ಬುಧವಾರ, ಸೆಪ್ಟೆಂಬರ್ 11, 2013

ಹುಲಿ ಸಂರಕ್ಷಣೆಗೆ ಅಳವಡಿಸಬೇಕಾದ ವಿಜ್ಞಾನ

ಖ್ಯಾತ ವನ್ಯಜೀವಿ ವಿಜ್ಞಾನಿ ಡಾ. ಕೆ. ಉಲ್ಲಾಸ ಕಾರಂತರ 'The Science of Saving Tigers' ಕೃತಿಯ ಪರಿಚಯ

ಕೆ.ಎಸ್. ನವೀನ್

"ಹುಲಿ" ಎಂಬುದು ಒಂದು ಮಾಂತ್ರಿಕ ಪದ! ಅದು ಮೀಟುವ ಭಾವಗಳೇ ಬೇರೆ! ವನ್ಯಜೀವಿ ಸಂರಕ್ಷಕರಿಂದ ತೊಡಗಿ ಪ್ರವಾಸಿಗಳವರೆಗೆ (ಬೇಟೆಗಾರರಿಗೂ!) ಬೇರೆ ಬೇರೆ ಭಾವಸಂಚಾರವನ್ನು ತರುವ ಪ್ರಾಣಿ ಹುಲಿ. ಇದು ಭಾರತದ ರಾಷ್ಟ್ರೀಯ ಪ್ರಾಣಿ. ಕಾಡಿನ ಉಳಿವಿಗೆ ಹುಲಿ ಅಗತ್ಯ ಎಂಬುದು ಭಗವದ್ಗೀತೆಯಲ್ಲಿಯೂ ಹೇಳಿದೆ. ಇದೊಂದು ವೈಜ್ಞಾನಿಕ ಸತ್ಯ. ಇಂದು ಹುಲಿ ಜಗತ್ತಿನ ಕೈಬೆರಳೆಣಿಕೆಯ ರಾಷ್ಟ್ರಗಳಲ್ಲಿನ ಸಂಕುಚಿಸುತ್ತಿರುವ ವನ್ಯಪ್ರದೇಶಕ್ಕೆ ಸೀಮಿತವಾಗಿದೆ. ಇದನ್ನು ಉಳಿಸಲು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಗಳು ಸಾಗಿವೆ.

ಹುಲಿಯ ವೈಜ್ಞಾನಿಕ ಸಂರಕ್ಷಣೆ ಇಂದಿನ ಅಗತ್ಯ. ಇದು ಕೇವಲ ಘೋಷಣೆ ಕೂಗುವುದರಿಂದ ಅಥವಾ ಬೈನಾಕ್ಯುಲರ್ ತೂಗಿಕೊಂಡು ಬೆನ್ನುಚೀಲ ಹೊತ್ತು ನಡೆಯುವುದರಿಂದ ಸಾಧ್ಯವಿಲ್ಲ. ಅದಕ್ಕೆ ಶುದ್ಧವಿಜ್ಞಾನ, ತಂತ್ರಜ್ಞಾನದ ಹಾದಿ ಹಿಡಿಯಬೇಕಾಗುತ್ತದೆ. ಆ ದಾರಿಯನ್ನು ಈ ಪುಸ್ತಕ ಸಾಟಿಯಿಲ್ಲದಂತೆ ತೋರುತ್ತದೆ. ಇದರ ಲೇಖಕರುಗಳು ವೈಜ್ಞಾನಿಕ ವನ್ಯ ಸಂರಕ್ಷಣೆಯ ರೂವಾರಿಗಳು. ಇದರ ಪ್ರಧಾನ ಶಿಲ್ಪಿ ಕನ್ನಡದವರೆ ಆದ ಡಾ ಕೆ ಉಲ್ಲಾಸ ಕಾರಂತರು.ಇದು ನಮಗೆ ಹೆಮ್ಮೆಯ ವಿಷಯವೂ ಆಗಬೇಕು. ವೈಜ್ಞಾನಿಕ ವನ್ಯಜೀವಿ ವಿಜ್ಞಾನದ ಜಾಗತಿಕ ನಕಾಶೆಯಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸಿಕೊಟ್ಟವರಲ್ಲಿ ಪ್ರಮುಖರು ಡಾ ಕಾರಂತರು. ಇಲ್ಲಿನ ವೈಜ್ಞಾನಿಕ ಸಂರಕ್ಷಣಾ ವಿಧಾನಗಳ ಪರಿಚಯ, ಸಂರಕ್ಷಣೆಯಲ್ಲಿ ವಿಜ್ಞಾನದ ಅಗತ್ಯ ತಿಳಿಯವನನ್ನು ಎಚ್ಚರಿಸಿ ಹಾದಿ ಅದಲ್ಲ, ಇದು ಎಂದು ಸಂದೇಹಕ್ಕೆ ಎಡೆಮಾಡದಂತೆ ಮನದಟ್ಟು ಮಾಡಿಸುತ್ತದೆ. ಸಂರಕ್ಷಣೆಯಲ್ಲಿ ಇಷ್ಟೆಲ್ಲಾ ಇದೆಯೇ ಎಂದು ಅಚ್ಚರಿಪಡಿಸುತ್ತದೆ. ಪುಸ್ತಕ ಓದಿ ಕೆಳಗಿಡುವ ಹೊತ್ತಿಗೆ, ಓದುಗ ಜ್ಞಾನೋದಯವಾದ ಬುದ್ಧನಂತಾಗಿರುತ್ತಾನೆ.

ಪ್ರತಿ ಹಾಳೆಯಲ್ಲಿ, ಪ್ರತಿ ಪದದಲ್ಲಿ ವಿಜ್ಞಾನ ತುಂಬಿಕೊಂಡಿರುವ ಈ  ಸುಮಾರು ಮುನ್ನೂರೈವತ್ತು ಪುಟಗಳ ಈ ಪುಸ್ತಕ ಡಾ|| ಕಾರಂತರು ಸೇರಿದಂತೆ ಅನೇಕ ಜಾಗತಿಕ ಮಟ್ಟದ ವಿಜ್ಞಾನಿಗಳು ಕಳೆದ ಮುವ್ವತ್ತು ವರ್ಷಗಳಿಂದ ನಡೆಸುತ್ತಿರುವ ಸಂಶೋಧನೆಗಳ ಸಾರ.
ಇದನ್ನು ಡಾ ಕಾರಂತರು ಅವರಿಗೆ ಗುರುಗಳಾಗಿದ್ದ ಮೆಲ್ ಸನ್‌ಕ್ವಿಸ್ಟ್ ಮತ್ತು ಫಿಯೋನಾ ಸನ್‌ಕ್ವಿಸ್ಟ್ ಅವರಿಗೆ ಅರ್ಪಿಸಿದ್ದಾರೆ. 'ಹುಲಿರಾಯನ ಆಕಾಶವಾಣಿ' ಓದಿದವರಿಗೆ ಇದರ ಮೌಲ್ಯ ತಿಳಿಯುತ್ತದೆ.

ಈ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಈ ಎರಡರಲ್ಲಿಯೂ ತಲಾ ಹತ್ತು ಮಹತ್ವದ ಅಧ್ಯಾಯಗಳಿವೆ. ಇವೆಲ್ಲವೂ ಜಾಗತಿಕವಾಗಿ ಮಹತ್ವವಿರುವ ಪತ್ರಿಕೆಗಳಲ್ಲಿ ಈ ಹಿಂದೆ ಪ್ರಕಟವಾಗಿರುವ ಪ್ರಬಂಧಗಳು. ಕಾರಂತರು ತಮ್ಮ ಮುನ್ನುಡಿಯನ್ನು "ಜಗತ್ತಿನ ಕೆಲವೇ ಪ್ರದೇಶಗಳಲ್ಲಿ ಹುಲಿಯನ್ನು ಒಂದು ಬೇಟೆಗಾರ ಪ್ರಾಣಿ ಎಂಬ ಭಯದಿಂದ ನೋಡಲಾಗುತ್ತಿದೆ. ಇಂದು ಮಾನವನ ಕಣ್ಣಿಗೆ ಹುಲಿ ಸೌಂದರ್ಯವಾಗಿಯೋ, ಧಾರ್ಮಿಕ ನೆಲೆಯಲ್ಲಿ ಪೂಜ್ಯಭಾವವಾಗಿ, ಹುಲಿಯ ದೇಹಭಾಗಗಳ ಔಷಧಿಯ ಗುಣಗಳಾಗಿ ಅಥವಾ ಬೇಟೆಯ ನೆನಪಾಗಿ ಕಾಣುತ್ತಿದೆ ಎಂದು ಆರಂಭಿಸುತ್ತ ಹೇಗೆ ಹುಲಿಯ ಬದಲಾದ ಪರಿಸ್ಥಿತಿಯನ್ನು ತಿಳಿಸುತ್ತಾರೆ. ತಮ್ಮ ಎರಡು ದಶಕದ ವೃತ್ತಿಪರ ಸಂಶೋಧನಾ ಕಾರ್ಯಗದಲ್ಲಿನ ಪ್ರಕಟಿಸಿದ ಮಹತ್ವದ ಪ್ರಬಂಧಗಳು ಒಂದೆಡೆ ಸಿಗದ ಕೊರತೆಯನ್ನು ಈ ಪುಸ್ತಕ ನೀಗಿಸುತ್ತದೆ ಎನ್ನುತ್ತಾರೆ. ಈ ಪುಸ್ತಕದಲ್ಲಿ ಮುನ್ನುಡಿಯಿಂದ ತೊಡಗಿ ಪ್ರತಿಯೊಂದು ವಿಭಾಗವೂ ಏನನ್ನಾದರೂ ಕಲಿಸುತ್ತಾ ಹೋಗುತ್ತದೆ. ಪರಿವಿಡಿಯನ್ನು ಓದಿದರೇ ಪುಸ್ತಕ ಕುರಿತ ಒಂದು ಚಿತ್ರಣ ಕಣ್ಣಮುದಂದೆ ಬರುತ್ತದೆ. ಹೆಸರಾಂತ ವಿಜ್ಞಾನಿ ಜಾನ್ ಸೈಡನ್‌ಸ್ಟಿಕರ್ ಸುದೀರ್ಘ ಮುನ್ನುಡಿಯಲ್ಲಿ ಕೃತಿಯ ಮಹತ್ವವನ್ನು ತಿಳಿಸುತ್ತಾರೆ. ಒಂದು ಉದಾಹರಣೆ ನೋಡಿ: "ಈ ಪುಸ್ತಕದಲ್ಲಿನ ಪ್ರತಿಯೊಂದು ಪ್ರಬಂಧವೂ ಒಂದೊಂದು ರತ್ನ ಹಾಗೂ ವಿಜ್ಞಾನ ಮತ್ತು ಕಾರ್ಯನೀತಿಯೊಂದಿಗೆ ವನ್ಯಸಂರಕ್ಷಣೆಯನ್ನು ಹೇಗೆ ಮಾಡಬಹುದು ಎಂಬುದಕ್ಕೆ ಮಾದರಿ. ಡಾ ಕಾರಂತರ ಕೆಲಸ ಆಧುನಿಕ ವನ್ಯಜೀವಿ ವಿಜ್ಞಾನ ಮತ್ತು ಸಂರಕ್ಷಣೆಯಲ್ಲಿನ ಶ್ರೇಷ್ಠ ಸಂಶೋಧನೆಗಳಲ್ಲಿ ಪ್ರಮುಖವಾದದ್ದು". ಇಂತಹ ಸುದೀರ್ಘ ಮುನ್ನುಡಿ ಹಾಗೂ ಪ್ರಸ್ತಾವನೆಯಿರುವ ಪುಸ್ತಕಗಳ ಯುಗ ಮುಗಿಯುತೆನ್ನುವಾಗ ಇದು ಬಂದಿರುವುದು ಒಂದು ಸಂತೋಷದ ಸಂಗತಿ. ಇದು ಆ ವಿಷಯದ ಮಹತ್ವವನ್ನೂ ಸೂಚಿಸುತ್ತದೆ.

ಆನಂತರ ಅಧ್ಯಾಯಗಳು ತೊಡಗುತ್ತವೆ. ಮೊದಲ ಹತ್ತು ಅಧ್ಯಾಯಗಳು ಹುಲಿಯ ಜೀವಪರಿಸ್ಥಿತಿವಿಜ್ಞಾನ (ಎಕಾಲಜಿ), ಸಂಖ್ಯಾ ವಿನ್ಯಾಸ, ಆಹಾರದ ಲಭ್ಯತೆ, ಎಣಿಕೆ ಗೈರುಮೊದಲ ಭಾಗದಲ್ಲಿ ಎಕಾಲಜಿ ಉಷ್ಣವಲಯದ ಕಾಡುಗಳಲ್ಲಿ ಹುಲಿ, ಚಿರತೆ ಮತ್ತು ಕಾಡು ನಾಯಿಗಳ ಆಹಾರದ ಆಯ್ಕೆ, ನಾಗರಹೊಳೆ ಅರಣ್ಯದಲ್ಲಿ ಹುಲಿ, ಚಿರತೆ ಮತ್ತು ಕೆನ್ನಾಯಿಗಳಲ್ಲಿ ಬೇಟೆಯಾಡುವ ವಿಧಾನಗಳಲ್ಲಿರುವ ಸಾಮ್ಯತೆ-ವತ್ಯಾಸ, ಆಹಾರದ ಲಭ್ಯಾಲಭ್ಯತೆಯೇ ಹುಲಿಯ ಸಂತತಿಯ ಅಳಿವು ಉಳಿವಿನ ನಿರ್ಣಾಯಕ ಅಂಶ, ಉಷ್ಣವಲಯದ ಕಾಡುಗಳಲ್ಲಿ ಛಾಯಾಚಿತ್ರ ತೆಗೆಯುವುದರ ಮೂಲಕ ಕಾಡಿನಲ್ಲಿ ಬಹುತೇಕ ಅದೃಶ್ಯವಾಗಿ ತಿರುಗುವ ಸ್ತನಿಗಳ ಮಾದರಿ ಸಂಗ್ರಹ, ಸೆರೆಹಿಡಿ ಮರುಸೆರೆಹಿಡಿ ಪದ್ಧತಿಯಿಂದ ಹುಲಿ ಸಾಂದ್ರತೆಯ ಅಂದಾಜು ಕೊನೆಗೆ ಈ ಪದ್ಧತಿಯಿಂದ ಹುಲಿ ಸಂಖ್ಯೆಗಳ ವಿಶ್ಲೇಷಣೆ ಈ ವಿಷಯಗಳನ್ನು ಗಂಭೀರವಾಗಿ, ಆದರೆ ಸರಳವಾಗಿ ವಿವರಿಸುತ್ತಾ ಹೋಗುತ್ತದೆ. ಹೀಗೆ ತಾಂತ್ರಿಕ ವಿಷಯಗಳ ಕುರಿತು ವಿವರಿಸಿದರೆ ಮುಂದಿನ ಹತ್ತು ಅಧ್ಯಾಯಗಳಲ್ಲಿ ಸಂರಕ್ಷಣೆಗಿರುವ ತೊಡಕುಗಳ ಗಂಭೀರ ಅಧ್ಯಯನಗಳು ಆರಂಭವಾಗುತ್ತವೆ. ಹುಲಿಯ ಇಂದಿನ ಸ್ಥಿತಿಗತಿಗೆ ಮಾನವ ಮೂಲದ ಕಾರಣಗಳನ್ನು ಹಾಗೂ ಮಾನವ ವನ್ಯಜೀವಿ ಸಂಘರ್ಷವನ್ನು ವಿವರಿಸುತ್ತವೆ. ಅಷ್ಟು ಮಾತ್ರವಲ್ಲ, ಮಾನವ ಹಾಗೂ ಹುಲಿಗಳ ಸಹಬಾಳ್ವೆಗೆ ವಿಜ್ಞಾನಾಧಾರಿತವಾದ ಚೌಕಟ್ಟನ್ನೂ, ಹುಲಿ ಕುರಿತ ದೀರ್ಘಾವಧಿ ಅಧ್ಯಯನಗಳ ಫಲಿತಾಂಶಗಳನ್ನು ತಿಳಿಸುತ್ತದೆ. ಭಾರತದಲ್ಲಿ ಹುಲಿ ಸಂಖ್ಯೆಗಳನ್ನು ನಿಗಾಯಿಡುವ ಪ್ರಕ್ರಿಯೆಯಲ್ಲಿ ವಿಜ್ಞಾನದ ಅಭಾವವನ್ನು ಇನ್ನೊಂದು ಅಧ್ಯಾಯ ಚರ್ಚಿಸುತ್ತದೆ. ಸರ್ಕಾರದ ವರದಿ ಜಾಯಿನಿಂಗ್ ದ ಡಾಟ್ಸ್‌ನಲ್ಲಿನ ವಿರೋಧಾಭಾಸಗಳು, ಅಂತೆಯೇ ಇತರ ಯೋಜನೆಗಳಲ್ಲಿನ ಕೊರತೆಯನ್ನು, ಅರಣ್ಯ ಹಕ್ಕು ಕಾಯಿದೆಯ ಲೋಪ ಇವುಗಳನ್ನು ಕೊನೆಯ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ಚರ್ಚಿಸಲಾಗಿದೆ. ಈ ಬಗೆಯ ಅಧ್ಯಯನಗಳು ನೀಡುವ ಅಮೂಲ್ಯ ಮಾಹಿತಿ ಮತ್ತು ಆನಂದವನ್ನು ಇಲ್ಲಿ ಓದಿ ಸವಿಯಬೇಕು. ಕೆಲವು ಲೇಖನಗಳು ಗಣಿತೀಯವಾಗಿದ್ದರೂ ಗಣಿತ ಅರಿಯದವರಿಗೆ ಅದು ಲೇಖನದ ಸಾರವನ್ನು ತಿಳಿಯಲು ಅಡ್ಡಿಯುಂಟುಮಾಡುವುದಿಲ್ಲ. ಕಾಡಿನಲ್ಲಿ ಪ್ರಾಣಿಗಳನ್ನು ಸುಮ್ಮನೆ ನೋಡುವುದಲ್ಲ.

ಇಷ್ಟು ಮಾತ್ರವಲ್ಲದೆ, ಇದು ಅನೇಕ ಕುತೂಹಲಕಾರಿ ಮಾಹಿತಿಗಳನ್ನು ನೀಡುತ್ತಾ ನಮ್ಮ ಜ್ಞಾನಕ್ಷತಿಜವನ್ನು ವಿಸ್ತರಿಸುತ್ತದೆ. ಉದಾಹರಣೆಗೆ ಅಧ್ಯಾಯ ಒಂದರಲ್ಲಿ ಹುಲಿಗಳು ವೈವಿಧ್ಯಮಯ ಆವಾಸ ಹಾಗೂ ವಾತಾವರಣಗಳಲ್ಲಿ ಕಂಡುಬರುತ್ತವೆ ಎಂದರೆ, ಜೀವವಿಕಾಸದ ಇತಿಹಾಸದಲ್ಲಿ ಆವಾಸ ಅವುಗಳಿಗೆ ಒಂದು ಬಹುಮುಖ್ಯವಾದ ಕಾರಣವಾಗಲೇ ಇಲ್ಲ. ಬದಲಾಗಿ ಜಿಂಕೆ ಹಾಗೂ ಜಾನುವಾರುಗಳು ಪ್ಲೇಸ್ಟಸೀನ್ ಕಾಲದಲ್ಲಿ ತನ್ನ ಹರವನ್ನು ವಿಸ್ತರಿಸುತ್ತಾ ಬಂದಂತೆಲ್ಲ ಹುಲಿಯಂತಹ ಬೇಟೆಗಾರ ಪ್ರಾಣಿಗಳು ಅವನ್ನು ಹಿಂಬಾಲಿಸಿ ತಮ್ಮ ಹರವನ್ನೂ ವಿಸ್ತರಿಸಿಕೊಂಡವು. ಇವುಗಳ ವ್ಯಾಪ್ತಿ ದಕ್ಷಿಣ ಪೂರ್ವ ಏಷ್ಯಾದಲ್ಲಿ ವಿಸ್ತಾರವಾಯಿತು.

ಅಧ್ಯಾಯ ಐದರಲ್ಲಿ ಆವಾಸ ನಾಶ ಐತಿಹಾಸಿಕವಾಗಿ ಹುಲಿಗಳ ಅವನತಿಗೆ ಕಾರಣವಾದರೂ ಇತ್ತೀಚಿನ ಅರಣ್ಯ ಹೊದಿಕೆ ನಕಾಶೆಗಳಾಧಾರಿತ ವಿಶ್ಲೇಷಣೆಗಳು ತಿಳಿಸುವಂತೆ ಇಂದಿಗೂ ಹುಲಿಗೆ ಸೂಕ್ತವಾದ ವಿಸ್ತಾರಆವಾಸಗಳು ಹುಲಿ ಕಂಡುಬರುವ ದೇಶಗಳಲ್ಲಿ ಇವೆ. ಹುಲಿಗಳಿಗೆ ಸೂಕ್ತವಾದ ಮೂರುಲಕ್ಷ ಚದರ ಕಿಲೋಮೀಟರ್‌ನಷ್ಟು ಆವಾಸ ಭಾರತದಲ್ಲಿಯೇ ಲಭ್ಯವಿದೆ. ಆದರೆ, ಇಂದು ಲಭ್ಯವಿರುವ ಮಾಹಿತಿ ತಿಳಿಸುವಂತೆ ಭಾರತದ ಕಾಡುಗಳಲ್ಲಿ ಹುಲಿಗಳು ಒಂದೋ ಸಂಪೂರ್ಣವಾಗಿ ನಿರ್ನಾಮವಾಗಿವೆ ಇಲ್ಲವೇ ಅವನತಿಯ ಹಾದಿಹಿಡಿದಿದೆ. ಅಂದರೆ, (ಹುಲಿಗಳ ಅವನತಿಗೆ) ಬೇರೆಯೇ ಆದ ಕಾರಣ ಇರಬೇಕಾಗಿರುವುದು ಸ್ವಷ್ಟ. ಈ ಕಾರಣವೆಂದರೆ ಹುಲಿಗಳ ಆಹಾರ ಪ್ರಾಣಿಗಳ "ಕಣ್ಮರೆ". ಅಂದರೆ ಇವುಗಳ ಕಳ್ಳಬೇಟೆ. (ಪುಟ ೮೪ರ ಬಾಕ್ಸ್ ನೋಡಿ). ಈ ವಾದವನ್ನು ಬಲಪಡಿಸುವ ಮತ್ತೊಂದು ಅಂಶವನ್ನು ನೀಡಲಾಗಿದೆ. ಹುಲಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿದ್ದಾಗ, ಒಂದು ವರ್ಷ ಒಂದು ಕಾಡಿನಲ್ಲಿ ಬೇಟೆಯಾದ ಹುಲಿಗಳ ಸಂಖ್ಯೆ, ಕೆಲವೇ ವರ್ಷಗಳ ನಂತರ ಮತ್ತೆ ಅದೇ ಕಾಡಿನಲ್ಲಿ ನಡೆದ ಹುಲಿಗಳ ಬೇಟೆಯ ಸಂಖ್ಯೆಗೆ ತಾಳೆಯಾಗುತ್ತಿದ್ದವು. ಅಂದರೆ, ಹುಲಿಗಳ ಸಂಖ್ಯೆ ಬೇಗ ಚೇತರಿಸಿಕೊಳ್ಳುತ್ತವೆ, ಅವುಗಳನ್ನೇ ನೇರವಾಗಿ ಬೇಟೆಯಾಡವುದಕ್ಕಿಂತ ಅವುಗಳ ಆಹಾರವನ್ನು ಬೇಟೆಯಾಡುವುದೇ ಅವುಗಳಿಗಿರುವ ದೊಡ್ಡ ಗಂಡಾಂತರ.

ಇನ್ನು ಬೇಟೆಗಾರ ಪ್ರಾಣಿಗಳು ತಮ್ಮ ಬಲಿಪ್ರಾಣಿಗಳನ್ನು ಕೊಲ್ಲಲು ಅನುಸರಿಸುವ ಮಾರ್ಗ ಕುರಿತಾಗಿಯೂ ಕುತೂಹಲಕರ ಮಾಹಿತಿಯಿದೆ. ಹುಲಿ ಚಿರತೆಗಳು ಸುಮಾರು ಒಂದು ಟನ್ ತೂಕದ ಕಾಟಿಯಂತಹ ಪ್ರಾಣಿಯನ್ನೂ ಸೇರಿದಂತೆ ಇತರ ಬಲಿಪ್ರಾಣಿಗಳನ್ನು ಕುತ್ತಿಗೆಯನ್ನು ಕಚ್ಚಿಹಿಡಿದು ಮಾರಣಾಂತಿಕವಾಗಿ ಗಾಯಗೊಳಿಸಿ ಕೊಂದರೆ, ಕೆನ್ನಾಯಿಯ ಬಲಿಪ್ರಾಣಿಗಳಲ್ಲಿ ಮಾರಣಾಂತಿಕ ಗಾಯಗಳಿರುವುದಿಲ್ಲ. ಅವು ಆಘಾತದಿಂದ, ಕಚ್ಚಿದ ಗಾಯದಿಂದಾದ ರಕ್ತಸ್ರಾವದಿಂದ ಸತ್ತಿರುವುದು ಕಂಡುಬರುತ್ತದೆ. ಒಂದೆರೆಡು ಪ್ರಸಂಗದಲ್ಲಿ ಕೆನ್ನಾಯಿಗಳು ಬಲಿಪ್ರಾಣಿಯನ್ನು ಅಟ್ಟಿಸಿಕೊಂಡು ಹೋಗಿ ನೀರಿನಲ್ಲಿ ಅದು ಮುಳುಗಿಸಾಯುವಂತೆ ಮಾಡಿರುವುದುನ್ನು ಡಾ ಕಾರಂತರು ನೋಡಿರುವುದನ್ನು ಹೇಳಲಾಗಿದೆ. ದೊಡ್ಡ ಕೋರೆಹಲ್ಲುಗಳಾಗಲಿ, ದೊಡ್ಡ ಪಂಜಗಳಾಗಲಿ ಇರದ ಕೆನ್ನಾಯಿ ಹೀಗೆ ಮಾತ್ರ ಬೇಟೆಯಾಡಿ ಆಹಾರ ದೊರಕಿಸಿಕೊಳ್ಳಬಲ್ಲುದು.

ಇಂತಹ ಅನೇಕ ಕುತೂಹಲಕರ, ಪ್ರಾಣಿಗಳ ಅಧ್ಯಯನಕ್ಕೆ ಇಂಬುಕೊಡುವ ಮಾಹಿತಿಗಳ ಸಾಗರವೇ ಪುಸ್ತಕದಲ್ಲಿದೆ. ಸನ್‌ಕ್ವಿಸ್ಟ್, ಜಾನ್‌ಸಿಂಗ್, ಮಧುಸೂಧನ್, ಜೇಮ್ಸ್ ನಿಕಲ್ಸ್, ಜಾನ್ ಸೈಡೆನ್‌ಸ್ಟಿಕರ್, ರಘುನಂದನ್ ಚುಂದಾವತ್, ಸಾಂಬಕುಮಾರ್ ಹೀಗೆ ಇನ್ನು ಅನೇಕ ವಿಶ್ವವಿಖ್ಯಾತ ವನ್ಯಜೀವಿ ವಿಜ್ಞಾನಿಗಳೊಂದಿಗೆ ಕಾರಂತರು ನಡೆಸಿದ ಸಂಶೋಧನೆಯ ಪ್ರಬಂಧಗಳು ಇಲ್ಲಿ ಹುಲಿ ಉಳಿಸುವ ವಿಜ್ಞಾನ ಎಂಬ ಚೌಕಟ್ಟಿನಲ್ಲಿ ಔಚಿತ್ಯಪೂರ್ಣವಾಗಿ ಒಂದು ಕಲೆಗಾರಿಕೆಯ ಕಾರ್ಯಳವೆಂಬಂತೆ ಮೂಡಿಬಂದಿದೆ. ಜಾರ್ಜ್ ಶಾಲರ್ ಅವರ ದ ಡೀರ್ ಅಂಡ್ ದ ಟೈಗರ್ ಪುಸ್ತಕ ಕಾರಂತರನ್ನು ವನ್ಯಜೀವಿ ಸಂಶೋಧನೆಗೆ ಸೆಳೆದಂತೆ, ದಿ ಸೈನ್ಸ್ ಆಫ್ ಸೇವಿಂಗ್ ಟೈಗರ್ಸ್ ಅಸಂಖ್ಯ ಯುವಕರನ್ನು ವನ್ಯಸಂಶೋಧನೆಗೆ ಪ್ರೇರೇಪಸಿಲಿದೆ.

ವಿಜ್ಞಾನ ಮಾತ್ರವಲ್ಲದೆ ಬೇಟೆ, ಬೇಟೆಯ ಪದ್ಧತಿಗಳು ಉರುಳು ಹಾಕುವುದು ಇತ್ಯಾದಿ ವಿಷಯಗಳ ಉಚಿತ ಪ್ರಸ್ತಾಪ ಮತ್ತು ವಿಶ್ಲೇಷಣೆಯಿರುವುದರಿಂದ ಈ ಪುಸ್ತಕ ಸಮಾಜಶಾಸ್ತ್ರಜ್ಞರಿಗೂ ಆಸಕ್ತಿ ತರುವಂತಿದೆ. ಪ್ರತಿ ವಿಜ್ಞಾನ ಕಾಲೇಜು ಈ ಪುಸ್ತಕವನ್ನು ಹೊಂದಬೇಕಾದ ತುರ್ತು ಅಗತ್ಯವಿದೆ. ಇಂತಹ ಪುಸ್ತಕದ ಸಾರಾಂಶವಾದರೂ ಕನ್ನಡದಲ್ಲಿ ಬರಬೇಕು ಅನುವಾದ ಅಕಾಡೆಮಿ ಈ ಕಡೆ ದಿಟ್ಟಿಹಾಯಿಸುತ್ತದೆ ಎಂದು ನಂಬುತ್ತೇನೆ.

The Science of Saving Tigers
ಲೇಖಕರು: ಡಾ. ಕೆ. ಉಲ್ಲಾಸ ಕಾರಂತ
೩೧೨+೨೮ ಪುಟಗಳು, ಬೆಲೆ ರೂ. ೫೫೦/-
ಪ್ರಕಾಶಕರು: ಯೂನಿವರ್ಸಿಟೀಸ್ ಪ್ರೆಸ್, ವೈಲ್ಡ್‌ಲೈಫ್ ಕನ್ಸರ್‌ವೇಶನ್ ಸೊಸೈಟಿ ಹಾಗೂ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್



*ಲೇಖನದಲ್ಲಿ ವ್ಯಕ್ತಪಡಿಸಲಾಗಿರುವ ಎಲ್ಲ ಅಭಿಪ್ರಾಯಗಳೂ ಲೇಖಕರವು

ಕಾಮೆಂಟ್‌ಗಳಿಲ್ಲ:

badge