ಶುಕ್ರವಾರ, ಮಾರ್ಚ್ 15, 2013

ಎನ್‌ಎಫ್‌ಸಿ: ಹಾಗೆಂದರೇನು?


ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳ ಲೋಕವೇ ಹೀಗೆ, ಇಲ್ಲಿ ಆಗಿಂದಾಗ್ಗೆ ಹೊಸ ತಂತ್ರಜ್ಞಾನಗಳ ಪರಿಚಯ ಆಗುತ್ತಲೇ ಇರುತ್ತದೆ. ಕರೆಮಾಡುವ ಸೌಲಭ್ಯದ ಜೊತೆಗೆ ಎಸ್ಸೆಮ್ಮೆಸ್ ಸೇರಿಕೊಂಡಲ್ಲಿಂದಲೇ ಈ ಟ್ರೆಂಡ್ ಶುರುವಾಯಿತು ಎನ್ನಬಹುದೇನೋ.

ಅಂತರಜಾಲ ಉಪಯೋಗಿಸಲು ಜಿಪಿಆರ್‌ಎಸ್, ವೈ-ಫಿ, ನಾವೆಲ್ಲಿದ್ದೇವೆ ಎಂದು ಹೇಳುವ ಜಿಪಿಎಸ್, ಕಡತಗಳನ್ನು ವಿನಿಮಯ ಮಾಡಿಕೊಳ್ಳಲು ಬ್ಲೂಟೂಥ್ ಮೊದಲಾದ ಅನೇಕ ತಂತ್ರಜ್ಞಾನಗಳನ್ನು ನಾವು ಮೊಬೈಲ್ ಫೋನುಗಳಲ್ಲಿ ನೋಡಬಹುದು. ಅಷ್ಟೇ ಏಕೆ, ಜನಪ್ರಿಯತೆ ಗಳಿಸದ ಹಲವು ತಂತ್ರಜ್ಞಾನಗಳೂ ಬಂದು ಹೋದದ್ದಿದೆ; ಈಗ ಅದೆಷ್ಟು ಮೊಬೈಲುಗಳಲ್ಲಿ ನಮಗೆ ಇನ್‌ಫ್ರಾರೆಡ್ ಪೋರ್ಟ್ ಕಾಣಸಿಗುತ್ತದೆ?

ಇರಲಿ, ವಿಷಯ ಅದಲ್ಲ. ಮೊಬೈಲ್ ಲೋಕದಲ್ಲಿ ಈಚೆಗೆ ಸುದ್ದಿಮಾಡುತ್ತಿರುವ ಹೊಸದೊಂದು ತಂತ್ರಜ್ಞಾನವನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ. ಆ ತಂತ್ರಜ್ಞಾನದ ಹೆಸರೇ ಎನ್‌ಎಫ್‌ಸಿ, ಅಂದರೆ ನಿಯರ್ ಫೀಲ್ಡ್ ಕಮ್ಯೂನಿಕೇಶನ್.

ಬಾಗಿಲಿಗೆ ಅಂಟಿಕೊಂಡಂತಿರುವ ಕರಿಯ ಡಬ್ಬಿಯೆದುರು ಐಡಿ ಕಾರ್ಡ್ ಹಿಡಿದ ತಕ್ಷಣ ಅಟೆಂಡೆನ್ಸ್ ದಾಖಲಾಗುವ, ಬಾಗಿಲು ತೆರೆದುಕೊಳ್ಳುವ ವ್ಯವಸ್ಥೆ ಹಲವೆಡೆಗಳಲ್ಲಿ ಬಳಕೆಯಾಗುವುದನ್ನು ನೀವು ಗಮನಿಸಿರಬಹುದು. ಎನ್‌ಎಫ್‌ಸಿ ಕೆಲಸಮಾಡುವ ವಿಧಾನವನ್ನು ವಿವರಿಸಲು ಈ ಉದಾಹರಣೆಯನ್ನೇ ಬಳಸಬಹುದು.

ಎನ್‌ಎಫ್‌ಸಿ ತಂತ್ರಜ್ಞಾನ ಕೆಲಸಮಾಡುವುದು ಮ್ಯಾಗ್ನೆಟಿಕ್ ಇಂಡಕ್ಷನ್ (ಕಾಂತ ಪ್ರೇರಣೆ) ಎಂಬ ವಿದ್ಯಮಾನವನ್ನು ಬಳಸಿಕೊಂಡು. ಇದರಿಂದಾಗಿ ಪರಸ್ಪರ ಹತ್ತಿರದಲ್ಲಿರುವ ಎರಡು ಸಾಧನಗಳ ನಡುವೆ ಮಾಹಿತಿ ವಿನಿಮಯ ಸಾಧ್ಯವಾಗುತ್ತದೆ. ಮೇಲೆ ಹೇಳಿದ ಉದಾಹರಣೆಯಲ್ಲಿ ಐಡಿ ಕಾರ್ಡನ್ನು ಆ ಕರಿಯ ಡಬ್ಬಿಯೆದುರು ಹಿಡಿದಾಗ ಅವೆರಡೂ ಸಾಧನಗಳ ನಡುವೆ ಮಾಹಿತಿ ವಿನಿಮಯ ನಡೆದು ಕಾರ್ಡಿನಲ್ಲಿರುವ ಮಾಹಿತಿಯ ಆಧಾರದ ಮೇಲೆ ಅಟೆಂಡೆನ್ಸ್ ದಾಖಲಾಗುತ್ತದೆ, ಇದು ನಮ್ಮ ಕಚೇರಿಯ ಉದ್ಯೋಗಿಯೇ ಎಂದು ಖಚಿತವಾಗಿ ಬಾಗಿಲೂ ತೆರೆದುಕೊಳ್ಳುತ್ತದೆ.

ಈ ಉದಾಹರಣೆಯಲ್ಲಿ ಐಡಿ ಕಾರ್ಡ್ ಒಂದು ಜಡ (ಪ್ಯಾಸಿವ್) ಸಾಧನ; ಅಂದರೆ, ಅದರಲ್ಲಿ ಮುಂಚಿತವಾಗಿಯೇ ಶೇಖರವಾಗಿರುವ ಮಾಹಿತಿಯನ್ನು ಕಾರ್ಡ್ ರೀಡರಿನಂತಹ ಸಕ್ರಿಯ (ಆಕ್ಟಿವ್) ಸಾಧನಗಳಿಂದ ಓದುವುದು ಮಾತ್ರ ಸಾಧ್ಯ. ಇದರ ಬದಲು ಎರಡೂ ಸಾಧನಗಳು ಸಕ್ರಿಯವಾಗಿದ್ದರೆ?

ಮೊಬೈಲ್ ಫೋನುಗಳಲ್ಲಿ ಎನ್‌ಎಫ್‌ಸಿ ತಂತ್ರಜ್ಞಾನ ಅಳವಡಿಕೆಯಾದದ್ದು ಇದೇ ಯೋಚನೆಯ ಪರಿಣಾಮವಾಗಿ. ಮೊಬೈಲ್ ಫೋನ್ ಹೇಗೂ ಸಕ್ರಿಯ ಸಾಧನವಾದ್ದರಿಂದ ಅದರಲ್ಲಿ ನಮಗೆ ಬೇಕೆಂದಾಗ ಬೇಕಾದ ಮಾಹಿತಿಯನ್ನು ಅಳವಡಿಸುವುದು ಸಾಧ್ಯವಾಗುತ್ತದೆ. ಕ್ರಿಕೆಟ್ ಮ್ಯಾಚಿನದೋ ಸಿನಿಮಾ ಪ್ರದರ್ಶನದ್ದೋ ಬಸ್ ಪ್ರಯಾಣದ್ದೋ ಟಿಕೇಟು, ಯಾವುದೋ ಕಟ್ಟಡ ಪ್ರವೇಶಿಸಲು ಬೇಕಾದ ಅನುಮತಿ ಪತ್ರ - ಹೀಗೆ ಮೊಬೈಲ್ ಫೋನಿನಲ್ಲಿರುವ ಎನ್‌ಎಫ್‌ಸಿ ತಂತ್ರಜ್ಞಾನವನ್ನು ಹತ್ತಾರು ವಿಧಗಳಲ್ಲಿ ಬಳಸಿಕೊಳ್ಳಬಹುದು. ಫೋನಿನಿಂದ ಫೋನಿಗೆ ಮಾಹಿತಿ ವರ್ಗಾಯಿಸಲೂ ಈ ತಂತ್ರಜ್ಞಾನ ಉಪಯುಕ್ತ.

ಅಷ್ಟೇ ಏಕೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡುಗಳಿಗೆ ಪರ್ಯಾಯವಾಗಿ ಈ ತಂತ್ರಜ್ಞಾನವನ್ನು ಹಣ ಪಾವತಿಯ ಮಾರ್ಗವಾಗಿಯೂ ಉಪಯೋಗಿಸುವುದು ಸಾಧ್ಯ. ಸೂಪರ್‌ಮಾರ್ಕೆಟಿನಲ್ಲಿ ಬಿಸ್ಕತ್ತು-ಚಾಕಲೇಟು ಕೊಂಡು ಬಿಲ್ಲಿಂಗ್ ವಿಭಾಗದಲ್ಲಿರುವ ರೀಡರಿನ ಮುಂದೆ ಮೊಬೈಲ್ ಫೋನ್ ಹಿಡಿದು ಮುಂದೆ ಸಾಗುವ ಕಲ್ಪನೆ ಈ ತಂತ್ರಜ್ಞಾನದಿಂದಾಗಿ ಸಾಕಾರವಾಗುತ್ತಿದೆ. ಜಾಹೀರಾತು ಪ್ರಪಂಚದಲ್ಲೂ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಸಾಧ್ಯ. ಐಡಿ ಕಾರ್ಡಿನಲ್ಲಿ ಮಾಹಿತಿ ಶೇಖರಿಸಿದಂತೆಯೇ ಪೋಸ್ಟರುಗಳಲ್ಲೂ ಮಾಹಿತಿ ಶೇಖರಿಸಿ ಅದರ ಸಮೀಪಕ್ಕೆ ತಮ್ಮ ಮೊಬೈಲ್ ಫೋನ್ ತರುವ ಗ್ರಾಹಕರಿಗೆ ನೇರವಾಗಿ ವಿಶೇಷ ಆಫರುಗಳನ್ನು ತಲುಪಿಸಿಬಿಡಬಹುದಲ್ಲ!

ಅನೇಕ ಮಾದರಿಯ ಮೊಬೈಲ್ ಫೋನುಗಳಲ್ಲಿ ಎನ್‌ಎಫ್‌ಸಿ ಸೌಲಭ್ಯ ಬರುತ್ತಿದೆಯಾದರೂ ಅದರ ಬಳಕೆ ಇನ್ನೂ ಸೀಮಿತವಾಗಿಯೇ ಇದೆ. ಜೊತೆಗೆ ಈ ತಂತ್ರಜ್ಞಾನದ ಬಳಕೆ ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವ ನಿಟ್ಟಿನಲ್ಲೂ ಪ್ರಶ್ನೆಗಳು ಕೇಳಿಬರುತ್ತಿವೆ. ಆದರೆ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಬದಲಾಗಿ ಎನ್‌ಎಫ್‌ಸಿ ತಂತ್ರಜ್ಞಾನ ನಮ್ಮೆಲ್ಲರ ಬದುಕಿನಲ್ಲೂ ಮಹತ್ವದ ಪಾತ್ರ ವಹಿಸಲಿದೆ ಎನ್ನುವುದು ತಜ್ಞರ ವಿಶ್ವಾಸ.

ಮಾರ್ಚ್ ೧೫, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge