ಮಂಗಳವಾರ, ಜನವರಿ 24, 2012

ಕಂಪ್ಯೂಟರ್ ಇತಿಹಾಸದ ಪುಟಗಳಿಂದ

ಟಿ. ಜಿ. ಶ್ರೀನಿಧಿ

ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಮಾಹಿತಿ ತಂತ್ರಜ್ಞಾನದ ಕೈವಾಡ ಇರುವ ಇಂದಿನ ಪರಿಸ್ಥಿತಿಯಲ್ಲಿ ಕಂಪ್ಯೂಟರ್ ಒಂದು ಕುತೂಹಲಹುಟ್ಟಿಸುವ ವಸ್ತುವಾಗಿ ಉಳಿದಿಲ್ಲ, ನಿಜ. ಆದರೆ ಕಳೆದ ಒಂದು ಶತಮಾನಕ್ಕಿಂತ ಕಡಿಮೆ ಸಮಯದಲ್ಲಿ ಕಂಪ್ಯೂಟರ್ ಜಗತ್ತು ವಿಕಾಸಗೊಂಡ ರೀತಿಯತ್ತ ನೋಡಿದರೆ ಅದು ಮಾತ್ರ ನಿಜಕ್ಕೂ ವಿಸ್ಮಯಕಾರಿ. ಕೋಣೆಗಾತ್ರದ ಆನೆತೂಕದ ದೈತ್ಯ ಯಂತ್ರಗಳಿಂದ ಪ್ರಾರಂಭಿಸಿ ಅಂಗೈ ಮೇಲಿಟ್ಟುಕೊಳ್ಳಬಹುದಾದ ಇಂದಿನ ಹೈಟೆಕ್ ಉಪಕರಣಗಳವರೆಗೆ ಕಂಪ್ಯೂಟಿಂಗ್ ತಂತ್ರಜ್ಞಾನ ಬೆಳೆದುಬಂದ ಬಗೆ ಅಷ್ಟು ರೋಚಕವಾದದ್ದು. ಆ ಪ್ರಕ್ರಿಯೆಯ ಪ್ರತಿಯೊಂದು ಘಟ್ಟವೂ ವಿಶಿಷ್ಟ, ವಿಭಿನ್ನ.

ಹಾಲೆರಿತ್ ಮತ್ತು ಪಂಚ್ಡ್ ಕಾರ್ಡು
ಜೋಸೆಫ್ ಜಾಕಾರ್ಡ್ ತಯಾರಿಸಿದ ಮಗ್ಗದ ಪ್ರೇರಣೆಯಿಂದ ಚಾರ್ಲ್ಸ್ ಬ್ಯಾಬೇಜ್ ಮಾಡಿದ ವಿನ್ಯಾಸಗಳು, ಹಾಗೂ ಅವುಗಳಿಂದಾಗಿ ಪಂಚ್ಡ್ ಕಾರ್ಡುಗಳು ಕಂಪ್ಯೂಟರ್ ಪ್ರಪಂಚ ಪ್ರವೇಶಿಸಿದ ಚಾರಿತ್ರಿಕ ಘಟನೆ ನಮಗೆಲ್ಲ ಗೊತ್ತೇ ಇದೆ (ಡಿಸೆಂಬರ್ ೨೦, ೨೦೧೧ರ ವಿಜ್ಞಾಪನೆ ನೋಡಿ).

ಇದರ ನಂತರದ ಮಹತ್ವದ ಘಟನೆ ನಡೆದದ್ದು ಅಮೆರಿಕಾದಲ್ಲಿ.


ಅಲ್ಲಿನ ಸಂಸತ್ತಿನಲ್ಲಿ ಪ್ರತಿ ರಾಜ್ಯಕ್ಕೂ ಸರಿಯಾದ ಪ್ರಾತಿನಿಧ್ಯ ದೊರಕಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಸಬೇಕು ಎಂಬ ನಿಯಮ ಅಮೆರಿಕಾದ ಸಂವಿಧಾನದಲ್ಲಿದೆ. ಬಹಳ ಹಿಂದೆ ಜನಗಣತಿಯಿಂದ ದೊರೆತ ದತ್ತಾಂಶವನ್ನು ಸಂಸ್ಕರಿಸುವ ಎಲ್ಲ ಕೆಲಸಗಳನ್ನೂ ಮನುಷ್ಯರೇ ನೋಡಿಕೊಳ್ಳುತ್ತಿದ್ದರು.

ಜನಸಂಖ್ಯೆ ಕಡಿಮೆಯಿದ್ದಾಗ ಇದು ಸರಿಯಾಗಿಯೇ ನಡೆಯುತ್ತಿತ್ತು. ಆದರೆ ೧೮೮೦ರ ಜನಗಣತಿಯ ಹೊತ್ತಿಗೆ ಜನಸಂಖ್ಯೆ ಚೆನ್ನಾಗಿಯೇ ಏರಿತ್ತು; ಹಾಗಾಗಿ ಕೆಲಸ ಮುಗಿಯಲು ಆಗ ಏಳೂವರೆ ವರ್ಷಗಳಷ್ಟು ಸುದೀರ್ಘ ಕಾಲ ಬೇಕಾಯಿತು. ಮುಂದಿನ ಬಾರಿಯ ವೇಳೆಗೆ ಎಚ್ಚೆತ್ತುಕೊಳ್ಳದಿದ್ದರೆ ಹತ್ತು ವರ್ಷ ಕಳೆದರೂ ಜನಗಣತಿಯ ಕೆಲಸ ಮುಗಿದಿರುವುದಿಲ್ಲ ಎಂದು ಸರಕಾರಕ್ಕೆ ಜ್ಞಾನೋದಯವಾಯಿತು. "ಜನಗಣತಿಯ ಕೆಲಸ ಸುಲಭಮಾಡಿಕೊಡುವ ಯಂತ್ರ ರೂಪಿಸಿಕೊಡಿ, ಬಹುಮಾನ ಗೆಲ್ಲಿ" ಎಂಬ ಘೋಷಣೆ ಹೊರಡಲು ಅದು ಕಾರಣವೂ ಆಯಿತು.

ಈ ಸ್ಪರ್ಧೆಯಲ್ಲಿ ಗೆದ್ದವನು ಹರ್ಮನ್ ಹಾಲೆರಿತ್. ಆತ ಈ ಕೆಲಸಕ್ಕೆ ಪಂಚ್ಡ್ ಕಾರ್ಡುಗಳನ್ನು ಬಳಸಿ ಕೆಲಸಮಾಡುವ 'ಹಾಲೆರಿತ್ ಡೆಸ್ಕ್'ಗಳನ್ನು ರೂಪಿಸಿಕೊಟ್ಟ. ಆ ಸಾರಿಯ ಜನಗಣತಿಯ ದತ್ತಾಂಶವನ್ನೆಲ್ಲ ಕಾರ್ಡುಗಳ ರೂಪದಲ್ಲಿ ಸಂಗ್ರಹಿಸಲಾಯಿತು. ಸಂಗ್ರಹಣೆ ಮುಗಿದ ಮೇಲೆ ಕಾರ್ಡುಗಳಲ್ಲಿನ ರಂಧ್ರಗಳ ಆಧಾರದ ಮೇಲೆ ಹಾಲೆರಿತ್‌ನ ಯಂತ್ರ ದತ್ತಾಂಶವನ್ನು ಓದಿಕೊಂಡು ಅದಕ್ಕೆ ತಕ್ಕಂತೆ ಎಣಿಕೆ ಮಾಡಿಟ್ಟುಕೊಳ್ಳುತ್ತಿತ್ತು. ಇದರಿಂದಾಗಿ ಮಾಹಿತಿ ಸಂಸ್ಕರಣೆ ಬಹಳ ಬೇಗ ಆಗುತ್ತಿತ್ತು. ಜನಗಣತಿಯ ದತ್ತಾಂಶವನ್ನು ಸಂಸ್ಕರಿಸಲು ಈ ಯಂತ್ರದ ನೆರವು ಸಿಕ್ಕಿದ್ದರಿಂದ ೧೮೯೦ರ ಗಣತಿ ಮೂರೇ ವರ್ಷಗಳಲ್ಲಿ ಮುಗಿಯಿತು.

ಜಾಕಾರ್ಡ್‌ನ ಪಂಚ್ಡ್ ಕಾರ್ಡುಗಳ ತಂತ್ರವನ್ನು ಇನ್ನಷ್ಟು ಉತ್ತಮಪಡಿಸಿದ್ದು ಹರ್ಮನ್ ಹಾಲೆರಿತ್‌ನ ಇನ್ನೊಂದು ಸಾಧನೆ. ಮೊದಲಿಗೆ ಪಂಚ್ಡ್ ಕಾರ್ಡುಗಳನ್ನು ದತ್ತಾಂಶವನ್ನು ಓದಲಿಕ್ಕಷ್ಟೆ ಬಳಸಲಾಗುತ್ತಿತ್ತು. ಯಂತ್ರಗಳ ಸಹಾಯದಿಂದ ಪಂಚ್ಡ್ ಕಾರ್ಡುಗಳನ್ನು ಓದುವುದರ ಜೊತೆಗೆ ಕಾರ್ಡುಗಳನ್ನು ಪಂಚ್ ಮಾಡುವುದೂ ಸಾಧ್ಯವಾದರೆ ಲೆಕ್ಕಾಚಾರದ ಫಲಿತಾಂಶಗಳನ್ನೂ ಅವುಗಳ ಮೂಲಕವೇ ನೀಡಬಹುದೆಂಬ ಅಂಶವನ್ನು ಹಾಲೆರಿತ್ ಸಾಧಿಸಿ ತೋರಿಸಿದ. ಇದರಿಂದಾಗಿ 'ರೀಡ್ ಓನ್ಲಿ' ಆಗಿದ್ದ ಪಂಚ್ಡ್ ಕಾರ್ಡುಗಳು 'ರೀಡ್/ರೈಟ್' ಮಾಧ್ಯಮಗಳಾಗಿ ಬದಲಾದವು; ಅಷ್ಟೇ ಅಲ್ಲ, ಒಂದು ಹಂತದ ಲೆಕ್ಕಾಚಾರದ ಫಲಿತಾಂಶವನ್ನು ಮತ್ತೊಂದು ಹಂತದ ದತ್ತಾಂಶವಾಗಿ ಬಳಸುವುದೂ ಸಾಧ್ಯವಾಯಿತು.

ಇದೇ ಹಾಲೆರಿತ್ ರೂಪಿಸಿದ ಟ್ಯಾಬ್ಯುಲೇಟಿಂಗ್ ಮಷೀನ್ ಕಂಪನಿ ಎಂಬ ಸಂಸ್ಥೆಯೇ ಮುಂದೆ ಐಬಿಎಂ ಆಗಿ ಬೆಳೆಯಿತು.

ವಿಶ್ವಸಮರ ತಂದ ಕಂಪ್ಯೂಟರ್ ಕ್ರಾಂತಿ
ಕಂಪ್ಯೂಟರ್ ಕ್ಷೇತ್ರದಲ್ಲಿ ಮುಂದಿನ ಗಮನಾರ್ಹ ಬೆಳೆವಣಿಗೆಗಳು ಕಂಡುಬಂದದ್ದು ಎರಡನೇ ವಿಶ್ವಸಮರದ ಸಂದರ್ಭದಲ್ಲಿ. ಯುದ್ಧನೌಕೆಗಳಿಂದ ವೈರಿಗಳತ್ತ ಸ್ಫೋಟಕಗಳನ್ನು ಹಾರಿಸುವಾಗ ಅದರ ಕೋನ, ವೇಗ ಇತ್ಯಾದಿಗಳನ್ನೆಲ್ಲ ತೀರ್ಮಾನಿಸಲು ಸಾಕಷ್ಟು ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತಿತ್ತು. ಯುದ್ಧದ ತೀವ್ರತೆ ಜಾಸ್ತಿಯಾದಂತೆ ಈ ಲೆಕ್ಕಾಚಾರಗಳನ್ನೆಲ್ಲ ಮನುಷ್ಯರೇ ಮಾಡುವುದು ಕಷ್ಟವಾಗತೊಡಗಿತು.

ಇಂತಹ ಲೆಕ್ಕಾಚಾರಗಳಿಗಾಗಿ ರೂಪಗೊಂಡ ಕಂಪ್ಯೂಟರುಗಳಲ್ಲಿ ಹಾರ್ವರ್ಡ್ ವಿವಿ ಹಾಗೂ ಐಬಿಎಂ ಸಹಭಾಗಿತ್ವದಲ್ಲಿ ತಯಾರಾದ ಮಾರ್ಕ್-೧ ಪ್ರಮುಖವಾದದ್ದು. ಪ್ರಪಂಚದ ಮೊತ್ತಮೊದಲ ಪ್ರೋಗ್ರಾಮಬಲ್ ಡಿಜಿಟಲ್ ಕಂಪ್ಯೂಟರ್ ಎಂಬ ಹೆಗ್ಗಳಿಕೆ ಇದರದ್ದು. ಆದರೆ ಅದಿನ್ನೂ ಸಂಪೂರ್ಣವಾಗಿ ಇಲೆಕ್ಟ್ರಾನಿಕ್ ಆಗಿರಲಿಲ್ಲ; ಸ್ವಿಚ್ಚು, ರಿಲೇ, ಶಾಫ್ಟು ಮುಂತಾದ ಮೆಕ್ಯಾನಿಕಲ್ ಭಾಗಗಳನ್ನೆಲ್ಲ ಬಳಸುತ್ತಿದ್ದ ಈ ಯಂತ್ರ ಎಂಟು ಅಡಿ ಎತ್ತರ ಹಾಗೂ ಐವತ್ತೊಂದು ಅಡಿ ಉದ್ದವಿತ್ತು!

ಪ್ರಸಿದ್ಧ ವಿಜ್ಞಾನಿ ಹೊವಾರ್ಡ್ ಐಕೆನ್ ಈ ಕಂಪ್ಯೂಟರ್ ನಿರ್ಮಾಣದ ನೇತೃತ್ವ ವಹಿಸಿದ್ದರು. ನಂತರದ ವರ್ಷಗಳಲ್ಲಿ ಮಾರ್ಕ್-೨ ಹಾಗೂ ಮಾರ್ಕ್-೩ರ ತಯಾರಿಯೂ ಅವರ ನೇತೃತ್ವದಲ್ಲೇ ಆಯಿತು.

೧೯೪೭ರಲ್ಲಿ ಇದೇ ಹೊವಾರ್ಡ್ ಐಕೆನ್ ಕೊಟ್ಟಿದ್ದ ಒಂದು ಹೇಳಿಕೆ ಕಂಪ್ಯೂಟರ್ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಗಳಿಸಿಕೊಂಡಿದೆ. ಇಡೀ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಒಟ್ಟು ಆರು ಕಂಪ್ಯೂಟರುಗಳು ಸಾಕಾಗಬಹುದು ಎಂದು ಆಗ ಅವರು ಅಂದಾಜಿಸಿದ್ದರು!

ಇಂಗ್ಲೆಂಡಿನಲ್ಲಿ ಕೊಲಾಸಸ್ ಎಂಬ ಕಂಪ್ಯೂಟರ್ ತಯಾರಾದದ್ದೂ ಎರಡನೇ ವಿಶ್ವಸಮರದ ಸಂದರ್ಭದಲ್ಲೇ. ಜರ್ಮನಿಯ ಸೇನೆ ತನ್ನ ಸಂವಹನಕ್ಕೆ ಬಳಸುತ್ತಿದ್ದ ಗೂಢಲಿಪಿಯನ್ನು ಬೇಧಿಸಲು ಈ ಕಂಪ್ಯೂಟರನ್ನು ರೂಪಿಸಲಾಗಿತ್ತು. ಹಾಗೆಯೇ ಅಮೆರಿಕಾದ ಅಯೋವಾ ಸ್ಟೇಟ್ ವಿಶ್ವವಿದ್ಯಾನಿಲಯದ ಗುರು-ಶಿಷ್ಯ ಜೋಡಿಯಾದ ಪ್ರೊ. ಜೆ. ವಿ. ಅಟನಾಸಾಫ್ ಹಾಗೂ ಕ್ಲಿಫರ್ಡ್ ಬೆರ್ರಿ ಅವರ ಪ್ರಯತ್ನದಿಂದ ಮೊತ್ತಮೊದಲ ಸಂಪೂರ್ಣ ಇಲೆಕ್ಟ್ರಾನಿಕ್ ಕಂಪ್ಯೂಟರ್ ತಯಾರಾಯಿತು. ಆದರೆ ಈ ಕಂಪ್ಯೂಟರಿನಲ್ಲಿದ್ದ ಕೊರತೆಗಳನ್ನೆಲ್ಲ ನಿವಾರಿಸುವ ಮುನ್ನವೇ ಅದರ ಸೃಷ್ಟಿಕರ್ತರು ತಮ್ಮ ಯೋಜನೆ ಕೈಬಿಟ್ಟಿದ್ದರಿಂದ ಅದು ಅಪೂರ್ಣವಾಗಿಯೇ ಉಳಿಯಿತು.

ಇದೇ ಸಂದರ್ಭದಲ್ಲಿ ಅಮೆರಿಕಾ-ಇಂಗ್ಲೆಂಡ್ ಇತ್ಯಾದಿಗಳ ವಿರುದ್ಧ ಬಣದಲ್ಲಿದ್ದ ಜರ್ಮನಿಯಲ್ಲೂ ಕಂಪ್ಯೂಟರ್ ಕುರಿತಾದ ಕೆಲಸಗಳು ನಡೆಯುತ್ತಿದ್ದವು. ೧೯೩೬ರಿಂದ ೧೯೩೮ರಷ್ಟು ಹಿಂದೆಯೇ ಕಾನ್ರಾಡ್ ಜ್ಯೂಸ್ ಎಂಬ ತಂತ್ರಜ್ಞ ಜೆಡ್-೧ ಎಂಬ ಸಾಮಾನ್ಯ ಉದ್ದೇಶದ ಕಂಪ್ಯೂಟರನ್ನು ಸೃಷ್ಟಿಸಿದ್ದ ವಿಷಯ ಅದೆಷ್ಟೋ ವರ್ಷಗಳ ಕಾಲ ಹೊರಜಗತ್ತಿಗೆ ತಿಳಿದೇ ಇರಲಿಲ್ಲ! ಕಾನ್ರಾಡನ ಇನ್ನೊಂದು ಸೃಷ್ಟಿಯಾದ ಜೆಡ್-೩ ಬಹುಶಃ ಮೊತ್ತಮೊದಲ ಸಾಮಾನ್ಯ ಉದ್ದೇಶದ ಪ್ರೋಗ್ರಾಮಬಲ್ ಕಂಪ್ಯೂಟರ್ ಇರಬೇಕೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಯುದ್ಧದಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದ ಜರ್ಮನಿಯ ವಾತಾವರಣದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದ ಕಾನ್ರಾಡನ ಸೃಷ್ಟಿಗಳೆಲ್ಲ (ಜೆಡ್-೪ ಗಣಕವೊಂದನ್ನು ಹೊರತುಪಡಿಸಿ) ಯುದ್ದದ ಕಾರಣದಿಂದಲೇ ನಾಶವಾಗಿಹೋದದ್ದು ವಿಪರ್ಯಾಸ. ಕಾನ್ರಾಡ್ ರೂಪಿಸಿದ್ದ 'ಪ್ಲಾನ್‌ಕ್ಯಾಲ್ಕುಲ್' ಪ್ರೋಗ್ರಾಮಿಂಗ್ ಭಾಷೆ ಕೂಡ ಕಂಪ್ಯೂಟರ್ ಇತಿಹಾಸದಲ್ಲಿ ಮಹತ್ವದ ಸ್ಥಾನ ಗಳಿಸಿಕೊಂಡಿದೆ.

ಇದಾದ ನಂತರದ ದಿನಗಳಲ್ಲಿ ಅಮೆರಿಕಾದಲ್ಲಿ ಸಿದ್ಧವಾದ ಇನಿಯಾಕ್ (ಇಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಿಗ್ರೇಟರ್ ಆಂಡ್ ಕ್ಯಾಲ್ಕ್ಯುಲೇಟರ್) ಇಂದಿನ ಕಂಪ್ಯೂಟರುಗಳ ಹಿರಿಯಜ್ಜನೆಂದು ಹೆಸರುಪಡೆದು ವಿಶ್ವಪ್ರಸಿದ್ಧವಾಯಿತು.

ಜನವರಿ ೨೪, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge