ಸೋಮವಾರ, ಅಕ್ಟೋಬರ್ 12, 2015

ಮೊಬೈಲ್ ಕ್ಯಾಮೆರಾ ಮಾಯಾಜಾಲ

ಟಿ. ಜಿ. ಶ್ರೀನಿಧಿ

ಮೊದಲಿಗೆ ಮೊಬೈಲ್ ಫೋನ್ ಸೃಷ್ಟಿಯಾದದ್ದು ಯಾವಾಗ ಎಲ್ಲಿಂದ ಬೇಕಿದ್ದರೂ ದೂರವಾಣಿ ಕರೆಮಾಡಿ ಮಾತನಾಡುವುದನ್ನು ಸಾಧ್ಯವಾಗಿಸುವ ಉದ್ದೇಶದಿಂದ. ಮುಂದಿನ ದಶಕಗಳಲ್ಲಿ ಮೊಬೈಲ್ ಜನಪ್ರಿಯತೆ ಹೆಚ್ಚಿದಂತೆ ಅದರಲ್ಲಿರುವ ಸೌಲಭ್ಯಗಳೂ ಹೆಚ್ಚಿದ್ದು ಈಗ ಇತಿಹಾಸ. ಎಸ್ಸೆಮ್ಮೆಸ್ ಕಳುಹಿಸುವುದರಿಂದ ಹಿಡಿದು ಆನ್‌ಲೈನ್ ಶಾಪಿಂಗ್ ಮಾಡುವವರೆಗೆ ಪ್ರತಿಯೊಂದಕ್ಕೂ ಈಗ ನಾವು ಮೊಬೈಲನ್ನೇ ಅವಲಂಬಿಸಿದ್ದೇವೆ. ಎಫ್‌ಎಂ ರೇಡಿಯೋ, ಎಂಪಿಥ್ರೀ ಪ್ಲೇಯರುಗಳನ್ನೆಲ್ಲ ಮೂಲೆಗುಂಪು ಮಾಡಿದ್ದು ಇದೇ ಮೊಬೈಲ್.

ಮೊಬೈಲ್ ಫೋನ್ ಬಂದ ಮೇಲೆ ತಮ್ಮ ಮಹತ್ವ ಕಳೆದುಕೊಂಡ ಸಾಧನಗಳ ಪೈಕಿ ಡಿಜಿಟಲ್ ಕ್ಯಾಮೆರಾಗೆ ಪ್ರಮುಖ ಸ್ಥಾನ. ಮೊಬೈಲ್ ಜಗತ್ತು ವಿಸ್ತರಿಸಿದಂತೆ ಅದು ಛಾಯಾಗ್ರಹಣಕ್ಕೆ ನೀಡಿರುವ - ನೀಡುತ್ತಿರುವ ಹೊಸ ಆಯಾಮಗಳ ಪರಿಚಯ ಇಲ್ಲಿದೆ.

ಮೊಬೈಲಿನಲ್ಲೊಂದು ಕ್ಯಾಮೆರಾ ಕ್ಯಾಮೆರಾ ಫೋನುಗಳು ಮೊದಲಿಗೆ ಕಾಣಿಸಿಕೊಂಡದ್ದು ತೊಂಬತ್ತರ ದಶಕದ ಆಸುಪಾಸಿನಲ್ಲಿ. ೧೯೯೫ರಲ್ಲಿ ಅಮೆರಿಕಾದ ವಿಜ್ಞಾನಿ ಎರಿಕ್ ಫಾಸಮ್ ಮತ್ತು ಅವರ ತಂಡ ಪುಟ್ಟದೊಂದು ಚಿಪ್‌ನಲ್ಲೇ ಸಂಪೂರ್ಣ ಕ್ಯಾಮೆರಾವನ್ನು ಅಡಕಗೊಳಿಸಬಹುದಾದ (ಕ್ಯಾಮೆರಾ-ಆನ್-ಎ-ಚಿಪ್) ತಂತ್ರಜ್ಞಾನ ರೂಪಿಸಿದ್ದು ಇಂತಹ ಸಣ್ಣಗಾತ್ರದ ಕ್ಯಾಮೆರಾಗಳ ಸೃಷ್ಟಿಯಲ್ಲಿ ಮಹತ್ವದ ನೆರವು ನೀಡಿತು.

ಸರಿಸುಮಾರು ಇದೇ ಸಮಯದಲ್ಲಿ ತಂತ್ರಜ್ಞಾನ ಆಸಕ್ತರು ಕೂಡ ಮೊಬೈಲ್ ದೂರವಾಣಿಗಳಲ್ಲಿ ಕ್ಯಾಮೆರಾ ಅಳವಡಿಸುವ ನಿಟ್ಟಿನಲ್ಲಿ ತಮ್ಮತಮ್ಮ ಮಿತಿಯೊಳಗೇ ಪ್ರಯತ್ನಗಳನ್ನು ನಡೆಸಿದ್ದರು. ಇಂತಹುದೊಂದು ಪ್ರಯತ್ನದಲ್ಲಿ ಫಿಲಿಪ್ ಕಾನ್ ಎಂಬಾತ ೧೯೯೭ರಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ಕ್ಯಾಮೆರಾ ಫೋನ್ ಬಳಸಿ ಕ್ಲಿಕ್ಕಿಸಲಾದ ಮೊದಲ ಚಿತ್ರವೆಂದು ಗುರುತಿಸಲಾಗುತ್ತದೆ.

ದೊಡ್ಡ ಸಂಸ್ಥೆಗಳು ಕೂಡ ಕ್ಯಾಮೆರಾ ಫೋನ್ ರೂಪಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳನ್ನು ಕೈಗೊಂಡಿದ್ದವು. ಇಂತಹ ಹಲವು ಪ್ರಯತ್ನಗಳ ನಡುವೆ ಮೊದಲ ಕ್ಯಾಮೆರಾ ಫೋನುಗಳು ಜಪಾನಿನಲ್ಲಿ ಬಳಕೆಗೆ ಬಂದವು, ಮಾರುಕಟ್ಟೆಗೆ ಪರಿಚಯವಾಗುತ್ತಿದ್ದಂತೆ ಅಪಾರ ಜನಪ್ರಿಯತೆಯನ್ನೂ ಗಳಿಸಿಕೊಂಡವು.

ಹೆಚ್ಚಿದ ಜನಪ್ರಿಯತೆ ಮೊಬೈಲ್ ಕ್ಯಾಮೆರಾ ಪರಿಚಯವಾದ ಸಮಯದಲ್ಲಿ ದಾಖಲೆಗೆಂದು ಚಿತ್ರಗಳನ್ನು ಕ್ಲಿಕ್ಕಿಸುವುದಷ್ಟೆ ಅದರ ಕೆಲಸವಾಗಿತ್ತು. ಮೊಬೈಲಿನಲ್ಲಿ ಕ್ಲಿಕ್ಕಿಸಿದ ಚಿತ್ರಗಳ ಗುಣಮಟ್ಟ ಎನ್ನುವುದಂತೂ ಕಳಪೆ ಚಿತ್ರಗಳನ್ನು ಗುರುತಿಸುವ ಮಾನದಂಡದಂತಿತ್ತು. ಆದರೆ ನಿಧಾನಕ್ಕೆ ಈ ಪರಿಸ್ಥಿತಿ ಬದಲಾಗುತ್ತ ಬಂತು. ದೊಡ್ಡ ಡಿಜಿಟಲ್ ಕ್ಯಾಮೆರಾಗಳಲ್ಲಿದ್ದ ಸೌಲಭ್ಯಗಳು ಮೊಬೈಲಿನ ಪುಟ್ಟ ಕ್ಯಾಮೆರಾದಲ್ಲೂ ಕಾಣಿಸಿಕೊಂಡವು.

ಮೊಬೈಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸುವ ಚಿತ್ರಗಳ ಗುಣಮಟ್ಟ ಹೆಚ್ಚಿದ್ದು ಇಂತಹ ಸೌಲಭ್ಯಗಳಲ್ಲಿ ಮೊದಲನೆಯದು ಎನ್ನಬಹುದು. ಕಳಪೆ ಗುಣಮಟ್ಟದ, ತೀರಾ ಸಣ್ಣ ಗಾತ್ರದ ಚಿತ್ರಗಳ ಸ್ಥಾನದಲ್ಲಿ ಸ್ಪಷ್ಟವಾದ ಹಾಗೂ ಹೆಚ್ಚಿನ ರೆಸಲ್ಯೂಶನ್ ಹೊಂದಿದ ಚಿತ್ರಗಳನ್ನು ಕ್ಲಿಕ್ಕಿಸುವುದು ಸಾಧ್ಯವಾಯಿತು. ಮೊಬೈಲ್ ಕ್ಯಾಮೆರಾಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುವ ಸೆನ್ಸರ್ ಸಾಮರ್ಥ್ಯ ಇನ್ನಿತರ ಡಿಜಿಟಲ್ ಕ್ಯಾಮೆರಾಗಳ ಸಾಮರ್ಥ್ಯದ ಮಟ್ಟಕ್ಕೇ ಬೆಳೆಯಿತು. ಕಡಿಮೆ ಬೆಳಕಿನಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಲು ಫ್ಲಾಶ್ ಕೂಡ ಬಂತು.

ಡಿಜಿಟಲ್ ಕ್ಯಾಮೆರಾ ಜಾಗದಲ್ಲಿ ಮೊಬೈಲ್ ಫೋನ್ ಭದ್ರವಾಗಿ ತಳವೂರಲು ಇಷ್ಟು ಕಾರಣಗಳು ಸಾಕಾದವು. ಯಾವಾಗ ಎಲ್ಲಿ ಬೇಕಿದ್ದರೂ ಫೋಟೋ ತೆಗೆಯುವುದು, ಥಟ್ಟನೆ ಹಂಚಿಕೊಳ್ಳುವುದು ಸಾಧ್ಯವಾಗುತ್ತಿದ್ದಂತೆ ಮೊಬೈಲ್ ಕ್ಯಾಮೆರಾ ಜನಪ್ರಿಯತೆ ಅಗಾಧವಾಗಿ ಬೆಳೆಯಿತು.

ತಂತ್ರಜ್ಞಾನದ ವಿಶ್ವರೂಪ ಮೊಬೈಲ್ ಕ್ಯಾಮೆರಾ ಜನಪ್ರಿಯತೆ ಹೆಚ್ಚಿದ ಮಾತ್ರಕ್ಕೆ ಅದರ ವಿಕಾಸವೇನೂ ನಿಲ್ಲಬೇಕಿಲ್ಲವಲ್ಲ! ಹಾಗಾಗಿ ಮೊಬೈಲ್ ಫೋನುಗಳಲ್ಲಿರುವ ಕ್ಯಾಮೆರಾ ತಂತ್ರಜ್ಞಾನ ದಿನೇದಿನೇ ಉತ್ತಮಗೊಳ್ಳುತ್ತಲೇ ಇದೆ. ಈ ಹಿಂದೆ ದುಬಾರಿ ಡಿಜಿಟಲ್ ಕ್ಯಾಮೆರಾಗಳಲ್ಲಿ, ಡಿಎಸ್‌ಎಲ್‌ಆರ್‌ಗಳಲ್ಲಷ್ಟೆ ಕಾಣಸಿಗುತ್ತಿದ್ದ ಹಲವು ಸೌಲಭ್ಯಗಳು ಇಂದು ಮೊಬೈಲ್ ಕ್ಯಾಮೆರಾದಲ್ಲಿ ಲಭ್ಯವಿವೆ. ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರಗಳನ್ನು ಕ್ಲಿಕ್ಕಿಸುವುದು, ಒಂದರ ಹಿಂದೊಂದರಂತೆ ಹತ್ತಾರು ಚಿತ್ರಗಳನ್ನು ಪಟಪಟನೆ ಕ್ಲಿಕ್ಕಿಸುವುದು (ಬರ್ಸ್ಟ್), ಹೈ ಡೈನಮಿಕ್ ರೇಂಜ್ (ಎಚ್‌ಡಿಆರ್) ಇಮೇಜಿಂಗ್‌ನಂತಹ ತಂತ್ರಗಳನ್ನು ಬಳಸುವುದು, ವಿವಿಧ ಸಮಯಗಳಲ್ಲಿ ಒಂದೇ ವಿಷಯದ ಚಿತ್ರಗಳನ್ನು (ಟೈಮ್‌ಲ್ಯಾಪ್ಸ್) ಸೆರೆಹಿಡಿಯುವುದೆಲ್ಲ ಇಂದಿನ ಕ್ಯಾಮೆರಾ ಫೋನುಗಳಿಗೆ ಸಾಧ್ಯ. ಬರಿಯ ಫೋಟೋ ಮಾತ್ರವೇ ಅಲ್ಲ, ಅತ್ಯುತ್ತಮ ಗುಣಮಟ್ಟದ (ಎಚ್‌ಡಿ, ೪ಕೆ ಇತ್ಯಾದಿ) ವೀಡಿಯೋಗಳನ್ನೂ ಅವು ಸೆರೆಹಿಡಿಯಬಲ್ಲವು. ನಮ್ಮ ಸುತ್ತಲಿನ ಸಂಪೂರ್ಣ ಚಿತ್ರಣವನ್ನು ಒಂದೇ ಫೋಟೋದಲ್ಲಿ ನೀಡುವ ಪನೋರಮಾ ಆಯ್ಕೆಯಂತೂ ಈಗಾಗಲೇ ಹಳೆಯದಾಗಿಬಿಟ್ಟಿದೆ.

ಕ್ಯಾಮೆರಾದಲ್ಲಿ ಬಳಕೆಯಾಗುವ ತಂತ್ರಜ್ಞಾನದ ಜೊತೆಗೆ, ಸಹಜವಾಗಿಯೇ, ಅದು ಕ್ಲಿಕ್ಕಿಸಿದ ಚಿತ್ರಗಳನ್ನು ಸಂಸ್ಕರಿಸುವ (ಇಮೇಜ್ ಪ್ರಾಸೆಸಿಂಗ್) ತಂತ್ರಾಂಶಗಳೂ ಬೆಳೆದಿವೆ. ಮೊಬೈಲ್ ಫೋನುಗಳಲ್ಲಿ ಹೆಚ್ಚುತ್ತಿರುವ ಸಂಸ್ಕರಣಾ ಸಾಮರ್ಥ್ಯ - ಮೆಮೊರಿಯ ಲಭ್ಯತೆ ಕೂಡ ಇಲ್ಲಿ ನೆರವಾಗಿದೆ ಎನ್ನಬಹುದು. ಈಚೆಗೆ ಮಾರುಕಟ್ಟೆಗೆ ಬಂದ ಏಸಸ್ ಜೆನ್‌ಫೋನ್ ಸರಣಿಯ ಫೋನುಗಳಲ್ಲಿ ಬಳಕೆಯಾಗಿರುವ 'ಪಿಕ್ಸೆಲ್‌ಮಾಸ್ಟರ್' ತಂತ್ರಜ್ಞಾನವನ್ನು ಇಲ್ಲಿ ಉಲ್ಲೇಖಿಸಬಹುದು - ಫೋಟೋ ಕ್ಲಿಕ್ಕಿಸುವಾಗ ಅಡ್ಡಬಂದ ವ್ಯಕ್ತಿ ಅಥವಾ ವಸ್ತುಗಳನ್ನು ಗುರುತಿಸಿ ಫೋಟೋದಿಂದ ಅಳಿಸಿಹಾಕುವ ಸೌಲಭ್ಯ ಈ ಫೋನುಗಳಲ್ಲಿದೆ. ಅಷ್ಟೇ ಅಲ್ಲ, ನಾವೇ ಕ್ಲಿಕ್ಕಿಸಿದ ಸೆಲ್ಫಿಯಲ್ಲಿ ನಮ್ಮ ಮುಖ ಇನ್ನಷ್ಟು ಚೆಂದಕಾಣುವಂತೆ ಮಾಡುವ (ಬ್ಯೂಟಿಫಿಕೇಶನ್) ಆಯ್ಕೆಗಳೂ ಇವೆ!

ಅಂದಹಾಗೆ ಮೊಬೈಲ್ ಕ್ಯಾಮೆರಾದ ಕೆಲಸ ಈಗ ಫೋಟೋ-ವೀಡಿಯೋಗಳನ್ನು ಕ್ಲಿಕ್ಕಿಸುವುದಕ್ಕಷ್ಟೆ ಸೀಮಿತವಾಗಿ ಉಳಿದಿಲ್ಲ. ಬಾರ್ ಕೋಡ್ - ಕ್ಯೂಆರ್ ಕೋಡ್‌ಗಳನ್ನು ಗುರುತಿಸುವ ಸಾಧನಗಳಾಗಿ, ಅತಿರಿಕ್ತ ವಾಸ್ತವ ದೃಶ್ಯಗಳನ್ನು (ಆಗ್‌ಮೆಂಟೆಡ್ ರಿಯಾಲಿಟಿ) ಮೂಡಿಸುವ ಮಾರ್ಗವಾಗಿಯೂ ಅವು ಬಳಕೆಯಾಗುತ್ತಿವೆ.



ಇನ್ನಷ್ಟು ಆಯ್ಕೆಗಳು ಈ ಹಿಂದೆ ಮೊಬೈಲ್ ಕ್ಯಾಮೆರಾದಲ್ಲಿ ಜೂಮ್ ಮಾಡಬೇಕೆಂದರೆ ಲಭ್ಯವಿದ್ದದ್ದು ಡಿಜಿಟಲ್ ಜೂಮ್ ಆಯ್ಕೆ ಮಾತ್ರ. ಕ್ಲಿಕ್ಕಿಸಿದ ಚಿತ್ರವನ್ನೇ ಹಿಂಜಿ ಇನ್ನಷ್ಟು ದೊಡ್ಡದು ಮಾಡಿ ತೋರಿಸುತ್ತಿದ್ದ ಈ ತಂತ್ರಜ್ಞಾನ ಹೆಚ್ಚೂಕಡಿಮೆ ನಿಷ್ಪ್ರಯೋಜಕವೇ. ಹಾಗಾಗಿ ಲೆನ್ಸುಗಳ ಸಹಾಯದಿಂದ ಜೂಮ್ ಮಾಡಬೇಕೆನ್ನುವವರು (ಅಪ್ಟಿಕಲ್ ಜೂಮ್) ಡಿಜಿಟಲ್ ಕ್ಯಾಮೆರಾ ಬಳಸಬೇಕಾದ್ದು ಅನಿವಾರ್ಯವಾಗಿತ್ತು. ಈ ಕೊರತೆ ನೀಗಿಸಲು ಹಲವು ಪ್ರಯತ್ನಗಳು ನಡೆದಿವೆ. ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಆಪ್ಟಿಕಲ್ ಜೂಮ್ ಸೌಲಭ್ಯವನ್ನೂ ಒದಗಿಸಲು ಹೊರಟಾಗ ಮೊಬೈಲ್‌ನ ದಪ್ಪ ತೀರಾ ಹೆಚ್ಚುವುದನ್ನು (ಉದಾ: ಸ್ಯಾಮ್‌ಸಂಗ್ ಗೆಲಾಕ್ಸಿ ಜೂಮ್) ತಪ್ಪಿಸಿ, ತೀರಾ ದಪ್ಪಗೇನೂ ಇಲ್ಲದ ಫೋನಿನಲ್ಲೂ ಆಪ್ಟಿಕಲ್ ಜೂಮ್ ಸೌಲಭ್ಯ (ಉದಾ: ಏಸಸ್ ಜೆನ್‌ಫೋನ್ ಜೂಮ್) ಒದಗಿಸಲು ಸಾಧ್ಯವಾಗಿರುವುದನ್ನು ನಾವು ನೋಡಬಹುದು.

ಡಿಎಸ್‌ಎಲ್‌ಆರ್‌ಗಳಲ್ಲಿ ಲೆನ್ಸಿನ ಜೊತೆಗೆ 'ಅಟ್ಯಾಚ್‌ಮೆಂಟ್'ಗಳೂ ಬಳಕೆಯಾಗುತ್ತವೆ. ಇರುವ ಲೆನ್ಸಿಗೆ ಹೆಚ್ಚುವರಿ ಸಾಧನಗಳನ್ನು ಜೋಡಿಸಿ ಫಿಶ್ ಐ, ಮ್ಯಾಕ್ರೋ, ವೈಡ್ ಆಂಗಲ್ ಮುಂತಾದ ಸವಲತ್ತುಗಳನ್ನು ಕಡಿಮೆ ಖರ್ಚಿನಲ್ಲೇ ಪಡೆದುಕೊಳ್ಳುವ ಮಾರ್ಗ ಇದು. ಇಂತಹ ಅಟ್ಯಾಚ್‌ಮೆಂಟುಗಳು ಇದೀಗ ಮೊಬೈಲ್ ಫೋನುಗಳಿಗೂ ಲಭ್ಯವಿವೆ. ಕೆಲವೇ ನೂರು ರೂಪಾಯಿಗೆ ದೊರಕುವ ಪುಟ್ಟದೊಂದು ಕ್ಲಿಪ್ ಅನ್ನೂ, ಅದಕ್ಕೆ ಜೋಡಿಸುವ ಪುಟ್ಟ ಲೆನ್ಸುಗಳನ್ನೂ ಬಳಸಿ ನಾವು ಮೊಬೈಲಿನಲ್ಲೂ ಫಿಶ್ ಐ, ಮ್ಯಾಕ್ರೋ ಹಾಗೂ ವೈಡ್ ಆಂಗಲ್ ಚಿತ್ರಗಳನ್ನು ಕ್ಲಿಕ್ಕಿಸಬಹುದು.

ಮೊಬೈಲ್ ಕ್ಯಾಮೆರಾದ ಫ್ಲಾಶ್ ಸಾಲದೆನ್ನುವವರು ಬಳಸಲೆಂದು ಹೆಚ್ಚುವರಿ ಫ್ಲಾಶ್ ಸವಲತ್ತು ಕೂಡ ಇದೆ. ಡಿಜಿಟಲ್ ಕ್ಯಾಮೆರಾಗಳಲ್ಲಿ ಮಾಡುವಂತೆ ಹೆಚ್ಚಿನ ಬೆಳಕು ಬೇಕಿದ್ದಾಗ ಇಂತಹ ಫ್ಲಾಶ್ ಬಳಸಿ ಫೋಟೋ ತೆಗೆಯಬಹುದು; ಬೇಕೆಂದರೆ ಸೆಲ್ಫಿ ತೆಗೆಯಲೂ ಫ್ಲಾಶ್ ಬಳಸಿಕೊಳ್ಳಬಹುದು: ಇಯರ್ ಫೋನ್ ಜಾಕ್‌ನೊಳಗೆ ಕೂರುವ ಅನೇಕ ಫ್ಲಾಶ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಷ್ಟೇ ಏಕೆ, ಕೆಲ ಫೋನುಗಳಲ್ಲಿ (ಉದಾ: ಏಸಸ್ ಜೆನ್‌ಫೋನ್ ಸೆಲ್ಫಿ) ಫ್ರಂಟ್ ಕ್ಯಾಮೆರಾ ಜೊತೆಗೂ ಫ್ಲಾಶ್ ಸೌಲಭ್ಯವಿದೆ!



ಇನ್ನುಳಿದದ್ದು ಬಹುಶಃ ಫೋಟೋಗಳ ಮುದ್ರಣ - ಮೊಬೈಲಿನಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ನಮಗೆ ಬೇಕಾದಂತೆ ಮುದ್ರಿಸಿಕೊಳ್ಳಲು ಹಲವು ಆಪ್‌ಗಳು (ಉದಾ: ಜೂಮಿನ್) ನೆರವಾಗುತ್ತವೆ.

ಅಂತೂ, ಮೊಬೈಲ್ ಫೋನ್ ಹಾಗೂ ಡಿಜಿಟಲ್ ಕ್ಯಾಮೆರಾಗಳ ಈ ವಿಶಿಷ್ಟ ಸಂಯೋಜನೆ ಫೋಟೋ ಸ್ಟೂಡಿಯೋವನ್ನು ನಮ್ಮ ಅಂಗೈಯ ಮೇಲಕ್ಕೇ ತಂದಿಟ್ಟುಬಿಟ್ಟಿದೆ!

ಅಕ್ಟೋಬರ್ ೨೦೧೫ರ ತುಷಾರದಲ್ಲಿ ಪ್ರಕಟವಾದ ಲೇಖನ
badge