ್ಣವಲಯದ ಕಾಡುಗಳು ಇಂಥ ಜೀವಿಗಳಿಗೆ ಪ್ರಶಸ್ತವಾದ ತಾಣ. ಜೀವಶಾಸ್ತ್ರಜ್ಞರು ಈಗ ಕೇವಲ ಅರಣ್ಯಗಳ ಛಾವಣಿಗಳಲ್ಲೇ ಸಾಕಷ್ಟು ಹೊಸ ಜೀವಪ್ರಬೇಧಗಳನ್ನು ಹುಡುಕುತ್ತಿದ್ದಾರೆ.
ಇತ್ತ ಸಮುದ್ರದ ಆಳದಲ್ಲಿ ಹೊಸ ಮೀನುಗಳು ಮಿಂಚುತ್ತಿವೆ. ಈ ದಶಕದ ಮೊದಲ ಮೂರೇ ವರ್ಷಗಳಲ್ಲಿ ೫೦೦ ಹೊಸ ಬಗೆಯ ಮೀನುಗಳು ಸಿಕ್ಕಿವೆ. ಈಗ ಸಿದ್ಧವಾದ ಪಟ್ಟಿಯಲ್ಲಿ ಇರುವುದಕ್ಕಿಂತ ಇನ್ನೂ ಹತ್ತು ಪಟ್ಟು ಹೆಚ್ಚು ಜೀವಿಗಳು ಇವೆ ಎಂಬುದು ಒಂದು ಸಣ್ಣ ಅಂದಾಜು.
ಸಸ್ಯಶೋಧನೆಯಲ್ಲಿ ಮಾತ್ರ ವಿಜ್ಞಾನಿಗಳು ಕೊಂಚ ಮುಂದಿದ್ದಾರೆ. ಈಗಾಗಲೇ ಶೇ. ೭೫ರಷ್ಟು ಸಸ್ಯಸಂಕುಲವನ್ನು ಪಟ್ಟಿ ಮಾಡಿದ್ದಾರೆ. ವರ್ಷಕ್ಕೆ ೨೦೦೦ದಷ್ಟು ಹೊಸ ಸಸ್ಯಸಂಕುಲಗಳು ಪತ್ತೆಯಾಗುತ್ತಿವೆ. ಪಾಪುವಾ ನ್ಯೂಗಿನಿ ಮತ್ತು ಮಧ್ಯ ಆಫ್ರಿಕಾದ ಮಳೆಕಾಡುಗಳಲ್ಲಿ ಸಾವಿರಾರು ಸಸ್ಯಗಳು ಹೆಸರಿಲ್ಲದೆ ಬದುಕಿವೆ. ಆದರೆ ಈ ಭಾಗದ ದೇಶಗಳ ಆಂತರಿಕ ಕಲಹದಿಂದ ಸಂಶೋಧಕರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ.
ಒಂದು ಲೆಕ್ಕಾಚಾರದ ಪ್ರಕಾರ, ಜಾಗತಿಕ ಜೀವಿಪಟ್ಟಿ ಪೂರ್ಣಗೊಳಿಸಲು ಮನುಷ್ಯರಿಗೆ ೧೫೦೦ ವರ್ಷಗಳಿಂದ ಹಿಡಿದು ೧೫ ಸಾವಿರ ವರ್ಷಗಳು ಸಾಲುವುದಿಲ್ಲ. ಇಂಟರ್‌ನೆಟ್ ಸಂಪರ್ಕವು ಸಾಧ್ಯ ಮಾಡಿಸಿರುವ ವಿಜ್ಞಾನಿಗಳ ಪರಸ್ಪರ ಸಂಪರ್ಕ, ಡಿ ಎನ್ ಎ ಸರಪಳಿಗಳ ಶೋಧನೆ, ಹೆಚ್ಚುತ್ತಿರುವ ಜೀವಶಾಸ್ತ್ರಜ್ಞರ ಸಂಖ್ಯೆ, – ಇವೆಲ್ಲವೂ ಈ ಪಟ್ಟೀಕರಣದ ವೇಗವನ್ನು ಹೆಚ್ಚಿಸಿವೆ ಎಂಬುದೇನೋ ನಿಜ. ಆದರೆ ದಾರಿ ಮಾತ್ರ ದೂರ.

ಭಾರತದಲ್ಲೂ ಶೋಧದ ಹೊಸ ಹಾದಿ ಭಾರತದಲ್ಲಿ? ಮೊನ್ನೆ ತಾನೇ ಬೆಳಗಾವಿಯಲ್ಲಿ ೬೦ ಕೋಟಿ ವರ್ಷಗಳ ಹಿಂದೆ ಹುಟ್ಟಿದ ಜೀವಿ – ಸಿಹಿನೀರಿನ ಬ್ರಯೋಝೋವಾ – ಕಂಡುಬಂದಿದೆ. ಕನ್ನಡದಲ್ಲಿ ವಿಜ್ಞಾನದ ಸುದ್ದಿಗಳೇ ಪ್ರಕಟವಾಗದ ಈ ದಿನಗಳಲ್ಲಿ `ಕನ್ನಡಪ್ರಭ’ದ ಎಂ.ಕೆ. ಹೆಗಡೆ ಈ ಬಗ್ಗೆ ಸುದ್ದಿ ಬರೆದದ್ದು ಶ್ಲಾಘನೀಯ. ಬೆಳಗಾವಿಯ ಗೋವಿಂದರಾಮ್ ಸೆಕ್ಸಾರಿಯಾ ಸೈನ್ಸ್‌ಕಾಲೇಜಿನ ಪ್ರೊ|| ಎಸ್. ವೈ. ಪ್ರಭು ಈ ಜೀವಿಯನ್ನು ಮೊದಲು ತಮ್ಮ ಜೀವಶಾಸ್ತ್ರ ವಿಭಾಗದ ಮತ್ಸ್ಯಕೊಳದಲ್ಲಿ ಕಂಡರು.
ನಮ್ಮ ವೈವಿಧ್ಯಮಯ ಸಹ್ಯಾದ್ರಿಯ ಒಡಲಲ್ಲಿಯೂ ಇಂಥ ನೂರಾರು ಜೀವಿಗಳು ಅಡಗಿವೆ. ಅವುಗಳನ್ನು ಹುಡುಕುವುದಕ್ಕೆ ವಿಜ್ಞಾನಿಗಳು ಹೊರಟಿದ್ದಾರೆ. ಕೇರಳದಲ್ಲಿ ಹೊಸ ಕಪ್ಪೆಗಳನ್ನು ಹುಡುಕುವುದರಲ್ಲಿ ಎಸ್. ಡಿ. ಬಿಜು ಮತ್ತು ಫ್ರಾಂಕಿ ಬೊಸಿಟ್ ನಿಷ್ಣಾತರು. ಫಿಲಾಟಸ್ ಬಾಬಿಂಗೇರಿ ಮತ್ತು ಫಿಲಾಟಸ್ ಗ್ರಾಮಿನಿರೂಪೆಸ್ ಎಂಬ ಎರಡು ಕಪ್ಪೆಗಳನ್ನು ಪೊನ್‌ಮುಡಿ ಗುಡ್ಡಗಳಲ್ಲಿ ಹುಡುಕಿದ ಈ ಮಹಾಶಯರು ಕಳೆದ ವರ್ಷವಷ್ಟೇ ಸಹ್ಯಾದ್ರಿಯ ತಪ್ಪಲಲ್ಲಿ ನಾಸಿಕಾಬಟ್ರಾಕಸ್ ಸಹ್ಯಾದ್ರೆನ್ಸಿಸ್ ಎಂಬ ನೇರಳೆ ಬಣ್ಣದ ಕಪ್ಪೆಯನ್ನು ಹುಡುಕಿದ್ದಾರೆ. ಈ ಕಪ್ಪೆಯ ಕಥೆ ಬರೆದರೆ ಅದೇ ಒಂದು ದೊಡ್ಡ ಅಧ್ಯಾಯವಾದೀತು!

ಈ ಭೂಮಿಯ ಒಳಗೆ, ಮೇಲೆ, ಮರಗಳ ಬುಡದಲ್ಲಿ, ನೆತ್ತಿಯಲ್ಲಿ, ವಾಯುಗೋಳದ ವಿವಿಧ ಸ್ತರಗಳಲ್ಲಿ… ಜೀವಿಗಳನ್ನು ಹುಡುಕುತ್ತ ಹೋದರೆ ಕಥೆ ಮುಗಿಯುವುದೇ ಇಲ್ಲ.
ಮಂಗಳದಲ್ಲಿ ಜೀವಿಗಳಿದ್ದಾರೆಯೆ?ಬ್ರಹ್ಮಾಂಡದಲ್ಲಿ ಸೌರವ್ಯೂಹದಲ್ಲಿ ನಮ್ಮಂತೆಯೇ ಇರುವ ಗ್ರಹಗಳಲ್ಲಿ ಜೀವಿಗಳಿದ್ದಾರೆಯೆ? ಅವುಗಳನ್ನು ಹುಡುಕಲು ವರ್ಷಗಳಿಂದ ನೌಕೆಗಳು ಆಕಾಶಗಾಮಿಯಾಗಿವೆ. ನಮ್ಮ ಅಕ್ಕಪಕ್ಕದಲ್ಲೇ ಇರುವ ಅಸಂಖ್ಯ ಜೀವಿಗಳನ್ನು ಮಾತ್ರ ನಾವು ಹುಡುಕಿಲ್ಲ; ರಕ್ಷಿಸಿಲ್ಲ; ಸುಮ್ಮನೆ ಬಿಟ್ಟಿಲ್ಲ. ವಿಜ್ಞಾನಿಗಳು ಹೆಚ್ಚೆಂದರೆ ಇವುಗಳನ್ನು ಹೀಗೆಯೇ ಬದುಕಲು ಬಿಡಿ ಎನ್ನಬಹುದು.
ಆದರೆ ಅಭಿವೃದ್ಧಿಯ ಮದ ಹತ್ತಿರುವ ಈ ಮನುಷ್ಯ ಏನು ಮಾಡಬಹುದು?
ಜೀವನಪ್ರೀತಿ ಉಳ್ಳವರಾಗಿ ನಾವು ಸಸ್ಯಶ್ಯಾಮಲೆಯಾಗಿ ಕೋಟಿ ಕೋಟಿ ಜೀವಿಗಳನ್ನು ಒಡಲಿನಲ್ಲಿ ಇಟ್ಟುಕೊಂಡ ಈ ವಸುಂಧರೆಗೆ ಒಮ್ಮೆ ತಲೆಬಾಗಿ ನಮಿಸೋಣ. ಈ ಜೀವಿಗಳನ್ನು ಹುಡುಕುತ್ತಿರುವ ವಿಜ್ಞಾನಿಗಳಿಗೆ ವಂದಿಸೋಣ.
ಸಿದ್ಧಾಂತಗಳ ಮಾತಿರಲಿ, ಮನುಷ್ಯೇತರ ಜೀವಿಗಳನ್ನೂ ಬದುಕಲು ಬಿಡುವುದೇ ಈಗಿರುವ ದೊಡ್ಡ ಸವಾಲು.

(ಹೊಸದಿಗಂತ, ೨೦೦೭ ಜನವರಿ ೨೧, ಈ ಸಂಚಿಕೆಯ ಸಾಪ್ತಾಹಿಕದಲ್ಲಿ ಪ್ರಕಟಿತ)

ಮುಂದೆ ಓದಿ...

Monday, August 10, 2009

ಸೂರ್ಯನ ಫೋಟೋಗ್ರಾಫರ್!

ಮನುಷ್ಯ ಚಂದ್ರನ ಮೇಲೆ ಇಳಿದು ನಲವತ್ತು ವರ್ಷ ಆಯ್ತು, ಸೂರ್ಯನ ಮೇಲೆ ಇಳಿಯೋದು ಯಾವಾಗ ಅಂತ ಕೇಳಿದರೆ ರಾತ್ರಿಹೊತ್ತು ಹೇಗೂ ಸೂರ್ಯ ತಣ್ಣಗೆ ಇರ್ತಾನಲ್ಲ, ಆಗ ಹೋದರಾಯ್ತು ಅಂತ ಅದ್ಯಾರೋ ಅಂದನಂತೆ. ಹಾಗೆಲ್ಲ ರಾತ್ರಿ ಹೊತ್ತು ಹೋಗಿ ಸೂರ್ಯನ ಮೇಲೆ ಇಳಿಯುವ ಸಾಹಸ ಮಾತ್ರ ಈವರೆಗೆ ಯಾರೂ ಮಾಡಿಲ್ಲ, ಅಷ್ಟೆ!

ಹಾಗಂತ ವಿಜ್ಞಾನಿಗಳು ಸುಮ್ಮನೆ ಕುಳಿತಿರುತ್ತಾರೆಯೇ; ಅಂತರಿಕ್ಷದ ಮೂಲೆಮೂಲೆಗಳಿಗೆ ಗಗನನೌಕೆಗಳನ್ನು ಕಳುಹಿಸಿರುವ ಅವರು ಸೂರ್ಯನನ್ನೂ ಸುಮ್ಮನೆ ಬಿಟ್ಟಿಲ್ಲ.

ನಮ್ಮ ಪರವಾಗಿ ಸೂರ್ಯನ ಮೇಲೊಂದು ಕಣ್ಣಿಟ್ಟಿರುವ ಗಗನನೌಕೆಗಳಲ್ಲಿ ಸೋಲಾರ್ ಆಂಡ್ ಹೀಲಿಯೋಸ್ಫೆರಿಕ್ ಅಬ್ಸರ್ವೇಟರಿ ಅಥವಾ ಸೋಹೋ ಪ್ರಮುಖವಾದದ್ದು. ಭೂಮಿಯಿಂದ ಹದಿನೈದು ಲಕ್ಷ ಕಿಲೋಮೀಟರುಗಳ ದೂರದಲ್ಲಿರುವ ಈ ಗಗನನೌಕೆ ಭೂಮಿಯ ಜತೆಗೇ ಸೂರ್ಯನನ್ನು ಸುತ್ತುಹಾಕುತ್ತಿದೆ.

ಸುಮಾರು ನೂರು ಕೋಟಿ ಯೂರೋಗಳ ವೆಚ್ಚದ ಸೋಹೋ, ಸೂರ್ಯನ ಕುರಿತಾದ ಅಮೂಲ್ಯ ವೈಜ್ಞಾನಿಕ ಮಾಹಿತಿ ಹಾಗೂ ಅತ್ಯದ್ಭುತ ಚಿತ್ರಗಳನ್ನು ಕಳೆದ ಹದಿನಾಲ್ಕು ವರ್ಷಗಳಿಂದ ಸತತವಾಗಿ ಒದಗಿಸುತ್ತಿದೆ. ಅಷ್ಟೇ ಅಲ್ಲ, ಸೂರ್ಯನ ನೆರೆಹೊರೆಯನ್ನೂ ಗಮನಿಸುತ್ತಿದೆ: ಈವರೆಗೆ ಸೋಹೋ ಸಹಾಯದಿಂದ ಸಾವಿರದ ಐದುನೂರು ಧೂಮಕೇತುಗಳನ್ನು ಪತ್ತೆಮಾಡಲಾಗಿದೆ!

ಮನುಕುಲದ ಜೀವಸೆಲೆಯಾಗಿರುವ ಸೂರ್ಯನ ಬಗ್ಗೆ ನಮ್ಮ ಅರಿವನ್ನು ವಿಸ್ತರಿಸುತ್ತಿರುವ ಸೋಹೋ ನಮಗಾಗಿ ಕಳುಹಿಸಿರುವ ಕೆಲ ಅಪರೂಪದ ಚಿತ್ರಗಳು, ನಾನು ಬರೆದ ಪುಟ್ಟ ಪರಿಚಯ ಲೇಖನದೊಡನೆ ಆಗಸ್ಟ್ ೧೩, ೨೦೦೯ರ ಸುಧಾದಲ್ಲಿ ಪ್ರಕಟವಾಗಿವೆ.

ಚಿತ್ರಕೃಪೆ: ಸೋಹೋ (ಇಎಸ್‌ಎ ಹಾಗೂ ನಾಸಾ)

ಮುಂದೆ ಓದಿ...
ಶೀರ್ಷಿಕೆ ಚಿತ್ರ: ಎನ್ವಿಸ್ಯಾಟ್ ಉಪಗ್ರಹಕ್ಕೆ ಕಂಡ ಭಾರತ (ಇಎಸ್‌ಎ ಕೃಪೆ).

  © Blogger templates The Professional Template by Ourblogtemplates.com 2008

Back to TOP