ಮಂಗಳವಾರ, ಜನವರಿ 10, 2012

ವೈರಸ್ ತಡೆಗೆ ಆಂಟಿವೈರಸ್

ಟಿ. ಜಿ. ಶ್ರೀನಿಧಿ

ಕಳೆದ ವಾರದಲ್ಲಿ ಒಂದು ಸುದ್ದಿ ಕೇಳಿಬಂತು - ಇಂಗ್ಲೆಂಡ್ ಹಾಗೂ ಫ್ರಾನ್ಸಿನ ಸುಮಾರು ನಲವತ್ತೈದು ಸಾವಿರ ಬಳಕೆದಾರರ ಫೇಸ್‌ಬುಕ್ ಪಾಸ್‌ವರ್ಡ್‌ಗಳು ಕಳವಾಗಿವೆ ಎನ್ನುವುದು ಆ ಸುದ್ದಿಯ ಸಾರಾಂಶ.

ಈ ಕಳವನ್ನು ಪತ್ತೆಮಾಡಿದ ಕಂಪ್ಯೂಟರ್ ಸುರಕ್ಷತಾ ತಜ್ಞರು ಇದೆಲ್ಲ ಹೇಗಾಯಿತು ಎನ್ನುವುದನ್ನೂ ವಿವರಿಸಿದ್ದರು: ದುಷ್ಕರ್ಮಿಗಳ ದುರುದ್ದೇಶ ಕುತಂತ್ರಾಂಶವೊಂದರ ಬೆನ್ನೇರಿ ಇಷ್ಟೆಲ್ಲ ಹಾವಳಿ ಮಾಡಿತ್ತು! ಬಳಕೆದಾರರನ್ನು ಮೋಸಗೊಳಿಸಿ ಅವರ ಪಾಸ್‌ವರ್ಡ್ ಕದಿಯಲು ರ್‍ಯಾಮ್ನಿಟ್ ಎಂಬ ಹೆಸರಿನ ವರ್ಮ್ ಅನ್ನು ಬಳಸಲಾಗಿತ್ತಂತೆ. ಈ ಹಿಂದೆ ಬ್ಯಾಂಕ್ ಖಾತೆಗಳ ಮಾಹಿತಿ ಕದಿಯಲು ಇದೇ ವರ್ಮ್ ಬಳಕೆಯಾಗಿದ್ದ ಇತಿಹಾಸವಿದೆ. ಈ ಬಾರಿ ಇದರ ಸಹಾಯದಿಂದ ಕದ್ದ ಪಾಸ್‌ವರ್ಡ್ ಉಪಯೋಗಿಸಿ ಬಳಕೆದಾರರ ಫೇಸ್‌ಬುಕ್ ಖಾತೆ ಪ್ರವೇಶಿಸುವ ದುಷ್ಕರ್ಮಿಗಳು ಅದನ್ನು ವೈಯಕ್ತಿಕ ಮಾಹಿತಿಯ ಕಳವು, ಕುತಂತ್ರಾಂಶಗಳ ಹರಡುವಿಕೆ ಮುಂತಾದ ಕುಕೃತ್ಯಗಳಿಗೆ ಬಳಸಬಹುದು ಎಂದು ತಜ್ಞರು ಹೇಳುತ್ತಾರೆ.

ಇಂತಹ ನೂರಾರು ಪೀಡೆಗಳು ಕಂಪ್ಯೂಟರ್ ಪ್ರಪಂಚದ ತುಂಬೆಲ್ಲ ಇವೆ. ಇವುಗಳಿಂದೆಲ್ಲ ಪಾರಾಗಲು ಕಂಪ್ಯೂಟರ್ ತಜ್ಞರು ಹೇಳುವುದು ಒಂದೇ ರಾಮಬಾಣದ ಹೆಸರು. ಅದೇ ವೈರಸ್ ವಿರೋಧಿ ತಂತ್ರಾಂಶ, ಅರ್ಥಾತ್ ಆಂಟಿವೈರಸ್!


ಕಂಪ್ಯೂಟರ್ ಪ್ರಪಂಚವನ್ನು ಕಾಡುವ ವೈರಸ್, ವರ್ಮ್, ಟ್ರೋಜನ್ ಹಾರ್ಸ್, ಸ್ಪೈವೇರ್ ಮುಂತಾದ ಕುತಂತ್ರಾಂಶಗಳನ್ನು ತಡೆಯಲು, ಪತ್ತೆಮಾಡಲು ಹಾಗೂ ನಿವಾರಿಸಲು ಬಳಕೆಯಾಗುವ ತಂತ್ರಾಂಶವೇ ಆಂಟಿವೈರಸ್. ರೋಗ ಬಾರದಂತಿರಲು, ಹಾಗೂ ಬಂದಾಗ ಅದನ್ನು ವಾಸಿಮಾಡಿಕೊಳ್ಳಲು ನಾವು ಔಷಧಿ ತೆಗೆದುಕೊಳ್ಳುತ್ತೇವಲ್ಲ, ಕಂಪ್ಯೂಟರುಗಳ ಪಾಲಿಗೆ ಆಂಟಿವೈರಸ್ ಕೂಡ ಅಂತಹುದೇ ಔಷಧಿ.

ಈ ತಂತ್ರಾಂಶಗಳ ಕಾರ್ಯಾಚರಣೆಯ ರೀತಿಯೇ ವಿಶೇಷವಾದದ್ದು. ಅವುಗಳ ಕೆಲಸವೆಲ್ಲ ನಡೆಯುವುದು ಕುತಂತ್ರಾಂಶಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ದತ್ತಸಂಚಯವನ್ನು (ಡೇಟಾಬೇಸ್) ಆಧರಿಸಿಕೊಂಡು. ವೈರಸ್ ವಿರೋಧಿ ತಂತ್ರಾಂಶ ರೂಪಿಸುವ ಸಂಸ್ಥೆಗಳು ಯಾವೆಲ್ಲ ಕುತಂತ್ರಾಂಶಗಳನ್ನು ಪತ್ತೆಮಾಡಿರುತ್ತವೆಯೋ ಅವೆಲ್ಲವುಗಳ 'ಸಿಗ್ನೇಚರ್', ಅರ್ಥಾತ್ ಗುಣಲಕ್ಷಣಗಳನ್ನು ಇಂತಹ ದತ್ತಸಂಚಯಗಳಲ್ಲಿ ಸಂಗ್ರಹಿಸಲಾಗಿರುತ್ತದೆ. ಹೊಸಹೊಸ ಕುತಂತ್ರಾಂಶಗಳು ಪತ್ತೆಯಾದಂತೆಲ್ಲ ಅವುಗಳ ಬಗೆಗಿನ ಮಾಹಿತಿ ಈ ದತ್ತಸಂಚಯವನ್ನು ಸೇರಿಕೊಳ್ಳುತ್ತದೆ.

ಹೊಸ ಕುತಂತ್ರಾಂಶಗಳು ಪತ್ತೆಯಾಗುವವರೆಗೂ ಕಾಯುತ್ತ ಕುಳಿತರೆ ಅದಕ್ಕೆ ಪರಿಹಾರ ರೂಪಿಸುವಷ್ಟರಲ್ಲಿ ಅವುಗಳ ಹಾವಳಿ ವ್ಯಾಪಕವಾಗಿಬಿಡುತ್ತದಲ್ಲ! ಹೀಗಾಗಿ ವೈರಸ್ ವಿರೋಧಿ ತಂತ್ರಾಂಶ ನಿರ್ಮಾಪಕರು ಮುಂದೆ ಬರಬಹುದಾದ ಕುತಂತ್ರಾಂಶಗಳ ಗುಣಲಕ್ಷಣವನ್ನು ಅಂದಾಜಿಸಿಕೊಂಡು ಸಿದ್ಧರಾಗಿರುವುದೂ ಉಂಟು.

ಆಂಟಿವೈರಸ್ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎನ್ನುವುದು ಇದೇ ಕಾರಣಕ್ಕಾಗಿ. ಹೀಗೆ ಮಾಡುವುದರಿಂದ ಹೊಸ ಕುತಂತ್ರಾಂಶಗಳ ಬಗೆಗಿನ ಮಾಹಿತಿ ನಮ್ಮ ಕಂಪ್ಯೂಟರ್‌ನಲ್ಲಿರುವ ವೈರಸ್ ವಿರೋಧಿ ತಂತ್ರಾಂಶಕ್ಕೂ ಸಿಗುವಂತೆ ಮಾಡಬಹುದು. ಇದರಿಂದಾಗಿ ನಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಸಾಧ್ಯ. ಅಷ್ಟೇ ಅಲ್ಲ, ನಮ್ಮ ಕಂಪ್ಯೂಟರ್‌ನಿಂದ ಕುತಂತ್ರಾಂಶಗಳು ಇತರೆಡೆಗೂ ಹರಡಿ ಬೇರೆಯವರಿಗೆ ತೊಂದರೆಯಾಗುವುದನ್ನು ಕೂಡ ತಪ್ಪಿಸಬಹುದು.

ನಾರ್ಟನ್, ಮೆಕ್‌ಆಫೀ, ಅವಾಸ್ತ್ ಮುಂತಾದ ಹತ್ತಾರು ವೈರಸ್ ವಿರೋಧಿ ತಂತ್ರಾಂಶಗಳು ಮಾರುಕಟ್ಟೆಯಲ್ಲಿವೆ. ಅವುಗಳನ್ನು ತಂತ್ರಾಂಶ ವಿತರಕರಿಂದ ಕೊಳ್ಳಬಹುದು, ಅಥವಾ ಅವುಗಳ ಜಾಲತಾಣದಿಂದ ನೇರವಾಗಿ ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು. ಕೆಲ ಆಂಟಿವೈರಸ್‌ಗಳನ್ನು ಬಳಸಲು ಹಣ ಕೊಡಬೇಕಾಗುತ್ತದೆಯಾದರೆ ಇನ್ನು ಕೆಲವು ಉಚಿತವಾಗಿಯೇ ಸಿಗುತ್ತವೆ.

ಇಂತಹ ಯಾವುದೇ ತಂತ್ರಾಂಶವನ್ನು ಅನುಸ್ಥಾಪಿಸಿಕೊಂಡು ಅವುಗಳನ್ನು ನಿಯಮಿತವಾಗಿ ಮಾಡಿಕೊಳ್ಳುವುದರಿಂದ ನಮ್ಮ ಕಂಪ್ಯೂಟರ್ ಅನ್ನು ಬಹುತೇಕ ಕುತಂತ್ರಾಂಶಗಳ ಕಾಟದಿಂದ ಮುಕ್ತವಾಗಿ ಉಳಿಸಿಕೊಳ್ಳಬಹುದು. ಬಹುತೇಕ ಆಂಟಿವೈರಸ್ ತಂತ್ರಾಂಶಗಳು ಅಂತರಜಾಲ ಸಂಪರ್ಕ ಬಳಸಿಕೊಂಡು ತಮ್ಮಷ್ಟಕ್ಕೆ ತಾವೇ ಅಪ್‌ಡೇಟ್ ಕೂಡ ಆಗುತ್ತವೆ. ಹೀಗೆ ಅಪ್‌ಡೇಟ್ ಆದಾಗಲೆಲ್ಲ ಒಮ್ಮೆ ನಿಮ್ಮ ಕಂಪ್ಯೂಟರ್ ಅನ್ನು ಪರೀಕ್ಷಿಸುವಂತೆ (ವೈರಸ್ ಸ್ಕ್ಯಾನ್), ಹಾಗೂ ಪತ್ತೆಯಾದ ಕುತಂತ್ರಾಂಶಗಳನ್ನು ನಿವಾರಿಸುವಂತೆ ಕೂಡ ಯೋಜಿಸಬಹುದು. ಅಷ್ಟೇ ಅಲ್ಲ, ಕಂಪ್ಯೂಟರ್ ಕೆಲಸಮಾಡುತ್ತಿರುವಾಗಲೆಲ್ಲ ಆಂಟಿವೈರಸ್ ತಂತ್ರಾಂಶ ಸಕ್ರಿಯವಾಗಿರಬೇಕಾದದ್ದು ಅವಶ್ಯ.

ಆಂಟಿವೈರಸ್ ತಂತ್ರಾಂಶಗಳ ಬಳಕೆಯ ಜೊತೆಜೊತೆಗೆ ಇನ್ನೂ ಕೆಲ ಸರಳ ಸೂತ್ರಗಳನ್ನು ಪಾಲಿಸುವುದರಿಂದ ಕುತಂತ್ರಾಂಶಗಳ ಕಾಟ ತಪ್ಪಿಸಿಕೊಳ್ಳಬಹುದು. ಸಂಶಯಾಸ್ಪದ ತಾಣಗಳಿಂದ ಯಾವುದೇ ಕಡತ ಅಥವಾ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡದಿರುವುದು ಈ ಸೂತ್ರಗಳಲ್ಲಿ ಮೊದಲನೆಯದು. ಇಮೇಲ್ ಜೊತೆಗೆ ಅಟ್ಯಾಚ್‌ಮೆಂಟ್ ರೂಪದಲ್ಲಿ ಬರುವ ಕಡತಗಳಿಗೂ ಇದೇ ಸೂತ್ರ ಅನ್ವಯಿಸುತ್ತದೆ. ಕೊಂಚವೇ ಸಂಶಯ ಬಂದರೂ ಅದನ್ನು ತೆರೆಯದಿರುವುದು ಒಳ್ಳೆಯದು; ಹಾಗೊಮ್ಮೆ ತೆರೆಯುವುದೇ ಆದರೆ ಆಂಟಿವೈರಸ್ ಸಹಾಯದಿಂದ ಅದನ್ನೊಮ್ಮೆ ಪರೀಕ್ಷಿಸಿಯೇ ತೆರೆಯಬೇಕು. ಹೊರಗಿನಿಂದ ತಂದ ಪೆನ್‌ಡ್ರೈವ್, ಸಿಡಿ, ಡಿವಿಡಿಗಳನ್ನು ಬಳಸುವ ಮುನ್ನವೂ ವೈರಸ್ ಪತ್ತೆ ಪರೀಕ್ಷೆ (ವೈರಸ್ ಸ್ಕ್ಯಾನ್) ಮಾಡುವುದು ಒಳಿತು.

ಜನವರಿ ೧೦, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

Jnanamukhi ಹೇಳಿದರು...

ಲೇಖನ ತುಂಬ ಚೆನ್ನಾಗಿದೆ. ಆದರೆ ಉಚಿತವಾಗಿ ಸಿಗುವ ಆಂಟಿ ವೈರಸ್ ತಂತ್ರಾಂಶವನ್ನು ಆಗಾಗ ಅಪಡೇಟ್ ಮಾಡುವುದರಿಂದ ನಮ್ಮ ಕಂಪ್ಯೂಟರ್ ಸಂಪೂರ್ಣ ಸುರಕ್ಷಿತವಾಗಿರುತ್ತದೆಯೇ?

Jnanamukhi ಹೇಳಿದರು...

ಲೇಖನ ತುಂಬ ಚೆನ್ನಾಗಿದೆ. ಆದರೆ ಉಚಿತವಾಗಿ ಸಿಗುವ ಆಂಟಿ ವೈರಸ್ ತಂತ್ರಾಂಶವನ್ನು ಆಗಾಗ ಅಪಡೇಟ್ ಮಾಡುವುದರಿಂದ ನಮ್ಮ ಕಂಪ್ಯೂಟರ್ ಸಂಪೂರ್ಣ ಸುರಕ್ಷಿತವಾಗಿರುತ್ತದೆಯೇ?

badge