ಮಂಗಳವಾರ, ಸೆಪ್ಟೆಂಬರ್ 27, 2011

ಕಿರಿಯರ ಸಮಾಜಜಾಲಗಳು

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಎಂದತಕ್ಷಣ ಅದನ್ನು ಯುವಜನತೆಗೆ ಸಂಬಂಧಪಟ್ಟ ವಿಷಯ ಎನ್ನುವಂತೆ ನೋಡುವ ಪರಿಪಾಠವೇ ಜಾಸ್ತಿ. ಜಾಲಲೋಕದ ವಿಷಯ ಬಂದಾಗಲಂತೂ ಈ ಅಭಿಪ್ರಾಯ ಇನ್ನೂ ವ್ಯಾಪಕವಾಗಿದೆ. ಸೋಶಿಯಲ್ ನೆಟ್‌ವರ್ಕ್ ಅಥವಾ ಸಮಾಜ ಜಾಲಗಳನ್ನೇ ತೆಗೆದುಕೊಳ್ಳಿ; ಇದೆಲ್ಲ ನೀವು ಯುವಕರು ಬಳಸಿಕೊಳ್ರಪ್ಪ, ನಮಗೆ ಇದೊಂದೂ ಅರ್ಥವಾಗಲ್ಲ ಎನ್ನುವ ಅನೇಕ ಜನ ಕಾಣಸಿಗುತ್ತಾರೆ.

ಆದರೆ ಈಚಿನ ವರ್ಷಗಳಲ್ಲಿ ಸಮಾಜ ಜಾಲಗಳ ಜನಪ್ರಿಯತೆ ಅದೆಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಅವರ ಅಜ್ಜ-ಅಜ್ಜಿಯರವರೆಗೆ ಎಲ್ಲ ವಯಸ್ಸಿನವರೂ ಸಮಾಜ ಜಾಲಗಳಲ್ಲಿ ಕಾಣಸಿಗುತ್ತಿದ್ದಾರೆ.

ಅಜ್ಜ-ಅಜ್ಜಿಯರು ವಿಶ್ವವ್ಯಾಪಿ ಜಾಲದತ್ತ ಮುಖಮಾಡಿದರೆ ಒಳ್ಳೆಯದೇ ಆಯಿತು ಬಿಡಿ; ಆದರೆ ಚಿಕ್ಕ ಮಕ್ಕಳೂ ಟ್ವೀಟರ್, ಫೇಸ್‌ಬುಕ್, ಮೈಸ್ಪೇಸ್ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಲ್ಲ!


ಸಮಸ್ಯೆಯಿರುವುದೇ ಇಲ್ಲಿ.

ಅಮೆರಿಕಾದಲ್ಲಿ ಜಾರಿಯಲ್ಲಿರುವ ಚಿಲ್ಡ್ರನ್ಸ್ ಆನ್‌ಲೈನ್ ಪ್ರೈವಸಿ ಪ್ರೊಟೆಕ್ಷನ್ ಆಕ್ಟ್ ಎಂಬ ಕಾಯ್ದೆಯನ್ವಯ ಹದಿಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಂದ ಯಾವುದೇ ಬಗೆಯ ವೈಯಕ್ತಿಕ ಮಾಹಿತಿ ಸಂಗ್ರಹಿಸಬೇಕಿದ್ದರೂ ಅವರ ಪೋಷಕರ ಅನುಮತಿ ಪಡೆಯಬೇಕಾದದ್ದು ಕಡ್ಡಾಯ. ಸಂಸ್ಥೆಗಳ ಪಾಲಿಗೆ ಇದು ಕೊಂಚ ತಲೆನೋವಿನ ವಿಷಯ; ಹೀಗಾಗಿ ಬಹುತೇಕ ಸಮಾಜ ಜಾಲತಾಣಗಳಲ್ಲಿ ಹದಿಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವೇ ಇಲ್ಲ.

ಆದರೆ ಮಕ್ಕಳು ಸುಮ್ಮನಿರಬೇಕಲ್ಲ, ಈ ನಿಯಮದಿಂದ ತಪ್ಪಿಸಿಕೊಳ್ಳಲು ಹದಿಮೂರು ವರ್ಷಕ್ಕಿಂತ ಚಿಕ್ಕವರೆಲ್ಲ ಸುಳ್ಳು ಜನ್ಮ ದಿನಾಂಕ ದಾಖಲಿಸಿ ಸಮಾಜ ಜಾಲತಾಣಗಳಿಗೆ ಸೇರುತ್ತಿದ್ದಾರೆ. ಇನ್ನು ಹದಿಮೂರು ವರ್ಷಕ್ಕಿಂತ ದೊಡ್ಡ ಮಕ್ಕಳ ಬಗೆಗಂತೂ ಹೇಳುವುದೇ ಬೇಡ!

ಸಮಾಜ ಜಾಲತಾಣಗಳು ಅನೇಕ ಕಾರಣಗಳಿಂದ ಎಲ್ಲರಿಗೂ ಉಪಯುಕ್ತವಾಗಿವೆ, ನಿಜ. ಚಿಕ್ಕ ಮಕ್ಕಳಿಗೂ ಅಷ್ಟೆ - ಹೊಸಬರನ್ನು ಪರಿಚಯಿಸಿಕೊಳ್ಳಲು, ಪರಿಚಿತರೊಡನೆ ಸಂಪರ್ಕದಲ್ಲಿರಲು, ಒಟ್ಟಾರೆಯಾಗಿ ಸಾಮಾಜಿಕ ಮನೋಭಾವನೆ ಬೆಳೆಸಿಕೊಳ್ಳಲು ಸಮಾಜ ಜಾಲತಾಣಗಳು ಸಹಕಾರಿ. ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುತ್ತ ಅವರು ತಮ್ಮ ತಾಂತ್ರಿಕ ಕೌಶಲ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಎನ್ನುವುದು ಇನ್ನೊಂದು ಒಳ್ಳೆಯ ಅಂಶ.

ಆದರೆ ಕೆಲ ಕೆಟ್ಟ ಅಂಶಗಳೂ ಇವೆ. ಸಮಾಜ ಜಾಲಗಳಲ್ಲಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ವ್ಯಕ್ತಿಗಳಿರಬಹುದು. ಅವರ ವಯಸ್ಸಿಗೆ ಸೂಕ್ತವಲ್ಲದ ವಿಷಯಗಳತ್ತ ಮಕ್ಕಳು ಆಕರ್ಷಿತರಾಗಬಹುದು. ವಿಶ್ವವ್ಯಾಪಿ ಜಾಲದ ಮೂಲಕ ಮಾನಸಿಕ ಹಿಂಸೆ ಕೊಡುವ ಪೀಡಕರ (ಸೈಬರ್ ಬುಲ್ಲಿ) ಕಾಟ ಪ್ರಾರಂಭವಾಗಬಹುದು. ಬೇರೇನೂ ಇಲ್ಲದಿದ್ದರೂ ವಿಶ್ವವ್ಯಾಪಿ ಜಾಲದಲ್ಲಿ ತೀರಾ ಹೆಚ್ಚು ಸಮಯ ಕಳೆಯುವುದು ಮಕ್ಕಳ ಇತರ ಚಟುವಟಿಕೆಗಳ ದೃಷ್ಟಿಯಿಂದಲಂತೂ ಒಳ್ಳೆಯದಲ್ಲ.

ಹಾಗಾದರೆ ಚಿಕ್ಕಮಕ್ಕಳು ಸಮಾಜ ಜಾಲತಾಣಗಳ ತಂಟೆಗೆ ಹೋಗದಿರುವುದೇ ಒಳ್ಳೆಯದು ಎಂದುಬಿಡೋಣವೆ?

ಖಂಡಿತಾ ಬೇಡ; ಚಿಕ್ಕ ಮಕ್ಕಳ ಬಳಕೆಗೆ ಅವರದೇ ಆದ ಸಮಾಜ ಜಾಲಗಳಿವೆ!

ಪುಟ್ಟಮಕ್ಕಳ ಅಗತ್ಯಗಳಿಗೆ ತಕ್ಕಂತೆ ಅವರಿಗೆ ಬೇಕಾಗುವ ಸೌಲಭ್ಯಗಳನ್ನಷ್ಟೆ ಒದಗಿಸುವುದು ಈ ತಾಣಗಳ ವೈಶಿಷ್ಟ್ಯ. ದೊಡ್ಡವರ ಸಮಾಜಜಾಲಗಳಲ್ಲಿ ಮಕ್ಕಳ ಮೇಲಾಗಬಹುದಾದ ಯಾವುದೇ ದುಷ್ಪರಿಣಾಮಗಳ ಭಯ ಇಲ್ಲಿರುವುದಿಲ್ಲ ಎನ್ನುವುದೇ ವಿಶೇಷ. ಮಕ್ಕಳು ಈ ತಾಣಗಳಿಗೆ ಸೇರಬೇಕಾದರೆ ಪೋಷಕರ ಅನುಮತಿ ಪಡೆಯುವುದು ಕಡ್ಡಾಯವಾದ್ದರಿಂದ ಪೋಷಕರಿಗೂ ನಿರಾಳ!

ಟುಗೆದರ್‌ವಿಲೆ (www.togetherville.com) ಎನ್ನುವುದು ಇಂತಹ ತಾಣಗಳಿಗೊಂದು ಉದಾಹರಣೆ. ಪೋಷಕರ ಫೇಸ್‌ಬುಕ್ ಖಾತೆಯ ಆಧಾರದ ಮೇಲೆ ಮಕ್ಕಳು ಈ ತಾಣವನ್ನು ಸೇರುವುದು ಸಾಧ್ಯ. ಆಟಗಳು, ವೀಡಿಯೋಗಳು, ಸ್ನೇಹಿತರೊಡನೆ ಮಾತುಕತೆ - ಹೀಗೆ ಫೇಸ್‌ಬುಕ್‌ನಲ್ಲಿರುವಂತಹ ಅನೇಕ ಆಯ್ಕೆಗಳು ಈ ತಾಣದಲ್ಲಿ ಮಕ್ಕಳಿಗೂ ಲಭ್ಯವಿವೆಯಾದರೂ ಹೊರಗಿನ ತಾಣಗಳ ಕೊಂಡಿಗಳನ್ನು ನೀಡುವುದಕ್ಕೆ, ಖಾಸಗಿ ಸಂಭಾಷಣೆಗಳಿಗೆ, ಮಿತ್ರರ ಸೋಗಿನಲ್ಲಿ ಬರಲೆತ್ನಿಸುವ ಅಪರಿಚಿತರಿಗೆ ಇಲ್ಲಿ ಅನುಮತಿಯಿಲ್ಲ. ಹಾಗಾಗಿ ಈ ತಾಣ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದೆ. ಇತ್ತೀಚೆಗೆ ಡಿಸ್ನಿ ಸಂಸ್ಥೆ ಇದನ್ನು ಕೊಂಡುಕೊಂಡಿದೆ ಎನ್ನುವ ಸುದ್ದಿ ಕೂಡ ಕೇಳಿಬಂದಿದೆ.

ಮೋಷಿ ಮಾನ್ಸ್‌ಟರ್ಸ್ (www.moshimonsters.com) ಎನ್ನುವುದು ಇಂತಹುದೇ ಇನ್ನೊಂದು ತಾಣ. ಈ ತಾಣದ ಸದಸ್ಯರಾಗುವ ಮಕ್ಕಳು ಅಲ್ಲಿನ ವರ್ಚುಯಲ್ ಲೋಕದಲ್ಲಿ ತಮ್ಮದೇ ಆದ ವಿಚಿತ್ರ ಪ್ರಾಣಿಯೊಂದನ್ನು ಇರಿಸಿಕೊಳ್ಳಬಹುದು. ಆ ಪ್ರಾಣಿಯ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ಮಕ್ಕಳದೇ ಜವಾಬ್ದಾರಿ. ಅವರ ಪ್ರಾಣಿ ತಮ್ಮ ಗೆಳೆಯರ ಪ್ರಾಣಿಯ ಜೊತೆ ಸಂಪರ್ಕದಲ್ಲಿರುವುದೂ ಸಾಧ್ಯ. ಬಹಳ ಕ್ಷಿಪ್ರವಾಗಿ ಲಕ್ಷಾಂತರ ಬಳಕೆದಾರರನ್ನು ಸಂಪಾದಿಸಿಕೊಂಡಿರುವ ಈ ತಾಣ ಇದೀಗ ತನ್ನ ತಾಣದಲ್ಲಿರುವ ಪ್ರಾಣಿಗಳನ್ನು ಹೋಲುವ ಆಟಿಕೆಗಳ ತಯಾರಿಕೆಯನ್ನೂ ಶುರುಮಾಡಿದೆ.

ಡಿಸ್ನಿಯ ಕ್ಲಬ್ ಪೆಂಗ್ವಿನ್ (www.clubpenguin.com) ಕೂಡ ಹೀಗೆಯೇ. ಇಲ್ಲಿ ಸದಸ್ಯರಾಗುವ ಮಕ್ಕಳು ವರ್ಚುಯಲ್ ಲೋಕದಲ್ಲಿ ತಮ್ಮದೇ ಆದ ಪೆಂಗ್ವಿನ್‌ಗಳನ್ನು ಸಾಕಿಕೊಳ್ಳಬಹುದು. ಮೋಷಿ ಮಾನ್ಸ್‌ಟರ್ಸ್‌ನಂತೆ ಈ ತಾಣದಲ್ಲೂ ಲಕ್ಷಾಂತರ ಬಳಕೆದಾರರಿದ್ದಾರೆ.

ವಾಟ್ಸ್ ವಾಟ್ (www.whatswhat.me), ಸ್ಕಟ್ಲ್‌ಪ್ಯಾಡ್ (www.scuttlepad.com), ಜಯಂಟ್ ಹೆಲೋ (www.gianthello.com), ಸ್ಕಿಡ್-ಇ ಕಿಡ್ಸ್ (www.skid-e-kids.com) ಮುಂತಾದವು ಮಕ್ಕಳ ಸಮಾಜ ಜಾಲತಾಣಗಳಿಗೆ ಇನ್ನಷ್ಟು ಉದಾಹರಣೆಗಳು.

ಏನೇ ಆದರೂ ಅಗತ್ಯಕ್ಕಿಂತ ಹೆಚ್ಚು ಹೊತ್ತು ವಿಶ್ವವ್ಯಾಪಿಜಾಲದಲ್ಲಿ ವಿಹರಿಸುವುದು ಬರಿಯ ಮಕ್ಕಳಿಗಷ್ಟೇ ಏಕೆ, ಯಾರಿಗೂ ಒಳ್ಳೆಯದಲ್ಲ. ಯಾವುದೇ ಆದರೂ ಮಿತಿಯೊಳಗಿದ್ದಾಗಲಷ್ಟೆ ಚೆಂದ. ವಿಶ್ವವ್ಯಾಪಿ ಜಾಲವೇ ವಿಶ್ವವಲ್ಲ, ಸಮಾಜ ಜಾಲಗಳೇ ಸಮಾಜವಲ್ಲ ಎಂದು ಅರಿತುಕೊಂಡು ನಮಗಿಂತ ಕಿರಿಯರಿಗೂ ಅದನ್ನು ಮನವರಿಕೆ ಮಾಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಸೆಪ್ಟೆಂಬರ್ ೨೭, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge