ಸೋಮವಾರ, ಜುಲೈ 15, 2013

ದೈತ್ಯಪ್ರತಿಭೆಗಳ ಹೆಗಲ ಮೇಲೆ

ಖ್ಯಾತ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ 'ದೈತ್ಯಪ್ರತಿಭೆಗಳ ಹೆಗಲ ಮೇಲೆ', ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ. ಈ ಪುಸ್ತಕದ ಪರಿಚಯ ಇಲ್ಲಿದೆ. 

ಟಿ. ಎಸ್. ಗೋಪಾಲ್

ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾದ ನನ್ನನ್ನು ಮೊದಲಿನಿಂದಲೂ ಬಹುವಾಗಿ ಆಕರ್ಷಿಸಿದ ಪ್ರಕಾರವೆಂದರೆ ಗದ್ಯಸಾಹಿತ್ಯ. ವಡ್ಡಾರಾಧನೆಯ ಶಿವಕೋಟ್ಯಾಚಾರ್ಯನಿಂದ ಮುದ್ದಣನವರೆಗೆ, ಗಳಗನಾಥ, ವಾಸುದೇವಾಚಾರ್ಯರಿಂದ ಮೂರ್ತಿರಾಯರವರೆಗೆ, ಕುವೆಂಪುರವರಿಂದ ದೇವನೂರು, ಕುಂವೀವರೆಗೂ ವಿಸ್ತರಿಸಿಕೊಂಡಿರುವ ಈ ಸಾಹಿತ್ಯಲೋಕ ಕನ್ನಡವನ್ನು ಬಹುಶ್ರೀಮಂತವಾಗಿಸಿದೆ. ಬೆಳ್ಳ್ಳಾವೆ, ಶಿವರಾಮ ಕಾರಂತ, ಜಿ.ಟಿ.ನಾರಾಯಣರಾವ್, ಬಿ.ಜಿ.ಎಲ್.ಸ್ವಾಮಿಯಂತಹವರಿಂದ ಆಧುನಿಕರಿಗೆ ತೆರೆದುಕೊಂಡ ಕನ್ನಡ ವಿಜ್ಞಾನಸಾಹಿತ್ಯವೂ ಇದೇ ಜಾಡುಹಿಡಿದು ಜನಪ್ರಿಯವೂ ಜ್ಞಾನಬೋಧಕವೂ ಆಗಿರುವುದೊಂದು ವಿಶೇಷವೇ.

ಈಚಿನ ದಶಕಗಳಲ್ಲಿ ದಿನಪತ್ರಿಕೆಗಳೂ ನಿಯತಕಾಲಿಕೆಗಳೂ ವಿಜ್ಞಾನಸಾಹಿತ್ಯವನ್ನು ನಿಯಮಿತ ಅಂಕಣಗಳ ಮೂಲಕವೂ ಜನಪ್ರಿಯ ಲೇಖನಗಳ ಮೂಲಕವೂ ಪ್ರಚುರಪಡಿಸಹೊರಟಿರುವುದೂ ಸ್ವಾಗತಾರ್ಹವೇ. ಇಂತಹ ಬರಹಗಳ ಮೂಲಕ ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಿಗಿಲಾದ ಸೇವೆ ಸಲ್ಲಿಸುತ್ತಿರುವ ನಾಗೇಶ ಹೆಗಡೆ, ಹಾಲ್ದೊಡ್ಡೇರಿ, ಕೊಳ್ಳೇಗಾಲ ಶರ್ಮ, ಹೆಚ್ಚಾರ್ಕೆ ಮೊದಲಾದ ಮಹನೀಯರ ಸಾಲಿಗೆ ಟಿ.ಆರ್. ಅನಂತರಾಮುರವರೂ ಸೇರುತ್ತಾರೆ.

ಅನಂತರಾಮುರವರ ಬರಹ ಮೊದಲಿಗೆ ನನ್ನ ಗಮನ ಸೆಳೆದದ್ದು ಎಂಬತ್ತರ ದಶಕದಲ್ಲಿ ಪ್ರಕಟವಾದ ಅವರ 'ಹಿಮದ ಸಾಮ್ರಾಜ್ಯದಲ್ಲಿ' ಪುಸ್ತಕದ ಮೂಲಕ. ವಿಜ್ಞಾನದ ಬರಹ, ಶೈಲಿ ಇತರ ಜನಪ್ರಿಯ ಗದ್ಯಪ್ರಕಾರಗಳಂತೆ ಆಕರ್ಷಕವಾಗಿರಬಹುದೆಂದು ನನಗೆ ಈ ಪುಸ್ತಕ ತೋರಿಸಿಕೊಟ್ಟಿತು. ಇದೇ ಆಸಕ್ತಿಯಿಂದ ಅವರ ಈಚಿನ ಕೃತಿ 'ದೈತ್ಯಪ್ರತಿಭೆಗಳ ಹೆಗಲ ಮೇಲೆ' ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಲು ತೊಡಗಿದಾಗ ಮೊದಲ ಅಧ್ಯಾಯವೇ ಅಚ್ಚರಿ ಮೂಡಿಸಿತು. ಇದೇನು ಗಂಭೀರವಿಜ್ಞಾನದ ಬರಹವೋ ಮತ್ತೇನೋ ಅನ್ನಿಸುವಂತಾಯಿತು.
ಇಲ್ಲಿನ ಸಾರಂಗಿ, ಹೆಸರಾಂತ ಹಾಸ್ಯಬರಹಗಾರ ಕೇಫರ ಕಥೆಗಳಲ್ಲಿ ಬರುವ ಶೌರಿಯಂತಹ ಪಾತ್ರವೇ ಅನ್ನಿಸಿತು. ಬರವಣಿಗೆಯೂ ಕೇಫರ ಶೈಲಿಯಂತೆಯೇ ಹಲವು ವಿಷಯಗಳನ್ನು ಒಟ್ಟಿಗೇ ಪ್ರಸ್ತಾಪಿಸುತ್ತಾ ಯಾವುದೋ ತೀರ್ಮಾನಕ್ಕೆ ಒಯ್ಯುವಂತೆ ತೋರತೊಡಗಿತು. ಆದರೆ, ಅನಂತರಾಮು ಕೇಫರಂತೆ ಹಾಸ್ಯಲೇಖನದಲ್ಲಿ ತೊಡಗಿದವರೂ ಅಲ್ಲ, (ಬಿಜಿಎಲ್) ಸ್ವಾಮಿಯವರಂತೆ ವಿಜ್ಞಾನವಿನೋದಸಮನ್ವಯದಲ್ಲ್ಲಿ ನಮ್ಮನ್ನು ತೇಲಿಸುವವರೂ ಅಲ್ಲ. ಜೀವಶಾಸ್ತ್ರದ ಸಂಶೋಧನೆಯ ಸೂಕ್ಷ್ಮಗಳನ್ನು ನಮ್ಮ ಅರಿವಿಗೆ ತರುತ್ತಲೇ ಆಯಾ ಸಂಶೋಧಕರಿಗೆ ಮನುಕುಲ ಕೃತಜ್ಞವಾಗಿರಬೇಕಾದುದೇಕೆ ಎನ್ನುವುದನ್ನು ನಮ್ಮ ಮನದಾಳಕ್ಕೆ ಮುಟ್ಟಿಸುವ ಗಂಭೀರ ಕರ್ತವ್ಯದಲ್ಲಿ ತೊಡಗಿರುವ ಲೇಖಕರು ಸಾರಂಗಿಯ ಶಿಸ್ತುಬದ್ಧ ನಿರೂಪಣೆಯ ಮೂಲಕ ಈ ಮಹತ್ವದ ಉದ್ದೇಶದಲ್ಲಿ ಸಫಲರಾಗಿದ್ದಾರೆ.

ಸೂಕ್ಷ್ಮ ರೋಗಾಣುಗಳನ್ನು ಪತ್ತೆ ಹಚ್ಚುವುದರ ಜೊತೆಗೆ ಅವುಗಳನ್ನು ಗೆಲ್ಲುವ ಪ್ರತಿರೋಧಕ ಶಕ್ತಿಯನ್ನು ಮಾನವಕುಲಕ್ಕೆ ಕರುಣಿಸಿದ ಅನೇಕ ವಿಜ್ಞಾನಿ ಮಹಾನುಭಾವರನ್ನು  ಈ ಪುಸ್ತಕದಲ್ಲಿ ಅನಂತರಾಮು ಪರಿಚಯಿಸಿದ್ದಾರೆ. ಲೂಯಿ ಪ್ಯಾಶ್ಚರ್ ನಂತಹ ಒಬ್ಬಿಬ್ಬರನ್ನು ಹೊರತುಪಡಿಸಿ ಇಲ್ಲಿ ವರ್ಣಿತರಾದ ಮಹೋಪಕಾರಿಗಳನೇಕರ ಹೆಸರನ್ನೇ ನಾನೂ ನನ್ನಂಥ ಅನೇಕರೂ ಕೇಳಿರುವ ಸಾಧ್ಯತೆಯೇ ಇಲ್ಲ. ಮನುಕುಲದ ಉಳಿವಿಗೆ ಕಾರಣರಾದ ಈ ಪ್ರಾತಃಸ್ಮರಣೀಯ ಜೀವಿವಿಜ್ಞಾನಿಗಳನ್ನು ನಮಗೆ ಪರಿಚಯಿಸಿರುವುದೇ ಲೇಖಕರ ಉದ್ದೇಶದ ಸಾರ್ಥಕತೆಯಾಗಿದೆ. ಸಿಡುಬುಮಾರಿಗೆ ಲಸಿಕೆ ಕಂಡುಹಿಡಿದ ಎಡ್ವರ್ಡ್ ಜೆನ್ನರ್, ತಾನೇ ತಯಾರಿಸಿದ ಮಸೂರಗಳಿಂದ ಸೂಕ್ಷ್ಮಜೀವಿಗಳ ಲೋಕವನ್ನೇ ತೆರೆದಿಟ್ಟ ಲ್ಯುವೆನ್ ಹೋಕ್, ಸೂಕ್ಷ್ಮಜೀವಿಗಳ ಮೂಲವನ್ನು ಶೋಧಿಸಿದ ಸ್ಪೆಲನ್ಸಾನಿ, ಕ್ಷಯ, ಆಂಥ್ರಾಕ್ಸ್ ಗಳ ರೋಗಾಣುಗಳನ್ನು ಪತ್ತೆಹಚ್ಚಿದ ರಾಬರ್ಟ್ ಕಾಖ್, ರೋಗಾಣುಗಳನ್ನು ಭಕ್ಷಿಸುವ ಕಣಗಳನ್ನು ಕಂಡುಹಿಡಿದ ಮೆಷ್ನಿಕೋವ್, ಹಳದಿ ಜ್ವರದ ಮೂಲೋತ್ಪಾಟನೆಗೆ ಜೀವನವನ್ನೇ ಮುಡಿಪಾಗಿಟ್ಟ ವಾಲ್ಟರ್ ರೀಡ್, ರೇಬೀಸ್ ರೋಗಕ್ಕೆ ಚಿಕಿತ್ಸೆಯನ್ನು ರೂಪಿಸಿದ ಲೂಯಿ ಪ್ಯಾಶ್ಚರ್ ಮೊದಲಾದ ಶ್ರೇಷ್ಠರು ಈ ಪುಸ್ತಕದಲ್ಲಿ ವರ್ಣಿತರಾದವರಲ್ಲಿ ಸೇರಿದ್ದಾರೆ. ಪ್ರತಿಯೊಬ್ಬ ವಿಜ್ಞಾನಿಯ ಪರಿಚಯವೂ ಅತ್ಯಂತ ಸ್ಪಷ್ಟವೂ ವಿವರಣಾತ್ಮಕವೂ ಆಗಿದೆ. ಆಯಾ ವಿಜ್ಞಾನಿಯ ಸಂಶೋಧನೆಗೆ ಕಾರಣವಾದ ವಸ್ತು ಯಾವುದು, ಅದರ ಹಿನ್ನೆಲೆಯೇನು, ಈ ಸಂಶೋಧನೆಗೆ ಎದುರಾದ ತೊಡಕು ಆತಂಕಗಳು, ಆಗಿನ  ಸಮಾಜದ ಪ್ರತಿಕ್ರಿಯೆ, ಕಾಲೆಳೆಯುವ ಪ್ರವೃತ್ತಿ ಮೊದಲಾದವನ್ನು ಸಾವಧಾನವಾಗಿ ವಿವರಿಸುತ್ತಲೇ ಅನಂತರಾಮು ಈ ಎಲ್ಲ ಮಹನೀಯರು ಮನುಕುಲಕ್ಕೆ ನೀಡಿದ ಕೊಡುಗೆಯೇನು ಎಂಬುದನ್ನು ಅಚ್ಚುಕಟ್ಟಾಗಿ ಮನದಟ್ಟು ಮಾಡಿಸುತ್ತಾರೆ. ಇದೆಲ್ಲ ಯಾವುದೋ ಜೀವವಿಜ್ಞಾನದ ಸೂಕ್ಷ್ಮವಿಷಯಗಳ ಗೋಜಲಿನ ಮಂಡನೆ ಎಂದು ಸಾಮಾನ್ಯ ಓದುಗನಿಗೆ ಒಂದು ಕ್ಷಣವೂ ತೋರುವುದಿಲ್ಲ. ಜನಸಾಮಾನ್ಯರಿಗಾಗಿ  ಕ್ಲಿಷ್ಟವಿಷಯಗಳ ಸರಳವೂ ಸ್ವಾರಸ್ಯಕರವೂ ಆದ ನಿರೂಪಣೆ ಹೇಗಿರಬೇಕೆನ್ನುವುದಕ್ಕೆ ಈ ಪುಸ್ತಕ ನಿಸ್ಸಂಶಯವಾಗಿ ಉತ್ತಮ ಮಾದರಿಯಾಗಿದೆ.

ಒಬ್ಬ ವಿಜ್ಞಾನಿಯ ಸಂಶೋಧನೆಯನ್ನು ವಿಸ್ತರಿಸಿ ಆ 'ದೈತ್ಯಪ್ರತಿಭೆಯ  ಹೆಗಲ ಮೇಲೆ' ನಿಂತು ಮತ್ತೊಂದು ಮಹತ್ವದ ಸಂಶೋಧನೆಯಲ್ಲಿ  ತೊಡಗಿ ಯಶಸ್ವಿಯಾದ ವಿಜ್ಞಾನಿಗಳ ಕಥಾನಕವನ್ನು ಅನಂತರಾಮು ಇಲ್ಲಿ ನಿರೂಪಿಸಿದ್ದಾರೆ. ಹಾಗೆ ನೋಡಿದರೆ ಅವರದೂ 'ದೈತ್ಯಪ್ರತಿಭೆಗಳ ಹೆಗಲ ಮೇಲೆ' ನಿಲ್ಲುವ ಸಾಹಸವೇ. 'ವಿಜ್ಞಾನದ ಫಲವೇ ಇಷ್ಟು. ಎಲ್ಲರಿಗೂ ಅದನ್ನು ಬಳಸುವ ಸ್ವಾತಂತ್ರ್ಯವಿರುತ್ತದೆ. ಆದರೆ ಅದಕ್ಕೆ ಮೂಲವಾದವರನ್ನು ಕಾಲವೇ ಮರೆಸಿಬಿಡುತ್ತದೆ' ಎಂಬ ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತಲೇ, ಅಂತಹ ಹಲವು ಮಹಾನುಭಾವರನ್ನು ಸ್ಮರಿಸುವ ಸದವಕಾಶವನ್ನು  ಈ ಪುಸ್ತಕದ ಮೂಲಕ ಅನಂತರಾಮು ಕನ್ನಡಿಗರಿಗೆ ಕಲ್ಪಿಸಿಕೊಟ್ಟಿದ್ದಾರೆ.

ವಿಜ್ಞಾನಲೋಕದ ಹಲವು ಸ್ವಾರಸ್ಯಕರ ಸಂಗತಿಗಳನ್ನು ಲೇಖಕರು ಅಲ್ಲಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸುತ್ತಾರೆ. ಹೊಟ್ಟೆ ಹೊರೆಯಲು ಜ್ಯೋತಿಷ್ಯ ಹೇಳಿದ ಕೊಪರ್ನಿಕಸ್, ಹತ್ತು ಶತಕೋಟಿ ಸೂಕ್ಷ್ಮಜೀವಿಗಳಿಗೆ ಆಶ್ರಯ ನೀಡಿರುವ ಮನುಷ್ಯನ ಬಾಯಿ, ಮನುಷ್ಯನ ಮಲದ ದುರ್ವಾಸನೆ, ಬ್ಯಾಕ್ಟೀರಿಯಾಗೆ ಬಣ್ಣ ಬಳಿದ ಪಾಲ್ ಎರ್ಲಿಖ್, ಹಳದಿಜ್ವರದಿಂದ ಮನುಕುಲವನ್ನು ಪಾರುಮಾಡಲು ಪ್ರಯೋಗಪಶುವಾದ ಮೊರಾನ್ ಮತ್ತಿತರ ಅಜ್ಞಾತ ಯುವಕರು, ಹಾಲಿನ ಪಾಸ್ತರೀಕರಣದ ಮೂಲಪುರುಷ ಪ್ಯಾಶ್ಚರ್, ಅದೇ ಪ್ಯಾಶ್ಚರ್ ಹುಚ್ಚುನಾಯಿಯ ಜೊಲ್ಲು ಸಂಗ್ರಹಿಸಲು ಅದರ ಬಾಯಲ್ಲಿಟ್ಟ ಕೊಳವೆಯನ್ನು ತಾನೇ ಹೀರಲು ಮುಂದಾಗುವುದು- ಮೊದಲಾದ ಅನೇಕ ವಿಷಯಗಳು ಪುಸ್ತಕದುದ್ದಕ್ಕೂ ಗಮನಸೆಳೆಯುತ್ತವೆ.

ಇಡೀ ಕಥಾನಕದ ನಿರೂಪಕನಾದ ಸಾರಂಗಿ ನಡುವಿನ ಹಲವು ಅಧ್ಯಾಯಗಳಲ್ಲಿ ಪ್ರಾಸಂಗಿಕವಾಗಿಯೂ ಕಾಣಿಸಿಕೊಳ್ಳದಿರುವುದು ಸ್ವಲ್ಪ ವಿಚಿತ್ರವೆನಿಸುತ್ತದೆ.  ಕೊನೆಯ ಅಧ್ಯಾಯದಲ್ಲಿ ಲೇಖಕರು ಕಾಣಿಸುವ ಸಾರಂಗಿ ಧ್ಯಾನಮುದ್ರೆಯಲ್ಲಿರುತ್ತಾನೆ.  ಈ ಧ್ಯಾನದ ಉದ್ದೇಶವು, ಮನುಕುಲವನ್ನು ಅಪಾಯಕಾರಿ ರೋಗಗಳಿಂದ ಪಾರುಮಾಡಲು ವಿಜ್ಞಾನಿಗಳು ಯಾವ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಿದ್ದರೋ ಅವನ್ನೇ ಅಸ್ತ್ರಗಳನ್ನಾಗಿ ಬಳಸಿಕೊಂಡು ಮನುಷ್ಯಲೋಕವನ್ನು ನಾಶಮಾಡಲು ಹೊರಟಿರುವ  ಆಧುನಿಕ ರಾಕ್ಷಸರಿಂದ ಭೂಮಿಯನ್ನು ರಕ್ಷಿಸುವುದು ಹೇಗೆಂಬ ಚಿಂತೆಯ ರೂಪವಿರಬಹುದೇ ಎಂಬ ಪ್ರಶ್ನೆ ಲೇಖಕರನ್ನು ಕಾಡುತ್ತದೆ. ಈ ಹಂತದಲ್ಲಿ, ಧ್ಯಾನಮನಸ್ಕನಾಗಿರುವ 'ಸಾರಂಗಿ' ನಮ್ಮನಿಮ್ಮೆಲ್ಲರ ಪ್ರತಿರೂಪವೇ ಆಗಿರುವನೆಂಬ ಸತ್ಯದೆಡೆಗೆ ಲೇಖಕರು ನಮ್ಮ ಗಮನ ಸೆಳೆಯುವಂತೆ ತೋರುತ್ತದೆ. ಅನಂತರಾಮು ಅವರ ಬರಹ ಕೇವಲ ಪರಿಚಯಾತ್ಮಕವಾಗಿರದೆ ವೈಜ್ಞಾನಿಕ ಸಂಶೋಧನೆಗಳ  ಹಿನ್ನೆಲೆಯಲ್ಲಿ ಇತಿಹಾಸಕಾಲದಿಂದಲೂ ಬದಲಾಗುತ್ತ ಬಂದಿರುವ ಮಾನವನ ವರ್ತನೆ, ಅಂದಿನ ತ್ಯಾಗನಿಸ್ವಾರ್ಥತೆಗಳಿಂದ ದುರಾಸೆವಿನಾಶಗಳತ್ತ ಹೊರಳಿರುವ ಅಪಾಯವನ್ನು ಗುರುತಿಸುತ್ತದೆ. ಸೂಕ್ಷ್ಮಜೀವಿಗಳ ಲೋಕದ ಸಾಹಸಯಾನ  ಆಧುನಿಕ ಮಾನವನ ಮೂರ್ಖತನದಿಂದಾಗಿ ಮನುಕುಲದ ದುರಂತಕ್ಕೆ ಎಡೆಗೊಡಬಹುದಾದ ಸೂಚನೆಯನ್ನೂ ಧ್ವನಿಸುತ್ತದೆ.

ದೈತ್ಯಪ್ರತಿಭೆಗಳ ಹೆಗಲ ಮೇಲೆ
ಲೇಖಕರು: ಟಿ. ಆರ್. ಅನಂತರಾಮು
೧೮೫ ಪುಟಗಳು, ಬೆಲೆ ರೂ. ೧೧೦/-
ಪ್ರಕಾಶಕರು: ಸಪ್ನ ಬುಕ್ ಹೌಸ್, ಬೆಂಗಳೂರು

ಕಾಮೆಂಟ್‌ಗಳಿಲ್ಲ:

badge