ಶುಕ್ರವಾರ, ಜುಲೈ 26, 2013

ಕ್ಯಾಮೆರಾ ಕತೆಗಳು : ೩

ಟಿ. ಜಿ. ಶ್ರೀನಿಧಿ

[ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಎರಡನೇ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

೧೮೭೦ರ ಸುಮಾರಿಗೆ ರೂಪುಗೊಂಡ 'ಡ್ರೈ ಪ್ಲೇಟ್' ತಂತ್ರಜ್ಞಾನದಿಂದಾಗಿ ನೆಗೆಟಿವ್‌ಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಳ್ಳುವುದು ಹಾಗೂ ಚಿತ್ರ ಸೆರೆಹಿಡಿದ ನಂತರ ಅದನ್ನು ನಿಧಾನವಾಗಿ ಸಂಸ್ಕರಿಸಿಕೊಳ್ಳುವುದು ಸಾಧ್ಯವಾಯಿತು. ಅಷ್ಟೇ ಅಲ್ಲ, ಈ ಬಗೆಯ ನೆಗೆಟಿವ್‌ಗಳ ಬಳಕೆಯಿಂದ ಚಿತ್ರಗಳನ್ನು ಸೆರೆಹಿಡಿಯಲು ದೀರ್ಘಸಮಯದವರೆಗೆ ಕಾಯಬೇಕಾದ ಹಾಗೂ ಟ್ರೈಪಾಡ್ ಅನ್ನು ಅವಲಂಬಿಸಬೇಕಾದ ಅನಿವಾರ್ಯತೆ ಕೂಡ ನಿವಾರಣೆಯಾಯಿತು.

ಕೈಯಲ್ಲಿ ಹಿಡಿದುಕೊಳ್ಳಬಹುದಾದಂತಹ (ಹ್ಯಾಂಡ್-ಹೆಲ್ಡ್) ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲೂ ಇದೇ ಕಾರಣವಾಯಿತು. ಆ ಸಂದರ್ಭದ ಒಂದು ಬೆಳವಣಿಗೆ ಮುಂದೆ ಛಾಯಾಗ್ರಹಣ ಕ್ಷೇತ್ರದ ರೂಪುರೇಷೆಯನ್ನೇ ಬದಲಿಸಿಬಿಟ್ಟಿತು.

ಈ ಬೆಳವಣಿಗೆಗೆ ಕಾರಣನಾದ ವ್ಯಕ್ತಿಯ ಹೆಸರು ಜಾರ್ಜ್ ಈಸ್ಟ್‌ಮನ್. ಡ್ರೈ ಪ್ಲೇಟ್ ತಂತ್ರಜ್ಞಾನ ಹಾಗೂ ಕಾಗದದ ನೆಗೆಟಿವ್ ಪರಿಕಲ್ಪನೆ ಎರಡನ್ನೂ ಒಟ್ಟುಸೇರಿಸಿದ ಈತ ನೆಗೆಟಿವ್ ಸುರುಳಿಗಳನ್ನು ರೂಪಿಸಿದ. ತನ್ನ ಆವಿಷ್ಕಾರಗಳನ್ನು ಮಾರುಕಟ್ಟೆಗೆ ಪರಿಚಯಿಸಲೆಂದು ಆತ ಹುಟ್ಟುಹಾಕಿದ ಸಂಸ್ಥೆಯೇ ಕೊಡಕ್.

ಸಣ್ಣಗಾತ್ರದ ಕ್ಯಾಮೆರಾ ಹಾಗೂ ಅದರೊಳಗೆ ನೂರು ಚಿತ್ರಗಳಿಗೆ ಸಾಲುವಷ್ಟಿದ್ದ ನೆಗೆಟಿವ್ ಸುರುಳಿ ಎರಡೂ ಸೇರಿ ಮೊತ್ತಮೊದಲ ಕೊಡಕ್ ಕ್ಯಾಮೆರಾ ೧೮೮೮ರಲ್ಲಿ ಸಿದ್ಧವಾಯಿತು. ಛಾಯಾಗ್ರಹಣ ಪರಿಣತರಷ್ಟೇ ಮಾಡುವ ಕೆಲಸ ಎನ್ನುವ ಅಭಿಪ್ರಾಯ ಅಲ್ಲಿಗೆ ಅಂತ್ಯವಾಗಿ ಕ್ಯಾಮೆರಾಗಳು - ನಿಜ ಅರ್ಥದಲ್ಲಿ - ಜನಸಾಮಾನ್ಯರ ಕೈಗೆ ಬಂದವು.

ಚಿತ್ರ ಸೆರೆಹಿಡಿಯುವುದೇನೋ ಸುಲಭ ಸರಿ, ಆದರೆ ಚಿತ್ರ ತೆಗೆದಾದ ಮೇಲೆ ನೂರು ನೆಗೆಟಿವ್‌ಗಳನ್ನು ಇಟ್ಟುಕೊಂಡು ನಾವೇನು ಮಾಡೋಣ ಎಂದು ಕೇಳುವವರಿಗೂ ಈಸ್ಟ್‌ಮನ್ ಬಳಿ ಉತ್ತರ ಸಿದ್ಧವಿತ್ತು. ನೂರು ಚಿತ್ರಗಳಾದ ನಂತರ ಕ್ಯಾಮೆರಾವನ್ನು ನೆಗೆಟಿವ್ ಸಮೇತ ಕೊಡಕ್ ಸಂಸ್ಥೆಗೆ ಕಳುಹಿಸಿಬಿಟ್ಟರೆ ನೆಗೆಟಿವ್‌ಗಳನ್ನೆಲ್ಲ ಸಂಸ್ಕರಿಸಿ ಚಿತ್ರಗಳನ್ನು ಪ್ರಿಂಟುಹಾಕುವ ಕೆಲಸವನ್ನು ಅವರೇ ಮಾಡುತ್ತಿದ್ದರು; ಅಷ್ಟೇ ಅಲ್ಲ, ಕ್ಯಾಮೆರಾಗೆ ಇನ್ನಷ್ಟು ನೆಗೆಟಿವ್‌ಗಳನ್ನು ತುಂಬಿ ಮರಳಿಸುತ್ತಲೂ ಇದ್ದರು.

ಹೆಚ್ಚೂಕಡಿಮೆ ಇದೇ ಸಮಯದಲ್ಲಿ ನಮಗೆಲ್ಲ ಪರಿಚಯವಿರುವ ರೂಪದ ಫಿಲಂ ರೋಲ್ ಆವಿಷ್ಕಾರವೂ ಆಗಿತ್ತು. ಕಾಗದದ ನೆಗೆಟಿವ್ ಸುರುಳಿಗಳ ಬದಲಿಗೆ ಕೊಡಕ್ ಸಂಸ್ಥೆ ಬಹುಬೇಗ ಇಂತಹ (ಪ್ಲಾಸ್ಟಿಕ್ ಹಾಳೆಯ ಮೇಲಿನ) ನೆಗೆಟಿವ್‌ಗಳನ್ನು ಬಳಸಲು ಪ್ರಾರಂಭಿಸಿತು; ಜನಸಾಮಾನ್ಯರ ಪಾಲಿಗೆ ಛಾಯಾಗ್ರಹಣ ಇನ್ನಷ್ಟು ಸರಳವಾಯಿತು. ೧೯೦೦ರ ಸುಮಾರಿಗೆ ಪರಿಚಯವಾದ ಸುಲಭ ಬೆಲೆಯ 'ಬ್ರೌನಿ' ಕ್ಯಾಮೆರಾದಲ್ಲಿ ಫಿಲಂ ರೋಲುಗಳನ್ನು ಬಳಕೆದಾರರೇ ಬದಲಿಸಿಕೊಳ್ಳುವ ಅವಕಾಶವಿತ್ತು. ಹಾಗಾಗಿ ಅಂದಿನಿಂದ ನೆಗೆಟಿವ್ ಸಂಸ್ಕರಣೆಗೆಂದು ಇಡಿಯ ಕ್ಯಾಮೆರಾವನ್ನೇ ಲ್ಯಾಬಿಗೆ ಕಳುಹಿಸಬೇಕಾದ ಅನಿವಾರ್ಯತೆಯೂ ತಪ್ಪಿತು.

೨೦ನೇ ಶತಮಾನದ ಪ್ರಾರಂಭದ ವೇಳೆಗಾಗಲೇ ಕೊಡಕ್ ಸಂಸ್ಥೆ ಛಾಯಾಗ್ರಹಣದ ಕ್ಷೇತ್ರದಲ್ಲಿ ಹೆಚ್ಚೂಕಡಿಮೆ ಏಕಸ್ವಾಮ್ಯವನ್ನೇ ಸಾಧಿಸಿಬಿಟ್ಟಿತ್ತು. ಛಾಯಾಗ್ರಹಣದಲ್ಲಿ ಕಪ್ಪು-ಬಿಳುಪಿನ ಯುಗ ಮುಗಿದು ವರ್ಣಚಿತ್ರಗಳ ಕಾಲ ಶುರುವಾದಾಗಲೂ ಫೋಟೋ ಪ್ರಪಂಚ ಕೊಡಕ್‌ನ ಮುಂದಾಳತ್ವದಲ್ಲೇ ಮುಂದುವರೆಯಿತು. ೧೯೭೫ನೇ ಇಸವಿಯಲ್ಲಿ ಮೊತ್ತಮೊದಲ ಡಿಜಿಟಲ್ ಕ್ಯಾಮೆರಾ ಕೂಡ ಕೊಡಕ್ ಸಂಸ್ಥೆಯಲ್ಲೇ ತಯಾರಾಯಿತು!

ಈ ಆವಿಷ್ಕಾರವಾದ ಸಮಯದಲ್ಲಿ ಕೊಡಕ್ ಸಂಸ್ಥೆ ರೀಲ್ ಕ್ಯಾಮೆರಾ ಮಾರುಕಟ್ಟೆಯ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿತ್ತು. ಅಮೆರಿಕಾದಲ್ಲಂತೂ ಕ್ಯಾಮೆರಾ ಮತ್ತು ಫಿಲಂ ರೀಲ್ ಮಾರುಕಟ್ಟೆಯ ಶೇ. ೯೦ರಷ್ಟು ಭಾಗ ಕೊಡಕ್ ಹಿಡಿತದಲ್ಲಿತ್ತು. ಅಂತಹ ಪರಿಸ್ಥಿತಿಯಿದ್ದುದರಿಂದಲೋ ಏನೋ ಕೊಡಕ್ ಸಂಸ್ಥೆ ಡಿಜಿಟಲ್ ಕ್ಯಾಮೆರಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಎಂದು ತೋರುತ್ತದೆ.

ಮುಂದೆ ಫೋಟೋಗ್ರಫಿ ಲೋಕದ ಪರಿಸ್ಥಿತಿ ಬದಲಾದಾಗ ತನ್ನ ಸ್ಟಾರ್ ಪಟ್ಟ ಉಳಿಸಿಕೊಳ್ಳುವುದು ಕೊಡಕ್‌ಗೆ ಸಾಧ್ಯವಾಗಲಿಲ್ಲ; ಡಿಜಿಟಲ್ ಉತ್ಪನ್ನಗಳತ್ತ ಮುಖಮಾಡಲು ಪ್ರಯತ್ನಿಸಿದರೂ ಆ ಪ್ರಯತ್ನದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಹೀಗಾಗಿ ನಿಧಾನಕ್ಕೆ ನೇಪಥ್ಯಕ್ಕೆ ಸರಿದ ಕೊಡಕ್ ಸಂಸ್ಥೆ ೨೦೧೨ರಲ್ಲಿ ತಾನು ದಿವಾಳಿಯೆಂದು ಘೋಷಿಸಿಕೊಂಡಿತು, ಅಲ್ಲಿಗೆ ಛಾಯಾಗ್ರಹಣ ಇತಿಹಾಸದ ಒಂದು ಮಹತ್ವದ ಅಧ್ಯಾಯವೂ ಕೊನೆಯಾಯಿತು.

ಜುಲೈ ೨೬, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ; ಮೂರು ಭಾಗಗಳ ಸರಣಿಯ ಅಂತಿಮ ಕಂತು

ಕಾಮೆಂಟ್‌ಗಳಿಲ್ಲ:

badge