ಮಂಗಳವಾರ, ಅಕ್ಟೋಬರ್ 9, 2012

ಕ್ಯಾಮೆರಾ ಕಾಗುಣಿತ: ಭಾಗ ೨


ಅಪರ್ಚರ್, ಎಕ್ಸ್‌ಪೋಶರ್, ಶಟರ್ ಸ್ಪೀಡ್, ಫೋಕಲ್ ಲೆಂತ್ - ಕ್ಯಾಮೆರಾ ಪ್ರಪಂಚವನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ಇಂತಹ ಪದಗಳ ಸಾಲುಸಾಲೇ ನಮ್ಮ ಕಿವಿಗೆ ಬೀಳುತ್ತವೆ. ಹೀಗೆ ಕೇಳಸಿಗುವ ಕೆಲ ಪದಗಳನ್ನು ಕಳೆದ ವಾರದ ಲೇಖನ ಪರಿಚಯಿಸಿತ್ತು. ಅಂತಹವೇ ಇನ್ನಷ್ಟು ಪದಗಳ ಪರಿಚಯ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಶಟರ್ ಸ್ಪೀಡ್: ಕ್ಯಾಮೆರಾದಲ್ಲಿ ಫೋಟೋ ದಾಖಲಾಗಬೇಕೆಂದರೆ ಒಂದಷ್ಟು ಬೆಳಕು ಅದರ ಸೆನ್ಸರ್ ಮೇಲೆ ಬೀಳಬೇಕು. ಕ್ಯಾಮೆರಾದ 'ಶಟರ್' ಬೆಳಕನ್ನು ಒಳಬಿಡುವ ಬಾಗಿಲಿನಂತೆ ಕೆಲಸಮಾಡುತ್ತದೆ. ಈ ಶಟರ್ ತೆರೆದುಕೊಂಡಿದ್ದಷ್ಟು ಹೊತ್ತು ಮಾತ್ರ ಸೆನ್ಸರ್ ಮೇಲೆ ಬೆಳಕು ಬೀಳುವುದು ಸಾಧ್ಯ. ಶಟರ್ ಎಷ್ಟು ಹೊತ್ತು ತೆರೆದುಕೊಂಡಿರುತ್ತದೆ ಎನ್ನುವುದನ್ನು ತೀರ್ಮಾನಿಸುವುದು ಕ್ಯಾಮೆರಾದ 'ಶಟರ್‌ಸ್ಪೀಡ್'.

ಶಟರ್‌ಸ್ಪೀಡನ್ನು ಸೆಕೆಂಡುಗಳಲ್ಲಿ ಅಳೆಯಲಾಗುತ್ತದೆ. ಅದನ್ನು ಸೆಕೆಂಡಿನ ಅದೆಷ್ಟೋ ಸಾವಿರದಲ್ಲೊಂದು ಭಾಗದಿಂದ ಪ್ರಾರಂಭಿಸಿ ಹಲವು ಸೆಕೆಂಡುಗಳವರೆಗೆ ಹೊಂದಿಸುವುದು ಸಾಧ್ಯ.
ಆದರೆ ನಾವೆಲ್ಲ ಸಾಮಾನ್ಯವಾಗಿ ಒಂದು ಸೆಕೆಂಡಿಗೂ ಕಡಿಮೆಯ ಶಟರ್‌ಸ್ಪೀಡನ್ನಷ್ಟೆ ಬಳಸುತ್ತೇವೆ. ಇದಕ್ಕೂ ಹೆಚ್ಚಿನ ಶಟರ್‌ಸ್ಪೀಡ್ ಬಳಸಿದರೆ ಕೆಲವು ಸ್ಪೆಶಲ್ ಇಫೆಕ್ಟ್ ಚಿತ್ರಗಳನ್ನು ತೆಗೆಯಬಹುದು; ಆದರೆ ಅಂತಹ ಸಂದರ್ಭಗಳಲ್ಲಿ ಟ್ರೈಪಾಡ್ ಬಳಸದಿದ್ದರೆ ನಮ್ಮ ಕೈಯ ಅಲುಗಾಟದಿಂದಾಗಿ ಚಿತ್ರ ಚೆನ್ನಾಗಿ ಮೂಡಿಬರುವುದು ಕಷ್ಟ. ಶಟರ್ ಸ್ಪೀಡನ್ನು ನಮಗೆ ಬೇಕಾದಷ್ಟು ಸಮಯಕ್ಕೆ ಹೊಂದಿಸಿಕೊಳ್ಳಲು ಆ ಸೌಲಭ್ಯವಿರುವ ಕ್ಯಾಮೆರಾಗಳಲ್ಲಿ 'ಶಟರ್ ಪ್ರಯಾರಿಟಿ' ಮೋಡ್ ಅನ್ನು ಬಳಸಬಹುದು.

ಸೆನ್ಸಿಟಿವಿಟಿ: ಕ್ಯಾಮೆರಾ ಎಷ್ಟು ಪರಿಣಾಮಕಾರಿಯಾಗಿ ಬೆಳಕನ್ನು ಗ್ರಹಿಸಬಲ್ಲದು ಎನ್ನುವುದನ್ನು ಅದರ 'ಸೆನ್ಸಿಟಿವಿಟಿ' ಸೂಚಿಸುತ್ತದೆ. ಇದನ್ನು ಐಎಸ್‌ಒ ಸೆನ್ಸಿಟಿವಿಟಿ ಎಂದೂ ಗುರುತಿಸಲಾಗುತ್ತದೆ; ಐಎಸ್‌ಒ ೧೦೦, ೨೦೦, ೪೦೦, ೮೦೦ ಮುಂತಾದ ಸಂಖ್ಯೆಗಳೆಲ್ಲ ಸೂಚಿಸುವುದು ಇದನ್ನೇ.

ಕ್ಯಾಮೆರಾದ ಸೆನ್ಸಿಟಿವಿಟಿಯನ್ನು ಹೆಚ್ಚಿಸುವ ಮೂಲಕ ಕಡಿಮೆ ಬೆಳಕಿನಲ್ಲೂ ಉತ್ತಮ ಛಾಯಾಚಿತ್ರಗಳನ್ನು ಪಡೆಯುವುದು ಸಾಧ್ಯ. ಕಡಿಮೆ ಬೆಳಕಿನಲ್ಲಿ ಫ್ಲ್ಯಾಶ್ ಇಲ್ಲದೆ ಚಿತ್ರಗಳನ್ನು ತೆಗೆಯಲು ಹಾಗೂ ಚಲನೆಯಲ್ಲಿರುವ ವಸ್ತುಗಳ ಸ್ಪಷ್ಟ ಚಿತ್ರವನ್ನು ಕ್ಲಿಕ್ಕಿಸುವಲ್ಲೂ ಇದು ಸಹಕಾರಿ. ಆದರೆ ಸೆನ್ಸಿಟಿವಿಟಿಯನ್ನು ತೀರಾ ಹೆಚ್ಚಿನ ಮಟ್ಟಕ್ಕೆ ಏರಿಸಿದಾಗ ನಾಯ್ಸ್ ಹಾವಳಿಯಿಂದಾಗಿ ಚಿತ್ರದ ಒಟ್ಟಾರೆ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಎಕ್ಸ್‌ಪೋಶರ್: ಕ್ಯಾಮೆರಾದ ಸೆನ್ಸರ್ ಮೇಲೆ ಬೀಳುವ ಬೆಳಕಿನ ಪ್ರಮಾಣವನ್ನು ಅದರ ಅಪರ್ಚರ್, ಹಾಗೂ ಆ ಬೆಳಕು ಎಷ್ಟು ಹೊತ್ತು ಬೀಳುತ್ತದೆ ಎನ್ನುವುದನ್ನು ಶಟರ್ ಸ್ಪೀಡ್ ನಿರ್ಧರಿಸುವುದು ಸರಿಯಷ್ಟೆ. ಇವೆರಡು ಅಂಶಗಳ ಜೊತೆಗೆ ಸೆನ್ಸಿಟಿವಿಟಿಯೂ ಸೇರಿ ಚಿತ್ರದ ಎಕ್ಸ್‌ಪೋಶರ್ ಹೇಗಿರುತ್ತದೆ ಎನ್ನುವುದು ತೀರ್ಮಾನವಾಗುತ್ತದೆ. ಇದನ್ನು ಎಕ್ಸ್‌ಪೋಶರ್ ವ್ಯಾಲ್ಯೂ (ಇವಿ) ಎನ್ನುವ ಸಂಖ್ಯೆ ಪ್ರತಿನಿಧಿಸುತ್ತದೆ.

ಆಟೋ ಮೋಡ್ ಬಳಸುವಾಗ ಎಲ್ಲ ಹೊಂದಾಣಿಕೆಗಳನ್ನೂ ಕ್ಯಾಮೆರಾ ತನ್ನಷ್ಟಕ್ಕೆ ತಾನೇ ಮಾಡಿಕೊಳ್ಳುತ್ತದಲ್ಲ, ಆಗ ಎಕ್ಸ್‌ಪೋಶರ್ ವ್ಯಾಲ್ಯೂವನ್ನು ಕೂಡ ಅದೇ ನಿರ್ಧರಿಸಿ ಅದಕ್ಕೆ ತಕ್ಕಂತೆ ಅಪರ್ಚರ್, ಶಟರ್‌ಸ್ಪೀಡ್ ಇತ್ಯಾದಿಗಳನ್ನೆಲ್ಲ ಹೊಂದಿಸಿಕೊಳ್ಳುತ್ತದೆ. ಇದರಲ್ಲಿ ಯಾವುದೇ ಅಂಶವನ್ನು ನಮ್ಮ ಇಷ್ಟಕ್ಕೆ ತಕ್ಕಂತೆ ಬದಲಿಸಿಕೊಂಡಾಗ ಕ್ಯಾಮೆರಾ ತನ್ನಷ್ಟಕ್ಕೆ ತಾನೇ ಮಿಕ್ಕ ಅಂಶಗಳನ್ನು ಮಾರ್ಪಡಿಸಿ ಎಕ್ಸ್‌ಪೋಶರ್ ವ್ಯಾಲ್ಯೂ ಬದಲಾಗದಂತೆ ನೋಡಿಕೊಳ್ಳುತ್ತದೆ.

ಕ್ಯಾಮೆರಾ ತೀರ್ಮಾನಿಸಿದ ಎಕ್ಸ್‌ಪೋಶರ್ ವ್ಯಾಲ್ಯೂ ಸರಿಯಿಲ್ಲ ಎನಿಸಿದಾಗ ಅದನ್ನು ನಾವೇ ಬದಲಿಸಿಕೊಳ್ಳುವ ಸೌಲಭ್ಯ ಕೆಲವು ಕ್ಯಾಮೆರಾಗಳಲ್ಲಿರುತ್ತದೆ. ಹೀಗೆ ಮಾಡಿಕೊಳ್ಳುವ ಬದಲಾವಣೆಯನ್ನು 'ಎಕ್ಸ್‌ಪೋಶರ್ ಕಾಂಪನ್ಸೇಶನ್' ಎಂದು ಕರೆಯುತ್ತಾರೆ.

ಫೋಕಲ್ ಲೆಂತ್: ಕ್ಯಾಮೆರಾ ಮುಂದಿನ ದೃಶ್ಯ ಫೋಟೋದಲ್ಲಿ ಹೇಗೆ ಸೆರೆಯಾಗುತ್ತದೆ ಎನ್ನುವುದನ್ನು ಕ್ಯಾಮೆರಾ ಲೆನ್ಸಿನ ಫೋಕಲ್ ಲೆಂತ್ ನಿರ್ಧರಿಸುತ್ತದೆ ಎನ್ನಬಹುದು.

ಫೋಕಲ್ ಲೆಂತ್ ಅನ್ನು ಮಿಲೀಮೀಟರುಗಳಲ್ಲಿ (ಎಂಎಂ) ಅಳೆಯುವುದು ವಾಡಿಕೆ. ಡಿಎಸ್‌ಎಲ್‌ಆರ್ ಲೆನ್ಸುಗಳಲ್ಲಿ ಕಾಣಸಿಗುವ ೧೮ಎಂಎಂ-೫೫ ಎಂಎಂ, ೭೦ಎಂಎಂ-೩೦೦ಎಂಎಂ ಮುಂತಾದ ಅಳತೆಗಳೆಲ್ಲ ಸೂಚಿಸುವುದು ಇದನ್ನೇ.

ಲೆನ್ಸಿನ ಫೋಕಲ್ ಲೆಂತ್ ಸಣ್ಣದಾಗಿದ್ದರೆ ಅದನ್ನು ಬಳಸಿ ದೊಡ್ಡ ಪ್ರದೇಶದ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಹೀಗಾಗಿಯೇ ಇಂತಹ ಲೆನ್ಸುಗಳನ್ನು ವೈಡ್ ಆಂಗಲ್ ಲೆನ್ಸ್ ಎಂದು ಗುರುತಿಸಲಾಗುತ್ತದೆ. ಲೆನ್ಸಿನ ಫೋಕಲ್ ಲೆಂತ್ ಹೆಚ್ಚಿಸಿಕೊಳ್ಳುತ್ತಾ ಹೋದಂತೆ ದೂರದಲ್ಲಿರುವ ಸಣ್ಣ ವಸ್ತುಗಳ ಚಿತ್ರವನ್ನೂ ತೆಗೆಯುವುದು ಸಾಧ್ಯವಾಗುತ್ತದೆ. ವೈಡ್ ಆಂಗಲ್ ಲೆನ್ಸ್ ಬಳಸಿ ಮೈಸೂರಿನ ಅರಮನೆಯ ಪೂರ್ಣ ಚಿತ್ರ ಕ್ಲಿಕ್ಕಿಸಿದರೆ ಇಂತಹ ಜೂಮ್ ಲೆನ್ಸುಗಳನ್ನು ಬಳಸಿ ಅರಮನೆ ಪ್ರವೇಶದ್ವಾರದ ಮೇಲಿನ ಮೂಲೆಯಲ್ಲೆಲ್ಲೂ ಬೆಳಗುತ್ತಿರುವ ಬಲ್ಬಿನ ಚಿತ್ರವನ್ನೂ ಸೆರೆಹಿಡಿಯಬಹುದು!

ವೈಟ್ ಬ್ಯಾಲೆನ್ಸ್: ಬಣ್ಣಗಳು ಬರಿಗಣ್ಣಿಗೆ ಸರಿಯಾಗಿಯೇ ಕಂಡರೂ ಕ್ಯಾಮೆರಾ ಕ್ಲಿಕ್ಕಿಸಿದ ಚಿತ್ರದಲ್ಲಿ ಕೆಲವೊಮ್ಮೆ ಅವು ಕೊಂಚ ಬೇರೆಯಾಗಿ ಕಾಣುವುದು ಸಾಮಾನ್ಯ. ಸೂರ್ಯೋದಯ-ಸೂರ್ಯಾಸ್ತಗಳ ಸಮಯದಲ್ಲಿ, ಮೋಡಕವಿದ ವಾತಾವರಣದಲ್ಲಿ, ಕ್ಯಾಂಡಲ್ ಬೆಳಕಿನಲ್ಲಿ, ಬಲ್ಬಿನದೋ ಟ್ಯೂಬ್‌ಲೈಟಿನದೋ ಬೆಳಕಲ್ಲಿ ಕ್ಲಿಕ್ಕಿಸಹೊರಡುವ ದೃಶ್ಯಗಳೆಲ್ಲ ನಮ್ಮ ಕಣ್ಣಿಗೆ ಸಹಜವಾಗಿಯೇ ಕಂಡರೂ ಕ್ಯಾಮೆರಾ ಕಣ್ಣು ಅವುಗಳನ್ನು ಬೇರೆಯದೇ ರೀತಿಯಲ್ಲಿ ಗ್ರಹಿಸುವುದರಿಂದ ಈ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ.

ಇಂತಹ ಯಾವುದೇ ಸಂದರ್ಭದಲ್ಲಿ ಫೋಟೋ ಕ್ಲಿಕ್ಕಿಸುವ ಮುನ್ನ ಕ್ಯಾಮೆರಾ ಆ ದೃಶ್ಯದಲ್ಲಿ ಬಿಳಿಯ ಬಣ್ಣವನ್ನು ಹುಡುಕಿಕೊಳ್ಳುತ್ತದೆ. ಟ್ಯೂಬ್‌ಲೈಟ್ ಬೆಳಕಲ್ಲಿ ಬಿಳಿಯಾಗಿ ಕಂಡ ಕಾಗದದ ಹಾಳೆ ಬಲ್ಬಿನ ಬೆಳಕಿನಲ್ಲಿ ಕೊಂಚ ಹಳದಿಯಾಗಿ ಕಾಣುತ್ತದಲ್ಲ, ಹಾಗೆ ಬೆಳಕಿನ ವ್ಯತ್ಯಾಸದಿಂದ ದೃಶ್ಯದ ಬಣ್ಣಗಳೇನಾದರೂ ಬದಲಾಗಿದ್ದರೆ ಕ್ಯಾಮೆರಾಗೆ ಅವನ್ನು ಸರಿಯಾಗಿ ಗ್ರಹಿಸುವುದು ಸಾಧ್ಯವಾಗುವುದಿಲ್ಲ. ಈ ತೊಂದರೆಯನ್ನು ಸರಿಪಡಿಸಿ ಚಿತ್ರದ ಬಣ್ಣಗಳು ನೈಜ ದೃಶ್ಯಕ್ಕೆ ಆದಷ್ಟೂ ಸಮೀಪದಲ್ಲಿರುವಂತೆ ಮಾಡಲು 'ವೈಟ್ ಬ್ಯಾಲೆನ್ಸ್' ಅನ್ನು ಬದಲಿಸಿಕೊಳ್ಳುವ ಸೌಲಭ್ಯ ಹಲವು ಕ್ಯಾಮೆರಾಗಳಲ್ಲಿರುತ್ತದೆ. ಬೇರೆಬೇರೆ ರೀತಿಯ ಬೆಳಕಿಗೆ ತಕ್ಕ ಹೊಂದಾಣಿಕೆಯನ್ನು ಆರಿಸಿಕೊಳ್ಳಲು ಈ ಸೌಲಭ್ಯವನ್ನು ಬಳಸಬಹುದು.

ಟೈಮ್ ಲ್ಯಾಪ್ಸ್: ಮೊಗ್ಗು ಹೂವಾಗಿ ಅರಳಿ ಬಾಡಿಹೋಗುವ, ಬರಡು ನೆಲದಲ್ಲಿ ಹುಲ್ಲು ಚಿಗುರಿ ದೊಡ್ಡದಾಗಿ ಬೆಳೆಯುವ ಚಿತ್ರಗಳೆಲ್ಲ ಒಂದರ ಹಿಂದೊಂದರಂತೆ ಬಂದುಹೋಗುವ ವೀಡಿಯೋಗಳು, ಸ್ಲೈಡ್‌ಶೋಗಳು ಆಗಿಂದಾಗ್ಗೆ ಕಾಣಸಿಗುತ್ತಿರುತ್ತವಲ್ಲ; ಅಂತಹ ಚಿತ್ರಗಳನ್ನೆಲ್ಲ ಕ್ಲಿಕ್ಕಿಸಲು ಟೈಮ್ ಲ್ಯಾಪ್ಸ್ ತಂತ್ರ ಬಳಕೆಯಾಗುತ್ತದೆ. ಒಂದೇ ದೃಶ್ಯದ ಚಿತ್ರವನ್ನು ಬೇರೆಬೇರೆ ಸಮಯದಲ್ಲಿ ಕ್ಲಿಕ್ಕಿಸಿ ವೀಡಿಯೋ ಅಥವಾ ಸ್ಲೈಡ್‌ಶೋ ರೂಪಕ್ಕೆ ಪರಿವರ್ತಿಸುವುದು ಈ ತಂತ್ರದ ಮೂಲಮಂತ್ರ.

ಚಿತ್ರಗಳನ್ನು ಬೇರೆಬೇರೆ ಸಮಯದಲ್ಲಿ ಕ್ಲಿಕ್ಕಿಸಿದರೂ ಅವುಗಳ ಸಂಯೋಜನೆಯಲ್ಲಿ ವ್ಯತ್ಯಾಸ ಬಾರದಂತಿರಲು ಕ್ಯಾಮೆರಾವನ್ನು ಒಂದೇ ಜಾಗದಲ್ಲಿಟ್ಟಿರಬೇಕಾಗುತ್ತದೆ. ಇದಕ್ಕಾಗಿ ಟ್ರೈಪಾಡ್ ಬಳಸುವುದು ಸಾಮಾನ್ಯ ಅಭ್ಯಾಸ; ರಿಮೋಟ್ ಬಳಸಲು ಸಾಧ್ಯವಿರುವ ಕ್ಯಾಮೆರಾಗಳಲ್ಲಿ ಅದನ್ನೂ ಬಳಸುವ ಮೂಲಕ ಕ್ಯಾಮೆರಾ ಅಲುಗಾಡದಂತೆ ನೋಡಿಕೊಳ್ಳಬಹುದು. ನಿರ್ದಿಷ್ಟ ಅವಧಿಗೊಮ್ಮೆ ಫೋಟೋ ಕ್ಲಿಕ್ಕಿಸಲು ನೆನಪಿಟ್ಟುಕೊಳ್ಳುವುದು ಕಷ್ಟ ಎನ್ನುವವರಿಗೆ ಇಂಟರ್‌ವಲೋಮೀಟರ್ ಎನ್ನುವ ಉಪಕರಣವೂ ಸಿಗುತ್ತದೆ; ಈ ಉಪಕರಣ ಬಳಸಿ ಪೂರ್ವನಿರ್ಧಾರಿತ ಅವಧಿಗೆ ಒಮ್ಮೆಯಂತೆ ಸ್ವಯಂಚಾಲಿತವಾಗಿ ಫೋಟೋಗಳನ್ನು ಕ್ಲಿಕ್ಕಿಸುವುದು ಸಾಧ್ಯ.

ಅಕ್ಟೋಬರ್ ೯, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge