ಶುಕ್ರವಾರ, ಡಿಸೆಂಬರ್ 27, 2013

ದಾರಿತೋರುವ ತಂತ್ರಜ್ಞಾನ ಜಿಪಿಎಸ್

ಟಿ. ಜಿ. ಶ್ರೀನಿಧಿ

ಹೀಗೊಂದು ಸನ್ನಿವೇಶ ಕಲ್ಪಿಸಿಕೊಳ್ಳಿ: ಹವಾನಿಯಂತ್ರಿತ ರೈಲಿನಲ್ಲಿ, ಮೇಲಿನ ಬರ್ತ್‌ನಲ್ಲಿ ಮಲಗಿ ಪ್ರಯಾಣಿಸುತ್ತಿದ್ದೀರಿ. ರೈಲು ಮಧ್ಯರಾತ್ರಿ ಯಾವುದೋ ನಿಲ್ದಾಣದಲ್ಲಿ ನಿಲ್ಲುತ್ತದೆ, ನಿಮಗೆ ಎಚ್ಚರವೂ ಆಗುತ್ತದೆ. ಇದ್ಯಾವ ನಿಲ್ದಾಣವೋ ತಿಳಿದುಕೊಳ್ಳುವ ಕುತೂಹಲ ಒಂದುಕಡೆ, ಬೆಚ್ಚನೆಯ ಹೊದಿಕೆ ತೆಗೆದು ಇಳಿಯಲು ಸೋಮಾರಿತನ ಇನ್ನೊಂದು ಕಡೆ.

ಕಡೆಗೆ ಸೋಮಾರಿತನವೇ ಗೆದ್ದಾಗ ಮೊಬೈಲ್ ಫೋನ್ ಕೈಗೆತ್ತಿಕೊಂಡು ಗೂಗಲ್ ಮ್ಯಾಪ್ಸ್ ತೆರೆಯುತ್ತೇವೆ, ನಾನೆಲ್ಲಿದ್ದೇನೆ ಎಂದು ಅದನ್ನು ಕೇಳುತ್ತಿದ್ದಂತೆ ಫೋನಿನಲ್ಲಿರುವ ಭೂಪಟದಲ್ಲಿ ನಾವು ಇರುವ ಊರು ಕಾಣಿಸಿಕೊಳ್ಳುತ್ತದೆ!

ಇದನ್ನು ಸಾಧ್ಯವಾಗಿಸುವುದು ಜಿಪಿಎಸ್, ಅಂದರೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ. ಅಪರಿಚಿತ ಜಾಗಗಳಲ್ಲಿದ್ದಾಗ ಆ ಸ್ಥಳದ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲಷ್ಟೇ ಅಲ್ಲ, ವಾಹನ ಚಲಾಯಿಸುವಾಗ ನಮಗೆ ಮಾರ್ಗದರ್ಶನ ನೀಡುವ ಯಂತ್ರಗಳಲ್ಲಿ ಬಳಕೆಯಾಗುವುದೂ ಇದೇ ತಂತ್ರಜ್ಞಾನ. ಬಹುತೇಕ ಮೊಬೈಲ್ ಫೋನುಗಳಲ್ಲಿ ಲಭ್ಯವಿರುವ ಸೌಲಭ್ಯವಂತೂ ಈ ತಂತ್ರಜ್ಞಾನವನ್ನು ನಮ್ಮ ಅಂಗೈಗೇ ತಂದಿಟ್ಟುಬಿಟ್ಟಿದೆ!

ಅಂದಹಾಗೆ ನಾವೆಲ್ಲಿದ್ದೇವೆ ಎಂದು ಈ ತಂತ್ರಜ್ಞಾನಕ್ಕೆ ಗೊತ್ತಾಗುವುದು ಹೇಗೆ?
ಈ ಕೆಲಸಕ್ಕಾಗಿ ಉಪಗ್ರಹಗಳ ಒಂದು ಜಾಲವೇ ಬಳಕೆಯಾಗುತ್ತದೆ. ಸಂಖ್ಯೆಯಲ್ಲಿ ಎರಡು ಡಜನ್‌ನಷ್ಟಿರುವ ಈ ಉಪಗ್ರಹಗಳು ಭೂಮಿಯಿಂದ ಸುಮಾರು ೧೨೦೦೦ ಮೈಲಿಗಳಷ್ಟು ಎತ್ತರದಲ್ಲಿ ಪರಿಭ್ರಮಿಸುತ್ತಿರುತ್ತವೆ. ಈ ಉಪಗ್ರಹಗಳ ಮೇಲೆ ಸದಾಕಾಲ ಒಂದು ಕಣ್ಣಿಟ್ಟಿದ್ದು ಅವುಗಳ ಕಾರ್ಯಾಚರಣೆಯನ್ನು ನಿಯಂತ್ರಿಸುವ ಕೆಲಸವನ್ನು ಭೂಮಿಯ ಮೇಲಿರುವ ಗ್ರೌಂಡ್ ಸ್ಟೇಶನ್‌ಗಳು ಮಾಡುತ್ತವೆ.

ಸುಮಾರು ಹತ್ತು ವರ್ಷಗಳಿಗೊಮ್ಮೆಯಂತೆ ಈ ಉಪಗ್ರಹಗಳು ನಿಷ್ಕ್ರಿಯವಾದಾಗ ಅವುಗಳ ಬದಲಿಗೆ ಬೇರೆ ಉಪಗ್ರಹಗಳನ್ನು ಉಡಾಯಿಸುವ ಕೆಲಸ ಕೂಡ ನಡೆಯುತ್ತಲೇ ಇರುತ್ತದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ನೆರವಾಗಲು ಯಾವುದೇ ಸಮಯದಲ್ಲಿ ಮೂರು ಹೆಚ್ಚುವರಿ ಉಪಗ್ರಹಗಳು ಅಂತರಿಕ್ಷದಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ. ಅಂದರೆ, ಎರಡು ಡಜನ್ ಉಪಗ್ರಹಗಳಲ್ಲಿ ಕಾರ್ಯನಿರತವಾಗಿರುವವು ೨೧ ಮಾತ್ರವೇ.

ಮೊಬೈಲ್ ಫೋನಿನಲ್ಲೋ ಪ್ರತ್ಯೇಕ ಉಪಕರಣದಲ್ಲೋ ಜಿಪಿಎಸ್ ರಿಸೀವರ್ ಇರುವ ಯಾರು ಬೇಕಿದ್ದರೂ ಈ ಉಪಗ್ರಹಗಳಿಂದ ಸಂಕೇತ ಪಡೆದುಕೊಂಡು ತಾವು ಎಲ್ಲಿದ್ದೇವೆ ಎಂದು ತಿಳಿದುಕೊಳ್ಳುವುದು ಸಾಧ್ಯ. ಬಹಳಷ್ಟು ಸಂದರ್ಭಗಳಲ್ಲಿ ಈ ಮಾಹಿತಿ ನಾವಿರುವ ಜಾಗದಿಂದ ಹೆಚ್ಚೆಂದರೆ ಸುಮಾರು ೧೫ ಮೀಟರಿನಷ್ಟು ಆಚೀಚೆ ಹೋಗಿರಬಹುದು ಅಷ್ಟೆ. ಎರಡು ಸೆಂಟೀಮೀಟರಿಗಿಂತ ಹೆಚ್ಚು ತಪ್ಪು ಮಾಡದ ನಿಖರ ರಿಸೀವರುಗಳೂ ಇವೆ; ಅವುಗಳ ಬೆಲೆ ಮಾತ್ರ, ಸಹಜವಾಗಿಯೇ, ದುಬಾರಿಯಾಗಿರುತ್ತದೆ.

ಪ್ರಸ್ತುತ ಈ ಸೌಲಭ್ಯ ಒದಗಿಸಲಿಕ್ಕಾಗಿ ಕೆಲಸಮಾಡುತ್ತಿರುವ ಉಪಗ್ರಹಗಳನ್ನು ಅಮೆರಿಕಾ ಸರಕಾರ ನಿರ್ವಹಿಸುತ್ತದೆ. ಹೀಗಾಗಿ ಜಿಪಿಎಸ್ ಬಳಕೆದಾರರ ಮೇಲೆಲ್ಲ ಅಮೆರಿಕಾದ ಪ್ರತ್ಯಕ್ಷ ಅಥವಾ ಪರೋಕ್ಷ ನಿಯಂತ್ರಣ ಇದ್ದಂತಾಗುತ್ತದೆ. ಈ ಪರಿಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ ಚೀನಾ ೨೦೧೧ರಲ್ಲಿ ತನ್ನದೇ ಆದ ಪರ್ಯಾಯ ವ್ಯವಸ್ಥೆಯನ್ನು ರೂಪಿಸಿದೆ. ೨೦೨೦ರ ವೇಳೆಗೆ ಈ ಪರ್ಯಾಯ ಜಾಲ ಈಗಿನ ಜಿಪಿಎಸ್ ವ್ಯವಸ್ಥೆಯಷ್ಟೇ ಶಕ್ತವಾಗಿ ಬೆಳೆಯಲಿದೆಯಂತೆ.

ಇಂತಹುದೇ ಒಂದು ವ್ಯವಸ್ಥೆಯನ್ನು ಭಾರತವೂ ರೂಪಿಸುತ್ತಿದೆ. ಒಟ್ಟು ಏಳು ಉಪಗ್ರಹಗಳಿರುವ 'ಇಂಡಿಯನ್ ರೀಜನಲ್ ನ್ಯಾವಿಗೇಶನಲ್ ಸ್ಯಾಟೆಲೈಟ್ ಸಿಸ್ಟಂ' ಎಂಬ ಈ ವ್ಯವಸ್ಥೆಯ ೨೦೧೫ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಸರಣಿಯ ಮೊದಲ ಉಪಗ್ರಹ 'ಐಆರ್‌ಎನ್‌ಎಸ್‌ಎಸ್-೧ಎ' ೨೦೧೩ರ ಜುಲೈ ತಿಂಗಳಲ್ಲೇ ಉಡಾವಣೆಯಾಗಿದೆ.

ಡಿಸೆಂಬರ್ ೨೭, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Govinda Nelyaru ಹೇಳಿದರು...

ಜಿಪಿಎಸ್ ಬಹಳ ಉಪಯುಕ್ತ. ಪರ ಊರವರಿಗೆ ದಾರಿ ತೋರಿಸಲು ಸ್ವತಹ ನಾನು ಹೋಗುವ ಬದಲು ನನ್ನ ಜಿಪಿಎಸ್ ಕೊಟ್ಟು ಕಳುಹಿಸಲು ಒಮ್ಮೆ ತಯಾರಾಗಿದ್ದೆ. ಜಿಪಿಎಸ್ ಬಗೆಗೆ ನನ್ನ ಮೂರು ಬ್ಲೋಗ್ ಬರಹಗಳ ಕೊಂಡಿ - http://halliyimda.blogspot.in/search/label/GPS

Openstreet ಗಾಗಿ ಸುಮಾರು ಓಡಾಟ ನಡೆಸಿದ್ದೇನೆ. ಕೊನೆಗೆ ನನ್ನ ಗಾರ್ಮಿನ್ ಜಿಪಿಎಸ್ ನಲ್ಲಿ ಗೂಗಲ್ ಮಾಪ್ ಅಳವಡಿಸುವ ತಂತ್ರ ಪರಿಚಯವಾಯಿತು. ಬೇರೆ ಒತ್ತಡಗಳೂ ಜಾಸ್ತಿಯಾದವು. ಫ್ರೌಡ ಶಾಲೆ ಮಕ್ಕಳಿಗೆ ಭೂಗೋಳದೊಂದಿಗೆ ಇದನ್ನೂ ಕಲಿಸಿದರೆ ಉತ್ತಮವೆಂದು ನನ್ನ ಅನಿಸಿಕೆ.

badge