ಟಿ. ಜಿ. ಶ್ರೀನಿಧಿ
ಥಾಯ್‌ಲ್ಯಾಂಡ್‌ನಲ್ಲಿ ಮಳೆಯ ಹಾವಳಿ ವಿಪರೀತವಾಗಿ ಅಲ್ಲಿ ವ್ಯಾಪಕ ಸಮಸ್ಯೆ ಸೃಷ್ಟಿಯಾಗಿರುವ ಸುದ್ದಿ ಈಚೆಗೆ ಮಾಧ್ಯಮಗಳಲ್ಲೆಲ್ಲ ಕಾಣಿಸಿಕೊಳ್ಳುತ್ತಿದೆ. ಮೊನ್ನೆ ಬೆಳಿಗ್ಗೆಯೂ ಪೇಪರಿನಲ್ಲಿ ಈ ಸುದ್ದಿ ಓದಿದ್ದೆ. ಅದೇ ದಿನ ಮಧ್ಯಾಹ್ನ ಕಂಪ್ಯೂಟರ್ ಬಿಡಿಭಾಗಗಳ ವಿತರಕನಾದ ನನ್ನ ಗೆಳೆಯ ಚೇತನ್‌ಗೆ ಕರೆಮಾಡಿದ್ದೆ; ನನ್ನ ಪಿ.ಸಿ.ಗೊಂದು ಹೊಸ ಹಾರ್ಡ್‌ಡಿಸ್ಕ್ ಬೇಕು ಕಣಪ್ಪ ಅಂದೆ.
"ಥಾಯ್‌ಲ್ಯಾಂಡ್‌ನಲ್ಲಿ ಮಳೆ ಜಾಸ್ತಿಯಾಗಿ ತುಂಬಾ ತೊಂದರೆಯಾಗಿದೆ" ಅಂತ ಉತ್ತರ ಬಂತು. ಇದೇನಪ್ಪ ಇವನು ನನ್ನ ಕಂಪ್ಯೂಟರ್‌ಗೆ ಹಾರ್ಡ್‌ಡಿಸ್ಕ್ ಬೇಕು ಅಂದರೆ ಥಾಯ್‌ಲ್ಯಾಂಡ್‌ನಲ್ಲಿ ಮಳೆ ಅಂತಾನಲ್ಲ ಅಂತ ಒಂದು ನಿಮಿಷ ಗೊಂದಲವಾಯಿತು. ಅದಕ್ಕೂ ಇದಕ್ಕೂ ಏನಪ್ಪ ಸಂಬಂಧ ಅಂತ ಕೇಳಿದಾಗಲೇ ಗೊತ್ತಾದದ್ದು - ಥಾಯ್‌ಲ್ಯಾಂಡ್ ಮಳೆಯ ಪರಿಣಾಮವಾಗಿ ಹಾರ್ಡ್‌ಡಿಸ್ಕ್‌ಗಳ ಬೆಲೆ ವಿಪರೀತವಾಗಿ ಏರಿರುವ ವಿಷಯ!
ಪ್ರವಾಹವೋ ಬರಗಾಲವೋ ಬಂದಾಗ ಆಹಾರ ಧಾನ್ಯಗಳ ಉತ್ಪಾದನೆ - ಪೂರೈಕೆಯಲ್ಲಿ ವ್ಯತ್ಯಯವಾಗುವುದು, ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯಾಗುವುದು - ಇವೆಲ್ಲ ನಮಗೆ ಗೊತ್ತಿರುವ ವಿಷಯ. ಆದರೆ ಥಾಯ್‌ಲ್ಯಾಂಡ್‌ನಲ್ಲಿ ಮಳೆ ಬಂದರೆ ಹಾರ್ಡ್‌ಡಿಸ್ಕ್ ಬೆಲೆ ಯಾಕೆ ಜಾಸ್ತಿಯಾಗಬೇಕು?
***
ಪ್ರಪಂಚದಲ್ಲಿ ಉತ್ಪಾದನೆಯಾಗುವ ಪ್ರತಿ ಎರಡು ಹಾರ್ಡ್‌ಡಿಸ್ಕ್‌ಗಳಲ್ಲಿ ಒಂದು ಥಾಯ್‌ಲ್ಯಾಂಡ್‌ನಲ್ಲಿ ತಯಾರಾಗಿರುತ್ತದೆ ಎಂದರೆ ನಿಮಗೆ ಈ ಸಮಸ್ಯೆಯ ಹಿನ್ನೆಲೆ ಅರ್ಥವಾಗಬಹುದು. ಹಾರ್ಡ್‌ಡಿಸ್ಕ್ ತಯಾರಿಕೆಯಲ್ಲಿ ವಿಶ್ವವಿಖ್ಯಾತವಾಗಿರುವ ಸೀಗೇಟ್, ವೆಸ್ಟರ್ನ್ ಡಿಜಿಟಲ್, ತೋಷಿಬಾ ಮುಂತಾದ ಎಲ್ಲ ಸಂಸ್ಥೆಗಳದೂ ಥಾಯ್‌ಲ್ಯಾಂಡ್‌ನಲ್ಲಿ ಕಾರ್ಖಾನೆಗಳಿವೆ.
ಈಗಿನ ತೊಂದರೆಗೆ ಕಾರಣವಾಗಿರುವುದು ಇದೇ ಅಂಶ. ಥಾಯ್‌ಲ್ಯಾಂಡ್‌ನಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಅಲ್ಲಿನ ಅನೇಕ ಕಾರ್ಖಾನೆಗಳು ಜಲಾವೃತವಾಗಿವೆ; ಬಹಳಷ್ಟು ವಸತಿಪ್ರದೇಶಗಳಲ್ಲೂ ನೀರು ತುಂಬಿಕೊಂಡು ಅಲ್ಲಿನ ಜನರನ್ನು ಸ್ಥಳಾಂತರಿಸಲಾಗಿರುವುದರಿಂದ ಕಾರ್ಖಾನೆಯ ಸಿಬ್ಬಂದಿಯೂ ಕೆಲಸ ಮಾಡುವುದು ಕಷ್ಟ. ಹೀಗಾಗಿ ಅಲ್ಲಿನ ಔದ್ಯೋಗಿಕ ಚಟುವಟಿಕೆಗಳೆಲ್ಲ ಹೆಚ್ಚೂಕಡಿಮೆ ನಿಂತೇಹೋಗಿದೆ. ಮಳೆ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ; ಹಾಗಾಗಿ ಪರಿಸ್ಥಿತಿ ಸಹಜತೆಗೆ ಮರಳಲು ಎಷ್ಟು ಸಮಯ ಬೇಕಾಗಬಹುದು ಎಂಬ ಅಂದಾಜು ಕೂಡ ಸಿಗುತ್ತಿಲ್ಲ. ಇವೆಲ್ಲ ಕಾರಣಗಳಿಂದಾಗಿ ಹಾರ್ಡ್‌ಡಿಸ್ಕ್ ಉದ್ಯಮದ ಭವಿಷ್ಯ ಇನ್ನೂ ಅಸ್ಪಷ್ಟವಾಗಿಯೇ ಇದೆ.
ಪಿ.ಸಿ. ತಯಾರಕರ ಪೈಕಿ ಮುಂಚೂಣಿಯಲ್ಲಿರುವ ಡೆಲ್, ಎಚ್‌ಪಿ ಮುಂತಾದ ದೊಡ್ಡ ಸಂಸ್ಥೆಗಳಿಗೂ ಈ ಸಮಸ್ಯೆಯ ಬಿಸಿ ತಟ್ಟಿದೆ. ಸದ್ಯಕ್ಕೆ ದಾಸ್ತಾನಿನಲ್ಲಿರುವ ಹಾರ್ಡ್‌ಡಿಸ್ಕ್‌ಗಳನ್ನು ಬಳಸಿಕೊಂಡು ಅವು ತಕ್ಷಣಕ್ಕೆ ಈ ಪರಿಸ್ಥಿತಿಯನ್ನು ಎದುರಿಸುವುದು ಸಾಧ್ಯವಾಗಬಹುದಾದರೂ ಹೆಚ್ಚು ಕಾಲ ಈ ತೊಂದರೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ. ಇದನ್ನು ಈಗಾಗಲೇ ನಿರೀಕ್ಷಿಸಿರುವ ಡೆಲ್ ಸಂಸ್ಥೆ ಮುಂದಿನ ತ್ರೈಮಾಸಿಕಗಳಲ್ಲಿ ತನ್ನ ಆದಾಯಕ್ಕೆ ಧಕ್ಕೆಯಾಗಬಹುದು ಎಂದು ಈಗಾಗಲೇ ಘೋಷಿಸಿದೆ.
***
ಜಪಾನಿನ ಭೂಕಂಪ ಹಾಗೂ ಸುನಾಮಿಯ ನಂತರ ಕಂಪ್ಯೂಟರ್ ಬಿಡಿಭಾಗಗಳ ಪೂರೈಕೆಯಲ್ಲಿ ಉಂಟಾದ ಏರುಪೇರಿನಿಂದಾಗಿ ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದ ಪಿ.ಸಿ. ಉದ್ದಿಮೆಗೆ ಥಾಯ್‌ಲ್ಯಾಂಡ್ ಮಳೆ ಇನ್ನೊಂದು ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿದೆ. ಸ್ಮಾರ್ಟ್‌ಫೋನುಗಳು ಹಾಗೂ ಟ್ಯಾಬ್ಲೆಟ್ಟುಗಳ ಜೊತೆ ಸ್ಪರ್ಧಿಸಲು ಹೆಣಗುತ್ತಿರುವ ಈ ಉದ್ದಿಮೆ ಈಗ ಇರುವ ಬೇಡಿಕೆಗೆ ತಕ್ಕಷ್ಟು ಪಿ.ಸಿ.ಗಳನ್ನು ಪೂರೈಸಲೇ ಪರದಾಡುವ ಸ್ಥಿತಿ ತಲುಪುವ ಭೀತಿ ಎದುರಿಸುತ್ತಿದೆ.
ಗಾರ್ಟ್‌ನರ್ ಸಂಸ್ಥೆಯ ವರದಿಯ ಪ್ರಕಾರ ಕೆಲ ಮಾರುಕಟ್ಟೆಗಳಲ್ಲಿ ಪಿ.ಸಿ.ಗಳ ಬೇಡಿಕೆ ಶೇ. ೨೦ರವರೆಗೂ ಕುಸಿದಿದೆಯಂತೆ. ಡೆಸ್ಕ್‌ಟಾಪ್ - ಲ್ಯಾಪ್‌ಟಾಪ್‌ಗಳ ಕತೆ ಹಾಗಿರಲಿ, ತನ್ನ ಕಡಿಮೆ ಬೆಲೆ ಹಾಗೂ ಸಣ್ಣ ಗಾತ್ರದಿಂದ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ 'ನೆಟ್‌ಬುಕ್'ಗಳನ್ನಂತೂ ಈಗ ಕೇಳುವವರೇ ಇಲ್ಲವಾಗಿದೆ.
ಇನ್ನೀಗ ಹಾರ್ಡ್‌ಡಿಸ್ಕ್‌ಗಳಿಗೆ ಬೇರೆ ಬರ ಬಂದಿದೆ; ಇದರ ನೇರ ಪರಿಣಾಮವಾಗಿ ಪಿ.ಸಿ.ಗಳ ಬೆಲೆಯಲ್ಲಿ ಹೆಚ್ಚಳವಾದರೆ ಅದು ಅವುಗಳ ಅಳಿದುಳಿದ ಜನಪ್ರಿಯತೆಗೆ ಇನ್ನಷ್ಟು ಪೆಟ್ಟುಕೊಡಲಿದೆ. ಹಾರ್ಡ್‌ಡಿಸ್ಕ್ ಬದಲಿಗೆ ಸಾಲಿಡ್ ಸ್ಟೇಟ್ ಡ್ರೈವ್‌ಗಳನ್ನು (ಎಸ್‌ಎಸ್‌ಡಿ) ಬಳಸುವ ಐಪ್ಯಾಡ್‌ನಂತಹ ಸಾಧನಗಳಿಗೆ ಬೇಡಿಕೆ ಇನ್ನಷ್ಟು ಹೆಚ್ಚಲು ಇದೂ ಒಂದು ಕಾರಣವಾಗಬಹುದೋ ಏನೋ.
ಆಪಲ್ ಸಂಸ್ಥೆಯ ಇತ್ತೀಚಿನ ಉತ್ಪನ್ನ 'ಮ್ಯಾಕ್‌ಬುಕ್ ಏರ್', ಹಾಗೂ ಅದಕ್ಕೆ ಉತ್ತರವಾಗಿ ಇತರ ಸಂಸ್ಥೆಗಳು ರೂಪಿಸಿರುವ 'ಅಲ್ಟ್ರಾಬುಕ್' ಕಂಪ್ಯೂಟರುಗಳಲ್ಲೂ ಮಾಹಿತಿ ಶೇಖರಣೆಗೆ ಬಳಕೆಯಾಗುವುದು ಎಸ್‌ಎಸ್‌ಡಿಗಳೇ. ಸಾಮಾನ್ಯ ಹಾರ್ಡ್‌ಡಿಸ್ಕ್‌ಗಳಲ್ಲಿರುವಂತೆ ಯಾವುದೇ ಚಲಿಸುವ ಭಾಗಗಳಿಲ್ಲದಿರುವುದು ಎಸ್‌ಎಸ್‌ಡಿಗಳ ವೈಶಿಷ್ಟ್ಯ. ಇವುಗಳ ಕಾರ್ಯಕ್ಷಮತೆ ಹಾರ್ಡ್‌ಡಿಸ್ಕ್‌ಗಳಿಗಿಂತ ಹೆಚ್ಚು; ಬೆಲೆಯೂ ಜಾಸ್ತಿ.
ಆದರೆ ಈಗ ಹಾರ್ಡ್‌ಡಿಸ್ಕ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಅವುಗಳಿಗೆ ಪರ್ಯಾಯವಾಗಿ ಎಸ್‌ಎಸ್‌ಡಿಗಳ ಬಳಕೆ ಇನ್ನಷ್ಟು ವ್ಯಾಪಕವಾಗಬಹುದು ಎಂಬ ನಿರೀಕ್ಷೆ ಇದೀಗ ಪ್ರಾರಂಭವಾಗಿದೆ. ಹಾರ್ಡ್‌ಡಿಸ್ಕ್ ನಿರ್ಮಾತೃಗಳ ನಷ್ಟ ಸ್ಯಾನ್‌ಡಿಸ್ಕ್‌ನಂತಹ ಎಸ್‌ಎಸ್‌ಡಿ ತಯಾರಕರಿಗೆ ಲಾಭವಾಗಿ ಪರಿಣಮಿಸಬಹುದು ಎನ್ನುವ ಮಾತುಗಳೂ ಇವೆ.
***
ಅಂದಹಾಗೆ ಥಾಯ್‌ಲ್ಯಾಂಡ್ ಮಳೆಯ ಪರಿಣಾಮ ಬರಿಯ ಹಾರ್ಡ್‌ಡಿಸ್ಕ್‌ಗಳಿಗಷ್ಟೆ ಸೀಮಿತವಾಗಿಲ್ಲ. ಒಟ್ಟಾರೆಯಾಗಿ ಇಲೆಕ್ಟ್ರಾನಿಕ್ ಉಪಕರಣಗಳ ವ್ಯವಹಾರದ ಬಹುಭಾಗದ ಮೇಲೆ ಥಾಯ್ ಮಳೆಯ ಮೋಡ ಕವಿದಿದೆ. ಇಷ್ಟರಲ್ಲೇ ಮಾರುಕಟ್ಟೆ ಪ್ರವೇಶಿಸಬೇಕಿದ್ದ ಸೋನಿ ಸಂಸ್ಥೆಯ ಕೆಲ ಹೊಸ ಕ್ಯಾಮೆರಾಗಳ ರಂಗಪ್ರವೇಶವನ್ನು ಇದೇ ಕಾರಣದಿಂದಾಗಿ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.
ವಿಜ್ಞಾನ-ತಂತ್ರಜ್ಞಾನ ಹಾಗೂ ಪ್ರಕೃತಿಯ ನಡುವಿನ ಸ್ಪರ್ಧೆಯಲ್ಲಿ, ಸದ್ಯಕ್ಕಂತೂ, ಪ್ರಕೃತಿಯೇ ಮೇಲುಗೈ ಸಾಧಿಸಿರುವಂತೆ ತೋರುತ್ತಿದೆ.
ನವೆಂಬರ್ ೨೨, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ