ಶುಕ್ರವಾರ, ನವೆಂಬರ್ 1, 2013

ಮುಕ್ತ ಮುಕ್ತ ಶಿಕ್ಷಣ: ಓಪನ್ ಕೋರ್ಸ್‌ವೇರ್

ಟಿ. ಜಿ. ಶ್ರೀನಿಧಿ

ಸಾಧ್ಯವಾದಷ್ಟೂ ಒಳ್ಳೆಯ ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಎಲ್ಲರೂ ವಿಶ್ವವಿಖ್ಯಾತ ವಿದ್ಯಾಸಂಸ್ಥೆಗಳನ್ನೇ ಸೇರಲು ಆಗುವುದಿಲ್ಲವಲ್ಲ, ಹಾಗಾಗಿ ಶಿಕ್ಷಣದ ಗುಣಮಟ್ಟದ ಬಗ್ಗೆ ಅಸಮಾಧಾನ ಆಗಿಂದಾಗ್ಗೆ ಕೇಳಿಬರುತ್ತಲೇ ಇರುತ್ತದೆ.

ಇದರ ಬದಲಿಗೆ ದೊಡ್ಡದೊಡ್ಡ ವಿದ್ಯಾಸಂಸ್ಥೆಗಳೇ ನಮ್ಮ ಬಳಿ ಬರುವಂತಿದ್ದರೆ? ವಿಶ್ವವ್ಯಾಪಿ ಜಾಲ ಈ ರಮ್ಯ ಕಲ್ಪನೆಯನ್ನೂ ಸಾಕಾರಗೊಳಿಸಿದೆ. ವಿಶ್ವದ ಅನೇಕ ಹೆಸರಾಂತ ವಿದ್ಯಾಸಂಸ್ಥೆಗಳು ತಮ್ಮಲ್ಲಿ ಬಳಸುವ ಪಠ್ಯಸಾಮಗ್ರಿಯನ್ನು ಜಾಲತಾಣಗಳ ಮೂಲಕ ಮುಕ್ತವಾಗಿ ತೆರೆದಿಟ್ಟು ಎಲ್ಲರಿಗೂ ಸುಲಭವಾಗಿ ದೊರಕುವಂತೆ ಮಾಡಿವೆ.

ಹೀಗೆ ಸಾರ್ವಜನಿಕ ಬಳಕೆಗಾಗಿ ಸಂಪೂರ್ಣ ಮುಕ್ತವಾಗಿ ದೊರಕುವ ಪಠ್ಯಸಾಮಗ್ರಿಯನ್ನು ಓಪನ್ ಕೋರ್ಸ್‌ವೇರ್ ಎಂದು ಕರೆಯುತ್ತಾರೆ; ಯಾವುದೇ ಶುಲ್ಕವಿಲ್ಲದೆ ಮಾಹಿತಿಯ ಮುಕ್ತ ಪ್ರಸಾರ ಸಾಧ್ಯವಾಗಬೇಕು ಎನ್ನುವುದೇ ಈ ಪರಿಕಲ್ಪನೆಯ ಮೂಲ ಉದ್ದೇಶ. ತಂತ್ರಾಂಶಗಳು ಹಾಗೂ ಅದರ ಸೋರ್ಸ್ ಕೋಡ್ (ಆಕರ ಸಂಕೇತ) ಎಲ್ಲರಿಗೂ ಉಚಿತವಾಗಿ-ಮುಕ್ತವಾಗಿ ದೊರಕುವಂತಾಗಬೇಕು ಎಂಬ ಉದ್ದೇಶದೊಡನೆ ಸಾಫ್ಟ್‌ವೇರ್ ರಂಗದಲ್ಲಿ ಚಾಲ್ತಿಯಲ್ಲಿದೆಯಲ್ಲ, ಓಪನ್‌ಸೋರ್ಸ್ ಪರಿಕಲ್ಪನೆ, ಇದೂ ಹಾಗೆಯೇ.

ಓಪನ್‌ಕೋರ್ಸ್‌ವೇರ್ ಇತಿಹಾಸ ಪ್ರಾರಂಭವಾದದ್ದು ೧೯೯೯ರಲ್ಲಿ, ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾನಿಲಯ ಉಪನ್ಯಾಸಗಳ ವೀಡಿಯೋಗಳನ್ನು ಅಂತರಜಾಲದ ಮೂಲಕ ಮುಕ್ತವಾಗಿ ತೆರೆದಿಟ್ಟಾಗ ಎಂದು ವಿಕಿಪೀಡಿಯಾ ಹೇಳುತ್ತದೆ. ಆದರೆ ಈ ಪರಿಕಲ್ಪನೆಗೆ ದೊಡ್ಡಪ್ರಮಾಣದ ಪ್ರಚಾರ ದೊರೆತದ್ದು ಈಗ ಹತ್ತು ವರ್ಷಗಳ ಹಿಂದೆ, ಅಮೆರಿಕಾದ ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ತನ್ನ ಓಪನ್ ಕೋರ್ಸ್‌ವೇರ್ ಯೋಜನೆಯನ್ನು ಪರಿಚಯಿಸಿದಾಗ.

ಇದೀಗ ದಶಮಾನೋತ್ಸವ ಆಚರಿಸುತ್ತಿರುವ ಈ ಯೋಜನೆಯ ಮೂಲಕ ಆ ಸಂಸ್ಥೆ ಎರಡು ಸಾವಿರಕ್ಕೂ ಹೆಚ್ಚಿನ ಕೋರ್ಸುಗಳಿಗೆ ಸಂಬಂಧಪಟ್ಟ ಪಠ್ಯಸಾಮಗ್ರಿಯನ್ನು ತನ್ನ ಜಾಲತಾಣದ ಮೂಲಕ ಉಚಿತವಾಗಿ ನೀಡುತ್ತಿದೆ. ಹತ್ತು ವರ್ಷಗಳ ಅವಧಿಯಲ್ಲಿ ಸುಮಾರು ೧೭ ಕೋಟಿ ಜನರು ಎಂಐಟಿ ಓಪನ್ ಕೋರ್ಸ್‌ವೇರ್ ಪಠ್ಯಸಾಮಗ್ರಿಯೊಡನೆ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.

ಎಂಐಟಿಯ ಈ ಪ್ರಯತ್ನದ ಯಶಸ್ಸಿನಿಂದ ಉತ್ತೇಜಿತರಾದ ಹಲವಾರು ವಿದ್ಯಾಸಂಸ್ಥೆಗಳು ತಮ್ಮ ಪಠ್ಯಸಾಮಗ್ರಿಯನ್ನೂ ವಿಶ್ವವ್ಯಾಪಿ ಜಾಲದ ಮೂಲಕ ಮುಕ್ತವಾಗಿ ಒದಗಿಸುತ್ತಿವೆ. ಗೂಗಲ್‌ನಲ್ಲಿ ಓಪನ್ ಕೋರ್ಸ್‌ವೇರ್ ಎಂದು ಹುಡುಕಿದ ತಕ್ಷಣ ಕಾಣಿಸಿಕೊಳ್ಳುವ ಲಕ್ಷಗಟ್ಟಲೆ ಫಲಿತಾಂಶಗಳ ಪೈಕಿ ಹಲವಾರು ಪ್ರಮುಖ ವಿಶ್ವವಿದ್ಯಾನಿಲಯಗಳ ತಾಣಗಳು ಅಗ್ರಗಣ್ಯವಾಗಿರುವುದನ್ನು ನಾವೇ ನೋಡಬಹುದು.

ತನ್ನ ಓಪನ್ ಲರ್ನಿಂಗ್ ತೊಡಗುವಿಕೆಯ ಮೂಲಕ ಹಾರ್ವರ್ಡ್ ವಿವಿ ಕೂಡ ಹಾರ್ವರ್ಡ್ ಎಕ್ಸ್‌ಟೆನ್ಷನ್ ಸ್ಕೂಲ್ ಹೆಸರಿನಲ್ಲಿ ಹಲವು ಕೋರ್ಸುಗಳನ್ನು ವಿಶ್ವವ್ಯಾಪಿ ಜಾಲದ ಮೂಲಕ ಉಚಿತವಾಗಿ ನೀಡುತ್ತಿದೆ. ವಿಶ್ವವ್ಯಾಪಿ ಜಾಲದ ಮೂಲಕ ನಮ್ಮ ಅನುಕೂಲದ ಸಮಯದಲ್ಲಿ ನಮಗಿಷ್ಟವಾದ ವಿಷಯವನ್ನು ಅಧ್ಯಯನಮಾಡಲು ನೆರವಾಗುವ ಎಡ್-ಎಕ್ಸ್ ಎಂಬ ಯೋಜನೆಯೂ ಎಂಐಟಿ, ಹಾರ್ವರ್ಡ್ ಹಾಗೂ ಇನ್ನೂ ಹಲವು ವಿವಿಗಳ ಸಹಯೋಗದಲ್ಲಿ ಪ್ರಾರಂಭವಾಗಿದೆ. 'ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್'ಗಳೆಂದು ಎಂದು ಕರೆಸಿಕೊಂಡಿರುವ ಇಂತಹ ಇನ್ನೂ ಹಲವಾರು ಪ್ರಯತ್ನಗಳು ಈಗಾಗಲೇ ಸುದ್ದಿಯಲ್ಲಿವೆ.

ಅಷ್ಟೇ ಅಲ್ಲ, ಹೀಗೆ ಮುಕ್ತ-ಉಚಿತ ಶಿಕ್ಷಣದ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನೂರಾರು ವಿದ್ಯಾಸಂಸ್ಥೆಗಳು ಓಪನ್‌ಕೋರ್ಸ್‌ವೇರ್ ಕನ್ಸಾರ್ಶಿಯಂ ಎಂಬ ತಮ್ಮದೇ ಸಂಸ್ಥೆಯೊಂದನ್ನೂ ರೂಪಿಸಿಕೊಂಡಿವೆ, ತಮ್ಮೆಲ್ಲ ಪ್ರಯೋಗಗಳ ಮೂಲಕ ಶಿಕ್ಷಣ ಕ್ಷೇತ್ರದ ಭವಿಷ್ಯವನ್ನೇ ಬದಲಿಸುವ ಪ್ರಯತ್ನದಲ್ಲಿವೆ!

[ocwconsortium.org, ocw.mit.edu, coursera.org, edx.org ಮೊದಲಾದವು ಈ ನಿಟ್ಟಿನಲ್ಲಿ ಭೇಟಿಕೊಡಬಹುದಾದ ಕೆಲ ಉಪಯುಕ್ತ ಜಾಲತಾಣಗಳು]

ನವೆಂಬರ್ ೧, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge