ಶುಕ್ರವಾರ, ಮಾರ್ಚ್ 22, 2013

ಆನ್‌ಲೈನ್ ಲೋಕದಲ್ಲಿ ನಿಮಗೆ ತಿಳಿದಿಲ್ಲದ ನೀವು!


ಟಿ. ಜಿ. ಶ್ರೀನಿಧಿ

ಶಾಲೆಯ ಹೋಮ್‌ವರ್ಕ್‌ಗೆ ಮಾಹಿತಿ, ಆಫೀಸಿನ ಕೆಲಸದಲ್ಲಿ ಸಹಾಯ, ಸಿನಿಮಾದ ವಿಮರ್ಶೆ, ಹೋಟಲ್ ಊಟದ ಬಗ್ಗೆ ಫೀಡ್‌ಬ್ಯಾಕು - ಏನೇ ಬೇಕಾದರೂ ನಾವು ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಮೊರೆಹೋಗುವುದು ಸಾಮಾನ್ಯ ಸಂಗತಿ. ಅಲ್ಲಿರುವ ಅಪಾರ ಪ್ರಮಾಣದ ಮಾಹಿತಿಯಲ್ಲಿ ಬೇಕಾದ್ದನ್ನು ಹುಡುಕಿಕೊಳ್ಳಲು ಗೂಗಲ್‌ನಂತಹ ಸರ್ಚ್ ಇಂಜನ್ನುಗಳು ನಮಗೆ ನೆರವಾಗುತ್ತವೆ.

ಯಾರಾದರೂ ಹೊಸಬರ ಬಗ್ಗೆ ತಿಳಿದುಕೊಳ್ಳಬೇಕು ಎಂದರೂ ಸರ್ಚ್ ಇಂಜನ್ನುಗಳನ್ನೇ ಬಳಸುವಷ್ಟರ ಮಟ್ಟಿಗೆ ಇವುಗಳ ವ್ಯಾಪ್ತಿ ಬೆಳೆದುಬಿಟ್ಟಿದೆ. ಇನ್ನು ಫೇಸ್‌ಬುಕ್-ಲಿಂಕ್ಡ್‌ಇನ್-ಟ್ವಿಟ್ಟರುಗಳಂತಹ ಸಮಾಜಜಾಲಗಳ ಪಾತ್ರವೂ ಕಡಿಮೆಯದೇನಲ್ಲ; ಅಲ್ಲಿರುವ ಭಾರೀ ಪ್ರಮಾಣದ ಮಾಹಿತಿ ವ್ಯಕ್ತಿಗಳ ಬಗ್ಗೆ ಬೇಕಾದಷ್ಟು ಕತೆಗಳನ್ನು ಹೇಳಬಲ್ಲದು. ಉದ್ಯೋಗದಾತರು ತಮ್ಮಲ್ಲಿಗೆ ಬರುವ ಹೊಸಬರ ಬಗ್ಗೆ ಜಾಲಲೋಕದಲ್ಲಿ ಹುಡುಕಾಡುವುದಂತೂ ಸಾಮಾನ್ಯವೇ ಆಗಿಹೋಗಿದೆ.

ಯಾವುದೋ ಹೊಸ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನಮ್ಮ ಬಗ್ಗೆಯೇ ಹುಡುಕಾಟ ನಡೆದಿದೆ ಎಂದಿಟ್ಟುಕೊಂಡರೆ ಹುಡುಕಿದವರಿಗೆ ಎಂತಹ ಮಾಹಿತಿ ಸಿಕ್ಕರೆ ಚೆಂದ? ಉದ್ಯೋಗದಾತರು ಗೂಗಲ್‌ನಲ್ಲಿ ಹುಡುಕಿದಾಗ ಅವರಿಗೆ ನಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಸಿಗದೆ ಯಾವುದೋ ಜಾಲತಾಣದಲ್ಲಿ ನಾವು ಬೇರೊಬ್ಬರ ಬಗ್ಗೆ ಕೆಟ್ಟದಾಗಿ ಬರೆದಿದ್ದರ ಅಥವಾ ಇನ್ನಾರ ಜೊತೆಗೋ ಜಗಳವಾಡಿದ ದಾಖಲೆ ಮೊದಲಿಗೆ ಸಿಕ್ಕಿಬಿಟ್ಟರೆ? ಕಾಲೇಜಿನ ದಿನಗಳ ಹುಡುಗಾಟದಲ್ಲಿ ತೆಗೆಸಿಕೊಂಡು ಫೇಸ್‌ಬುಕ್‌ಗೆ ಸೇರಿಸಿದ್ದ ಆಕ್ಷೇಪಾರ್ಹ ಫೋಟೋಗಳು ಮುಂದೆಂದಾದರೂ ಮತ್ತೆ ಪ್ರತ್ಯಕ್ಷವಾದರೆ ಅದನ್ನು ನೋಡಿದವರಿಗೆ ನಮ್ಮ ಬಗ್ಗೆ ಎಂತಹ ಅಭಿಪ್ರಾಯ ಮೂಡಬಹುದು?

ಇದೆಲ್ಲ ಎಲ್ಲಾದರೂ ಸಾಧ್ಯವೇ ಎಂದು ಉಡಾಫೆಯಿಂದ ಸುಮ್ಮನಿರುವಂತಿಲ್ಲ. ಏಕೆಂದರೆ ಕಂಪ್ಯೂಟರ್ ಪ್ರಪಂಚ ಏನನ್ನೂ ಮರೆಯುವುದಿಲ್ಲ.

ಚಿತ್ರ, ಲೇಖನ, ಬ್ಲಾಗ್‌ಪೋಸ್ಟ್, ಸ್ಟೇಟಸ್ ಅಪ್‌ಡೇಟ್ ಇತ್ಯಾದಿ ಯಾವುದೇ ಮಾಹಿತಿ ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟವಾಗುತ್ತಿದ್ದಂತೆ ಅವು ಬಹುತೇಕ ಯಾವುದೇ ನಿಯಂತ್ರಣವಿಲ್ಲದೆ ಪ್ರಸಾರವಾಗುತ್ತ ಸಾಗುತ್ತವೆ. ನಾವು ಸೇರಿಸಿದ ಮಾಹಿತಿಯ ಪ್ರತಿಗಳು ನಮಗೆ ಗೊತ್ತಿಲ್ಲದಂತೆಯೇ ಹತ್ತಾರು ಕಡೆಗಳಲ್ಲಿ ಉಳಿದುಕೊಂಡುಬಿಡುತ್ತವೆ; ಜಾಲಲೋಕದ ಇತಿಹಾಸ ದಾಖಲಿಸುವ ಆರ್ಕೈವ್‌ಗಳ ಸಂದಿಗೊಂದಿಗಳಲ್ಲಿ ಸಿಕ್ಕಿಕೊಂಡಿರುತ್ತವೆ. ಇವುಗಳ ಪೈಕಿ ಆಕ್ಷೇಪಾರ್ಹವಾದ ಯಾವುದೋ ತುಣುಕು ನಾವು ನಿರೀಕ್ಷಿಸದ ಸಂದರ್ಭದಲ್ಲಿ ಪ್ರತ್ಯಕ್ಷವಾದರೆ ಡೌಟೇ ಇಲ್ಲ, ಮುಜುಗರ ಗ್ಯಾರಂಟಿ!

ಈ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳುವುದು ಕಷ್ಟದ ಕೆಲಸ. ಮುಜುಗರ ಉಂಟುಮಾಡುವ ಮಾಹಿತಿಯಿರುವ ತಾಣದ ಮೇಲೆ ನಮ್ಮ ನಿಯಂತ್ರಣ ಇಲ್ಲದೆ ಹೋದರಂತೂ ಅದನ್ನು ಅಲ್ಲಿಂದ ತೆಗೆಸುವುದು ಹೆಚ್ಚೂಕಡಿಮೆ ಅಸಾಧ್ಯವೇ.

ಕಾಲೇಜು ದಿನಗಳಲ್ಲಿ ಕೂಲ್ ಆಗಿ ಕಾಣಲೆಂದು ಯಾವಯಾವುದೋ ಸನ್ನಿವೇಶ-ಭಂಗಿಗಳಲ್ಲಿ ತೆಗೆಸಿಕೊಂಡ ಛಾಯಾಚಿತ್ರ ಆಗ ಹೇಗೆ ಕಂಡರೂ ಮುಂದೆ ನಮ್ಮ ವ್ಯಕ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವುದು ಗ್ಯಾರಂಟಿ. ಕೀಳು ಅಭಿರುಚಿಯ ಬರಹಗಳ - ಕಮೆಂಟುಗಳ ಕತೆಯೂ ಇದೇ. ಮುಂದೆಂದೋ ನಮಗೆ ಮುಜುಗರ ಉಂಟುಮಾಡುವಂತಹ ಇಂತಹ ಮಾಹಿತಿಯನ್ನು ಮೊದಲಿಗೆ ಯಾವ ಜಾಲತಾಣಕ್ಕೂ ಸೇರಿಸದೇ ಇರುವುದು ಈ ಸಮಸ್ಯೆಗೆ ಸರಳ ಪರಿಹಾರ ಎನ್ನಬಹುದು.

ಆದರೆ ಕೆಲವೊಮ್ಮೆ ನಮ್ಮ ಕೈಮೀರಿ ಇಂತಹ ಮಾಹಿತಿ ಜಾಲಲೋಕಕ್ಕೆ ಸೇರಿಬಿಡುವ ಸಾಧ್ಯತೆಯೂ ಇರುತ್ತದಲ್ಲ. ಅಂತಹ ಮಾಹಿತಿಯ ದುಷ್ಪರಿಣಾಮಗಳನ್ನು ಆದಷ್ಟೂ ಕಡಿಮೆಮಾಡಲು ಆನ್‌ಲೈನ್ ರೆಪ್ಯುಟೇಶನ್ ಮ್ಯಾನೇಜ್‌ಮೆಂಟ್ ಎಂಬ ಪರಿಕಲ್ಪನೆ ಸಹಾಯಮಾಡುತ್ತದೆ.

ವಿಶ್ವವ್ಯಾಪಿ ಜಾಲದಲ್ಲಿ ನಮ್ಮ ಬಗ್ಗೆ ಇರುವ, ಹುಡುಕಿದ ತಕ್ಷಣ ಸಿಗುವ ಮಾಹಿತಿಯ ಬಗ್ಗೆ ಸತತವಾಗಿ ನಿಗಾ ವಹಿಸುವುದು ಈ ಪರಿಕಲ್ಪನೆಯ ಸಾರಾಂಶ. ಆಗಿಂದಾಗ್ಗೆ ನಮ್ಮ ಹೆಸರನ್ನೇ ಗೂಗಲ್‌ನಲ್ಲಿ ಸರ್ಚ್ ಮಾಡುವುದು, ನಮ್ಮ ವೆಬ್‌ಸೈಟ್-ಬ್ಲಾಗ್-ಲಿಂಕ್ಡ್‌ಇನ್ ಪ್ರೊಫೈಲ್ ಇತ್ಯಾದಿಗಳನ್ನು ಅಪ್‌ಡೇಟ್ ಆಗಿರುವಂತೆ ನೋಡಿಕೊಳ್ಳುವುದು, ಸಮಾಜ ಜಾಲಗಳಲ್ಲಿ ಸಕ್ರಿಯರಾಗಿರುವುದು, ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವಾಗ ಅದರ ಗೋಪ್ಯತೆಯ ಬಗ್ಗೆ ನಿಗಾವಹಿಸುವುದು - ಇಂತಹ ಹಲವು ಸೂತ್ರಗಳ ಬಗ್ಗೆ ಇದು ನಮ್ಮ ಗಮನ ಸೆಳೆಯುತ್ತದೆ.

ಇಷ್ಟೇ ಅಲ್ಲ, ನಿರ್ದಿಷ್ಟ ಶುಲ್ಕಕ್ಕೆ ಪ್ರತಿಯಾಗಿ ನಮ್ಮ ಆನ್‌ಲೈನ್ ರೆಪ್ಯುಟೇಶನ್ ಮ್ಯಾನೇಜ್‌ಮೆಂಟ್ ಜವಾಬ್ದಾರಿ ಹೊರುವವರೂ ಇದ್ದಾರೆ. ಸರ್ಚ್ ಇಂಜನ್‌ಗಳಲ್ಲಿ ಹುಡುಕಿದಾಗ ಮೊದಲಿಗೆ ನಮ್ಮ ಬಗೆಗಿನ ಒಳ್ಳೆಯ ಮಾಹಿತಿಯೇ ಪ್ರಕಟವಾಗುವಂತೆ ನೋಡಿಕೊಳ್ಳುವ ಆಶ್ವಾಸನೆ ಇಂತಹ ಸಂಸ್ಥೆಗಳಿಂದ ದೊರಕುತ್ತದೆ.

ಮಾರ್ಚ್ ೨೨, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge