ಶುಕ್ರವಾರ, ಅಕ್ಟೋಬರ್ 16, 2015

ಕನ್ನಡದಲ್ಲೇ ಪ್ರೋಗ್ರಾಮಿಂಗ್!

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಕನ್ನಡದ ಬಳಕೆದಾರರಿಗೆ ತಂತ್ರಜ್ಞಾನದ ಇಷ್ಟೆಲ್ಲ ಸವಲತ್ತುಗಳನ್ನು ಒದಗಿಸಲು ಅನೇಕ ಪರಿಣತರು ಸಾಕಷ್ಟು ಪ್ರೋಗ್ರಾಮುಗಳನ್ನು ಬರೆದಿರುತ್ತಾರೆ.

ಮೂಲಭೂತವಾಗಿ ಕಂಪ್ಯೂಟರಿಗೆ ಅರ್ಥವಾಗುವುದು 'ಒಂದು'-'ಸೊನ್ನೆ'ಗಳ ಬೈನರಿ (ದ್ವಿಮಾನ ಪದ್ಧತಿ) ಭಾಷೆ ಮಾತ್ರ. ಕಂಪ್ಯೂಟರ್‌ನ ಮೆಮೊರಿಯಲ್ಲಿ ಏನು ಉಳಿಯಬೇಕಾದರೂ ಅದು ಒಂದು ಅಥವಾ ಸೊನ್ನೆಯ ರೂಪದಲ್ಲಷ್ಟೆ ಇರಲು ಸಾಧ್ಯ - ಪ್ರೋಗ್ರಾಮುಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ. ಆದರೆ ಅಂಕಿಗಳ ಭಾಷೆಯಲ್ಲಿ ಪ್ರೋಗ್ರಾಮ್ ಬರೆಯುವುದು ಕಷ್ಟವಾದ್ದರಿಂದ ಅದಕ್ಕಾಗಿ ಪ್ರೋಗ್ರಾಮಿಂಗ್ ಭಾಷೆಗಳನ್ನು ಬಳಸುತ್ತಾರೆ. ಇಂತಹ ಬಹುತೇಕ ಭಾಷೆಗಳು (ಉದಾ: ಸಿ, ಸಿ++, ಜಾವಾ ಇತ್ಯಾದಿ) ಇಂಗ್ಲಿಷ್ ಲಿಪಿಯನ್ನೇ ಬಳಸುವುದು ಸಂಪ್ರದಾಯ.


ಪ್ರೋಗ್ರಾಮಿಂಗ್ ಭಾಷೆಯ ಲಿಪಿ ಯಾವುದೇ ಇದ್ದರೂ ಅದರಲ್ಲಿ ಟೈಪಿಸಿರುವ ನಿರ್ದೇಶನಗಳನ್ನು ಕಂಪ್ಯೂಟರಿಗೆ ಅರ್ಥವಾಗುವ 'ಒಂದು'-'ಸೊನ್ನೆ'ಗಳ ಭಾಷೆಗೆ ಬದಲಾಯಿಸಲು ಕಂಪೈಲರ್, ಇಂಟರ್‌ಪ್ರೆಟರ್ ಮುಂತಾದ ವಿಶೇಷ ತಂತ್ರಾಂಶಗಳನ್ನು ಬಳಸುವುದು ಅನಿವಾರ್ಯ. ಇದರಿಂದಾಗಿಯೇ ಪ್ರೋಗ್ರಾಮಿಂಗ್ ಭಾಷೆಗಳು ಇಂಗ್ಲಿಷ್ ಲಿಪಿಯನ್ನೇ ಬಳಸಬೇಕೆಂಬ ಯಾವ ನಿರ್ಬಂಧವೂ ಇಲ್ಲ.

ಈ ಹಿನ್ನೆಲೆಯಲ್ಲಿ ಕನ್ನಡ ಲಿಪಿಯನ್ನೇ ಬಳಸಿ ಪ್ರೋಗ್ರಾಮ್ ಮಾಡಲು ಅನುವುಮಾಡಿಕೊಡುವ ಕೆಲವು ಪ್ರಯತ್ನಗಳು ನಡೆದಿವೆ.

ಪ್ರೊ. ಬಿ. ಎ. ಪಾಟೀಲರು ೧೯೯೪-೯೫ರ ಅವಧಿಯಲ್ಲಿ ರೂಪಿಸಿದ್ದ 'ಕರ್ಪೂರ' ತಂತ್ರಾಂಶ ಬಳಸಿ ಕನ್ನಡದಲ್ಲೇ ಪ್ರೋಗ್ರಾಮುಗಳನ್ನು ಬರೆಯುವುದು, ಔಟ್‌ಪುಟ್ ಪಡೆಯುವುದು ಸಾಧ್ಯವಿತ್ತು. ಕಂಪ್ಯೂಟರ್ ಉಪಯೋಗಿಸಲೆಂದು ಕನ್ನಡಿಗರಿಗೆ ಇಂಗ್ಲಿಷ್ ಹೇಳಿಕೊಡುವ ಬದಲು ಕಂಪ್ಯೂಟರಿಗೇ ಕನ್ನಡ ಹೇಳಿಕೊಡುವುದು ಈ ಪ್ರಯತ್ನದ ಉದ್ದೇಶವಾಗಿತ್ತು ಎಂದು ಪಾಟೀಲರು ಹೇಳುತ್ತಾರೆ. ಈ ವ್ಯವಸ್ಥೆಯನ್ನು ಇತರ ಭಾರತೀಯ ಭಾಷೆಗಳಲ್ಲೂ ಬಳಸಲು ಸಾಧ್ಯವಾಗುವಂತೆ ರೂಪಿಸಲಾಗಿತ್ತು.

'ಕರ್ಪೂರ' ತಂತ್ರಾಂಶ
ಇಂತಹುದೇ ಇನ್ನೊಂದು ಪ್ರಯತ್ನ ಮಾಡಿದವರು ಡಾ. ಯು. ಬಿ. ಪವನಜ. ಚಿಕ್ಕ ಮಕ್ಕಳಿಗೆ ಪ್ರೋಗ್ರಾಮಿಂಗ್ ಕಲಿಸಲು ರೂಪಿಸಲಾದ 'ಲೋಗೋ' ಭಾಷೆಯನ್ನು ಅವರು ೨೦೦೩ರಲ್ಲಿ ಕನ್ನಡಕ್ಕೆ ತಂದರು. ಕನ್ನಡ ಭಾಷೆಯನ್ನಷ್ಟೆ ಬಲ್ಲ ಮಕ್ಕಳು ಕೂಡ ಪ್ರೋಗ್ರಾಮಿಂಗ್ ಮಾಡಲು ಇದು ಸಹಾಯಮಾಡುತ್ತದೆ. ಡಿಜಿಟಲ್ ಎಂಪವರ್‌ಮೆಂಟ್ ಫೌಂಡೇಶನ್‌ನಿಂದ 'ಮಂಥನ್' ಪ್ರಶಸ್ತಿ ಪಡೆದಿರುವ 'ಕನ್ನಡ ಲೋಗೋ' ಅನ್ನು ವಿಶ್ವಕನ್ನಡ ತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.

ಕಾಮೆಂಟ್‌ಗಳಿಲ್ಲ:

badge