ಮಂಗಳವಾರ, ಜನವರಿ 17, 2012

ಕ್ಯಾಮೆರಾ ಕತೆಗಳು

ಡಿಜಿಟಲ್ ಕ್ಯಾಮೆರಾ ಗುಂಗಿನಲ್ಲಿ ಒಂದು ಲಹರಿ

ಟಿ. ಜಿ. ಶ್ರೀನಿಧಿ

ಹಿಂದಿನ ಕಾಲದಲ್ಲಿ, ಅಂದರೆ ಸುಮಾರು ಹತ್ತು ವರ್ಷಕ್ಕೂ ಮೊದಲು, ಫೋಟೋ ತೆಗೆಯಬೇಕು ಎಂದರೆ ಕ್ಯಾಮೆರಾಗಳಿಗೆ ರೀಲು ಹಾಕಿಸಬೇಕಾಗುತ್ತಿತ್ತು. ಆಗ ಸಿಗುತ್ತಿದ್ದ ಕ್ಯಾಮೆರಾಗಳು - ಫಿಲಂ ರೀಲುಗಳ ಮಟ್ಟಿಗೆ ಕೊಡಕ್ ಸಂಸ್ಥೆಗೆ ಒಂದು ರೀತಿಯ ಸೂಪರ್ ಸ್ಟಾರ್ ಪಟ್ಟವೇ ಇತ್ತು. ಫೋಟೋಗ್ರಫಿ ಉತ್ಪನ್ನಗಳ ಮಾರುಕಟ್ಟೆಯ ಬಹುತೇಕ ಭಾಗವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದ ಆ ಸಂಸ್ಥೆ ಸೂಪರ್ ಸ್ಟಾರ್ ಆಗುವುದು ಸಹಜ ತಾನೆ!

ಆದರೆ ಫೋಟೋಗ್ರಫಿ ಲೋಕದ ಬದಲಾದ ಪರಿಸ್ಥಿತಿಯಲ್ಲಿ ಸ್ಟಾರ್ ಪಟ್ಟ ಉಳಿಸಿಕೊಳ್ಳುವುದು ಕೊಡಕ್‌ಗೆ ಸಾಧ್ಯವಾಗಲಿಲ್ಲ; ಡಿಜಿಟಲ್ ಉತ್ಪನ್ನಗಳತ್ತ ಮುಖಮಾಡಲು ಪ್ರಯತ್ನಿಸಿದರೂ ಆ ಪ್ರಯತ್ನದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಹೀಗಾಗಿ ಈಚಿನ ಕೆಲವರ್ಷಗಳಲ್ಲಿ ಕೊಡಕ್ ಸಂಸ್ಥೆ ಹೆಚ್ಚೂಕಡಿಮೆ ನೇಪಥ್ಯಕ್ಕೇ ಸರಿದುಬಿಟ್ಟಿತ್ತು.

ಈಗ ಇದ್ದಕ್ಕಿದ್ದಂತೆ ಕೊಡಕ್ ಸಂಸ್ಥೆ ನೆನಪಿಗೆ ಬರಲು ಕಾರಣವಾದದ್ದು ಕೆಲದಿನಗಳ ಹಿಂದೆ ಕೇಳಿಬಂದ ಸುದ್ದಿ. ತೀವ್ರ ಹಣಕಾಸಿನ ಸಮಸ್ಯೆಗಳಿಗೆ ಸಿಲುಕಿರುವ ಆ ಸಂಸ್ಥೆ ದಿವಾಳಿಯಾಗುವತ್ತ ಸಾಗಿದೆ ಎಂಬ ಆ ಸುದ್ದಿಯಿಂದ ತಂತ್ರಜ್ಞಾನ ಲೋಕದಲ್ಲಿ ಇನ್ನೂ ಕೆಲ ನೆನಪುಗಳು ಮರುಕಳಿಸಿದ್ದವು.

ಅಂತಹ ಒಂದು ನೆನಪು ೧೯೭೫ನೇ ಇಸವಿಯದು.
ಮೊತ್ತಮೊದಲ ಡಿಜಿಟಲ್ ಕ್ಯಾಮೆರಾ ತಯಾರಾದದ್ದು ಆ ವರ್ಷ, ಹಾಗೂ ಅದು ರೂಪುಗೊಂಡದ್ದು ಕೊಡಕ್ ಸಂಸ್ಥೆಯಲ್ಲಿ!

೧೯೭೫ರಲ್ಲಿ ಕೊಡಕ್ ಉದ್ಯೋಗಿ ಸ್ಟೀವ್ ಸಾಸನ್ ತಯಾರಿಸಿದ ಡಿಜಿಟಲ್ ಕ್ಯಾಮೆರಾದ ರೂಪ ಈಗ ನಾವು ನೋಡುವ ಕ್ಯಾಮೆರಾಗಳಂತಿರಲಿಲ್ಲ. ನಾವು ಬಳಸುವ ಮೆಮೊರಿ ಕಾರ್ಡ್ ಜಾಗದಲ್ಲಿ ಅದೊಂದು ಕ್ಯಾಸೆಟ್ ಅನ್ನು ಬಳಸುತ್ತಿತ್ತು; ಅಷ್ಟೇ ಅಲ್ಲ, ಅದರ ಗಾತ್ರ ತಾತನ ಕಾಲದ ಟ್ರಾನ್ಸಿಸ್ಟರ್ ರೇಡಿಯೋದಷ್ಟು ದೊಡ್ಡದಾಗಿತ್ತು!

ಈ ಆವಿಷ್ಕಾರವಾದ ಸಮಯದಲ್ಲಿ ಕೊಡಕ್ ಸಂಸ್ಥೆ ರೀಲ್ ಕ್ಯಾಮೆರಾ ಮಾರುಕಟ್ಟೆಯ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿತ್ತು. ಅಮೆರಿಕಾದಲ್ಲಂತೂ ಕ್ಯಾಮೆರಾ ಮತ್ತು ಫಿಲಂ ರೀಲ್ ಮಾರುಕಟ್ಟೆಯ ಶೇ. ೯೦ರಷ್ಟು ಭಾಗ ಕೊಡಕ್ ಹಿಡಿತದಲ್ಲಿತ್ತು. ಅಂತಹ ಪರಿಸ್ಥಿತಿಯಿದ್ದುದರಿಂದಲೋ ಏನೋ ಕೊಡಕ್ ಸಂಸ್ಥೆ ಡಿಜಿಟಲ್ ಕ್ಯಾಮೆರಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಎಂದು ತೋರುತ್ತದೆ.

ಆದರೆ ಮುಂದಿನ ವರ್ಷಗಳಲ್ಲಿ ಡಿಜಿಟಲ್ ಕ್ಯಾಮೆರಾ ವಿಶ್ವವಿಖ್ಯಾತವಾಯಿತು. "ಛಾಯಾಗ್ರಹಣ ಒಂದು ತಲೆನೋವಿನ ಕೆಲಸ", "ಆ ಹವ್ಯಾಸ ಬಲು ದುಬಾರಿ" ಎನ್ನುವಂತಹ ಅಭಿಪ್ರಾಯಗಳೆಲ್ಲ ಹೋಗಿ ಅದು ಲಕ್ಷಾಂತರ ಜನರ ಅಚ್ಚುಮೆಚ್ಚಿನ ಹವ್ಯಾಸವಾಗಿ ಬೆಳೆಯಿತು. ಈಗ ಪ್ರಪಂಚದ ಇನ್ನೂರೈವತ್ತು ಕೋಟಿ ಜನರ ಬಳಿ ಒಂದಲ್ಲ ಒಂದು ರೀತಿಯ ಡಿಜಿಟಲ್ ಕ್ಯಾಮೆರಾ ಇದೆ ಎಂದು ಸ್ಯಾಮ್‌ಸಂಗ್ ಸಂಸ್ಥೆಯ ಅಂದಾಜು ಹೇಳುತ್ತದೆ.

ಫಿಲಂ ರೀಲುಗಳ ಕಾಲದಲ್ಲಿ ಮೂವತ್ತಾರು ಚಿತ್ರಗಳನ್ನು ತೆಗೆದು ಪೋಸ್ಟ್‌ಕಾರ್ಡ್ ಗಾತ್ರದಲ್ಲಿ ಪ್ರಿಂಟು ಹಾಕಿಸಬೇಕಾದರೆ ಅದು ಇನ್ನೂರು ಮುನ್ನೂರು ರೂಪಾಯಿಗಳ ವ್ಯವಹಾರವಾಗಿತ್ತು. ಇದು ತೊಂಬತ್ತರ ದಶಕದ ಮಾತು.

ಅದಕ್ಕಿಂತ ಹಿಂದೆ, ೧೯೩೯ರಲ್ಲಿ, ಪರಿಸ್ಥಿತಿ ಇನ್ನೂ ವಿಚಿತ್ರವಾಗಿತ್ತಂತೆ. ನಾಜಿ ಆಡಳಿತದ ಜರ್ಮನಿಯಲ್ಲಿ ಆಗ ಕೆಲಸಮಾಡುತ್ತಿದ್ದ ಛಾಯಾಗ್ರಾಹಕರೊಬ್ಬರಿಗೆ ಆರು ವಾರದ ಪ್ರಾಜೆಕ್ಟು ಕೊಟ್ಟಿದ್ದರಂತೆ. ರ್‍ಯಾಲಿಗಳಿಗೆ ಹೋಗಿ ಅಲ್ಲಿ ಛಾಯಾಚಿತ್ರಗಳನ್ನು ತೆಗೆಯುವ ಕೆಲಸ ಅದು. ಆಗಿನ್ನೂ ಫಿಲಂಗಳು ಬಂದಿರಲಿಲ್ಲ - ಚಿತ್ರಗಳನ್ನು ತೆಗೆಯಲು ರಾಸಾಯನಿಕ ಲೇಪಿತ ಗಾಜಿನ ಫಲಕಗಳನ್ನು (ಫೋಟೋಗ್ರಾಫಿಕ್ ಪ್ಲೇಟ್) ಬಳಸಲಾಗುತ್ತಿದ್ದ ಕಾಲ ಅದು. ಆರು ವಾರಗಳಲ್ಲಿ ಬಳಸಲು ಆ ಛಾಯಾಗ್ರಾಹಕರಿಗೆ ಕೊಡಲಾಗಿದ್ದ ಪ್ಲೇಟುಗಳ ಸಂಖ್ಯೆ ಎಂಟು!

ಡಿಜಿಟಲ್ ಕ್ಯಾಮೆರಾ ಕಣ್ಣಿಗೆ ಕಂಡದ್ದನ್ನೆಲ್ಲ ಕ್ಲಿಕ್ಕಿಸುವ ನಮಗೆ ಆರು ವಾರಗಳಲ್ಲಿ ಎಂಟೇ ಚಿತ್ರ ತೆಗೆಯಲು ಎಷ್ಟು ಕಷ್ಟವಾಗಿರಬಹುದೆಂದು ಕಲ್ಪಿಸಿಕೊಳ್ಳಲೂ ಆಗಲಿಕ್ಕಿಲ್ಲ. ಆದರೆ ಜರ್ಮನಿಯ ಆ ಛಾಯಾಗ್ರಾಹಕ ಪ್ರತಿಯೊಂದು ಸ್ಥಳಕ್ಕೂ ಕಾರ್ಯಕ್ರಮದ ಮೊದಲೇ ಹೋಗಿ ಎಲ್ಲಿ ನಿಂತರೆ ಎಂತಹ ಚಿತ್ರ ತೆಗೆಯಬಹುದೆಂದು ಯೋಜಿಸಿಕೊಂಡು ಎಂಟೂ ಚಿತ್ರಗಳನ್ನು ಅದ್ಭುತವಾಗಿ ತೆಗೆದಿದ್ದರಂತೆ. ಅಷ್ಟೇ ಅಲ್ಲ, ಅವುಗಳಲ್ಲಿ ನಾಲ್ಕಕ್ಕೆ ಪ್ರಶಸ್ತಿಯೂ ಬಂದಿತ್ತೆಂದು ಬಿಬಿಸಿ ವರದಿ ಹೇಳುತ್ತದೆ.

ಇಷ್ಟೆಲ್ಲ ಕಷ್ಟದ ಪರಿಸ್ಥಿತಿ ಬದಲಿಸಿದ್ದು, ಬೇಕಾದಾಗ ಬೇಕಾದ್ದನ್ನು ಬೇಕಾದಷ್ಟುಸಲ ಕ್ಲಿಕ್ಕಿಸಲು ಅನುವುಮಾಡಿಕೊಟ್ಟಿದ್ದು ಡಿಜಿಟಲ್ ಕ್ಯಾಮೆರಾ ಸಾಧನೆ.

ಮೊಬೈಲ್ ದೂರವಾಣಿಗಳಿಗೆ ಈ ಡಿಜಿಟಲ್ ಕ್ಯಾಮೆರಾ ಅಂಟಿಕೊಂಡದ್ದು ಬೇರೆಯದೇ ಇನ್ನೊಂದು ಕತೆ.

ಕ್ಯಾಮೆರಾ ಫೋನುಗಳು ಮೊದಲಿಗೆ ಕಾಣಿಸಿಕೊಂಡದ್ದು ತೊಂಬತ್ತರ ದಶಕದ ಕೊನೆಯಲ್ಲಿ. ಆ ಸಂದರ್ಭದಲ್ಲಿ ಎಲ್ಲರೂ ಕೇಳಿದ್ದು ಒಂದೇ ಪ್ರಶ್ನೆ: "ಕ್ಯಾಮೆರಾ ಇರುವ ಮೊಬೈಲ್ ಫೋನಾ? ಅದು ಯಾರಿಗೆ ಬೇಕು?"

ಆದರೆ ೨೦೦೩ರ ವೇಳೆಗೆ ಕ್ಯಾಮೆರಾ ಫೋನುಗಳು ಡಿಜಿಟಲ್ ಕ್ಯಾಮೆರಾಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಈಗಂತೂ ಎಲ್ಲರಿಗೂ ಕ್ಯಾಮೆರಾ ಫೋನೇ ಬೇಕು. ಕ್ಯಾಮೆರಾ ಇಲ್ಲದ ಫೋನೇ ಇಲ್ಲ ಎನ್ನುವ ಮಟ್ಟಕ್ಕೆ ಇಂದಿನ ಮಾರುಕಟ್ಟೆ ಬೆಳೆದುನಿಂತಿದೆ. ಮೂಲೆ ಅಂಗಡಿ ಬೋರ್ಡಿನಲ್ಲಿರುವ ಸ್ಪೆಲ್ಲಿಂಗ್ ಮಿಸ್ಟೇಕಿನಿಂದ ಪ್ರಾರಂಭಿಸಿ ಮೈಸೂರು ಅರಮನೆಯ ದೀಪಾಲಂಕಾರದವರೆಗೆ ಸಕಲವನ್ನೂ ನಾವು ಮೊಬೈಲಿನಲ್ಲೇ ಸೆರೆಹಿಡಿಯುತ್ತೇವೆ; "ಮದುವೆಯ ವೀಡಿಯೋ ನಮ್ಮ ಫೋನಲ್ಲೇ ತೆಗೆಯಿರಿ" ಎನ್ನುವಂತಹ ಜಾಹೀರಾತುಗಳಿಗೂ ಕಡಿಮೆಯೇನಿಲ್ಲ.

ಅಷ್ಟೇ ಏಕೆ, ೨೦೧೧ರಲ್ಲಿ ಸುದ್ದಿಯಾದ ಅದೆಷ್ಟೋ ಜಾಗತಿಕ ಘಟನೆಗಳ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾ ಬಳಸಿಯೇ ಚಿತ್ರೀಕರಿಸಲಾಗಿತ್ತು. ಅನೇಕ ಘಟನೆಗಳ ಸುದ್ದಿ ಹೊರಜಗತ್ತನ್ನು ಮೊದಲಿಗೆ ತಲುಪಿದ್ದು ಮೊಬೈಲಿನಲ್ಲಿ ತೆಗೆದ ಚಿತ್ರ ಹಾಗೂ ವೀಡಿಯೋಗಳ ಮೂಲಕವೇ. ಮೊಬೈಲ್ ಕ್ಯಾಮೆರಾ ಜನಪ್ರಿಯತೆ ಎಷ್ಟರ ಮಟ್ಟಿಗೆ ಹೆಚ್ಚಿದೆಯೆಂದರೆ ಅಂತರಜಾಲದ ಮೂಲಕ ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ತಾಣ ಫ್ಲಿಕ್‌ರ್‌ನಲ್ಲಿ ಕಾಣಿಸಿಕೊಳ್ಳುವ ಅತಿ ಹೆಚ್ಚು ಚಿತ್ರಗಳನ್ನು ಐಫೋನ್ ಬಳಸಿಯೇ ತೆಗೆದಿರುತ್ತಾರಂತೆ!

ಮೊಬೈಲ್ ಫೋನ್ ಕ್ಯಾಮೆರಾಗಳ ಗುಣಮಟ್ಟ ಹಾಗೂ ಬಳಕೆ ಎರಡೂ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಸಾಧಾರಣ ಡಿಜಿಟಲ್ ಕ್ಯಾಮೆರಾಗಳಿಗೆ ಬೇಡಿಕೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಮೊಬೈಲ್ ಕ್ಯಾಮೆರಾ ಬಿಟ್ಟರೆ ಎಸ್‌ಎಲ್‌ಆರ್‌ಗಳಿಗಷ್ಟೆ ಬೇಡಿಕೆಯಿರುವ ಪರಿಸ್ಥಿತಿ ಬರಬಹುದೆನ್ನುವುದು ಅವರ ಅಂದಾಜು.

ಜನವರಿ ೧೭, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge