ಶುಕ್ರವಾರ, ಮಾರ್ಚ್ 29, 2013

ಕ್ಯಾಮೆರಾ ಕೊಳ್ಳುವ ಮುನ್ನ


ಟಿ. ಜಿ. ಶ್ರೀನಿಧಿ

ಎಲ್ಲರ ಕೈಯಲ್ಲೂ ಒಂದೊಂದು ಮೊಬೈಲ್ ಇರುವಂತೆ ಎಲ್ಲ ಮನೆಗಳಲ್ಲೂ ಒಂದೊಂದು ಡಿಜಿಟಲ್ ಕ್ಯಾಮೆರಾ ಇರುವುದು ಈಗ ಸರ್ವೇಸಾಮಾನ್ಯವಾದ ಸಂಗತಿ.

ಆದರೆ ಕ್ಯಾಮೆರಾ ಕೊಳ್ಳಲು ಹೊರಟಾಗ ಗ್ರಾಹಕರಾದ ನಮ್ಮೆದುರು ಹಲವಾರು ಪ್ರಶ್ನೆಗಳು ಮೂಡುತ್ತವೆ. ಇದಷ್ಟೇ ಸಾಲದೆಂದು ಮಾರುಕಟ್ಟೆಯಲ್ಲಿ ಕಾಣಸಿಗುವ ಬಗೆಬಗೆಯ ಕ್ಯಾಮೆರಾಗಳು ನಮ್ಮಲ್ಲಿ ಗೊಂದಲವನ್ನೂ ಮೂಡಿಸುತ್ತವೆ. ಹಾಗಾದರೆ ಕ್ಯಾಮೆರಾ ಕೊಳ್ಳುವ ಮುನ್ನ ನಾವು ಏನೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ನಮಗೆಂತಹ ಕ್ಯಾಮೆರಾ ಬೇಕು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಗಮನಿಸಬಹುದಾದ ಕೆಲ ಅಂಶಗಳು ಇಲ್ಲಿವೆ.

ಕ್ಯಾಮೆರಾ ಬಳಸಿ ನಾವು ಹೆಚ್ಚು ಚಿತ್ರಗಳನ್ನು ಕ್ಲಿಕ್ಕಿಸುವುದು ಒಳಾಂಗಣದಲ್ಲೋ ಹೊರಾಂಗಣದಲ್ಲೋ? ಚಿತ್ರದ ತಾಂತ್ರಿಕ ಹೊಂದಾಣಿಕೆಗಳನ್ನು ಸ್ವತಃ ನಾವೇ ಮಾಡಿಕೊಳ್ಳುವ ತಾಳ್ಮೆ-ಆಸಕ್ತಿಯೆಲ್ಲ ನಮ್ಮಲ್ಲಿದೆಯೋ ಇಲ್ಲವೋ? ಕ್ಯಾಮೆರಾ ಚಿಕ್ಕದಾಗಿರಬೇಕೋ ದೊಡ್ಡದಾಗಿದ್ದರೂ ಓಕೇನೋ? - ಈ ರೀತಿಯ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳುವ ಮೂಲಕ ನಮ್ಮ ಅಗತ್ಯಗಳನ್ನು ಗುರುತಿಸಿಕೊಳ್ಳಲು ಪ್ರಾರಂಭಿಸಬಹುದು.

ಇವೆಲ್ಲವುದರ ಜೊತೆಗೆ ನಮ್ಮ ಬಜೆಟ್ ಎಷ್ಟು ಎನ್ನುವುದನ್ನೂ ಮುಂಚಿತವಾಗಿಯೇ ನಿರ್ಧರಿಸಿಕೊಳ್ಳಬೇಕು; ಈಗಂತೂ ಎಲ್ಲ ಬಜೆಟ್‌ಗಳಿಗೂ ಹೊಂದುವ ಕ್ಯಾಮೆರಾಗಳು ದೊರಕುವುದರಿಂದ ನಮಗೆ ಬೇಕಾದ ಕ್ಯಾಮೆರಾವನ್ನು ಬೇಗನೆ ಗುರುತಿಸುವಲ್ಲಿ ಈ ಅಂಶ ಕೂಡ ನೆರವಾಗುತ್ತದೆ.

ಹಾಗೆಯೇ ಮೆಗಾಪಿಕ್ಸೆಲ್ ಕಡೆಗೆ ಅತಿಯಾದ ಗಮನ ನೀಡದಿರುವುದೂ ಒಳ್ಳೆಯದೇ.

ಕ್ಯಾಮೆರಾದಲ್ಲಿ ಹೆಚ್ಚಿನ ಮೆಗಾಪಿಕ್ಸೆಲ್ ಸಾಮರ್ಥ್ಯವಿದ್ದಷ್ಟೂ ಒಳ್ಳೆಯದು ನಿಜ. ಆದರೆ ಹೆಚ್ಚಿನ ಮೆಗಾಪಿಕ್ಸೆಲ್ ಸಾಮರ್ಥ್ಯವಿರುವ ಒಂದೇ ಕಾರಣಕ್ಕಾಗಿ ಯಾವ ಕ್ಯಾಮೆರಾವನ್ನೂ ಒಳ್ಳೆಯ ಕ್ಯಾಮೆರಾ ಎಂದು ಕರೆಯುವುದು ತಪ್ಪಾಗುತ್ತದೆ. ಕ್ಯಾಮೆರಾ ಯಾವುದೇ ಆದರೂ ಅದರಲ್ಲಿ ನಮ್ಮ ಉದ್ದೇಶಕ್ಕೆ ಸರಿಹೊಂದುವಷ್ಟು ಮೆಗಾಪಿಕ್ಸೆಲ್ ಸಾಮರ್ಥ್ಯವಿದ್ದರೆ ಸಾಕು.

ಕ್ಯಾಮೆರಾದಲ್ಲಿ ಎಷ್ಟು ಪ್ರಮಾಣದ ಜೂಮ್ ಇದೆ ಇನ್ನುವುದು ಇನ್ನೊಂದು ಮುಖ್ಯ ಅಂಶ. ಆಪ್ಟಿಕಲ್ ಜೂಮ್ ಹೆಚ್ಚಿದ್ದಷ್ಟೂ ಒಳ್ಳೆಯದು; ಹಾಗಿದ್ದಾಗ ದೂರದ ಚಿತ್ರಗಳನ್ನೂ ಸುಲಭವಾಗಿ ಕ್ಲಿಕ್ಕಿಸುವುದು ಸಾಧ್ಯವಾಗುತ್ತದೆ. ಹೊರಾಂಗಣದಲ್ಲಿ ಫೋಟೋಗಳನ್ನು ಕ್ಲಿಕ್ಕಿಸುವ ಯೋಚನೆಯಿದ್ದರೆ ಹೆಚ್ಚಿನ ಆಪ್ಟಿಕಲ್ ಜೂಮ್ ಇರುವ ಕ್ಯಾಮೆರಾವನ್ನೇ ಕೊಳ್ಳುವುದು ಒಳಿತು. ಹೆಚ್ಚಿನ ಆಪ್ಟಿಕಲ್ ಜೂಮ್ ಬಳಸುವಾಗ ಚಿತ್ರ ಎಷ್ಟು ಸ್ಪಷ್ಟವಾಗಿ ಮೂಡುತ್ತದೆ ಎನ್ನುವುದೂ ಗಮನಿಸಬೇಕಾದ ಅಂಶವೇ. ಆದರೆ ಡಿಜಿಟಲ್ ಜೂಮ್‌ಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ನಾವು ಕೊಳ್ಳಲು ಹೊರಟಿರುವ ಕ್ಯಾಮೆರಾದಲ್ಲಿ ಡಿಜಿಟಲ್ ಜೂಮ್ ಇಲ್ಲದಿದ್ದರೂ ಕೂಡ ಹೆಚ್ಚಿನ ವ್ಯತ್ಯಾಸವೇನೂ ಆಗಲಾರದು.

ಕ್ಯಾಮೆರಾ ಬ್ಯಾಗ್, ಮೆಮೊರಿ ಕಾರ್ಡ್, ಬ್ಯಾಟರಿ ಮತ್ತು ಚಾರ್ಜರ್ ಇತ್ಯಾದಿಗಳನ್ನೆಲ್ಲ ಕ್ಯಾಮೆರಾ ಕೊಳ್ಳುವಾಗಲೇ ತೆಗೆದಿಟ್ಟುಕೊಳ್ಳುವುದು ಉತ್ತಮ ಅಭ್ಯಾಸ. ಇವೆಲ್ಲವೂ ಕ್ಯಾಮೆರಾದೊಡನೆ ಉಚಿತವಾಗಿಯೇ ಸಿಗುವಂತಿದ್ದರೆ ಬಹಳ ಒಳ್ಳೆಯದು. ಒಂದುವೇಳೆ ಇವೆಲ್ಲ ಉಚಿತ ಸಿಗುವುದಿಲ್ಲ ಎನ್ನುವುದಾದರೆ ಕ್ಯಾಮೆರಾಗಳನ್ನು ಹೋಲಿಸಿನೋಡುವಾಗ ಒಟ್ಟು ಬೆಲೆಗೆ ಇವುಗಳ ಖರ್ಚನ್ನೂ ಸೇರಿಸಿಕೊಂಡು ಲೆಕ್ಕಹಾಕುವುದು ಒಳಿತು.

ಹಳೆಯ ಕ್ಯಾಮೆರಾ ಬದಲಿಸಿ ಹೊಸದನ್ನು ಕೊಳ್ಳಲು ಹೊರಟಿದ್ದರೆ ಹಳೆಯ ಕ್ಯಾಮೆರಾಗಾಗಿ ಕೊಂಡಿದ್ದ ಎಷ್ಟು ಸಾಧನಗಳು ಹೊಸ ಕ್ಯಾಮೆರಾದೊಡನೆಯೂ ಕೆಲಸಮಾಡಬಲ್ಲವು ಎನ್ನುವುದನ್ನು ಗಮನಿಸಬೇಕಾಗುತ್ತದೆ. ಈಗಾಗಲೇ ಇರುವ ಮೆಮೊರಿ ಕಾರ್ಡ್, ಬ್ಯಾಟರಿ-ಚಾರ್ಜರ್, ಲೆನ್ಸ್ ಇತ್ಯಾದಿಗಳನ್ನೆಲ್ಲ ಹೊಸ ಕ್ಯಾಮೆರಾದಲ್ಲೂ ಬಳಸುವಂತಿದ್ದರೆ ಹಳೆಯ ವಸ್ತುಗಳು ವ್ಯರ್ಥವಾಗುವುದು ತಪ್ಪುತ್ತದೆ; ಸಾಕಷ್ಟು ಹಣವೂ ಉಳಿತಾಯವಾಗುತ್ತದೆ.

ಇದಷ್ಟೇ ಅಂಶಗಳಲ್ಲದೆ ನಮ್ಮ ಅಗತ್ಯಕ್ಕೆ ಯಾವೆಲ್ಲ ಕ್ಯಾಮೆರಾಗಳು ಹೊಂದಬಹುದೆಂದು ತಿಳಿದುಕೊಳ್ಳಲು ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟವಾಗುವ ವಿಮರ್ಶೆಗಳನ್ನೂ ಓದಬಹುದು. ಕೆಲವು ತಾಣಗಳಲ್ಲಂತೂ ನಮಗಿಷ್ಟವಾದ ನಾಲ್ಕಾರು ಕ್ಯಾಮೆರಾಗಳ ವೈಶಿಷ್ಟ್ಯಗಳನ್ನೆಲ್ಲ ಒಂದಕ್ಕೊಂದು ಹೋಲಿಸಿನೀಡುವ ಸೌಲಭ್ಯವಿರುತ್ತದೆ.

ನಮಗಿಷ್ಟವಾದ ಮಾದರಿಯ ಕ್ಯಾಮೆರಾವನ್ನು ಈಗಾಗಲೇ ಬಳಸುತ್ತಿರುವವರ ಅಭಿಪ್ರಾಯವನ್ನೂ ಕೇಳುವುದೂ ಒಳ್ಳೆಯದೇ. ಅಲ್ಲದೆ ನಮ್ಮ ಆಯ್ಕೆಯ ಕ್ಯಾಮೆರಾವನ್ನು ಕೊಳ್ಳುವ ಮೊದಲು ಸಾಧ್ಯವಾದರೆ ಒಮ್ಮೆಯಾದರೂ ಅದನ್ನು ಬಳಸಿನೋಡಬಹುದು. ದೊಡ್ಡ ಕ್ಯಾಮೆರಾ ಮಳಿಗೆಗಳಲ್ಲಿ ಈ ಉದ್ದೇಶಕ್ಕಾಗಿಯೇ ಅನೇಕ ಮಾದರಿಯ ಕ್ಯಾಮೆರಾಗಳನ್ನು ಇಟ್ಟಿರುತ್ತಾರೆ. ಅದು ಸಾಧ್ಯವಾಗದ ಪಕ್ಷದಲ್ಲಿ ನಮ್ಮ ಪರಿಚಿತರಾರಿಂದಲಾದರೂ ಆ ಕ್ಯಾಮೆರಾ ಪಡೆದುಕೊಂಡು ಬಳಸಿನೋಡಬಹುದು.

ಮಾರ್ಚ್ ೨೯, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge