ಶನಿವಾರ, ಸೆಪ್ಟೆಂಬರ್ 14, 2013

ಕ್ಲಿಕ್ ಮಾಡಿ ನೋಡಿ!


ಛಾಯಾಗ್ರಹಣದ ಸ್ವರೂಪವನ್ನೇ ಬದಲಿಸಿರುವ ಡಿಜಿಟಲ್ ಕ್ಯಾಮೆರಾಗಳು ನಮ್ಮ ಮುಂದಿಡುವ ಸಾಧ್ಯತೆಗಳು ಅಸಂಖ್ಯ. ಅವುಗಳಲ್ಲಿ ಕೆಲವನ್ನು ಪರಿಚಯಿಸುವ ಕೃತಿ 'ಕ್ಲಿಕ್ ಮಾಡಿ ನೋಡಿ!' ಸೆಪ್ಟೆಂಬರ್ ೨೨ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ಟಿ. ಜಿ. ಶ್ರೀನಿಧಿ ಬರೆದಿರುವ, ನವಕರ್ನಾಟಕ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿ ಛಾಯಾಗ್ರಹಣ ನಡೆದುಬಂದ ದಾರಿಯ ಪರಿಚಯದಿಂದ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನದ ಪಕ್ಷಿನೋಟದವರೆಗೆ, ಛಾಯಾಗ್ರಹಣಕ್ಕೆ ಸಂಬಂಧಪಟ್ಟ ಪರಿಕಲ್ಪನೆಗಳ ಪರಿಚಯದಿಂದ ಕ್ಯಾಮೆರಾ ಕೊಳ್ಳುವಾಗ ನೆನಪಿಟ್ಟುಕೊಳ್ಳಬೇಕಾದ ಅಂಶಗಳವರೆಗೆ ಅನೇಕ ವಿಷಯಗಳತ್ತ ಗಮನಹರಿಸುತ್ತದೆ.
ಫೋಟೋ ಎಡಿಟಿಂಗ್ ಸುಲಭಸೂತ್ರಗಳು, ಮೆಮೊರಿ ಕಾರ್ಡ್ ಕೈಕೊಟ್ಟಾಗ ನಮ್ಮ ಚಿತ್ರಗಳನ್ನು ಮರಳಿ ಪಡೆಯಲು ಅನುಸರಿಸಬೇಕಾದ ಕ್ರಮಗಳು, ಛಾಯಾಗ್ರಹಣದ ಅನೇಕ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸುವ ಉದಾಹರಣೆಗಳು - ಹೀಗೆ ಇನ್ನೂ ಹಲವಾರು ಅಂಶಗಳು ಈ ಕೃತಿಯಲ್ಲಿವೆ. ವಿವಿಧ ಬಗೆಯ ಕ್ಯಾಮೆರಾಗಳಷ್ಟೇ ಅಲ್ಲದೆ ಎಚ್‌ಡಿ, ಥ್ರೀಡಿ ಮುಂತಾದ ತಂತ್ರಜ್ಞಾನಗಳನ್ನೂ ಈ ಕೃತಿ ಪರಿಚಯಿಸುತ್ತದೆ. ದೊಡ್ಡಗಾತ್ರದ (೧/೪ ಡೆಮಿ) ಈ ಕೃತಿಯ ಎಲ್ಲ ಪುಟಗಳೂ ಬಹುವರ್ಣದಲ್ಲಿ ಮುದ್ರಿತವಾಗಿವೆ.

ಪುಸ್ತಕ ಬಿಡುಗಡೆ: ಸೆಪ್ಟೆಂಬರ್ ೨೨, ೨೦೧೩ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು - ೨

ಇದೇ ಸಮಾರಂಭದಲ್ಲಿ ನವಕರ್ನಾಟಕದ ಇನ್ನೂ ಐದು ಕೃತಿಗಳು ಲೋಕಾರ್ಪಣೆಯಾಗಲಿವೆ. ಶ್ರೀ ಟಿ. ಎಸ್. ಗೋಪಾಲ್ ಅವರ 'ಕಾಡು ಕಲಿಸುವ ಪಾಠ' [ಹೆಚ್ಚಿನ ವಿವರಗಳು ಶೀಘ್ರದಲ್ಲೇ!], ಶ್ರೀ ಟಿ. ಆರ್. ಅನಂತರಾಮುರವರ 'ಜ್ವಾಲಾಮುಖಿ' ಹಾಗೂ ಡಾ. ಬಿ. ಎಸ್. ಶೈಲಜಾ ಅವರ 'ಧೂಮಕೇತು' ಕೃತಿಗಳು ಈ ಸಾಲಿನಲ್ಲಿವೆ.

ಶ್ರೀ ನಾಗೇಶ ಹೆಗಡೆಯವರು ಕೃತಿಗಳನ್ನು ಅನಾವರಣ ಮಾಡಲಿದ್ದಾರೆ. 'ಕಾಡಿನೊಳಗೊಂದು ಜೀವ' ಶ್ರೀ ಕೆ. ಎಂ. ಚಿಣ್ಣಪ್ಪನವರು ಅಂದಿನ ಮುಖ್ಯ ಅತಿಥಿ. ಈ ಕಾರ್ಯಕ್ರಮಕ್ಕೆ ನಮ್ಮ, ಹಾಗೂ ನವಕರ್ನಾಟಕ ಪ್ರಕಾಶನದ ವತಿಯಿಂದ ತಮಗೆ ಆದರದ ಸ್ವಾಗತ.

ಕಾಮೆಂಟ್‌ಗಳಿಲ್ಲ:

badge