ಮಂಗಳವಾರ, ನವೆಂಬರ್ 8, 2011

ಲೈಟ್ರೋ ಜಾದೂ!

ಟಿ. ಜಿ. ಶ್ರೀನಿಧಿ

ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ಫೋಟೋಗ್ರಫಿ ಅದೆಷ್ಟು ಸುಲಭವಾಗಿದೆಯಲ್ಲ! ಬೇರೆಬೇರೆ ರೀತಿಯ ಚಿತ್ರಗಳನ್ನು ತೆಗೆಯಲು ಹತ್ತಾರು ಸುಲಭ ಆಯ್ಕೆಗಳು, ಸ್ವಯಂಚಾಲಿತ ಆಯ್ಕೆ ಬೇಡ ಎನ್ನುವುದಾದರೆ ಮ್ಯಾನ್ಯುಯಲ್ ಸೆಟ್ಟಿಂಗುಗಳು, ಚಿತ್ರದ ಗುಣಮಟ್ಟ ಹೇಗಿರಬೇಕು ಎಂದು ತೀರ್ಮಾನಿಸುವ ಸ್ವಾತಂತ್ರ್ಯ, ಹೈ ಡೆಫನಿಷನ್ ವೀಡಿಯೋ ಚಿತ್ರೀಕರಿಸುವ ಸೌಕರ್ಯ, ದೂರದೂರದ ದೃಶ್ಯಗಳನ್ನೂ ಕಣ್ಣೆದುರಿಗೆ ತಂದುನಿಲ್ಲಿಸುವ ಮೆಗಾಜೂಮ್ - ಹೀಗೆ ಆಧುನಿಕ ಕ್ಯಾಮೆರಾಗಳಲ್ಲಿರುವ ವೈಶಿಷ್ಟ್ಯಗಳ ಪಟ್ಟಿಗೆ ಕೊನೆಯೇ ಇಲ್ಲ.

ಕ್ಯಾಮೆರಾಗಳ ವೈಶಿಷ್ಟ್ಯ ಮಾತ್ರವಲ್ಲ, ಅವುಗಳ ವೈವಿಧ್ಯವೂ ಕಡಿಮೆಯೇನಲ್ಲ. ಮೊಬೈಲಿನಲ್ಲಿ, ಟ್ಯಾಬ್ಲೆಟ್ ಗಣಕಗಳಲ್ಲಿ, ಲ್ಯಾಪ್‌ಟಾಪಿನಲ್ಲಿ, ಪೆನ್ನಿನಲ್ಲಿ, ಕೊನೆಗೆ ಅಂಗಿಯ ಗುಂಡಿಯಲ್ಲೂ ಅಡಗಿ ಕೂರಬಲ್ಲ ಕ್ಯಾಮೆರಾಗಳಿವೆ.

ಆದರೆ ಕ್ಯಾಮೆರಾಗಳಲ್ಲಿ ಅದೇನೇ ವೈಶಿಷ್ಟ್ಯ-ವೈವಿಧ್ಯ ಇದ್ದರೂ ಒಂದು ವಿಷಯ ಮಾತ್ರ ಎಲ್ಲ ಬಗೆಯ ಕ್ಯಾಮೆರಾಗಳನ್ನೂ ಸಮಾನವಾಗಿ ಕಾಡುತ್ತದೆ. ಆ ವಿಷಯವೇ ಫೋಕಸ್.

ಬಾಲ್ಕನಿ ಕೈದೋಟದಲ್ಲಿ ಅರಳಿರುವ ಹೂವಿನ ಚಿತ್ರ ತೆಗೆಯಲು ಹೋದಾಗ ಆ ಹೂವಿಗಿಂತ ಸ್ಪಷ್ಟವಾಗಿ ಪಕ್ಕದಲ್ಲಿ ಒಣಗುತ್ತಿರುವ ಒರೆಸುವ ಬಟ್ಟೆ ಕಾಣುತ್ತಿರುತ್ತದೆ. ಯಾವುದೋ ಪ್ರವಾಸಿ ತಾಣದಲ್ಲಿ ಪ್ರೇಯಸಿಯ ಚಿತ್ರ ಕ್ಲಿಕ್ಕಿಸಿದ್ದೇನೆ ಎಂದು ನೀವು ಅಂದುಕೊಂಡರೆ ನಿಮ್ಮ ಕ್ಯಾಮೆರಾ ಅವಳ ಹಿಂದಿರುವ ಅಜ್ಜಿಯ ಕಡೆ ಹೆಚ್ಚಿನ ಗಮನ ಕೊಟ್ಟಿರುತ್ತದೆ. ಇನ್ನು ಕೆರೆ ದಡದಲ್ಲಿರುವ ಮರದ ಬೊಡ್ಡೆಯ ಮೇಲೆ ಕುಳಿತು ಬಿಸಿಲು ಕಾಯಿಸುತ್ತಿರುವ ಬೆಳ್ಳಕ್ಕಿಯ ಚಿತ್ರ ತೆಗೆಯಲು ಹೋದಿರೋ, ಅನುಮಾನವೇ ಬೇಡ, ಅತ್ಯಂತ ಸ್ಪಷ್ಟವಾಗಿ ಬಂದಿರುತ್ತದೆ - ಮರದ ಬೊಡ್ಡೆ!


ಚಿತ್ರದ ವಿಷಯ ಏನಾಗಿರಬೇಕು ಎಂದು ನಾವು ಅಂದುಕೊಳ್ಳುತ್ತೇವೆಯೋ ಅದಕ್ಕೆ ಸರಿಯಾಗಿ ಕ್ಯಾಮೆರಾವನ್ನು ಹೊಂದಿಸುವುದು ಸಾಧ್ಯವಾಗದಿದ್ದಾಗ ಈ ಸಮಸ್ಯೆಗಳೆಲ್ಲ ಕಾಣಿಸಿಕೊಳ್ಳುತ್ತವೆ. ಚಿತ್ರ 'ಔಟ್ ಆಫ್ ಫೋಕಸ್' ಆಗಿದೆ ಎನ್ನುವುದು ಇಂತಹ ಸಂದರ್ಭಗಳಲ್ಲೇ.

ನಾವು ತೆಗೆದ ಚಿತ್ರದಲ್ಲಿ ಇರಬಹುದಾದ ಅನೇಕ ಕೊರತೆಗಳನ್ನು ವಿವಿಧ ತಂತ್ರಾಂಶಗಳ ಬಳಕೆಯಿಂದ ಹೋಗಲಾಡಿಸಿಕೊಳ್ಳಬಹುದು; ಆದರೆ ಫೋಕಸ್‌ನಲ್ಲಿ ಎಡವಟ್ಟಾಗಿದ್ದರೆ ಮಾತ್ರ ಅದನ್ನು ಸರಿಪಡಿಸುವುದು ಈವರೆಗೆ ಸಾಧ್ಯವಾಗುತ್ತಿರಲಿಲ್ಲ.

ಈ ಅಸಾಧ್ಯವನ್ನು ಲೈಟ್ರೋ ಎಂಬ ಸಂಸ್ಥೆ ಇದೀಗ ಸಾಧ್ಯವಾಗಿಸಿದೆ. ಆ ಸಂಸ್ಥೆ ರೂಪಿಸಿರುವ ಲೈಟ್ ಫೀಲ್ಡ್ ಕ್ಯಾಮೆರಾ ಬಳಸಿ ತೆಗೆದ ಚಿತ್ರಗಳ ಫೋಕಸ್ ಅನ್ನು ಯಾವಾಗ ಹೇಗೆ ಬೇಕಿದ್ದರೂ ಬದಲಿಸಿಕೊಳ್ಳುವುದು ಸಾಧ್ಯ. ಯಾವುದೇ ದೃಶ್ಯದ ಒಂದು ರೂಪವನ್ನಷ್ಟೆ ದಾಖಲಿಸಿಕೊಳ್ಳುವ ಬದಲು ಕ್ಯಾಮೆರಾದ ಮಸೂರಗಳೊಳಗೆ ಪ್ರವೇಶಿಸುತ್ತಿರುವ ಬೆಳಕಿನ ಸಂಪೂರ್ಣ ವಿವರಗಳನ್ನು ಶೇಖರಿಸಿಟ್ಟುಕೊಳ್ಳುವುದು ಈ ಕ್ಯಾಮೆರಾದ ವೈಶಿಷ್ಟ್ಯ.

ಸಾಮಾನ್ಯ ಕ್ಯಾಮೆರಾ ಬಳಸಿ ಚಿತ್ರ ಕ್ಲಿಕ್ಕಿಸುವಾಗ ಏನು ಫೋಕಸ್ ಆಗಿದೆಯೋ ಅದಕ್ಕೆ ತಕ್ಕಂತೆ ಕ್ಯಾಮೆರಾದ ಮಸೂರ ಹಾಗೂ ಸೆನ್ಸರ್‌ಗಳನ್ನು ಹೊಂದಿಸಲಾಗುತ್ತದೆ. ಕ್ಯಾಮೆರಾದ ಗಮನವೆಲ್ಲ ಫೋಕಸ್ ಆಗಿರುವಷ್ಟು ಭಾಗದ ಕಡೆಗೇ ಇರುವುದರಿಂದ ಬೇರೆಡೆಗಳ ಬಗ್ಗೆ ಹೆಚ್ಚಿನ ವಿವರ ಅದಕ್ಕೆ ದಕ್ಕುವುದಿಲ್ಲ; ಹೀಗಾಗಿ ಔಟ್ ಆಫ್ ಫೋಕಸ್ ಆಗಿ ಉಳಿದುಕೊಂಡ ಭಾಗಗಳು ಚಿತ್ರದಲ್ಲಿ ಮಬ್ಬುಮಬ್ಬಾಗಿ ಕಾಣಿಸಿಕೊಳ್ಳುತ್ತವೆ.

ಆದರೆ ಲೈಟ್ರೋ ಕ್ಯಾಮೆರಾದಲ್ಲಿ ಹಾಗಲ್ಲ. ಅದನ್ನು ಬಳಸಿ ತೆಗೆದ ಚಿತ್ರಗಳಲ್ಲಿ ಕ್ಯಾಮೆರಾ ಮುಂದಿರುವ ದೃಶ್ಯದ ಎಲ್ಲ ವಿವರಗಳೂ ದಾಖಲಾಗಿರುತ್ತವೆ. ಆದ್ದರಿಂದಲೇ ಚಿತ್ರದ ಯಾವುದೇ ಭಾಗವನ್ನು - ಚಿತ್ರ ಕ್ಲಿಕ್ಕಿಸಿ ಆದ ಮೇಲೂ - ಫೋಕಸ್ ಮಾಡುವುದು ಸಾಧ್ಯವಾಗುತ್ತದೆ: ಚಿತ್ರದಲ್ಲಿ ಏನು ಫೋಕಸ್ ಆಗಬೇಕೋ ಅದರ ಮೇಲೆ ಒಮ್ಮೆ ಮೌಸ್ ಕ್ಲಿಕ್ ಮಾಡಿದರಾಯಿತು ಅಷ್ಟೆ!

ನೋಡಲು ಸಾಮಾನ್ಯ ಕ್ಯಾಮೆರಾದಂತೆ ಕಾಣದೆ ಇರುವುದು ಲೈಟ್ರೋ ಕ್ಯಾಮೆರಾದ ಇನ್ನೊಂದು ವಿಶೇಷತೆ. ಆಯತಾಕಾರದ ಕೊಳವೆಯಂತೆ ಕಾಣುವ ಇದನ್ನು ನೋಡಿದವರು ಮಕ್ಕಳಾಟದ ಕಲೈಡೋಸ್ಕೋಪ್ ಇರಬೇಕೇನೋ ಅಂದುಕೊಂಡರೆ ಯಾವ ಆಶ್ಚರ್ಯವೂ ಇಲ್ಲ!

ಈ ಕ್ಯಾಮೆರಾದಲ್ಲಿ ಕೊರತೆಗಳೂ ಇಲ್ಲದಿಲ್ಲ. ಸದ್ಯಕ್ಕೆ ಇದರಲ್ಲಿ ವೀಡಿಯೋ ಇಲ್ಲ, ಫ್ಲ್ಯಾಶ್ ಇಲ್ಲ, ಬ್ಯಾಟರಿ-ಮೆಮೊರಿ ಕಾರ್ಡುಗಳನ್ನು ಹೊರತೆಗೆಯುವುದು ಸಾಧ್ಯವಿಲ್ಲ - ಹೀಗೆ ಲೈಟ್ರೋದಲ್ಲಿನ ಇಲ್ಲಗಳ ಪಟ್ಟಿ ಸಾಕಷ್ಟು ದೊಡ್ಡದಾಗಿಯೇ ಇದೆ. ಲೈಟ್ ಫೀಲ್ಡ್ ಫೋಟೋಗ್ರಫಿ ತಂತ್ರಜ್ಞಾನದ ಸಂಕೀರ್ಣತೆಯ ಕಾರಣದಿಂದಾಗಿ ತೀರಾ ಹೆಚ್ಚು ರೆಸಲ್ಯೂಷನ್ನಿನ ಚಿತ್ರಗಳನ್ನು ತೆಗೆಯುವುದು ಸಾಧ್ಯವಾಗುವುದಿಲ್ಲ ಎನ್ನುವ ಅಂಶವೂ ಈ ಪಟ್ಟಿಯಲ್ಲಿದೆ. ಅಷ್ಟೇ ಅಲ್ಲ, ಲೈಟ್ರೋ ಕ್ಯಾಮೆರಾ ಬಳಕೆ ಸದ್ಯಕ್ಕೆ ಮ್ಯಾಕ್ ಗಣಕಗಳ ಜೊತೆಗೆ ಮಾತ್ರ ಸಾಧ್ಯ. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಗಣಕಗಳ ಜೊತೆಗೂ ಈ ಕ್ಯಾಮೆರಾ ಬಳಕೆ ಯಾವಾಗ ಸಾಧ್ಯವಾಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಅವೆಲ್ಲ ಏನೇ ಇದ್ದರೂ ಈ ಹೊಸ ಐಡಿಯಾ ಸಖತ್ತಾಗಿದೆ ಎನ್ನುವುದಾದರೆ ಲೈಟ್ರೋ ಕ್ಯಾಮೆರಾ ಕುರಿತ ಹೆಚ್ಚಿನ ವಿವರಗಳಿಗಾಗಿ ಲೈಟ್ರೋ ಜಾಲತಾಣಕ್ಕೆ ಭೇಟಿಕೊಡಬಹುದು; ಅದು ಭಾರತೀಯ ಮಾರುಕಟ್ಟೆಗೆ ಯಾವಾಗ ಬರುತ್ತದೋ ಎಂದು ಕಾದುನೋಡಲೂಬಹುದು!

ಅಂದಹಾಗೆ ಲೈಟ್ರೋ ಕ್ಯಾಮೆರಾ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ೨೦೧೨ರ ಪ್ರಾರಂಭದಲ್ಲಿ ಅಮೆರಿಕಾ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿರುವ ಈ ಕ್ಯಾಮೆರಾದ ಬೆಲೆ ನಾಲ್ಕುನೂರರಿಂದ ಐದುನೂರು ಡಾಲರ್ ಆಸುಪಾಸಿನಲ್ಲಿರಲಿದೆ.

ನವೆಂಬರ್ ೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge