ಮಂಗಳವಾರ, ಜುಲೈ 17, 2012

ಬ್ರೌಸರ್ ಬೈಟ್ಸ್

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ಕಂಪ್ಯೂಟರಿನಲ್ಲಿ ವೀಕ್ಷಿಸಲು ಬ್ರೌಸರ್ ಅಥವಾ ವೀಕ್ಷಕ ತಂತ್ರಾಂಶಗಳು ಬಳಕೆಯಾಗುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಲು ಈ ತಂತ್ರಾಂಶ ಅತ್ಯಗತ್ಯ. ವಿಶ್ವದ ಯಾವುದೋ ಮೂಲೆಯ ಸರ್ವರ್‌ನಲ್ಲಿ ಕುಳಿತಿರಬಹುದಾದ ಜಾಲತಾಣದ ಪುಟಗಳನ್ನು ನಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬ್ರೌಸರ್ ತಂತ್ರಾಂಶ ಅನುವುಮಾಡಿಕೊಡುತ್ತದೆ.

೧೯೯೩ರಲ್ಲಿ ವಿಶ್ವದ ಮೊತ್ತಮೊದಲ ಬ್ರೌಸರ್ 'ಮೊಸಾಯಿಕ್' ಸಿದ್ಧವಾದ ನಂತರ ಅನೇಕ ಬ್ರೌಸರ್ ತಂತ್ರಾಂಶಗಳು ಬಂದುಹೋಗಿವೆ. ಈಗ ಪ್ರಚಲಿತದಲ್ಲಿರುವ ಬ್ರೌಸರ್‌ಗಳಲ್ಲಿ ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಗೂಗಲ್ ಕ್ರೋಮ್ ಮೊದಲಾದವು ಮುಖ್ಯವಾದವು. ಕೆಲ ಬ್ರೌಸರ್‌ಗಳ ಕನ್ನಡ ಆವೃತ್ತಿಯೂ ಇದೆ.

ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು - ಇವೆಲ್ಲ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.

ಬ್ರೌಸರ್‌ಗಳ ಅತಿ ಮುಖ್ಯ ಅಂಗ 'ಅಡ್ರೆಸ್ ಬಾರ್' ಅಥವಾ ವಿಳಾಸ ಪಟ್ಟಿ. ನಮಗೆ ಬೇಕಾದ ಜಾಲತಾಣದ ವಿಳಾಸವನ್ನು (ಯುಆರ್‌ಎಲ್) ಈ ವಿಳಾಸ ಪಟ್ಟಿಯಲ್ಲಿ ದಾಖಲಿಸಬೇಕು.

ಒಂದಕ್ಕಿಂತ ಹೆಚ್ಚು ಪುಟಗಳನ್ನು ವೀಕ್ಷಿಸಿದಾಗ ಆ ಪುಟಗಳ ಹಿಂದೆ-ಮುಂದೆ ಓಡಾಡಲು 'ಬ್ಯಾಕ್' ಹಾಗೂ 'ಫಾರ್‌ವರ್ಡ್', ಪುಟ ಎಷ್ಟು ತೆರೆದುಕೊಂಡಿದೆಯೋ ಅಷ್ಟಕ್ಕೇ ನಿಲ್ಲಿಸುವ 'ಸ್ಟಾಪ್', ಸದ್ಯದಲ್ಲಿ ತೆರೆದುಕೊಂಡಿರುವ ಪುಟದ ಇತ್ತೀಚಿನ ಆವೃತ್ತಿಯನ್ನು ತೆರೆಯುವ 'ರಿಫ್ರೆಷ್', ತೆರೆದಿರುವ ಪುಟವನ್ನು ಮುದ್ರಿಸಲು ಸಹಾಯಮಾಡುವ 'ಪ್ರಿಂಟ್', ಕಂಪ್ಯೂಟರಿನಲ್ಲಿ ಉಳಿಸಿಕೊಳಲು ನೆರವಾಗುವ 'ಸೇವ್' - ಹೀಗೆ ಬ್ರೌಸರ್ ತಂತ್ರಾಂಶದಲ್ಲಿ ಅನೇಕ ಆಯ್ಕೆಗಳಿರುತ್ತವೆ.

ಆನ್‌ಲೈನ್ ಶಾಪಿಂಗ್, ಶೇರು ಖರೀದಿ, ಬ್ಯಾಂಕಿಂಗ್ ವ್ಯವಹಾರ ಮುಂತಾದ ಸಂದರ್ಭಗಳಲ್ಲಿ ಹಣ ಪಾವತಿ ಪ್ರಗತಿಯಲ್ಲಿದ್ದಾಗ ನಿಮ್ಮ ಬ್ರೌಸರಿನಲ್ಲಿ ಬ್ಯಾಕ್, ಫಾರ್‌ವರ್ಡ್, ರಿಫ್ರೆಷ್ ಆಯ್ಕೆಗಳನ್ನು ಬಳಸದಿರುವುದು ಒಳ್ಳೆಯದು. ವ್ಯವಹಾರ ಅರ್ಧದಲ್ಲಿದ್ದಾಗ ಈ ಯಾವುದೇ ಆಯ್ಕೆ ಬಳಸಿದರೂ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಖಾತೆಯಿಂದ ಎರಡೆರಡು ಬಾರಿ ಹಣ ಪಾವತಿಯಾದರೂ ಆಗಬಹುದು!

ಬ್ರೌಸರ್ ತಂತ್ರಾಂಶ ಬಳಸಿ ಒಂದೇಬಾರಿಗೆ ಎಷ್ಟು ಜಾಲತಾಣಗಳನ್ನು ಬೇಕಾದರೂ ತೆರೆಯಬಹುದು. ಕೆಲ ವರ್ಷಗಳ ಹಿಂದಿನ ಬ್ರೌಸರುಗಳಲ್ಲಿ ಒಂದು ವಿಂಡೋದಲ್ಲಿ ಒಂದೇ ಜಾಲತಾಣವನ್ನು ತೆರೆಯುವುದು ಸಾಧ್ಯವಿತ್ತು. ಆದರೆ ಈಚಿನ ಬ್ರೌಸರುಗಳಲ್ಲಿ ಬಳಕೆಗೆ ಬಂದಿರುವ ಟ್ಯಾಬ್ ಪರಿಕಲ್ಪನೆಯಿಂದಾಗಿ ಒಂದೇ ವಿಂಡೋದಲ್ಲಿ ಹೆಚ್ಚು ಸಂಖ್ಯೆಯ ಜಾಲತಾಣಗಳನ್ನು ಟ್ಯಾಬ್‌ಗಳ ರೂಪದಲ್ಲಿ ತೆರೆದಿಟ್ಟುಕೊಳ್ಳುವುದು ಕೂಡ ಸಾಧ್ಯವಾಗಿದೆ.

ನೀವು ತೆರೆದ ಜಾಲತಾಣಗಳೆಲ್ಲ ಒಂದೇ ಪರದೆಯಲ್ಲಿ ಬೇರೆಬೇರೆ ಪುಟಗಳಂತೆ ತೆರೆದುಕೊಳ್ಳುವುದರಿಂದ ಹತ್ತಾರು ಬ್ರೌಸರ್ ವಿಂಡೋಗಳನ್ನು ತೆರೆದಿಟ್ಟುಕೊಂಡು ಪರದಾಡುವುದು ಬೇಕಿಲ್ಲ. ಹಾಗೆಂದು ಒಂದೇ ಬಾರಿ ಅನೇಕ ಜಾಲತಾಣಗಳನ್ನು ಹತ್ತಾರು ಟ್ಯಾಬ್‌ಗಳಲ್ಲಿ ತೆರೆದಿಟ್ಟುಕೊಳ್ಳುವುದು ಒಳ್ಳೆಯದಲ್ಲ; ಅದರಿಂದ ಬ್ರೌಸರ್ ಕಾರ್ಯಾಚರಣೆ ನಿಧಾನವಾಗಬಹುದು.

'ಹಿಸ್ಟರಿ' (ಬಳಕೆಯ ಇತಿಹಾಸ) ಹಾಗೂ 'ಫೇವರಿಟ್ಸ್' (ಅಚ್ಚುಮೆಚ್ಚಿನ ತಾಣಗಳು) - ಇವು ಎಲ್ಲ ಬ್ರೌಸರ್‌ಗಳಲ್ಲೂ ಇರುವ ಇನ್ನೆರಡು ಸೌಲಭ್ಯಗಳು. ನಾವು ಈವರೆಗೂ ತೆರೆದಿರುವ ಎಲ್ಲ ಪುಟಗಳ ವಿಳಾಸಗಳು ಹಿಸ್ಟರಿಯಲ್ಲಿ ಉಳಿದಿರುತ್ತವೆ. ಇದರಿಂದ ಆ ಪಟ್ಟಿಯಲ್ಲಿರುವ ತಾಣಗಳನ್ನು - ಮತ್ತೆ ವಿಳಾಸವನ್ನು ಬೆರಳಚ್ಚಿಸುವ ಅಗತ್ಯವಿಲ್ಲದೆ - ಸುಲಭವಾಗಿ ತೆರೆಯುವುದು ಸಾಧ್ಯವಾಗುತ್ತದೆ.

ಅಷ್ಟೇ ಅಲ್ಲ, ನಾವು ಭೇಟಿನೀಡಿದ ತಾಣದಲ್ಲಿದ್ದ ಕೆಲವಷ್ಟು ಮಾಹಿತಿಯನ್ನೂ (ಉದಾ: ಚಿತ್ರಗಳು) ಬ್ರೌಸರ್ ತಂತ್ರಾಂಶ ನಮ್ಮ ಕಂಪ್ಯೂಟರಿನಲ್ಲಿ ಉಳಿಸಿಡುತ್ತದೆ. ಮತ್ತೊಮ್ಮೆ ಅದೇ ತಾಣಕ್ಕೆ ಹೋದಾಗ ಅಲ್ಲಿನ ಪುಟಗಳು ಆದಷ್ಟೂ ಬೇಗನೆ ತೆರೆದುಕೊಳ್ಳುವಂತೆ ಮಾಡುವುದು ಇದರ ಉದ್ದೇಶ.

ನಾವು ಸಂದರ್ಶಿಸಿದ ತಾಣಗಳ ಪಟ್ಟಿ ಬೇರೆಯವರಿಗೆ ಗೊತ್ತಾಗುವುದು ಬೇಡ ಎಂದರೆ ಆ ಪಟ್ಟಿಯನ್ನು ಅಳಿಸಿಹಾಕಬಹುದು. ಅಷ್ಟೇ ಅಲ್ಲ, ಇಂತಹ ಮಾಹಿತಿಯ ಸಂಗ್ರಹ ತೀರಾ ಹೆಚ್ಚಾದರೆ ಬ್ರೌಸರ್ ತಂತ್ರಾಂಶದ ಕೆಲಸವೇ ನಿಧಾನವಾಗಬಹುದು. ಹೀಗಾಗಿಯೇ ಬ್ರೌಸಿಂಗ್ ಇತಿಹಾಸವನ್ನು ಆಗಿಂದಾಗ್ಗೆ ಅಳಿಸಿಹಾಕುವುದು ಒಳ್ಳೆಯದು. ನಾವು ಬ್ರೌಸರ್ ತಂತ್ರಾಂಶವನ್ನು ಮುಚ್ಚುತ್ತಿದ್ದಂತೆಯೇ ಈ ವಿವರಗಳೆಲ್ಲ ಸ್ವಯಂಚಾಲಿತವಾಗಿ ಅಳಿಸಿಹೋಗುವಂತೆ ಮಾಡುವುದು ಕೂಡ ಸಾಧ್ಯ. ಇದಕ್ಕೆ ಬೇಕಾದ ಆಯ್ಕೆಗಳು ಬಹುತೇಕ ಎಲ್ಲ ಬ್ರೌಸರುಗಳ 'ಟೂಲ್ಸ್' ಅಥವಾ 'ಆಪ್ಷನ್ಸ್' ಮೆನುವಿನಲ್ಲಿ ಸಿಗುತ್ತದೆ.

ಪದೇಪದೇ ಭೇಟಿನೀಡುವ ತಾಣಗಳ ವಿಳಾಸಗಳನ್ನು ಪ್ರತಿಸಲವೂ ಟೈಪುಮಾಡಲು ಬೇಜಾರು ಎನ್ನುವುದಾದರೆ ಆ ತಾಣಗಳ ಹೆಸರು-ವಿಳಾಸಗಳನ್ನು 'ಫೇವರಿಟ್ಸ್' ಅಥವಾ ಅಚ್ಚುಮೆಚ್ಚಿನ ತಾಣಗಳ ಪಟ್ಟಿಯಲ್ಲಿ ದಾಖಲಿಸಿಡಬಹುದು. ಮುಂದೆ ಆ ತಾಣಕ್ಕೆ ಭೇಟಿ ನೀಡಬೇಕಾದಾಗ ಫೇವರಿಟ್ಸ್ ಪಟ್ಟಿಯನ್ನು ತೆರೆದು ಆ ತಾಣದ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಸಾಕು.

ನಾವು ಹೆಚ್ಚುಬಾರಿ ವೀಕ್ಷಿಸುವ ತಾಣ ಅಥವಾ ಪುಟವನ್ನು ನಮ್ಮ 'ಹೋಮ್ ಪೇಜ್' ಆಗಿ ಆರಿಸಿಕೊಳ್ಳುವ ಸೌಕರ್ಯ ಕೂಡ ಎಲ್ಲ ಬ್ರೌಸರ್‌ಗಳಲ್ಲೂ ಇರುತ್ತದೆ. ಹೀಗೆ ಆರಿಸಿಕೊಂಡ ತಾಣ ನಾವು ಪ್ರತಿಬಾರಿ ಬ್ರೌಸರ್ ತಂತ್ರಾಂಶವನ್ನು ತೆರೆದಾಗಲೂ ಕಾಣಿಸಿಕೊಳ್ಳುತ್ತದೆ. ಬ್ರೌಸರ್‌ನಲ್ಲಿರುವ 'ಹೋಮ್' ಬಟನ್ ಮೇಲೆ ಯಾವಾಗ ಬೇಕಿದ್ದರೂ ಕ್ಲಿಕ್ ಮಾಡಿ ಮತ್ತೆ ಈ ಪುಟವನ್ನು ತೆರೆಯಬಹುದು.

ಈಚಿನ ಬಹುತೇಕ ಬ್ರೌಸರ್‌ಗಳಲ್ಲಿ ಅಡ್ರೆಸ್ ಬಾರ್ ಪಕ್ಕದಲ್ಲೇ ಸರ್ಚ್ ಬಾರ್ ಕೂಡ ಇರುತ್ತದೆ. ಈ ಸೌಲಭ್ಯ ಬಳಸಿಕೊಂಡು ನಮಗೆ ಬೇಕಾದ ಮಾಹಿತಿಯನ್ನು ನಮ್ಮ ಇಷ್ಟದ ಸರ್ಚ್ ಇಂಜನ್ ಬಳಸಿ ಹುಡುಕಬಹುದು. ಸರ್ಚ್ ಮಾಡಬೇಕಾದಾಗಲೆಲ್ಲ ಮೊದಲಿಗೆ ಸರ್ಚ್ ಇಂಜನ್ ಜಾಲತಾಣಕ್ಕೆ ಹೋಗಬೇಕಾದ ಅನಿವಾರ್ಯತೆಯನ್ನು ಈ ಸೌಲಭ್ಯ ಹೋಗಲಾಡಿಸುತ್ತದೆ.

ಬ್ರೌಸರಿನಲ್ಲಿರುವ ಸೌಲಭ್ಯಗಳು ಸಾಲದು ಎನ್ನುವುದಾದರೆ ಬೇರೆಬೇರೆ ವ್ಯಕ್ತಿಗಳು-ಸಂಸ್ಥೆಗಳು ರೂಪಿಸಿರುವ ಟೂಲ್‌ಬಾರ್, ಆಡ್-ಆನ್ ಹಾಗೂ ಪ್ಲಗ್-ಇನ್‌ಗಳನ್ನೂ ಬಳಸಬಹುದು; ಈ ಸೋಗಿನಲ್ಲಿ ಬರುವ ಕುತಂತ್ರಾಂಶಗಳ ಬಗ್ಗೆ ಕೊಂಚ ಎಚ್ಚರವಿರಬೇಕು ಅಷ್ಟೆ.

ಕೆಲಸದಲ್ಲಷ್ಟೆ ಚುರುಕಾಗಿದ್ದರೆ ಸಾಲದು, ಬ್ರೌಸರ್ ಪರದೆ ನೋಡಲಿಕ್ಕೂ ಚೆಂದಕಾಣಬೇಕು ಎನ್ನುವುದಾದರೆ ಅದಕ್ಕೂ ಹಲವು ಥೀಮ್‌ಗಳು ಸಿಗುತ್ತವೆ. ಅವನ್ನು ಬಳಸಿ ಬ್ರೌಸರ್ ಪರದೆಯ ಬಣ್ಣ, ವಿನ್ಯಾಸ ಇತ್ಯಾದಿಗಳನ್ನೆಲ್ಲ ಬದಲಿಸಿಕೊಳ್ಳಬಹುದು.

ಇದೆಲ್ಲ ಬ್ರೌಸರ್‌ನಲ್ಲಿರುವ ಸೌಲಭ್ಯಗಳ ಮಾತಾಯಿತು. ಇನ್ನೊಂದೆಡೆ ಕ್ಲೌಡ್ ಕಂಪ್ಯೂಟಿಂಗ್‌ನ ವಿಕಾಸವಾಗುತ್ತಿದ್ದಂತೆ ಅಲ್ಲೂ ಬ್ರೌಸರ್ ತಂತ್ರಾಂಶದ ಮಹತ್ವ ಹೆಚ್ಚುತ್ತಿದೆ. ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ವಿವಿಧ ತಂತ್ರಾಂಶಗಳು ಹಾಗೂ ಸಂಬಂಧಿತ ಸೇವೆಗಳು ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುವುದರಿಂದ ಅವೆಲ್ಲವನ್ನೂ ಬ್ರೌಸರ್ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ.

ಇನ್ನು ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳನ್ನು ಬಳಸಿ ಜಾಲಲೋಕದಲ್ಲಿ ವಿಹರಿಸುವ ಅಭ್ಯಾಸ ವ್ಯಾಪಕವಾಗಿ ಬೆಳೆಯುತ್ತಿರುವುದರಿಂದ ಅಲ್ಲೂ ಬ್ರೌಸರ್ ಬಳಕೆ ಹೆಚ್ಚುತ್ತಿದೆ. 'ಒಪೆರಾ ಮಿನಿ'ಯಂತಹ ಬ್ರೌಸರ್‌ಗಳು ವಿಶೇಷವಾಗಿ ಮೊಬೈಲ್ ಸಾಧನಗಳಿಗಾಗಿಯೇ ರೂಪುಗೊಂಡಿವೆ.

ಆದರೆ ಬಹುತೇಕ ಮೊಬೈಲ್ ಸಾಧನಗಳಲ್ಲಿ ಕನ್ನಡ ಯುನಿಕೋಡ್ ಪ್ರದರ್ಶಿಸುವ ಸಾಮರ್ಥ್ಯ ಇಲ್ಲದಿರುವುದರಿಂದ ಅವುಗಳಲ್ಲಿ ಕನ್ನಡ ಪಠ್ಯ ಸರಿಯಾಗಿ ಮೂಡಿಬರುವುದಿಲ್ಲ.

ಇತ್ತೀಚಿನ ಕೆಲ ಸಾಧನಗಳಲ್ಲಿ ಈ ಸಮಸ್ಯೆ ನಿಧಾನಕ್ಕೆ ದೂರವಾಗುತ್ತಿದೆ; ಹಳೆಯ ಸಾಧನಗಳಲ್ಲಿ ಕನ್ನಡ ಪಠ್ಯ ಓದಲು ಇಲ್ಲೊಂದು ಮಾರ್ಗವಿದೆ: ಒಪೆರಾ ಮಿನಿ ಬ್ರೌಸರನ್ನು ನಿಮ್ಮ ಮೊಬೈಲ್ ಸಾಧನದಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಅದರ ಅಡ್ರೆಸ್ ಬಾರ್‌ನಲ್ಲಿ 'about:config' ಎಂದು ಟೈಪಿಸಿ. ಆಗ ತೆರೆದುಕೊಳ್ಳುವ ಪುಟದ ಕೊನೆಯವರೆಗೂ ಹೋಗಿ ‘Use bitmap fonts for complex scripts’ ಆಯ್ಕೆಯನ್ನು 'Yes' ಎಂದು ಬದಲಿಸಿ ಸೇವ್ ಮಾಡಿ. ಇಷ್ಟು ಮಾಡಿದ ನಂತರ ಒಪೆರಾ ಮಿನಿ ಬ್ರೌಸರಿನಲ್ಲಿ ಕನ್ನಡದ ಪುಟಗಳನ್ನು ನೋಡುವುದು ಸಾಧ್ಯವಾಗುತ್ತದೆ.

ಜುಲೈ ೧೭, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge