ಬುಧವಾರ, ಜುಲೈ 25, 2012

ಮತ್ತೆ ಮತ್ತೆ ಕ್ಲೌಡ್

ಟಿ. ಜಿ. ಶ್ರೀನಿಧಿ

ಮೈಕ್ರೋಸಾಫ್ಟ್ ಆಫೀಸ್ ಯಾರಿಗೆ ತಾನೇ ಗೊತ್ತಿಲ್ಲ! ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಬಳಸುವವರೆಲ್ಲರೂ ಅದನ್ನು ಕನಿಷ್ಠ ಒಮ್ಮೆಯಾದರೂ ಬಳಸಿಯೇ ಇರುತ್ತಾರೆ ಎಂದರೂ ತಪ್ಪಾಗಲಾರದೇನೋ. ಇಪ್ಪತ್ತೊಂದು ವರ್ಷಗಳ ಹಿಂದೆ ಮೊದಲ ಬಾರಿಗೆ ಪರಿಚಯವಾದ, ಈಗಾಗಲೇ ಹಲವಾರು ಆವೃತ್ತಿಗಳನ್ನು ಕಂಡಿರುವ ಈ ತಂತ್ರಾಂಶ ಸಂಗ್ರಹದ ಜನಪ್ರಿಯತೆಯೇ ಅಂಥದ್ದು. ಈಗ ಪ್ರಪಂಚದಾದ್ಯಂತ ಸುಮಾರು ನೂರು ಕೋಟಿ ಜನರು ಮೈಕ್ರೋಸಾಫ್ಟ್ ಆಫೀಸ್ ಬಳಸುತ್ತಿದ್ದಾರಂತೆ.

ಇರಲಿ, ವಿಷಯ ಅದಲ್ಲ. ಮೊನ್ನೆ ಜುಲೈ ೧೬ರಂದು ಆಫೀಸ್ ತಂತ್ರಾಂಶ ಸಂಗ್ರಹದ ಹೊಸ ಆವೃತ್ತಿಯ ಘೋಷಣೆಯಾಯಿತು.

ಈ ಹೊಸ ಆವೃತ್ತಿಯನ್ನು ಟಚ್ ಸ್ಕ್ರೀನ್ ಇರುವ ಉಪಕರಣಗಳಲ್ಲೂ ಸುಲಭವಾಗಿ ಬಳಸುವಂತೆ ರೂಪಿಸಲಾಗಿದೆಯಂತೆ. ಮೈಕ್ರೋಸಾಫ್ಟ್ ಸಂಸ್ಥೆ ಇತ್ತೀಚೆಗಷ್ಟೆ 'ಸರ್ಫೇಸ್' ಹೆಸರಿನ ಹೊಸ ಟ್ಯಾಬ್ಲೆಟ್ ಕಂಪ್ಯೂಟರನ್ನು ಪರಿಚಯಿಸಿರುವುದರ, ಹಾಗೂ ವಿಂಡೋಸ್ ೮ ಕಾರ್ಯಾಚರಣ ವ್ಯವಸ್ಥೆಯನ್ನೂ ಟಚ್ ಸ್ನೇಹಿಯಾಗಿಸಿರುವ ಹಿನ್ನೆಲೆಯಲ್ಲಿ ಆಫೀಸ್ ತಂತ್ರಾಂಶ ಸಂಗ್ರಹದ ಈ ಹೊಸ ಅವತಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಆವೃತ್ತಿಯ ಇನ್ನೊಂದು ಗಮನಾರ್ಹ ಅಂಶವೆಂದರೆ ಯಾವುದೇ ಆಫೀಸ್ ತಂತ್ರಾಂಶ ಬಳಸಿ ಸೃಷ್ಟಿಸಿದ ಕಡತವನ್ನು ತಕ್ಷಣವೇ ಕ್ಲೌಡ್‌ನಲ್ಲಿ ಉಳಿಸಿಡಲಾಗುತ್ತದಂತೆ. ಆಫೀಸಿನ ಲ್ಯಾಪ್‌ಟಾಪ್ ಬಳಸಿ ಸಿದ್ಧಪಡಿಸಿದ ವರ್ಡ್ ಡಾಕ್ಯುಮೆಂಟ್, ಮನೆಯ ಡೆಸ್ಕ್‌ಟಾಪ್ ಮುಂದೆ ಕುಳಿತಿದ್ದಾಗ ಸೃಷ್ಟಿಸಿದ ಎಕ್ಸೆಲ್ ಸ್ಪ್ರೆಡ್‌ಶೀಟ್ - ಈ ಯಾವುದನ್ನೇ ಆದರೂ ನಮಗೆ ಬೇಕಿದ್ದಾಗ ಬೇಕಾದ ಕಡೆ ಪಡೆದುಕೊಳ್ಳಲು ಈ ಹೊಸ ಸೌಲಭ್ಯ ಅನುವುಮಾಡಿಕೊಡಲಿದೆ.

ಇದನ್ನು ಸಾಧ್ಯವಾಗಿಸಿರುವ ಪರಿಕಲ್ಪನೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್.

ಐದು ದಶಕದ ನೆನಪು
ನೀರು, ವಿದ್ಯುತ್ತು - ಇವನ್ನೆಲ್ಲ ನಮಗೆ ಬೇಕಾದಷ್ಟು ಬಳಸಿಕೊಂಡು ಬಳಸಿದಷ್ಟಕ್ಕೆ ಮಾತ್ರ ಶುಲ್ಕ ಪಾವತಿಸುವುದು ನಮ್ಮೆಲ್ಲರಿಗೂ ಗೊತ್ತೇ ಇದೆ. ಕಂಪ್ಯೂಟರ್ ಪ್ರಪಂಚದತ್ತ ಬಂದರೆ ಅಂತರಜಾಲ ಸಂಪರ್ಕ ಬಳಸುವುದಕ್ಕೂ ನಾವು ಹೆಚ್ಚೂಕಡಿಮೆ ಇದೇ ಅಭ್ಯಾಸ ಇಟ್ಟುಕೊಂಡಿದ್ದೇವೆ.

ಈ ಪರಿಕಲ್ಪನೆಯನ್ನು ಕಂಪ್ಯೂಟರುಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ವಿಸ್ತರಿಸಿ ನೋಡೋಣ. ಮುಂದಿನ ಕೆಲವೇ ದಿನಗಳವರೆಗೆ ನೀವು ಹೊಸದೊಂದು ತಂತ್ರಾಂಶವನ್ನು ಉಪಯೋಗಿಸಬೇಕಾಗಿದೆ ಅಂತಲೋ ಹೆಚ್ಚು ಪ್ರಮಾಣದ ಮಾಹಿತಿ ಶೇಖರಿಸಲು ಇನ್ನಷ್ಟು ಸ್ಥಳಾವಕಾಶ ಬೇಕಾಗಿದೆ ಅಂತಲೋ ಇಟ್ಟುಕೊಳ್ಳಿ. ನಿಮ್ಮ ಈ ಅಗತ್ಯಗಳನ್ನು ಪೂರೈಸಲು ಸಾವಿರಾರು ರೂಪಾಯಿ ಖರ್ಚುಮಾಡಿ ಹೊಸ ತಂತ್ರಾಂಶ-ಯಂತ್ರಾಂಶಗಳನ್ನು ಕೊಳ್ಳುವ ಬದಲು ಅವನ್ನು ನಿಮಗೆಷ್ಟು ಬೇಕೋ ಅಷ್ಟು ಸಮಯ ಮಾತ್ರ ಉಪಯೋಗಿಸಿಕೊಳ್ಳುವಂತಿದ್ದರೆ? ಇಷ್ಟು ಯೂನಿಟ್ಟಿಗೆ ಇಷ್ಟು ರೂಪಾಯಿಯ ಲೆಕ್ಕದಂತೆ ಲೈಟ್ ಬಿಲ್ ಕಟ್ಟುತ್ತೇವಲ್ಲ, ಹಾಗೆಯೇ ಈ ತಂತ್ರಾಂಶವನ್ನು ಇಷ್ಟು ಹೊತ್ತು ಉಪಯೋಗಿಸಿದ್ದಕ್ಕೆ ಇಷ್ಟು ರೂಪಾಯಿ ಕಟ್ಟಿ ಎಂದು ಬಿಲ್ ಬರುವಂತಿದ್ದರೆ?

ಇಂತಹುದೊಂದು ಆಲೋಚನೆ ೧೯೬೧ರಷ್ಟು ಹಿಂದೆಯೇ ಕೇಳಿಬಂದಿತ್ತು. ಆಗ ಅದನ್ನು ಪ್ರಸ್ತಾಪಿಸಿದ್ದು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಕ್ಷೇತ್ರದ ದಿಗ್ಗಜರಾದ ಜಾನ್ ಮೆಕಾರ್ಥಿ. ಇದೇ ಆಲೋಚನೆ ಇಂದಿನ ಕ್ಲೌಡ್ ಕಂಪ್ಯೂಟಿಂಗ್ ಪರಿಕಲ್ಪನೆಯ ಮೂಲ ಎನ್ನಬಹುದು.

ಕ್ಲೌಡ್ ಅಂದರೇನು?
ತಂತ್ರಾಂಶಗಳಿರಲಿ, ಸಂಸ್ಕರಣಾ ಸಾಮರ್ಥ್ಯ ಅಥವಾ ಇನ್ನಾವುದೇ ಬಗೆಯ ಕಂಪ್ಯೂಟಿಂಗ್ ಮೂಲಸೌಕರ್ಯವಿರಲಿ, ಮಾಹಿತಿ ಸಂಗ್ರಹಣೆಗೆ ಬೇಕಾದ ಸ್ಥಳಾವಕಾಶವೇ ಇರಲಿ - ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಇವೆಲ್ಲವನ್ನೂ ಅಂತರಜಾಲದ ಮೂಲಕ ಒದಗಿಸುವುದು ಕ್ಲೌಡ್ ಕಂಪ್ಯೂಟಿಂಗ್‌ನ ಮೂಲಮಂತ್ರ. ಇದನ್ನು ಬಳಸುವ ವ್ಯಕ್ತಿ ಅಥವಾ ಸಂಸ್ಥೆಗಳು ತಮಗೆ ಬೇಕಾದ ಕಂಪ್ಯೂಟರ್ ವ್ಯವಸ್ಥೆಯನ್ನು ಸ್ವತಃ ಹೊಂದಿಸಿಕೊಳ್ಳುವ ಬದಲು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವವರಿಂದ ಪಡೆದುಕೊಂಡು ತಮ್ಮ ಬಳಕೆಗೆ ಅನುಗುಣವಾದ ಶುಲ್ಕ ಪಾವತಿಸುತ್ತಾರೆ.

ಜಾಲತಾಣಕ್ಕೆ ಬೇಕಾದ ಸರ್ವರ್ ಸ್ಥಳಾವಕಾಶ, ಸಂಸ್ಥೆಯ ಇಮೇಲ್ ನಿರ್ವಹಣೆಗೆ ಬೇಕಾದ ವ್ಯವಸ್ಥೆ, ಗಿಗಾಬೈಟ್‌ಗಟ್ಟಲೆ ತುಂಬಿಕೊಳ್ಳುವ ಕಡತಗಳನ್ನು ಶೇಖರಿಸಿಡಲು ಜಾಗ ಮುಂತಾದನ್ನೆಲ್ಲ ನಾವೇ ಕೊಂಡು, ಕಾರ್ಯಗತಗೊಳಿಸಿ, ನಿರ್ವಹಿಸುವ ಬದಲಿಗೆ ಬಾಡಿಗೆಗೆ ಪಡೆದುಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಇದರಿಂದಾಗಿ ಸಾಕಷ್ಟು ಹಣ ಉಳಿತಾಯವಾಗುವುದಷ್ಟೇ ಅಲ್ಲ, ನಿರ್ವಹಣೆಯ ತಲೆನೋವೂ ಕಡಿಮೆಯಾಗುತ್ತದೆ. ರಾಶಿಗಟ್ಟಲೆ ಯಂತ್ರಾಂಶ ಉಪಕರಣಗಳನ್ನು ತಂದು ತುಂಬಿಕೊಳ್ಳುವ ಬದಲಿಗೆ ಬೇರೆಲ್ಲೋ ಇರುವ ವ್ಯವಸ್ಥೆಯನ್ನು ಅಂತರಜಾಲದ ಮೂಲಕ ಉಪಯೋಗಿಸಿಕೊಳ್ಳುತ್ತೇವಲ್ಲ, ಆ ಹೊರಗಿನ ವ್ಯವಸ್ಥೆಯನ್ನು ಮೋಡಕ್ಕೆ ಹೋಲಿಸಿ ಈ ಪರಿಕಲ್ಪನೆಗೆ ಕ್ಲೌಡ್ ಎಂದು ಹೆಸರಿಡಲಾಗಿದೆ.

ನಿರ್ವಹಣೆ - ಬಳಕೆ
ಕ್ಲೌಡ್ ಸೇವೆ ನೀಡುವ ಸಂಸ್ಥೆಗಳು ವಿವಿಧ ರೀತಿಯ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ವ್ಯಕ್ತಿಗಳಿಗೆ-ಸಂಸ್ಥೆಗಳಿಗೆ ಒದಗಿಸುತ್ತವೆ; ಇಂತಹ ಸೇವೆ ಪಡೆದುಕೊಳ್ಳುವವರ ಬಳಿ ಅಂತರಜಾಲ ಸಂಪರ್ಕ, ಹಾಗೂ ಅದನ್ನು ಬಳಸಲು ಒಂದು ಕಂಪ್ಯೂಟರ್ ಇದ್ದರೆ ಸಾಕು. ಅವರ ಕೆಲಸಗಳಿಗೆ ಏನೆಲ್ಲ ಕಂಪ್ಯೂಟರ್ ವ್ಯವಸ್ಥೆ ಬೇಕು, ಅದನ್ನು ಆಗಿಂದಾಗ್ಗೆ ಹೇಗೆ ಅಪ್‌ಗ್ರೇಡ್ ಮಾಡಬೇಕು ಮುಂತಾದ ಎಲ್ಲ ತಲೆನೋವುಗಳನ್ನೂ ಸುಲಭವಾಗಿ ಕ್ಲೌಡ್ ಸೇವೆ ಒದಗಿಸುವ ಸಂಸ್ಥೆಗೆ ವರ್ಗಾಯಿಸಿಬಿಡಬಹುದು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಲವಾರು ದಿಗ್ಗಜ ಸಂಸ್ಥೆಗಳು ಈಗಾಗಲೇ ಕ್ಲೌಡ್ ಕಂಪ್ಯೂಟಿಂಗ್ ಸೇವೆ ನೀಡುತ್ತಿವೆ. ಅಪಾರ ಸಂಖ್ಯೆಯ ಜಾಲತಾಣಗಳು ಅಮೆಜಾನ್‌ನ ಕ್ಲೌಡ್ ಸೇವೆಯನ್ನು ನೆಚ್ಚಿಕೊಂಡಿವೆ, ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶ ಸಂಗ್ರಹದ ಕ್ಲೌಡ್ ಆವೃತ್ತಿ ಈಗಾಗಲೇ ಇದೆ, ಆಫೀಸ್ ೨೦೧೩ರ ಆಗಮನದೊಡನೆ ಎಲ್ಲ ಬಳಕೆದಾರರಿಗೂ ಕ್ಲೌಡ್ ಸೌಲಭ್ಯ ಸಿಗಲಿದೆ. ಸಾಮಾನ್ಯ ಬಳಕೆದಾರರನ್ನೂ ಕ್ಲೌಡಿನತ್ತ ಕರೆದೊಯ್ದಿರುವ ಗೂಗಲ್ ಸಂಸ್ಥೆ ತನ್ನ ಗೂಗಲ್ ಡಾಕ್ಸ್ ಸೇವೆಯ ಮೂಲಕ ನಮ್ಮ ಕಡತಗಳನ್ನು ಅಂತರಜಾಲದಲ್ಲೇ ಸೃಷ್ಟಿಸಿ ಅಲ್ಲಿಯೇ ಉಳಿಸಿಡುವ, ಬೇಕೆಂದಾಗ ಬೇಕಾದ ಕಡೆ ಪಡೆದುಕೊಳ್ಳುವ ಸೌಲಭ್ಯ ಕೊಟ್ಟಿದೆ. ಆಪಲ್ ಉತ್ಪನ್ನಗಳ ಬಳಕೆದಾರರಿಗೆ ಅವರದೇ ಆದ ಒಂದು ಕ್ಲೌಡ್ ವ್ಯವಸ್ಥೆ ಇದೆ. ಅಂತರಜಾಲದಲ್ಲಿ ಗಿಗಾಬೈಟ್‌ಗಟ್ಟಲೆ ಮಾಹಿತಿ ಸಂಗ್ರಹಿಸಿಡಲು ಅವಕಾಶಕೊಡುವ ಗೂಗಲ್ ಡ್ರೈವ್, ಡ್ರಾಪ್‌ಬಾಕ್ಸ್, ಸ್ಕೈಡ್ರೈವ್ ಮುಂತಾದ ತಾಣಗಳೂ ಕ್ಲೌಡ್ ಪರಿಕಲ್ಪನೆ ಬಳಸುತ್ತಿವೆ. ನಮ್ಮ ವೈಯಕ್ತಿಕ ಮಾಹಿತಿಯಿಂದ ತುಂಬಿ ತುಳುಕುತ್ತಿರುವ ಫೇಸ್‌ಬುಕ್‌ನಂತಹ ಸಮಾಜ ಜಾಲಗಳೂ ಕ್ಲೌಡ್ ಕಂಪ್ಯೂಟಿಂಗ್‌ನ ಉದಾಹರಣೆಗಳೇ!

ವಿಶ್ವಾಸಾರ್ಹತೆಯ ಪ್ರಶ್ನೆ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭವಿಷ್ಯವೇ ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿದೆ ಎನ್ನುವಂತಹ ಮಾತುಗಳು ಈಗಾಗಲೇ ಕೇಳಿಬರುತ್ತಿವೆ. ಮೊತ್ತಮೊದಲ ಕ್ಲೌಡ್ ಆಧರಿತ ಕಾರ್ಯಾಚರಣ ವ್ಯವಸ್ಥೆಯಾದ ಗೂಗಲ್ ಕ್ರೋಮ್ ಓಎಸ್ ಮಾರುಕಟ್ಟೆಗೆ ಬಂದು ಈಗಾಗಲೇ ಕೆಲಸಮಯ ಕಳೆದಿದೆ. ಸಂಸ್ಥೆಗಳ ಮಟ್ಟಿಗೆ ಕ್ಲೌಡ್ ಕಂಪ್ಯೂಟಿಂಗ್ ಈಗ ಹೊಸ ಪರಿಕಲ್ಪನೆಯಾಗೇನೂ ಉಳಿದಿಲ್ಲ.

ಹೀಗಿದ್ದರೂ ಈ ವ್ಯವಸ್ಥೆಯಲ್ಲಿ ನಮ್ಮ ಕಂಪ್ಯೂಟಿಂಗ್ ಅಗತ್ಯಗಳ ಸಂಪೂರ್ಣ ಜವಾಬ್ದಾರಿಯನ್ನು ಬೇರೊಬ್ಬರಿಗೆ ವಹಿಸಿಕೊಡಬೇಕಿರುವುದರಿಂದ ಇನ್ನೂ ಕೊಂಚ ಹಿಂಜರಿಕೆ-ಸಂಶಯಗಳು ಅಲ್ಲಲ್ಲಿ ಉಳಿದುಕೊಂಡಿವೆ. ಬೇರೆ ಯಾರದೋ ಸರ್ವರ್‌ನಲ್ಲಿ ಶೇಖರವಾಗುವ ಮಾಹಿತಿ ಸುರಕ್ಷಿತವಾಗಿರುತ್ತದೆ ಎಂದು ಏನು ಗ್ಯಾರಂಟಿ ಎಂದು ಕೇಳುವವರೂ ಇದ್ದಾರೆ. ಅದರ ಜೊತೆಗೆ ಕ್ಲೌಡ್ ಸೇವೆಯಲ್ಲಿ ಉಂಟಾಗಬಹುದಾದ ವ್ಯತ್ಯಯಗಳ ಬಗೆಗೂ ಒಂದಷ್ಟು ತಲೆಗಳು ಬಿಸಿಯಾಗಿವೆ (೨೦೧೧-೧೨ರಲ್ಲಿ ಕೆಲವು ಬಾರಿ ಅಮೆಜಾನ್ ಕ್ಲೌಡ್ ಸೇವೆಯಲ್ಲಿ ವ್ಯತ್ಯಯವಾಗಿ ಅನೇಕ ಸಂಸ್ಥೆಗಳು ತೊಂದರೆ ಅನುಭವಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು). ಇದಕ್ಕೆ ಪ್ರತಿಯಾಗಿ ವಾದಿಸುವವರೂ ಇದ್ದಾರೆ: ನಮ್ಮ ವ್ಯವಸ್ಥೆಯನ್ನು ನಾವೇ ರೂಪಿಸಿಕೊಂಡು ನಿರ್ವಹಿಸುವಾಗಲೂ ತೊಂದರೆಗಳು ಎದುರಾಗುವುದಿಲ್ಲವೆ? ಇಂತಹ ವ್ಯವಸ್ಥೆಗಳ ನಿರ್ವಹಣೆಯನ್ನು ನಮಗಿಂತ ಹೆಚ್ಚು ಸಮರ್ಥರಾದವರಿಗೆ ವಹಿಸಿಕೊಟ್ಟು ಜೊತೆಗಷ್ಟು ಹಣವನ್ನೂ ಉಳಿಸಿದರೆ ಅದರಲ್ಲೇನು ತಪ್ಪು? - ಇವು ಅವರು ಕೇಳುವ ಪ್ರಶ್ನೆಗಳು.

ಒಟ್ಟಿನಲ್ಲಿ ಕಂಪ್ಯೂಟರ್ ಪ್ರಪಂಚದ ಭವಿಷ್ಯ ಪೂರ್ಣವಾಗಿ ಕ್ಲೌಡಿನತ್ತಲೇ ಹೋಗುತ್ತದೆಯೋ ಅಥವಾ ಈಗಿರುವಂತೆಯೇ ಉಳಿದುಕೊಳ್ಳುತ್ತದೆಯೋ ಎನ್ನುವ ಪ್ರಶ್ನೆಗೆ ಖಚಿತ ಉತ್ತರ ಈಗಿನ್ನೂ ಸಿಕ್ಕಿಲ್ಲ; ಆದರೆ ಆ ಉತ್ತರಕ್ಕಾಗಿ ಬಹಳ ಕಾಲ ಕಾಯಬೇಕಿಲ್ಲ ಎನ್ನುವ ಅಭಿಪ್ರಾಯ ಮಾತ್ರ ಈಗಾಗಲೇ ವ್ಯಾಪಕವಾಗಿ ಕೇಳಿಬರುತ್ತಿದೆ.

ಜುಲೈ ೨೪, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

ವಿ.ರಾ.ಹೆ. ಹೇಳಿದರು...

ಅಬ್ಬಾ! ಎಂತೆಂತಾ ತಂತ್ರಜ್ಞಾನ ಬರ್ತಾ ಇದೆ ! ಇನ್ನೂ ಏನೇನೋ ನೋಡ್ಬೇಕೋ ಏನೋ!

badge