ಮಂಗಳವಾರ, ನವೆಂಬರ್ 1, 2011

ಇಬ್ಬರು ದಿಗ್ಗಜರ ನೆನಪಿನಲ್ಲಿ...

ಕಳೆದೊಂದು ತಿಂಗಳಲ್ಲಿ ಗಣಕ ವಿಜ್ಞಾನ ಕ್ಷೇತ್ರ ಇಬ್ಬರು ದಿಗ್ಗಜರನ್ನು ಕಳೆದುಕೊಂಡಿದೆ. ಈ ಬರೆಹ ಅವರಿಬ್ಬರ ನೆನಪಿಗೆ ಸಮರ್ಪಿತ.
ಸಿ ಸೃಷ್ಟಿಕರ್ತ ಇನ್ನಿಲ್ಲ
ಡಾ. ಡೆನ್ನಿಸ್ ರಿಚಿ - ವಿಶ್ವದೆಲ್ಲೆಡೆಯ ಗಣಕ ವಿಜ್ಞಾನ ವಿದ್ಯಾರ್ಥಿಗಳಿಗೆಲ್ಲ ಇದು ಚಿರಪರಿಚಿತ ಹೆಸರು. ಬಹುತೇಕ ವಿದ್ಯಾರ್ಥಿಗಳೆಲ್ಲ ಮೊದಲಿಗೆ ಕಲಿಯುವ 'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದದ್ದು. ಸಿ ಬಗ್ಗೆ ಅವರು ಬರೆದ ಪುಸ್ತಕವಂತೂ ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಕಾಣಸಿಗುತ್ತದೆ! ಅಷ್ಟೇ ಅಲ್ಲ, ಅತ್ಯಂತ ಜನಪ್ರಿಯ ಕಾರ್ಯಾಚರಣ ವ್ಯವಸ್ಥೆ 'ಯುನಿಕ್ಸ್' ಸೃಷ್ಟಿಸಿದ ತಂಡದಲ್ಲೂ ಡೆನ್ನಿಸ್ ಮಹತ್ವದ ಪಾತ್ರ ವಹಿಸಿದ್ದರು.

ತಮ್ಮ ಜೀವಮಾನದುದ್ದಕ್ಕೂ ಪ್ರಚಾರದಿಂದ ದೂರವೇ ಉಳಿದಿದ್ದ ಅವರ ನಿಧನದ ಸುದ್ದಿ ಹೊರಜಗತ್ತಿಗೆ ಗೊತ್ತಾದದ್ದೂ ತಡವಾಗಿಯೇ ಎನ್ನುವುದು ವಿಪರ್ಯಾಸ. ಅಕ್ಟೋಬರ್ ೧೩ರಂದು ಅವರ ಮಾಜಿ ಸಹೋದ್ಯೋಗಿಯೊಬ್ಬರು ಗೂಗಲ್ ಪ್ಲಸ್‌ನಲ್ಲಿ ಸೇರಿಸಿದ ಸಂದೇಶದಿಂದಾಗಿ ಈ ಸುದ್ದಿ ಹರಡುವಷ್ಟರಲ್ಲಿ ಡೆನ್ನಿಸ್ ನಿಧನರಾಗಿ ದಿನಗಳೇ ಕಳೆದಿದ್ದವು.


ಸಿ ಹಾಗೂ ಯುನಿಕ್ಸ್ ಕುರಿತು ೧೯೬೦-೭೦ರ ದಶಕಗಳಲ್ಲಿ ಡೆನ್ನಿಸ್ ಮತ್ತವರ ಸಹೋದ್ಯೋಗಿಗಳು ಬೆಲ್ ಲ್ಯಾಬ್ಸ್‌ನಲ್ಲಿ ಮಾಡಿದ ಕೆಲಸವೇ ಇಂದಿನ ಹಲವಾರು ಕ್ರಾಂತಿಕಾರಕ ತಂತ್ರಜ್ಞಾನಗಳಿಗೆ ಆಧಾರ ಎಂದರೆ ಡೆನ್ನಿಸ್ ಸಾಧನೆಯ ಮಹತ್ವದ ಅರಿವಾಗುತ್ತದೆ. ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಿರುವ ಸೇವೆಗಳಾಗಲಿ, ಅತ್ಯಾಧುನಿಕ ಸ್ಮಾರ್ಟ್‌ಫೋನ್ ಆಗಲಿ, ಗಣಕ ಕ್ಷೇತ್ರವನ್ನು ಗಣನೀಯವಾಗಿ ಬದಲಿಸಿರುವ ಫ್ರೀ ಸಾಫ್ಟ್‌ವೇರ್ ಚಳವಳಿಯೇ ಆಗಲಿ - ಪ್ರತಿಯೊಂದರ ಹಿನ್ನೆಲೆಯಲ್ಲೂ ಡೆನ್ನಿಸ್ ಮತ್ತವರ ತಂಡದ ಕೊಡುಗೆ ಕಾಣಸಿಗುತ್ತದೆ. ಸಿ++, ಜಾವಾ ಮುಂತಾದ ಪ್ರೋಗ್ರಾಮಿಂಗ್ ಭಾಷೆಗಳಿಗೆ, ವಿಶ್ವದೆಲ್ಲೆಡೆ ಅಸಂಖ್ಯ ಗಣಕಗಳಿಗೆ ಜೀವತುಂಬಿರುವ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಗೆ, ಕಡೆಗೆ ಆಪಲ್ ಉತ್ಪನ್ನಗಳಲ್ಲಿ ಬಳಕೆಯಾಗುವ ಐಓಎಸ್‌ಗೂ ಡೆನ್ನಿಸ್ ಸೃಷ್ಟಿಗಳೇ ಜೀವಾಳ!

೧೯೯೯ರಲ್ಲಿ ಅಮೆರಿಕಾದ 'ನ್ಯಾಷನಲ್ ಮೆಡಲ್ ಆಫ್ ಟೆಕ್ನಾಲಜಿ'ಯೊಡನೆ ಸನ್ಮಾನಿತರಾಗಿದ್ದ ಡೆನ್ನಿಸ್ ರಿಚಿಯವರ ಕೊಡುಗೆಗಳು ನಮ್ಮೆಲ್ಲರ ಬದುಕಿನ ಮೇಲೆ ಗಾಢ ಪರಿಣಾಮ ಬೀರಿವೆ. "ಇಂದಿನ ಗಣಕ ಪ್ರಪಂಚದಲ್ಲಿ ಬಹುತೇಕ ಎಲ್ಲವೂ ಡೆನ್ನಿಸ್‌ರ ಸೃಷ್ಟಿಗಳನ್ನು ಆಧಾರಿಸಿಯೇ ಕೆಲಸಮಾಡುತ್ತಿವೆ" ಎಂದ ಅವರ ಸಹೋದ್ಯೋಗಿಯೊಬ್ಬರ ಮಾತಿನಲ್ಲಿ, ನಿಜಕ್ಕೂ, ಉತ್ಪ್ರೇಕ್ಷೆ ಇಲ್ಲವೆಂದೇ ಹೇಳಬಹುದು!

ಮರೆಯಾದ ಎಐ ತಜ್ಞ
ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಶಕ್ತಿ - ಮಾನವರಂತೆಯೇ ಬುದ್ಧಿಶಾಲಿಗಳಾಗಿರುವ ಯಂತ್ರಗಳನ್ನು ರೂಪಿಸಹೊರಟಿರುವ ವಿಜ್ಞಾನದ ಶಾಖೆ ಇದು. ಈ ಕ್ಷೇತ್ರದ ಮೊದಲ ಸಾಧಕರ ಸಾಲಿನಲ್ಲಿ ಅಗ್ರಗಣ್ಯರಾಗಿದ್ದ ಪ್ರೊ. ಜಾನ್ ಮೆಕ್‌ಕಾರ್ಥಿಯವರು ಇತ್ತೀಚೆಗೆ ನಿಧನರಾದರು. ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ (ಎಐ) ಎಂಬ ಹೆಸರನ್ನು ರೂಪಿಸಿದ್ದು ಅವರದೇ ಸಾಧನೆ.

ಕಲಿಕೆ, ಅಥವಾ ಬುದ್ಧಿಶಕ್ತಿಯ ಇನ್ನಾವುದೇ ಲಕ್ಷಣವನ್ನು ಅದೆಷ್ಟು ನಿಖರವಾಗಿ ವಿವರಿಸಬಹುದೆಂದರೆ ಅದನ್ನು ಯಂತ್ರಗಳೂ ಅನುಕರಿಸುವಂತೆ ಮಾಡುವುದು ಸಾಧ್ಯ ಎಂದು ೧೯೫೦ರ ದಶಕದಲ್ಲೇ ಅವರು ಹೇಳಿದ್ದರು. ವಿಜ್ಞಾನದ ಈ ಶಾಖೆಗೆ ಎಐ ಎಂಬ ನಾಮಕರಣವಾದದ್ದೂ ಅದೇ ಆಸುಪಾಸಿನಲ್ಲಿ.

ನಂತರದ ವರ್ಷಗಳಲ್ಲಿ ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸಮಾಡುತ್ತಿದ್ದಾಗ ಪ್ರೊ. ಜಾನ್ ಮೆಕ್‌ಕಾರ್ಥಿಯವರು 'ಲಿಸ್ಪ್' ಎಂಬ ಪ್ರೋಗ್ರಾಮಿಂಗ್ ಭಾಷೆಯನ್ನುರೂಪಿಸಿದರು. ಅತ್ಯಂತ ಹಳೆಯ ಉನ್ನತ ಸ್ತರದ ಪ್ರೋಗ್ರಾಮಿಂಗ್ ಭಾಷೆಗಳ ಪಟ್ಟಿಯಲ್ಲಿ ಲಿಸ್ಪ್‌ನದು ಎರಡನೆಯ ಸ್ಥಾನ (ಮೊದಲ ಸ್ಥಾನದಲ್ಲಿರುವುದು ಫೋರ್ಟ್ರಾನ್). ಲಿಸ್ಪ್ ಎನ್ನುವುದು ಲಿಸ್ಟ್ ಪ್ರಾಸೆಸಿಂಗ್ ಎಂಬ ಹೆಸರಿನ ಹ್ರಸ್ವರೂಪ.

ಎಐ ಕ್ಷೇತ್ರದ ಕ್ರಮವಿಧಿಗಳನ್ನು ರಚಿಸಲು ಅತ್ಯಂತ ಸೂಕ್ತವಾಗಿದ್ದ ಲಿಸ್ಪ್ ಬಹಳ ಬೇಗ ಜನಪ್ರಿಯವಾಯಿತು. ಸುಮಾರು ಹತ್ತು ವರ್ಷಗಳ ನಂತರ ಪ್ರೋಲಾಗ್ ಎಂಬ ಇನ್ನೊಂದು ಪ್ರೋಗ್ರಾಮಿಂಗ್ ಭಾಷೆ ಬಳಕೆಗೆ ಬಂದಾಗ ಲಿಸ್ಪ್ ಬಳಕೆ ಕೊಂಚ ಕಡಿಮೆಯಾಯಿತಾದರೂ ಅದರ ಬಳಕೆ ಇಂದಿಗೂ ಮುಂದುವರೆದಿದೆ.

೧೯೭೧ರಲ್ಲಿ ಟ್ಯೂರಿಂಗ್ ಪ್ರಶಸ್ತಿ ಹಾಗೂ ೧೯೯೧ರಲ್ಲಿ ನ್ಯಾಷನಲ್ ಮೆಡಲ್ ಆಫ್ ಸೈನ್ಸ್ ಸನ್ಮಾನ ಪಡೆದಿದ್ದ ಪ್ರೊ. ಮೆಕ್‌ಕಾರ್ಥಿ ೨೦೦೦ನೇ ಇಸವಿಯಲ್ಲಿ ನಿವೃತ್ತರಾಗಿದ್ದರು. ಅವರು ವೈಜ್ಞಾನಿಕ ಕತೆಗಳನ್ನೂ ಬರೆಯುತ್ತಿದ್ದದ್ದು ವಿಶೇಷ.

ನವೆಂಬರ್ ೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge