ಶುಕ್ರವಾರ, ನವೆಂಬರ್ 29, 2013

ಕಂಪ್ಯೂಟರ್ ಭಾಷೆ: ಭಾಗ ೩

ಟಿ. ಜಿ. ಶ್ರೀನಿಧಿ

ಭಾಗ ೧ ಓದಲು ಇಲ್ಲಿ ಕ್ಲಿಕ್ ಮಾಡಿ
ಭಾಗ ೨ ಓದಲು ಇಲ್ಲಿ ಕ್ಲಿಕ್ ಮಾಡಿ

ಯಂತ್ರಭಾಷೆಯಲ್ಲಿ ಪ್ರೋಗ್ರಾಮಿಂಗ್ ಕಷ್ಟವೋ ಕಷ್ಟ. ಇನ್ನು ಅದಕ್ಕೆ ಪರ್ಯಾಯವೆಂದು ಕರೆಸಿಕೊಳ್ಳುವ ಅಸೆಂಬ್ಲಿ ಭಾಷೆಯಲ್ಲಿ ಪ್ರೋಗ್ರಾಮ್ ಬರೆಯುವ ಕೆಲಸವೂ ಸುಲಭವೇನಲ್ಲ. ಹಾಗಾದರೆ ಪ್ರೋಗ್ರಾಮಿಂಗ್ ಕೆಲಸವನ್ನು ಸುಲಭಮಾಡಿಕೊಳ್ಳುವುದು ಹೇಗೆ?

ಈ ಉದ್ದೇಶಕ್ಕಾಗಿಯೇ ತಜ್ಞರು 'ಹೈ ಲೆವೆಲ್', ಅಂದರೆ ಮೇಲುಸ್ತರದ ಪ್ರೋಗ್ರಾಮಿಂಗ್ ಭಾಷೆಗಳನ್ನು ರೂಪಿಸಿದ್ದಾರೆ. ನಾವೆಲ್ಲ ಆಗಿಂದಾಗ್ಗೆ ಕೇಳುವ ಸಿ, ಸಿ++, ಜಾವಾ ಇತ್ಯಾದಿಗಳೆಲ್ಲ ಈ ಬಗೆಯ ಭಾಷೆಗಳೇ.

ಯಂತ್ರಭಾಷೆ, ಅಸೆಂಬ್ಲಿ ಭಾಷೆಗಳಿಗೆಲ್ಲ ಹೋಲಿಸಿದರೆ ಬರೆಯಲು ಹಾಗೂ ಅರ್ಥಮಾಡಿಕೊಳ್ಳಲು ಬಹಳ ಸುಲಭವಾಗಿರುವುದು ಹೈ ಲೆವೆಲ್ ಭಾಷೆಯಲ್ಲಿ ಬರೆದ ಕ್ರಮವಿಧಿಗಳ (ಪ್ರೋಗ್ರಾಮ್) ಹೆಚ್ಚುಗಾರಿಕೆ. ಇಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಸಾಲುಸಾಲು ನಿರ್ದೇಶನಗಳನ್ನು ಬರೆಯಬೇಕಾದ ಅನಿವಾರ್ಯತೆ ಇರುವುದಿಲ್ಲ.
ಅಷ್ಟೇ ಅಲ್ಲ, ಯಾವುದೇ ಹೈ ಲೆವೆಲ್ ಭಾಷೆ ಬಳಸಿ ಒಂದು ಕಂಪ್ಯೂಟರಿಗಾಗಿ ಬರೆದ ಕ್ರಮವಿಧಿ ಇನ್ನೊಂದು ಕಂಪ್ಯೂಟರಿನಲ್ಲೂ ಕೆಲಸಮಾಡುವಂತೆ ಮಾಡುವುದು ಸುಲಭವೂ ಹೌದು. ಕ್ರಮವಿಧಿಗಳನ್ನು ಪರೀಕ್ಷಿಸುವಾಗಲೂ (ಟೆಸ್ಟಿಂಗ್) ಅಷ್ಟೆ, ಕ್ರಮವಿಧಿ ಮೇಲುಸ್ತರದ ಭಾಷೆಯಲ್ಲಿದ್ದರೆ ತಪ್ಪುಗಳನ್ನು ಪತ್ತೆಮಾಡುವುದು ಹಾಗೂ ಸರಿಪಡಿಸುವುದು ಸುಲಭವಾಗುತ್ತದೆ.

ಅಸೆಂಬ್ಲಿ ಭಾಷೆಯಲ್ಲಿ ಪ್ರೋಗ್ರಾಮ್ ಬರೆಯುವುದು, ಬರೆದಿರುವುದನ್ನು ಓದಿ ಅರ್ಥಮಾಡಿಕೊಳ್ಳುವುದು - ಇದೆಲ್ಲ ನಮಗೆ ಕಷ್ಟ ತಾನೆ? ಆದರೆ ಕಂಪ್ಯೂಟರಿನ ದೃಷ್ಟಿಯಲ್ಲಿ ನೋಡಿದರೆ ಅದಕ್ಕೆ ಅಸೆಂಬ್ಲಿ ಭಾಷೆಯನ್ನು ಅರ್ಥಮಾಡಿಕೊಳ್ಳುವುದೇ ಸುಲಭದ ಕೆಲಸ. ಅಸೆಂಬ್ಲಿ ಭಾಷೆ ಕಂಪ್ಯೂಟರಿಗೆ ಅಚ್ಚುಮೆಚ್ಚಿನದಾದ ಯಂತ್ರಭಾಷೆಗೆ ಹೆಚ್ಚು ಸಮೀಪದ್ದಾಗಿರುವುದೇ ಇದಕ್ಕೆ ಕಾರಣ. ಅಸೆಂಬ್ಲಿ ಭಾಷೆಯಲ್ಲಿ ಬರೆದದ್ದನ್ನು ಯಂತ್ರಭಾಷೆಗೆ ಬದಲಾಯಿಸಿಕೊಳ್ಳುವುದು ಥಟ್ ಅಂತ ಆಗುವ ಒಂದೇ ಹಂತದ ಕೆಲಸ. ಈ ಕೆಲಸಕ್ಕೆ ಅಸೆಂಬ್ಲರ್ ಎಂಬ ತಂತ್ರಾಂಶ ಬಳಕೆಯಾಗುತ್ತದೆ.

ಹಾಗಾದರೆ ಹೈ ಲೆವೆಲ್ ಭಾಷೆಗಳ ಕತೆಯೇನು ಎಂದು ನೀವು ಕೇಳಬಹುದು. ಹಾಗೆ ನೋಡಿದರೆ ಯಾವುದೇ ಹೈ ಲೆವೆಲ್ ಭಾಷೆಯಲ್ಲಿ ಬರೆದ ಕ್ರಮವಿಧಿ ಕಂಪ್ಯೂಟರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಇಂತಹ ಕ್ರಮವಿಧಿಯ ಭಾಷೆ ಯಂತ್ರಭಾಷೆಗಿಂತ ಹೆಚ್ಚಾಗಿ ಬಾಹ್ಯಪ್ರಪಂಚದ ಭಾಷೆಗಳನ್ನೇ ಹೋಲುವುದರಿಂದ ಅದನ್ನು ಯಂತ್ರಭಾಷೆಗೆ ಪರಿವರ್ತಿಸಿಕೊಳ್ಳಲು ಕಂಪೈಲರ್, ಇಂಟರ್‌ಪ್ರೆಟರ್ ಮುಂತಾದ ವಿಶೇಷ ತಂತ್ರಾಂಶಗಳ ನೆರವು ಬೇಕು. ಮೇಲುಸ್ತರದ (ಹೈ ಲೆವೆಲ್) ಭಾಷೆಯಲ್ಲಿ ಬರೆದ ಕ್ರಮವಿಧಿಯನ್ನು ಅರ್ಥಮಾಡಿಕೊಂಡು ಅದನ್ನು ಯಂತ್ರಭಾಷೆಗೆ ಪರಿವರ್ತಿಸುವುದು ಈ ತಂತ್ರಾಂಶಗಳ ಕೆಲಸ; ಗ್ರೀಕ್‌ನಲ್ಲೋ ಲ್ಯಾಟಿನ್ನಿನಲ್ಲೋ ಇರುವ ಪುಸ್ತಕವನ್ನು ಪಂಡಿತರೆಲ್ಲ ಸೇರಿ ನಮ್ಮ ಭಾಷೆಗೆ ಅನುವಾದಿಸಿದಂತೆ!

ಅಂದಹಾಗೆ ನಾವು ಹೇಳಬೇಕಾದ್ದನ್ನು ಕಂಪ್ಯೂಟರಿಗೆ ಅರ್ಥಮಾಡಿಸಲು ಈ ತಂತ್ರಾಂಶಗಳ ನೆರವು ದೊರಕುವುದರಿಂದ ಪ್ರೋಗ್ರಾಮಿಂಗ್ ಭಾಷೆಗಳು ಇಂಗ್ಲಿಷ್ ಲಿಪಿಯನ್ನೇ ಬಳಸಬೇಕೆಂಬ ನಿರ್ಬಂಧವೇನೂ ಇಲ್ಲ. ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡರೆ ಇಂಗ್ಲಿಷಿನಲ್ಲಿ ಪ್ರೋಗ್ರಾಮಿಂಗ್ ಮಾಡಿದಷ್ಟೇ ಸುಲಭವಾಗಿ ಕನ್ನಡದಲ್ಲೂ ಕ್ರಮವಿಧಿಗಳನ್ನು ರಚಿಸಬಹುದು.

ಚಿಕ್ಕ ಮಕ್ಕಳಿಗೆ ಪ್ರೋಗ್ರಾಮಿಂಗ್ ಕಲಿಸಲು ರೂಪಿಸಲಾದ 'ಲೋಗೋ' ಭಾಷೆಯನ್ನು ಕನ್ನಡಕ್ಕೆ ತಂದು ಕನ್ನಡದಲ್ಲೇ ಪ್ರೋಗ್ರಾಮಿಂಗ್ ಸಾಧ್ಯವಾಗಿಸಿರುವ ಡಾ. ಯು. ಬಿ. ಪವನಜರ ಪ್ರಯತ್ನ ಇಲ್ಲಿ ಗಮನಾರ್ಹ. ಕನ್ನಡ ಭಾಷೆಯನ್ನಷ್ಟೆ ಬಲ್ಲ ಮಕ್ಕಳು ಕೂಡ ಪ್ರೋಗ್ರಾಮಿಂಗ್ ಮಾಡಲು ಇದು ಸಹಾಯಮಾಡುತ್ತದೆ. ಡಿಜಿಟಲ್ ಎಂಪವರ್‌ಮೆಂಟ್ ಫೌಂಡೇಶನ್‌ನಿಂದ 'ಮಂಥನ್' ಪ್ರಶಸ್ತಿ ಪಡೆದಿರುವ 'ಕನ್ನಡ ಲೋಗೋ' ಅನ್ನು ವಿಶ್ವಕನ್ನಡ ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ನವೆಂಬರ್ ೨೯, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge