ಮಂಗಳವಾರ, ಜನವರಿ 23, 2018

'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್': ಲೇಟೆಸ್ಟ್ ಸುದ್ದಿ ಏನು?

ವಿದ್ಯುನ್ಮಾನ ಸಾಧನಗಳ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್‌ (ಸಿಪಿಯು) ವಿನ್ಯಾಸದಲ್ಲಿ ಪತ್ತೆಯಾಗಿರುವ ಎರಡು ದೋಷಗಳು - 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' - ಟೆಕ್ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿವೆ. ಈ ಸಮಸ್ಯೆಯನ್ನು ಪರಿಚಯಿಸುವ ವಿಶೇಷ ಲೇಖನ ಇಜ್ಞಾನ ಡಾಟ್ ಕಾಮ್‌ನಲ್ಲಿ ಕಳೆದ ವಾರ ಪ್ರಕಟವಾಗಿತ್ತು. 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' ಸುತ್ತಲಿನ ಸದ್ಯದ ಪರಿಸ್ಥಿತಿ ಏನು? ಈ ಕುರಿತು ಟೆಕ್ ಲೋಕದಲ್ಲಿ ಏನೆಲ್ಲ ನಡೆದಿದೆ? ವಿವರಗಳು ಇಲ್ಲಿವೆ.

ಉದಯ ಶಂಕರ ಪುರಾಣಿಕ


ಸ್ಪೆಕ್ಟರ್ ಮತ್ತು ಮೆಲ್ಟ್‌ಡೌನ್ ಲೋಪಗಳನ್ನು ಸರಿಪಡಿಸಲು ಅಗತ್ಯವಾದ ತಂತ್ರಾಂಶ ಪ್ಯಾಚುಗಳನ್ನು ಅಭಿವೃದ್ಧಿಪಡಿಸಿ, ಗ್ರಾಹಕರಿಗೆ ಬಿಡುಗಡೆ ಮಾಡಲು ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ ಇದು ಅಂದುಕೊಂಡಷ್ಟು ಸುಲಲಿತವಾಗಿ ನೆಡೆಯದಿರುವುದು ವಿವಿಧ ಸಂಸ್ಥೆಗಳ ನಡುವೆ ಆರೋಪ - ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ಸೈಬರ್ ಅಪರಾಧಿಗಳು, ನಕಲಿ ಪ್ಯಾಚ್ ಬಿಡುಗಡೆ ಮಾಡಿ, ಮಾಲ್‌ವೇರ್‌ಗಳನ್ನು ಬಳಸಲು ಮುಂದಾಗಿರುವುದು ಆತಂಕ ಸೃಷ್ಟಿಸಿದೆ.

ಇಂಟೆಲ್-ಎಎಮ್‌ಡಿ-ಸೆಕ್ಯೂರಿಟಿಪ್ಯಾಚ್-೧೧-೦೧ಬಿಎಸ್‌ಐ.ಜಿಪ್ ಕಡತದ ಹೆಸರಿನಲ್ಲಿ 'ಸ್ಮೋಕ್‌ಲೋಡರ್' ಎಂಬ ಕುತಂತ್ರಾಂಶವನ್ನು (ಮಾಲ್‌ವೇರ್‌) ಸೈಬರ್ ಅಪರಾಧಿಗಳು ಬಿಡುಗಡೆ ಮಾಡಿರುವುದು ಪತ್ತೆಯಾಗಿದೆ. ಪ್ಯಾಚ್‌ಗಿರುವ ಹೆಸರು ನೋಡಿ, ಅಮಾಯಕ ಗ್ರಾಹಕರು, ಈ ಪ್ಯಾಚ್ ಅನ್ನು ಡೌನ್‌ಲೋಡ್ ಮಾಡಿ, ಅದನ್ನು ಬಳಸಿದರೆ, ಈ ಕಡತದಲ್ಲಿರುವ ಮಾಲ್‌ವೇರ್ ತನ್ನ ಕೆಲಸ ಆರಂಭಿಸುತ್ತದೆ. ಸೈಬರ್ ಅಪರಾಧಿಗಳು ನಿಯಂತ್ರಿಸುವ ಕಮ್ಯಾಂಡ್ ಮತ್ತು ಕಂಟ್ರೋಲ್ ಸರ್ವರ್‌ನ್ನು ಸಂಪರ್ಕಿಸುವ ಈ ಮಾಲ್‌ವೇರ್, ಅಮಾಯಕ ಗ್ರಾಹಕರ ಕಂಪ್ಯೂಟರ್‌ನಲ್ಲಿರುವ ವೈಯಕ್ತಿಕ ಮಾಹಿತಿ, ಮುಖ್ಯವಾದ ಕಡತಗಳು, ಚಿತ್ರಗಳು ಮೊದಲಾದವುಗಳನ್ನು ಕದ್ದು ಸೈಬರ್ ಅಪರಾಧಿಗಳಿಗೆ ನೀಡಲು ಪ್ರಾರಂಭಿಸುತ್ತದೆ. 

ಸ್ಪೆಕ್ಟರ್ ಮತ್ತು ಮೆಲ್ಟ್‌ಡೌನ್ ಪ್ಯಾಚ್ ಡೌನ್‌ಲೋಡ್ ಮಾಡಿ ಎಂದು ಬರುವ ನಕಲಿ ಇ-ಮೇಲ್‌ಗಳು ಮತ್ತು ಸಂದೇಶಗಳನ್ನು ಕುರಿತು ಗ್ರಾಹಕರು ಎಚ್ಚರಿಕೆ ವಹಿಸಬೇಕು. ಅನಧಿಕೃತ ಜಾಲತಾಣಗಳಿಂದ ಯಾವುದೇ ತಂತ್ರಾಂಶಗಳನ್ನು ಮತ್ತು ಪ್ಯಾಚುಗಳನ್ನು ಡೌನ್‌ಲೋಡ್ ಮಾಡಿ ಬಳಸಬೇಡಿ. ಅನುಮಾನ ಬಂದರೆ ಕಂಪ್ಯೂಟರ್ ತಜ್ಞರನ್ನು ಸಂಪರ್ಕಿಸಿ. 

ಇನ್ನು ಅಧಿಕೃತವಾಗಿ ಪ್ಯಾಚುಗಳನ್ನು ನೀಡಬೇಕಾದ ಸಂಸ್ಥೆಗಳು ಸಾಧಿಸಿರುವ ಪ್ರಗತಿ ಕುರಿತು ಕೆಲವು ವಿವರಗಳು ಹೀಗಿವೆ:
  • ಮೈಕ್ರೋಸಾಫ್ಟ್ ನೀಡುವ ಪ್ಯಾಚುಗಳಲ್ಲಿ ಕೆಲವು ವೈರಸ್‌ನಿರೋಧಕ ತಂತ್ರಾಂಶಗಳು ಮತ್ತು ಎಎಮ್‌ಡಿ ಪ್ರೋಸೆಸರ್‌ಗಳ ಕಾರ್ಯಾಚರಣೆಗೆ ತೊಡಕುಂಟುಮಾಡುತ್ತಿರುವ ವರದಿಗಳು ಪ್ರಕಟವಾಗಿವೆ. 
  • ವಿಂಡೋಸ್ ೮ ಮತ್ತು ವಿಂಡೋಸ್ ಸರ್ವರ್ ೨೦೧೨ - ಇದರಲ್ಲಿ ವಿಂಡೋಸ್ ೮.೧ ಮತ್ತು ಸರ್ವರ್ ೨೦೧೨ಆರ್೨ ಗೆ ಪ್ಯಾಚ್ ನೀಡಲಾಗಿದೆ. ಅದೇ ರೀತಿ ವಿಂಡೋಸ್ ೭ ಎಸ್‌ಪಿ೧ ಮತ್ತು ಸರ್ವರ್ ೨೦೦೮ ಆರ್೨ ಎಸ್‌ಪಿ೧ ಗೆ ಪ್ಯಾಚ್ ನೀಡಲಾಗಿದೆ. ೩೨ ಬಿಟ್ ಸಿಸ್ಟಮ್‌ಗಳಿಗೆ (ಎಕ್ಸ್೮೬ ಆಧಾರಿತ ಸಿಸ್ಟಮ್) ನೀಡಲಾಗಿರುವ ತಂತ್ರಾಂಶ ಪ್ಯಾಚುಗಳು ಮೆಲ್ಟ್‌ಡೌನ್ ಲೋಪದಿಂದ ಇನ್ನೂ ಸುರಕ್ಷತೆ ನೀಡುತ್ತಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು.
  • ಆಪಲ್ ಸಂಸ್ಥೆಯು ಮ್ಯಾಕ್ ಓಎಸ್, ಐಓಎಸ್ ಮತ್ತು ಸಫಾರಿಗೆ ನೀಡಿರುವ ಅಪ್‌ಡೇಟ್‌ಗಳು ಇನ್ನೂ ಸ್ಪೆಕ್ಟರ್ ಲೋಪದಿಂದ ಸಂಪೂರ್ಣ ಸುರಕ್ಷತೆ ನೀಡಬೇಕಾಗಿದೆ.
  • ಬ್ರೌಸರ್‌ಗಳಲ್ಲಿ, ಗೂಗಲ್‌ನ ಕ್ರೋಮ್ ೬೪ ಆವೃತ್ತಿ ಕೊನೆಯ ವಾರದ ಹೊತ್ತಿಗೆ ದೊರೆಯುವ ನಿರೀಕ್ಷೆ ಇದೆ. ಮೋಜಿಲ್ಲಾ ತನ್ನ ಫೈರ್‌ಫಾಕ್ಸ್ ಆವೃತ್ತಿ ೫೭.೦.೪ ಬಿಡುಗಡೆ ಮಾಡಿದೆ. ಆಪಲ್ ತನ್ನ ಸಫಾರಿ ೧೧.೦.೨ ಆವೃತ್ತಿ ಬಿಡುಗಡೆ ಮಾಡಿದೆ. ಮೈಕ್ರೋಸಾಫ್ಟ್ ತನ್ನ ಐ.ಇ ಆವೃತ್ತಿ ೧೧.೦ ಮತ್ತು ಮೈಕ್ರೋಸಾಫ್ವ್ ಎಡ್ಜ್‌ನಲ್ಲಿ ಸ್ಪೆಕ್ಟರ್ ವಿರುದ್ಧ ಸುರಕ್ಷತೆಯನ್ನು ಹೆಚ್ಚಿಸಿದೆ.

ಕಾಮೆಂಟ್‌ಗಳಿಲ್ಲ:

badge