ಮಂಗಳವಾರ, ಜುಲೈ 10, 2012

ಫೋಟೋ ಮೇಕಪ್ ಬಗ್ಗೆ ಇನ್ನಷ್ಟು...

ಟಿ. ಜಿ. ಶ್ರೀನಿಧಿ

ಪ್ರವಾಸದ ಜೋಶ್‌ನಲ್ಲಿ ಕ್ಲಿಕ್ಕಿಸಿದ ಛಾಯಾಚಿತ್ರಗಳು ಮನೆಗೆ ಮರಳಿದ ಮೇಲೆ ಮೆಮೊರಿ ಕಾರ್ಡಿನಲ್ಲೋ ಹಾರ್ಡ್ ಡಿಸ್ಕಿನ ಮೂಲೆಯಲ್ಲೋ ಸುಮ್ಮನೆ ಉಳಿದುಬಿಡುವುದೇ ಹೆಚ್ಚು. ಕೆಲವೊಮ್ಮೆ ಸೋಮಾರಿತನದಿಂದ ಹೀಗಾದರೆ ಇನ್ನು ಕೆಲ ಸಾರಿ ಚಿತ್ರಗಳನ್ನು ಸೂಕ್ತವಾಗಿ ಬದಲಿಸಿಕೊಳ್ಳುವ ವಿಧಾನ ಕುರಿತ ಗೊಂದಲವೂ ಇದಕ್ಕೆ ಕಾರಣವಾಗಬಹುದು. ಆ ಗೊಂದಲವನ್ನು ಕೊಂಚಮಟ್ಟಿಗೆ ಹೋಗಲಾಡಿಸುವ ನಿಟ್ಟಿನಲ್ಲಿ ಕೆಲ ಸುಲಭ ಉಪಾಯಗಳನ್ನು ಕಳೆದವಾರದ ವಿಜ್ಞಾಪನೆ ಪರಿಚಯಿಸಿತು. ಕಳೆದ ವಾರದ ಲೇಖನದ ಮುಂದುವರಿಕೆಯಾಗಿ ಡಿಜಿಟಲ್ ಛಾಯಾಚಿತ್ರಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ಮಾಹಿತಿ ಈ ಲೇಖನದಲ್ಲಿದೆ.

***

ನಮ್ಮ ಅಗತ್ಯಕ್ಕೆ ತಕ್ಕಂತೆ ಚಿತ್ರಗಳನ್ನು ಬದಲಾಯಿಸುವಾಗ ಮೂಲವನ್ನು ಹಾಗೆಯೇ ಉಳಿಸಿಕೊಂಡು ಅದರ ಪ್ರತಿಯನ್ನಷ್ಟೆ ಬದಲಾಯಿಸುವುದು ಉತ್ತಮ.

ಉದಾಹರಣೆಗೆ ನಾವೀಗ ಛಾಯಾಚಿತ್ರದ ಗಾತ್ರವನ್ನು ಸಣ್ಣದಾಗಿಸಿಕೊಳ್ಳಲು ಹೊರಟಿದ್ದೇವೆ ಎಂದುಕೊಳ್ಳೋಣ. ಚಿತ್ರಗಳನ್ನು ನಮ್ಮ ಆಪ್ತರೊಡನೆ ಹಂಚಿಕೊಳ್ಳುವ ಮುನ್ನ ಅದನ್ನು ಸಣ್ಣ ಗಾತ್ರಕ್ಕೆ ಬದಲಿಸಿಕೊಳ್ಳುವುದೇನೋ ಒಳ್ಳೆಯ ಉಪಾಯವೇ, ಆದರೆ ಹನ್ನೆರಡು ಮೆಗಾಪಿಕ್ಸೆಲ್‌ನಲ್ಲಿ ತೆಗೆದ ಚಿತ್ರದ ಗಾತ್ರವನ್ನು ಇದ್ದಕ್ಕಿದ್ದಂತೆ ಅದರ ನಾಲ್ಕನೇ ಒಂದು ಭಾಗಕ್ಕೆ ಇಳಿಸಿಬಿಟ್ಟರೆ ಆ ಚಿತ್ರದ ಗುಣಮಟ್ಟ ಶಾಶ್ವತವಾಗಿ ಕಡಿಮೆಯಾಗಿಬಿಡುತ್ತದೆ. ಇಮೇಲ್ ಮಾಡಲು ಅಥವಾ ಸಣ್ಣಗಾತ್ರದಲ್ಲಿ ಮುದ್ರಿಸಲು ಇದರಿಂದ ತೊಂದರೆಯಾಗಲಿಕ್ಕಿಲ್ಲವಾದರೂ ದೊಡ್ಡ ಗಾತ್ರದಲ್ಲಿ ಮುದ್ರಿಸಿದಾಗ ಚಿತ್ರದ ಗುಣಮಟ್ಟ ಚೆನ್ನಾಗಿರುವುದಿಲ್ಲ. ಇನ್ನು ವರ್ಣಚಿತ್ರವನ್ನು ಕಪ್ಪು-ಬಿಳುಪಿಗೆ ಅಥವಾ ಕಂದುಬಣ್ಣಕ್ಕೆ (ಸೇಪಿಯಾ) ಪರಿವರ್ತಿಸಿಬಿಟ್ಟಾಗಲೂ ಅದರ ಮೂಲರೂಪ ಶಾಶ್ವತವಾಗಿ ಕಳೆದುಹೋಗುತ್ತದೆ. ಹಾಗಾಗಿ ಚಿತ್ರವನ್ನು ಬದಲಿಸುವ ಮುನ್ನ ಅದನ್ನು ಪ್ರತಿಮಾಡಿಟ್ಟುಕೊಳ್ಳುವುದು ಒಳ್ಳೆಯದು.

ಚಿತ್ರವನ್ನು ಬೇರೆಯವರಿಗೆ ಕಳುಹಿಸಲು ಇಮೇಲ್ ಹಾಗೂ ಸಮಾಜಜಾಲಗಳು ಒಳ್ಳೆಯ ಮಾಧ್ಯಮಗಳೆನ್ನುವುದು ನಮಗೆ ಈಗಾಗಲೇ ಗೊತ್ತು. ಇವೆರಡೇ ಅಲ್ಲದೆ ಮೈಕ್ರೋಸಾಫ್ಟ್ ವರ್ಡ್ ಕಡತ ಅಥವಾ ಪವರ್‌ಪಾಯಿಂಟ್ ಪ್ರೆಸೆಂಟೇಶನ್‌ಗಳ ಮೂಲಕವೂ ಚಿತ್ರಗಳನ್ನು ಹಂಚಿಕೊಳ್ಳುವ ಅಭ್ಯಾಸ ಹಲವರಿಗಿದೆ. ಇಂತಹ ಕಡತಗಳಲ್ಲಿ ಚಿತ್ರವನ್ನು ಸೇರಿಸಿದಾಗ ಅದು ಪರದೆಯ ಮೇಲೆ ಎಷ್ಟು ದೊಡ್ಡದಾಗಿ ಕಾಣುತ್ತದೆ ಎನ್ನುವುದನ್ನು ಚಿತ್ರದ ಅಳತೆ ('ಸೈಜ್') ನಿರ್ಧರಿಸುತ್ತದೆ; ಮೂಲ ಚಿತ್ರ ಎಷ್ಟೇ ದೊಡ್ಡದಾಗಿದ್ದರೂ ಅದನ್ನು ನಮಗೆ ಬೇಕಾದ ಪ್ರಮಾಣಕ್ಕೆ ಕುಗ್ಗಿಸಿಕೊಳ್ಳಬಹುದು.

ಈಗ ಐದು ಎಂಬಿಯಷ್ಟು ದೊಡ್ಡದಾದ ಚಿತ್ರವನ್ನು ವರ್ಡ್ ಕಡತಲ್ಲಿ ಎರಡೇ ಸೆಂಟೀಮೀಟರ್ ಅಗಲದೊಳಗೆ ಇರುಕಿಸಿಟ್ಟಿದ್ದೇವೆ ಎಂದುಕೊಳ್ಳೋಣ. ಪರದೆಯ ಮೇಲೆ ಚಿತ್ರ ಚಿಕ್ಕದಾಗಿ ಕಂಡಮಾತ್ರಕ್ಕೆ ವರ್ಡ್ ಕಡತದ ಗಾತ್ರವೇನೂ ಕಡಿಮೆಯಾಗಿರುವುದಿಲ್ಲ; ಅದೂ ಐದು ಎಂಬಿ (ಅಥವಾ ಅದಕ್ಕಿಂತ ಹೆಚ್ಚೇ) ಇರುತ್ತದೆ! ಚಿಕ್ಕ ಚಿತ್ರ ಕಾಣುವುದಷ್ಟೇ ಅಲ್ಲ, ಕಡತದ ಗಾತ್ರವೂ ಚಿಕ್ಕದಾಗಬೇಕು ಎನ್ನುವುದಾದರೆ ನಾವು ಆ ಚಿತ್ರವನ್ನು 'ಕಂಪ್ರೆಸ್' ಮಾಡಬೇಕಾಗುತ್ತದೆ. 'ಕಂಪ್ರೆಸ್ ಪಿಕ್ಚರ್' ಆಯ್ಕೆ ಬಳಸಿ ಚಿತ್ರದ ಗುಣಮಟ್ಟವನ್ನು ಇಳಿಸಿದಾಗಲಷ್ಟೆ ಕಡತದ ಗಾತ್ರವೂ ಇಳಿಯುತ್ತದೆ. ಅಟ್ಯಾಚ್‌ಮೆಂಟ್ ರೂಪದಲ್ಲಿ ಚಿತ್ರಗಳಿರುವ ಕಡತವನ್ನು ಕಳುಹಿಸುವಾಗ ಈ ಅಂಶವನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು!

***

ಡಿಜಿಟಲ್ ಕ್ಯಾಮೆರಾ ಬಂದಮೇಲೆ ತೆಗೆದ ಫೋಟೋಗಳನ್ನೆಲ್ಲ ಪ್ರಿಂಟು ಮಾಡಿಸಿಯೇ ನೋಡಬೇಕೆಂಬ ಅನಿವಾರ್ಯತೆ ಹೋಗಿದೆ. ಆದರೂ ಬೇಕಾದಷ್ಟು ಜನ ತಮಗೆ ಇಷ್ಟವಾದ ಚಿತ್ರಗಳನ್ನಷ್ಟೆ ಆಯ್ದು ಮುದ್ರಿಸಿಕೊಳ್ಳುವ ಅಭ್ಯಾಸವನ್ನೂ ಈಗಲೂ ಇಟ್ಟುಕೊಂಡಿದ್ದಾರೆ.

ಹೀಗೆ ಮುದ್ರಿಸಿಕೊಳ್ಳುವಾಗ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ಮೊದಲನೆಯದೆಂದರೆ ಚಿತ್ರದ ಅಳತೆ - ಸಾಮಾನ್ಯವಾಗಿ ಫೋಟೋ ಪ್ರಿಂಟುಗಳು ನಿರ್ದಿಷ್ಟ ಅಳತೆಯಲ್ಲೇ ಇರುವುದರಿಂದ (ಉದಾ: ೪ ಇಂಚು x ೬ ಇಂಚು, ೫ ಇಂಚು x ೭ ಇಂಚು) ನಾವು ಮುದ್ರಣಕ್ಕೆ ಕೊಡುವ ಚಿತ್ರಗಳೂ ಆ ಅಳತೆಯೊಳಗೆ ಸರಿಯಾಗಿ ಹೊಂದಿಕೊಳ್ಳುವಂತಿರಬೇಕು. ಅಂದರೆ, ನಿರ್ದಿಷ್ಟ ಅಳತೆಯನ್ನು ಗಮನದಲ್ಲಿಟ್ಟುಕೊಂಡೇ ನಾವು ಚಿತ್ರವನ್ನು ಕ್ರಾಪ್ ಮಾಡಿರಬೇಕು.

ಫೋಟೋ ಮುದ್ರಿಸಿಕೊಳ್ಳಲು ಸ್ಟೂಡಿಯೋಗೆ ಹೋಗುವುದಾದರೆ ಚಿತ್ರದ ಕಡತ ಎಷ್ಟು ದೊಡ್ಡದಾದರೂ ಯೋಚನೆಯಿಲ್ಲ, ಬೇಕಾದ ಚಿತ್ರಗಳನ್ನೆಲ್ಲ ಒಂದು ಪೆನ್‌ಡ್ರೈವ್‌ನಲ್ಲಿ ಹಾಕಿ ತೆಗೆದುಕೊಂಡುಹೋದರೆ ಮುಗಿಯುತ್ತದೆ. ಇಷ್ಟೆಲ್ಲ ಓಡಾಡಲು ಕಷ್ಟ ಎನ್ನುವವರು ಫೋಟೋ ಮುದ್ರಣಕ್ಕೆ ಲಭ್ಯವಿರುವ ಆನ್‌ಲೈನ್ ಸೇವೆಗಳನ್ನು ಬಳಸಿಕೊಳ್ಳಬಹುದು. ಜೂಮಿನ್ (www.zoomin.com), ಸ್ನಾಪ್‌ಫಿಶ್ (www.snapfish.in) ಮುಂತಾದ ಹಲವು ಜಾಲತಾಣಗಳು ಈ ಬಗೆಯ ಸೇವೆ ಒದಗಿಸುತ್ತವೆ. ಈ ತಾಣಗಳಿಗೆ ಚಿತ್ರವನ್ನು ಅಪ್‌ಲೋಡ್ ಮಾಡಿ ನಮಗೆ ಬೇಕಾದ ರೀತಿಯ ಪ್ರಿಂಟುಗಳನ್ನು, ನಮ್ಮ ಚಿತ್ರ ಮುದ್ರಿಸಿರುವ ಉಡುಗೊರೆ ಸಾಮಗ್ರಿಗಳನ್ನು ಮನೆಗೇ ತರಿಸಿಕೊಳ್ಳುವುದು ಸಾಧ್ಯ. ಅಪ್‌ಲೋಡ್ ಮಾಡಿದ ಚಿತ್ರಗಳಿಗೆ ಅಂತರಜಾಲದಲ್ಲೇ ಸಣ್ಣಪುಟ್ಟ ಬದಲಾವಣೆ ಮಾಡುವ ಸೌಲಭ್ಯವನ್ನೂ ಇಂತಹ ತಾಣಗಳು ನೀಡುತ್ತವೆ. ಪ್ರಿಂಟ್ ತರಿಸಿ ಅದನ್ನು ಸಾಂಪ್ರದಾಯಿಕ ಆಲ್ಬಮ್ಮಿನೊಳಗೆ ಹಾಕಿಡುವುದು ಬೋರು ಎನ್ನುವವರು ತಮಗೆ ಬೇಕಾದಂತೆ ಚಿತ್ರಗಳನ್ನು ಜೋಡಿಸಿ, ಅಲಂಕರಿಸಿ ಪುಸ್ತಕ ರೂಪಕ್ಕೂ ತಂದುಕೊಳ್ಳಬಹುದು. ಈ ವಿನ್ಯಾಸಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳೂ ಜಾಲತಾಣದಲ್ಲೇ ಇರುತ್ತವೆ.

***

ಅಂತರಜಾಲದಲ್ಲೇ ಫೋಟೋ ಎಡಿಟಿಂಗ್ ಮಾಡುವುದು ಚಿತ್ರಗಳನ್ನು ಪ್ರಿಂಟುಮಾಡಿಸುವಾಗ ಮಾತ್ರ ಎಂದೇನೂ ಇಲ್ಲ. ಚಿತ್ರಗಳಿಗೆ ಮೇಕಪ್ ಮಾಡಲು ಬೇಕಾದ ತಂತ್ರಾಂಶ ನಮ್ಮ ಕಂಪ್ಯೂಟರಿನಲ್ಲಿ ಇಲ್ಲ ಎನ್ನುವುದಾದರೆ ಅವನ್ನು ಅಂತರಜಾಲದಲ್ಲೇ ಚೆಂದಕಾಣಿಸುವ ಸೌಲಭ್ಯವನ್ನು ಹಲವು ಜಾಲತಾಣಗಳು ಒದಗಿಸುತ್ತವೆ. ಗೂಗಲ್‌ನಲ್ಲಿ 'ಆನ್‌ಲೈನ್ ಫೋಟೋ ಎಡಿಟಿಂಗ್' ಎಂದು ಟೈಪ್ ಮಾಡಿದರೆ ಸಾಕು, ಇಂತಹ ಹತ್ತಾರು ತಾಣಗಳ ಪಟ್ಟಿ ನಿಮ್ಮೆದುರು ನಿಲ್ಲುತ್ತದೆ. ಸಮಾಜ ಜಾಲಗಳ ಪೈಕಿ ಗೂಗಲ್ ಪ್ಲಸ್‌ನಲ್ಲಿಯೂ ಇಂತಹುದೇ ಸೌಲಭ್ಯ ಇದೆ.

ಚಿತ್ರದ ಬ್ರೈಟ್‌ನೆಸ್, ಕಾಂಟ್ರಾಸ್ಟ್ ಇತ್ಯಾದಿಗಳನ್ನು ಬದಲಿಸುವಂತಹ ಸಾಮಾನ್ಯ ಆಯ್ಕೆಗಳಷ್ಟೆ ಅಲ್ಲದೆ ಚಿತ್ರದಲ್ಲಿರುವ ಮನುಷ್ಯನ ಮುಖದಲ್ಲಿರುವ ಸುಕ್ಕು ಕಾಣಿಸದಂತೆ ಮಾಡುವ, ಮೊಡವೆಗಳನ್ನು ಮರೆಮಾಚುವ, ಹಲ್ಲು ಬೆಳ್ಳಗೆ ಕಾಣುವಂತೆ ಮಾಡುವ ಆಯ್ಕೆಗಳೂ ಕೆಲ ತಂತ್ರಾಂಶಗಳಲ್ಲಿರುತ್ತವೆ. ಚಿತ್ರದಲ್ಲಿರುವವರ ಕಣ್ಣು ಕೆಂಪಗಾಗಿಸುವ 'ರೆಡ್ ಐ' ಸಮಸ್ಯೆಯನ್ನೂ ಇವು ಸುಲಭವಾಗಿ ನಿವಾರಿಸಬಲ್ಲವು. ಚಿತ್ರಕ್ಕೆ ಚೆಂದನೆಯ ಬಾರ್ಡರ್ ಹಾಕುವ, ಪುಟ್ಟದೊಂದು ಬರೆಹ ಸೇರಿಸುವ, ಸ್ಪೆಷಲ್ ಇಫೆಕ್ಟ್ ಕೊಡುವ - ಒಟ್ಟಿನಲ್ಲಿ ನಿಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಆಗಿರುವ ಸಾಮಾನ್ಯ ತಂತ್ರಾಂಶಗಳಲ್ಲಿ ಏನೆಲ್ಲ ಸೌಲಭ್ಯಗಳಿರುತ್ತವೋ ಅವೆಲ್ಲ, ಹಾಗೂ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಸೌಲಭ್ಯಗಳು ಇಂತಹ ಆನ್‌ಲೈನ್ ತಂತ್ರಾಂಶಗಳಲ್ಲಿರುತ್ತವೆ. ನೀವು ಬದಲಾಯಿಸಬಯಸುವ ಪ್ರತಿ ಚಿತ್ರವನ್ನೂ ಅಪ್‌ಲೋಡ್ ಮಾಡಬೇಕು, ಹಾಗೂ ಬದಲಾಯಿಸಿದ ಮೇಲೆ ಮತ್ತೆ ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಬೇಕು ಎನ್ನುವುದೊಂದೆ ವ್ಯತ್ಯಾಸ ಅಷ್ಟೆ. ಚಿತ್ರದ ಗಾತ್ರ ಕಡಿಮೆ ಮಾಡದೆ ಹಾಗೆಯೇ ಪ್ರಯತ್ನಿಸಿದರೆ ಅದನ್ನು ಅಪ್‌ಲೋಡ್ ಮಾಡಲು ಹಾಗೂ ಬದಲಿಸಲು ಹೆಚ್ಚು ಸಮಯ ಬೇಕಾಗುತ್ತದೆ; ಅಷ್ಟೇ ಅಲ್ಲ, ಬ್ರಾಡ್‌ಬ್ಯಾಂಡ್ ಬಿಲ್ ಕೂಡ ಜಾಸ್ತಿಯಾಗಬಹುದು!

***

ಸಣ್ಣಪುಟ್ಟ ಬದಲಾವಣೆಗಳಷ್ಟೆ ಸಾಲದು, ಫೋಟೋ ಎಡಿಟಿಂಗ್‌ನ ಎಲ್ಲ ಆಯಾಮಗಳನ್ನೂ ತಿಳಿದುಕೊಳ್ಳಬೇಕು - ಪ್ರಯತ್ನಿಸಿನೋಡಬೇಕು ಎನ್ನುವವರು ಈ ಉದ್ದೇಶಕ್ಕಾಗಿ ಸಿಗುವ ಫೋಟೋಶಾಪ್‌ನಂತಹ ವಿಶೇಷ ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಬಳಸಬಹುದು. ಅದಕ್ಕೆ ಪಾವತಿಸಬೇಕಾದ ದುಬಾರಿ ಶುಲ್ಕ, ಇಲ್ಲವೇ ಪೈರಸಿ ಸಹವಾಸ ಎರಡೂ ಬೇಡ ಎನ್ನುವವರು ಮುಕ್ತ ತಂತ್ರಾಂಶವಾದ 'ಗಿಂಪ್' ಅನ್ನು ಬಳಸಬಹುದು. ಈ ತಂತ್ರಾಂಶ www.gimp.org ತಾಣದಲ್ಲಿ ಉಚಿತವಾಗಿ ಸಿಗುತ್ತದೆ.

ಅದೆಲ್ಲ ಏನೇ ಇದ್ದರೂ ಒಂದು ವಿಷಯ ಮಾತ್ರ ನಿಮ್ಮ ಗಮನದಲ್ಲಿರಲಿ - ಫೋಟೋ ಎಡಿಟಿಂಗ್ ಎನ್ನುವುದು ಚೆನ್ನಾಗಿಲ್ಲದ ಚಿತ್ರವನ್ನು ಚೆನ್ನಾಗಿ ಕಾಣುವಂತೆ ಮಾಡುವ ಮಾಯಾಜಾಲವೇನೂ ಅಲ್ಲ; ನೀವು ಕ್ಲಿಕ್ಕಿಸಿದ ಚೆಂದದ ಚಿತ್ರಗಳನ್ನು ಇನ್ನಷ್ಟು ಚೆಂದಗಾಣಿಸಲು ಸಹಾಯಮಾಡುವುದಷ್ಟೆ ಅದರ ಕೆಲಸ. ಹಾಗಾಗಿ ಫೋಟೋ ಎಡಿಟಿಂಗ್ ಫಲಿತಾಂಶ ಚೆನ್ನಾಗಿರಬೇಕಾದರೆ ಮೂಲ ಫೋಟೋ ಕೂಡ ತಕ್ಕಮಟ್ಟಿಗೆ ಚೆನ್ನಾಗಿರಲೇಬೇಕು.

***

ಫೋಟೋ ಎಡಿಟಿಂಗ್ ಬಗ್ಗೆ ಒಂದಷ್ಟು ಮಾಹಿತಿ ಹಾಗೂ ಇನ್ನೊಂದಷ್ಟು ಪ್ರಯತ್ನ ಇದ್ದರೆ ಚಿತ್ರಗಳನ್ನು ಚೆಂದಗಾಣಿಸುವ ಕೆಲಸ ನೀರು ಕುಡಿದಷ್ಟೇ ಸುಲಭ. ನೀವೂ ಪ್ರಯತ್ನಿಸಿನೋಡಿ, ಫೋಟೋಗಳಿಗೆ ಮೇಕಪ್ ಮಾಡುವ ನಿಮ್ಮ ಬ್ಯೂಟಿ ಪಾರ್ಲರ್ ಚೆನ್ನಾಗಿ ನಡೆಯಲಿ!

ಜುಲೈ ೧೦, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge