ಬುಧವಾರ, ಮಾರ್ಚ್ 23, 2011

ಜಪಾನ್‌ಗಾಗಿ ಮಿಡಿದ ಜಾಲಲೋಕದ ಹೃದಯ

ಟಿ ಜಿ ಶ್ರೀನಿಧಿ

ಭೂಕಂಪ, ಸುನಾಮಿ, ವಿಕಿರಣ ಸೋರಿಕೆ, ಜ್ವಾಲಾಮುಖಿ ಸ್ಫೋಟ - ಒಂದರ ಹಿಂದೆ ಒಂದರಂತೆ ಬಂದೆರಗುತ್ತಿರುವ ಸಮಸ್ಯೆಗಳಿಂದ ಜಪಾನ್ ದೇಶ ತತ್ತರಿಸಿಹೋಗಿದೆ. ಈ ಸಮಸ್ಯೆಗಳ ಗಂಭೀರತೆ ಎಷ್ಟಿದೆಯೆಂದರೆ ವಿಶ್ವದ ಎಲ್ಲ ಮಾಧ್ಯಮಗಳೂ ಜಪಾನಿನ ಸುದ್ದಿಗಳನ್ನು ನಮಗೆ ನಿರಂತರವಾಗಿ ತಲುಪಿಸುತ್ತಿವೆ. ಸಾಲುಸಾಲು ದುರಂತಗಳ ಸಂತ್ರಸ್ತರಿಗಾಗಿ ಇಡೀ ಪ್ರಪಂಚವೇ ಮರುಗುತ್ತಿದೆ.

ಹೀಗಿರುವಾಗ ಅಂತರಜಾಲ ಲೋಕ ಸುಮ್ಮನಿರುವುದು ಸಾಧ್ಯವೆ?



ಖಂಡಿತಾ ಇಲ್ಲ. ಭೂಕಂಪದ ಸುದ್ದಿ ಹೊರಜಗತ್ತಿಗೆ ತಿಳಿದ ಕ್ಷಣದಿಂದ ಅಂತರಜಾಲ ಜಗತ್ತಿನ ಹೃದಯವೂ ಜಪಾನಿನ ಜನರಿಗಾಗಿ ಮಿಡಿಯುತ್ತಿದೆ; ಕಳೆದ ಕೆಲ ದಿನಗಳಲ್ಲಿ ಅಂತರಜಾಲದಲ್ಲಿ ನಡೆದಿರುವ ವಿದ್ಯಮಾನಗಳು ಜಾಲಲೋಕದ ಮಾನವೀಯ ಮುಖವನ್ನು ಅನಾವರಣಗೊಳಿಸಿವೆ. ದುರಂತಗಳು ಸಂಭವಿಸಿದಾಗ ಪರಿಹಾರ ಕಾರ್ಯದಲ್ಲಿ ಅಂತರಜಾಲ ಎಷ್ಟು ಪರಿಣಾಮಕಾರಿಯಾಗಿ ನೆರವಾಗಬಲ್ಲದು ಎಂಬ ವಿಷಯ ಇದರಿಂದ ಸ್ಪಷ್ಟವಾಗುತ್ತಿದೆ.


ಎಲ್ಲೆಲ್ಲೂ ಗೂಗಲ್
ವಿಶ್ವವ್ಯಾಪಿ ಜಾಲದಲ್ಲಿ ಯಾವುದೇ ಮಾಹಿತಿ ಹುಡುಕುವಾಗಲೂ ನಾವು ಗೂಗಲ್ ಮೊರೆಹೋಗುವುದು ಸಹಜ. ಜಪಾನಿನಲ್ಲಿ ಸಂಭವಿಸಿದ ಭೂಕಂಪ ಹಾಗೂ ನಂತರದ ದುರಂತಗಳ ಸಂದರ್ಭದಲ್ಲಿ ಆ ಪ್ರದೇಶಗಳಲ್ಲಿದ್ದವರನ್ನು ಹುಡುಕಲೂ ಗೂಗಲ್ ಸಹಾಯಮಾಡಿತು; ಆ ಸಂಸ್ಥೆ ರೂಪಿಸಿದ 'ಪರ್ಸನ್ ಫೈಂಡರ್' ವ್ಯವಸ್ಥೆಯ ಸಹಾಯದಿಂದ ಅಲ್ಲಿನ ಜನರ ಯೋಗಕ್ಷೇಮದ ಬಗೆಗೆ ತಿಳಿದುಕೊಳ್ಳುವುದು ಸಾಧ್ಯವಾಯಿತು.

ಈ ಹಿಂದೆ ಹೈಟಿಯಲ್ಲಿ ಭೂಕಂಪವಾದಾಗ ಮೊದಲ ಬಾರಿಗೆ ರೂಪಗೊಂಡ, ಹಾಗೂ ನ್ಯೂಜಿಲೆಂಡ್ ಭೂಕಂಪದ ಸಂದರ್ಭದಲ್ಲೂ ಬಳಕೆಯಾಗಿದ್ದ ಈ ವ್ಯವಸ್ಥೆ ಜಪಾನ್ ಭೂಕಂಪದ ಸುದ್ದಿ ಹೊರಬಂದ ಎರಡೇ ಗಂಟೆಗಳಲ್ಲಿ ಕಾರ್ಯನಿರತವಾಗಿತ್ತು.

ಸಾಲುಸಾಲು ದುರಂತಗಳಿಂದಾಗಿ ದೂರವಾಣಿ ವ್ಯವಸ್ಥೆಯೆಲ್ಲ ಅಸ್ತವ್ಯಸ್ತವಾಗಿದ್ದಾಗ ಅಲ್ಲಿನ ಜನರನ್ನು ಹೊರಗಿನವರು ಸಂಪರ್ಕಿಸುವುದು ಬಹಳ ಕಷ್ಟಕರವಾಗಿತ್ತು. ಭೂಕಂಪ-ಸುನಾಮಿಗಳನ್ನೂ ಸಹಿಸಿಕೊಂಡು ಉಳಿದಿದ್ದ ದೂರವಾಣಿ ಜಾಲದ ಅಲ್ಪಸ್ವಲ್ಪ ಭಾಗವೂ ಮಿತಿಮೀರಿದ ಕರೆಗಳ ದಟ್ಟಣೆಯಿಂದ ಪರದಾಡುತ್ತಿತ್ತು. ಇದ್ದುದ್ದರಲ್ಲಿ ಅಂತರಜಾಲ ಸಂಪರ್ಕವೇ ತಕ್ಕಮಟ್ಟಿಗೆ ಚೆನ್ನಾಗಿತ್ತು.

ಇಂತಹ ಸಂದರ್ಭದಲ್ಲಿ ಭೂಕಂಪಪೀಡಿತ ಪ್ರದೇಶದಲ್ಲಿದ್ದ ಯಾವುದೇ ವ್ಯಕ್ತಿ ಅಥವಾ ಆತ ಕ್ಷೇಮವಾಗಿದ್ದಾನೆ ಎಂದು ಬಲ್ಲ ಬೇರೆ ಯಾರಾದರೂ ಈ ತಾಣಕ್ಕೆ ಬಂದು ಕ್ಷೇಮಸಮಾಚಾರ ದಾಖಲಿಸಿದರೆ ಮಾಹಿತಿ ಹುಡುಕಿಬಂದ ಎಲ್ಲರಿಗೂ ಆತ ಕ್ಷೇಮವಾಗಿರುವುದು ತಿಳಿದುಬಿಡುತ್ತದೆ. ಅಷ್ಟೇ ಅಲ್ಲ, ನಿರಾಶ್ರಿತರ ಶಿಬಿರಗಳಿಂದಲೂ ಮಾಹಿತಿ ಸಂಗ್ರಹಿಸಿ ಈ ತಾಣಕ್ಕೆ ಸೇರಿಸಲಾಗುತ್ತಿದೆ.

ಸಾಮಾಜಿಕ ತಾಣಗಳ ಸಹಾಯಹಸ್ತ
ಫೇಸ್‌ಬುಕ್ ಹಾಗೂ ಟ್ವೀಟರ್‌ನಂತಹ ಸಾಮಾಜಿಕ ತಾಣಗಳು ಕೂಡ ದುರಂತದ ನಂತರ ಸಾಕಷ್ಟು ಉಪಯುಕ್ತ ಪಾತ್ರ ನಿರ್ವಹಿಸಿದವು. ನಾನು ಕ್ಷೇಮವಾಗಿದ್ದೇನೆ ಎಂದೋ, ನನಗೆ ಸಹಾಯ ಬೇಕು ಎಂದೋ ಹೇಳಬಯಸಿದವರು ತಮ್ಮ ಸಂದೇಶವನ್ನು ಒಂದೇ ಒಂದು ಕಡೆ ದಾಖಲಿಸಿ ಅದು ಎಲ್ಲ ಮಿತ್ರರಿಗೂ ತಲುಪುವಂತೆ ಮಾಡುವುದು ಈ ತಾಣಗಳಿಂದಾಗಿ ಸಾಧ್ಯವಾಯಿತು. ನಿಮಿಷಕ್ಕೆ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹರಿದುಬಂದ ಟ್ವೀಟ್‌ಗಳು ಜಪಾನಿನ ಪರಿಸ್ಥಿತಿಯನ್ನು ಅತ್ಯಂತ ಕ್ಷಿಪ್ರವಾಗಿ ಹೊರಜಗತ್ತಿಗೆ ಪರಿಚಯಿಸಿದವು. ಪರಿಹಾರ ಕಾರ್ಯಗಳಿಗಾಗಿ ನೀಡಲು ತನ್ನ ಬಳಕೆದಾರರಿಂದ ಲಕ್ಷಾಂತರ ಡಾಲರುಗಳ ದೇಣಿಗೆ ಸಂಗ್ರಹಿಸಿದ ಫೇಸ್‌ಬುಕ್‌ನ ಜನಪ್ರಿಯ ಆಟ ಫಾರ್ಮ್‌ವಿಲೆ ಕೂಡ ಮೆಚ್ಚುಗೆಗೆ ಪಾತ್ರವಾಯಿತು.

ಇಲ್ಲೂ ಕಾಣಿಸಿದ ಕೆಟ್ಟಚಾಳಿ
ಇಷ್ಟೆಲ್ಲ ಒಳ್ಳೆಯ ಕೆಲಸಕ್ಕೆ ಸಹಾಯಮಾಡಿದ ಅಂತರಜಾಲ ಸಾಕಷ್ಟು ತೊಂದರೆಯನ್ನೂ ಉಂಟುಮಾಡಿದ್ದು ವಿಷಾದದ ಸಂಗತಿ. ಸ್ಫೋಟಗೊಂಡ ರಿಯಾಕ್ಟರ್‌ಗಳಿಂದ ಹೊರಬಂದ ವಿಕಿರಣ ಏಷ್ಯಾದಲ್ಲೆಲ್ಲ ತೊಂದರೆ ಉಂಟುಮಾಡಲಿದೆ ಎಂದು ಪ್ರಮುಖ ಸುದ್ದಿಸಂಸ್ಥೆಯೊಂದರ ಹೆಸರಿನಲ್ಲಿ ಇಮೇಲ್ ಹಾಗೂ ಎಸ್ಸೆಮ್ಮೆಸ್ ಮೂಲಕ ಹಬ್ಬಿದ ಸುಳ್ಳುಸುದ್ದಿ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಗಾಬರಿ ಮೂಡಿಸಿತ್ತು.

ಟ್ವೀಟರ್-ಫೇಸ್‌ಬುಕ್ ಮುಂತಾದ ತಾಣಗಳಲ್ಲೂ ಸಾಕಷ್ಟು ವದಂತಿಗಳು ಹರಿದಾಡಿದವು. ಬದುಕಿದ್ದವರ ಮರಣವಾರ್ತೆಯನ್ನು ಗೂಗಲ್ ಪರ್ಸನ್ ಫೈಂಡರ್‌ನಲ್ಲಿ ಉದ್ದೇಶಪೂರ್ವಕವಾಗಿ ಸೇರಿಸಿದ ಹಲವು ವಿಕೃತ ಮನಸ್ಥಿತಿಯ ಜನ ಜಾಲಲೋಕದ ಕೆಟ್ಟ ಆಯಾಮವನ್ನು ಮತ್ತೊಮ್ಮೆ ಬೆಳಕಿಗೆ ತಂದರು.

ಮಾರ್ಚ್ ೨೨, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge