ಟಿ. ಜಿ. ಶ್ರೀನಿಧಿ
ಬೈಕಿನ ಕೀಲಿ ತಿರುಗಿಸುತ್ತಿದ್ದಂತೆಯೇ ಅದರಲ್ಲಿ ಎಷ್ಟು ಪೆಟ್ರೋಲ್ ಇದೆ ಎಂಬ ಮಾಹಿತಿ ನಮ್ಮ ಕಣ್ಣಿಗೆ ಬೀಳುತ್ತದೆ. ದೊಡ್ಡ ಹೋಟಲಿನಲ್ಲಿ ಊಟ ಮುಗಿಸಿ ಕೈತೊಳೆಯಲು ಹೋದರೆ ಅಲ್ಲಿನ ನಲ್ಲಿ ನಾವು ಕೈಯೊಡ್ಡಿದ ಕೂಡಲೇ ಸ್ವಯಂಚಾಲಿತವಾಗಿ ನೀರು ಬಿಡುತ್ತದೆ. ರಿವರ್ಸ್ ಗೇರಿನಲ್ಲಿದ್ದಾಗ ಯಾವುದಾದರೂ ವಸ್ತುವೋ ವ್ಯಕ್ತಿಯೋ ಅಡ್ಡಬಂದರೆ ಸದ್ದುಮಾಡಿ ಎಚ್ಚರಿಸುವ ವ್ಯವಸ್ಥೆ ಕೆಲ ಕಾರುಗಳಲ್ಲಿರುವುದೂ ನಮಗೆ ಗೊತ್ತು.
ಇದನ್ನೆಲ್ಲ ಸಾಧ್ಯವಾಗಿಸುವುದು ಸೆನ್ಸರ್ ಎಂಬ ವಸ್ತು. ಸೆನ್ಸರುಗಳನ್ನು ಕನ್ನಡದಲ್ಲಿ 'ಸಂವೇದಿ'ಗಳೆಂದು ಕರೆಯುತ್ತಾರೆ. ನಿರ್ದಿಷ್ಟ ಸಂಗತಿಗಳನ್ನು ಗ್ರಹಿಸಿ ಅದಕ್ಕೆ ಪೂರ್ವನಿರ್ಧಾರಿತ ಪ್ರತಿಕ್ರಿಯೆ ನೀಡುವುದು (ಉದಾ: ಬೈಕಿನಲ್ಲಿರುವ ಪೆಟ್ರೋಲ್ ಪ್ರಮಾಣವನ್ನು ಮಾಪಕದಲ್ಲಿ ತೋರಿಸುವುದು) ಇವುಗಳ ಕೆಲಸ.
ನಾವು ಪ್ರತಿದಿನವೂ ಬಳಸುವ ಸ್ಮಾರ್ಟ್‌ಫೋನುಗಳಲ್ಲೂ ಇಂತಹ ಅನೇಕ ಸೆನ್ಸರುಗಳಿರುತ್ತವೆ, ಮತ್ತು ನಮಗೆ ಗೊತ್ತಿಲ್ಲದೆಯೇ ನಾವು ಅವುಗಳ ಪ್ರಯೋಜನ ಪಡೆಯುತ್ತಿರುತ್ತೇವೆ.
ಕಿವಿಯ ಬಳಿ ಒಯ್ದೊಡನೆಯೇ ಪರದೆ ನಿಷ್ಕ್ರಿಯವಾಗುವುದಿರಲಿ, ನಾವು ಎಲ್ಲಿದ್ದೇವೆ ಎಂಬ ಮಾಹಿತಿ ಭೂಪಟದಲ್ಲಿ ನಿಖರವಾಗಿ ಮೂಡುವುದಿರಲಿ - ಅವೆಲ್ಲದರ ಹಿಂದೆಯೂ ಇಂತಹ ಸೆನ್ಸರುಗಳ ಕೈವಾಡ ಇರುತ್ತದೆ. ಅಂತಹ ಕೆಲ ಸೆನ್ಸರುಗಳ ಪರಿಚಯ ಇಲ್ಲಿದೆ.
ಪ್ರಾಕ್ಸಿಮಿಟಿ ಸೆನ್ಸರ್ ನಮಗೆ ಬೇಕಾದ ನಂಬರ್ ಡಯಲ್ ಮಾಡಿ ಮೊಬೈಲನ್ನು ಕಿವಿಯ ಬಳಿ ಕೊಂಡೊಯ್ದ ತಕ್ಷಣವೇ ಅದರ ಪರದೆ ಆರಿಹೋಗುತ್ತದಲ್ಲ, ಆ ವಿದ್ಯಮಾನಕ್ಕೆ ಕಾರಣವಾಗುವ ಸಂವೇದಿಯೇ ಪ್ರಾಕ್ಸಿಮಿಟಿ ಸೆನ್ಸರ್.
ಪ್ರಾಕ್ಸಿಮಿಟಿ ಎಂದರೆ ಸಾಮೀಪ್ಯ ಎಂದರ್ಥ. ನಮ್ಮ ಮೊಬೈಲಿನ ಸಮೀಪದಲ್ಲಿರಬಹುದಾದ ವಸ್ತುಗಳನ್ನು - ಭೌತಿಕ ಸಂಪರ್ಕದ ಅಗತ್ಯವಿಲ್ಲದೆಯೇ - ಗ್ರಹಿಸುವ ಸಾಧನ ಇದು. ಕರೆಯ ನಡುವೆ ನಮ್ಮ ಕಿವಿಯೋ ಕೆನ್ನೆಯೋ ಟಚ್‌ಸ್ಕ್ರೀನ್‌ಗೆ ತಗುಲಿ ಅನಪೇಕ್ಷಿತ ಪರಿಣಾಮಗಳಾಗುವುದನ್ನು ಇದು ತಡೆಯುತ್ತದೆ; ನಾವು ಮಾತನಾಡುತ್ತಿದ್ದಷ್ಟು ಹೊತ್ತು ಪರದೆಯನ್ನು ಬೆಳಗಲು ಬ್ಯಾಟರಿ ವ್ಯರ್ಥವಾಗುವುದನ್ನೂ ತಪ್ಪಿಸುತ್ತದೆ. ಅಷ್ಟೇ ಅಲ್ಲ, ಫೋನನ್ನು ಕಿವಿಯಿಂದ ದೂರಕ್ಕೆ ಕೊಂಡೊಯ್ದ ಕೂಡಲೆ ಅದರ ಪರದೆ ಮತ್ತೆ ಚಾಲೂ ಆಗುವಂತೆ ಮಾಡುವುದೂ ಇದೇ ಸಾಧನದ ಕೆಲಸ.
ಜೈರೋಸ್ಕೋಪ್ ಸಮಾಜಜಾಲಗಳಲ್ಲಿ ಶೇರ್ ಮಾಡಲಾಗಿರುವ ೩೬೦ ಡಿಗ್ರಿ ವೀಡಿಯೋ ಹಾಗೂ ಫೋಟೋಗಳನ್ನು ನೀವು ನೋಡಿರಬಹುದು. ಅವನ್ನು ತೆರೆದ ನಂತರ ನಮ್ಮ ಫೋನನ್ನು ತಿರುಗಿಸಿದರೆ ಪರದೆಯಲ್ಲಿ ಕಾಣುವ ದೃಶ್ಯವೂ ಅದರಂತೆಯೇ ತಿರುಗುತ್ತದೆ. ಇದು ಸಾಧ್ಯವಾಗುವುದು ಜೈರೋಸ್ಕೋಪ್ ಎಂಬ ಸೆನ್ಸರಿನ ನೆರವಿನಿಂದ. ಗುರುತ್ವಾಕರ್ಷಣ ಶಕ್ತಿಯ ಸಂಬಂಧದಲ್ಲಿ ಫೋನಿನ ಸ್ಥಾನ (ಓರಿಯೆಂಟೇಶನ್) ಹಾಗೂ ಪರಿಭ್ರಮಣವನ್ನು (ರೊಟೇಶನ್) ಗುರುತಿಸುವುದು ಈ ಸೆನ್ಸರಿನ ಕೆಲಸ. ಮೊಬೈಲಿನಲ್ಲಿ ಆಟ ಆಡುವಾಗ ಫೋನ್ ತಿರುಗಿಸಿದ್ದು, ವರ್ಚುಯಲ್ ರಿಯಾಲಿಟಿ (ವಿಆರ್) ಸೌಲಭ್ಯ ಬಳಸುವಾಗ ನಾವು ಅತ್ತಿತ್ತ ತಿರುಗಿದ್ದೆಲ್ಲ ಫೋನಿಗೆ-ಅದರಲ್ಲಿರುವ ತಂತ್ರಾಂಶಕ್ಕೆ ಗೊತ್ತಾಗಲು ಕಾರಣ ಇದೇ.
ಆಕ್ಸೆಲೆರೋಮೀಟರ್ ಬೆಳಗಿನ ವಾಯುವಿಹಾರದಲ್ಲಿ ಎಷ್ಟು ಹೆಜ್ಜೆ ನಡೆದೆನೆಂದು ಲೆಕ್ಕವಿಡಲು ಮೊಬೈಲ್ ಆಪ್ ಬಳಸುವವರನ್ನು ನೀವು ನೋಡಿರಬಹುದು. ನಾವು (ಹಾಗೂ ನಮ್ಮೊಡನೆ ನಮ್ಮ ಮೊಬೈಲು) ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುತ್ತಿದ್ದೇವೆ ಎಂದು ಈ ಆಪ್‌ಗಳಿಗೆ ತಿಳಿಸುವುದು 'ಆಕ್ಸೆಲೆರೋಮೀಟರ್' ಎಂಬ ಸೆನ್ಸರಿನ ಕೆಲಸ. ಫೋನಿನ ಚಲನೆಯ ವೇಗ ಬದಲಾವಣೆ ದರವನ್ನು (ಆಕ್ಸೆಲೆರೇಶನ್, ವೇಗೋತ್ಕರ್ಷ) ಪತ್ತೆಹಚ್ಚುವ ಮೂಲಕ ಇದು ಕೆಲಸಮಾಡುತ್ತದೆ. ಫೋನನ್ನು ನೇರವಾಗಿ ಹಿಡಿದಿದ್ದೇವೋ ಅಡ್ಡವಾಗಿ ಹಿಡಿದಿದ್ದೇವೋ ಎಂದು ಗುರುತಿಸಿ ಪರದೆಯ ಮೇಲೆ ಮೂಡುವ ಮಾಹಿತಿ ಬದಲಾಗುತ್ತದಲ್ಲ (ಉದಾ: ಫೋನ್ ತಿರುಗಿಸಿದಾಗ ಚಿತ್ರಗಳೂ ತಿರುಗುವುದು), ಅದಕ್ಕೆ ಕಾರಣವೂ ಇದೇ ಆಕ್ಸೆಲೆರೋಮೀಟರ್. ಹಲವಾರು ಸನ್ನಿವೇಶಗಳಲ್ಲಿ ಮೊಬೈಲ್ ತಂತ್ರಾಂಶಗಳು ಆಕ್ಸೆಲೆರೋಮೀಟರ್ ಹಾಗೂ ಜೈರೋಸ್ಕೋಪ್ ಎರಡರ ನೆರವನ್ನೂ ಒಟ್ಟಿಗೆ ಪಡೆಯುತ್ತವೆ.
ಮ್ಯಾಗ್ನೆಟೋಮೀಟರ್ ಭೂಪಟಗಳನ್ನು ಬಳಸುವಾಗ (ಉದಾ: ಗೂಗಲ್ ಮ್ಯಾಪ್ಸ್) ನಿರ್ದಿಷ್ಟ ದಿಕ್ಕುಗಳನ್ನು ಸೂಚಿಸುವ ಅಗತ್ಯ ಬರುತ್ತದಲ್ಲ, ಅಂತಹ ಸಂದರ್ಭಗಳಲ್ಲಿ ಮ್ಯಾಗ್ನೆಟೋಮೀಟರ್ ಎಂಬ ಇನ್ನೊಂದು ಸೆನ್ಸರ್ ನಮ್ಮ ಮೊಬೈಲನ್ನು ದಿಕ್ಸೂಚಿಯಂತೆ ಬಳಸಲು ಅನುವುಮಾಡಿಕೊಡುತ್ತದೆ. ಫೋನ್ ಇರುವ ಪ್ರದೇಶ ಎಷ್ಟು ಎತ್ತರದಲ್ಲಿದೆ ಎನ್ನುವ ಮಾಹಿತಿಯನ್ನು ಬಾರೋಮೀಟರ್ ಎಂಬ ಸೆನ್ಸರ್ ಒದಗಿಸುತ್ತದೆ. ವಿಮಾನ ನಿಲ್ದಾಣಗಳಂತಹ ದೊಡ್ಡ ಕಟ್ಟಡಗಳಲ್ಲಿ ಓಡಾಡುವಾಗ ಬೇರೆಬೇರೆ ಮಹಡಿಗಳ ಬಗ್ಗೆ ಮಾರ್ಗದರ್ಶನ ಮಾಡಬೇಕು ಎನ್ನುವಂತಹ ಸನ್ನಿವೇಶಗಳಲ್ಲಿ ಇದು ನೆರವಾಗಬಲ್ಲದು.
ಇಷ್ಟೇ ಅಲ್ಲ, ನಮ್ಮ ಬೆರಳೊತ್ತನ್ನು (ಫಿಂಗರ್‌ಪ್ರಿಂಟ್) ಗುರುತಿಸುವ, ಹೃದಯ ಬಡಿತದ ಕುರಿತು ಮಾಹಿತಿ ನೀಡುವ ಸೌಲಭ್ಯಗಳ ಹಿನ್ನೆಲೆಯಲ್ಲೂ ಸೆನ್ಸರುಗಳು ಕೆಲಸಮಾಡುತ್ತವೆ. ಹೊಸಹೊಸ ಸೌಲಭ್ಯಗಳ ಸೇರ್ಪಡೆಯ ಜೊತೆಗೆ ಮೊಬೈಲಿನಲ್ಲಿ ಸೆನ್ಸರುಗಳ ಕೈವಾಡ ಇನ್ನಷ್ಟು ಹೆಚ್ಚುತ್ತಿದೆ; ಅಂಗೈಯಗಲ ಜಾಗದಲ್ಲಿ ಸ್ಥಾಪನೆಯಾಗಿರುವ ಸೆನ್ಸರ್ ಸಾಮ್ರಾಜ್ಯ ಇರುವಷ್ಟೇ ಜಾಗದಲ್ಲಿ ಇನ್ನಷ್ಟು ವಿಸ್ತಾರವಾಗುತ್ತಿದೆ!
ನವೆಂಬರ್ ೧೯, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
1 ಕಾಮೆಂಟ್:
ಅದ್ಬುತ.ತುಂಬ ಸೊಗಸಾಗಿದೆ
ಕಾಮೆಂಟ್ ಪೋಸ್ಟ್ ಮಾಡಿ