ಶುಕ್ರವಾರ, ಡಿಸೆಂಬರ್ 6, 2013

ಸ್ಮೈಲಿ ಸಮಾಚಾರ

ಟಿ. ಜಿ. ಶ್ರೀನಿಧಿ

ಇಮೇಲಿನಲ್ಲಿ ನಗುವುದು ಹೇಗೆ ಅಂತಲೋ ಮೊಬೈಲಿನಲ್ಲಿ ಅಳುವುದು ಹೇಗೆ ಅಂತಲೋ ಕೇಳಿದರೆ ನಿಮ್ಮ ಉತ್ತರ ಏನಿರುತ್ತದೆ? "ಅದೇನು ಸುಲಭ - ಸ್ಮೈಲಿ ಇದೆಯಲ್ಲ!" ಎನ್ನುತ್ತೀರಿ ತಾನೆ?

ಹೌದು, ಸ್ಮೈಲಿಗಳ ಜನಪ್ರಿಯತೆಯೇ ಅಂಥದ್ದು. ಇಮೇಲಿನಲ್ಲೋ ಎಸ್ಸೆಮ್ಮೆಸ್ಸಿನಲ್ಲೋ ನಮ್ಮ ಭಾವನೆಗಳಿಗೊಂದು ರೂಪಕೊಡಲು ಅನುವುಮಾಡಿಕೊಟ್ಟ ಈ ಸಂಕೇತಗಳು ಜನಪ್ರಿಯವಾಗಿದ್ದರಲ್ಲಿ ಆಶ್ಚರ್ಯವೂ ಏನಿಲ್ಲ ಬಿಡಿ.

ಸಾಮಾನ್ಯ ಭಾಷೆಯಲ್ಲಿ ಸ್ಮೈಲಿಗಳೆಂದು ಕರೆಸಿಕೊಂಡರೂ ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಈ ಸಂಕೇತಗಳಾದ (ಐಕನ್) ಇವನ್ನು ಎಮೋಶನ್, ಐಕನ್ ಎರಡೂ ಸೇರಿಸಿ 'ಎಮೋಟೈಕನ್'ಗಳೆಂದು ಗುರುತಿಸಲಾಗುತ್ತದೆ.

ಈ ಸಂಕೇತಗಳಿಗೆ ಮೂರು ದಶಕಗಳಿಗೂ ಮೀರಿದ ಇತಿಹಾಸವಿದೆ.
ಎಮೋಟೈಕನ್‌ಗಳ ಈ ಕತೆ ಶುರುವಾಗುವುದು ಅಮೆರಿಕಾದ ಕಾರ್ನೆಜಿ ಮೆಲನ್ ವಿಶ್ವವಿದ್ಯಾಲಯದಲ್ಲಿ.

ವರ್ಷ ೧೯೮೨. ಅಲ್ಲಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಜಾಲದಲ್ಲೊಂದು ಮೆಸೇಜ್ ಬೋರ್ಡ್ ಇತ್ತು. ಸಮುದಾಯದ ಸದಸ್ಯರ ನಡುವೆ ಇಮೇಲ್ ಮೂಲಕ ಸಂದೇಶ ವಿನಿಮಯ ಮಾಡಿಕೊಳ್ಳಲು ಅನುವುಮಾಡಿಕೊಡುತ್ತಿದ್ದ ವ್ಯವಸ್ಥೆ ಅದು.

ತಂತ್ರಜ್ಞಾನ ಹಳೆಯದಾದರೇನಂತೆ, ಅಂದಿನ ಸಮುದಾಯದ ಸದಸ್ಯರೂ ಇಂದಿನವರಂತೆಯೇ ಇದ್ದರು. ಮೆಸೇಜ್ ಬೋರ್ಡಿನಲ್ಲಿ ಹಲವು ವ್ಯಂಗ್ಯಾತ್ಮಕ (ಸರ್ಕಾಸ್ಟಿಕ್) ಸಂದೇಶಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದವು. ಆದರೆ ಆ ಸಂದೇಶಗಳ ಹಿಂದಿನ ವ್ಯಂಗ್ಯ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ. ಪರಿಣಾಮ - ವ್ಯಂಗ್ಯದ ಸಂದೇಶಗಳಿಗೂ ಕಟು ವಿಮರ್ಶೆ, ಟೀಕೆಗಳ ಪ್ರತಿಕ್ರಿಯೆ ಹರಿದುಬರುತ್ತಿತ್ತು.

ಪದೇಪದೇ ಇಂತಹ ಘಟನೆಗಳನ್ನು ನೋಡಿನೋಡಿ ಬೇಸತ್ತವರು ವ್ಯಂಗ್ಯದ ಸಂದೇಶಗಳನ್ನು "ಇದು ತಮಾಷೆಗೆ" ಎಂದು ಯಾರಾದರೂ ಗುರುತಿಸಬಾರದೇ ಎಂದು ತಮ್ಮಲ್ಲೇ ಅಂದುಕೊಳ್ಳುತ್ತಿದ್ದರು. ಪಠ್ಯಾಧಾರಿತ ಸಂದೇಶಗಳಲ್ಲಿ ಮುಖಾಮುಖಿ ಸಂವಹನದಲ್ಲಿರುವಂತೆ ಮಾತನಾಡುವವರ ಹಾವಭಾವಗಳನ್ನು ಗಮನಿಸುವ ಅನುಕೂಲವಿರುವುದಿಲ್ಲವಲ್ಲ, ಹಾಗಾಗಿ ವ್ಯಂಗ್ಯದ ಸಂದೇಶಗಳಿಗೆ ಎಂತಹ ಅಭಾದ್ಯತೆಯ ಸೂಚನೆ (ಡಿಸ್‌ಕ್ಲೇಮರ್) ಸೇರಿಸಬೇಕು ಎನ್ನುವುದು ಇನ್ನೂ ಚರ್ಚಾಸ್ಪದವಾಗಿಯೇ ಉಳಿದಿತ್ತು.

ತಮಾಷೆಯ ಸಂದೇಶಗಳನ್ನು ಗುರುತಿಸಲು ಬಳಸಬಹುದಾದ ಹಲವು ಚಿಹ್ನೆಗಳ ಪ್ರಸ್ತಾಪ ಈ ಚರ್ಚೆಯ ನಡುವೆ ಬಂದುಹೋಯಿತು. ಆದರೆ ಕಾರ್ಯಸಾಧನೆಯ ದೃಷ್ಟಿಯಿಂದ ಅವು ಯಾವುದಕ್ಕೂ ಸಮುದಾಯದ ಬೆಂಬಲ ದೊರಕಲಿಲ್ಲ. ಈ ಚರ್ಚೆಯ ನಡುವೆ ಸ್ಕಾಟ್ ಫಾಲ್‌ಮನ್ ಎಂಬ ವಿಜ್ಞಾನಿ ಸರಳವಾಗಿ ಬಳಸಬಹುದಾದ ಚಿಹ್ನೆಗಳ ಹುಡುಕಾಟದಲ್ಲಿ ತೊಡಗಿದ್ದರು. ೧೯೮೨ರ ಸೆಪ್ಟೆಂಬರ್ ೧೯ರಂದು ಆ ಸಮುದಾಯಕ್ಕೆ ಕಳುಹಿಸಿದ ಸಂದೇಶದಲ್ಲಿ ಅವರು ತಮಾಷೆಯ ಸಂದೇಶಗಳಿಗೆ :-) ಎಂದು, ಗಂಭೀರ ಸಂದೇಶಗಳಿಗೆ :-( ಎಂದು ಬಳಸಬಹುದಲ್ಲ ಎಂದು ಸೂಚಿಸಿದರು.

ಆಮೇಲೆ ನಡೆದದ್ದೆಲ್ಲ ಇತಿಹಾಸ. ಫಾಲ್‌ಮನ್ ಸೂಚಿಸಿದ ಈ ಚಿಹ್ನೆಗಳು ಕೆಲವೇ ತಿಂಗಳುಗಳಲ್ಲಿ ಜನಪ್ರಿಯವಾದವು; ಅಷ್ಟೇ ಅಲ್ಲ, ಅವರ ಐಡಿಯಾ ಬಹುಬೇಗನೆ ಬೆಳೆದು ಇನ್ನೂ ಹಲವಾರು ಎಮೋಟೈಕನ್‌ಗಳೂ ಸೃಷ್ಟಿಯಾದವು. ಗಹಗಹಿಸಿ ನಗುವ ಮುಖ, ಆಶ್ಚರ್ಯದಿಂದ ಬಾಯಿತೆರೆದಿರುವ ಮುಖ, ಕಿಲಾಡಿತನದಿಂದ ಕಣ್ಣುಹೊಡಿಯುತ್ತಿರುವ ಮುಖ, ಕನ್ನಡಕ ಧರಿಸಿ ಸ್ಮಾರ್ಟ್ ಆಗಿರುವ ಮುಖ, ಮೀಸೆಧಾರಿಯ ನಗುಮುಖ - ಈಗ ಎಮೋಟೈಕನ್ ಲೋಕದಲ್ಲಿ ಇವೆಲ್ಲವೂ ಇವೆ. ಕೆಲವು ಇಮೇಲ್ ಹಾಗೂ ಚಾಟ್ ಸೇವೆಗಳಲ್ಲಂತೂ ನಾವು ಎಮೋಟೈಕನ್ ಟೈಪಿಸುತ್ತಿದ್ದಂತೆ ಅದು ತಾನೇತಾನಾಗಿ ಚಿತ್ರರೂಪಕ್ಕೆ ಬದಲಾಗುವುದು, ಅನಿಮೇಶನ್ ಇಫೆಕ್ಟ್ ಪಡೆದುಕೊಳ್ಳುವುದು ಮುಂತಾದ ವೈಶಿಷ್ಟ್ಯಗಳೂ ಇವೆ.

ಹೇಗೋ, ಕಳೆದ ಮೂರೂಚಿಲ್ಲರೆ ದಶಕಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಮೋಟೈಕನ್‌ಗಳು ನಮ್ಮ ಬದುಕಿನ ಭಾಗವಾಗಿಹೋಗಿರುವುದಂತೂ ನಿಜವೇ. ಇಷ್ಟಕ್ಕೂ ನಗಲು, ಅಳಲು ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಡವಲ್ಲ, ಹಾಗಾದರೆ ಆಗೊಮ್ಮೆ ಈಗೊಮ್ಮೆ :-) ಎನ್ನಲೇನು ಅಡ್ಡಿ? ಪರದೆಯ ಜೊತೆಗೆ ಆಗ ಮುಖದಲ್ಲೂ ಒಂದು ನಗು ಅರಳಿದರೆ, ಆಹಾ, ಬೇರೇನೂ ಬೇಡವೇ ಬೇಡ!

ಡಿಸೆಂಬರ್ ೬, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge