ಮಂಗಳವಾರ, ಅಕ್ಟೋಬರ್ 16, 2012

ಒಂದು ಸೊನ್ನೆ ಸೊನ್ನೆ

ಇಂದು ಪ್ರಕಟವಾಗುತ್ತಿರುವುದು ವಿಜ್ಞಾಪನೆ ಅಂಕಣದ ನೂರನೆಯ ಸಂಚಿಕೆ.
ಈ ಲೇಖನದ ಶೀರ್ಷಿಕೆ ಇದೇಕೆ ಹೀಗಿದೆ? ಒಂದು-ಸೊನ್ನೆ-ಸೊನ್ನೆ ಎಂದರೆ ನೂರೋ, ಮೂರೋ??
ಟಿ. ಜಿ. ಶ್ರೀನಿಧಿ

ಕಂಪ್ಯೂಟರುಗಳಿಗೂ ಒಂದು-ಸೊನ್ನೆಗೂ ಇರುವ ಸಂಬಂಧ ಎಲ್ಲರಿಗೂ ಗೊತ್ತಿರುವುದೇ. ಕಂಪ್ಯೂಟರುಗಳು ಕೆಲಸಮಾಡುವುದೇ ದ್ವಿಮಾನ ಪದ್ಧತಿಯ ಈ ಎರಡು ಅಂಕಿಗಳನ್ನು ಬಳಸಿ. ನಮಗೆಲ್ಲ ಚಿರಪರಿಚಿತವಾದ ಬಿಟ್-ಬೈಟ್-ಮೆಗಾಬೈಟ್-ಗಿಗಾಬೈಟ್-ಟೆರಾಬೈಟ್‌ಗಳಿಗೆಲ್ಲ ಈ ಎರಡು ಅಂಕಿಗಳೇ ಮೂಲ.

ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ ಎನ್ನುವಿರಾ? ಅದೂ ಸರಿಯೇ. ಕಂಪ್ಯೂಟರುಗಳು ದ್ವಿಮಾನ ಪದ್ಧತಿ ಬಳಸುವುದು, ಅವಕ್ಕೆ ಒಂದು-ಸೊನ್ನೆ ಎಂಬ ಅಂಕಿಗಳು ಮಾತ್ರವೇ ಅರ್ಥವಾಗುವುದು, ಪ್ರೋಗ್ರಾಮುಗಳನ್ನು ಯಾವ ಭಾಷೆಯಲ್ಲೇ ಬರೆದರೂ ಅದು ಮೊದಲಿಗೆ ಒಂದು-ಸೊನ್ನೆಯ ಈ ಭಾಷೆಗೆ ಬದಲಾಗಬೇಕಾದ್ದು - ಈ ವಿಷಯಗಳೆಲ್ಲ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳಲ್ಲಿ ಭದ್ರವಾಗಿ ಕುಳಿತುಬಿಟ್ಟಿವೆ.

ಆದರೆ ಕಂಪ್ಯೂಟರುಗಳು ದ್ವಿಮಾನ ಪದ್ಧತಿಯನ್ನೇ ಏಕೆ ಬಳಸುತ್ತವೆ?
ನಮಗೆ ಸುಲಭವಾಗಿ ಅರ್ಥವಾಗುವ ದಶಮಾಂಶ ಪದ್ಧತಿಯನ್ನೇ ಅರ್ಥಮಾಡಿಕೊಳ್ಳಲು ಅವುಗಳಿಗೇನು ಕಷ್ಟ?

* * *

ಈ ಪ್ರಶ್ನೆಗೆ ಉತ್ತರ ಹುಡುಕುವ ಮುನ್ನ ಅನಲಾಗ್ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಒಳಿತು.

ನಮಗೆಲ್ಲ ಟೇಪ್ ರೆಕಾರ್ಡರ್ ಗೊತ್ತಲ್ಲ, ಅನಲಾಗ್ ತಂತ್ರಜ್ಞಾನದ ಕಾರ್ಯವೈಖರಿ ತಿಳಿದುಕೊಳ್ಳಲು ಅದೊಂದು ಉತ್ತಮ ಉದಾಹರಣೆ. ರೆಕಾರ್ಡ್ ಮಾಡಬೇಕು ಎಂದಾಗ ಮೈಕ್ರೋಫೋನ್ ಮೂಲಕ ದೊರಕುವ ಧ್ವನಿ ತರಂಗಗಳನ್ನು ಹಾಗೆಯೇ ಕ್ಯಾಸೆಟ್ಟಿನಲ್ಲಿರುವ ಟೇಪ್ ಮೇಲಕ್ಕೆ ವರ್ಗಾಯಿಸಲಾಗುತ್ತದೆ. ಇಲ್ಲಿ ಮೂಲ ಧ್ವನಿಯೂ ಅನಲಾಗ್, ಟೇಪ್‌ನಲ್ಲಿ ದಾಖಲಾಗಿರುವುದೂ ಅನಲಾಗ್. ಕ್ಯಾಸೆಟ್ ಹಾಕಿ ಹಾಡು ಕೇಳುವಾಗ ನಮಗೆ ಕೇಳಿಸುವುದು ಇದೇ ಅನಲಾಗ್ ಧ್ವನಿಯ ತರಂಗಗಳು.

ಡಿಜಿಟಲ್ ತಂತ್ರಜ್ಞಾನ ಕೆಲಸಮಾಡುವುದೇ ಬೇರೆ ರೀತಿ. ಉದಾಹರಣೆಗೆ ಕಂಪ್ಯೂಟರ್ ಬಳಸಿ ದ್ವನಿಯನ್ನು ರೆಕಾರ್ಡ್ ಮಾಡಲು ಹೊರಟಿದ್ದೇವೆ ಎಂದರೆ ಮೂಲ ಧ್ವನಿ ತರಂಗಗಳನ್ನು ಹಾಗೆಯೇ ದಾಖಲಿಸಿಕೊಳ್ಳುವ ಬದಲಿಗೆ ಅದು ನಿರ್ದಿಷ್ಟ ಅವಧಿಗೊಮ್ಮೆಯಂತೆ ಮೂಲ ಧ್ವನಿಯನ್ನು ದಾಖಲಿಸಿಕೊಳ್ಳುತ್ತ ಹೋಗುತ್ತದೆ. ಹೀಗೆ ದಾಖಲಾದ 'ಸ್ಯಾಂಪಲ್ಲು'ಗಳನ್ನು ಅಂಕಿಗಳ ರೂಪದಲ್ಲಿ ಉಳಿಸಿಡಲಾಗುತ್ತದೆ (ಮೂಲ ಧ್ವನಿಯನ್ನು ಆದಷ್ಟೂ ಯಥಾವತ್ತಾಗಿ ಗ್ರಹಿಸಲು ಪ್ರತಿ ಸೆಕೆಂಡಿಗೆ ಸಾವಿರಾರು ಸ್ಯಾಂಪಲ್ಲುಗಳನ್ನು ದಾಖಲಿಸಿಕೊಳ್ಳಲಾಗುತ್ತದೆ). ಧ್ವನಿಯನ್ನು ಮತ್ತೆ ಕೇಳಬೇಕು ಎಂದಾಗ ಇವೇ ಅಂಕಿಗಳ ಆಧಾರದ ಮೇಲೆ ಧ್ವನಿ ತರಂಗವನ್ನು ಮರುಸೃಷ್ಟಿಸಲಾಗುತ್ತದೆ.

* * *

ಡಿಜಿಟಲ್ ತಂತ್ರಜ್ಞಾನ ಬಳಸಿ ಧ್ವನಿಯನ್ನು ದಾಖಲಿಸಿಕೊಳ್ಳುವ ಹಾಗೂ ಮತ್ತೆ ಕೇಳುವ ಉದಾಹರಣೆಯಲ್ಲಿ ನೋಡಿದಂತೆ ಇಲ್ಲಿ ಎಲ್ಲವೂ ಅಂಕಿಗಳ ರೂಪದಲ್ಲೇ ಉಳಿಯಬೇಕು ತಾನೆ. ಈ ಅಂಕಿಗಳನ್ನು ವಿದ್ಯುನ್ಮಾನ ರೂಪದಲ್ಲಿ ಪ್ರತಿನಿಧಿಸುವಾಗ 'ಆನ್' ಅಥವಾ 'ಆಫ್' ಎಂಬ ಎರಡು ರೂಪಗಳನ್ನಷ್ಟೆ ಬಳಸುವುದು ಸಾಧ್ಯ - ಲೈಟಿನ ಸ್ವಿಚ್ ಅದುಮಿದರೆ ಬೆಳಕಿದೆ, ಇಲ್ಲವಾದರೆ ಇಲ್ಲ ಎನ್ನುವಂತೆ.

ಸ್ವಿಚ್ ಅದುಮಿದಾಗ ವಿದ್ಯುತ್ ಹರಿದು ಬಲ್ಬು ಬೆಳಗುತ್ತದಲ್ಲ; ಕಂಪ್ಯೂಟರ್ ಸರ್ಕ್ಯೂಟುಗಳಲ್ಲಿರುವ ಸ್ವಿಚ್ಚುಗಳು ಕೂಡ ಹಾಗೆಯೇ. ಅವು ಆನ್ ಆಗಿವೆಯೋ ಆಫ್ ಆಗಿವೆಯೋ ಎನ್ನುವುದರ ಆಧಾರದ ಮೇಲೆ ಕಂಪ್ಯೂಟರಿನಲ್ಲಿ ಏನು ಮಾಹಿತಿ ಶೇಖರವಾಗಿದೆ ಎನ್ನುವುದು ತೀರ್ಮಾನವಾಗುತ್ತದೆ.

ಇಲ್ಲೆಲ್ಲ ಆನ್ ಅಥವಾ ಆಫ್ ಎಂಬ ಎರಡು ಸ್ಥಿತಿಗಳಷ್ಟೆ ಪ್ರಯೋಜನಕ್ಕೆ ಬರುವುದರಿಂದಲೇ ಕಂಪ್ಯೂಟರಿಗೆ ದ್ವಿಮಾನ ಪದ್ಧತಿಯ ಮೇಲೆ ಅಷ್ಟೊಂದು ಪ್ರೀತಿ. 'ಆನ್' ಸ್ಥಿತಿಯನ್ನು ಪ್ರತಿನಿಧಿಸಲು ಒಂದು ಹಾಗೂ 'ಆಫ್' ಸ್ಥಿತಿಯನ್ನು ಪ್ರತಿನಿಧಿಸಲು ಸೊನ್ನೆ - ಈ ಎರಡೇ ಅಂಕಿಗಳಿರುವ  ದ್ವಿಮಾನ ಪದ್ಧತಿಗೆ ಇಷ್ಟೊಂದು ಮಹತ್ವ ಬರುವುದಕ್ಕೂ ಇದೇ ಕಾರಣ. ಒಂದು ಸೊನ್ನೆ ಎಂಬ ಈ ಎರಡು ಅಂಕಿಗಳನ್ನೇ ಬೈನರಿ ಡಿಜಿಟ್ ಅಥವಾ ಬಿಟ್‌ಗಳೆಂದು ಗುರುತಿಸಲಾಗುತ್ತದೆ.

* * *

ಎಲ್ಲ ಮಾಹಿತಿಯನ್ನೂ ಬಿಟ್‌ಗಳಲ್ಲೇ ದಾಖಲಿಸಬೇಕು ಎಂದರೆ ಅದು ಮೊದಲಿಗೆ ದ್ವಿಮಾನ ಪದ್ಧತಿಗೆ ಬದಲಾಗಬೇಕು. ಉದಾಹರಣೆಗೆ 'ಅ' ಎಂಬ ಅಕ್ಷರವನ್ನೇ ತೆಗೆದುಕೊಳ್ಳಿ. ನುಡಿ ಅಕ್ಷರಶೈಲಿಯಲ್ಲಿ ದಾಖಲಿಸಿದ ಈ ಅಕ್ಷರ ಇಂಗ್ಲಿಷಿನ ಅಕ್ಷರಶೈಲಿಗೆ ಬದಲಾದಾಗ 'C' ಆಗುತ್ತದೆ. ಇದರ ಆಸ್ಕಿ ಸಂಕೇತ ೬೭. ದ್ವಿಮಾನ ಪದ್ಧತಿಗೆ ಬಂದಾಗ ಇದು ೦೧೦೦೦೦೧೧ ಆಗುತ್ತದೆ. ಅಂದರೆ, ನುಡಿ ಕಡತದ 'ಅ' ಆಗಲಿ, ನೋಟ್‌ಪ್ಯಾಡಿನ 'C' ಆಗಲಿ ಕಂಪ್ಯೂಟರಿನಲ್ಲಿ ಉಳಿಯುವುದು ೦೧೦೦೦೦೧೧ ಎಂದೇ. ಅದನ್ನು ಪರದೆಯ ಮೇಲೆ ಹೇಗೆ ತೋರಿಸಬೇಕು ಎನ್ನುವ ಅಂಶ ಮಾತ್ರ ನಾವು ಬಳಸುವ ತಂತ್ರಾಂಶ ಹಾಗೂ ಅಕ್ಷರಶೈಲಿಗಳಿಗೆ ಅನುಗುಣವಾಗಿ ಬದಲಾಗುತ್ತದೆ.

ಹೀಗೆ ಹೇಳುತ್ತಿದ್ದಂತೆ ಇನ್ನೊಂದು ಪ್ರಶ್ನೆ ನಮ್ಮೆದುರು ನಿಲ್ಲುತ್ತದೆ - 'C' ಎನ್ನುವ ಅಕ್ಷರದ ಆಸ್ಕಿ ಸಂಕೇತ ೬೭ ಎಂದಮೇಲೆ ಅದನ್ನು ಹಾಗೆಯೇ ಬಿಡಬಹುದಲ್ಲ, ೦೧೦೦೦೦೧೧ ಎಂದು ಇಷ್ಟುದ್ದವಾಗಿ ಉಳಿಸಿಡುವುದು ಏಕೆ? ಎಂಟು ಅಂಕಿಗಳನ್ನು ಉಳಿಸಿಡುವುದಕ್ಕಿಂತ ಎರಡು ಅಂಕಿಗಳನ್ನು ಉಳಿಸಿಡುವುದು ಸುಲಭವಲ್ಲವೇ?

ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಸದ್ಯದ ಕಂಪ್ಯೂಟರ್ ತಂತ್ರಜ್ಞಾನಕ್ಕಿರುವ ಒಂದು ಮಿತಿ ನಮ್ಮೆದುರು ನಿಲ್ಲುತ್ತದೆ. ದ್ವಿಮಾನ ಪದ್ಧತಿಯ ಬದಲಿಗೆ ದಶಮಾಂಶ ಪದ್ಧತಿಯನ್ನು ಬಳಸಹೊರಟರೆ ಕಂಪ್ಯೂಟರಿನ ಸರ್ಕ್ಯೂಟುಗಳಲ್ಲಿ ಆನ್ ಆಫ್ ಎಂಬ ಎರಡು ಸ್ಥಿತಿಗಳ ಬದಲಿಗೆ ಹತ್ತು ವಿಭಿನ್ನ ಸ್ಥಿತಿಗಳನ್ನು ಪ್ರತಿನಿಧಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಈವರೆಗೂ ಪರಿಪೂರ್ಣ ಉತ್ತರ ದೊರೆತಿಲ್ಲ. ಆಕ್ಟಲ್ ಪದ್ಧತಿ ಎಂಟು ಭಿನ್ನ ಸ್ಥಿತಿಗಳನ್ನು ಹಾಗೂ ಹೆಕ್ಸಾಡೆಸಿಮಲ್ ಪದ್ಧತಿ ಹದಿನಾರು ಭಿನ್ನ ಸ್ಥಿತಿಗಳನ್ನು ಬೇಡುವುದರಿಂದ ಅವುಗಳ ಬಳಕೆಯ ವಿಷಯದಲ್ಲೂ ಇದೇ ಸ್ಥಿತಿ ಇದೆ. ಹೀಗಾಗಿ ದ್ವಿಮಾನ ಪದ್ಧತಿಯ ಬಳಕೆ ನಮಗಿಷ್ಟವಿದೆಯೋ ಇಲ್ಲವೋ, ಅದು ಪರಿಪೂರ್ಣವೆಂದು ನಾವು ಭಾವಿಸುತ್ತೇವೋ ಇಲ್ಲವೋ, ಕಂಪ್ಯೂಟರುಗಳ ಜೊತೆಗೆ ಅವುಗಳ ಸಂಬಂಧ ಅಬಾಧಿತವಾಗಿ ಮುಂದುವರೆದಿದೆ.

ಹಾಗೆಂದ ಮಾತ್ರಕ್ಕೆ ಪರಿಸ್ಥಿತಿ ಮುಂದೆಯೂ ಹೀಗೆಯೇ ಇರಬೇಕು ಎಂದೇನೂ ಇಲ್ಲ. ಮುಂದಿನ ದಿನಗಳಲ್ಲಿ ರೂಪುಗೊಳ್ಳಬಹುದೆಂದು ಭಾವಿಸಲಾಗಿರುವ ಕ್ವಾಂಟಮ್ ಕಂಪ್ಯೂಟರುಗಳಲ್ಲಿ ಎರಡಕ್ಕಿಂತ ಹೆಚ್ಚು ಸ್ಥಿತಿಗಳನ್ನು ಪ್ರತಿನಿಧಿಸಲು ಸಾಧ್ಯವಾಗಬಹುದು ಎಂದು ನಂಬಲಾಗಿದೆ. ಹಾಗಾದಾಗ ನಮ್ಮ ಕಂಪ್ಯೂಟರ್ ಶಿಕ್ಷಣದ ಪ್ರಾಥಮಿಕ ಪಾಠಗಳನ್ನೂ ಬದಲಾಯಿಸಿಕೊಳ್ಳಬೇಕೇನೋ.

* * *

ವಿಜ್ಞಾಪನೆ ಅಂಕಣದ ನೂರನೆಯ ವಾರಕ್ಕೆ ಬರೆಹ ಸಿದ್ಧಪಡಿಸಬೇಕು ಎನ್ನುತ್ತಿದ್ದಂತೆಯೇ ಅದಕ್ಕೆ ವಿಷಯ ಏನಿರಬೇಕು ಎಂಬ ಯೋಚನೆ ಶುರುವಾಯಿತು; ಕಡೆಗೆ ಅದನ್ನು ತೀರ್ಮಾನಿಸಲು ಓದುಗ ಮಿತ್ರರೇ ಸರಿ ಎಂದನಿಸಿ ತಮ್ಮ ಆಯ್ಕೆಯ ವಿಷಯ ಸೂಚಿಸುವ ಸ್ವಾತಂತ್ರ್ಯವನ್ನು ಅವರಿಗೇ ಕೊಟ್ಟದ್ದಾಯಿತು.

ಈ ಕರೆಗೆ ಪ್ರತಿಕ್ರಿಯೆಯಾಗಿ ಬಂದ ಅನಿಸಿಕೆಗಳಲ್ಲೊಂದೇ ಇಂದಿನ ಲೇಖನದ ವಿಷಯ. ಈ ವಿಷಯ ಸೂಚಿಸಿದವರು ಬೆಂಗಳೂರಿನ ಶ್ರೀ ಸಂದೀಪ್ ಕಾಮತ್. ಅವರಿಗೆ, ಹಾಗೂ ವಿಜ್ಞಾಪನೆ ಅಂಕಣವನ್ನು ಈವರೆಗೆ ಪ್ರೋತ್ಸಾಹಿಸುತ್ತ ಬಂದಿರುವ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಅಂದಹಾಗೆ ಒಂದು ಸೊನ್ನೆ ಸೊನ್ನೆ ಎಂದರೆ ನೂರೂ ಅಲ್ಲ, ಮೂರೂ ಅಲ್ಲ; ಬೈನರಿ ಲೆಕ್ಕದಲ್ಲಿ ಒಂದು-ಸೊನ್ನೆ-ಸೊನ್ನೆ ಎಂದರೆ ನಾಲ್ಕು. ನೂರು ವಾರಗಳವರೆಗೆ ಈ ಅಂಕಣದತ್ತ ಹರಿದುಬಂದಿರುವ ನಿಮ್ಮ ಪ್ರೀತಿ, ಲೇಖನಗಳ ಸಂಖ್ಯೆ ನಾಲ್ಕು ನೂರು ದಾಟಿದರೂ ಕಡಿಮೆಯಾಗದಿರಲಿ!

ಅಕ್ಟೋಬರ್ ೧೬, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಬಹಳ ಒಳ್ಳೆಯ ವಿಷಯಗಳನ್ನು ಈವರೆಗೂ ಅಂಕಣದಲ್ಲಿ ಬರೆದಿದ್ದೀರಿ. ಇದರಿಂದ ಹಲವಾರು ತಂತ್ರಜ್ನಾನ ಸಂಬಂಧಿತ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಹೀಗೇ ಮುಂದುವರೆಯಲಿ. ಧನ್ಯವಾದಗಳು.

ದಿವ್ಯಾ ಮಲ್ಯ ಕಾಮತ್ ಹೇಳಿದರು...

ನೀವು ತಾಂತ್ರಿಕ ವಿಷಯಗಳನ್ನು ತುಂಬಾ ಸರಳ ಉದಾಹರಣೆ ಹಾಗೂ ಸುಲಭವಾಗಿ ಅರ್ಥವಾಗುವಂತೆ ಹೇಳುವ ರೀತಿ ಚಂದ :-) ಹೀಗಿರುವುದರಿಂದ ಶ್ರೀ ಸಾಮಾನ್ಯರಿಗೂ ಓದಲು ಆಸಕ್ತಿ ಬರುತ್ತದೆ, ಟೆಕ್ನಿಕಲ್ ಪರಿಜ್ಞಾನ ಸ್ವಲ್ಪ ಮಟ್ಟಿಗೆ ಇರುವವರಿಗೂ ಓದಲು ಖುಷಿಯಾಗುತ್ತದೆ. ನಿಮ್ಮ ಅಂಕಣವು ಚೆನ್ನಾಗಿ ಸಾಗಲಿ.. ಅಭಿನಂದನೆಗಳು!

badge