ಭಾನುವಾರ, ಜುಲೈ 7, 2013

ಮೌಸ್ ಜನಕನ ನೆನಪಿನಲ್ಲಿ

ಟಿ. ಜಿ. ಶ್ರೀನಿಧಿ

ವಿಕಿಪೀಡಿಯಾ ಚಿತ್ರ
ಕಂಪ್ಯೂಟರ್ ಬಳಕೆದಾರರೆಲ್ಲರ ಅಚ್ಚುಮೆಚ್ಚಿನ ಸಂಗಾತಿಯೆಂದರೆ ಮೌಸ್. ಅದಿಲ್ಲದೆ ಕಂಪ್ಯೂಟರ್ ಬಳಸುವುದನ್ನು ನಮ್ಮಲ್ಲಿ ಅನೇಕರಿಗೆ ಕಲ್ಪಿಸಿಕೊಳ್ಳುವುದೂ ಕಷ್ಟವೇ. ಕಂಪ್ಯೂಟರ್ ಸಾಧನಗಳ ಪೈಕಿ ಮೌಸ್ ಗಳಿಸಿಕೊಂಡಿರುವ ಜನಪ್ರಿಯತೆ ಅಂಥದ್ದು. ಈವರೆಗೆ ಪ್ರಪಂಚದಲ್ಲಿ ನೂರು ಕೋಟಿಗೂ ಹೆಚ್ಚು ಸಂಖ್ಯೆಯ ಮೌಸ್‌ಗಳು ಮಾರಾಟವಾಗಿವೆಯಂತೆ.

ಆದರೆ ಕಂಪ್ಯೂಟರ್ ಪ್ರಪಂಚದ ವೈಚಿತ್ರ್ಯ ನೋಡಿ, ಇಲ್ಲಿನ ಆವಿಷ್ಕಾರಗಳು ಅದೆಷ್ಟೇ ಜನಪ್ರಿಯವಾದರೂ ಅವುಗಳನ್ನು ಸೃಷ್ಟಿಸಿದವರಿಗೆ ಹೇಳಿಕೊಳ್ಳುವಂತಹ ಪ್ರಸಿದ್ಧಿ ಬಂದಿರುವುದೇ ಇಲ್ಲ. ಕಂಪ್ಯೂಟರ್ ಮೌಸ್ ಸೃಷ್ಟಿಸಿದವರು ಯಾರು ಎಂದು ಕೇಳಿದರೆ ನಮ್ಮಲ್ಲಿ ಬಹುತೇಕರಿಗೆ ಅದರ ಉತ್ತರ ಗೊತ್ತಿರಲಿಕ್ಕಿಲ್ಲ.

ಈ ಪ್ರಶ್ನೆಗೆ ಉತ್ತರರೂಪವಾಗಿದ್ದ ವಿಜ್ಞಾನಿಯ ಹೆಸರು ಡಗ್ಲಸ್ ಎಂಗೆಲ್‌ಬಾರ್ಟ್. ಬರಿಯ ಮೌಸ್ ಅಷ್ಟೇ ಅಲ್ಲ, ಇಂದು ಕಂಪ್ಯೂಟರ್ ಪ್ರಪಂಚದ ಅವಿಭಾಜ್ಯ ಅಂಗಗಳಾಗಿರುವ ಅನೇಕ ಆವಿಷ್ಕಾರಗಳ ಹಿಂದೆ ಅವರ ಪರಿಶ್ರಮವಿತ್ತು. ಒಂದು ಅರ್ಥದಲ್ಲಿ ನೋಡಿದರೆ ಕಂಪ್ಯೂಟರ್ ಪ್ರಪಂಚದ ಬೆಳೆವಣಿಗೆಯನ್ನು ದಶಕಗಳಷ್ಟು ಹಿಂದೆಯೇ ಅಂದಾಜಿಸಿ ಆ ನಿಟ್ಟಿನಲ್ಲಿ ಕೆಲಸಮಾಡಿದ ಕೀರ್ತಿಯೂ ಅವರಿಗೇ ಸಲ್ಲಬೇಕು. ಕೋಣೆಗಾತ್ರದ ಕಂಪ್ಯೂಟರುಗಳ, ಪಂಚ್ಡ್ ಕಾರ್ಡುಗಳ ಕಾಲದಲ್ಲೇ ಇಂದಿನ ಐಟಿ ಜಗತ್ತನ್ನು ಮುಂಗಾಣಲು ಅವರಿಗೆ ಸಾಧ್ಯವಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿ.

ಅದು ೧೯೬೮ನೇ ಇಸವಿ. ಆ ವರ್ಷ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಕಂಪ್ಯೂಟರ್ ತಂತ್ರಜ್ಞಾನ ಸಮ್ಮೇಳನದಲ್ಲಿ ಎಂಗೆಲ್‌ಬಾರ್ಟ್ ನಡೆಸಿಕೊಟ್ಟ ಪ್ರಾತ್ಯಕ್ಷಿಕೆಯನ್ನು (ಡೆಮೋ) ಐಟಿ ಜಗತ್ತಿನಲ್ಲಿ ಇನ್ನೂ "ಮದರ್ ಆಫ್ ಆಲ್ ಡೆಮೋಸ್" ಎಂದೇ ಗುರುತಿಸಲಾಗುತ್ತದೆ. ಮೊತ್ತಮೊದಲ ಬಾರಿಗೆ ಕಂಪ್ಯೂಟರ್ ಮೌಸ್ ಪರಿಚಯವಾದದ್ದು ಅದೇ ಸಂದರ್ಭದಲ್ಲಿ.

ಎಂಗೆಲ್‌ಬಾರ್ಟ್ ಪ್ರದರ್ಶಿಸಿದ ಮೊದಲ ಮೌಸ್ ಅನ್ನು ಮರದಿಂದ ತಯಾರಿಸಲಾಗಿತ್ತು. ಈ ಸಾಧನದ ತಳದಲ್ಲಿ ಎರಡು ಗಾಲಿಗಳಿದ್ದರೆ, ಮೇಲ್ಭಾಗದಲ್ಲಿ ಒಂದೇ ಒಂದು ಕೆಂಪು ಬಣ್ಣದ ಗುಂಡಿ ಇತ್ತು. ಎಂಗೆಲ್‌ಬಾರ್ಟ್‌ನ ಸಹೋದ್ಯೋಗಿಗಳಿಗೆ ಈ ವಿಚಿತ್ರ ಯಂತ್ರ ಇಲಿಯಂತೆ ಕಂಡಿದ್ದರಿಂದ ಅವರು ಅದನ್ನು ಮೌಸ್ ಎಂದು ಕರೆದರು ಎನ್ನುವುದು ಪ್ರತೀತಿ.

ಅಂದಹಾಗೆ ಎಂಗೆಲ್‌ಬಾರ್ಟ್ ಸಾಧನೆ ಬರಿಯ ಮೌಸ್ ಸೃಷ್ಟಿಗಷ್ಟೇ ಸೀಮಿತವಾಗಿರಲಿಲ್ಲ. ಈಗಿನ ಕಂಪ್ಯೂಟರ್ ವ್ಯವಸ್ಥೆಗಳೆಲ್ಲವುದರ ಜೀವಾಳವಾಗಿರುವ ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ (ಜಿಯುಐ) ಇದೆಯಲ್ಲ, ಅದರ ಮೂಲ ಕಲ್ಪನೆಯೂ ಎಂಗೆಲ್‌ಬಾರ್ಟ್ ಕಡೆಯಿಂದಲೇ ಬಂದದ್ದು. ಪಠ್ಯರೂಪದ ಆದೇಶಗಳ ಬದಲಿಗೆ ಮೌಸ್ ಕ್ಲಿಕ್‌ಗಳಿಂದ ಕಂಪ್ಯೂಟರಿಗೆ ಆದೇಶ ನೀಡುವುದು ಈ ವ್ಯವಸ್ಥೆಯಿಂದಾಗಿ ಸಾಧ್ಯವಾಯಿತು.

ಹಾಗೆಯೇ ಜಾಲತಾಣದಲ್ಲೋ ಇನ್ನಾವುದೋ ಕಡತದಲ್ಲೋ ಇರುವ ಮಾಹಿತಿಯ ಒಂದು ತುಣುಕು ಇನ್ನಷ್ಟು ಮಾಹಿತಿಗೆ ಹೈಪರ್‌ಲಿಂಕ್ ಮೂಲಕ ಸಂಪರ್ಕನೀಡುವ 'ಹೈಪರ್‌ಟೆಕ್ಸ್ಟ್' ಪರಿಕಲ್ಪನೆಯನ್ನು ಮೊದಲಿಗೆ ರೂಪಿಸಿದ್ದೂ ಇದೇ ಎಂಗೆಲ್‌ಬಾರ್ಟ್. ಮುಂದೆ ಈ ಕಲ್ಪನೆ ವಿಶ್ವವ್ಯಾಪಿ ಜಾಲದ ಮೂಲಕ ಅಪಾರ ಸಾಧ್ಯತೆಗಳನ್ನು ತೆರೆದಿಟ್ಟಿದ್ದು ಕಂಪ್ಯೂಟರ್ ಇತಿಹಾಸದಲ್ಲೇ ಒಂದು ಮಹತ್ವದ ಮೈಲಿಗಲ್ಲು. ಕಂಪ್ಯೂಟರ್ ಜಾಲಗಳ (ನೆಟ್‌ವರ್ಕ್) ಬೆಳವಣಿಗೆಯ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡಿದ್ದ ಎಂಗೆಲ್‌ಬಾರ್ಟ್ ಇಂದಿನ ಅಂತರಜಾಲದ ಪೂರ್ವಜ 'ಅರ್ಪಾನೆಟ್' ಬಗೆಗೂ ಸಾಕಷ್ಟು ಕೆಲಸಮಾಡಿದ್ದರು.

ಇವಿಷ್ಟೇ ಅಲ್ಲದೆ ಇಮೇಲ್‌ನ ಪ್ರಾರಂಭಿಕ ಅವತಾರಗಳಿಂದ ಹಿಡಿದು ಮೊದಲ ಪದಸಂಸ್ಕಾರಕ ತಂತ್ರಾಂಶಗಳವರೆಗೆ ಎಂಗೆಲ್‌ಬಾರ್ಟ್ ಕೆಲಸದ ಛಾಪು ಅನೇಕ ಕ್ಷೇತ್ರಗಳಲ್ಲಿತ್ತು. ವೀಡಿಯೋ ಹಾಗೂ ಟೆಲಿಕಾನ್ಫರೆನ್ಸ್ ತಂತ್ರಜ್ಞಾನದ ಮೇಲೂ ಅವರು ಕೆಲಸಮಾಡಿದ್ದರಂತೆ. ಮೌಸ್ ಪರಿಚಯವಾದ ೧೯೬೮ರ ಅದೇ ಸಮ್ಮೇಳನದ ಸಂದರ್ಭದಲ್ಲಿ ಎಂಗೆಲ್‌ಬಾರ್ಟ್ ಮೊದಲ ವೀಡಿಯೋ ಟೆಲಿಕಾನ್ಫರೆನ್ಸನ್ನೂ ನಡೆಸಿಕೊಟ್ಟಿದ್ದರು.

ಹೀಗಿದ್ದರೂ ಎಂಗೆಲ್‌ಬಾರ್ಟ್‌ಗೆ ಅತ್ಯಂತ ಹೆಚ್ಚಿನ ಹೆಸರು ತಂದುಕೊಟ್ಟದ್ದು ಮೌಸ್ ಆವಿಷ್ಕಾರವೇ. ಆದರೆ ಅವರಿಗೆ ಮೌಸ್‌ನಿಂದ ಹೆಚ್ಚಿನ ಹಣವೇನೂ ಸಿಗಲಿಲ್ಲ. ಮೌಸ್ ವ್ಯಾಪಕವಾಗಿ ಬಳಕೆಗೆ ಬರುವಷ್ಟರಲ್ಲೇ ಅವರ ಪೇಟೆಂಟ್ ಕಾಲಮಿತಿ ಮುಗಿದುಹೋದದ್ದು ಇದಕ್ಕೆ ಪ್ರಮುಖ ಕಾರಣ ಎನ್ನಬಹುದು.

ಎಂಗೆಲ್‌ಬಾರ್ಟ್‌ರಿಗೆ ಸಿಕ್ಕ ಪ್ರಶಸ್ತಿ-ಗೌರವಗಳೂ ಬೆರಳೆಣಿಕೆಯಷ್ಟು ಮಾತ್ರವೇ. ಅವುಗಳ ಸಾಲಿನಲ್ಲಿ ಲೆಮೆಲ್‌ಸನ್-ಎಂಐಟಿ ಬಹುಮಾನ (೧೯೯೭), ನ್ಯಾಷನಲ್ ಮೆಡಲ್ ಆಫ್ ಟೆಕ್ನಾಲಜಿ (೨೦೦೦) ಮೊದಲಾದವನ್ನು ಹೆಸರಿಸಬಹುದು.

೧೯೨೫ರಲ್ಲಿ ಅಮೆರಿಕಾದ ಪೋರ್ಟ್‌ಲೆಂಡಿನಲ್ಲಿ ಜನಿಸಿದ ಡಗ್ಲಸ್ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಸ್ಟಾನ್‌ಫರ್ಡ್ ರೀಸರ್ಚ್ ಇನ್ಸ್‌ಟಿಟ್ಯೂಟ್ ಮುಂತಾದೆಡೆಗಳಲ್ಲಿ ಕೆಲಸಮಾಡಿದ್ದರು. ೧೯೭೦-೮೦ರ ದಶಕದಿಂದೀಚೆಗೆ ನಿಧಾನಕ್ಕೆ ನೇಪಥ್ಯಕ್ಕೆ ಸರಿದಿದ್ದ ಎಂಗೆಲ್‌ಬಾರ್ಟ್ ಜುಲೈ ಪ್ರಾರಂಭದಲ್ಲಿ ನಿಧನರಾದರು.

ನಮ್ಮೆಲ್ಲರ ನೆಚ್ಚಿನ ಸಂಗಾತಿಯಾಗಿ ಬೆಳೆದುಬಂದಿರುವ ಕಂಪ್ಯೂಟರ್ ಮೌಸ್ ಸೃಷ್ಟಿಕರ್ತನಿಗೆ ಕಂಪ್ಯೂಟರ್ ಬಳಕೆದಾರರೆಲ್ಲರ ಪರವಾಗಿ ಹೃತ್ಪೂರ್ವಕ ಶ್ರದ್ಧಾಂಜಲಿ.
ಕವಲುದಾರಿಯಲ್ಲಿ ಮೌಸ್ ನಡಿಗೆ
ಈಚಿನ ವರ್ಷಗಳಲ್ಲಿ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿದಂತೆ ಕಂಪ್ಯೂಟರ್ ಮೌಸ್‌ಗೆ ಹಲವಾರು ಬದಲಿಗಳು ತಯಾರಾಗಿವೆ. ಸ್ಪರ್ಷವನ್ನು ಗ್ರಹಿಸಿ ಕೆಲಸಮಾಡುವ ಟಚ್ ಸ್ಕ್ರೀನ್ ತಂತ್ರಜ್ಞಾನವಂತೂ ಬಹಳ ಸಾಮಾನ್ಯವಾಗಿಹೋಗಿದೆ. ಮುಖಭಾವ, ಕಣ್ಣಿನ ದೃಷ್ಟಿ, ಹಾವಭಾವಗಳನ್ನು ಗ್ರಹಿಸಿ ಕೆಲಸಮಾಡುವ ಸಾಧನಗಳೂ ತಯಾರಾಗುತ್ತಿವೆ. 
ಇವೆಲ್ಲ ಘಟನೆಗಳು ಮೌಸ್‌ನ ಅಂತ್ಯಕಾಲ ಸಮೀಪಿಸಿರುವುದರ ಸೂಚನೆಗಳು ಎಂದು ತಜ್ಞರು ಹೇಳುತ್ತಾರೆ. ಕಳೆದ ಐದಾರು ವರ್ಷಗಳಲ್ಲಿ ಕಾಣದಂತೆ ಮಾಯವಾದ ಫ್ಲಾಪಿಗಳ ಹಾಗೆಯೇ ಮೌಸ್ ಕೂಡ ಮುಂಬರುವ ವರ್ಷಗಳಲ್ಲಿ ಅಪರೂಪವಾಗಲಿದೆ ಎನ್ನುವುದು ಅವರ ಅಭಿಪ್ರಾಯ. 
ಹೀಗಿದ್ದರೂ ವರ್ಷಾನುಗಟ್ಟಲೆ ಮೌಸ್ ಬಳಸಿಕೊಂಡು ಆ ಮೂಷಿಕ ಮಹಾಶಯನೊಡನೆ ವಿಶೇಷ ಸಂಬಂಧವನ್ನೇ ಬೆಳೆಸಿಕೊಂಡಿರುವವರಿಗೆ ಈ ಯಾವುದೇ ಪರ್ಯಾಯ ಮಾರ್ಗಗಳೂ ಅಷ್ಟಾಗಿ ಹಿಡಿಸಿಲ್ಲ. ಎಂಥ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಲ್ಯಾಪ್‌ಟಾಪ್ ಹೊಂದಿರುವವರಾದರೂ ಸರಿಯೆ, ಕೀಬೋರ್ಡ್‌ನ ಸಕಲ ಶಾರ್ಟ್‌ಕಟ್ ಕೀಲಿಗಳನ್ನು ಕರಗತ ಮಾಡಿಕೊಂಡಿರುವವರಾದರೂ ಸರಿಯೆ, ಮೌಸ್ ಇಲ್ಲದ ಗಣಕದ ಕಲ್ಪನೆ ಬಹುತೇಕರಿಗೆ ಇನ್ನೂ ಪಥ್ಯವಾಗಿಲ್ಲ. ಇದೇ ಕಾರಣವೋ ಏನೋ ಮಾರುಕಟ್ಟೆಯಲ್ಲಿ ಮೌಸ್ ಬೇಡಿಕೆ ಕಡಿಮೆಯಾಗಿಲ್ಲ, ಜನ ಅಷ್ಟು ಸುಲಭವಾಗಿ ಈ ಸಾಧನದ ಮೇಲಿಂದ ಕೈತೆಗೆಯುವಂತೆ ಕಾಣುತ್ತಿಲ್ಲ! ಇದಾವುದರ ಬಗೆಗೂ ತಲೆಕೆಡಿಸಿಕೊಳ್ಳದ ಮೌಸ್ ಮಾತ್ರ ಅಸಂಖ್ಯಾತ ಕ್ಲಿಕ್ಕುಗಳ ನಡುವೆ ತನ್ನ ಅಸ್ತಿತ್ವದ ನಾಲ್ಕು ದಶಕಗಳನ್ನು ಪೂರೈಸಿ ಮುನ್ನಡೆದಿದೆ.
ಜುಲೈ ೭, ೨೦೧೩ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge