ಭಾನುವಾರ, ಸೆಪ್ಟೆಂಬರ್ 8, 2013

ಪಾಸ್‌ವರ್ಡ್ ಜೋಪಾನ!

ಟಿ. ಜಿ. ಶ್ರೀನಿಧಿ

ಮೇಜಿನ ಮೇಲಿನ ಕಂಪ್ಯೂಟರಿನಿಂದ ಪ್ರಾರಂಭಿಸಿ ಇಂಟರ್‌ನೆಟ್ ಸಂಪರ್ಕ, ಇಮೇಲ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಸಮಾಜ ಜಾಲ ಇತ್ಯಾದಿಗಳವರೆಗೆ ನಮ್ಮ ಬದುಕಿಗೆ ಸಂಬಂಧಪಟ್ಟ ಸಮಸ್ತ ಮಾಹಿತಿಯೂ ತನ್ನ ಸುರಕ್ಷತೆಗಾಗಿ ಒಂದು ಪದವನ್ನು ನೆಚ್ಚಿಕೊಂಡಿರುತ್ತದೆ. ಈ ಹೇಳಿಕೆ ಓದಲು ವಿಚಿತ್ರವಾಗಿ ಕಂಡರೂ ಖಂಡಿತಾ ಸತ್ಯ.

ಇಷ್ಟೆಲ್ಲ ಮಹತ್ವದ ಪಾತ್ರ ವಹಿಸುವ ಆ ಪದವೇ ಪಾಸ್‌ವರ್ಡ್. ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು.

ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ ಸುರಕ್ಷಿತವಾಗಿಡುವ ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್‌ವರ್ಡುಗಳನ್ನು ಆ ಬೀಗದ ಕೀಲಿಕೈ ಎಂದೇ ಕರೆಯಬಹುದು. ನಮ್ಮದೇ ಬೇಜವಾಬ್ದಾರಿಯಿಂದಲೋ ಕಳ್ಳರ ಕೈಚಳಕದಿಂದಲೋ ಕೀಲಿಕೈ ಕಳೆದುಹೋದರೆ ತೊಂದರೆಯಾಗುವುದು ನಮ್ಮ ಸುರಕ್ಷತೆಗೇ ತಾನೆ! ಹೀಗಾಗಿ ಬಾಹ್ಯ ಪ್ರಪಂಚದಲ್ಲಿರುವಂತೆ ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್‌ವರ್ಡ್ ರೂಪದ ಕೀಲಿಕೈಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ.

ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡುವ ದೃಷ್ಟಿಯಿಂದ ಇಷ್ಟೆಲ್ಲ ಪ್ರಮುಖ ಪಾತ್ರ ವಹಿಸುವ ಪಾಸ್‌ವರ್ಡುಗಳನ್ನು
ಜೋಪಾನಮಾಡುವುದು ಹೇಗೆ? ಅವುಗಳ ಆಯ್ಕೆ-ಬಳಕೆಯಲ್ಲಿ, ಗೌಪ್ಯತೆ ಕಾಪಾಡಿಕೊಳ್ಳುವುದರಲ್ಲಿ ನಾವು ಅನುಸರಿಸಬೇಕಾದ ಕ್ರಮಗಳೇನು?

ಯಾವ ಕಾರಣಕ್ಕೂ ಪಾಸ್‌ವರ್ಡ್‌ಗಳ ಮರುಬಳಕೆ ಮಾಡದಿರುವುದು ಈ ನಿಟ್ಟಿನಲ್ಲಿ ನಾವು ಪಾಲಿಸಬೇಕಾದ ಮೊದಲ ನಿಯಮ. ಬೇರೆಬೇರೆ ಬೀಗಗಳಿಗೆ ಬೇರೆಬೇರೆ ಕೀಲಿಕೈಗಳಿರುವಂತೆಯೇ ಬೇರೆಬೇರೆ ಅಕೌಂಟುಗಳಿಗೆ ಬೇರೆಬೇರೆ ಪಾಸ್‌ವರ್ಡುಗಳೇ ಇರಬೇಕು. ಹಾಗಿಲ್ಲದೆ ಎಲ್ಲ ಅಕೌಂಟುಗಳಿಗೂ ಒಂದೇ ಪಾಸ್‌ವರ್ಡು ಎಂಬ ಸೂತ್ರ ಅನುಸರಿಸಿಬಿಟ್ಟರೆ? ಯಾವುದೇ ಒಂದು ಪಾಸ್‌ವರ್ಡ್ ಕಳ್ಳರ ಪಾಲಾದರೂ ಮಿಕ್ಕೆಲ್ಲ ಅಕೌಂಟುಗಳಿಗೂ ಎಳ್ಳುನೀರು ಬಿಟ್ಟಂತೆಯೇ!

ಹಾಗೆಯೇ ತೀರಾ ಸರಳ ಪದಗಳನ್ನು (ಉದಾ: ನಿಮ್ಮ ಹೆಸರು, ಊರಿನ ಹೆಸರು, ವೆಬ್‌ಸೈಟಿನದೇ ಹೆಸರು, "ಪಾಸ್‌ವರ್ಡ್" ಇತ್ಯಾದಿ) ಪಾಸ್‌ವರ್ಡ್ ಆಗಿ ಆರಿಸಿಕೊಳ್ಳುವುದೂ ಒಳ್ಳೆಯ ಅಭ್ಯಾಸವಲ್ಲ. ಹ್ಯಾಕರುಗಳಷ್ಟೇ ಏಕೆ, ನಿಮ್ಮ ಬಗ್ಗೆ ಅಲ್ಪಸ್ವಲ್ಪ ಗೊತ್ತಿರುವ ಯಾರು ಬೇಕಾದರೂ ಇಂತಹ ಪಾಸ್‌ವರ್ಡುಗಳನ್ನು ಊಹಿಸಬಲ್ಲರು. ಪಾಸ್‌ವರ್ಡಿನ ಉದ್ದ ತೀರಾ ಕಡಿಮೆಯಿದ್ದರೂ ಕಷ್ಟವೇ. ಪಾಸ್‌ವರ್ಡ್ ಉದ್ದ ಕಡಿಮೆಯಿದ್ದಷ್ಟೂ ಪಾಸ್‌ವರ್ಡ್ ಚೋರರು ಬಳಸುವ ಕುತಂತ್ರಾಂಶಗಳು ಅಂತಹ ಪಾಸ್‌ವರ್ಡುಗಳನ್ನು ಸುಲಭವಾಗಿ ಊಹಿಸುವ ಸಾಧ್ಯತೆ ಜಾಸ್ತಿಯಿರುತ್ತದೆ.

ನೂರೆಂಟು ತಾಣಗಳಿಗೆ ನೂರೆಂಟು ಪಾಸ್‌ವರ್ಡುಗಳಿರುವಾಗ ಅವಷ್ಟನ್ನೂ ಮರೆಯದೆಯೇ ನೆನಪಿಟ್ಟುಕೊಂಡಿರುತ್ತೇವೆ ಎನ್ನುವಂತಿಲ್ಲ. ಹಾಗೆಯೇ ಬಹುಸಮಯದಿಂದ ಬಳಸದ ತಾಣದ ಪಾಸ್‌ವರ್ಡೂ ನಮ್ಮ ನೆನಪಿನಲ್ಲಿ ಉಳಿಯುವುದು ಕಷ್ಟ. ಪಾಸ್‌ವರ್ಡು ಮರೆತುಹೋಗುತ್ತದೆ ಎಂದು ಅದನ್ನು ಒಂದುಕಡೆ ಬರೆದಿಟ್ಟುಬಿಟ್ಟರೆ ಬರೆದಿಟ್ಟದ್ದು ಕಳೆಯುವ ಭಯ ಬೇರೆ. ಇದೆಲ್ಲ ಗೊಂದಲದಲ್ಲಿ ಪಾಸ್‌ವರ್ಡುಗಳನ್ನು ಮರೆಯುವುದು ತೀರಾ ಸಾಮಾನ್ಯವಾದ್ದರಿಂದಲೇ ಮರೆತ ಪಾಸ್‌ವರ್ಡನ್ನು ನೆನಪಿಸುವ ಸೌಲಭ್ಯ ಬಹುತೇಕ ಎಲ್ಲ ತಾಣಗಳಲ್ಲೂ ಇರುತ್ತದೆ.

ಹೀಗೆ ಮರೆತ ಪಾಸ್‌ವರ್ಡನ್ನು ನೆನಪಿಸಬೇಕೆಂದರೆ ನಾವು ಮೊದಲೇ ನಿರ್ಧರಿಸಿದ ಸುರಕ್ಷತಾ ಪ್ರಶ್ನೆಗೆ ಉತ್ತರಿಸಬೇಕಾದ್ದು ಅಗತ್ಯ. ಇಂತಹ ಪ್ರಶ್ನೆಗಳು ನಾನು ಓದಿದ ಮೊದಲ ಶಾಲೆ, ನನ್ನಮ್ಮನ ಹೆಸರು, ನಾನು ಕೊಂಡ ಮೊದಲ ಕಾರು - ಹೀಗೆಲ್ಲ ಇರುವುದು ಸಾಮಾನ್ಯ. ಆದರೆ ಮೊದಲಿಗೆ ನಮ್ಮ ಉತ್ತರವನ್ನು ಉಳಿಸಿಡುವಾಗ ಇಂತಹ ಪ್ರಶ್ನೆಗಳಿಗೆ ನೇರ ಉತ್ತರ ಕೊಡದಿರುವುದು ಒಳ್ಳೆಯದು. ನಾನು ಓದಿದ್ದು ಇಂತಹ ಊರಿನ ಇಂತಹ ಶಾಲೆಯಲ್ಲಿ ಎನ್ನುವಂತಹ ವಿಷಯಗಳನ್ನೆಲ್ಲ ನಾವೇ ಫೇಸ್‌ಬುಕ್-ಲಿಂಕ್ಡ್‌ಇನ್ ಇತ್ಯಾದಿಗಳಲ್ಲಿ ಹಾಕಿಟ್ಟುಬಿಟ್ಟಿರುತ್ತೇವಲ್ಲ, ಹಾಗಾಗಿ ಇಂತಹ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೆ ಕೊಂಚ ವಿಚಿತ್ರವಾದ ಉತ್ತರಗಳನ್ನೇ ದಾಖಲಿಸಿಡುವುದು ಒಳಿತು.

ಇನ್ನು ಕೆಲ ತಾಣಗಳಲ್ಲಿ ಪಾಸ್‌ವರ್ಡ್ ಮರೆತಿದೆ ಎಂದಾಗ ಪಾಸ್‌ವರ್ಡನ್ನು ನಮ್ಮ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಇರುತ್ತದೆ. ಸಾಧ್ಯವಾದರೆ ಹೀಗೆ ಪಾಸ್‌ವರ್ಡುಗಳನ್ನು ಪಡೆದುಕೊಳ್ಳಲೆಂದೇ ಪ್ರತ್ಯೇಕವಾದ ಇಮೇಲ್ ವಿಳಾಸವನ್ನು ಬಳಸುವುದು ಒಳ್ಳೆಯದು. ನಮ್ಮ ದಿನನಿತ್ಯದ ಬಳಕೆಯ ಇಮೇಲ್ ವಿಳಾಸವನ್ನೇ ಇದಕ್ಕೂ ಬಳಸುವುದಾದರೆ ಆ ಇಮೇಲ್ ಖಾತೆ ಹ್ಯಾಕ್ ಆದ ಸಂದರ್ಭದಲ್ಲಿ ನಮ್ಮ ಇತರ ಖಾತೆಗಳ ಸುರಕ್ಷತೆಗೂ ತೊಂದರೆಯಾಗುತ್ತದೆ.

ಸೆಪ್ಟೆಂಬರ್ ೬, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ; ಬೂಲಿಯನ್ ಲಾಜಿಕ್ ಬಗ್ಗೆ ಪ್ರಕಟವಾಗುತ್ತಿದ್ದ ಲೇಖನಸರಣಿ ಮುಂದಿನವಾರ ಮುಂದುವರೆಯುತ್ತದೆ

ಕಾಮೆಂಟ್‌ಗಳಿಲ್ಲ:

badge