ಮಂಗಳವಾರ, ಮಾರ್ಚ್ 29, 2011

ಟ್ವೀಟರ್ ಚಿಲಿಪಿಲಿಗೆ ಹ್ಯಾಪಿ ಬರ್ತ್‌ಡೇ

ಟಿ ಜಿ ಶ್ರೀನಿಧಿ

ಭಾರತ - ಆಸ್ಟ್ರೇಲಿಯಾ ಮ್ಯಾಚು ನೋಡ್ತಾ ಇದೀನಿ

ನಾನೂ ಅಷ್ಟೆ, ಸಖತ್ತಾಗಿದೆ ಮ್ಯಾಚು!

ಛೆ, ನಾನು ಮಿಸ್ ಮಾಡ್ಕೊತಿದೀನಿ, ಆಫೀಸಲ್ಲಿ ತುಂಬಾ ಕೆಲ್ಸ


ನಮ್ ಮನೇಲಿ ಕರೆಂಟು ಹೋಯ್ತು!!!

ವಾಟ್ ಅ ಸಿಕ್ಸ್!

ಥೂ, ಇನ್ನೊಂದು ವಿಕೆಟ್ ಬಿತ್ತು :-(

ಟೌನ್ ಹಾಲ್ ಹತ್ರ ಸಿಕ್ಕಾಪಟ್ಟೆ ಟ್ರಾಫಿಕ್ಕು, ಕೊನೆ ಓವರ್ ಮಿಸ್ಸಾಗತ್ತೇನೋ

ಸೂಪರ್! ನಾವೇ ಗೆದ್ವಿ!! :-)


ನಾಲ್ಕಾರು ಗೆಳೆಯರ ನಡುವಿನ ಈ ಹರಟೆ ನಡೆದದ್ದು ದೂರವಾಣಿ ಮೂಲಕವಲ್ಲ, ಎಸ್ಸೆಮ್ಮೆಸ್ ಮೂಲಕವೂ ಅಲ್ಲ; ಅವರ ಹರಟೆಗೆ ಕಟ್ಟೆಯಾಗಿದ್ದದ್ದು ಟ್ವೀಟರ್.

ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗಿನ ನಮ್ಮ ಚಟುವಟಿಕೆಗಳನ್ನು, ಅನುಭವಗಳನ್ನು ಅಂತರಜಾಲದ ಮಿತ್ರರೊಡನೆ ಹಂಚಿಕೊಳ್ಳಲು ಸುಲಭ ಮಾರ್ಗ ಒದಗಿಸಿದ ಈ ತಾಣಕ್ಕೆ ಈಗ ಐದು ವರ್ಷ.


ಬ್ಲಾಗಲ್ಲ, ಇದು ಮೈಕ್ರೋಬ್ಲಾಗು
ನಮ್ಮ ದಿನಚರಿಯನ್ನು ಅಂತರಜಾಲದಲ್ಲಿ ದಾಖಲಿಸಲು ಅನುವುಮಾಡಿಕೊಟ್ಟದ್ದು ಬ್ಲಾಗುಗಳು. ಓದಿದ ಪುಸ್ತಕ, ಇಷ್ಟವಾದ ತಿಂಡಿ, ಇಷ್ಟವಾಗದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸಗಳು, ಬರವಣಿಗೆ, ಅಭಿಪ್ರಾಯಗಳು - ಹೀಗೆ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಇಡೀ ಜಗತ್ತಿನೊಡನೆ ಬ್ಲಾಗುಗಳ ಮೂಲಕ ಹಂಚಿಕೊಳ್ಳುವುದು ಸಾಧ್ಯ.

ಆದರೆ ಬ್ಲಾಗಿನ ಬರೆಹಗಳು ಸಾಮಾನ್ಯವಾಗಿ ದೊಡ್ಡದಾಗಿರುತ್ತವೆ. ಅಲ್ಲಿ ಸಾವಿರಾರು ಪದಗಳ ಲೇಖನಗಳನ್ನೂ ಬರೆಯುವುದು ಸಾಧ್ಯ. ಅಷ್ಟೊಂದೆಲ್ಲ ಓದಲು ಸಮಯವಿಲ್ಲದವರಿಗಾಗಿ ಹುಟ್ಟಿಕೊಂಡದ್ದೇ ಮೈಕ್ರೋಬ್ಲಾಗಿಂಗ್ ಪರಿಕಲ್ಪನೆ.

ಇದನ್ನು ಬ್ಲಾಗುಲೋಕದ ಎಸ್ಸೆಮ್ಮೆಸ್ ಎಂದೇ ಕರೆಯಬಹುದು. ಇಲ್ಲಿ ಪ್ರಕಟವಾಗುವ ಬರಹಗಳು ಎಸ್ಸೆಮ್ಮೆಸ್ಸಿನಂತೆಯೇ ೧೪೦ ಅಕ್ಷರಗಳ ಮಿತಿಯನ್ನು ಹೊಂದಿರುತ್ತವೆ.

ಮೈಕ್ರೋಬ್ಲಾಗ್ ತಾಣಗಳಿಗೆ ಮಾಹಿತಿ ಸೇರಿಸಲು ಮೊಬೈಲ್ ಅಥವಾ ಇಮೇಲ್ ಕೂಡ ಬಳಸಬಹುದು; ಅಲ್ಲಿನ ಹೊಸ ಮಾಹಿತಿಯನ್ನೂ ಮೊಬೈಲ್‌ನಲ್ಲೇ ಪಡೆದುಕೊಳ್ಳಬಹುದು. ಹೀಗಾಗಿಯೇ ಮೈಕ್ರೋಬ್ಲಾಗ್ ತಾಣಗಳ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ. ನಾನೇನು ಮಾಡುತ್ತಿದ್ದೇನೆ ಅಥವಾ ಮಾಡುತ್ತಿಲ್ಲ ಎನ್ನುವುದನ್ನು ಲೋಕಕ್ಕೆಲ್ಲ ಹೇಳುವ ವೇದಿಕೆಯಾಗಿ, ಬ್ರೇಕಿಂಗ್ ನ್ಯೂಸ್ ಪಡೆಯುವ ಹೊಸ ಹಾದಿಯಾಗಿ, ಸ್ನೇಹಿತರೊಡನೆ ಹರಟೆಹೊಡೆಯುವ ಸೋಮಾರಿಕಟ್ಟೆಯಾಗಿ, ಚುನಾವಣಾ ಪ್ರಚಾರದ ಹೊಸ ರೀತಿಯಾಗಿ, ಕಡಿಮೆ ಖರ್ಚಿನ ಜಾಹೀರಾತು ಮಾಧ್ಯಮವಾಗಿ - ಒಟ್ಟಾರೆಯಾಗಿ ಮೈಕ್ರೋಬ್ಲಾಗಿಂಗ್ ಪರಿಕಲ್ಪನೆ ಎಲ್ಲೆಲ್ಲೂ ಜನಪ್ರಿಯವಾಗಿಬಿಟ್ಟಿದೆ.

ಟ್ವೀಟರ್ ಚಿಲಿಪಿಲಿ
ಟ್ವೀಟರ್ ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದದ್ದು. 'ಟ್ವೀಟ್'ಗಳೆಂಬ ಹೆಸರಿನ ಪುಟ್ಟ ಸಂದೇಶಗಳ ರೂಪದಲ್ಲಿ ಸಂವಹನಕ್ಕೆ ಅನುವುಮಾಡಿಕೊಡುವ ಈ ವಿಶಿಷ್ಟ ತಾಣವನ್ನು ಜಾಕ್ ಡಾರ್ಸಿ, ಇವಾನ್ ವಿಲಿಯಮ್ಸ್ ಹಾಗೂ ಬಿಜ್ ಸ್ಟೋನ್ ಎಂಬ ಮಿತ್ರರು ೨೦೦೬ರ ಮಾರ್ಚ್‌ನಲ್ಲಿ ಹುಟ್ಟುಹಾಕಿದರು. ಹರಟೆ ಹಾಗೂ ಹಕ್ಕಿಗಳ ಚಿಲಿಪಿಲಿ ಎಂಬ ಎರಡೂ ಅರ್ಥ ಕೊಡುವುದರಿಂದ ಅವರು ಟ್ವೀಟರ್ ಎಂಬ ಹೆಸರನ್ನು ಮೆಚ್ಚಿಕೊಂಡರಂತೆ.

ಯಾವಾಗ ಎಲ್ಲಿಂದ ಬೇಕಾದರೂ ಸಂದೇಶಗಳನ್ನು ಕಳಿಸಿಕೊಂಡು ಗೆಳೆಯರ ಬಳಗದೊಡನೆ ಸಂಪರ್ಕದಲ್ಲಿರುವುದನ್ನು ಸಾಧ್ಯವಾಗಿಸಿರುವ ಟ್ವೀಟರ್ ತಾಣದಲ್ಲಿ ಲಕ್ಷಾಂತರ ಮಂದಿ ಸದಸ್ಯರಿದ್ದಾರೆ. ಒಬ್ಬರನ್ನೊಬ್ಬರು 'ಫಾಲೋ' ಮಾಡುವ ಮೂಲಕ ಈ ತಾಣದ ಸದಸ್ಯರು ಸಂಪರ್ಕ ಸಾಧಿಸಿಕೊಳ್ಳುತ್ತಾರೆ.

ಸುಮ್ಮನೆ ಕೂತದ್ದು ನಿಂತದ್ದನ್ನೆಲ್ಲ ಟ್ವೀಟ್ ಮಾಡುವವರಿಂದ ಹಿಡಿದು ಸಮಾಜದಲ್ಲಿ ಬದಲಾವಣೆ ತರಲು ಹೊರಟಿರುವವರ ತನಕ ಕೋಟ್ಯಂತರ ಜನ ಟ್ವೀಟರ್ ಬಳಸುತ್ತಿದ್ದಾರೆ; ಪ್ರತಿ ದಿನ ಹದಿನಾಲ್ಕು ಕೋಟಿಗೂ ಮೀರಿದ ಸಂಖ್ಯೆಯಲ್ಲಿ ಟ್ವೀಟ್‌ಗಳು ಸೃಷ್ಟಿಯಾಗುತ್ತಿವೆ.

ಅಮೆರಿಕಾ-ಇರಾನ್ ಚುನಾವಣೆಗಳ ಸಂದರ್ಭದಲ್ಲಿ, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದ ಇತ್ತೀಚಿನ ಪ್ರತಿಭಟನೆಗಳಲ್ಲಿ ಟ್ವೀಟರ್ ವ್ಯಾಪಕವಾಗಿ ಬಳಕೆಯಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ.

ಹಲವಾರು ಸುದ್ದಿಗಳು ಬೇರೆಲ್ಲ ಮಾಧ್ಯಮಗಳಿಗಿಂತ ಮೊದಲು ಟ್ವೀಟರಿನಲ್ಲಿ ಪ್ರಕಟವಾದದ್ದೂ ಉಂಟು. ನಮ್ಮನಿಮ್ಮಂಥವರ ಜೊತೆಗೆ ಅನೇಕ ಪತ್ರಿಕೆಗಳು, ಟೀವಿ ವಾಹಿನಿಗಳು, ಸಂಘಸಂಸ್ಥೆಗಳು ಕೂಡ ಟ್ವೀಟರ್ ಬಳಸುತ್ತಿವೆ.

ಸುದ್ದಿಗಳ ಕ್ಷಿಪ್ರ ಪ್ರಸಾರ ಹಾಗೂ ನೈಜ-ನಿಷ್ಪಕ್ಷಪಾತ ನಿರೂಪಣೆಗೆ ನೆರವಾಗುತ್ತಿರುವ ಟ್ವೀಟರ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡಬೇಕು ಎಂಬ ಅಭಿಪ್ರಾಯವೂ ಈ ಹಿಂದೆ ಕೇಳಿಬಂದಿತ್ತು. ಟ್ವೀಟರ್ ಅಮೆರಿಕಾ ಸರಕಾರದ ಕೈಗೊಂಬೆ ಎಂಬ ಆರೋಪ ಕೂಡ ಇದೆ.

ಒಂದು ಅಂದಾಜಿನ ಪ್ರಕಾರ ಟ್ವೀಟರ್‌ನ ಮಾರುಕಟ್ಟೆ ಮೌಲ್ಯ ಮೂರೂವರೆ ಬಿಲಿಯನ್ ಡಾಲರುಗಳಿಗಿಂತ ಹೆಚ್ಚು. ಆದರೆ ವೆಂಚರ್ ಕ್ಯಾಪಿಟಲ್ ಹೂಡಿಕೆಗಳನ್ನೇ ನೆಚ್ಚಿಕೊಂಡಿದ್ದ ಈ ತಾಣಕ್ಕೆ ಈಚೀಚಿನವರೆಗೂ ಸ್ವಂತ ಆದಾಯವೇ ಇರಲಿಲ್ಲ. ಜಾಹೀರಾತು ಮಾರುಕಟ್ಟೆಗೆ ಈಚೆಗಷ್ಟೆ ಪ್ರವೇಶಿಸಿರುವ ಟ್ವೀಟರ್‌ನ ಆದಾಯ ಈ ವರ್ಷ ನೂರು ಮಿಲಿಯನ್ ಡಾಲರ್ ದಾಟುವ ನಿರೀಕ್ಷೆ ಇದೆ. 

ಎಲ್ಲೆಲ್ಲೂ ಮೈಕ್ರೋಬ್ಲಾಗ್
ಮೈಕ್ರೋಬ್ಲಾಗಿಂಗ್ ಎಂದಾಕ್ಷಣ ಟ್ವೀಟರ್ ನೆನಪಿಗೆ ಬರುವಷ್ಟು ಅದರ ಜನಪ್ರಿಯತೆ ಬೆಳೆದಿದೆ, ನಿಜ. ಆದರೆ ಮೈಕ್ರೋಬ್ಲಾಗಿಂಗ್ ಸೇವೆ ಒದಗಿಸುತ್ತಿರುವ ತಾಣ ಟ್ವೀಟರ್ ಒಂದೇ ಅಲ್ಲ. ಇಂತಹುದೇ ಸೌಲಭ್ಯ ನೀಡುವ ಜೈಕು, ಪ್ಲರ್ಕ್, ಟಂಬ್ಲ್‌ರ್ ಮೊದಲಾದ ತಾಣಗಳು ಕೂಡ ತಕ್ಕಮಟ್ಟಿಗೆ ಹೆಸರುಮಾಡಿವೆ. ಗೂಗಲ್ ಬಜ್ ಸೇವೆ ಕೂಡ ಇಂತಹುದೇ. ಫೇಸ್‌ಬುಕ್, ಮೈಸ್ಪೇಸ್, ಲಿಂಕ್ಡ್‌ಇನ್ ಮುಂತಾದ ತಾಣಗಳು ಕೂಡ ತಮ್ಮ ಸದಸ್ಯರಿಗೆ 'ಸ್ಟೇಟಸ್ ಅಪ್‌ಡೇಟ್ಸ್' ಹೆಸರಿನಲ್ಲಿ ಸಣ್ಣಪ್ರಮಾಣದ ಮೈಕ್ರೋಬ್ಲಾಗಿಂಗ್ ಸೌಲಭ್ಯ ನೀಡುತ್ತಿವೆ.

ಸಾಮಾನ್ಯವಾಗಿ ಕೆಲವು ನೂರು ಪದಗಳಷ್ಟೆ ಇರುವ ಬ್ಲಾಗ್ ಬರಹಗಳು ತೀರಾ ಉದ್ದ, ಬೋರಿಂಗು ಎಂದ ಜನ ನೂರಾ ನಲವತ್ತು ಅಕ್ಷರಗಳನ್ನು ಓದುವುದೂ ಕಷ್ಟ ಅಂದುಬಿಟ್ಟರೆ? ಆ ಪ್ರಶ್ನೆಗೂ ಉತ್ತರ ಹುಡುಕಿರುವ ಅಡೊಕು ಎಂಬ ತಾಣ ನ್ಯಾನೋಬ್ಲಾಗಿಂಗ್ ಎಂಬ ಹೊಸ ವಿಷಯವನ್ನು ಪರಿಚಯಿಸಿದೆ. ಟ್ವೀಟರ್‌ನಲ್ಲಿ ಒಂದು ಎಸ್ಸೆಮ್ಮೆಸ್‌ನಷ್ಟು ಉದ್ದದ ಮಾಹಿತಿ ಹಾಕುವಂತೆ ಇಲ್ಲಿ ಕೇವಲ ಒಂದು ಪದವನ್ನಷ್ಟೆ ಬರೆಯಬಹುದು.

ಮುಂದೆ ಆ ಒಂದು ಪದವನ್ನೂ ಓದುವುದು ಬೇಜಾರು ಅಂದರೆ ನೋ-ನೋ ಬ್ಲಾಗಿಂಗ್ ಎನ್ನಬಹುದೇನೋ!

ಮಾರ್ಚ್ ೨೯. ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

ಗಿರೀಶ್.ಎಸ್ ಹೇಳಿದರು...

ತುಂಬ ತಮಾಷೆಯಾಗಿದೆ ಮೊದಲ ಸಾಲುಗಳು

badge