ಶುಕ್ರವಾರ, ನವೆಂಬರ್ 8, 2013

ಹಾರು ಕಾರು!

ಟಿ. ಜಿ. ಶ್ರೀನಿಧಿ


"ನನ್ನ ಮಾತು ನೆನಪಿಟ್ಟುಕೊಳ್ಳಿ, ವಿಮಾನ ಮತ್ತು ಮೋಟಾರುಕಾರುಗಳೆರಡೂ ಸೇರಿದಂತಹ ವಾಹನವೊಂದು ಬರಲಿದೆ. ಇದನ್ನು ಕೇಳಿ ನೀವು ನಗಬಹುದು, ಆದರೆ ಆ ವಾಹನ ಖಂಡಿತಾ ಬರಲಿದೆ!"

ಹೀಗೆಂದು ಹೇಳಿದ್ದು ಯಾರೋ ಅಂತಿಂಥ ವ್ಯಕ್ತಿಯಲ್ಲ. ಜನಸಾಮಾನ್ಯರೂ ಕಾರಿನ ಕನಸು ಕಾಣುವಂತೆ ಮಾಡಿದ ಮೊದಲ ವ್ಯಕ್ತಿ, ಹೆಸರಾಂತ ಉದ್ಯಮಿ ಹೆನ್ರಿ ಫೋರ್ಡ್ ಹೇಳಿದ ಮಾತುಗಳಿವು. ಹಾರುವ ಕಾರುಗಳ (ಫ್ಲೈಯಿಂಗ್ ಕಾರ್) ಬಗ್ಗೆ ಅವರು ಹಾಗೆಂದು ಹೇಳಿ ಇನ್ನೇನು ಮುಕ್ಕಾಲು ಶತಮಾನವಾಗುತ್ತ ಬಂತು.

ಈ ಸುದೀರ್ಘ ಅವಧಿಯಲ್ಲಿ ಮನುಷ್ಯ ಏನೇನನ್ನೆಲ್ಲ ಕಂಡುಹಿಡಿದಿದ್ದಾನೆ, ಎಷ್ಟೆಲ್ಲ ಅಸಾಧ್ಯಗಳನ್ನು ಸಾಧ್ಯವಾಗಿಸಿದ್ದಾನೆ. ಆದರೆ ವೈಯಕ್ತಿಕ ಉಪಯೋಗಕ್ಕೆ ಸುಲಭವಾಗಿ ಬಳಸಬಹುದಾದಂತಹ ಹಾರಾಡುವ ವಾಹನದ ಸೃಷ್ಟಿ ಮಾತ್ರ ಅವನಿಂದ ಈವರೆಗೂ ಸಾಧ್ಯವಾಗಿಲ್ಲ. ರಸ್ತೆಯ ಮೇಲಿನ ಸಂಚಾರದಲ್ಲಿ ಫೋರ್ಡ್ ಕಾರುಗಳು ತಂದ ಬದಲಾವಣೆಯಂತಹುದನ್ನು ಆಕಾಶಸಂಚಾರದಲ್ಲೂ ಯಾರಾದರೂ ತರಬಹುದೇನೋ ಎಂದು ಎಲ್ಲರೂ ಕಾಯುತ್ತಲೇ ಇದ್ದಾರೆ.

ಹಾಗೆಂದಮಾತ್ರಕ್ಕೆ ಈ ಕಲ್ಪನೆ ಇನ್ನೂ ಕಲ್ಪನೆಯಾಗಿಯೇ ಉಳಿದಿದೆ ಎಂದೇನೂ ಅರ್ಥವಲ್ಲ.
ಕಳೆದೊಂದು ಶತಮಾನದಲ್ಲಿ ಇಂತಹ ಹಲವಾರು ವಾಹನಗಳು ರೂಪುಗೊಂಡಿವೆ. ಇನ್ನೇನು ವ್ಯಾಪಕ ಬಳಕೆಗೆ ಬಂದೇಬಿಡುವ ಮಟ್ಟದ ಭರವಸೆ ಮೂಡಿಸಿದವೂ ಕಡಿಮೆ ಸಂಖ್ಯೆಯಲ್ಲೇನಿಲ್ಲ.

ಗಮನಾರ್ಹ ಎನ್ನಬಹುದಾದ ಮೊದಲ ಹಾರು-ಕಾರಿನ ಸೃಷ್ಟಿ ೧೯೧೭ರಷ್ಟು ಹಿಂದೆಯೇ ಆಗಿತ್ತು. 'ಆಟೋಪ್ಲೇನ್' ಎಂಬ ಹೆಸರಿನ ಈ ವಾಹನವನ್ನು ರೂಪಿಸಿದ ಗ್ಲೆನ್ ಕರ್ಟಿಸ್‌ನನ್ನು ಹಾರುವ ಕಾರಿನ ಪಿತಾಮಹ ಎಂದು ಕರೆಯಲಾಗುತ್ತದೆ.

ಅಮೆರಿಕಾದ ರಾಬರ್ಟ್ ಫುಲ್ಟನ್ ಎಂಬಾತ ೧೯೪೦ರ ಸುಮಾರಿಗೆ 'ಏರ್‌ಫೀಬಿಯನ್' ಎಂಬ ಹಾರುಕಾರನ್ನು ರೂಪಿಸಿದ್ದಷ್ಟೇ ಅಲ್ಲ, ಅಮೆರಿಕಾ ಸರಕಾರದ ಮಾನ್ಯತೆಯನ್ನೂ ಪಡೆದುಕೊಂಡಿದ್ದ. ಹಾಗೆಯೇ ೧೯೪೯ರಲ್ಲಿ ಅಮೆರಿಕಾದ ಮೌಲ್ಟನ್ ಟೇಲರ್ ಎಂಬಾತ ಕೂಡ 'ಏರೋಕಾರ್' ಎಂಬ ಹಾರುಕಾರನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದ.

ಹಾಗೆ ನೋಡಿದರೆ ಪರಿಪೂರ್ಣ ಹಾರುವ ಕಾರುಗಳ ನಿರ್ಮಾಣದ ನಿಟ್ಟಿನಲ್ಲಿ ಇಂದಿಗೂ ಪ್ರಯತ್ನಗಳು ನಡೆಯುತ್ತಿವೆ. ನಾನು-ನೀವು ಎಲ್ಲರೂ ಕೊಳ್ಳಬಹುದಾದ ಹಾರುಕಾರು ಇನ್ನೇನು ಮಾರುಕಟ್ಟೆಗೆ ಬಂದೇಬಿಟ್ಟಿತು ಎನ್ನುವಂತಹ ಹೇಳಿಕೆಗಳು, ಹಾಗಾಗಿಯೇ, ಇನ್ನೂ ಕೇಳಿಬರುತ್ತಲೇ ಇವೆ.

ಉದಾಹರಣೆಗೆ ಹೇಳುವುದಾದರೆ ಟೆರ್ರಾಫ್ಯೂಜಿಯಾ ಎಂಬ ಸಂಸ್ಥೆ ನಿರ್ಮಿಸುತ್ತಿರುವ 'ಟ್ರಾನ್ಸಿಷನ್' ಎಂಬ 'ರೋಡಬಲ್ ಏರ್‌ಕ್ರಾಫ್ಟ್', ಅಂದರೆ ರಸ್ತೆಯಲ್ಲೂ ಹೋಗಬಹುದಾದ ವಿಮಾನವಂತೂ ಭಾರೀ ಕುತೂಹಲ ಮೂಡಿಸಿದೆ. ಇದನ್ನು ಸಾಮಾನ್ಯ ಕಾರಿನಂತೆಯೇ ವಿಮಾನ ನಿಲ್ದಾಣದವರೆಗೂ ಚಲಾಯಿಸಿಕೊಂಡು ಹೋಗಿ ಅಲ್ಲಿ ವಿಮಾನವಾಗಿ ಪರಿವರ್ತಿಸಿಕೊಂಡು ಹಾರಿಹೋಗಬಹುದಂತೆ; ಗಮ್ಯಸ್ಥಾನ ತಲುಪಿದ ಮೇಲೆ ಮೂವತ್ತು ಸೆಕೆಂಡುಗಳಲ್ಲೇ ರೆಕ್ಕೆಗಳನ್ನೆಲ್ಲ ಮಡಿಸಿ ಮತ್ತೆ ಕಾರಿನಂತೆ ಬಳಸುವುದೂ ಸಾಧ್ಯವಂತೆ. ಇದು ಮುಂದಿನ ಕೆಲವೇ ವರ್ಷಗಳಲ್ಲಿ, ಸುಮಾರು ಒಂದೂಮುಕ್ಕಾಲು ಕೋಟಿ ರೂಪಾಯಿಯ ಬೆಲೆಯೊಡನೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಸುಮಾರು ನೂರು ಜನ ಈಗಾಗಲೇ ಇದನ್ನು ಬುಕ್ ಮಾಡಿಬಿಟ್ಟಿದ್ದಾರಂತೆ!

ಇಂತಹ ವಾಹನಗಳ ಬಗ್ಗೆ ಅದೆಷ್ಟನೆಯ ಬಾರಿಯೇ ಕುತೂಹಲ ಹುಟ್ಟಿಸುವ ಸರದಿ ೨೦೧೩ರ ಸೆಪ್ಟೆಂಬರಿನಲ್ಲಿ ಪ್ರದರ್ಶನ ಹಾರಾಟ ಕೈಗೊಂಡ 'ಏರೋಮೊಬಿಲ್' ಎನ್ನುವ ಇನ್ನೊಂದು ಹಾರುಕಾರಿನದು. ಇದರ ಸುಧಾರಿತ ಆವೃತ್ತಿ ಮುಂದಿನ ವರ್ಷದಷ್ಟು (೨೦೧೪) ಶೀಘ್ರವಾಗಿಯೇ ಸಿದ್ಧವಾಗುವ ನಿರೀಕ್ಷೆಯಿದೆ.

ಇಷ್ಟೆಲ್ಲ ಪ್ರಯತ್ನಗಳು ನಡೆದಿದ್ದರೂ ಜನಸಾಮಾನ್ಯರ ಬಳಕೆಗೆ ಸುಲಭವಾಗಿ ಲಭ್ಯವಾಗುವಂತಹ ಹಾರುವ ಕಾರು ಮಾತ್ರ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಹಾರುವ ಕಾರು ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಕಾಯುತ್ತ ಕುಳಿತವರು ಕುಳಿತೇ ಇದ್ದಾರೆ. ಕಳೆದ ದಶಕಗಳಲ್ಲಿ ತಂತ್ರಜ್ಞಾನದ ಪ್ರಪಂಚ ಸಾಲುಸಾಲು ಅಸಾಧ್ಯಗಳನ್ನು ಸಾಧ್ಯವಾಗಿಸಿರುವ ರೀತಿಯನ್ನು ನೋಡಿದರೆ ಈ ಕಾಯುವಿಕೆಗೆ ನಾವೂ ಸೇರಿದರೆ ತಪ್ಪಾಗಲಿಕ್ಕಿಲ್ಲವೇನೋ!

ನವೆಂಬರ್ ೮, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge