ಶುಕ್ರವಾರ, ಸೆಪ್ಟೆಂಬರ್ 30, 2011

ಇಜ್ಞಾನ ವಿಶೇಷ: ಜೀವನಶೈಲಿ ಮತ್ತು ಆರೋಗ್ಯ

ಡಾ. ಪಿ.ಎಸ್. ಶಂಕರ್

ಇಜ್ಞಾನದ ಓದುಗರಿಗಾಗಿ ಈ ವಿಶೇಷ ಲೇಖನ ನೀಡಿರುವ ಡಾ| ಪಿ. ಎಸ್. ಶಂಕರ್ ಹೆಸರಾಂತ ವೈದ್ಯರು ಹಾಗೂ ವೈದ್ಯಕೀಯ ಲೇಖಕರು. ಗುಲಬರ್ಗಾದ ಎಂ ಆರ್ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿರುವ ಶ್ರೀಯುತರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರು ಹಾಗೂ 'ವಿಜ್ಞಾನ ಲೋಕ' ಪತ್ರಿಕೆಯ ಸಂಪಾದಕರೂ ಹೌದು.

ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿಯಾಗಿದೆ. ಆರೋಗ್ಯ ನಮ್ಮ ಎಲ್ಲ ಸಾಮಾಜಿಕ ಗುಣಧರ್ಮಗಳಿಗೆ ಮತ್ತು ಜೀವನದ ಸುಖ-ಸಂತೋಷಕ್ಕೆ ಬುನಾದಿಯಾಗಿದೆ. ಆರೋಗ್ಯ ಕೇವಲ ನಿರೋಗಿಯಾಗಿರುವುದಾಗಲೀ ಇಲ್ಲವೆ ದೌರ್ಬಲ್ಯವನ್ನು ಹೊಂದಿರುವುದಿಲ್ಲವಾಗಲೀ ಅಲ್ಲ.

ಆರೋಗ್ಯ - ಅನಾರೋಗ್ಯ, ರೋಗ-ನಿರೋಗ ಒಟ್ಟಿಗೆ ಸಾಗುವ ಸ್ಥಿತಿಗಳು. ಅವುಗಳನ್ನು ಬೇರ್ಪಡಿಸುವ ತಾಣವಾವುದೂ ಇಲ್ಲ. ನಾವು ಸದಾ ಆರೋಗ್ಯ - ಅನಾರೋಗ್ಯದ ನಡುವೆ ಬದುಕು ನಡೆಸುತ್ತಿದ್ದೇವೆ. ಈ ಸ್ಥಿತಿಗಳನ್ನು ತೋರಿಸುವ ರೇಖೆಯಲ್ಲಿ ಅತ್ಯಂತ ಕೆಳಗೆ ಗೋಚರಿಸುವುದು ಸಾವು ಮತ್ತು ಆ ರೇಖೆಯಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವುದು ಆರೋಗ್ಯ. ಹೀಗೆ ಅರೋಗ ಅಲೆಯಂತೆ ಆ ರೇಖೆಯ ಮೇಲೆ ಕೆಳಗೆ ಸಾಗುತ್ತಿದ್ದು ಅವುಗಳ ಬೇರೆ ಬೇರೆ ಮಟ್ಟ ವ್ಯಕ್ತಿಯ ಆರೋಗ್ಯ ಸ್ಥಿತಿಯಲ್ಲಿ ತೋರಿಬರುತ್ತಿರುವ ಬದಲಾವಣೆಗಳನ್ನು ಪ್ರತಿಫಲಿಸುತ್ತದೆ. ವ್ಯಕ್ತಿ ನಿರೋಗವನ್ನು ಆಯ್ದುಕೊಳ್ಳಬೇಕೇ ವಿನಃ ರೋಗವನ್ನಲ್ಲ.

ಹೀಗಾಗಿ ಆರೋಗ್ಯವೆಂಬುದು ಸ್ಥಾಯಿಯಲ್ಲ. ಅದು ನಿರಂತರವಾಗಿ ಬದಲುಗೊಳ್ಳುತ್ತರುವ ಸ್ಥಿತಿ ಇಂದು ತೋರಿಬರುವ ಆರೋಗ್ಯ ನಾಳೆ ಇರಲಿಕ್ಕಿಲ್ಲ. ನಾಡಿದ್ದು ಅದು ಮತ್ತೆ ಬದಲಾವಣೆಯನ್ನು ತೋರಿಸಬಹುದು. ನಾವು ಬದುಕಿರುವಷ್ಟು ಕಾಲ ಆರೋಗ್ಯದಿಂದ ಬದುಕಿರಬೇಕಾಗಿದೆ.


ನಾವು ಪಡೆದಿರುವ ಆರೋಗ್ಯದ ಕೆಲವೊಂದು ಅಂಶಗಳು ನಮ್ಮ ಜೀವಾಂಕುರವಾದ ಕಾಲದಿಂದಲೇ ನಮ್ಮಲ್ಲಿ ಆಂತರ್ಗತವಾಗಿರುತ್ತವೆ. ಅದರ ಮೇಲೆ ನಾವಿರುವ ಪರಿಸರ ಪ್ರಭಾವ ಬೀರುತ್ತಿರುತ್ತದೆ. ವ್ಯಕ್ತಿಯು ರೋಗಕ್ಕೊಳಪಡುವುದು, ಆತ ಪಡೆದಿರುವ ತಳಿ ಸಂಬಂಧಿ ಅಂಶಗಳು ಮತ್ತು ಅದರ ಮೇಲೆ ಪ್ರಭಾವ ಬೀರುವ ಪರಿಸರದ ಅಂಶಗಳನ್ನಾಧರಿಸಿದೆ. ಈ ಆಂಶಗಳು ಪರಸ್ಪರ ಪ್ರತಿಕ್ರಿಯಿಸಿ ಆರೋಗ್ಯವನ್ನು ವೃದ್ಧಿಸಬಹುದು ಇಲ್ಲವೆ ಅನಾರೋಗ್ಯಕ್ಕೆಡೆ ಮಾಡಿ ಕೊಡಬಹುದು. ಹೀಗಾಗಿ ವ್ಯಕ್ತಿಯ ಆರೋಗ್ಯ - ಅನಾರೋಗ್ಯದ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ.

ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಗುಣವಿಶೇಷಗಳು ಅವರ ಜೀವಾಂಕುರವಾಗುವ ಸಮಯದಲ್ಲಿ ಪಡೆದ ತಳಿ ಸಂಬಂಧಿ ಅಂಶಗಳಿಂದ ಕೆಲಮಟ್ಟಿಗೆ ನಿರ್ಧರಿಸಲ್ಪಡುತ್ತವೆ. ತಳಿಯ ರೂಪ ಒಮ್ಮೆ ಬೇರೂರಿದ ಮೇಲೆ ಅದನ್ನು ಬದಲಿಸಲಾಗದು. ಇಂದು ಅನೇಕ ರೋಗಗಳು; ಉದಾಹರಣೆಗೆ ವರ್ಣದಂಡಗಳ ವ್ಯತ್ಯಯ, ಜೀವಸ್ತುಕರಣ ಕ್ರಿಯೆಯಲ್ಲಿನ ಬದಲಾವಣೆಗಳು, ಬೌದ್ಧಿಕ ಹಿನ್ನೆಡೆ, ಕೆಲವೊಂದು ಬಗೆಯ ಸಕ್ಕರೆ ಕಾಯಿಲೆ ತಳಿಸಂಬಂಧಿ ರೋಗಗಳೆಂದು ಗುರುತಿಸಲ್ಪಟ್ಟಿವೆ. ಈ ರೋಗಗಳನ್ನು ತಡೆಗಟ್ಟುವ ಮತ್ತು ಚಿಕಿತ್ಸೆಯ ವಿಧಾನಗಳ ಸಂಶೋಧನೆ ನಡೆಯುತ್ತಿದ್ದು ಅರೋಗ್ಯ ವರ್ಧನೆಗೆ ಸಹಾಯಕವಾಗುವ ವಂಶವಾಹಿ ರೂಪುಗೊಳ್ಳುತ್ತಿದೆ.

ಆರೋಗ್ಯ ಇದ್ದಾಗ ಗೊತ್ತಾಗದ ಮತ್ತು ಇಲ್ಲದಾಗ ತನ್ನ ಮಹತ್ವವನ್ನು ತೋರಿಸುವ ಸ್ಥಿತಿ. ರೋಗ ನಮ್ಮ ಅರಿವಿಗೆ ಬಂದಂತೆ ಆರೋಗ್ಯ ಬಾರದು. ರೋಗ ವೇಗಗತಿಯಿಂದ ಬಂದು ದೈಹಿಕ ಅನಾರೋಗ್ಯಕ್ಕೆಡೆ ಮಾಡಿಕೊಡುತ್ತದೆ. ಅದನ್ನು ಕೆಲವೊಂದು ಜನಪದಗಳು ಹೀಗೆ ಕಂಡಿವೆ ; ರೋಗ ಸಾರೋಟನಲ್ಲಿ ಬಂದು ಸೂಜಿ ಮೊನೆಯ ಮೂಲಕ ಹೊರಹೋಗುತ್ತದೆ. ರೋಗ ಪಂದ್ಯದ ಕುದುರೆಯಂತೆ ಬಂದು, ನಂತರ ನಡೆಯುತ್ತ ಹೋಗುತ್ತದೆ.

ಆರೋಗ್ಯ ನಮ್ಮ ದೇಹ ರಚನೆ ಮತ್ತು ಕಾರ್ಯಗಳಿಂದಾಚೆಯವರೆಗಿನ ವಿಷಯಗಳನ್ನು ಒಳಗೊಂಡಿದೆ. ಅದರಲ್ಲಿ ನಮ್ಮ ಭಾವನೆಗಳು, ಮೌಲ್ಯಗಳು, ತರ್ಕ ಮತ್ತು ವ್ಯಕ್ತಿಗಳ ನಡುವಣ ಸಂಬಂಧ ಸೇರಿವೆ. ನಮ್ಮ ಆರೋಗ್ಯ ತೃಪ್ತಿಕರ ಜೀವನವನ್ನು ಬಾಳುವುದಕ್ಕೆ ಸಹಾಯಕ ವಾಗಿರಬೇಕು. ಆರೋಗ್ಯವಿಲ್ಲದ ಜೀವನ ಸುಖ-ಸಂತೋಷವನ್ನು ಅನುಭವಿಸಲಿಕ್ಕೆ ಬಾರದು. ಸಂಪೂರ್ಣ ಆರೋಗ್ಯ ದೈಹಿಕ, ಮಾನಸಿಕ, ಸಾಮಾಜಿಕ ವಿಷಯಗಳನ್ನಲ್ಲದೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಒಳಗೊಂಡಿದ್ದು ಅವುಗಳೆಲ್ಲವೂ ಆರೋಗ್ಯದಿಂದಿರುವ ವ್ಯಕ್ತಿಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ.

ಆರೋಗ್ಯವನ್ನು ಲೆಕ್ಕಹಾಕುವ ಅನೇಕ ಮಾನದಂಡಗಳಿಂದ ಅಳೆಯಲಾಗುತ್ತದೆ. ಉದಾಹರಣೆಗೆ ದೈಹಿಕ ಉಷ್ಣತೆ, ರಕ್ತ ಒತ್ತಡ, ರಕ್ತದಲ್ಲಿ ಗ್ಲುಕೋಸ್, ಕೊಲೆಸ್ಟಿರಾಲ್, ಟ್ರೈಗ್ಲಿಸರೈಡ್‌ಗಳ ಮಟ್ಟ, ಎದೆಯ ಎಕ್ಸ್-ಕಿರಣ ಚಿತ್ರ, ವಿದ್ಯುತ್ ಹೃದಯ ಚಿತ್ರ, ಕಣ್ಜಾಲವನ್ನೊ ಳಗೊಂಡ ದೈಹಿಕ ಪರೀಕ್ಷೆ. ಆದರೆ ಆರೋಗ್ಯ ನಿಜಕ್ಕೂ ಜೈವಿಕವಾಗಿ ವಿಭಿನ್ನ. ಕೆಲವರಿಗೆ ಸಹಜವಾಗಿರುವುದು ಮತ್ತೊಬ್ಬರಿಗೆ ಅಸಹಜ. ಹಾಗಾಗಿ ಅದು ತುಲನಾತ್ಮಕ. ಆರೋಗ್ಯವೆಂದರೆ ನಾವು ಅದನ್ನು ತಕ್ಕಡಿಯಲ್ಲಿ ತೂಗಿದಂತಲ್ಲ. ನಾವು ಆಯ್ದುಕೊಂಡ ಜೀವನ ಅಪೇಕ್ಷಿಸುವುದನ್ನು ನಾವು ಕೈಕೊಳ್ಳಬಲ್ಲೆವಾದರೆ ಅದು ಆರೋಗ್ಯ. ಪರಿಚಿತರನ್ನು ಭೆಟ್ಟಿಯಾದಾಗ ಚೆನ್ನಾಗಿದ್ದೀರಾ? ಎಂದು ಸಹಜವಾಗಿ ಕೇಳುತ್ತೇವೆ. ನಾವು ಚೆನ್ನಾಗಿದ್ದೇವೆ ಎಂಬುದನ್ನು ಕೇವಲ ವೈದ್ಯಕೀಯ ದೃಷ್ಟಿಯಿಂದ ಇಲ್ಲವೆ ರೋಗದ ದೃಷ್ಟಿಯಿಂದ ನೋಡಲು ಬಾರದು. ಚೆನ್ನಾಗಿರುವುದೆಂದರೆ ನಿರಂತರ ಉತ್ತೇಜಕ, ಸೃಜನಾತ್ಮಕ ತೃಪ್ತಿಕರ ಜೀವನವನ್ನು ಬಾಳುವುದಾಗಿದೆ. ಆಗ ಮಾತ್ರ ಮನುಷ್ಯ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಬಲ್ಲ.

ಕ್ರಿಸ್ತಶಕೆ ಪ್ರಾರಂಭದಲ್ಲಿಯೇ 'ಜೀವನವೆಂದರೆ ಬದುಕುವುದಲ್ಲ, ಆರೋಗ್ಯದಿಂದ ಜೀವಿಸುವುದು' ಎಂದು ತಿಳಿಯಲಾಗಿದ್ದಿತು. ರೋಮನ್ ತತ್ವಜ್ಞಾನಿ ಸಿಸಿರೋ ಆ ಕಾಲದಲ್ಲಿ 'ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ' ಎಂಬ ಸರ್ವಕಾಲೀನ ಸಲಹೆ ನೀಡಿದ. ಆರೋಗ್ಯ ಅಮೂಲ್ಯವಾಗಿದ್ದು, ಅದನ್ನು ಕಾಯ್ದಿರಿಸಿಕೊಳ್ಳುವ ಹಾದಿ ದುರ್ಗಮವಾದುದಲ್ಲ, ಇಲ್ಲವೆ ಅದಕ್ಕಾಗಿ ಹೆಚ್ಚು ಹಣ ವ್ಯಯಿಸಬೇಕಿಲ್ಲ ಎಂಬುದನ್ನು ಅರಿತುಕೊಳ್ಳಲಾಗಿದ್ದಿತು. ಆರೋಗ್ಯವನ್ನು ಸೋಮಾರಿತನದಿಂದ ಮತ್ತು ಚಟುವಟಿಕೆಯಿಲ್ಲದೆ ದೊರಕಿಸಲಿಕ್ಕಾಗದ್ದು ಎಂಬುದನ್ನು ಎಲ್ಲರೂ ಅರಿತಿದ್ದರು. ಅದನ್ನು ಜೇಮ್ಸ್ ಬೆಟ್ಟ ಸಂಕ್ಷೇಪಿಸಿ 'ಪರಿಶ್ರಮದಿಂದ ಆರೋಗ್ಯ, ಆರೋಗ್ಯದಿಂದ ಸಂತೃಪ್ತಿಯ ಚಿಲುಮೆ' ಎಂದು ಹೇಳಿದ.

ಆರೋಗ್ಯವನ್ನು ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯಗಳಲ್ಲಿ ಒಂದಾಗಿದೆ. 'ಅನಾರೋಗ್ಯ ಮೈಮನದ ಸೋಲು' ಆರೋಗ್ಯ ಮಾತ್ರ ಗೆಲುವು' ಎಂಬುದು ಕಾರ್ಲೈಲನ ಅಭಿಮತ. ಹೀಗಾಗಿ ನಮ್ಮ ಆರೋಗ್ಯ ರಕ್ಷಣಾ ಕಾರ್ಯದಲ್ಲಿ ಸೋಲು ಕಾಣಬಾರದು. ಜನಪದವು ನಮ್ಮ ಆರೋಗ್ಯ, ಸುಸ್ಥಿತಿಯ ಮೇಲೆ ನಿಸರ್ಗ ಬೀರುವ ಪರಿಣಾಮವನ್ನು ಅರಿತಿದ್ದು, ಜೀವನವನ್ನು ನಿಸರ್ಗವನ್ನು ಅನುಸರಿಸಿ ನಡೆಯುವಂತೆ ರೂಪಿಸಿಕೊಂಡಿದೆ. ರೋಗ ಬಾರದಂತೆ ಮಾಡಲು ಜನಪದ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಆಹಾರ ಪದ್ಧತಿ, ವಾಯು ಸಂಚಾರಗಳ ಬಗ್ಗೆ ಅದು ಸ್ಪಷ್ಟ ವಿಚಾರಗಳನ್ನು ಹೊಂದಿ ಉತ್ತಮ ವೈದ್ಯನ ಲಕ್ಷಣಗಳನ್ನು ತೋರಿಸಿದೆ. ಪ್ರಾಚೀನ ಕಾಲದಿಂದ ಮನುಷ್ಯ ತನ್ನ ದೈಹಿಕ ಸ್ಥಿತಿಯನ್ನು ಸರಿಯಾಗಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಿದ್ದಾನೆ. ಜನಸಾಮಾನ್ಯರು ದೇಹಾರೋಗ್ಯದ ಕಡೆ ಸದಾ ಗಮನವಿರಿಸಿದ್ದರು ಎಂಬುದು ಅವುಗಳ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.

ಆರೋಗ್ಯವನ್ನು ಭಾಗ್ಯವೆಂದು ಎಲ್ಲ ಜನಪದಗಳು ಗುರುತಿಸಿದ್ದು, ಅದನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. 'ಆರೋಗ್ಯವೇ ಸಕಲವೂ ಅಲ್ಲ ಆದರೆ ಅದಿಲ್ಲವಾದರೆ ಏನೂ ಇಲ್ಲದೆ ಹಾಗೆ' ಎಂಬುದನ್ನು ಜನಪದ ಮನಗಂಡಿರುವುದನ್ನು ಅನೇಕ ತೆರನಾದ ಗಾದೆಗಳು ಪುಷ್ಠೀಕರಿಸಿವೆ. ಐಶ್ವರ್ಯಕ್ಕಿಂತಲೂ ಆರೋಗ್ಯ ಉತ್ತಮ. ರೋಗ ಬರುವವರೆಗೂ ಆರೋಗ್ಯದ ಬೆಲೆ ಗೊತ್ತಾಗುವುದಿಲ್ಲ. ರೋಗದ ಕಹಿಯಿಂದ ಆರೋಗ್ಯದ ಸಿಹಿಯನ್ನು ಮನುಷ್ಯ ಅರಿಯುತ್ತಾನೆ. ಆರೋಗ್ಯದಿಂದಿರುವ ಪ್ರತಿಯೊಬ್ಬನೂ ದೊರೆ. ಆರೋಗ್ಯವೊಂದೇ ಸಾವಿರ ಆಶೀರ್ವಾದಕ್ಕೆ ಸಮ, ಆರೋಗ್ಯ ಐಶ್ವರ್ಯದತ್ತ ಹಾಕಿದ ಹೆಜ್ಜೆ, ಆರೋಗ್ಯವಂತ ಮನುಷ್ಯನಿಗೆ ಎಲ್ಲವೂ ಆರೋಗ್ಯಕರ. ರೋಗವಿಲ್ಲದಿದ್ದಾಗ ಪ್ರತಿಯೊಬ್ಬರೂ ಆರೋಗ್ಯವಂತರು. ಹೆಚ್ಚು ಶ್ರೀಮಂತಿಕೆ ಕಡಿಮೆ ಆರೋಗ್ಯ. ಒಳ್ಳೆಯ ಆರೋಗ್ಯ ಅಥವಾ ಕೆಟ್ಟದು ನಮ್ಮ ತತ್ವಜ್ಞಾನವನ್ನು ರೂಪಿಸುತ್ತದೆ. ಆರೋಗ್ಯ ಐಶ್ವರ್ಯಕ್ಕಿಂತ ಮೇಲು, ಆರೋಗ್ಯ ಬಡವನ ಶ್ರೀಮಂತಿಕೆ, ಶ್ರೀಮಂತನ ಪರಮಸುಖ. ಹಾಗಾಗಿ ನಾವು ಆರೋಗ್ಯವನ್ನು ಹಿಡಿಯಬೇಕೇ ವಿನಃ ಅನಾರೋಗವನ್ನಲ್ಲ.

ದಶಕಗಳ ಹಿಂದೆ ನಮ್ಮ ದೇಶದಲ್ಲಿ ಸೋಂಕು ಜಾಡ್ಯಗಳು, ಪರಾವಲಂಬಿ ಜೀವಿರೋಗಗಳು ವಿಪುಲವಾಗಿ ಗೋಚರಿಸುತ್ತಿದ್ದವು. ಜೀವಾಣು ಸೋಂಕು ರೋಗಗಳ ವಿರುದ್ಧ ಲಸಿಕೆಗಳ ವ್ಯಾಪಕ ಬಳಕೆ, ಹಸುಳೆಗಳಿಗೆ ಸ್ತನ್ಯಪಾನ, ಪುಷ್ಠಿಕರ ಆಹಾರ ಸೇವನೆ ಮರಣ ಪ್ರಮಾಣವನ್ನು ತಗ್ಗಿಸಿ ಆಯುಷ್ಯ ಹೆಚ್ಚುವಂತೆ ಮಾಡಿದೆ. ಆದರೂ ನಮ್ಮಲ್ಲಿನ ಅನೈರ್ಮಲ್ಯ ಪರಿಸರ ಅನೇಕ ಸೋಂಕು ರೋಗಗಳನ್ನು ಕಾಯ್ದಿರಿಸಿವೆ. ಅದರೊಟ್ಟಿಗೆ ನಗರವಾಸ, ಒತ್ತಡದಡಿ ಕಾರ್ಯ, ಶ್ರೀಮಂತಿಕೆ, ಜೀವನ ಮಟ್ಟದ ಏರಿಕೆಯೂ ಉಂಟಾಗಿದೆ. ಒತ್ತಡ ಬದುಕು ಫಾಸ್ಟ್‌ಪುಡ್, ವೇಗಗತಿ ಜೀವನ, ಮನೆಯಿಂದ ಹೊರಗೆ ತುಂಬ ರಾತ್ರಿಯವರೆಗೆ ಮನರಂಜನೆ, ಮದ್ಯಪಾನ, ಧೂಮಪಾನ, ಸಂಸ್ಕರಿಸಿದ ಆಹಾರ ಸೇವನೆ, ವ್ಯಾಯಾಮವಿಲ್ಲದಿರುವಿಕೆ, ಕುಳಿತು ಕೆಲಸ. ಈ ಬಗೆಯ ಜೀವನ ಶೈಲಿಯ ಅಳವಡಿಕೆ ದೇಹದ ಮೇಲೆ ದುಷ್ಪ್ರಭಾವ ಬೀರಿದೆ. ಅನುವಳಿಕೆ ರೋಗಗಳು, ಹೃದಯ ರೋಗಗಳು, ರಕ್ತ ಏರೊತ್ತಡ, ಡಯಾಬಿಟಿಸ್, ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಒತ್ತಡದ ಫಲವಾಗಿ ಮನಸ್ಥಿತಿ ಏರುಪೇರಾಗಿದೆ. ಅದರಿಂದಾಗಿ ಇಂದು ಜೀವನಶೈಲಿಯ ಬದಲಾವಣೆ ಬಗ್ಗೆ ಪದೇ ಪದೇ ಕೇಳುತ್ತಿದ್ದೇವೆ.

ಜೀವನ ಶೈಲಿಯೆಂದರೆ ನಿಸರ್ಗವನ್ನು ಅನುಸರಿಸಿ ನಡೆಯುವುದು. ನಿಸರ್ಗ ಮಾತನಾಡದಿದ್ದರೂ ಅದು ಸುಳ್ಳು ಹೇಳದು. ಅಂತ್ಯದಲ್ಲಿ ನಮ್ಮನ್ನು ಗುಣಪಡಿಸುವುದು ಎಂದೆಂದಿಗೂ ನಿಸರ್ಗ. ಔಷಧಿ, ವೈದ್ಯ ಮತ್ತು ರೋಗಿ ನಿಸರ್ಗಕ್ಕೆ ಸಹಾಯಕರಾಗಿ ಕಾರ್ಯನಿರ್ವಹಿಸಿ ದೇಹ ರೋಗದ ವಿರುದ್ಧ ಪ್ರತಿರೋಧವನ್ನೊಡ್ಡಿ ತಂತಾನೆ ಗುಣಮುಖನಾಗಲು ಉತ್ತಮ ಸನ್ನಿವೇಶವನ್ನು ನಿರ್ಮಿಸಬೇಕು. ಅದಕ್ಕಾಗಿಯೇ ವಾಲ್ಟೇರ್ ಕವಿ ನುಡಿದಿದ್ದಾನೆ : ವೈದ್ಯಕಲೆಯೆಂದರೆ ನಿಸರ್ಗ ರೋಗಿಯನ್ನು ಗುಣಪಡಿಸುತ್ತಿರುವಾಗ ಆತನನ್ನು ಉಲ್ಲಾಸದಿಂದಿರಿಸುವುದು. ವೈದ್ಯ ನಿಸರ್ಗದ ಸಹಾಯಕನೇ ಹೊರತು ಯಜಮಾನನಲ್ಲ. ಅದಕ್ಕಾಗಿ ಆತ ನೀಡುವ ಅನುಪಾನ ಕ್ರಮ ನಿಸರ್ಗ ನಿಯಮವನ್ನು ಅನುಸರಿಸಬೇಕು. 'ನೈಸರ್ಗಿಕ ಬಲವೇ ರೋಗವನ್ನು ಗುಣಪಡಿಸುವುದು' ಎಂದು ವೈದ್ಯಶಾಸ್ತ್ರ ಪಿತಾಮಹ ಹಿಪ್ಪೋಕ್ರೇಟಿಸ್ ನಂಬಿದ್ದ. ಹಾಗಾಗಿ ವೈದ್ಯ ವೃತ್ತಿಯಡಿ ನಿಸರ್ಗ ಗುಣಪಡಿಸುವುದು.

ನಮ್ಮ ದೇಶದಲ್ಲಿ ಹೃದಯ ರೋಗಗಳು, ರಕ್ತ ಏರೊತ್ತಡ ಮತ್ತು ಡಯಾಬಿಟಿಸ್ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇನ್ನೂ ಹದಿನೈದು ವರುಷಗಳಲ್ಲಿ ಭಾರತ ಆ ರೋಗಗಳ ರಾಜಧಾನಿ ಎನಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಬೆಳೆಯುತ್ತಿರುವ ಈ ವೈದ್ಯಕೀಯ ಸಂಕಷ್ಟ ಸ್ಥಿತಿ, ಅವು ಉಂಟು ಮಾಡುತ್ತಿರುವ ತೊಡಕುಗಳು ಎಲ್ಲರ ಗಮನ ಸೆಳೆದಿವೆ. ಫ್ರಾನ್ಸಿಸ್ ಬೇಕನ್ 'ಆರೋಗ್ಯಕರ ದೇಹ ಆತ್ಮದ ಅತಿಥಿ ಗೃಹದಂತೆ, ಅದು ರೋಗಿಷ್ಟನಾಗಿದ್ದರೆ ಸೆರೆಮನೆ' ಎಂದು ತಿಳಿದಿದ್ದ. ವಯಸ್ಸು, ಲಿಂಗ ಕೌಟುಂಬಿಕ ಇತಿಹಾಸ ವ್ಯಕ್ತಿಯ ಮೇಲೆ ಬೀರುವ ಪ್ರಭಾವದ ಬಗ್ಗೆ ನಾವು ಹೆಚ್ಚೇನೂ ಮಾಡಲಾಗುವುದಿಲ್ಲ. ಆದರೆ ಆ ರೋಗಗಳ ಬೆಳವಣಿಗೆ ಹೆಚ್ಚಿಸುವ ಸಂಭಾವ್ಯ ಅಂಶಗಳನ್ನು ಕಡಿಮೆ ಮಾಡಲು ಜನಸಾಮಾನ್ಯರು ತಾವು ಅನುಸರಿಸುತ್ತಿರುವ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳಬೇಕಾಗಿದ್ದು, ಅದರ ಬಗ್ಗೆ ನಿರಂತರ ಪ್ರಯತ್ನಗಳು ಬೇಕಾಗಿವೆ. ಆರೋಗ್ಯಕರ ಜೀವನ ನಡೆಸುವುದಕ್ಕೆ, ತನ್ಮೂಲಕ ದೀರ್ಘಾಯುಷ್ಯ ಸಾಧಿಸುವುದಕ್ಕೆ ಯಾವುದೇ ಸುಲಭ ಹಾದಿಯಿಲ್ಲ. ಅದಕ್ಕಾಗಿ ಜೀವನಪರ್ಯಂತ ಶ್ರಮಿಸಬೇಕು.

ನಾವು ಅನುಸರಿಸುತ್ತಿರುವ ಜೀವನ ಶೈಲಿಯ ಕೆಟ್ಟ ಪದ್ಧತಿಗಳು ಹೃದಯಾಘಾತ ಮತ್ತು ಸಕ್ಕರೆ ಕಾಯಿಲೆಯನ್ನುಒಳಗೊಂಡಂತೆ ಅನೇಕ ರೋಗಗಳಿಗೆ ನಾಂದಿ. ಜೀವನಶೈಲಿಯನ್ನು ಸುಧಾರಿಸಿಕೊಂಡು ಬಾಳುವೆ ಮಾಡಿದಲ್ಲಿ ಅದು ಈ ರೋಗಗಳ ಸಂಭಾವ್ಯವನ್ನು ಗಣನೀಯವಾಗಿ ಇಳಿಸಬಹುದಾಗಿದೆ. ನಿಮ್ಮ ಹೃದಯದೊಳಕ್ಕೆ ನೀವು ನೋಡಿದರೆ ನಿಮ್ಮ ದೃಷ್ಟಿ ನಿಚ್ಚಳವಾಗುತ್ತದೆ. 'ಯಾರು ಹೊರಗೆ ನೋಡುವರೋ ಅವರು ಕನಸು ಕಾಣುತ್ತಾರೆ ; ಒಳಗೆ ನೋಡುವವರು ಎಚ್ಚರಗೊಳ್ಳುತ್ತಾರೆ' ಎಂಬ ಮನೋವಿಜ್ಞಾನಿ ಕಾರ್ಲ ಜಂಗರ ಮಾತು ನಮಗೆ ದಾರಿದೀಪವಾಗಬೇಕು.

ಜೀವನಶೈಲಿಯ ಬದಲಾವಣೆ ಕಾರ್ಯಕ್ರಮ ರೋಗ ಚಿಕಿತ್ಸೆಗೆ ಬದಲಿಯಲ್ಲ ; ಆದರೆ ಅದು ತೀವ್ರತೆರ ರೋಗಗಳ ಹತೋಟಿಗೆ ಉಪಯುಕ್ತ. ಅದರಲ್ಲಿ ಸೇರ್ಪಡೆಯಾದ ಅಂಶಗಳು ಹೀಗಿವೆ :

ಧೂಮಪಾನ: ಸಿಗರೇಟು, ಬೀಡಿ ಸೇದುವುದರಿಂದ ಅನೇಕ ವಿಷಾರಿ ವಸ್ತುಗಳು ದೇಹದೊಳ ಸೇರುತ್ತವೆ. ಅವು ಧಮನಿಗಳ ಒಳಹಾಸನ್ನು ಘಾತಗೊಳಿಸಿ ಅವುಗಳ ಹಾದಿಯನ್ನು ಕಿರಿದು ಮಾಡಿ ಕಿರೀಟ ಧಮನಿ ರೋಗಗಳು ಮತ್ತು ರಕ್ತ ಏರೊತ್ತಡಕ್ಕೆ ಅವಕಾಶ ಮಾಡಿಕೊಡುತ್ತವೆ. ಧೂಮಪಾನ ಹೃದಯಾಘಾತ, ರಕ್ತ ಏರೊತ್ತಡ, ನಿಡುಗಾಲ ಅಡ್ಡಿಯ ಶ್ವಾಸಕೋಶ ರೋಗಗಳು, ಶ್ವಾಸಕೋಶ ಕ್ಯಾನ್ಸರ್ ಮತ್ತು ಪರಿಧಿಯ ಧಮನಿ ರೋಗಗಳಿಗೆ ಹಿನ್ನೆಲೆಯನ್ನೊದಗಿಸುವುದರಿಂದ ಧೂಮಪಾನವನ್ನು ವರ್ಜಿಸುವುದು ಆ ಎಲ್ಲ ರೋಗಗಳ ಬೆಳವಣಿಗೆಗೆ ತಡೆ ಹಾಕುವುದು.

ಮದ್ಯಪಾನ: ಮದ್ಯ ಲಿವರ್ ಮೇಲೆ ಅಪಾಯಕಾರಿ ಪ್ರಭಾವ ಹೊಂದಿದೆ. ಅಪರೂಪಕ್ಕೆ ಮಾಡುವ ಅಲ್ಪಪ್ರಮಾಣದ ಮತ್ತು ಪರಿಮಿತ ಪ್ರಮಾಣದ ಮದ್ಯಸೇವನೆ ಅಪಾಯಕಾರಿ ಯಲ್ಲವಾದರೂ , ಅದನ್ನು ರೋಗನಿಯಂತ್ರಣಕ್ಕಾಗಿ ಸೇವಿಸುವ ಸಲಹೆ ಮಾಡಲಾಗದು. ಅನೇಕರು ಅದರ ದಾಸರಾಗಿ ಲಿವರ್ ನಾರುಗಟ್ಟಿಕೆಗೆ ಮತ್ತು ಹೃದಯ ಸ್ನಾಯು ಹೀಚಿ ರೋಗಿಷ್ಟಗೊಳ್ಳುವಿಕೆಗೆ ಅವಕಾಶ ಮಾಡಿಕೊಡುತ್ತಾರೆ.

ವ್ಯಾಯಾಮ: ಒಂದೆಡೆ ಕುಳಿತು ಕೆಲಸ ದೇಹದ ಮೇಲೆ ದುಷ್ಪ್ರಭಾವ ಬೀರುತ್ತದೆ. 'ಗಾಳಿ ಸಂಚಾರ ಮತ್ತು ವ್ಯಾಯಾಮ ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ' ಎಂಬ ಗಾದೆಯಿದೆ. ಪ್ರತಿದಿನ ಕನಿಷ್ಟ ಪಕ್ಷ ಅರ್ಧ ಘಂಟೆ ಕಾಲ ಕೈಕೊಳ್ಳುವ ವಾಯುಸಂಚಾರ, ಸೈಕಲ್ ಸವಾರಿ, ಈಜು ಮುಂತಾದ ವ್ಯಾಯಾಮ ಬೊಜ್ಜು, ರಕ್ತ ಒತ್ತಡ, ಹೃದಯಾಘಾತ ಮತ್ತು ಸಕ್ಕರೆ ಕಾಯಿಲೆಯಂತಹ ಅನೇಕ ರೋಗಗಳನ್ನು ನಿಯಂತ್ರಿಸುತ್ತದೆ. ಅಂಗಸಾಧನೆ ಹೃದಯದಲ್ಲಿ ಹೊಸ ರಕ್ತನಾಳಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಿ ಅದರ ಮೂಲಕ ರಕ್ತ ಪೂರೈಕೆಯನ್ನು ಕಾಯ್ದಿರಿಸುತ್ತದೆ. ಒಳ್ಳೆಯ ಕೊಲೆಸ್ಟಿರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ, ದೇಹ ತೂಕವನ್ನಿಳಿಸುತ್ತದೆ ಮತ್ತು ರಕ್ತ ಒತ್ತಡವನ್ನು ಕೆಳಕ್ಕಿಳಿಸುವುದು.

ಬೊಜ್ಜು: ಅಡುಗೆ ಮನೆ ಆರೋಗ್ಯ ಅತ್ಯುತ್ತಮ ಆರೋಗ್ಯಕ್ಕೆ ಕಾರಣ. ವೈದ್ಯರು ಸದಾ ನಮ್ಮ ಆರೋಗ್ಯವನ್ನು ಕಾಯ್ದಿರಿಸಲು ಶ್ರಮಿಸುತ್ತಾರೆ, ಅಡುಗೆಯವರು ಅದನ್ನು ಹಾಳು ಮಾಡುತ್ತಾರೆ. ಅವರೇ ಆ ಕಾರ್ಯದಲ್ಲಿ ಬಹುಮಟ್ಟಿಗೆ ಯಶಸ್ವಿ ಎಂದು ಡೆನಿಸ್ ರೆಡರಾಟ್ ಹೇಳಿದ್ದಾನೆ. ಅಳತೆಗೆಟ್ಟ ಆಹಾರ ಸೇವನೆಯಿಂದ ವ್ಯಕ್ತಿಗಳ ದೇಹದಲ್ಲಿ ಬೊಜ್ಜು ಸೇರ್ಪಡೆಯಾಗಿ ದೇಹತೂಕ ಮತ್ತು ದೇಹ ಘನರಾಶಿ ಹೆಚ್ಚುತ್ತದೆ. ಸೊಂಟದ ಸುತ್ತಳತೆ ಹೆಚ್ಚುತ್ತದೆ. ದೇಹದಲ್ಲಿ ಒಗ್ಗೂಡಿ ಬೀಳುವ ಕೊಬ್ಬು ವ್ಯಕ್ತಿಯನ್ನು ಪುರುಷತೆರ ಸೇಬು ಆಕೃತಿ ಅಥವಾ ಸ್ತ್ರೀಯ ಪೇರು ಆಕೃತಿ ಹೊಂದುವಂತೆ ಮಾಡುತ್ತದೆ. ಸೇಬು ಆಕೃತಿ ಬೊಜ್ಜು ಹೆಚ್ಚು ಅಪಾಯಕಾರಿ ತುಪ್ಪ, ಬೆಣ್ಣೆ, ಕರಿದ ವಸ್ತುಗಳ ಸೇವನೆ ಕೊಬ್ಬು ಒಗ್ಗೂಡಿ ಬೀಳುವಂತೆ ಮಾಡುತ್ತದೆ. ದೇಹ ತೂಕದ ಸಮತೋಲನೆಗೆ ಆಹಾರ ಪಥ್ಯ ಮತ್ತು ವ್ಯಾಯಾಮ ಮುಖ್ಯ. ನಿಮ್ಮ ದೇಹ ತೂಕ ಸಮರ್ಪಕವಾಗಿದೆಯೋ ಹೇಗೆ ಎಂಬುದನ್ನು ಸರಳ ಸೂತ್ರದಿಂದ ಲೆಕ್ಕ ಹಾಕಬಹುದು. ಸೆಂಟಿ ಮೀಟರ್‌ನಲ್ಲಿ ಅಳೆದ ನಿಮ್ಮ ಎತ್ತರದಲ್ಲಿ ನೂರನ್ನು ಕಳೆದರೆ ಬರುವ ಉತ್ತರ ನಿಮ್ಮ ತೂಕ ಕಿಲೋಗ್ರಾಂ ನಲ್ಲಿ ನಿಮ್ಮ ಎತ್ತರ ೧೭೦ ಸೆಂಟಿ ಮೀಟರ್ ಇದ್ದರೆ ಆಗ ನಿಮ್ಮ ಯೋಗ್ಯ ತೂಕ ೭೦ ಕಿಲೋ ಆಗುತ್ತದೆ.

ಹಿತಮಿತ ಆಹಾರ ಸೇವನೆಯು ದೇಹಾರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ ಎಂಬುದನ್ನು ಸರ್ವಜ್ಞ ಹೀಗೆ ವಿವರಿಸಿದ್ದಾನೆ: 'ನಾಲಿಗೆಯ ಕಟ್ಟಿಹನು ಕಾಲನಿಗೆ ದೂರನಹ! ನಾಲಗೆಯ ರುಚಿಯ ಮೇಲಾಡುತಿರಲವನ ಕಾಲ ಹತ್ತಿರವು ಸರ್ವಜ್ಞ'.

ಹಿತಮಿತವಾದ ರೀತಿಯಲ್ಲಿ ಆಹಾರ ಪಾನೀಯಗಳ ಸೇವನೆಯಿಂದ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಳತೆಗೆಟ್ಟ ಆಹಾರ ಸೇವನೆ, ಫಾಸ್ಟ್‌ಪುಡ್ ಸಂಸ್ಕೃತಿಯ ಫಲವಾಗಿ, ಸೇವಿಸಿದ ಆ ವಸ್ತುಗಳು ಕೊಬ್ಬಾಗಿ ಮಾರ್ಪಟ್ಟು ದೇಹದಲ್ಲಿ ಬೊಜ್ಜಿಗೆಡೆ ಮಾಡಿಕೊಟ್ಟು ದೇಹವನ್ನು ಸ್ಥೂಲಗೊಳಿಸುತ್ತವೆ. ಈ ವಿಷಯವನ್ನು ಜನಪದ ಅರಿತಿದ್ದಿತು ಎನ್ನುವುದಕ್ಕೆ ತುತ್ತು ತೂಕ ಕೆಡಿಸಿತು, ತುತ್ತು ತಪ್ಪಿದರೆ ತೂಕ ತಪ್ಪೀತು, ಮನುಷ್ಯ ಏನು ತಿನ್ನುತ್ತಾನೋ ಹಾಗಿರುತ್ತಾನೆ ಎಂಬ ಗಾದೆಗಳೇ ಸಾಕ್ಷಿ.

ಸ್ಥೂಲಗೊಂಡ ದೇಹ ಅನೇಕ ರೋಗಗಳಿಗೆಡೆ ಮಾಡಿಕೊಡುತ್ತದೆ. ಅವುಗಳಲ್ಲಿ ಸಕ್ಕರೆ ಕಾಯಿಲೆ ಮತ್ತು ಕಿರೀಟ ಧಮನಿಯ ರೋಗಗಳು ಸಾಮಾನ್ಯ ಧಮನಿ ಪೆಡಸಣೆಗೆ ಬೇಗ ಚಾಲನೆ ದೊರೆತು, ಅದು ಹೃದಯ, ಮಿದುಳು ಮತ್ತು ಮೂತ್ರ ಪಿಂಡಕ್ಕೆ ಧಮನಿಗಳ ಮೂಲಕ ಜರುಗುವ ರಕ್ತ ಪರಿಚಲನೆಗೆ ಅಡ್ಡಿಯನ್ನುಂಟು ಮಾಡಿ ಹೃದಯಘಾತ ಲಕ್ವ, ಮೂತ್ರಪಿಂಡ ಸೋಲುವಿಕೆಗೆಡೆ ಮಾಡಿಕೊಡುತ್ತದೆ.

'ಎದೆ ಮೀರಿದ ಹೊಟ್ಟೆ' ಆರೋಗ್ಯಕ್ಕೆ ಒಳ್ಳೆಯದಲ್ಲ. 'ಆಶೆ ಅತಿ ಆಯುಷ್ಯ ಮಿತಿ' 'ನಾಲ್ಕೊತ್ತುಂಡವನನ್ನು ಹೊತ್ತುಕೊಂಡು ಹೋಗಿ' ಎಂಬ ಗಾದೆ ಮಾತುಗಳು ಅಳತೆಗೆಟ್ಟು ಸೇವಿಸುವ ಆಹಾರದ ದುಷ್ಪರಿಣಾಮದ ಬಗ್ಗೆ ಹೇಳುತ್ತದೆ. ಅತಿಯಾದ ಯಾವುದೂ ದೈಹಿಕ ಆರೋಗ್ಯವನ್ನು ಕಾಪಾಡಲಾರದು. ಅದಕ್ಕಾಗಿ ಈ ಅನುಪಾನ: ಆಯುಷ್ಯವನ್ನು ದೀರ್ಘವಾಗಿರಿಸಲು ಊಟದ ಪ್ರಮಾಣ ಕಡಿಮೆ ಮಾಡಿ, ಕಡಿಮೆ ಉಂಡು ವೈದ್ಯರನ್ನು ಎದುರಿಸು, ರಾತ್ರಿ ಊಟ ಕಡಿಮೆಯಾದಲ್ಲಿ ಅದು ಆಯಷ್ಯವರ್ಧಕ, ಒಂದೇ ಬಗೆಯ ಉಣಿಸು ತಿನ್ನುವವನಿಗೆ ವೈದ್ಯನ ಅಗತ್ಯವಿಲ್ಲ.

ಏರಿದ ಕೊಲೆಸ್ಟಿರಾಲ್: ಕೊಲೆಸ್ಟಿರಾಲ್, ಅದರಲ್ಲೂ ಕೆಟ್ಟದ್ದೆಂದು ಪರಿಗಣಿಸಲ್ಪಟ್ಟ ಕಡಿಮೆ ಸಾಂದ್ರತೆಯ ಲಿಪೋಪ್ರೋಟಿನ್ ಕೊಲೆಸ್ಟಿರಾಲ್ ಹೆಚ್ಚಳ ಹೃದಯಾಘಾತಕ್ಕೆಡೆ ಮಾಡಿಕೊಡುವುದು. ಕಡಿಮೆ ಸಂತೃಪ್ತ ಕೊಬ್ಬಿನ ಸೇಂಗಾಎಣ್ಣೆ, ಕುಸುಬಿಎಣ್ಣೆ, ಸೂರ್ಯಕಾಂತಿ ಎಣ್ಣೆ, ಕಡಿಮೆ ಕೊಲೆಸ್ಟಿರಾಲ್, ಹೆಚ್ಚು ನಾರೆಳೆಯುಕ್ತ ಆಹಾರ (ಹಣ್ಣು, ತರಕಾರಿ) ಮತ್ತು ನಿಯಮಿತ ವ್ಯಾಯಾಮ ಕೊಲೆಸ್ಟಿರಾಲನ್ನು ಕೆಳಗಿಳಿಸುವಲ್ಲಿ ಸಹಕಾರಿ. ಈ ಎಲ್ಲ ಪ್ರಯತ್ನಗಳು ಫಲಪ್ರದವಾಗದಿದ್ದರೆ ಸ್ಟ್ಯಾಟನ್ ಮಾತ್ರ ಧಮನಿಯ ಒಳಹಾಸನ್ನು ಭದ್ರಪಡಿಸುವಲ್ಲಿ ಪ್ರಭಾವಶಾಲಿ.

ಜೀವನದ ಸುಖ-ಸಂತೋಷ: ನಮ್ಮ ಅನೇಕ ರೋಗಗಳು ಮನಸ್ಥಿತಿಯ ಏರುಪೇರಿನಿಂದ ಉದ್ಭವ. ನಮ್ಮ ಮನಸ್ಸು ದೇಹದ ಮೇಲೆ ಪ್ರಭಾವ ಹೊಂದಿದ್ದು, ಅದು ರಕ್ತ ಏರೊತ್ತಡ, ಹೃದಯಾಘಾತದಂತಹ ತೊಂದರೆಗಳನ್ನುಂಟು ಮಾಡುತ್ತದೆ. ಒತ್ತಡದ ಬದುಕು, ಆರೋಗ್ಯಕರ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳಿಲ್ಲದಿರುವುದು ಅನೇಕ ರೋಗಗಳಿಗೆಡೆ ಮಾಡುವುದು. ಕೌಟುಂಬಿಕ ಜವಾಬ್ದಾರಿ, ವೃತ್ತಿಯ ಒತ್ತಡ ಎಷ್ಟೇ ಇದ್ದರೂ ಪ್ರತಿಯೊಬ್ಬ ವ್ಯಕ್ತಿ ಜೀವನದ ಸುಖ-ಸಂತೋಷವನ್ನು ಬೇರೆ ಬೇರೆ ಪ್ರಮಾಣದಲ್ಲಿ ಅನುಭವಿಸಬಲ್ಲವನಾಗಿದ್ದಾನೆ. ಈ ಅನುಭವ ಚೈತನ್ಯದಾಯಕವಾದುದರಿಂದ ಅದನ್ನು ನಮ್ಮ ಕಾರ್ಯಶೀಲತೆಯಿಂದ ಸಂವರ್ಧನೆ ಮಾಡಿ ರಕ್ಷಿಸಿಕೊಳ್ಳಬೇಕು. ಒತ್ತಡ ಕಡಿಮೆಮಾಡಿ, ಜೀವನದ ಆಹ್ಲಾದಕರತೆ ಹೆಚ್ಚಿಸುವ ಯೋಗ, ಪ್ರಾಣಾಯಾಮ, ರಾಜಯೋಗ, ಧ್ಯಾನ, ಪ್ರಾರ್ಥನೆಗಳಿಂದ ಮನಃ ಶಾಂತಿಯನ್ನು ಹೆಚ್ಚಿಸಿ, ಜೀವನದ ಸುಖ-ಸಂತೋಷವನ್ನು ಅನುಭವಿಸಬಹುದು. 'ನಾವು ಒಳ್ಳೆಯ ವ್ಯಕ್ತಿಗಳಾಗಬೇಕಾದರೆ ಅದಕ್ಕೆ ಅತ್ಯುತ್ತಮ ಅನುಪಾನ ; ಆರೋಗ್ಯಕರ ಮನಸ್ಸನ್ನು ಆರೋಗ್ಯಕರ ದೇಹದಲ್ಲಿ ಹೊಂದಿರುವುದೇ ಅಗಿದೆ' ಎಂದು ಅಮೆರಿಕನ್ ತತ್ವಜ್ಞಾನಿ ಫ್ರಾನ್ಸಿಸ್ ಬವೆನ್ ನುಡಿದಿರುವುದು ನಮಗೆ ದಾರಿದೀಪವಾಗಬೇಕು.

ಜೀವನಶೈಲಿಯ ಸರಳ ಸೂತ್ರಗಳನ್ನು ಪ್ರತಿಯೊಬ್ಬರೂ ಅನುಸರಿಸಿ ಜೀವನದ ಸುಖ-ಸಂತೋಷವನ್ನು ಕಾಯ್ದುಕೊಂಡು ರೋಗಗಳ ಆಗಮನಕ್ಕೆ ತಡೆಯನ್ನೊಡ್ಡಬಹುದು. 'ನಿಸರ್ಗವನ್ನು ಹೆಚ್ಚು ಹೆಚ್ಚಾಗಿ ಮನುಷ್ಯ ಅನುಸರಿಸಿ ಅದರ ನಿಯಮಗಳ ಆಜ್ಞಾಧಾರಕ ನಾಗಿದ್ದರೆ, ಆತ ಹೆಚ್ಚು ಕಾಲ ಬದುಕುತ್ತಾನೆ. ಅದರಿಂದ ಆತ ದೂರ ಸರಿದಂತೆ, ಆತನ ಜೀವನ ಅವಧಿ ಕಡಿಮೆಯಾಗುತ್ತದೆ. ಅದರ ನಿಯಮಗಳೊಡನೆ ಹೊಂದಾಣಿಕೆಯಾಗಿದ್ದರೆ ಆರೋಗ್ಯ ನಿಸರ್ಗಕೊಡುವ ಬಹುಮಾನವಾಗಿ ಪರಿಣಮಿಸುತ್ತದೆ' ಎಂಬ ಅನಿತಾ ಹೆಸಲ್‌ಗೆಸರ್ ಮಾತು ಈ ದಿಶೆಯ ಕಾರ್ಯಕ್ಕೆ ಒತ್ತಾಸೆ ನೀಡುತ್ತದೆ.

ಕಾಮೆಂಟ್‌ಗಳಿಲ್ಲ:

badge