ಮಂಗಳವಾರ, ಡಿಸೆಂಬರ್ 24, 2013

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು

ಡಿಸೆಂಬರ್ ೨೧, ೨೦೧೩ರಂದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ೨೦೧೩ರ 'ಕನ್ನಡ ಮತ್ತು ಅವಕಾಶ' ಗೋಷ್ಠಿಯಲ್ಲಿ ಡಾ. ಯು. ಬಿ. ಪವನಜ ಮಾಡಿದ ಭಾಷಣದ ಪೂರ್ಣಪಾಠ.

ಡಾ| ಯು. ಬಿ. ಪವನಜ

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ.

ಕೆ.ಪಿ. ರಾವ್ ಮತ್ತು ಅವರ ಸೇಡಿಯಾಪು ತಂತ್ರಾಂಶ ಕನ್ನಡ ಭಾಷೆ ಮಾತ್ರವಲ್ಲ, ಸಮಗ್ರ ಭಾರತೀಯ ಭಾಷೆಗಳನ್ನೇ ಗಣಕದಲ್ಲಿ ಅಳವಡಿಸುವ ವಿಷಯದಲ್ಲಿ ಎಲ್ಲರಿಂದ ಮೊದಲು ಆಲೋಚಿಸಿ ಕಾರ್ಯಗತರಾದವರು ನಮ್ಮ ಕನ್ನಡಿಗರೇ ಆದ ಶ್ರೀ ಕೆ. ಪಿ. ರಾವ್ ಅವರು. ೭೦ರ ದಶಕದಲ್ಲಿ ಅವರು ಮುಂಬಯಿಯ ಟಾಟಾ ಪ್ರೆಸ್‌ನಲ್ಲಿ ತಂತ್ರಜ್ಞರಾಗಿದ್ದಾಗ ಪ್ರಪ್ರಥಮ ಬಾರಿಗೆ ಫೋಟೋಟೈಪ್‌ಸೆಟ್ಟಿಂಗ್ ಯಂತ್ರದಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವ ಕೆಲಸವನ್ನು ಪ್ರಾರಂಭಿಸಿದರು. ಇವರು ಆ ಕಾಲಕ್ಕೆ ಲಭ್ಯವಿದ್ದ ಸೀಮಿತ ತಂತ್ರಜ್ಞಾನಗಳನ್ನೇ ಬಳಸಿ ಸುಂದರವಾದ ಕಂಪ್ಯೂಟರ್ ಫಾಂಟ್‌ಗಳನ್ನು (ಅಕ್ಷರಶೈಲಿಗಳು) ಕನ್ನಡ ಮತ್ತು ಇತರೆ ಭಾಷೆಗಳಿಗೆ ನಿರ್ಮಿಸಿದರು. ಅಂತಹ ಕನ್ನಡ ಲಿಪಿಯ ಫಾಂಟ್‌ನ್ನು ಸುಲಭವಾಗಿ ಕಂಪ್ಯೂಟರ್‌ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ (ಕೀಬೋರ್ಡ್) ವಿನ್ಯಾಸವನ್ನು ರಚಿಸಿದ ಕೀರ್ತಿ ಶ್ರೀ ಕೆ.ಪಿ ರಾವ್‌ರವರಿಗೆ ಸಲ್ಲುತ್ತದೆ. ಭಾರತೀಯ ಭಾಷೆಗಳಿಗೆ ಮೊದಲ ಬಾರಿಗೆ ಧ್ವನ್ಯಾತ್ಮಕ ಕೀಲಿಮಣೆಯ ವಿನ್ಯಾಸ ಮಾಡಿದವರು ಇವರೇ.
ಇಂಗ್ಲೀಷ್ ಭಾಷೆಯ ೨೬ ಅಕ್ಷರಗಳನ್ನು ಮಾತ್ರವೇ ಬಳಸಿ ಕನ್ನಡದ ಎಲ್ಲ ಅಕ್ಷರಗಳನ್ನು ಊಡಿಸುವಂತೆ ಅವರು ತಮ್ಮ ಕೀಲಿಮಣೆಯ ವಿನ್ಯಾಸ ರೂಪಿಸಿದರು. ಇದನ್ನೇ ಅಲ್ಪ ಸ್ವಲ್ಪ ಬದಲಾಯಿಸಿ ಕರ್ನಾಟಕ ಸರಕಾರವು ತನ್ನ ಅಧಿಕೃತ ವಿನ್ಯಾಸವೆಂದು ಘೋಷಿಸಿದೆ. ಇದುವೇ "ನುಡಿ" ತಂತ್ರಾಂಶದಲ್ಲಿ (ಸಾಫ್ಟ್‌ವೇರ್) ಅಳವಡಿಸಲಾಗಿರುವ ಕೀಲಿಮಣೆಯ ವಿನ್ಯಾಸ. ದುರದೃಷ್ಟಕ್ಕೆ ಈ ವಿನ್ಯಾಸವನ್ನು ಎಲ್ಲರೂ ಕನ್ನಡ ಗಣಕ ಪರಿಷತ್ (ಕಗಪ) ವಿನ್ಯಾಸ ಎಂದೇ ಕರೆಯುತ್ತಿದ್ದಾರೆ. ಅವರು "ಸೇಡಿಯಾಪು" ಹೆಸರಿನ ಡಾಸ್‌ನಲ್ಲಿ ಕೆಲಸ ಮಾಡುವ ತಂತ್ರಾಂಶವನ್ನೂ ೮೦ರ ದಶಕದ ಆರಂಭದಲ್ಲೇ ತಯಾರಿಸಿ ಉಚಿತವಾಗಿ ಹಂಚಿದ್ದರು. ಕೆ.ಪಿ.ರಾವ್ ಅವರಿಗೆ ನುಡಿಸಿರಿ ಪ್ರಶಸ್ತಿ ನೀಡಿ ಆಳ್ವಾಸ್ ನುಡಿಸಿರಿ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ (೨೦೦೯). ಕನ್ನಡ ವಿಶ್ವವಿದ್ಯಾಲಯ ಅವರಿಗೆ ನಾಡೋಜ ಪ್ರಶಸ್ತಿ ನೀಡಿದೆ (೨೦೧೩). ಕೊನೆಗೂ ಕರ್ನಾಟಕ ಸರಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ (೨೦೧೩).

ಕನ್ನಡದ ಅಕ್ಷರಶೈಲಿ ಮತ್ತು ಕೀಲಿಮಣೆಗಳು ಗಣಕದಲ್ಲಿ ಕನ್ನಡದ ಬಳಕೆಗೆ ಕನ್ನಡದ ಅಕ್ಷರಶೈಲಿಗಳು ಬೇಕು. ಇದನ್ನು ಗಣಕದ ಪರಿಭಾಷೆಯಲ್ಲಿ ಫಾಂಟ್ ಎನ್ನುತ್ತಾರೆ. ಅಕ್ಷರಶೈಲಿಯೊಂದಿದ್ದರೆ ಆಗಲಿಲ್ಲ. ಇದಕ್ಕೊಂದು ಕೀಲಿಮಣೆಯ ತಂತ್ರಾಂಶ ಬೇಕು. ಉದಾಹರಣೆಗೆ ಇಂಗ್ಲೀಷಿನಲ್ಲಿ "k" ಎಂದು ಬರೆದಿರುವ ಕೀಲಿಯನ್ನು ಒತ್ತಿದರೆ ಗಣಕಕ್ಕೆ ಕನ್ನಡದ "ಕ" ಎಂಬ ಅಕ್ಷರದ ಸಂಕೇತವನ್ನು ಈ ತಂತ್ರಾಂಶ ಕಳುಹಿಸುತ್ತದೆ. ಸುಮಾರು ಎರಡೂವರೆ ದಶಕದ ಹಿಂದೆ ಹಲವು ಅಕ್ಷರಶೈಲಿ ಮತ್ತು ಕೀಲಿಮಣೆಯ ವಾಣಿಜ್ಯಕ ತಂತ್ರಾಂಶಗಳು ತಯಾರಾದವು. ಕೇಂದ್ರ ಸರಕಾರದ ಸಿ-ಡಾಕ್‌ನವರು ಮೈಕ್ರೋಸಾಫ್ಟ್ ಡಾಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಅಳವಡಿಸಿದರು. ಇದನ್ನು ಬಳಸಲು ಗಣಕದೊಳಗೆ ಒಂದು ಹಾರ್ಡ್‌ವೇರ್ ಕಾರ್ಡನ್ನು ಸೇರಿಸಬೇಕಾಗಿತ್ತು. ಹಲವು ವರ್ಷಗಳ ನಂತರ ಅವರು ಇದರ ವಿಂಡೋಸ್ ಆವೃತ್ತಿಯನ್ನು ತಯಾರಿಸಿದರು. ಇದನ್ನು ಬಳಸಲು ಹಾರ್ಡ್‌ವೇರ್ ಕಾರ್ಡಿನ ಅಗತ್ಯವಿಲ್ಲ. ಎಂಬತ್ತರ ದಶಕದ ಕೊನೆಯಲ್ಲಿ ಶ್ರೀಲಿಪಿ, ಆಕೃತಿ, ಶಬ್ದರತ್ನ, ವಿನ್‌ಕೀ, ಇತ್ಯಾದಿ ಹಲವು ಖಾಸಗಿ ಕಂಪೆನಿಗಳು ಕನ್ನಡದ ಅಕ್ಷರಶೈಲಿ ಮತ್ತು ಕೀಲಿಮಣೆಯ ತಂತ್ರಾಂಶಗಳನ್ನು ತಯಾರಿಸಿ ಮಾರಲು ಪ್ರಾರಂಭಿಸಿದರು. ಈ ಎಲ್ಲ ತಂತ್ರಾಂಶಗಳು ಬಳಸುತ್ತಿರುವುದು ಕೆ. ಪಿ. ರಾವ್ ಅವರು ಸಂಶೋಧಿಸಿದ ಧ್ವನ್ಯಾತ್ಮಕ ವಿಧಾನದ ಕೀಲಿಮಣೆಗಳ ವಿನ್ಯಾಸವನ್ನೇ. ಆಯಾ ತಂತ್ರಾಂಶಗಳು ಕೀಲಿಗಳ ಸ್ಥಾನದಲ್ಲಿ ಬದಲಾವಣೆಯನ್ನು ಮಾಡಿಕೊಂಡಿರಬಹುದು, ಆದರೆ ಕೆಲಸ ಮಾಡುವ ಮೂಲಸೂತ್ರ ಮಾತ್ರ ಒಂದೇ.

ಅನಿವಾಸಿಗಳಿಂದ ಕನ್ನಡಕ್ಕೆ ಕೊಡುಗೆ ಅಮೇರಿಕಾದಲ್ಲಿ ಕನ್ನಡ ಚಟುವಟಿಕೆಗಳನ್ನು ಹುಟ್ಟುಹಾಕಿ ಬೆಳಸಲು ಕಾರಣೀಭೂತರಾದ ಶಿಕಾರಿಪುರ ಹರಿಹರೇಶ್ವರ ಅವರು "ಅಮೆರಿಕನ್ನಡ" ಎಂಬ ಪತ್ರಿಕೆಯನ್ನು ಸೃಷ್ಟಿಸಿ ನಡೆಸಿಕೊಂಡು ಬರುತ್ತಿದ್ದರು. ಅವರು ಈ ಪತ್ರಿಕೆ ಮುದ್ರಿಸಲು ಕಸ್ತೂರಿ ರಂಗಾಚಾರ್ ಅವರು ತಯಾರಿಸಿದ "ಕಸ್ತೂರಿ" ಎಂಬ ತಂತ್ರಾಂಶವನ್ನು ಉಪಯೋಗಿಸಿದರು. ಸುಮಾರು ಅದೇ ಕಾಲದಲ್ಲಿ ಅಮೇರಿಕಾದಲ್ಲೇ ನೆಲೆಸಿದ್ದ ವಿಶ್ವೇಶ್ವರ ದೀಕ್ಷಿತ್ ಅವರೂ ಒಂದು ಕನ್ನಡ ತಂತ್ರಾಂಶವನ್ನು ತಯಾರಿಸಿದ್ದರು (೧೯೮೪-೮೫). ಹಲವು ವರ್ಷಗಳ ನಂತರ (೧೯೯೬-೯೭) ಜಗದೀಶ್ ಮತ್ತು ವೆಂಕಟೇಶ್ ಎಂಬ ಉತ್ಸಾಹಿಗಳು ಯುನಿಕ್ಸ್ ಮತ್ತು ಇತರ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕೆಲಸ ಮಾಡಬಲ್ಲ "ಕಲೆ" ಎಂಬ ತಂತ್ರಾಂಶವನ್ನು ತಯಾರಿಸಿದ್ದರು. ಇದು ವೈಜ್ಞಾನಿಕ ಲೇಖನ ತಯಾರಿಸಲು ಬಳಸುತ್ತಿದ್ದ ಟೆಕ್‌ನ್ನು (TeX) ಉಪಯೋಗಿಸಿ ಇಂಗ್ಲೀಷ್ ಲಿಪಿಯಲ್ಲಿ ಬರೆದುದನ್ನು ಪೋಸ್ಟ್‌ಸ್ಕ್ರಿಪ್ಟ್ ಕಡತವನ್ನಾಗಿಸಿ ಮುದ್ರಿಸಿ ಕೊಡುತ್ತಿತ್ತು. ಕೆಲವು ವಿಜ್ಞಾನದ ವಿದ್ಯಾರ್ಥಿಗಳನ್ನು ಬಿಟ್ಟರೆ ಇತರರು ಇದನ್ನು ಬಳಸಿದ್ದು ಗೊತ್ತಿಲ್ಲ. ಇತ್ತೀಚಿಗೆ ತುಂಬ ಜನಪ್ರಿಯವಾಗಿರುವ ಕನ್ನಡ ತಂತ್ರಾಂಶ "ಬರಹ". ಇದನ್ನು ತಯಾರಿಸಿದವರು ಅಮೇರಿಕ ವಾಸಿಯಾಗಿರುವ ಶೇಶಾದ್ರಿವಾಸು ಅವರು. ಬರಹ ಅತಿ ಜನಪ್ರಿಯವಾಗಲು ಹಲವು ಕಾರಣಗಳಿವೆ -ಮುದ್ದಾದ ಅಕ್ಷರಶೈಲಿಗಳಿವೆ, ವಿಂಡೋಸ್‌ನಲ್ಲಿ ಕೆಲಸ ಮಾಡುತ್ತದೆ, ಇದು ಪ್ರಾರಂಭದಲ್ಲಿ ಉಚಿತವಾಗಿದ್ದು, ಇಂಗ್ಲೀಷ್ ಮೂಲಕ ಕನ್ನಡವನ್ನು ಊಡಿಸುವುದು (ಅನಿವಾಸಿಗಳಿಗೆ ಇದು ಅನುಕೂಲ), ತಂತ್ರಾಂಶ ತಯಾರಕರಿಗೆ ಬೇಕಾದ ಸವಲತ್ತುಗಳೂ ಇವೆ, ಯುನಿಕೋಡ್‌ಗೆ ಮಾಹಿತಿಯ ವರ್ಗಾವಣೆ ಸಾದ್ಯವಿದೆ, ವಿವಿಧ ಫಾಂಟ್‌ಗಳಿಗೆ ಪರಿವರ್ತಕಗಳಿವೆ, ಇತ್ಯಾದಿ. ಕಾಲಕಾಲಕ್ಕೆ ವಿಂಡೋಸ್ ಮತ್ತು ಆಫೀಸ್ ತಂತ್ರಾಂಶಗಳಲ್ಲಿ ಚಿಕ್ಕಪುಟ್ಟ ಬದಲಾವಣೆಗಳಾದಾಗ ಬರಹ ತಂತ್ರಾಂಶವೂ ಆ ಬದಲಾವಣೆಗಳಿಗೆ ಸರಿಹೊಂದುವಂತೆ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಬಹುಪಾಲು ಮಂದಿ ಕನ್ನಡದಲ್ಲಿ ಬೆರಳಚ್ಚು ಮಾಡಲು ಬರಹವನ್ನೇ ನಂಬಿದ್ದರು. ಇತ್ತೀಚೆಗಿನ ಬರಹದ ಆವೃತ್ತಿಗಳು ವಾಣಿಜ್ಯಕವಾಗಿವೆ.

ಇನ್ನಷ್ಟು ಪ್ರಯತ್ನಗಳು ಹಲವು ವರ್ಷಗಳಿಂದ ಕನ್ನಡ ಭಾಷೆಯ ಡಿ.ಟಿ.ಪಿ. ತಂತ್ರಾಂಶಗಳನ್ನು ತಯಾರಿಸಿ ಮಾರುತ್ತಿದ್ದ ಎಲ್ಲ ಕಂಪೆನಿಗಳು ತಾವು ಬಳಸಿರುವ ಅಕ್ಷರಭಾಗಗಳಿಗೆ (font glyph set) ತಮ್ಮದೇ ಸಂಕೇತವನ್ನು ರೂಪಿಸಿಕೊಂಡಿದ್ದರು. ಇವುಗಳಲ್ಲಿ ಒಮ್ಮತವಿರಲಿಲ್ಲ. ಇದರಿಂದಾಗಿ ಒಂದು ತಂತ್ರಾಂಶವನ್ನು ಬಳಸಿ ತಯಾರಿಸಿದ ಮಾಹಿತಿಯನ್ನು ಇನ್ನೊಂದು ತಂತ್ರಾಂಶದಲ್ಲಿ ಓದಲು ಆಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಮನಗಂಡ ಕರ್ನಾಟಕ ಸರಕಾರವು ಗಣಕಗಳಲ್ಲಿ ಕನ್ನಡ ಬಾಷೆಯ ಅಳವಡಿಕೆಗೆ ಒಂದು ಶಿಷ್ಟತೆಯನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಕನ್ನಡದ ಅಕ್ಷರಭಾಗಗಳಿಗೆ ಒಂದು ಶಿಷ್ಟ ಸಂಕೇತ ಹಾಗು ಕೀಲಿಮಣೆ ವಿನ್ಯಾಸವನ್ನು ಸಿದ್ಧಪಡಿಸಿತು. ಸರಕಾರದ ಈ ಶಿಷ್ಟತೆಗಳಿಗನುಗುಣವಾಗಿ ಸರಕಾರವೇ ಕನ್ನಡ ಗಣಕ ಪರಿಷತ್ತಿನ ಸಹಯೋಗದಿಂದ "ನುಡಿ" ಹೆಸರಿನ ಸಮಾನ ತಂತ್ರಾಂಶವೊಂದನ್ನು ತಯಾರಿಸಿ ಬಿಡುಗಡೆ ಮಾಡಿತು (೨೦೦೦).

ಈ ಎಲ್ಲ ತಂತ್ರಾಂಶಗಳು ನಿಜವಾಗಿ ನೋಡಿದರೆ ಫಾಂಟ್ ಮತ್ತು ಕೀಲಿಮಣೆಯ ತಂತ್ರಾಂಶಗಳು. ಇಂಗ್ಲೀಶ್ ಭಾಷೆಯ ಅಕ್ಷರಗಳ ಜಾಗದಲ್ಲಿ ಕನ್ನಡದ ಅಕ್ಷರಭಾಗಗಳನ್ನು ಕೂರಿಸುತ್ತಾರೆ. ಇದು ಕನ್ನಡ ಭಾಷೆ ಎಂದು ಕಾರ್ಯಾಚರಣೆಯ ವ್ಯವಸ್ಥೆಗಳಿಗೆ (ಆಪರೇಟಿಂಗ್ ಸಿಸ್ಟಮ್) ಅರ್ಥವಾಗುವುದಿಲ್ಲ. ಆದುದರಿಂದಲೇ ಈ ರೀತಿಯಲ್ಲಿ ಬೆರಳಚ್ಚು ಮಾಡಿದ ಮಾಹಿತಿಯ ಕಡತಗಳನ್ನು ಕಾರ್ಯಾಚರಣೆ ವ್ಯವಸ್ಥೆ ಅಥವಾ ಡಿಟಿಪಿಯ ತಂತ್ರಾಂಶಗಳಲ್ಲಿ ಅಳವಡಿಸಿರುವ ಹುಡುಕುವ ಸವಲತ್ತನ್ನು ಬಳಸಿ ಹುಡುಕಲು ಸಾಧ್ಯವಿಲ್ಲ. ಪತ್ರಿಕೆಗಳವರು ದಶಕಗಳಿಂದ ಕನ್ನಡ ಭಾಷೆಯಲ್ಲಿ ಪತ್ರಿಕೆ ತಯಾರಿಸಲು ಗಣಕವನ್ನು ಬಳಸುತ್ತಿದ್ದರೂ ಅವರ ಗಣಕದಲ್ಲಿ ಶೇಖರವಾಗಿರುವ ಕಡತಗಳಲ್ಲಿ ಇರುವ ಮಾಹಿತಿಯನ್ನು ಹುಡುಕಲು ಸಾಧ್ಯವಾಗದಿರುವುದು ಇದೇ ಕಾರಣದಿಂದ.

ಕನ್ನಡ ವಿಶ್ವವ್ಯಾಪಿಯಾಗಲಿ ಕನ್ನಡದಲ್ಲಿ ಕಡತವೊಂದನ್ನು ತಯಾರಿಸಿ ಫ್ರಾನ್ಸಿಗೆ ಕಳುಹಿಸಿದರೆ ಅವರಿಗೆ ಇದು ಕನ್ನಡ ಭಾಷೆಯಲ್ಲಿದೆ ಎಂದು ತಿಳಿಯುವುದು ಹೇಗೆ? ವಿಶ್ವಕ್ಕೆಲ್ಲ ಒಂದೇ ಸಂಕೇತ ವಿಧಾನ ಇದ್ದರೆ ಒಳ್ಳೆಯದಲ್ಲವೇ? ಇದುವೇ ಯುನಿಕೋಡ್. ಯುನಿಕೋಡ್ ಒಂದು ಜಾಗತಿಕ ಶಿಷ್ಟತೆ.

ಶಿಷ್ಟತೆಯ ಮಾತು ಬಂದಾಗ ನಾವು ಕನ್ನಡವನ್ನು ಪ್ರತ್ಯೇಕವಾಗಿ ನೋಡುವುದು ತಪ್ಪು. ಭಾರತೀಯ ಭಾಷೆಗಳು ಮಾತ್ರವಲ್ಲ ಜಗತ್ತಿನ ಎಲ್ಲ ಭಾಷೆಗಳ ಜೊತೆ ಕನ್ನಡವೂ ಹಾಸುಹೊಕ್ಕಾಗಿ ಸೇರಿಕೊಳ್ಳಬೇಕು. ಅದಕ್ಕಾಗಿ ಏನು ಮಾಡಬೇಕು? ಇದಕ್ಕೆ ಉತ್ತರ ಯುನಿಕೋಡ್‌ನ ಬಳಕೆ. ಏನು ಈ ಯುನಿಕೋಡ್? ಜಗತ್ತಿನ ಎಲ್ಲ ಭಾಷೆಗಳ ಸಂಕೇತೀಕರಣಕ್ಕೆ ಇರವ ಶಿಷ್ಟತೆ ಅರ್ಥಾತ್ ಗಣಕದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಪ್ರತಿ ಅಕ್ಷರಕ್ಕೂ ಸಂಕೇತ ನೀಡುವ ವ್ಯವಸ್ಥೆಯೇ ಯುನಿಕೋಡ್.

ಇದರ ವೈಶಿಷ್ಟ್ಯವೆಂದರೆ ಜಗತ್ತಿನ ಎಲ್ಲ ಭಾಷೆಗಳಿಗೂ ಇದರಲ್ಲಿ ಪ್ರತ್ಯೇಕ ಸಂಕೇತವನ್ನು ನೀಡಲಾಗಿದೆ. ಅಂದರೆ ಇಂಗ್ಲೀಶ್‌ನ ಜಾಗದಲ್ಲಿ ನಮ್ಮ ಭಾಷೆಯನ್ನು ಕೂರಿಸಬೇಕಾಗಿಲ್ಲ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪರದೆಯಲ್ಲಿ (ಮೋನಿಟರ್) ಸರಿಯಾಗಿ ತೋರಿಸಲು ಓಪನ್‌ಟೈಪ್ ಎಂಬ ವಿಧಾನದ ಅಕ್ಷರಶೈಲಿಯನ್ನು (ಫಾಂಟ್) ಬಳಸಬೇಕಾಗುತ್ತದೆ. ಈ ಅಕ್ಷರಶೈಲಿಯ ವೈಶಿಷ್ಟ್ಯವೆಂದರೆ ಎಷ್ಟು ಬೇಕಾದರೂ ಅಕ್ಷರಭಾಗಗಳನ್ನು ಬಳಸಬಹುದು. ಅಷ್ಟು ಮಾತ್ರವಲ್ಲ, ಯುನಿಕೋಡ್ ವಿಧಾನದಿಂದ ಮಾಹಿತಿಯನ್ನು ಶೇಖರಿಸುವುದರಿಂದ ಪ್ರಪಂಚದ ಎಲ್ಲ ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸಲು ಸಾಧ್ಯ. ಯುನಿಕೋಡ್ ಮಾಹಿತಿಯನ್ನು ಕಾರ್ಯಾಚರಣೆ ವ್ಯವಸ್ಥೆಗಳು ಅರ್ಥಮಾಡಿಕೊಳ್ಳುವುದರಿಂದ ಕಡತಗಳಲ್ಲಿ ಸಂಗ್ರಹವಾದ ಮಾಹಿತಿಯನ್ನು ಹುಡುಕಬಹುದು. ಪತ್ರಿಕೆಗಳು ಯುನಿಕೋಡ್ ಬಳಸಿ ಕಡತ ತಯಾರಿ ಮಾಡಿದರೆ ಒಂದು ವಿಷಯದ ಬಗ್ಗೆ ಮಾಹಿತಿ ಯಾವ ಕಡತದಲ್ಲಿದೆ ಎಂದು ಸುಲಭವಾಗಿ ಹುಡುಕಿ ತೆಗೆಯಬಹುದು.

ಅಂತರಜಾಲದಲ್ಲಿ ಮಾಹಿತಿಯನ್ನು ಹುಡುಕುವ ತಾಣವಾದ ಗೂಗ್ಲ್ ಕೂಡ ಯುನಿಕೋಡ್ ಮೂಲಕವೇ ಕನ್ನಡದ ಮಾಹಿತಿಯನ್ನು ಹುಡುಕುತ್ತದೆ. ಗ್ರಂಥಾಲಯ, ಸಂಬಳದ ಪಟ್ಟಿ, ಪಡಿತರ ಚೀಟಿ, ಸಾರಿಗೆ ಸಂಸ್ಥೆಯ ವ್ಯವಹಾರ, ವಿದ್ಯುತ್ ಬಿಲ್ಲು, ಇತ್ಯಾದಿ ಎಲ್ಲ ನಮೂನೆಯ ಕನ್ನಡದ ಆನ್ವಯಿಕ ತಂತ್ರಾಂಶಗಳ (ಅಪ್ಲಿಕೇಶನ್ ಸಾಫ್ಟ್‌ವೇರ್) ತಯಾರಿ ಯುನಿಕೋಡ್ ವಿಧಾನದಿಂದ ಸಾಧ್ಯ. ಇಂಹ ತಂತ್ರಾಂಶಗಳಲ್ಲಿ ಕನ್ನಡ ಮಾತ್ರವಲ್ಲ, ಹಿಂದಿ, ಇಂಗ್ಲಿಶ್, ಮತ್ತಿತರೆ ಭಾಷೆಗಳನ್ನು ಏಕ ಕಾಲದಲ್ಲಿ ಬಳಸಬಹುದು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು ತಮ್ಮ ಬಸ್ಸುಗಳ ವೇಳಾಪಟ್ಟಿಯನ್ನು ಅಂತರಜಾಲದಲ್ಲಿ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಕಟಿಸಬಹುದು. ಗಣಕ, ಅಂತರಜಾಲ, ಮೊಬೈಲ್ ಫೋನು, ಎಟಿಎಂ -ಹೀಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳು ಯುನಿಕೋಡ್ ವಿಧಾನದಲ್ಲೇ ಕೆಲಸ ಮಾಡುತ್ತವೆ. ಕನ್ನಡವನ್ನು ಯುನಿಕೋಡ್‌ನಲ್ಲಿ ಅಳವಡಿಸುವಾಗ ಪ್ರಾರಭದಲ್ಲಿ ಕೆಲವು ನ್ಯೂನತೆಗಳಿದ್ದವು. ಅವುಗಳನ್ನೆಲ್ಲ ಸರಿಪಡಿಸಲಾಗಿದೆ. ಕನ್ನಡ ಭಾಷೆಯನ್ನು ಯುನಿಕೋಡ್ ವಿಧಾನದಲ್ಲಿ ಬಳಸಲು ಈಗ ಇಚ್ಛಾಶಕ್ತಿಯ ಹೊರತಾಗಿ ಬೇರೆ ಯಾವ ತೊಡಕೂ ಇಲ್ಲ. ಇತ್ತೀಚೆಗೆ ಅಂತರಜಾಲದಲ್ಲಿ ತುಂಬ ಜನಪ್ರಿಯವಾಗುತ್ತಿರುವ ಬ್ಲಾಗಿಂಗ್‌ಗೆ ಎಲ್ಲರೂ ಬಳಸುತ್ತಿರುವುದು ಕನ್ನಡ ಯುನಿಕೋಡ್‌ನ್ನೇ. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರು ಯುನಿಕೋಡ್ ಬಳಸಿ ಬ್ಲಾಗಿಂಗ್ ನಡೆಸುತ್ತಿದ್ದಾರೆ.

ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿ ಅಂತರಜಾಲಕ್ಕೆ ಮಾಹಿತಿ ಹೆದ್ದಾರಿ (ಇನ್‌ಫೊರ್ಮೇಶನ್ ಸೂಪರ್ ಹೈವೇ) ಎಂಬ ಹೆಸರೂ ಇದೆ. ಈ ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿಗಳ ಪಯಣದ ಬಗ್ಗೆ ಒಂದು ಪಕ್ಷಿನೋಟ ನೋಡೋಣ.

ಅಂತರಜಾಲದಲ್ಲಿ ಕನ್ನಡದ ಬಗ್ಗೆ ಬರೆಯುವಾಗ ದತ್ತಾತ್ರೇಯ ಕುಲಕರ್ಣಿಯವರ ``ಕನ್ನಡ ಸಾಹಿತ್ಯ ಪುಟ"ದಿಂದ ಆರಂಭಿಸಬೇಕು. ಸುಮಾರು ೧೯೯೪-೯೫ರಲ್ಲಿ ಕೆನಡಾದಲ್ಲಿ ವಿದ್ಯಾರ್ಥಿಯಾಗಿದ್ದ ಧಾರವಾಡದ ಕುಲಕರ್ಣಿಯವರು ಬಿಡುವಿನ ವೇಳೆಯಲ್ಲಿ ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯ ಪುಟ. ಇದರಲ್ಲಿ ಕನ್ನಡ ಹಾಸ್ಯ, ಭಾವಗೀತೆ, ಭಕ್ತಿಗೀತೆ, ಪುಸ್ತಕಗಳ ಪಟ್ಟಿ, ಧ್ವನಿಸುರುಳಿಗಳ ಪಟ್ಟಿ, ಇತ್ಯಾದಿಗಳಿವೆ. ಕನ್ನಡ ಕಲಿಯಲು ಸಹಕಾರಿಯಾಗುವ ಒಂದೆರೆಡು ತಂತ್ರಾಂಶಗಳೂ ಇದ್ದವು. ಆದರೆ ಈ ತಾಣದಲ್ಲಿ ಎಲ್ಲ ಮಾಹಿತಿಗಳು ಇಂಗ್ಲಿಷ್ ಲಿಪಿಯಲ್ಲಿದ್ದವು. ಇಂಗ್ಲಿಷ್ ಭಾಷೆಯ ದೊಡ್ಡ ಮತ್ತು ಚಿಕ್ಕ ಅಕ್ಷರಗಳನ್ನು ಜಾಣ್ಮೆಯಿಂದ ಕನ್ನಡಕ್ಕೆ ಬಳಸಿಕೊಂಡದ್ದು ಇಲ್ಲಿನ ವಿಶೇಷ. ಉದಾಹರಣೆಗೆ ಕನ್ನಡ ಹಾಸ್ಯ ವಿಭಾಗದಲ್ಲಿನ ಒಂದು ತುಣುಕು:

Q: rAmanu maradhindha keLage bidhdhanu, idhu yAva kAla?
A: rAmanige ketta kAla
( ಪ್ರ: ರಾಮನು ಮರದಿಂದ ಕೆಳಗೆ ಬಿದ್ದನು. ಇದು ಯಾವ ಕಾಲ?
ಉ: ರಾಮನಿಗೆ ಕೆಟ್ಟ ಕಾಲ.)

ಕುಲಕರ್ಣಿಯವರು ಈ ತಾಣ ನಿರ್ಮಿಸಿದ ಕಾಲದಲ್ಲಿ ಅಂತರಜಾಲದಲ್ಲಿ ಕನ್ನಡ ಅಕ್ಷರಗಳ ಬಳಕೆ ಪ್ರಾರಂಭವಾಗಿರಲಿಲ್ಲ. ಆದರೂ ಕೆಲವು ಶಬ್ದಗಳನ್ನು, ಗುಂಡಿಗಳನ್ನು ಕನ್ನಡ ಲಿಪಿಯಲ್ಲಿ ಚಿತ್ರ ರೂಪದಲ್ಲಿ (ಗ್ರಾಫಿಕ್ಸ್) ಅವರು ಬಳಸಿದ್ದರು.

ಅಂತರಜಾಲದಲ್ಲಿ ಕನ್ನಡ ಬಳಕೆ ಆರಂಭವಾದುದು ೧೯೯೬ರ ದಶಂಬರ ತಿಂಗಳಲ್ಲಿ. ಡಾ| ಯು. ಬಿ. ಪವನಜ ಪ್ರಾರಂಭಿಸಿದ "ವಿಶ್ವ ಕನ್ನಡ" (www.vishvakannada.com) ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆ. ಅವರು ಅದನ್ನು ಕನ್ನಡ ನಾಡಿನಿಂದ ದೂರ ಮುಂಬಯಿಯಲ್ಲಿ ಕುಳಿತು ಆರಂಭಿಸಿದರು. ಸುಮಾರು ಅದೇ ಸಮಯಕ್ಕೆ ಬೆಂಗಳೂರಿನಲ್ಲಿರುವ ಶ್ರೀ ಮುರಳೀಧರ ಪದಕಿ ಅವರೂ ತಮ್ಮದೊಂದು ಕನ್ನಡ ತಾಣ ನಿರ್ಮಿಸಿ ಅದರಲ್ಲಿ ಇತರ ಪತ್ರಿಕೆಗಳಿಂದ ಆರಿಸಿದ ಮುಖ್ಯ ಸುದ್ದಿಗಳನ್ನು ಪ್ರಕಟಿಸಲು ತೊಡಗಿದರು. ಅದೇ ತಿಂಗಳಲ್ಲಿ ಬೆಂಗಳೂರಿನ ಸಂಜೆ ಪತ್ರಿಕೆ "ಸಂಜೆವಾಣಿ"ಯೂ ಚಿತ್ರರೂಪದಲ್ಲಿ ಅಂತರಜಾಲವನ್ನು ಸೇರಿತು. ಈಗಂತೂ ನೂರಾರು ಕನ್ನಡ ತಾಣಗಳಿವೆ. ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳೂ ತಮ್ಮ ಅಂತರಜಾಲ ಆವೃತ್ತಿ ನಡೆಸುತ್ತಿವೆ.

ಆರಂಭದ ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಅಂತರಜಾಲ ತಾಣ ನಿರ್ಮಿಸಲು ಫಾಂಟ್‌ಗಳ ಸಮಸ್ಯೆ ಇತ್ತು. ಕನ್ನಡ ಭಾಷೆಯಲ್ಲಿ ಅಂತರಜಾಲತಾಣವನ್ನು ನಿರ್ಮಿಸಲು ಕನ್ನಡ ಲಿಪಿಯ ಫಾಂಟ್‌ಗಳು ಅಗತ್ಯವಾಗಿತ್ತು. ಕನ್ನಡದ ಫಾಂಟ್‌ಗಳನ್ನು ಉಪಯೋಗಿಸಿ ನಿರ್ಮಿಸಿದ ತಾಣವನ್ನು ವೀಕ್ಷಿಸುವಾತನ ಗಣಕದಲ್ಲೂ ಅದೇ ಫಾಂಟ್ ಇರಬೇಕಿತ್ತು. ತಾಣ ನಿರ್ಮಿಸಿದವರು ತಮ್ಮ ಜಾಲತಾಣದಲ್ಲೆ ಫಾಂಟ್‌ನ್ನು ಓದುಗರಿಗಾಗಿ ಪ್ರತಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕೊಟ್ಟಿರುತ್ತಿದ್ದರು. ಓದುಗರು ತಮ್ಮ ಗಣಕದಲ್ಲಿ ಈ ಫಾಂಟ್‌ಗಳನ್ನು ಪ್ರತಿ ಮಾಡಿಕೊಂಡು ಅವುಗಳನ್ನು ಅನುಸ್ಥಾಪಿಸಿದ ನಂತರ ಈ ತಾಣಗಳ ವೀಕ್ಷಣೆ ನಡೆಸಬಹುದಾಗಿತ್ತು. ಇದು ಪ್ರಾರಂಭದ ಕಾಲದಲ್ಲಿದ್ದ ವ್ಯವಸ್ಥೆ.  ಇನ್ನೊಂದು ವಿಧಾನವೆಂದರೆ ಡೈನಮಿಕ್ ಫಾಂಟ್‌ಗಳ ಬಳಕೆ. ಈ ತಂತ್ರಜ್ಞಾನದಲ್ಲಿ ಅಂತರಜಾಲ ತಾಣ ವೀಕ್ಷಕ ತಂತ್ರಾಂಶವು (ಬ್ರೌಸರ್) ತಾಣದಿಂದ ಅಕ್ಷರಭಾಗಗಳ ಚೌಕಟ್ಟನ್ನು ಸೆಳೆದುಕೊಂಡು ಅಕ್ಷರರೂಪವನ್ನು ತಾನೆ ನಿರ್ಮಿಸಿಕೊಳ್ಳುತ್ತದೆ. ತಾಣವನ್ನು ವೀಕ್ಷಣೆಗೆ ತೆರೆದಾಗ ಆರಂಭದಲ್ಲಿ ಪುಟವು ಗೋಜಲಾಗಿ ಕಂಡು ಸ್ವಲ್ಪ ಸಮಯದಲ್ಲಿ ಕನ್ನಡ ಅಕ್ಷರಗಳು ಗುಂಡಗೆ ಮೂಡಿ ಬರುತ್ತವೆ. ಫಾಂಟ್‌ಗಳನ್ನು ತಮ್ಮ ಗಣಕಗಳಲ್ಲಿ ಪ್ರತಿ ಮಾಡಿಕೊಂಡು ಪ್ರತಿಷ್ಠ್ಠಾಪಿಸಬೇಕಾಗೂ ಇಲ್ಲ. ಕನ್ನಡದ ಮೊದಲ ಅಂತರಜಾಲ ಪತ್ರಿಕೆ ``ವಿಶ್ವ ಕನ್ನಡ"ವು ಭಾರತೀಯ ಭಾಷೆಗಳಲ್ಲೆ ಮೊಟ್ಟ ಮೊದಲ ಬಾರಿಗೆ (೧೯೯೮ ಫೆಬ್ರುವರಿ) ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ ಹಲವಾರು ಕನ್ನಡ ಜಾಲತಾಣಗಳು ಇದೇ ವಿಧಾನವನ್ನು ಬಳಸತೊಡಗಿದವು. ಇವೆಲ್ಲ ದಶಕದ ಹಿಂದಿನ ಕಾಲದ ಸಂಗತಿ.

ಎಲ್ಲ ಕಾರ್ಯಾಚರಣೆಯ ವ್ಯವಸ್ಥೆಗಳು (ಆಪರೇಟಿಂಗ್ ಸಿಸ್ಟಂ) ಯುನಿಕೋಡ್ ಬಳಸತೊಡಗಿದಾಗ ಈ ಯಾವ ಸುತ್ತುಬಳಸಿನ ಹಾದಿಗಳು ಅಗತ್ಯವಿಲ್ಲ. ಕನ್ನಡದ ಜಾಲತಾಣವನ್ನು ಯುನಿಕೋಡ್‌ನಲ್ಲಿ ತಯಾರಿಸಿದರೆ ಮುಗಿಯಿತು. ಕಾರ್ಯಾಚರಣೆಯ ವ್ಯವಸ್ಥೆಗೆ ಅದು ಕನ್ನಡ ಎಂದು ಅರಿವಾಗುವುದರಿಂದ ತನ್ನಲ್ಲಿರುವ ಕನ್ನಡ ಫಾಂಟ್‌ನಲ್ಲಿ ಅದನ್ನು ತೋರಿಸುತ್ತದೆ. ಈಗಂತೂ ಯುನಿಕೋಡ್ ವಿಧಾನದಲ್ಲಿ ಕನ್ನಡದ ಹಲವು ಜಾಲತಾಣಗಳು ಲಭ್ಯವಿವೆ. ಈಗಾಗಲೇ ವಿವರಿಸಿದಂತೆ ಯುನಿಕೋಡ್ ವಿಧಾನದಲ್ಲಿ ಇರುವ ಜಾಲತಾಣದ ಮಾಹಿತಿಯನ್ನು ಗೂಗ್ಲ್ ಬಳಸಿ ಹುಡುಕಬಹುದು. ಕನ್ನಡ ಲಿಪಿಯಲ್ಲಿ "ಬೇಂದ್ರೆ" ಎಂದು ಬೆರಳಚ್ಚು ಮಾಡಿ ಗೂಗ್ಲ್‌ನಲ್ಲಿ ಹುಡುಕಿದರೆ ಕನ್ನಡದ ವರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ. ರಾ. ಬೇಂದ್ರೆಯವರ ತಾಣಕ್ಕೆ ಕೊಂಡಿ ಸಿಗುತ್ತದೆ ಅದೇ ಇಂಗ್ಲೀಶಿನಲ್ಲಿ bendre ಎಂದು ಬೆರಳಚ್ಚಿಸಿ ಹುಡುಕಿದರೆ ಸೊನಾಲಿ ಬೇಂದ್ರೆ ಸಿಗುತ್ತಾಳೆ! ಇತ್ತೀಚೆಗೆ ಕನ್ನಡದ ಕೆಲವು ಪ್ರಮುಖ ಪತ್ರಿಕೆಗಳು ತಮ್ಮ ಜಾಲತಾಣವನ್ನು ಯುನಿಕೋಡ್‌ಗೆ ಬದಲಾಯಿಸಿದ್ದಾರೆ.

ಇತ್ತೀಚೆಗೆ ಬ್ಲಾಗಿಸುವಿಕೆ ತುಂಬ ಜನಪ್ರಿಯವಾಗುತ್ತಿದೆ. ಈ ಬ್ಲಾಗಿಸುವಿಕೆ ಸಾಧ್ಯವಾಗಿರುವುದು ಯುನಿಕೋಡ್‌ನಿಂದಾಗಿ. ಅಂತರಜಾಲದ ಮೂಲಕ ಒಬ್ಬರಿಗೊಬ್ಬರು ಸಂಪರ್ಕ ಕಲ್ಪಿಸಿ ತಮಗಿಷ್ಟವಾದ ವಿಷಯಗಳ ಬಗ್ಗೆ ಗುಂಪುಗಳನ್ನು ಕಟ್ಟಿಕೊಳ್ಳಲು ಇರುವ ಸವಲತ್ತು ಜಾಲತಾಣಗಳಾದ ಆರ್ಕುಟ್, ಫೇಸ್‌ಬುಕ್, ಚುಟುಕು ಬ್ಲಾಗಿಂಗ್‌ನ ಟ್ವಿಟ್ಟರ್ ಎಲ್ಲ ಕೆಲಸ ಮಾಡುವುದು ಯುನಿಕೋಡ್ ಮೂಲಕವೇ. ಕನ್ನಡದಲ್ಲಿ ಸಂದೇಶ ಕಳುಹಿಸಲು ಬಳಸುವ ಇಮೈಲ್ ಮತ್ತು ಮಾತುಕತೆ ನಡೆಸುವ ಸವಲತ್ತುಗಳು ಕೂಡ ಯುನಿಕೋಡ್ ಮೂಲಕವೇ ಕೆಲಸ ಮಾಡುತ್ತವೆ. ಯುನಿಕೋಡ್ ಬಳಸುವ ಮೂಲಕ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಫ್ರೆಂಚ್, ಇತ್ಯಾದಿ ಪ್ರಪಂಚದ ಎಲ್ಲ ಭಾಷೆಗಳಲ್ಲಿ ಏಕಕಾಲದಲ್ಲಿ ವ್ಯವಹಾರ ಮಾಡಬಹುದು.

ಯುನಿಕೋಡ್ ಯಾಕೆ ಅಷ್ಟು ಪ್ರಚಲಿತವಾಗಿಲ್ಲ? ಇಷ್ಟೆಲ್ಲ ಸೌಲಭ್ಯಗಳಿದ್ದರೂ ಪತ್ರಿಕೆಗಳವರು ಮತ್ತಿತರರು ಯಾಕೆ ಯುನಿಕೋಡ್ ಬಳಸುತ್ತಿಲ್ಲ ಎಂದು ಆಲೋಚಿಸುತ್ತಿದ್ದೀರಾ? ಬಹಳ ಮುಖ್ಯವಾದ ಕಾರಣ ಪುಟವಿನ್ಯಾಸದ ತಂತ್ರಾಂಶಗಳಾದ ಅಡೋಬಿ ಪೇಜ್‌ಮೇಕರ್, ಅಡೋಬಿ ಇನ್‌ಡಿಸೈನ್, ಕ್ವಾರ್ಕ್‌ಗಳಲ್ಲಿ ಭಾರತೀಯ ಭಾಷೆಯ ಯುನಿಕೋಡ್ ಸವಲತ್ತನ್ನು ನೀಡಿಲ್ಲ. ವಿಂಡೋಸ್ ಎಕ್ಸ್‌ಪಿ ಮತ್ತು ನಂತರದ ಆವೃತ್ತಿಗಳಲ್ಲಿ ಮೈಕ್ರೋಸಾಫ್ಟ್ ವರ್ಡ್ ಎಕ್ಸ್‌ಪಿ  ಮತ್ತು ನಂತರದ ಆವೃತ್ತಿ (೨೦೦೩/೨೦೦೭/೨೦೧೦/೨೦೧೩) ಅಥವಾ ಓಪನ್ ಆಫೀಸ್ (ಈಗದು ಲಿಬ್ರೆ ಆಫೀಸ್ ಆಗಿದೆ) ಬಳಸಿ ಕನ್ನಡ ಯುನಿಕೋಡ್ ಬಳಸಬಹುದು.

ಲಿನಕ್ಸ್‌ನಲ್ಲೂ ಲಿಬ್ರೆ ಆಫೀಸ್ ಬಳಸಿ ಕನ್ನಡ ಯುನಿಕೋಡ್ ಬಳಸಬಹುದು. ಆದರೆ ವರ್ಡ್ ಆಗಲಿ ಲಿಬ್ರೆ ಆಫೀಸ್ ಆಗಲಿ ಉತ್ತಮ ಮುದ್ರಣಕ್ಕೆ ಬಳಸಬಲ್ಲ ಡಿಟಿಪಿ ತಂತ್ರಾಂಶಗಳಲ್ಲ. ಆದರೂ ಸಾಧಾರಣ ಮಟ್ಟದ ಪುಸ್ತಕಗಳ ತಯಾರಿಗೆ ಇವು ಸಾಕು. ಲಿನಕ್ಸ್‌ನಲ್ಲಿ ಕಾರ್ಯನಿರ್ವಹಿಸುವ ಸ್ಕ್ರೈಬಸ್ ಎಂಬ ತಂತ್ರಾಂಶವನ್ನು ಬಳಸಿ ಕನ್ನಡ ಯುನಿಕೋಡ್ ವಿಧಾನದಲ್ಲಿ ಡಿಟಿಪಿ ಮಾಡಲು ಸಾಧ್ಯ. ಸ್ಕ್ರೈಬಸ್‌ನ ವಿಂಡೋಸ್ ಆವೃತ್ತಿ ಕೂಡ ಲಭ್ಯವಿದೆ. ಆದರೆ ಅದರಲ್ಲಿ ಕನ್ನಡ ಯುನಿಕೋಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಂದರೆ ಯುನಿಕೋಡ್ ವಿಧಾನ ಬಳಸಿ ಕನ್ನಡ ಪುಸ್ತಕ ತಯಾರಿ ಮಾಡಬಹುದು. ಆದರೆ ಯಾರೂ ಮಾಡುತ್ತಿಲ್ಲ. ಯಾಕೆ? ಕನ್ನಡ ಯುನಿಕೋಡ್ ಬಳಸಲು ಓಪನ್‌ಟೈಪ್ ಫಾಂಟ್ ಬೇಕು. ಉತ್ತಮ ಓಪನ್‌ಟೈಪ್ ಫಾಂಟ್‌ಗಳು ಕನ್ನಡಕ್ಕೆ ಲಭ್ಯವಿಲ್ಲ. ಇದರಿಂದಾಗಿ ಯಾರೂ ಡಿಟಿಪಿ ಮಾಡಲು ಕನ್ನಡ ಯುನಿಕೋಡ್‌ನ್ನು ಬಳಸುತ್ತಿಲ್ಲ. ಟ್ರೂಟೈಪ್ ಫಾಂಟ್‌ಗಳಲ್ಲಿ ಲಭ್ಯವಿರುವಂತೆ ನೂರಾರು ಓಪನ್‌ಟೈಪ್ ಫಾಂಟ್‌ಗಳು ಕನ್ನಡಕ್ಕೆ ಬೇಕಾಗಿವೆ.

ಈಗ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಕನ್ನಡಕ್ಕೆ ಹಲವು ಓಪನ್‌ಟೈಪ್ ಫಾಂಟ್‌ಗಳು ಲಭ್ಯವಾಗುತ್ತಿವೆ. ಕರ್ನಾಟಕ ಸರಕಾರವೂ ೧೨ ಓಪನ್‌ಟೈಪ್ ಫಾಂಟ್‌ಗಳ ತಯಾರಿಕೆಗೆ ಗುತ್ತಿಗೆ ನೀಡಿ ಅವು ತಯಾರಾಗಿ ಹತ್ತಿರ ಹತ್ತಿರ ವರ್ಷವೇ ಆಗಿದೆ. ಅವು ಇನ್ನೂ ಬಿಡುಗಡೆಯಾಗಿಲ್ಲ. ಕೆಲವು ಉತ್ಸಾಹೀ ತಂತ್ರಜ್ಞರು ಕೆಲವು ಓಪನ್‌ಟೈಪ್ ಫಾಂಟ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಕ್ವಾರ್ಕ್ ಮತ್ತು ಅಡೋಬಿಯವರು ತಮ್ಮ ತಮ್ಮ ಡಿಟಿಪಿ ತಂತ್ರಾಂಶಗಳಲ್ಲಿ ಕನ್ನಡ ಯುನಿಕೋಡ್ ಸವಲತ್ತನ್ನು ನೀಡುತ್ತಿದ್ದಾರೆ. ಪ್ರಜಾವಾಣಿ ಪತ್ರಿಕೆ ತಮ್ಮ ಎಲ್ಲ ಕೆಲಸಗಳಿಗೆ ಸಂಪೂರ್ಣವಾಗಿ ಯುನಿಕೋಡ್ ಬಳಸುತ್ತಿರುವ ಏಕೈಕ ಕನ್ನಡ ಪತ್ರಿಕೆಯಾಗಿದೆ (೨೦೧೩).

ವಿದ್ಯುದೋಲೆ ಬಂದಿದೆ ಪದುಮನಾಭನದು ಗಣಕ ಮತ್ತು ಅಂತರಜಾಲವನ್ನು ಬಳಸಿ ವಿ-ಪತ್ರ ಕಳುಹಿಸುವುದಕ್ಕೆ ಇಮೈಲ್ ಎನ್ನುತ್ತಾರೆ. ಕನ್ನಡ ಭಾಷೆಯಲ್ಲಿ ವಿದ್ಯುದೋಲೆ (ಇಮೈಲ್, ವಿ-ಅಂಚೆ, ಮಿಂಚೆ) ಕಳುಹಿಸಬಹುದು ಎಂಬುದು ಬಹುಜನರಿಗೆ ತಿಳಿದೇ ಇಲ್ಲ. ಇದನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ಹಳೆಯ ವಿಧಾನವೆಂದರೆ ಕನ್ನಡದಲ್ಲಿ ಬೆರಳಚ್ಚು ಮಾಡಿ ಅದನ್ನು ಚಿತ್ರ ರೂಪದಲ್ಲಿ (ಗ್ರಾಫಿಕ್ಸ್) ಕಳುಹಿಸುವುದು. ಸ್ವಲ್ಪ ಮುಂದುವರಿದ ವಿಧಾನವೆಂದರೆ ಕನ್ನಡದ ಯಾವುದಾದರೂ ಬೆರಳಚ್ಚು ತಂತ್ರಾಂಶವನ್ನು ಬಳಸಿ ಕನ್ನಡದಲ್ಲಿ ಬೆರಳಚ್ಚು ಮಾಡಿ ಪತ್ರವನ್ನು ಕಡತ ರೂಪದಲ್ಲಿ ಲಗತ್ತಿಸಿ (ಅಟ್ಯಾಚ್‌ಮೆಂಟ್) ಕಳುಹಿಸುವುದು. ಅಥವಾ ಔಟ್‌ಲುಕ್ ಮಾದರಿಯ ವಿ-ಅಂಚೆಯ ತಂತ್ರಾಂಶದಲ್ಲಿ ನೇರವಾಗಿ ಬರಹ, ನುಡಿ ಮಾದರಿಯ ಬೆರಳಚ್ಚು ತಂತ್ರಾಶವನ್ನು ಬಳಸಿ ಕನ್ನಡದಲ್ಲಿ ಬೆರಳಚ್ಚು ಮಾಡಿ ಕಳುಹಿಸುವುದು.

ಈ ಎರಡು ವಿಧಾನಗಳ ಮುಖ್ಯ ತೊಂದರೆ ಎಂದರೆ ಪತ್ರವನ್ನು ಓದುವಾತನ ಗಣಕದಲ್ಲಿ ಅದೇ ತಂತ್ರಾಂಶ ಅಥವಾ ಪತ್ರ ಕಳುಹಿಸಿದಾತ ಬಳಸಿದ ಫಾಂಟ್ ಇರತಕ್ಕದ್ದು. ಅಂದರೆ ನಾನು ಬರಹ ಪಾಂಟ್ ಬಳಸಿ ಪತ್ರವನ್ನು ಜಪಾನಿನಲ್ಲಿರುವ ನನ್ನ ಸ್ನೇಹಿತನಿಗೆ ಕಳುಹಿಸಿದರೆ ಆತನಲ್ಲೂ ಬರಹ ಫಾಂಟ್ ಇರತಕ್ಕದ್ದು. ಯಾವ ಸಮಸ್ಯೆಯೇ ಇಲ್ಲದ ವಿಧಾನವೆಂದರೆ ಯುನಿಕೋಡ್ ವಿಧಾನದಲ್ಲಿ ಪತ್ರ ಕಳುಹಿಸುವುದು. ಆದರೆ ನಿಮ್ಮಲ್ಲಿ ಮತ್ತು ಪತ್ರ ಸ್ವೀಕರಿಸುವವನಲ್ಲಿ ಯುನಿಕೋಡ್ ಬೆಂಬಲಿತ ಕಾರ್ಯಾಚರಣೆಯ ವ್ಯವಸ್ಥೆ ಇರತಕ್ಕದ್ದು. ಈಗಂತೂ ತುಂಬ ಜನ ಕನ್ನಡ ಲಿಪಿಯಲ್ಲೇ ಯುನಿಕೋಡ್ ಬಳಸಿ ವಿ-ಅಂಚೆ ಕಳುಹಿಸುತ್ತಿದ್ದಾರೆ. ಆದರೂ ಕಲವು ಸೋಮಾರಿಗಳು ಕನ್ನಡ ಭಾಷೆಯನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆದು ವಿ-ಅಂಚೆ ಕಳುಹಿಸುತ್ತಿದ್ದಾರೆ. ಇದು ಮಾತ್ರ ಕನ್ನಡಕ್ಕೆ ಬಗೆಯುತ್ತಿರುವ ಅತಿ ದೊಡ್ಡ ದ್ರೋಹ ಎಂದೇ ಹೇಳಬಹುದು.

ಇದೇ ಮಾದರಿಯಲ್ಲಿ ಅಂತರಜಾಲವನ್ನು ಬಳಸಿ ನೇರವಾಗಿ ಮಾತುಕತೆ ನಡೆಸಬಹುದು. ಇದಕ್ಕೆ ಬಳಸುವುದು ಚಾಟ್ ಸಾಫ್ಟ್‌ವೇರ್‌ಗಳು (ಉದಾ: ಯಾಹೂ, ಎಂಎಸ್‌ಎನ್, ಜಿಟಾಕ್, ಗೂಗ್ಲ್ ಹಾಂಗೌಟ್, ಫೇಸ್‌ಬುಕ್, ವಾಟ್ಸ್‌ಆಪ್, ಇತ್ಯಾದಿ). ಈ ಯಾವುದೇ ತಂತ್ರಾಂಶದಲ್ಲಿ ಕನ್ನಡದ ಕೀಲಿಮಣೆಯ ತಂತ್ರಾಂಶವನ್ನು ಬಳಸಿ ಕನ್ನಡದಲ್ಲಿ ಮಾತುಕತೆ ನಡೆಸಬಹುದು. ಇದೂ ಸಾಧ್ಯವಾಗಿರುವುದು ಯುನಿಕೋಡ್‌ನಿಂದ.

ಮುಕ್ತ ತಂತ್ರಾಂಶದಲ್ಲಿ ಕನ್ನಡ ಲಿನಕ್ಸ್ ಒಂದು ಮುಕ್ತ ತಂತ್ರಾಂಶ. ಅಂದರೆ ಇದನ್ನು ಯಾರು ಬೇಕಾದರೂ ಉಚಿತವಾಗಿ ಪಡೆದು ಬಳಸಬಹುದು ಮಾತ್ರವಲ್ಲ ಸುಧಾರಣೆಯನ್ನೂ ಮಾಡಬಹುದು. ಲಿನಕ್ಸ್‌ನ ಹಲವು ಆವೃತ್ತಿಗಳು ಲಭ್ಯವಿವೆ. ಸದ್ಯ ತುಂಬ ಜನಪ್ರಿಯವಾಗಿರುವುದು ಉಬುಂಟು. ಇದರಲ್ಲಿ ಕನ್ನಡದ ಅಳವಡಿಕೆ ಆಗಿದೆ. ಇದೂ ಸಾಧ್ಯವಾಗಿರುವುದು ಯುನಿಕೋಡ್‌ನಿಂದ. ಕನ್ನಡದ ಕೀಲಿಮಣೆಯೂ ಲಭ್ಯವಿದೆ. ಆಫೀಸ್ ತಂತ್ರಾಂಶ ಬೇಕಾದವರು ಲಿಬ್ರೆ ಆಫೀಸ್‌ನ ಲಿನಕ್ಸ್ ಆವೃತ್ತಿಯನ್ನು ಬಳಸಬಹುದು. ಇದು ಕೂಡ ಒಂದು ಮುಕ್ತ ತಂತ್ರಾಂಶವಾಗಿದೆ. ಲಿಬ್ರೆ ಆಫೀಸ್‌ನಲ್ಲಿ ಕನ್ನಡದ ತೋರಿಕೆಯಲ್ಲಿ (ರೆಂಡರಿಂಗ್) ಕೆಲವು ಸಣ್ಣಪುಟ್ಟ ದೋಷಗಳಿದ್ದವು. ಅವನ್ನು ಆವೃತ್ತಿ ೪.೩ರಲ್ಲಿ ಸರಿಪಡಿಸಲಾಗಿದೆ.

ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಕನ್ನಡ ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಘೋಷಣೆ ತುಂಬ ಹಳೆಯದು ಮತ್ತು ಕ್ಲೀಷೆಯಾಗಿದೆ. ಆದರೂ ಶಿಕ್ಷಣದಲ್ಲಿ ಗಣಕದ ಬಳಕೆ ಬಗ್ಗೆ ನಾವು ಗಮನ ಹರಿಸಲೇಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಕನ್ನಡ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಬಂದಾಗ ಹೇಗೆ ಮಾಹಿತಿ ತಂತ್ರಜ್ಞಾನದ ಬಳಕೆ ಮಾಡಬಹುದು ಎಂಬುದನ್ನು ನೋಡೋಣ.

ಈಗೊಂದು ಉದಾಹರಣೆ. ಪುಟ್ಟ ಹುಡುಗಿಯೊಬ್ಬಳು ಗಣಕದ ಪರದೆಯ ಮೇಲೆ ಮೂಡಿಬಂದ ಕನ್ನಡದ "ಅ" ಎಂಬ ಅಕ್ಷರದ ತುಂಡುಗಳನ್ನು ಸರಿಯಾಗಿ ಜೋಡಿಸುತ್ತಿದ್ದಾಳೆ. ಅಕ್ಷರವನ್ನು ಪೂರ್ತಿಯಾಗಿ ಜೋಡಿಸಿದಾಗ ಶಾಬ್ಬಾಸ್ ಎಂಬ ಧ್ವನಿ ಕೇಳಿಬರುತ್ತದೆ. ಈಗ "ಅ" ಅಕ್ಷರದ ಕೆಳಗೆ ಮೂಡಿಬಂದಿರುವ ಸ್ಪೀಕರಿನ ಚಿತ್ರದ ಮೇಲೆ ಮೌಸ್‌ನಿಂದ ಕ್ಲಿಕ್ ಮಾಡಿದಾಗ ಗಣಕದ ಸ್ಪೀಕರಿನಿಂದ "ಅ" ಎನ್ನುವ ಅಕ್ಷರದ ಉಚ್ಛಾರಣೆ ಕೇಳಿಬರುತ್ತದೆ. ಜೊತೆಗೆ "ಅ" ಅಕ್ಷರವನ್ನು ಬರೆಯುವ ರೀತಿಯನ್ನು ಅನಿಮೇಶನ್ ವಿಧಾನದಲ್ಲಿ ಗಣಕದ ಪರದೆಯ ಮೇಲೆ ಮೂಡಿಸಲಾಗಿದೆ. ಪಕ್ಕದಲ್ಲೇ "ಅ" ಅಕ್ಷರದಿಂದ ಆರಂಭವಾಗುವ "ಅಗಸ" ಎನ್ನುವ ಪದ ಮತ್ತು ಅಗಸನ ಚಿತ್ರ ಮೂಡಿ ಬಂದಿವೆ. "ಅಗಸ" ಎನ್ನುವ ಪದದ ಮೇಲೆ ಮೌಸ್‌ನಿಂದ ಕ್ಲಿಕ್ ಮಾಡಿದಾಗ ಗಣಕದ ಸ್ಪೀಕರಿನಿಂದ "ಅಗಸ" ಎನ್ನುವ ಪದದ ಉಚ್ಛಾರ ಕೇಳಿಸುತ್ತದೆ. ನೀವು ಈಗಾಗಲೇ ಗಮನಿಸಿರುವಂತೆ ಆ ಹುಡುಗಿ ಗಣಕದಲ್ಲಿ ಆಟವೊಂದನ್ನು ಆಡುವ ಮೂಲಕ ಕನ್ನಡ ಅಕ್ಷರಗಳನ್ನು ಕಲಿಯುತ್ತಿದ್ದಾಳೆ. ಇಲ್ಲಿ ವಿವರಿಸಿರುವುದು "ಕನ್ನಡ ಕಲಿ" ಎಂಬ ತಂತ್ರಾಂಶ-ಆಟವನ್ನು.

ಗಣಕಾಧಾರಿತ ಶಿಕ್ಷಣದಲ್ಲಿ ಇತ್ತೀಚಿಗೆ ತುಂಬ ಕೇಳಿ ಬರುತ್ತಿರುವ ಪದ  edutainment.  ಇದು education ಮತ್ತು entertainment ಎಂಬ ಪದಗಳ ಸಂಕ್ಷಿಪ್ತ ರೂಪ. ಕಲಿಕೆ ಮತ್ತು ಮನರಂಜನೆಯನ್ನು ಜೊತೆ ಜೊತೆಗೆ ನೀಡುವುದೇ ಇದರ ವೈಶಿಷ್ಟ್ಯ. ಶಿಕ್ಷಣವು ಮನರಂಜನಾತ್ಮಕವಾಗಿರಲು ಇದು ಸಹಾಯ ಮಾಡುತ್ತದೆ. ಗಣಕಗಳಲ್ಲಿ ಆಟ ಆಡುವದರ ಮೂಲಕ ಕಲಿಯುವುದನ್ನು ಕಲಿಕಾರಂಜನೆ ಎನ್ನಬಹುದು.

ಕನ್ನಡದ ವಿಷಯಕ್ಕೆ ಬಂದಾಗ ಶಿಕ್ಷಣದಲ್ಲಿ ಗಣಕಗಳ ಬಳಕೆ ಮೂರು ರೀತಿಯಲ್ಲಿ ಆಗಬೇಕಾಗಿದೆ. ಮೊದಲನೆಯದಾಗಿ ಗಣಕ ಎಂದರೆ ಏನು ಎಂಬುದಾಗಿ ಕನ್ನಡದಲ್ಲಿ ತಿಳಿಸುವುದು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇದನ್ನು ಮಾಹಿತಿ ಸಿಂಧು ಕಾರ್ಯಕ್ರಮದಡಿ ಮಾಡಲಾಗುತ್ತಿದೆ. ಎರಡನೆಯದಾಗಿ ವಿಜ್ಞಾನ, ಗಣಿತ, ಕನ್ನಡ, ಇತ್ಯಾದಿ ವಿಷಯಗಳನ್ನು ಗಣಕ ಮೂಲಕ ಕಲಿಸುವುದು. ಗಣಕಗಳಿಗೆ ಮಾತ್ರವೇ ಸಾಧ್ಯವಿರುವ ಬಹುಮಾಧ್ಯಮ (ಮಲ್ಟಿಮೀಡಿಯ) ಮತ್ತು ಚಿತ್ರಸಂಚಲನೆ (ಅನಿಮೇಶನ್) ಇಲ್ಲಿ ಸಹಾಯಕ್ಕೆ ಬರುತ್ತದೆ. ಅಝೀಮ್ ಪ್ರೇಂಜಿ ಫೌಂಡೇಶನ್ ಇದನ್ನು ಮಾಡುತ್ತಿದೆ. ಮೂರನೆಯ ಅಂಗ ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ ಹಾಗೂ ತನ್ಮೂಲಕ ತರ್ಕ ಮತ್ತು ಗಣಿತಗಳಲ್ಲಿ ಪರಿಣತಿಯನ್ನು ನಮ್ಮ ಮಾತೃ ಭಾಷೆಯಲ್ಲಿ ಹೊಂದುವುದು. ಈ ಮೂರನೆ ವಿಧಾನವನ್ನು ಭಾರತದ ಯಾವ ಭಾಷೆಯಲ್ಲೂ ಬಳಸುತ್ತಿಲ್ಲ.

ಪ್ರಪಂಚಾದ್ಯಂತ ಶಾಲೆಗಳಲ್ಲಿ ೫ರಿಂದ ೮ನೇ ತರಗತಿಗಳಿಗೆ ಕಲಿಸುವುದು ಲೋಗೋ ಎಂಬ ಮಕ್ಕಳಿಗಾಗಿಯೇ ಸಿದ್ಧವಾಗಿರುವ ಪ್ರೋಗ್ರಾಮ್ಮಿಂಗ್ ಲಾಂಗ್ವೇಜ್. ಇದನ್ನು ಉಪಯೋಗಿಸಿ ಮಕ್ಕಳು ಕಂಪ್ಯೂಟರ್‌ನಲ್ಲಿ ಪ್ರೋಗ್ರಾಮ್ಮಿಂಗ್‌ನ ಪ್ರಮುಖ ಅಂಶಗಳನ್ನು ಕಲಿಯುತ್ತಾರೆ. ಹಾಗೆಂದು ಲೋಗೋವನ್ನು ಮಕ್ಕಳು ಮಾತ್ರ ಉಪಯೋಗಿಸಬೇಕಾಗಿಲ್ಲ. ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್‌ನ ಮೂಲ ಸಿದ್ಧಾಂತಗಳನ್ನು ಕಲಿಯಲಿಚ್ಛಿಸುವ ಯಾರು ಬೇಕಾದರೂ ಬಳಸಬಹುದು. ಭಾರತದಲ್ಲೂ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಲೋಗೋವನ್ನು ಕಲಿಸಲಾಗುತ್ತಿದೆ. ಇದು ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗಾಯಿತು. ಕನ್ನಡ ಮಾಧ್ಯಮ ಶಾಲೆಗಳ ಗತಿಯೇನು? ಗಣಕ ಶಿಕ್ಷಣದ ನೆಪದಲ್ಲಿ ಇಂಗ್ಲೀಶನ್ನು ಹಿತ್ತಿಲ ಬಾಗಿಲಿನಿಂದ ತರಬಾರದು.

ಭಾರತೀಯ ಭಾಷೆಗಳಲ್ಲೇ ಪ್ರಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ಲೋಗೋವನ್ನು ತಯಾರಿಸಲಾಗಿದೆ. ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಇನ್ನು ಮುಂದೆ ಕೀಳರಿಮೆಯಿಂದ ಬಳಲಬೇಕಾಗಿಲ್ಲ. ಪ್ರಾಥಮಿಕ ಶಾಲೆಯ ಪ್ರಾಯದಲ್ಲಿ ಮಕ್ಕಳಲ್ಲಿ ತರ್ಕಬದ್ಧವಾಗಿ ಯೋಚಿಸುವ ಶಕ್ತಿಯ ಬೆಳವಣಿಗೆಯಾಗುತ್ತದೆ. ಈ ಪ್ರಾಯದಲ್ಲಿ ಕನ್ನಡ ಲೋಗೋದಲ್ಲಿ ಪ್ರೋಗ್ರಾಮ್ಮಿಂಗ್ ಮಾಡುವ ಮೂಲಕ ಮಕ್ಕಳು ಗಣಿತ ಮತ್ತು ತರ್ಕಗಳಲ್ಲಿ ಪ್ರಾವೀಣ್ಯವನ್ನು ಹೊಂದಬಹುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಮುಂದೆ ಬರಲು ಇವೆರಡು ಬಹುಮೂಲ್ಯ ಪೂರಕಗಳು. ನಮಗೆ ಬೇಕಾದ ತಂತ್ರಾಂಶ (ಸಾಫ್ಟ್‌ವೇರ್) ಗಳನ್ನು ನಮ್ಮ ಭಾಷೆಯಲ್ಲೇ ತಯಾರಿಸಲು ನಮ್ಮ ಭಾಷೆಯಲ್ಲೇ ತರ್ಕ ಮತ್ತು ವಿನ್ಯಾಸಗಳ ಅಭಿವೃದ್ಧಿಗೆ ಕೂಡ ಇವು ಸಹಾಯ ಮಾಡುವುವು.  ಕನ್ನಡ ಲೋಗೋ ಮೂಲಕ ಮೂಲ ಪರಿಣತಿಯನ್ನು ಮೈಗೂಡಿಸಿಕೊಂಡ ಮಕ್ಕಳು ದೊಡ್ಡವರಾದ ನಂತರ ಕನ್ನಡ ಭಾಷೆಯ ತಂತ್ರಾಂಶ ರಚಿಸಿ ರಾಜ್ಯ/ಭಾಷೆಯ ಪ್ರಗತಿಗೆ ಗಣನೀಯ ಕಾಣಿಕೆ ನೀಡಬಲ್ಲರು. ಕನ್ನಡ ತಯಾರಾಗಿ ಹಲವು ವರ್ಷಗಳೇ ಆಗಿವೆ. ಕರ್ನಾಟಕ ಸರಕಾರದ ಕಂಪ್ಯೂಟರ್ ಕನ್ನಡ ಕ್ರಿಯಾ ಯೋಜನೆಯಲ್ಲಿ ಇದನ್ನು ಅಳವಡಿಸಲಾಗಿದೆ ಕೂಡ. ಹೀಗಿದ್ದೂ ಇಚ್ಛಾಶಕ್ತಿಯ ಕೊರತೆಯಿಂದ ಕನ್ನಡ ಲೋಗೋ ಇನ್ನೂ ಕರ್ನಾಟಕದ ಶಾಲಾ ಮಕ್ಕಳಿಗೆ ತಲುಪಿಲ್ಲ. ಕನ್ನಡ ಲೋಗೋ ತಂತ್ರಾಂಶಕ್ಕೆ ೨೦೦೬ನೆಯ ಇಸವಿಯ ಪ್ರತಿಷ್ಠಿತ "ಮಂಥನ ಪ್ರಶಸ್ತಿ" ನೀಡಲಾಗಿದೆ. ಕನ್ನಡ ಲೋಗೋವನ್ನು www.vishvakannada.com/kannadalogo ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕನ್ನಡ ವಿಕಿಪೀಡಿಯ ವಿಕಿಪೀಡಿಯ ಒಂದು ಜಗತ್ಪ್ರಸಿದ್ಧ ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದು ಅಂತರಜಾಲದಲ್ಲಿ ಲಭ್ಯ. ವಿಕಿಪೀಡಿಯ ಕನ್ನಡ ಭಾಷೆಯಲ್ಲೂ ಲಭ್ಯವಿದೆ. ಕನ್ನಡ ವಿಕಿಪೀಡಿಯ ೨೦೦೩ರಲ್ಲಿ ಪ್ರಾರಂಭವಾಯಿತು. ಇತ್ತೀಚೆಗೆ (ನವಂಬರ್ ೧೭, ೨೦೧೩) ಕನ್ನಡ ವಿಕಿಪೀಡಿಯದ ದಶಮಾನೋತ್ಸವವನ್ನು ಆಚರಿಸಲಾಯಿತು. ಕನ್ನಡ ವಿಕಿಪೀಡಿಯದಲ್ಲಿ ಸದ್ಯಕ್ಕೆ ಸುಮಾರು ೧೫,೦೦೦ ಲೇಖನಗಳಿವೆ. ಇದು ಏನೇನೂ ಸಾಲದು.

ಕನ್ನಡ ಬಳಸುವುದೆಂದರೆ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡ ಬಳಸುವುದು. ಕನ್ನಡ ಭಾಷೆಯ ಶ್ರೀಮಂತಿಗೆ ಬಗ್ಗೆ ಭಾಷಣ ಬಿಗಿದು ಮೇಜು ಕುಟ್ಟುವುದರಿಂದ ಕನ್ನಡ ಉಳಿಯುವುದಿಲ್ಲ. ಅದು ಉಳಿಯಬೇಕಾದರೆ ಜನಸಾಮಾನ್ಯರು ಅದನ್ನು ಬಳಸಬೇಕು. ಜನಸಾಮಾನ್ಯರಿಗೆ ಪ್ರಮುಖವಾಗಿ ಬೇಕಾದುದು ಸಾಹಿತಿಗಳು ಬೆನ್ನುತಟ್ಟಿಕೊಳ್ಳುವ ಸೃಜನಶಿಲ (ಕಥನ) ಸಾಹಿತ್ಯವಲ್ಲ. ಅದು ಬೇಡ ಎಂದಲ್ಲ. ಆದರೆ ಜನಸಾಮಾನ್ಯರಿಗೆ ಅತೀ ಅಗತ್ಯವಾಗಿ ಬೇಕಾದುದು ಮಾಹಿತಿ ಸಾಹಿತ್ಯ. ಇದಕ್ಕೆ ಬೇಕು ಒಂದು ವಿಶ್ವಕೋಶ.

ಈಗ ಇಂಗ್ಲಿಶ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ನಮ್ಮ ಮಕ್ಕಳಿಗೆ ಪ್ರಪಂಚ ಜ್ಞಾನ ದೊರೆಯುವುದಿಲ್ಲ ಆದುದರಿಂದ ನಮ್ಮ ಮಕ್ಕಳನ್ನು ಇಂಗ್ಲಿಶ್ ಮಾಧ್ಯಮದಲ್ಲಿ ಕಲಿಸುತ್ತೇವೆ ಎಂದು ಹೆಚ್ಚಿನ ತಂದೆತಾಯಂದಿರು ಹೇಳುತ್ತಾರೆ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನದ ಲಭ್ಯತೆ ತುಂಬ ಕಡಿಮೆ ಎಂಬುದನ್ನು ನಾವು ಒಪ್ಪಲೇ ಬೇಕು. ಆದರೆ ಈ ಸಮಸ್ಯೆಗೆ ಪರಿಹಾರ ಇಂಗ್ಲಿಶ್ ಭಾಷೆಯ ಮೊರೆಹೋಗುವುದಲ್ಲ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ತರುವುದು. ಈ ರೀತಿ ಮಾಡಲು ಸಹಾಯ ಮಾಡುವುದು ಅತಿ ಜನಪ್ರಿಯವಾಗಿರುವ ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ ಕನ್ನಡ ವಿಕಿಪೀಡಿಯ.

ವಿಕಿಪೀಡಿಯದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ನಾವು ತಜ್ಞರು ಆಗಿರಬೇಕು ಎನ್ನುವ ಒಂದು ತಪ್ಪು ಕಲ್ಪನೆ ತುಂಬ ಜನರಲ್ಲಿದೆ. ಇದು ಸರಿಯಲ್ಲ. ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರು ಆಗಿರಬೇಕು ಎಂಬ ಕಟ್ಟಳೆಯಿಲ್ಲ. ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರೆಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ನಿಮಗೆ ತಿಳಿದಷ್ಟು ನೀವು ಸೇರಿಸಿ. ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರು ಸೇರಿಸುತ್ತಾರೆ.

ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ. ಕನ್ನಡ ವಿಕಿಪೀಡಿಯದ ವಿಳಾಸ - kn.wikipedia.org.

ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುವಾಗ ಎದುರಾಗುವ ಒಂದು ಸಮಸ್ಯೆ ಮಾಹಿತಿಯ ಆಕರ. ಯಾವುದೇ ಹಕ್ಕುಸ್ವಾಮ್ಯದಲ್ಲಿರುವ ಮಾಹಿತಿಯನ್ನು (ಕಾಪಿರೈಟ್ ಆಗಿರುವ ಪುಸ್ತಕ) ವಿಕಿಪೀಡಿಯಕ್ಕೆ ನೇರವಾಗಿ ಸೇರಿಸುವಂತಿಲ್ಲ. ಮೈಸೂರು ವಿಶ್ವವಿದ್ಯಾಲಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಸರಕಾರದ ಪ್ರಕಟಣೆಗಳು, ಸರಕಾರದಿಂದ ಅನುದಾನ ಪಡೆದ ಪರಿಷತ್ತುಗಳು, ಅಕಾಡೆಮಿಗಳು ಇತ್ಯಾದಿಗಳೆಲ್ಲ ಹಲವು ನಮೂನೆಯ ವಿಶ್ವಕೋಶ ಮತ್ತು ಮಾಹಿತಿ ಸಾಹಿತ್ಯ ತಯಾರಿಸಿದ್ದಾರೆ. ಇವೆಲ್ಲ ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯವಿಲ್ಲ. ಮಾತ್ರವಲ್ಲ ಅವು ಕಾಲಕಾಲಕ್ಕೆ ನವೀಕೃತವಾಗುತ್ತಲೂ ಇಲ್ಲ. ಇವನ್ನೆಲ್ಲ ಸರಕಾರ, ವಿಶ್ವವಿದ್ಯಾಲಯ, ಪರಿಷತ್ತು, ಅಕಾಡೆಮಿಗಳು ಹಕ್ಕುಸ್ವಾಮ್ಯದಿಂದ ಮುಕ್ತವಾಗಿಸಿದರೆ ಅವನ್ನು ಕನ್ನಡ ವಿಕಿಪೀಡಿಯಕ್ಕೆ ಆಸಕ್ತರು ಸೇರಿಸುತ್ತಾರೆ. ಆಗ ಜನರೇ ಆ ಮಾಹಿತಿಗಳನ್ನು ಕಾಲಕಾಲಕ್ಕೆ ನವೀಕರಿಸುತ್ತಾರೆ.

ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಕನ್ನಡ ಮೊಬೈಲ್‌ಫೋನ್ ಮತ್ತು ಟ್ಯಾಬ್ಲೆಟ್ ಗಣಕಗಳಲ್ಲಿ ಬಳಸುವ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಹಲವು ನಮೂನೆಗಳಿವೆ. ಈಗಿನ ಪರಿಸ್ಥಿತಿ ಏನೆಂದರೆ (ದಶಂಬರ ೨೦೧೩) ಬಹುಪಾಲು ಕಾರ್ಯಾಚರಣ ವ್ಯವಸ್ಥೆಗಳು ಕನ್ನಡ ಯುನಿಕೋಡ್ ಪಠ್ಯದ ಸರಿಯಾದ ತೋರಿಕೆ (ರೆಂಡರಿಂಗ್) ಮಾಡುತ್ತಿವೆ. ಕೆಲವು ಫೋನ್ ಕಾರ್ಯಾಚರಣ ವ್ಯವಸ್ಥೆಗಳಿಗೆ ಕೀಲಿಮಣೆ ತಂತ್ರಾಂಶವೂ ಲಭ್ಯವಿದೆ. ಈ ಪಟ್ಟಿಯಲ್ಲಿ ಪ್ರಮುಖ ಹೆಸರು ಆಂಡ್ರೋಯಿಡ್. ಇದರ ಆವೃತ್ತಿ ೪.೧ ರ ನಂತರದವುಗಳಲ್ಲಿ ಕನ್ನಡ ಪಠ್ಯದ ತೊರಿಕೆ ಸರಿಯಾಗಿದೆ. ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಕನ್ನಡ ಕೀಲಿಮಣೆ ತಂತ್ರಾಂಶಗಳೂ ಲಭ್ಯವಿವೆ. ಅದರಲ್ಲಿ ತುಂಬ ಜನಪ್ರಿಯವಾಗಿರುವುದು Anysoftkeyboard.

ಸರಕಾರದ ಹೊಣೆ ಈ ದಿಸೆಯಲ್ಲಿ ಸರಕಾರ ಮಾಡಬೇಕಾದ ಕಾರ್ಯಗಳೇನು? ಅವುಗಳಲ್ಲಿ ಪ್ರಮುಖವಾದ ಕೆಲವು ಈ ರೀತಿ ಇವೆ - ಕನ್ನಡಕ್ಕೆ ಯುನಿಕೋಡ್ ಮಾನಕವನ್ನು ಶಿಷ್ಟತೆ ಎಂಬುದಾಗಿ ಪ್ರಕಟಿಸುವುದು. ಕರ್ನಾಟಕ ಸರಕಾರದ ಗಣಕೀಕರಣದ ಎಲ್ಲ ಕೆಲಸಗಳು ಮತ್ತು ಅಂತರಜಾಲ ತಾಣಗಳು ಯುನಿಕೋಡ್‌ನಲ್ಲೇ ಇರಬೇಕು ಎಂದು ಸುತ್ತೋಲೆ ಹೊರಡಿಸುವುದು. ಈ ಕೆಲಸವನ್ನು ಸರಕಾರ ನವಂಬರ್ ೨೦೧೨ರಲ್ಲಿ ಮಾಡಿದೆ. ಆದರೆ ಈ ಸುತ್ತೋಲೆ ಮಾತ್ರ ನಿಜವಾದ ರೂಪದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಸರಕಾರದ ಎಲ್ಲ ವ್ಯವಹಾರಗಳು ಈಗಲೂ ಯುನಿಕೋಡ್ ಅಲ್ಲದ ಹಳೆಯ ವಿಧಾನದಲ್ಲೇ ನಡೆಯುತ್ತಿವೆ. ಕರ್ನಾಟಕ ಸರಕಾರದ ೭೮ ಜಾಲತಾಣಗಳಲ್ಲಿ ೩ ಜಾಲತಾಣಗಳು ಮಾತ್ರ ಕನ್ನಡ ಯುನಿಕೋಡ್‌ನಲ್ಲಿವೆ. ಕರ್ನಾಟಕ ಸರಕಾರವು ಪ್ರತಿದಿನ ಕಳುಹಿಸುವ ಪತ್ರಿಕಾಪ್ರಕಟಣೆಗಳೆಲ್ಲ ಹಳೆಯ ಯುನಿಕೋಡ್ ಅಲ್ಲದ ವಿಧಾನದಲ್ಲೇ ಇವೆ. ಯುನಿಕೋಡ್ ಕನ್ಸೋರ್ಶಿಯಂಗೆ ಕನ್ನಡ ಲಿಪಿ ಹಾಗೂ ಈ ಲಿಪಿಯಲ್ಲಿ ಅಳವಡಿಸಬೇಕಾಗಿರುವ ಕನ್ನಡ, ತುಳು, ಕೊಡವ, ಕೊಂಕಣಿ, ಬ್ಯಾರಿ, ಇತ್ಯಾದಿ ಭಾಷೆಗಳ ಬಗ್ಗೆ ಸಲಹೆ ನೀಡಲು ಒಂದು ಸ್ಥಾನಿಕ ಸಮಿತಿಯ ರಚನೆ. ಕನ್ನಡಕ್ಕೆ ಅತೀ ಅಗತ್ಯವಿರುವ ಕೆಲವು ಉತ್ತಮ ಗುಣಮಟ್ಟದ ಕನ್ನಡ ಲಿಪಿಯ ಯುನಿಕೋಡ್ ಬೆಂಬಲಿತ ಓಪನ್‌ಟೈಪ್ ಫಾಂಟ್‌ಗಳನ್ನು ತಯಾರಿಸಿ ಉಚಿತವಾಗಿ ಹಂಚುವುದು. ಡಿಟಿಪಿಗೆ ಸಂಬಂಧಿತ ಉಚಿತ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಕನ್ನಡ ಓಪನ್‌ಟೈಪ್ ಫಾಂಟ್‌ಗಳನ್ನು ಸರಿಪಡಿಸುವುದು.

ಕನ್ನಡ ತಂತ್ರಾಂಶ ಸಲಹಾ ಸಮಿತಿ ಕರ್ನಾಟಕ ಸರಕಾರವು ಕನ್ನಡ ತಂತ್ರಾಂಶ ಸಮಿತಿಯನ್ನು ಸ್ಥಾಪಿಸಿದೆ (೨೦೦೮). ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ| ಚಿದಾನಂದ ಗೌಡರು ಇದರ ಅಧ್ಯಕ್ಷರು. ಈ ಸಮಿತಿಯು ಈಗಾಗಲೆ (ಮೇ ೨೦೧೦) ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಸಮಿತಿಯು ಸೂಚಿಸಿದ ಪ್ರಮುಖ ಸಲಹೆಗಳು-

ತುರ್ತಾಗಿ ತಯಾರಿಸಬೇಕಾದ ತಂತ್ರಾಂಶಗಳು :
೧. ಆಸ್ಕಿಯಿಂದ ಯುನಿಕೋಡ್‌ಗೆ ಪರಿವರ್ತಕಗಳು (ಎಂ.ಎಸ್.ವರ್ಡ್, ಎಕ್ಸೆಲ್, ಎಕ್ಸೆಸ್, ಪೇಜ್‌ಮೇಕರ್, ಕ್ವಾರ್ಕ್ ಎಕ್ಸ್‌ಪ್ರೆಸ್)
೨. ಯುನಿಕೋಡ್‌ನಲ್ಲಿ ಅಕ್ಷರಶೈಲಿಗಳ ತಯಾರಿಕೆ :(೧) ಡಿ.ಟಿ.ಪಿ.ಗಾಗಿ ಹತ್ತು  (೨). ವಿಶೇಷ ವಿನ್ಯಾಸಗಳಿಗೆ ಐದು ಅಕ್ಷರ ಶೈಲಿಗಳು
೩. ಲಿನಕ್ಸ್ ಆಧಾರಿತ ಮುಕ್ತ ಆಕರ ತಂತ್ರಾಂಶ (ಓಪನ್ ಆಫೀಸ್, ಜಿಂಪ್, ಇಂಕ್‌ಸ್ಪೇಸ್, ಸ್ಕ್ರೈಬಸ್‌ಗಳನ್ನು ಕನ್ನಡದ ಬಳಕೆಗೆ ಅನುವಾಗುವಂತೆ ಸಿದ್ಧಪಡಿಸುವುದು.)
೪. ಮೊಬೈಲ್ ಫೋನ್‌ಗಳಿಗಾಗಿ ಯೂನಿಕೋಡ್ ರೆಂಡರಿಂಗ್ ಎಂಜಿನ್
೫. ಇತರ ರಾಜ್ಯ ಮತ್ತು ಪರದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕಲಿಕೆಗಾಗಿ ವಾಸ್ತವಸದೃಶ ವಿಶ್ವವಿದ್ಯಾನಿಲಯ (ವರ್ಚುವಲ್ ಯುನಿವರ್ಸಿಟಿ)ಯ ಸ್ಥಾಪನೆ ಮತ್ತು ಕನ್ನಡ ಕಲಿಕೆ ತಂತ್ರಾಂಶದ ತಯಾರಿ (ಇಂಗ್ಲೀಷ್ ಮೂಲಕ)
೬. ಕನ್ನಡ ಬ್ರೈಲ್ ಸಂಬಂಧಿತ ತಂತ್ರಾಂಶ (ಸ್ಪರ್ಶಲಿಪಿ ಮತ್ತು ದೃಶ್ಯಲಿಪಿಗಳ ಕೀಲಿಮಣೆಗಳು, ಅಕ್ಷರವಿನ್ಯಾಸಗಳು, ಪರಿವರ್ತಕಗಳು, ಮತ್ತು ಧ್ವನಿ ತಂತ್ರಾಂಶಗಳು ಸೇರಿದಂತೆ)
೭. ಆಪ್ಟಿಕಲ್ ಕ್ಯಾರೆಕ್ಟರ್ ರೆಕೆಗ್ನಿಶನ್ (ಒ.ಸಿ.ಆರ್., ಅಕ್ಷರ ಜಾಣ)
೮. ಕನ್ನಡದಲ್ಲಿ ಧ್ವನಿ ಸಂಸ್ಕರಣೆ (ಕನ್ನಡ ಪಠ್ಯದಿಂದ ಕನ್ನಡ ಧ್ವನಿಗೆ, ಮತ್ತು ಕನ್ನಡ ಧ್ವನಿಯಿಂದ ಕನ್ನಡ ಪಠ್ಯಕ್ಕೆ)
೯. ಕನ್ನಡ ಕಲಿಕಾ ತಂತ್ರಾಂಶದ ತಯಾರಿ (ಬಹುಮಾಧ್ಯಮ ಸೇರಿಸಿ), ಮತ್ತು ಕನ್ನಡ ಲೋಗೋವನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು
೧೦. ಅಂತರಜಾಲದಲ್ಲಿ ನಿಘಂಟುಗಳನ್ನು ಸೇರಿಸುವುದು
೧೧. ಪಾರಿಭಾಷಿಕ ಪದಕೋಶದ ತಯಾರಿ ಮತ್ತು ಅವುಗಳನ್ನು ಅಂತರಜಾಲದಲ್ಲಿ ಸೇರಿಸುವುದು
೧೨. ಕನ್ನಡ ಭಾಷಾ ಸಂಸ್ಕರಣೆಯ (ಪದಪರೀಕ್ಷೆ, ವ್ಯಾಕರಣ ಪರೀಕ್ಷೆ, ವ್ಯಾಕರಣಾಂಶ ವಿಶ್ಲೇಷಣೆಗಳು ಸೇರಿದಂತೆ) ತಂತ್ರಾಂಶದ ತಯಾರಿ
೧೩. ಸಾರ್ವಜನಿಕ ಕ್ಷೇತ್ರಕ್ಕೆ ಅಗತ್ಯವಾದ ತಂತ್ರಾಂಶಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವುದು
೧೪. ಅಂತರಜಾಲದಲ್ಲಿ ನಿಖರ ಮಾಹಿತಿಯನ್ನು ನೀಡುವ ಕನ್ನಡ ವಿಶ್ವಕೋಶವನ್ನು ಸ್ಥಾಪಿಸುವುದು
೧೫. ಕನ್ನಡದ ಮೌಲಿಕ ಕೃತಿಗಳನ್ನು ಅಂತರಜಾಲದಲ್ಲಿ ಇರಿಸುವುದು

ಸರಕಾರಕ್ಕೆ ಸಲಹೆಗಳು :
೧. ಕನ್ನಡಕ್ಕೆ ಯೂನಿಕೋಡ್‌ಶಿಷ್ಟತೆಯನ್ನು ಕಡ್ಡಾಯವೆಂದು ಪ್ರಕಟಿಸುವುದು ಮತ್ತು ಕನ್ನಡದ ಎಲ್ಲ ಕೆಲಸಗಳು ಮತ್ತು ಅಂತರಜಾಲ ತಾಣಗಳು ಯುನಿಕೋಡಿನಲ್ಲೇ ಇರಬೇಕೆಂದು ಸುತ್ತೋಲೆ ಹೊರಡಿಸುವುದು.
೨. ಕರ್ನಾಟಕ ಸರ್ಕಾರ ವ್ಯಾಪಕವಾಗಿ ಬಳಸಿರುವ ಮತ್ತು ಬಳಸುತ್ತಿರುವ ಪದ ಸಂಸ್ಕರಣೆ ಮತ್ತು ಮುದ್ರಣ ಕಾರ್ಯಗಳಿಗಾಗಿ ಯೋಗ್ಯ ಸುಂದರ ಯೂನಿಕೋಡ್ ಅಕ್ಷರ ಶೈಲಿಗಳು ಲಭ್ಯವಿಲ್ಲವಾದುದರಿಂದ, ಪದಸಂಸ್ಕರಣೆಯಲ್ಲಿ ಅವು ಲಭ್ಯವಾಗುವ ತನಕ, ಅತ್ಯಾವಶ್ಯಕ ಎನಿಸಿದಲ್ಲಿ ಮಾತ್ರ , ಹಿಂದೆ ಬಳಸಲಾಗಿರುವ ಹಳೆಯ ಸುಂದರ ಅಕ್ಷರ ಶೈಲಿಗಳ ಬಳಕೆಗೆ ಸ್ವಲ್ಪ ಕಾಲ ಅವಕಾಶ ನೀಡುವುದು. ಆದರೆ ಮೂಲ ಮಾಹಿತಿ ಮಾತ್ರ ಯುನಿಕೋಡ್‌ನಲ್ಲೇ ಇರತಕ್ಕದ್ದು.
೩. ಕನ್ನಡದ ಯೂನಿಕೋಡ್ ಅಕ್ಷರ ಶೈಲಿಗಳ ಲೋಪದೋಷಗಳ ನಿವಾರಣೆಗೆ ಮತ್ತು ಸುಂದರ ಯೂನಿಕೋಡ್ ಅಕ್ಷರಶೈಲಿಗಳ ತಯಾರಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವುದು.
೪. ಕರ್ನಾಟಕ ಸರಕಾರದ ಕೆಲಸಗಳಿಗೆಲ್ಲ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶವನ್ನೇ ಬಳಸಬೇಕೆಂದು, ಮತ್ತು ವಿಶೇಷವಾದ ಕೆಲಸಕ್ಕೆ ಮುಕ್ತ ತಂತ್ರಾಂಶ ಅಲಭ್ಯವಾಗಿದ್ದಾಗ ಮಾತ್ರ, ವ್ಯಾಪಾರೀ ತಂತ್ರಾಂಶ ಬಳಸಬೇಕೆಂದು ಸುತ್ತೋಲೆ ಹೊರಡಿಸುವುದು.
೫. ಮೊಬೈಲ್ ಫೋನ್ ತಯಾರಕರಿಗೆ ಯೂನಿಕೋಡ್ ಶಿಷ್ಟತೆಯನ್ನು ಅಳವಡಿಸಲು ನಿರ್ದೇಶಿಸುವುದು.
೬. ಕನ್ನಡ ತಂತ್ರಾಂಶ ಮತ್ತು ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿಯನ್ನು ನೇಮಿಸುವುದು.
೭. ಯೂನಿಕೋಡ್ ಒಕ್ಕೂಟಕ್ಕೆ ಕಾಲಕಾಲಕ್ಕೆ ಸರಿಯಾಗಿ ಅಗತ್ಯವಾದ ಮಾಹಿತಿಯನ್ನು ಸಲಹಾಸಮಿತಿಯ ಮೂಲಕ ಒದಗಿಸುವುದು.
೮. ಕನ್ನಡ ತಂತ್ರಾಂಶ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸುವುದು.
೯. ಓಪನ್ ಆಫೀಸ್ ಬಳಕೆಯನ್ನು ಜನಪ್ರಿಯಗೊಳಿಸಲು ಸರಕಾರೀ ಸಿಬ್ಬಂದಿಗಳಿಗೆ ಆಗಾಗ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.
೧೦. ಮಾಹಿತಿಸಿಂಧು ಯೋಜನೆಯಲ್ಲಿ ಶೈಕ್ಷಣಿಕ ಮಾಹಿತಿಗಳು ಕನ್ನಡದಲ್ಲಿಯೇ ಇರಲು ಮತ್ತು ಗಣಕ ಶಿಕ್ಷಣ ಕನ್ನಡದ ಮೂಲಕವೇ ಆಗಲು ಕ್ರಮ ಕೈಗೊಳ್ಳುವುದು.
೧೧. ಉತ್ತಮ ಕನ್ನಡ ತಂತ್ರಾಂಶ ತಯಾರಕರಿಗೆ ಪ್ರತಿ ವರ್ಷವೂ ಉನ್ನತ ಮೌಲ್ಯದ (೧ ಲಕ್ಷ ರೂ. ಮತ್ತು ೫೦,೦೦೦ರೂ.) ಬಹುಮಾನಗಳನ್ನು ನೀಡುವುದು.
೧೨. ಪ್ರತಿಯೊಂದು ವಿಶ್ವವಿದ್ಯಾನಿಲಯವೂ ಪ್ರತೀ ವರ್ಷ ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಯ ಕುರಿತು ಒಂದು ವಿಶ್ವಮಟ್ಟದ ಸಮಾವೇಶವನ್ನು ನಡೆಸುವಂತೆ ಸುತ್ತೋಲೆ ಹೊರಡಿಸುವುದು, ಮತ್ತು ಅದಕ್ಕೆ ಧನಸಹಾಯ ನೀಡುವುದು.
೧೩. ಕನ್ನಡದ ವಿಶ್ವಕೋಶವು ನಿರಂತರವಾಗಿ ಅಂತರಜಾಲದಲ್ಲಿ ಲಭ್ಯವಾಗಿರುವಂತೆ ವ್ಯವಸ್ಥೆ ಮಾಡುವುದು, ಮತ್ತು ಇದರ ನಿರ್ವಹಣೆಗಾಗಿ ಖಾಸಗಿ ಸಂಸ್ಥೆ ಮತ್ತು ಸರ್ಕಾರದ ಪ್ರತಿನಿಧಿಗಳಿರುವ ಒಂದು ಆಡಳಿತ ಮಂಡಳಿಯನ್ನು ಸ್ಥಾಪಿಸುವುದು.

ಸಮಿತಿಯು ಆಗ ಅತೀ ಅಗತ್ಯವಿದ್ದ ಕೆಲವು ತಂತ್ರಾಂಶಗಳ ತಯಾರಿಕೆಗೆ ಟೆಂಡರ್ ಕರೆಯಲು ತೀರ್ಮಾನಿಸಿತು (೨೦೧೦). ಅವು ಹಳೆಯ ತಲೆಮಾರಿನ ತಂತ್ರಜ್ಞಾನದಲ್ಲಿ ಸೃಷ್ಟಿಸಲಾಗಿರುವ ಕನ್ನಡ ಪಠ್ಯವನ್ನು ಯೂನಿಕೋಡ್‌ಗೆ ಬದಲಾಯಿಸಲು ಅಗತ್ಯವಿರುವ ಪರಿವರ್ತಕಗಳು, ಕನ್ನಡಕ್ಕಾಗಿ ಹನ್ನೆರಡು ಓಪನ್ ಟೈಪ್ ಫಾಂಟ್‌ಗಳು, ದೃಷ್ಟಿವಂಚಿತರಿಗೆ ಅನುಕೂಲವಾಗುವಂತೆ ಸ್ಪರ್ಶ ಲಿಪಿ ಮತ್ತು ದೃಶ್ಯ ಲಿಪಿಗಳ ನಡುವಣ ಪರಿವರ್ತಕ ಹಾಗೂ ಮೊಬೈಲ್ ಫೋನ್‌ಗಳಿಗೆ ಕನ್ನಡ ತಂತ್ರಾಂಶ. ಇವುಗಳ ತಯಾರಿಗೆ ಆದೇಶ ನೀಡಿ (೨೦೧೧) ಅವು ತಯಾರಾಗಿ (೨೦೧೨) ಸರಿಸುಮಾರು ಒಂದು ವರ್ಷದ ಹತ್ತಿರವಾಗುತ್ತ (೨೦೧೩) ಬಂತು. ಸರಕಾರ ಮಾತ್ರ ಇನ್ನೂ ಈ ತಂತ್ರಾಂಶಗಳನ್ನು ಜನರ ಬಳಕೆಗೆ ಬಿಡುಗಡೆ ಮಾಡಿಲ್ಲ.

ಸಹಜಭಾಷಾ ಸಂಸ್ಕರಣೆ ಗಣಕದಲ್ಲಿ ಭಾಷೆಯ ಬಳಕೆಯಲ್ಲಿ ಸಹಜ ಭಾಷಾ ಸಂಸ್ಕರಣೆ (Natural Language Processing) ಒಂದು ಬಹುಮುಖ್ಯ ಅಂಗ. ಪಠ್ಯಗಳ ಸಾರಾಂಶ ತಯಾರಿ, ಪಠ್ಯದಲ್ಲಿ ಬಳಸಿರುವ ಪದ, ವಾಕ್ಯಗಳ ವಿಶ್ಲೇಷಣೆ, ಪಠ್ಯದಿಂದ ಧ್ವನಿಗೆ, ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಅನುವಾದ -ಇತ್ಯಾದಿ ಎಲ್ಲ ಈ ವಿಭಾಗದಡಿ ಬರುತ್ತವೆ. ಇದು ಸಂಶೋಧನೆಯ ಕ್ಷೇತ್ರ. ಈ ಕೆಲಸ ಕನ್ನಡ ಭಾಷೆಯಲ್ಲಿ ಆಗಿಯೇ ಇಲ್ಲ ಎನ್ನಬಹುದು. ಸಹಜ ಭಾಷಾ ಸಂಸ್ಕರಣೆಗೆ ಮೊದಲ ಹಂತ ಬಹುದೊಡ್ಡ ಪಠ್ಯಕಣಜವನ್ನು (ಕಾರ್ಪಸ್) ತಯಾರಿಸುವುದು. ಇದರಲ್ಲಿ ಹಲವು ವಿಧಗಳಿವೆ -ಕೇವಲ ಪದಗಳು, ವಾಕ್ಯಗಳು, ಕಥೆಗಳು ಮತ್ತು ಎರಡು ಭಾಷೆಯ ಸಮಾಂತರ ಪಠ್ಯಗಳು. ಸಂತಸದ ಸಂಗತಿಯೆಂದರೆ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡದ ಪಠ್ಯಕಣಜವನ್ನು ತಯಾರಿಸಲು ಕಾರ್ಯಾರಂಭ ಮಾಡಿದೆ. ದುಃಖದ ಸಂಗತಿಯೆಂದರೆ ಈ ಕೆಲಸವನ್ನು ಅದು ಅರ್ಧದಲ್ಲೇ ನಿಲ್ಲಿಸಿದೆ.

ಮುಂದೇನು? ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡ ಭಾಷೆಯ ಅಳವಡಿಕೆ ಮತ್ತು ಬಳಕೆ ಬಹು ಮುಖ್ಯ. ಇದು ಕೇವಲ ಸರಕಾರವೊಂದರ ಕೆಲಸವಲ್ಲ. ಎಲ್ಲರೂ ಇದಕ್ಕಾಗಿ ಕೈ ಎತ್ತಬೇಕು. ಯಾರು ಯಾರು ಏನೇನು ಮಾಡಬೇಕು ಎಂಬುದನ್ನು ಈಗ ನೋಡೋಣ:

- ಜನಸಾಮಾನ್ಯರು
ಮುಖ್ಯವಾಗಿ ಎಲ್ಲರೂ ಗಣಕ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಎಲ್ಲ ಅಂಗಗಳಲ್ಲಿ (ಉದಾ: ಬ್ಯಾಂಕಿನ ಎಟಿಎಂ, ಮೊಬೈಲ್ ಫೋನ್) ಕನ್ನಡ ಭಾಷೆಯನ್ನೇ ಬಳಸುವುದು. ಹಾಗೆ ಬಳಸುವಾಗ ಜಾಗತಿಕ ಶಿಷ್ಟತೆಯಾದ ಯುನಿಕೋಡನ್ನೇ ಬಳಸುವುದು. ಸರಕಾರದ ಎಲ್ಲ ಗಣಕೀಕರಣಗಳಲ್ಲಿ ಕನ್ನಡ ಭಾಷೆಯನ್ನೇ ಬಳಸುವಂತೆ ಒತ್ತಡ ಹೇರುವುದು. ಉದಾಹರಣೆಗೆ ವಿದ್ಯುತ್ ಇಲಾಖೆ, ಸಾರಿಗೆ ಇಲಾಖೆ, ಇತ್ಯಾದಿಯವರು ಇಂಗ್ಲೀಶ್ ಭಾಷೆಯಲ್ಲಿ ರಸೀತಿ ನೀಡಿದರೆ ಸ್ವೀಕರಿಸಲು ನಿರಾಕರಿಸುವುದು. ಕನ್ನಡ ಭಾಷೆಯಲ್ಲೇ ವ್ಯವಹರಿಸುವಂತೆ ಮತ್ತು ರಸೀತಿ ನೀಡುವುಂತೆ ವ್ಯಾಪಾರಿಗಳ ಮೇಲೆ ಒತ್ತಡ ಹೇರುವುದು.

- ಮಾಧ್ಯಮ ಪ್ರತಿನಿಧಿಗಳು
ಗಣಕ ಮತ್ತು ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡವನ್ನು ಬಳಸುವುದು. ಲೇಖನ ಮತ್ತು ವರದಿಗಳ ಮೂಲಕ ಜನರಿಗೆ ಸರಿಯಾದ ಮಾಹಿತಿ ಹಂಚುವುದು. ಗಣಕದಲ್ಲಿ ಕನ್ನಡ ಸಂಪೂರ್ಣ ಸಾಧ್ಯ ಎಂದು ಪ್ರಚಾರ ಮಾಡುವುದು. ಮುದ್ರಣ ತಂತ್ರಾಂಶಗಳಲ್ಲಿ ಕನ್ನಡ ಯುನಿಕೋಡ್ ಸೌಲಭ್ಯ ನೀಡುವುಂತೆ ವ್ಯಾಪಾರಿಗಳನ್ನು ಒತ್ತಾಯಿಸುವಂತೆ ತಮ್ಮ ಯಜಮಾನರಲ್ಲಿ ಕೇಳಿಕೊಳ್ಳುವುದು.

- ಸಾಹಿತಿಗಳು
ಮೇಲೆ ಹೇಳಿದಂತೆ ಮಾದ್ಯಮ ಪ್ರತಿನಿಧಿಗಳು ಏನೇನು ಮಾಡಬೇಕೋ ಅದೆಲ್ಲವನ್ನು ಮಾಡುವುದು ಮತ್ತು ಅದರ ಜೊತೆಗೆ ಮಾಹಿತಿ ತಂತ್ರಜ್ಞಾನ ಬಗ್ಗೆ ಕನ್ನಡದಲ್ಲಿ ಲೇಖನ ಬರೆಯುವುದು. ಲೇಖನ, ಪುಸ್ತಕಗಳ ದತ್ತಸಂಚಯ (ಡಾಟಾಬೇಸ್) ತಯಾರಿಸುವುದು.

- ಸಂಶೋಧಕರು
ಗಣಕ ಮತ್ತು ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡವನ್ನು ಬಳಸುವುದು. ಲೇಖನ, ಪುಸ್ತಕಗಳ ದತ್ತಸಂಚಯ (ಡಾಟಾಬೇಸ್) ತಯಾರಿಸುವುದು. ಸಂಶೋಧನೆಗೆ ಗಣಕವನ್ನು ಬಳಸುವುದು. ಭಾಷಾಸಂಸ್ಕರಣೆಗೆ ಅಗತ್ಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು ಹಾಗೂ ಭಾಷಾಸಂಸ್ಕರಣೆ ಮಾಡುವುದು.

- ತಂತ್ರಜ್ಞರು
ಗಣಕ ಮತ್ತು ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡವನ್ನು ಬಳಸುವುದು. ಅಗತ್ಯ ಮೂಲಭೂತ ಸಲಕರಣೆಗಳನ್ನು ತಯಾರಿಸುವುದು. ಮುಕ್ತ ತಂತ್ರಾಂಶಗಳನ್ನು ಕನ್ನಡೀಕರಿಸುವುದು. ಈಗಾಗಲೇ ವಿವರಿಸಿದಂತೆ ಉಚಿತ ಮತ್ತು ಮುಕ್ತ ತಂತ್ರಾಂಶಗಳಲ್ಲಿ ಕನ್ನಡದ ಯುನಿಕೋಡ್ ಬೆಂಬಲವನ್ನು ಸುಧಾರಿಸುವುದು. ಕನ್ನಡಕ್ಕೆ ಕೆಲವು ಅತ್ಯುತ್ತಮ ಗುಣಮಟ್ಟದ ಓಪನ್‌ಟೈಪ್ ಫಾಂಟ್ ತಯಾರಿಸುವುದು.

ಈ ಎಲ್ಲ ಜನರೂ ಇನ್ನೊಂದು  ಬಹುಮುಖ್ಯ ಕೆಲಸ ಮಾಡಬೇಕು. ಅದು ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವುದು.

ಕನ್ನಡ ಭಾಷೆಯೆಂದರೆ ಕೇವಲ ಪಂಪ ರನ್ನ ಕುಮಾರವ್ಯಾಸರಲ್ಲ, ಅತ್ಯಾಧುನಿಕ ವಿಜ್ಞಾನ ತಂತ್ರಜ್ಞಾನದ ಎಲ್ಲ ಅಂಗಗಳೂ ಕನ್ನಡ ಭಾಷೆಯಲ್ಲಿ ರಾರಾಜಿಸಲಿ ಎಂದು ಆಶಿಸೋಣ.

* ಲೇಖನದಲ್ಲಿ ವ್ಯಕ್ತಪಡಿಸಲಾಗಿರುವ ಎಲ್ಲ ಅಭಿಪ್ರಾಯಗಳೂ ಲೇಖಕರವು

ಕಾಮೆಂಟ್‌ಗಳಿಲ್ಲ:

badge