ಶುಕ್ರವಾರ, ಜುಲೈ 4, 2014

ಅನಂತರಾಮು ಹೇಳುತ್ತಾರೆ... "ನನ್ನ ಮೊದಲ ಆದ್ಯತೆ ಭಾವಗೀತೆಗಳ ಕಡೆಗೆ"

ಶ್ರೀ ಟಿ. ಆರ್. ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು, ಕನ್ನಡದ ಅತ್ಯಂತ ಜನಪ್ರಿಯ ವಿಜ್ಞಾನ ಸಂವಹನಕಾರರಲ್ಲೊಬ್ಬರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಅನಂತರಾಮುರವರ ೬೦ಕ್ಕೂ ಹೆಚ್ಚು ಕೃತಿಗಳು ಈವರೆಗೆ ಪ್ರಕಟವಾಗಿವೆ. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರಾಗಿರುವ ಅನಂತರಾಮುರವರಿಗೆ ಕರ್ನಾಟಕ ಸರ್ಕಾರದ ವಿಶನ್ ಗ್ರೂಪ್ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿಗಳ ಗೌರವವೂ ದೊರೆತಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಎಂ. ಎಸ್ಸಿ. ಮುಗಿದೊಡನೆ 1972ರಲ್ಲಿ ಬೆಂಗಳೂರಿನ ಸರ್ಕಾರಿ ಕಾಲೇಜಿನ ಭೂವಿಜ್ಞಾನ ವಿಭಾಗದಲ್ಲಿ ಅಧ್ಯಾಪಕನಾದೆ. ಕವಿಯಾಗಬೇಕೆಂಬ ಹಂಬಲವಿತ್ತು. ಮಾನಸಿಕವಾಗಿ ಅದೇ ಗುಂಗಿನಲ್ಲಿದ್ದೆ. ಸಹೋದ್ಯೋಗಿಯಾಗಿದ್ದ ಕವಿ ನಿಸಾರ್ ಅಹಮದ್ ಅವರು ಬಿಲ್ ಕುಲ್ ಒಪ್ಪಲಿಲ್ಲ. ಬದಲು ವಿಜ್ಞಾನದ ವಿಚಾರವಾಗಿ ಬರೆಯಲು ಶುರುಮಾಡು ಎಂದರು. ಭೂವಿಜ್ಞಾನ ಬದುಕಿಗೆ ಬಹು ಹತ್ತಿರ. ಬರೆಯಲು ಸಾಕಷ್ಟು ವಿಚಾರವಿತ್ತು. 'ಸುಧಾ'ಕ್ಕೆ 'ವಸುಂಧರೆ ಬಂಜೆಯಾದಾಳೆ?' ಎಂಬ ಲೇಖನ ಬರೆದೆ. ಅಲ್ಲಿಗೆ ನನ್ನ ಮತಾಂತರ ಮುಗಿದಿತ್ತು. ವಿಜ್ಞಾನಕ್ಕೆ ಅಂಟಿಕೊಂಡೆ. ಸುಧಾದ ಸಂಪಾದಕ ಎಂ. ಬಿ. ಸಿಂಗ್ ನಿರಂತರವಾಗಿ ಪ್ರೋತ್ಸಾಹ ಕೊಡುತ್ತಲೇ ಹೋದರು.
ಅನಂತರ ವಿಜ್ಞಾನದ ವಿವಿಧ ಭಾಗಗಳ ಬಗ್ಗೆಯೂ ಬರೆಯುವ  ಧೈರ್ಯ ಬಂತು. ಜನಪ್ರಿಯ ವಿಜ್ಞಾನದತ್ತ ಹೊರಳಿದೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ನಾನು ಬರೆಯಲು ಹೊರಟಾಗ ಯಾರ ಪುಸ್ತಕವನ್ನಾಗಲಿ ಆದರ್ಶ ಎಂದು ಪರಿಗಣಿಸಿದವನಲ್ಲ. ನನ್ನ ಸ್ವಚಿಂತನೆಗಳ ಮೇರೆಗೆ ನಾನು ಮುಂದುವರಿದವನು. ಹಾಗೆಂದು ಇತರರ ಕೃತಿಗಳ ಬಗ್ಗೆ ತಾತ್ಸಾರವಿಲ್ಲ. ಅಭಿಮಾನವಿದೆ.  ವಿಶೇಷವಾಗಿ ಬಿ.ಜಿ.ಎಲ್. ಸ್ವಾಮಿ, ಕೃಷ್ಣಾನಂದ ಕಾಮತ್ ನಿಜವಾದ ಸಂಶೋಧಕರು ಮತ್ತು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಬೆಳೆಸಿದವರು. ತೇಜಸ್ವಿಗೆ ವಿಜ್ಞಾನದ ಹಿನ್ನೆಲೆ ಇಲ್ಲದಿದ್ದರೂ ಜನರ ನಾಡಿಮಿಡಿತ ಬಲ್ಲವರು. ಹೀಗಾಗಿ ಅವರ ಬಗ್ಗೆ ನನಗೆ ವಿಸ್ಮಯವಿದೆ. ನಾನು ಹೆಚ್ಚಿನ ಪಾಲು ಜನಪ್ರಿಯ ವಿಜ್ಞಾನವನ್ನು ಓದಿರುವುದು ಇಂಗ್ಲಿಷ್‌ನಲ್ಲಿ. ವಿಶೇಷವಾಗಿ ಕಾರ್ಲ್ ಸೇಗನ್ ಕೃತಿಗಳು ನನಗೆ ಅಚ್ಚುಮೆಚ್ಚು. ರಿಚರ್ಡ್ ಡಾಕಿನ್ಸ್ ಕೂಡ ಪ್ರಭಾವಿ ಲೇಖಕ. ಇಂಥ ಲೇಖಕರ ದೊಡ್ಡ ಪಟ್ಟಿಯೇ ಇದೆ.

ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ಇತರ ಸಂವಹನಕಾರರ ಬಗ್ಗೆ ನನಗೆ ತಿಳಿಯದು. ವಿಜ್ಞಾನವನ್ನು ಸ್ವೀಕರಿಸುವ ಜನರೇ ಇದ್ದಾರೆ. ಅವರಿಗೆ ಆ ಕುರಿತ ಸಾಹಿತ್ಯ ಹೆಚ್ಚು ಹೆಚ್ಚು ಬೇಕು ಎನ್ನಿಸಿದೆ. ಬರಹಗಾರನಾಗಿ ನನಗೆ ಸಮಾಧಾನವಿದೆ. ಜನ ಓದಿದ್ದಾರೆ, ಪ್ರತಿಕ್ರಿಯಿಸಿದ್ದಾರೆ. ಬಹುಶಃ ಕರ್ನಾಟಕದ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳೆಲ್ಲವೂ ಅವರಿಗೆ ಬೇಕಾದ ಪುಸ್ತಕಗಳನ್ನು ನನ್ನಿಂದ ಬರೆಸಿವೆ. ಈಗಲೂ ಪ್ರಕಾಶಕರ ನಿರಂತರ ಬೆಂಬಲವಿದೆ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿಗೆ 'ಸುವರ್ಣ ಸಂಪುಟ' (ವಿಜ್ಞಾನ-ತಂತ್ರಜ್ಞಾನ) ಸಂಪಾದಿಸಿಕೊಡುವಲ್ಲಿ ತೊಡಗಿಕೊಂಡಿದ್ದೇನೆ. ಐ.ಬಿ.ಎಚ್. ಸಂಸ್ಥೆ ಒಂಬತ್ತು ಸಂಪುಟಗಳಲ್ಲಿ ವಿಶ್ವಕೋಶವನ್ನು ಹೊರತರಲು ಯೋಜನೆ ಹಮ್ಮಿಕೊಂಡಿದೆ. ಹಿರಿಯ ಲೇಖಕರಾದ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಅದರ ಪ್ರಧಾನ ಸಂಪಾದಕರು. ನಾನು ಮತ್ತು ಡಾ. ಪಂಡಿತಾರಾಧ್ಯ ಸಂಪಾದಕ ವರ್ಗದಲ್ಲಿದ್ದೇವೆ. ಸುಮಾರು ಹತ್ತು ಸಾವಿರ ಪುಟಗಳನ್ನು ಪರಿಶೀಲಿಸಬೇಕಾಗಿದೆ. ಇಂಥ ಕೆಲಸಗಳಲ್ಲಿ ನನಗೆ ಆಸಕ್ತಿ ಇದೆ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ನನ್ನ ಆಸಕ್ತಿಯ ಕ್ಷೇತ್ರ ವಿಸ್ತಾರವಾದದ್ದು. ನನ್ನ ಮೊದಲ ಆದ್ಯತೆ ಭಾವಗೀತೆಗಳ ಕಡೆಗೆ. ಉಳಿದಂತೆ ವಿಜ್ಞಾನ ಸಾಹಿತ್ಯಕ್ಕಿಂತ ನಾನು ಹೆಚ್ಚು ಓದಿರುವುದು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು. ವಿಶೇಷವಾಗಿ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಕೃತಿಗಳೆಂದರೆ ಮೈಮರೆತು ಓದುತ್ತೇನೆ. ಶಿಕ್ಷಣ ಕುರಿತು ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಮಟ್ಟ ಹೆಚ್ಚಿಸಬೇಕೆಂಬ ತುಡಿತವಿದೆ. ಈ ಕುರಿತು ನನ್ನದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ನಮ್ಮ ಮನೆಮಂದಿಯವರ ನೆರವೂ ಇದಕ್ಕಿದೆ - ನನ್ನ ನಂತರವೂ. ಅದೇ ನನಗೆ ದೊಡ್ಡ ಸಮಾಧಾನ.

ಶ್ರೀ ಟಿ. ಆರ್. ಅನಂತರಾಮುರವರ ಕುರಿತ ವಿಕಿಪೀಡಿಯ ಪುಟ ಇಲ್ಲಿದೆ

ಶ್ರೀ ಟಿ. ಆರ್. ಅನಂತರಾಮುರವರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!

1 ಕಾಮೆಂಟ್‌:

Holalkere rangarao laxmivenkatesh ಹೇಳಿದರು...

ಇಲ್ಲಿ ಲೇಖನ ಮತ್ತು ವಿಜ್ಞಾನ ಪುಸ್ತಕಗಳನ್ನು ಅತ್ಯಂತ ಮಾಹಿತಿ ಪೂರ್ಣವಾಗಿ ಕನ್ನಡದಲ್ಲಿ ಹೊರತಂದ ಕೀರ್ತಿಗೆ ಪಾತ್ರರಾಗಿರುವ ಶ್ರೀ.ಟಿ.ಆರ್. ಅನಂತರಾಮುರಾವರಿಗೆ ನನ್ನನಮಸ್ಕಾರಗಳು. ಕವಿತೆ, ಕವನ ಬರೆಯುಲು ತೊಡಗಿದ ನಮ್ಮ ಪೀರ್ತಿಯ, ಟಿ.ಆರ್.ಆ.ರವರನ್ನು ವಿಜ್ಞಾನವಲಯದಲ್ಲಿ ಹೆಚ್ಚು ಸಮಯ ವ್ಯಯಿಸಿ, ಅದರಲ್ಲಿ ಹೆಚ್ಚಿನ ಕೃಷಿಮಾಡಲು ಪ್ರೇರೇಪಿಸಿದ್ದು ಒಳ್ಳೆಯ ಮಾರ್ಗದರ್ಶನದ ಕೈಮರವಾಯಿತು.
ನಾನು ನಿಸಾರ್ ಅಹ್ಮದ್ ರವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಅವರನ್ನು ನಾನು ಹತ್ತಿರದಲ್ಲಿ ಮುಂಬೈನ ಮೈಸೂರ್ ಅಸೋಸಿಯೇಷನ್ ನ ಸಭಾಂಗಣದಲ್ಲಿ ಕೇಳಿದ್ದೇನೆ. ಮತ್ತೆ ಅವರ ಒಬ್ಬ ಫ್ಯಾನ್ ಆಗಿ ಅವರ ಜೊತೆ ಫೋಟೋ ಖಿಂಚಿಸಿಕೊಂಡಿದ್ದೇನೆ.

badge