ಮಂಗಳವಾರ, ಮಾರ್ಚ್ 26, 2013

ಕಂಪ್ಯೂಟರ್ ಮತ್ತು ನಾವು : ಭಾಗ ೨

ಕಳೆದ ಶತಮಾನದ ಅತ್ಯಂತ ಮಹತ್ವದ ಆವಿಷ್ಕಾರವಾದ ಕಂಪ್ಯೂಟರ್ ನಮ್ಮ ಮೇಲೆ ಬೀರಿರುವ ಪ್ರಭಾವ ಎಂಥದ್ದು? ಈ ಕುರಿತು ಕಳೆದ ವಾರ ಪ್ರಕಟವಾದ ಲೇಖನದ ಮುಂದುವರೆದ ಭಾಗ ಇಲ್ಲಿದೆ. 
ಟಿ. ಜಿ. ಶ್ರೀನಿಧಿ

ಶತಮಾನಗಳ ಹಿಂದೆ ಗಡಿಯಾರಗಳು ಎಲ್ಲರ ಮನೆಗೂ ಬಂದವಲ್ಲ, ಅಂದಿನ ಪರಿಸ್ಥಿತಿ ಹೇಗಿದ್ದಿರಬಹುದು? ಕಿಟಕಿಯಿಂದಾಚೆ ಒಮ್ಮೆ ಇಣುಕಿನೋಡಿ ಈಗ ಸಮಯ ಇಷ್ಟು ಎಂದುಕೊಳ್ಳುತ್ತಿದ್ದವರಿಗೆ ಆಗ ಹೇಗೆನಿಸಿರಬಹುದು?

ತಿಂಡಿ ಯಾವಾಗ ತಿನ್ನಬೇಕು, ಕೆಲಸಕ್ಕೆ ಯಾವಾಗ ಹೋಗಬೇಕು, ಊಟ ಯಾವಾಗ ಮಾಡಬೇಕು - ಇಂತಹ ಪ್ರಶ್ನೆಗಳಿಗೆ ತಾನೇ ಉತ್ತರ ಕಂಡುಕೊಳ್ಳುವ ಬದಲು ಗಡಿಯಾರವನ್ನು ಅವಲಂಬಿಸುವಂತಾದದ್ದು ಆಗ ಮನುಷ್ಯನ ಬದುಕಿನಲ್ಲಾದ ದೊಡ್ಡ ಬದಲಾವಣೆ. ನಮ್ಮ ಮೆದುಳು ಗಡಿಯಾರದಂತೆಯೇ ಕೆಲಸಮಾಡುತ್ತದೆ ಎನಿಸತೊಡಗಿದ್ದು ಈ ಬದಲಾವಣೆಯ ನಂತರವೇ.

ಈಗ ನಮ್ಮ ಮೆದುಳು ಕಂಪ್ಯೂಟರಿನಂತೆಯೇ ಕೆಲಸಮಾಡುತ್ತದೆ ಎನಿಸಲು ಪ್ರಾರಂಭವಾಗಿದೆ; ಕಂಪ್ಯೂಟರುಗಳು ನಮ್ಮ ಬದುಕನ್ನು ಬದಲಿಸಲು ಹೊರಟಿರುವ ರೀತಿ ಇದೇ ಎನ್ನೋಣವೆ?

ಪ್ರಸಿದ್ಧ ಗಣಿತಜ್ಞ - ವಿಜ್ಞಾನಿ ಅಲನ್ ಟ್ಯೂರಿಂಗ್ ೧೯೩೦ರ ದಶಕದಲ್ಲಿ ಮೊತ್ತಮೊದಲ ಬಾರಿಗೆ ಡಿಜಿಟಲ್ ಕಂಪ್ಯೂಟರನ್ನು ಪರಿಚಯಿಸಿದಾಗ ಅದಿನ್ನೂ ಕಾಗದದ ಮೇಲಿನ ಕಲ್ಪನೆಯಾಗಷ್ಟೇ ಇತ್ತು. ಆದರೆ ಮುಂದಿನ ವರ್ಷಗಳಲ್ಲಿ ಕಂಪ್ಯೂಟರ್ ಹೇಗೆ ಬೆಳೆಯಲಿದೆ, ಯಾವ ಕೆಲಸ ಬೇಕಾದರೂ ಮಾಡುವಂತೆ ಅದನ್ನು ಪ್ರೋಗ್ರಾಮ್ ಮಾಡುವುದು ಹೇಗೆ ಸಾಧ್ಯವಾಗಲಿದೆ ಎಂದು ಅವರು ಆಗಲೇ ಭವಿಷ್ಯನುಡಿದಿದ್ದರು.

ಅಲನ್ ಟ್ಯೂರಿಂಗ್ ಹೇಳಿದ್ದಂತೆಯೇ ಈಗ ಎಲ್ಲ ಕೆಲಸಗಳಲ್ಲೂ ಕಂಪ್ಯೂಟರ್ ಬಳಕೆ ಸಾಮಾನ್ಯವಾಗಿಹೋಗಿದೆ. ಅಂತರಜಾಲದ ಬಲವೂ ಸೇರಿಕೊಂಡು ಸಣ್ಣ - ದೊಡ್ಡ ಕಂಪ್ಯೂಟರುಗಳು ಈಗ ಟೈಪ್‌ರೈಟರಿನಿಂದ ಟೀವಿಯವರೆಗೆ, ಭೂಪಟದಿಂದ ದೂರವಾಣಿಯವರೆಗೆ ಪ್ರತಿಯೊಂದಕ್ಕೂ ಪರ್ಯಾಯವಾಗಬಲ್ಲ ಸಾಮರ್ಥ್ಯ ಪಡೆದುಕೊಂಡಿವೆ. ಪುಸ್ತಕದ ಜಾಗದಲ್ಲಿ ಇ-ಪುಸ್ತಕ, ಪತ್ರಿಕೆಯ ಜಾಗದಲ್ಲಿ ಆನ್‌ಲೈನ್ ಪತ್ರಿಕೆ, ದೂರವಾಣಿಯ ಜಾಗದಲ್ಲಿ ವೀಡಿಯೋ ಚಾಟಿಂಗ್ - ಹೀಗೆ ಅದೆಷ್ಟೋ ಪರಿಕಲ್ಪನೆಗಳು ಕಂಪ್ಯೂಟರಿನಿಂದಾಗಿ ಬದಲಾಗಿವೆ, ಬದಲಾಗುತ್ತಿವೆ.

ಈ ಅದ್ಭುತ ಸಾಧ್ಯತೆಯ ಬೆನ್ನಲ್ಲೇ ಅನೇಕ ಸಮಸ್ಯೆಗಳೂ ನಮ್ಮತ್ತ ಬಂದಿವೆ. ಮಾಹಿತಿ ಪಡೆದುಕೊಳ್ಳಲು ಈ ಹಿಂದೆ ಇದ್ದ ಅಡಚಣೆಗಳೆಲ್ಲ ನಿವಾರಣೆಯಾಗಿ ಬೇಕಾದ - ಬೇಡದ ಮಾಹಿತಿಯೆಲ್ಲ ನಮಗೆ ಸುಲಭವಾಗಿ ಸಿಗುವಂತಾಗಿದೆ. ಅಷ್ಟೇ ಅಲ್ಲ, ಉತ್ತಮ ಯೋಚನೆಗಳಿಗೆ ನೆರವಾಗುವ ರೀತಿಯಲ್ಲೇ ಕಂಪ್ಯೂಟರುಗಳು ಕೆಟ್ಟ ಆಲೋಚನೆಯನ್ನೂ ಬೆಳೆಸುತ್ತಿವೆ.

ನಮ್ಮ ಸಾಮರ್ಥ್ಯವನ್ನೂ ಮೀರಿದ ಪ್ರಮಾಣದಲ್ಲಿ ಮಾಹಿತಿಯ ರಾಶಿಯನ್ನು ನಮ್ಮೆದುರು ತಂದು ಸುರಿಯುತ್ತಿರುವುದು, ಯಾವುದೇ ವಿಷಯದತ್ತ ಗಮನ ಕೇಂದ್ರೀಕರಿಸಲು ಬಹುತೇಕ ಸಾಧ್ಯವೇ ಇಲ್ಲದಂತೆ ಮಾಡಿರುವುದೂ ಕಂಪ್ಯೂಟರುಗಳ ಸಾಧನೆಯೇ. ಈಗ ವಿಶ್ವವ್ಯಾಪಿ ಜಾಲದ ಉದಾಹರಣೆಯನ್ನೇ ನೋಡಿ. ಪುಸ್ತಕವೋ ಪತ್ರಿಕೆಯ ಲೇಖನವೋ ಜಾಲಲೋಕಕ್ಕೆ ಬಂದತಕ್ಷಣ ಅದಕ್ಕೆ ಒಂದಷ್ಟು ಲಿಂಕುಗಳು ಸೇರಿಕೊಳ್ಳುತ್ತವೆ, ಪಠ್ಯದ ಸುತ್ತಮುತ್ತ ಜಾಹೀರಾತುಗಳು ಮಿನುಗಲು ಪ್ರಾರಂಭಿಸುತ್ತವೆ. ಹಾಗೂ ಹೀಗೂ ಒಂದಷ್ಟು ಭಾಗವನ್ನು ಓದುವಷ್ಟರಲ್ಲಿ ಹೊಸದೊಂದು ಇಮೇಲ್ ಸಂದೇಶವೋ, ಚಾಟ್ ಕಿಟಕಿಯಲ್ಲಿ ಸ್ನೇಹಿತರ ಕರೆಯೋ ನಮ್ಮ ಗಮನವನ್ನು ಸೆಳೆಯುತ್ತವೆ. ಅಷ್ಟರಲ್ಲಿ ಓದುವಲ್ಲಿನ ನಮ್ಮ ಏಕಾಗ್ರತೆ ಎಲ್ಲಿಗೆ ಹೋಯಿತು ಎನ್ನುವುದೂ ಗೊತ್ತಾಗುವುದಿಲ್ಲ!

ಹಾಗೆಂದಮಾತ್ರಕ್ಕೆ ಅಂತರಜಾಲ-ವಿಶ್ವವ್ಯಾಪಿ ಜಾಲಗಳು ನಮಗೆ ಕೊಟ್ಟಿರುವ ಕೊಡುಗೆ ಸಾಮಾನ್ಯವೇನೂ ಅಲ್ಲ. ಮನುಕುಲದ ಇತಿಹಾಸದ ಮೇಲೆ ಸಂವಹನದ ಬೇರಾವ ಮಾಧ್ಯಮದಿಂದಲೂ ಸಾಧ್ಯವಾಗದಷ್ಟು ಮಟ್ಟದ ಪ್ರಭಾವವನ್ನು ಅಂತರಜಾಲ-ವಿಶ್ವವ್ಯಾಪಿ ಜಾಲಗಳು ಬೀರಿವೆ ಎಂದರೂ ತಪ್ಪಾಗಲಾರದು.

ಕಂಪ್ಯೂಟರುಗಳಿಂದ ನಮ್ಮ ಕೆಲಸಗಳೆಲ್ಲ ಸುಲಭವಾಗುತ್ತಿರುವ, ಸಂವಹನಕ್ಕೆ ಅದೆಷ್ಟೋ ಹೊಸ ಆಯಾಮಗಳೆಲ್ಲ ಸಿಗುತ್ತಿರುವ ಈ ಸಂದರ್ಭದಲ್ಲಿ ಕಂಪ್ಯೂಟರುಗಳಿಗೆ ಎಲ್ಲವೂ ಗೊತ್ತು ಎಂಬ ಭಾವನೆ ನಮ್ಮಲ್ಲಿ ಮೂಡುವುದು ಸಹಜವೇ. ಅವಕ್ಕೆ ಎಲ್ಲವೂ ಗೊತ್ತಿರುವುದು ಹೌದೋ ಅಲ್ಲವೋ ಎನ್ನುವ ಪ್ರಶ್ನೆ ಹಾಗಿರಲಿ, ಕಂಪ್ಯೂಟರುಗಳಿಗೆ ಗೊತ್ತಿರುವುದರಲ್ಲಿ ನಮಗೆ ಏನೆಲ್ಲ ಬೇಕು ಎಂದು ಗೊತ್ತಿರುವುದು ನಮಗೆ ಮಾತ್ರ. ಹಾಗಾಗಿ ಮಾಹಿತಿ ತಂತ್ರಜ್ಞಾನವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಸಂಪೂರ್ಣವಾಗಿ ನಮ್ಮದೇ ಜವಾಬ್ದಾರಿ.

ಯಂತ್ರಗಳಲ್ಲೂ ಕೃತಕ ಬುದ್ಧಿಶಕ್ತಿ ತುಂಬುವ ತಂತ್ರಜ್ಞಾನ ಬೆಳೆದು ಕಂಪ್ಯೂಟರುಗಳು ನಮಗಿಂತ ಹೆಚ್ಚು ಬುದ್ಧಿವಂತರಾಗುತ್ತವಲ್ಲ, ಆಗ ಬೇಕಾದರೆ ನೋಡಿಕೊಳ್ಳೋಣ. ಆದರೆ ಸದ್ಯಕ್ಕಂತೂ ಕಂಪ್ಯೂಟರ್ ಹೇಳಿದಂತೆ ನಾವು ಕೇಳದೆ ಅವನ್ನು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿಯಷ್ಟೆ ಬಳಸಿಕೊಳ್ಳುವ ಅಗತ್ಯ ನಮ್ಮ ಮುಂದಿದೆ. ಒಳ್ಳೆಯ ಗೆಳೆಯನಾಗುವಷ್ಟೇ ಬೇಗ ನಮ್ಮನ್ನು ತಪ್ಪುದಾರಿಗೂ ಎಳೆಯಬಲ್ಲ ಕಂಪ್ಯೂಟರ್ ನಮ್ಮ ಆಪ್ತಮಿತ್ರನಾಗಿಯೇ ಉಳಿಯಬೇಕೆಂದರೆ ಅದು ಅನಿವಾರ್ಯವೂ ಹೌದು.

ಮಾರ್ಚ್ ೨೬, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge