ಕನ್ನಡದ ವಿಜ್ಞಾನ-ತಂತ್ರಜ್ಞಾನ ಸಂವಹನಕಾರರ ಸಾಲಿನಲ್ಲಿ ಪ್ರಮುಖ ಹೆಸರು ಶ್ರೀ ನಾಗೇಶ ಹೆಗಡೆಯವರದ್ದು. ಪರಿಸರಪ್ರೇಮಿ ಎನ್ನಿ, ವಿಜ್ಞಾನ ಲೇಖಕರೆನ್ನಿ, ಪತ್ರಕರ್ತರೆನ್ನಿ, ತಂತ್ರಜ್ಞಾನ ಆಸಕ್ತರೆನ್ನಿ - ಎಲ್ಲ ವಿಶೇಷಣಗಳೂ ಹೆಗಡೆಯವರಿಗೆ ಅನ್ವಯಿಸುತ್ತವೆ. ಹೊಸ ಬರಹಗಾರರನ್ನು ತಿದ್ದಿ ಬೆಳೆಸುವಲ್ಲಿ ಅಪಾರ ಆಸಕ್ತಿಯಿರುವ ನಾಗೇಶ ಹೆಗಡೆಯವರು ಕಿರಿಯ ಬರಹಗಾರರ ಮಟ್ಟಿಗಂತೂ ಮೇಷ್ಟರೇ ಸರಿ. ಬರಹಗಾರರಿಗಷ್ಟೇ ಏಕೆ, ಪತ್ರಿಕೋದ್ಯಮದ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಪ್ರಾರಂಭಿಸಿ ಪ್ರಾಥಮಿಕ ಶಾಲೆಯ ಪುಟ್ಟಮಕ್ಕಳವರೆಗೆ ನಾಗೇಶ ಹೆಗಡೆಯವರ ಪಾಠ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹಲವು ದಶಕಗಳಿಂದ ತಮ್ಮ ಪುಸ್ತಕಗಳ, ಲೇಖನಗಳ ಮೂಲಕ ಪರಿಸರ-ವಿಜ್ಞಾನ-ತಂತ್ರಜ್ಞಾನಗಳ ಕುರಿತು ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ನಾಗೇಶ ಹೆಗಡೆ ಮೇಷ್ಟ್ರು ಶಿಕ್ಷಕರ ದಿನದಂದು ನಮ್ಮ ವಿಶೇಷ ಅತಿಥಿ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಆಗಿನ ಕಾಲದಲ್ಲಿ (1970ರಲ್ಲಿ) ಎಲ್ಲರೂ ಕತೆ, ಕಾದಂಬರಿ, ನಾಟಕ, ಕವನಗಳಂಥ ಊಹಾತ್ಮಕ ಬರವಣಿಗೆಗೆ ಬಿದ್ದವರೇ ಆಗಿದ್ದರು. ನಮ್ಮ ಪಠ್ಯಪುಸ್ತಕಗಳಲ್ಲೂ ಬರೀ ಅವೇ ತುಂಬಿಕೊಂಡಿದ್ದವು. ಬಿಟ್ಟರೆ ಇತಿಹಾಸದ ಪಾಠಗಳಿದ್ದವು. ನೈಜ ಸಂಗತಿಯನ್ನು ಹೇಳುವವರು ಬಿಜಿಎಲ್ ಸ್ವಾಮಿ, ಜಿ. ಟಿ. ನಾರಾಯಣರಾವ್ ಮತ್ತು ಅಪರೂಪಕ್ಕೆ ಡಾ. ಶಿವರಾಮ ಕಾರಂತ ಇಷ್ಟೇ. ಇಲ್ಲಿ ಸ್ಪರ್ಧೆಯೇ ಇರಲಿಲ್ಲ! ಅದಕ್ಕೇ ಇರಬೇಕು, ನಾನು ಹೊಸದಾಗಿ ಬರವಣಿಗೆ ಆರಂಭಿಸಿ, 'ಅಂತರ್ಗ್ರಹ ಯಾತ್ರೆ' ಹೆಸರಿನ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಾಗ ನನಗೇ ಮೊದಲ ಬಹುಮಾನ ಸಿಕ್ಕಿತ್ತು. ಸಾಕಲ್ಲ ಈ ಎರಡು ಮೂರು ಕಾರಣಗಳು?
ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಕಾರ್ಲ್ ಸೇಗನ್, ಲೀವಿಸ್ ಥಾಮಸ್, ಸ್ಟೀಫನ್ ಜೇಗೋಲ್ಡ್ ......
ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ?
ಉಳಿದವರದ್ದು ಗೊತ್ತಿಲ್ಲ. ಆದರೆ ನಾನು ಬರೆದಿದ್ದಕ್ಕೆಲ್ಲ ಮೆಚ್ಚುಗೆಯ ಪ್ರತಿಕ್ರಿಯೆಗಳು ನನಗೆ ಬರುತ್ತಿವೆ. ಹಾಗಾಗಿ ಅವನ್ನೆಲ್ಲ ಸಮಾಜ ಚೆನ್ನಾಗಿಯೇ ಸ್ವೀಕರಿಸುತ್ತದೆ ಎಂಬ ಭಾವನೆ ನನ್ನದು.
ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ವಿಜ್ಞಾನ, ವೈಜ್ಞಾನಿಕ ತತ್ವಗಳನ್ನು ಆಧರಿಸಿ ಒಂದಿಷ್ಟು ಕಾಲ್ಪನಿಕ ಸಾಹಿತ್ಯವನ್ನು ಸೃಷ್ಟಿಸಬೇಕೆಂಬ ಹಂಬಲ ಇದೆ. ಕತೆ-ಕಾದಂಬರಿಗಳಿಗೆ ಓದುಗರು ಜಾಸ್ತಿ ಇರುತ್ತಾರೆ ತಾನೆ?
ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ವಿಜ್ಞಾನ ಸಂವಹನ ಅನ್ನೋದು ನನ್ನ ಆಸಕ್ತಿಯ ವಿಷಯ ಅಲ್ಲವೇ ಅಲ್ಲ! ಅದು ಹೊಟ್ಟೆಪಾಡಿಗೆ ಅಷ್ಟೆ. ಅದಕ್ಕಿಂತ ಇತರ ಆಸಕ್ತಿಗಳೇ ತುಂಬ ಜಾಸ್ತಿ ಇವೆ! ಕೃಷಿ, ಕೋಳಿ ಸಾಕಣೆ, ಜೇನುಸಾಕಣೆ, ಮೀನುಗಾರಿಕೆ, ಚಿತ್ರಕಲೆ, ಶಿಲ್ಪಕಲೆ, ಬಡಗಿ ಕೆಲಸ, ಕಾದಂಬರಿ ಓದು ಇತ್ಯಾದಿ. ಪುರುಸೊತ್ತು ಸಿಕ್ಕರೆ ಹಾಯಾಗಿ ಆಕಾಶ ನೋಡುತ್ತ ಕೂರುವುದೂ ಆಸಕ್ತಿಯ ವಿಷಯವೇ ಆಗಿರುತ್ತದೆ.
ನಾಗೇಶ ಹೆಗಡೆಯವರನ್ನು ಕುರಿತ ವಿಕಿಪೀಡಿಯ ಪುಟ ಇಲ್ಲಿದೆ
ನಾಗೇಶ ಹೆಗಡೆಯವರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.
2 ಕಾಮೆಂಟ್ಗಳು:
ಹಿರಿಯರಾದ ಶ್ರೀ ನಾಗೇಶ ಹೆಗಡೆಯವರ ಸಂದರ್ಶನ ಸಕಾಲಿಕವಾಗಿದೆ. ಅವರ ಬಹುಮುಖ ಪ್ರತಿಭೆ ಮತ್ತು ಸಾಧನೆಯಂತೆ, ಅವರ ವಿನಯ ಮತ್ತು ಸೃಜನಶೀಲತೆ ಕಿರಿಯರಿಗೆ ಸ್ಫೂರ್ತಿಸೆಲೆಯಾಗಿರಲಿ. ಧನ್ಯವಾದಗಳು ಶ್ರೀನಿಧಿ.
ಚೆನ್ನಾಗಿದೆ ಸಂವಾದ
ಕಾಮೆಂಟ್ ಪೋಸ್ಟ್ ಮಾಡಿ