ಮಂಗಳವಾರ, ಮಾರ್ಚ್ 15, 2011

ಕುಕಿ ಕರಾಮತ್ತು

ಟಿ ಜಿ ಶ್ರೀನಿಧಿ

ಗಣಕಲೋಕದಲ್ಲಿ ವಿಚಿತ್ರವಾದುದೊಂದು ಅಭ್ಯಾಸ ಇದೆ. ನಿತ್ಯದ ಬಳಕೆಯಲ್ಲಿರುವ ಪರಿಚಿತ ಹೆಸರುಗಳನ್ನು ಅನೇಕ ಸಂದರ್ಭಗಳಲ್ಲಿ ಗಣಕವಿಜ್ಞಾನಿಗಳು ತಮ್ಮ ಕೆಲಸದಲ್ಲೂ ಬಳಸಿಕೊಂಡುಬಿಡುತ್ತಾರೆ. ಮೌಸ್, ವೈರಸ್, ಶೆಲ್, ಥ್ರೆಡ್, ಬಗ್ - ಹೀಗೆ ಅದೆಷ್ಟೋ ಪರಿಚಿತ ಹೆಸರುಗಳು ನಮಗೆ ಗೊತ್ತಿರುವ ಅರ್ಥಕ್ಕೆ ಕೊಂಚವೂ ಸಂಬಂಧವಿಲ್ಲದ ರೀತಿಯಲ್ಲಿ ಗಣಕಲೋಕದಲ್ಲಿ ಬಳಕೆಯಾಗುತ್ತಿವೆ.


ಹೀಗೆ ಮಾಡುವುದರಿಂದ ವಿಜ್ಞಾನಿಗಳು ತಮ್ಮ ಸೃಷ್ಟಿಗೆ ಹೆಸರಿಡಲು ಜಾಸ್ತಿ ತಲೆಕೆಡಿಸಿಕೊಳ್ಳಬೇಕಿಲ್ಲ ಎಂಬುದೇನೋ ನಿಜ; ಆದರೆ ಗಣಕವಿಜ್ಞಾನದ ದೃಷ್ಟಿಯಿಂದ ಆ ಹೆಸರಿನ ಮಹತ್ವ ಗೊತ್ತಿಲ್ಲದವರಲ್ಲಿ ಇದು ಇನ್ನಿಲ್ಲದ ಗೊಂದಲ ಮೂಡಿಸುತ್ತದೆ.

ಕುಕಿ ಅನ್ನುವುದು ಇಂತಹುದೇ ಒಂದು ಹೆಸರು.
ನಿಘಂಟಿನಲ್ಲಿ ನೋಡಿದರೆ ಕುಕಿಗೆ ಬಿಸ್ಕತ್ತು ಅನ್ನುವ ಅರ್ಥ ಇರುತ್ತದೆ. ಇನ್ನು ಅಂಗಡಿಗೆ ಹೋದರಂತೂ ಬಟರ್ ಕುಕಿ, ಚಾಕೊಲೇಟ್ ಕುಕಿ, ಕೋಕನಟ್ ಕುಕಿ - ಹೀಗೆ ಅನೇಕ ಬಗೆಯ ರುಚಿರುಚಿಯಾದ ಬಿಸ್ಕತ್ತುಗಳು ಬಾಯಲ್ಲಿ ನೀರೂರಿಸುತ್ತವೆ.

ಆದರೆ ಬಟರ್ ಕುಕಿಯಲ್ಲಿ ಬೆಣ್ಣೆ ಇದ್ದಹಾಗೆ ಕಂಪ್ಯೂಟರ್ ಕುಕಿಯಲ್ಲಿ ಗಣಕವೇನೂ ಇರುವುದಿಲ್ಲ!

ಜಾಲತಾಣಗಳು ತಮ್ಮ ಬಳಕೆದಾರರ ಗಣಕದಲ್ಲಿ ಉಳಿಸುವ ಪುಟ್ಟದೊಂದು ಕಡತಕ್ಕೆ ಕುಕಿ ಎಂದು ಹೆಸರು. ಬಳಕೆದಾರರ ಅಯ್ಕೆಗಳನ್ನು ಉಳಿಸಿಟ್ಟುಕೊಳ್ಳಲು ಜಾಲತಾಣಗಳು ಇಂತಹ ಕುಕಿಗಳನ್ನು ಬಳಸುತ್ತವೆ.

ನಾಲ್ಕಾರು ಭಾಷೆಗಳಲ್ಲಿ ಲಭ್ಯವಿರುವ ಜಾಲತಾಣದಲ್ಲಿ ನೀವು ಕನ್ನಡ ಭಾಷೆ ಆಯ್ದುಕೊಂಡಿದ್ದಿರಿ ಎನ್ನುವುದಾದರೆ ಅದು ನಿಮ್ಮದೇ ಗಣಕದಲ್ಲಿ ಒಂದು ಕಡೆ ಕುಕಿಯ ರೂಪದಲ್ಲಿ ದಾಖಲಾಗಿರುತ್ತದೆ. ನಿಮ್ಮ ಮುಂದಿನ ಭೇಟಿಯ ಸಂದರ್ಭದಲ್ಲಿ ಆ ಕುಕಿಯನ್ನು ಪರಿಶೀಲಿಸುವ ಆ ತಾಣ ಭಾಷೆಯನ್ನು ಆಯ್ದುಕೊಳ್ಳಿ ಎಂದು ಕೇಳುವ ಬದಲು ನೇರವಾಗಿ ಕನ್ನಡದಲ್ಲಿಯೇ ತೆರೆದುಕೊಳ್ಳುತ್ತದೆ.

ಇ-ವ್ಯಾಪಾರ ತಾಣಗಳು ಕೂಡ ವ್ಯಾಪಕವಾಗಿ ಕುಕಿಗಳನ್ನು ಬಳಸುತ್ತವೆ. ಶಾಪಿಂಗ್ ಮಾಡುತ್ತಿರುವ ಬಳಕೆದಾರ ಯಾವಯಾವ ವಸ್ತುಗಳನ್ನು ನೋಡಿದ್ದ ಎಂಬುದನ್ನು ದಾಖಲಿಸಿಕೊಳ್ಳುವುದು, ಆತ ಕೊಳ್ಳಬಯಸಿದ ವಸ್ತುಗಳನ್ನು ತನ್ನ ಖಾತೆಗೆ ಲಾಗಿನ್ ಆಗಿಲ್ಲದಿದ್ದರೂ ಕೂಡ ನೆನಪಿಟ್ಟುಕೊಳ್ಳುವುದು - ಹೀಗೆ ಕುಕಿಗಳು ಸಾಕಷ್ಟು ಕಡೆ ಬಳಕೆಯಾಗುತ್ತವೆ.

ವಿಶ್ವವ್ಯಾಪಿ ಜಾಲದಲ್ಲಿ ಕಾಣಿಸಿಕೊಳ್ಳುವ ಅನೇಕ ಜಾಹೀರಾತುಗಳಿಗೂ ಈ ಕುಕಿಗಳೇ ಆಧಾರ. ಬಳಕೆದಾರರ ಗಣಕದಲ್ಲಿ ಶೇಖರವಾಗಿರುವ ಕುಕಿಗಳ ಆಧಾರದ ಮೇಲೆ ಆತ ಯಾವೆಲ್ಲ ತಾಣಗಳಿಗೆ ಭೇಟಿಕೊಟ್ಟಿದ್ದ ಎನ್ನುವುದನ್ನು ಅರಿತುಕೊಳ್ಳುವ ಆಸಕ್ತಿ ಆಧರಿತ ಜಾಹೀರಾತು ವ್ಯವಸ್ಥೆಗಳು ಆ ವಿಷಯಕ್ಕೆ ಸಂಬಂಧಪಟ್ಟ ಜಾಹೀರಾತುಗಳನ್ನಷ್ಟೆ ತೋರಿಸುತ್ತವೆ. ಉದಾಹರಣೆಗೆ, ನೀವು ನವದೆಹಲಿ ಪ್ರವಾಸದ ಬಗೆಗಿನ ತಾಣಗಳನ್ನು ವೀಕ್ಷಿಸಿದ್ದೀರಿ ಎನ್ನುವ ವಿಷಯ ನಿಮ್ಮ ಗಣಕದಲ್ಲಿನ ಕುಕಿಗಳಿಂದ ಗೊತ್ತಾದರೆ ನೀವು ಆನಂತರ ಭೇಟಿನೀಡುವ ತಾಣಗಳಲ್ಲಿ ನವದೆಹಲಿಯ ಹೋಟಲ್ಲಿನದೋ ಮಲ್ಟಿಪ್ಲೆಕ್ಸಿನದೋ ಜಾಹೀರಾತು ಪ್ರದರ್ಶಿಸುವುದು ಈ ಜಾಹೀರಾತು ವ್ಯವಸ್ಥೆಯ ಕೆಲಸ.

ಗಣಕ ಬಳಕೆದಾರರು ಅಂತರಜಾಲದಲ್ಲಿ ಏನೇನು ಮಾಡುತ್ತಾರೆ ಎನ್ನುವುದರ ಬಗೆಗೆ ಇಷ್ಟೆಲ್ಲ ಮಾಹಿತಿ ಸಂಗ್ರಹಿಸುವ ಕುಕಿಗಳಿಂದ ಅವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ಬಹಳ ದಿನಗಳಿಂದ ಕೇಳಿಬರುತ್ತಿರುವ ದೂರು. ಹೀಗಾಗಿಯೇ ಕುಕಿಗಳ ಬಳಕೆ ಬೇಕೋ ಬೇಡವೋ ಎಂದು ನಿರ್ಧರಿಸುವ ಸ್ವಾತಂತ್ರ್ಯವನ್ನು ಹೆಚ್ಚೂಕಡಿಮೆ ಎಲ್ಲ ಬ್ರೌಸರ್‌ಗಳೂ ತಮ್ಮ ಬಳಕೆದಾರರಿಗೆ ನೀಡುತ್ತವೆ. ಈ ಸೌಲಭ್ಯವನ್ನು ಬಳಸಿಕೊಂಡು ನಿಮ್ಮ ನಂಬಿಕೆಗೆ ಅರ್ಹವಾದ ತಾಣಗಳಿಗೆ ಮಾತ್ರ ಕುಕಿ ಬಳಸಲು ಅನುಮತಿ ನೀಡಿ ಬೇರೆಲ್ಲ ತಾಣಗಳನ್ನೂ ಕುಕಿ ಬಳಸುವುದರಿಂದ ನಿರ್ಬಂಧಿಸುವುದು ಸಾಧ್ಯ.

ಕುಕಿಗಳ ಬಳಕೆ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಮಾಡಬಹುದು ಎಂಬ ಅಂಶವನ್ನು ಸರಕಾರಗಳೂ ಗಂಭೀರವಾಗಿ ಪರಿಗಣಿಸಿವೆ. ಈ ನಿಟ್ಟಿನಲ್ಲಿ ಯುರೋಪಿಯನ್ ಒಕ್ಕೂಟದ ದೇಶಗಳು ಒಂದು ಕಾನೂನನ್ನೂ ರೂಪಿಸಿವೆ. ಕುಕಿಗಳನ್ನು ಬಳಸುವ ತಾಣಗಳು ಆ ವಿಷಯವನ್ನು ತಮ್ಮ ಬಳಕೆದಾರರಿಗೆ ತಿಳಿಸಿ ಅವರಿಂದ ಸ್ಪಷ್ಟ ಅನುಮತಿ ಪಡೆಯಬೇಕಾದ್ದನ್ನು ಕಡ್ಡಾಯಗೊಳಿಸುವ ಈ ಕಾನೂನು ಪ್ರಸ್ತುತ ವರ್ಷದ ಮಧ್ಯಭಾಗದಿಂದ ಜಾರಿಗೆ ಬರುವ ನಿರೀಕ್ಷೆಯಿದೆ.

ಮಾರ್ಚ್ ೧೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge